ಬೆಂಗಳೂರಿನಲ್ಲಿ ಅ.30ರಿಂದ ರಂಗಕರ್ಮಿ ಪ್ರಸನ್ನ ಹೆಗ್ಗೋಡು ರಚಿಸಿರುವ ಪೆನ್ಸಿಲ್ ಡ್ರಾಯಿಂಗ್ ಕಲಾಕೃತಿಗಳ ಪ್ರದರ್ಶನ
Prasanna Heggodu: ಖ್ಯಾತ ರಂಗಕರ್ಮಿ ಪ್ರಸನ್ನ ಹೆಗ್ಗೋಡು ಅವರು ರಚಿಸಿರುವ ಪೆನ್ಸಿಲ್ ಡ್ರಾಯಿಂಗ್ ಕಲಾಕೃತಿಗಳ ಪ್ರದರ್ಶನ ಅ.30 ರಿಂದ ನವೆಂಬರ್ 2ರವರೆಗೆ ಚಿತ್ರಕಲಾ ಪರಿಷತ್‌ನ ಗ್ಯಾಲರಿ #4 ನಲ್ಲಿ ನಡೆಯಲಿದೆ. ದೆಹಲಿಯ ಖ್ಯಾತ ಕಲಾ ವಿಮರ್ಶಕ ರವೀಂದ್ರ ತ್ರಿಪಾಠಿ ಅ.30ರಂದು ಗುರುವಾರ ಸಂಜೆ 4 ಗಂಟೆಗೆ ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ.
-
ಬೆಂಗಳೂರು: ಐದು ದಶಕಗಳ ಕಾಲ ದೇಶದ ರಂಗಭೂಮಿಯಲ್ಲಿ ಪ್ರಸಿದ್ಧರಾಗಿರುವ ಖ್ಯಾತ ರಂಗಕರ್ಮಿ ಪ್ರಸನ್ನ ಹೆಗ್ಗೋಡು (Prasanna Heggodu) ಅವರು ರಚಿಸಿರುವ ಪೆನ್ಸಿಲ್ ಡ್ರಾಯಿಂಗ್ ಕಲಾಕೃತಿಗಳ ಪ್ರದರ್ಶನ ಅ.30 ರಿಂದ ನವೆಂಬರ್ 2ರವರೆಗೆ ಚಿತ್ರಕಲಾ ಪರಿಷತ್‌ನ ಗ್ಯಾಲರಿ #4 ನಲ್ಲಿ ನಡೆಯಲಿದೆ. ಸಾವಿರಕ್ಕೂ ಹೆಚ್ಚು ಪೆನ್ಸಿಲ್ ಕಲಾಕೃತಿಗಳನ್ನು ಪ್ರಸನ್ನ ಅವರು ರಚಿಸಿದ್ದು ʼನಾಟಕವು ಬದುಕಿನೊಳಗೋ ಬದುಕು ನಾಟಕದೊಳಗೋʼ ಆಯ್ದ ಚಿತ್ರಗಳ ಪ್ರದರ್ಶನಕ್ಕೆ ದೆಹಲಿಯ ಖ್ಯಾತ ಕಲಾ ವಿಮರ್ಶಕ ರವೀಂದ್ರ ತ್ರಿಪಾಠಿ ಅ.30ರಂದು ಗುರುವಾರ ಸಂಜೆ 4 ಗಂಟೆಗೆ ಚಾಲನೆ ನೀಡಲಿದ್ದಾರೆ.
ಕಾರ್ಯಕ್ರಮದಲ್ಲಿ ಕರ್ನಾಟಕ ಲಲಿತ ಕಲಾ ಅಕಾಡೆಮಿಯ ಅಧ್ಯಕ್ಷ ಪ.ಸ.ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಲೇಖಕ ಮತ್ತು ಉದ್ಯಮಿ ಅರುಣ್ ರಾಮನ್, ಚಂದನ ದೂರದರ್ಶನದ ಕಾರ್ಯಕ್ರಮ ವಿಭಾಗದ ಮುಖ್ಯಸ್ಥೆ ಆರತಿ ಎಚ್.ಎನ್. ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು ಪ್ರಸನ್ನ ಉಪಸ್ಥಿತರಿರುವರು. ಇದುವರೆಗೆ ಪ್ರಸನ್ನ ಹೆಗ್ಗೋಡು ಅವರು ರಂಗ ನಿರ್ದೇಶಕರಾಗಿ ಖ್ಯಾತಿ ಪಡೆದಿದ್ದು ಅವರ ಕಲಾ ಬದುಕಿನ ಮತ್ತೊಂದು ಮಜಲು ಚಿತ್ರಕಲೆ ಈ ಪ್ರದರ್ಶನದ ಮೂಲಕ ಅನಾವರಣಗೊಳ್ಳಲಿದೆ. ಪ್ರಸನ್ನ ಅವರ ಮೊಟ್ಟ ಮೊದಲ ಚಿತ್ರಕಲಾ ಪ್ರದರ್ಶನ ಇದಾಗಿದೆ.
ಐದು ದಶಕಗಳ ನಾಟಕ ರಂಗದ ಬದುಕಿನಲ್ಲಿ ತಾನು ಕಂಡ ಸಹಸ್ರಾರು ಪಾತ್ರಗಳನ್ನು ಅವುಗಳ ಆಂಗಿಕಗಳನ್ನು ಪೆನ್ಸಿಲ್ ಸ್ಕೆಚ್ ಮೂಲಕ ಚಿತ್ರಗಳಾಗಿಸಿರುವ ಪ್ರಸನ್ನ ಅವರೇ ಹೇಳುವಂತೆ ಇದು ರಂಗಭೂಮಿ ಪ್ರೇರಿತ ಚಿತ್ರಗಳಾಗಿವೆ. ಪ್ರಸನ್ನ ಅವರ ಆಯ್ದ ಚಿತ್ರಗಳು ಸೀಮಿತ ಪ್ರತಿ ಮುದ್ರಿಸಿದ (ಲಿಮಿಟೆಡ್ ಎಡಿಷನ್) ಚಿತ್ರಗಳಾಗಿವೆ. ಪ್ರದರ್ಶನದಲ್ಲಿ ಚಿತ್ರಗಳ ಮಾರಾಟವೂ ಇರಲಿದೆ. ಮಾರಾಟದಿಂದ ಬಂದ ಹಣವನ್ನು ಮೈಸೂರಿನಲ್ಲಿ ತಾವೇ ಸ್ಥಾಪಿಸಿರುವ ಭಾರತೀಯ ಶೈಕ್ಷಣಿಕ ರಂಗ ತರಬೇತಿ ಸಂಸ್ಥೆಗೆ ದೇಣಿಗೆಯಾಗಿ ನೀಡಲು ಪ್ರಸನ್ನ ಉದ್ದೇಶಿಸಿದ್ದಾರೆ. ಸಂಸ್ಥೆಯ ಸೇವಾಕಾರ್ಯಕ್ಕೆ ಅಗತ್ಯವಿರುವ ಇಡಿಗಂಟೊಂದನ್ನು ಈ ಮೂಲಕ ಸಂಗ್ರಹಿಸಲಾಗುವುದು. ಕೃತಿಯನ್ನು ಕೊಳ್ಳುವವರಿಗೆ 80-ಜಿ ಸೌಲಭ್ಯವೂ ಇರಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | President Droupadi Murmu: ಹವಾಮಾನ ಬದಲಾವಣೆಯ ಜಾಗತಿಕ ಸವಾಲೆದುರಿಸಲು ಭಾರತ ಬದ್ಧ: ರಾಷ್ಟ್ರಪತಿ ದ್ರೌಪದಿ ಮುರ್ಮು
ನಾನು ರಚಿಸಿರುವ ಬಹುತೇಕ ಚಿತ್ರಗಳು ನಾಟಕದಿಂದಲೇ ಹುಟ್ಟಿಕೊಂಡವು. ಅಲ್ಲಿ ನಾನು ಯಾವತ್ತೂ ಕಣ್ಣು ನಿರುಕಿಸಿ ನೋಡುವ ಪಾತ್ರಗಳ ಪ್ರೇರಿತ. ಅವುಗಳ ಸೂಕ್ಷ್ಮಾತಿಸೂಕ್ಷ್ಮ ಚಹರೆಗಳು ನನ್ನ ಮನಸ್ಸಿನೊಳಗೆ ಅಚ್ಚೊತ್ತಿರುತ್ತವೆ. ಹಾಗೆ ಕಾಡುವ ಅದೆಷ್ಟೋ ಭಂಗಿಗಳನ್ನು ಚಿತ್ರಗಳಾಗಿಸಿದ್ದೇನೆ. ರಂಗ ಶಿಕ್ಷಣ ಸಂಸ್ಥೆಯೊಂದನ್ನು ಕಟ್ಟಿ ಬೆಳೆಸುವ ಉದ್ದೇಶದಿಂದ ಈಗ ಚಿತ್ರಗಳ ಪ್ರದರ್ಶನ ಏರ್ಪಡಿಸಿದ್ದೇನೆ.ʼ
-ಪ್ರಸನ್ನ ರಂಗಕರ್ಮಿ, ಚಿತ್ರಕಲಾವಿದ.