ವೀಕೆಂಡ್ ವಿತ್ ಮೋಹನ್
ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಸೇನಾನಿಗಳನ್ನು ದೇಶದಾದ್ಯಂತ ಒಗ್ಗೂಡಿಸಿದ ‘ವಂದೇ ಮಾತರಂ’ ಗೀತೆಗೆ ಈಗ 150ನೇ ವರ್ಷದ ಸಂಭ್ರಮ. ಭಾರತ ಮಾತೆಗೆ ನಮಿಸುವ ಮೂಲಕ ಪ್ರಾರಂಭವಾಗುವ ಈ ಗೀತೆಯ ಸಾಲುಗಳನ್ನು ಕೇಳಿದರೆ ಸಾಕು ಇಂದಿಗೂ ಮೈಮೇಲಿನ ರೋಮಗಳು ಎದ್ದು ನಿಲ್ಲುತ್ತವೆ.
ಅಖಂಡ ಭಾರತವನ್ನು ಹೆತ್ತ ತಾಯಿಗೆ ಹೋಲಿಸಿ ನಮಿಸುವ ಅಪ್ರತಿಮ ದೇಶಭಕ್ತಿ ಗೀತೆಯೇ ವಂದೇ ಮಾತರಂ. ಪಶ್ಚಿಮ ಬಂಗಾಳದ ಸ್ವಾತಂತ್ರ್ಯಪೂರ್ವದ ಕಾಲಘಟ್ಟವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ, ಸುಭಾಷ್ ಚಂದ್ರ ಬೋಸ್, ಸೋದರಿ ನಿವೇದಿತಾ, ರವೀಂದ್ರನಾಥ್ ಟ್ಯಾಗೋರ್, ಜಗದೀಶ್ ಚಂದ್ರ ಬೋಸ್ ಇವರುಗಳ ಸಾಲಿಗೆ ಸೇರಿದವರು ‘ವಂದೇ ಮಾತರಂ’ ಗೀತೆಯನ್ನು ರಚಿಸಿದ ಬಂಕಿಮ ಚಂದ್ರ ಚಟರ್ಜಿಯವರು.
ಬ್ರಿಟಿಷರ ವಿರುದ್ಧ ಹೋರಾಡಲು ಭಾರತೀಯರು ಪ್ರದರ್ಶಿಸಬೇಕಿದ್ದ ಒಗ್ಗಟ್ಟಿನ ಮೂಲಮಂತ್ರವೇ ವಂದೇ ಮಾತರಂ ಗೀತೆ ಆಗಿತ್ತು. ಈ ಗೀತೆ ರಚನೆಯಾದ 150 ವರ್ಷಗಳ ನಂತರ ಮತ್ತೊಮ್ಮೆ ಕಾಂಗ್ರೆಸ್ಸಿನ ಮುಸ್ಲಿಂ ಓಲೈಕೆ ರಾಜಕಾರಣದ ಚರ್ಚೆ ಮುನ್ನೆಲೆಗೆ ಬಂದಿದೆ.
ಅಕ್ಟೋಬರ್ 1937ರಲ್ಲಿ ನಡೆದ ಕಾಂಗ್ರೆಸ್ಸಿನ ಕಾರ್ಯಕಾರಿ ಸಮಿತಿ ಸಭೆಯಲ್ಲಿ, ವಂದೇ ಮಾತರಂ ಗೀತೆಯನ್ನು ಸಂಪೂರ್ಣವಾಗಿ ಹಾಡಿದರೆ ಮುಸಲ್ಮಾನರ ಭಾವನೆಗಳಿಗೆ ಧಕ್ಕೆ ಬರುತ್ತದೆಯೆಂದು ಹೇಳಿ ಗೀತೆಯ ಮೊದಲ ಎರಡು ಚರಣಗಳನ್ನು ಮಾತ್ರ ಹಾಡಬೇಕೆಂಬ ನಿರ್ಣಯ ಕೈಗೊಳ್ಳ ಲಾಗಿತ್ತು.
ಇದನ್ನೂ ಓದಿ: Mohan Vishwa Column: ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಸಂವಿಧಾನದ ಚಿತ್ರಗಳು
ಸಂಪೂರ್ಣ ಗೀತೆಗೆ ಕತ್ತರಿ ಹಾಕಿ, ಮೊಹಮ್ಮದ್ ಅಲಿ ಜಿನ್ನಾ ಮಾತಿಗೆ ಕಟ್ಟುಬಿದ್ದು ಅಲ್ಪಸಂಖ್ಯಾತರ ಓಲೈಕೆಗೆ ಮುಂದಾಗಿದ್ದು ಕಾಂಗ್ರೆಸ್ಸಿನ ಜವಾಹರಲಾಲ್ ನೆಹರು. ಇಸ್ಲಾಂ ಧರ್ಮದಲ್ಲಿ ಮೂರ್ತಿ ಪೂಜೆ ನಿಷಿದ್ಧವಾದ್ದರಿಂದ, ವಂದೇ ಮಾತರಂ ಗೀತೆಯಲ್ಲಿ ಭಾರತ ಮಾತೆಯನ್ನು ತಾಯಿಗೆ ಹೋಲಿಸಿ ಆರಾಧಿಸುವುದು ತಪ್ಪು ಎಂಬುದು ಮೊಹಮ್ಮದ್ ಅಲಿ ಜಿನ್ನಾರ ವಾದವಾಗಿತ್ತು.
ವಿಪರ್ಯಾಸವೆಂದರೆ ಇಂದಿಗೂ ಭಾರತದ ಬಹುಪಾಲು ಮುಸಲ್ಮಾನರು ವಂದೇ ಮಾತರಂ ಗೀತೆ ಯನ್ನು ವಿರೋಧಿಸುತ್ತಾರೆ. ಧರ್ಮದ ಆಧಾರದ ಮೇಲೆ ಅಖಂಡ ಭಾರತ ವಿಭಜನೆಯಾದ ನಂತರ ಭಾರತದಲ್ಲಿ ಉಳಿದುಕೊಂಡ ಮುಸಲ್ಮಾನರು 150 ವರ್ಷಗಳ ನಂತರವೂ ಹೀಗೆ ವಿರೋಧಿಸುತ್ತಾ ರೆಂದರೆ ಕಾಂಗ್ರೆಸ್ಸಿನ ಅತಿಯಾದ ಓಲೈಕೆ ರಾಜಕಾರಣವೇ ಇದಕ್ಕೆ ನೇರಕಾರಣ. ನೆಹರು ಮರಿಮಗ ರಾಹುಲ್ ಗಾಂಧಿ ಅವರಿಗೆ ಇಂದಿಗೂ ಮುಸ್ಲಿಂ ಲೀಗ್ ಮೇಲೆ ಎಲ್ಲಿಲ್ಲದ ಪ್ರೀತಿ.
ಮುಸ್ಲಿಂ ಲೀಗ್ ಪಕ್ಷವನ್ನು ಜಾತ್ಯತೀತ ಪಕ್ಷವೆಂದು ಹೇಳಿದ್ದು ರಾಹುಲ್ ಗಾಂಧಿ. ನೆಹರು ಕುಟುಂಬ ದ ಓಲೈಕೆ ರಾಜಕಾರಣದ ‘ಡಿಎನ್‌ಎ’ ನಾಲ್ಕನೇ ತಲೆಮಾರಿನಲ್ಲೂ ಅಡಿಯಿಂದ ಮುಡಿಯವರೆಗೂ ಕಣಕಣದಲ್ಲೂ ಎದ್ದು ಕಾಣುತ್ತದೆ. ಮಹಾತ್ಮ ಗಾಂಧಿಯವರು 1930ರಲ್ಲಿ ವಂದೇ ಮಾತರಂ ಗೀತೆಯನ್ನು ಹೊಗಳಿದ್ದರು.
ವಂದೇ ಮಾತರಂ ಎಲ್ಲಿಯೂ, ಕೇವಲ ಹಿಂದೂಗಳಿಗೆ ರಚಿಸಿದ ಗೀತೆಯಾಗಿದೆಯೆಂದು ತಮಗೆ ಅನಿಸಿಲ್ಲವೆಂದೂ ಹೇಳಿದ್ದರು. ಅಮೆರಿಕದ ಕಾರ್ಯಕ್ರಮವೊಂದರಲ್ಲಿ ‘ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್’ ಬಗ್ಗೆ ರಾಹುಲ್ ಗಾಂಧಿಯವರನ್ನು ಕೇಳಿದಾಗ, ಅದೊಂದು ‘ಜಾತ್ಯತೀತ’ ಪಕ್ಷವೆಂದು ಹೇಳಿದ್ದರು.
1906ರಲ್ಲಿ ‘ಢಾಕಾ’ದಲ್ಲಿ ಸ್ಥಾಪನೆಯಾದ ಆಲ್ ಇಂಡಿಯನ್ ಮುಸ್ಲಿಂ ಲೀಗ್ ಪಕ್ಷದ ಮೂಲ ಉದ್ದೇಶ ಅಖಂಡ ಭಾರತದ ವಿಭಜನೆ. ಧರ್ಮದ ಆಧಾರದ ಮೇಲೆ ಭಾರತವನ್ನು ಒಡೆಯುವ ಕಾರ್ಯಕ್ಕೆ ಬುನಾದಿ ಹಾಕಿದ್ದು ಆಲ್ ಇಂಡಿಯನ್ ಮುಸ್ಲಿಂ ಲೀಗ್ ಪಕ್ಷ. ಮೊಹಮ್ಮದ್ ಅಲಿ ಜಿನ್ನಾ 1926ರಲ್ಲಿ ಈ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಈ ಪಕ್ಷವು, ಪಂಜಾಬ್ ಮತ್ತು ಸಿಂಧ್ ಭಾಗಕ್ಕೆ ಪ್ರತ್ಯೇಕವಾದ ಆಡಳಿತ ವ್ಯವಸ್ಥೆಯನ್ನು ನೂತನ ಆಡಳಿತಾಧಿಕಾರಿಯ ಮೂಲಕ ನೀಡಬೇಕೆಂದು ಕೇಳಿತ್ತು.
ಅತ್ತ ಪೂರ್ವ ಬಂಗಾಳದ ಪ್ರಾಂತ್ಯಕ್ಕೂ ಪ್ರತ್ಯೇಕವಾದ ಆಡಳಿತ ವ್ಯವಸ್ಥೆ ನೀಡಬೇಕೆಂಬ ಬೇಡಿಕೆ ಯನ್ನಿಟ್ಟಿತ್ತು. ಅದು ಮುಂದಿಟ್ಟಿದ್ದ ಬೇಡಿಕೆಗಳು ಮುಂದೊಂದು ದಿನ ಭಾರತವನ್ನು ವಿಭಜಿಸುವ ತಂತ್ರಗಾರಿಕೆಯ ಭಾಗವಾಗಿರುವ ಸೂಕ್ಷ್ಮ ವಿಚಾರವನ್ನು ಗಮನಿಸುವುದರಲ್ಲಿ ನೆಹರು ವಿಫಲರಾಗಿ ದ್ದರು.
ಧರ್ಮದ ಆಧಾರದ ಮೇಲೆ ಮುಸಲ್ಮಾನರಿಗೆ ಪ್ರತ್ಯೇಕ ರಾಷ್ಟ್ರ ಪಾಕಿಸ್ತಾನ ರಚನೆಯ ಅಷ್ಟೂ ಪ್ರಕ್ರಿಯೆಯಲ್ಲಿ ಉಂಟಾದ ಸಾವು ನೋವುಗಳಿಗೆ ಮೂಲ ಕಾರಣ ಆಲ್ ಇಂಡಿಯನ್ ಮುಸ್ಲಿಂ ಲೀಗ್. ಒಂದೇ ಒಂದು ಧರ್ಮಕ್ಕೆ ಸೀಮಿತವಾಗಿರುವ ಪಕ್ಷ ಅದ್ಯಾವ ದಿಕ್ಕಿನಿಂದ ಜಾತ್ಯತೀತ ಪಕ್ಷವಾಗಿ ರಾಹುಲ್ ಗಾಂಧಿಯರಿಗೆ ಕಾಣುತ್ತದೆ? ಸ್ವತಃ ನೆಹರುರಿಗೆ ಸಂವಿಧಾನದಲ್ಲಿ ಜಾತ್ಯತೀತ ಪದವನ್ನು ಸೇರಿಸಲು ಇಷ್ಟವಿರಲಿಲ್ಲ.
ಸಂವಿಧಾನ ರಚನೆಯ ಸಂದರ್ಭದಲ್ಲಿ ಚುನಾವಣಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮುಸಲ್ಮಾನರಿಗೆ ಪ್ರತ್ಯೇಕ ಮೀಸಲಾತಿ ನೀಡುವ ವಿಚಾರ ಚರ್ಚೆಗೆ ಬಂದಾಗ ಸರ್ದಾರ್ ವಲ್ಲಭ್‌ಭಾಯ್ ಪಟೇಲ್ ಬಹಳ ಖಾರವಾಗಿ ಪ್ರತಿಕ್ರಿಯಿಸಿದ್ದರು.
2019ರ ಲೋಕಸಭಾ ಚುನಾವಣೆಯಲ್ಲಿ ವಯನಾಡ್ ನಿಂದ ಸ್ಪರ್ಧಿಸಿದ್ದ ರಾಹುಲ್ ಗಾಂಧಿ, ಮುಸ ಲ್ಮಾನರ ವೋಟಿಗಾಗಿ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಪಕ್ಷದ ಜತೆ ಕೈ ಜೋಡಿಸಿದ್ದರು. ಕೇರಳದಲ್ಲಿ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಪಕ್ಷದ ಸಹಾಯವಿದ್ದರೆ ಮಾತ್ರ ಚುನಾ ವಣೆ ಗೆಲ್ಲಬಹುದೆಂಬ ಸತ್ಯ ರಾಹುಲ್ ಗಾಂಧಿಯವರಿಗೆ ತಿಳಿದಿದೆ.
ತಮ್ಮ ಮುತ್ತಾತ ನೆಹರು ಆಲ್ ಇಂಡಿಯನ್ ಮುಸ್ಲಿಂ ಲೀಗ್ ಪಕ್ಷದ ಪರವಾಗಿ ಹೊಂದಿದ್ದ ಮೃದು ಧೋರಣೆಯನ್ನೇ ರಾಹುಲ್ ಗಾಂಧಿ ಕೂಡ ಹೊಂದಿದ್ದಾರೆ. ಅವರ ಹೇಳಿಕೆಯನ್ನು ಸಮರ್ಥಿಸಿ ಕೊಳ್ಳಲು ಕೆಲ ನಾಯಕರು ಸ್ವಾತಂತ್ರ್ಯ ಪೂರ್ವದ ಮುಸ್ಲಿಂ ಲೀಗ್ ಹಾಗೂ ಸ್ವಾತಂತ್ರ್ಯಾ ನಂತರದ ಮುಸ್ಲಿಂ ಲೀಗ್ ಬೇರೆ ಬೇರೆ ಪಕ್ಷಗಳೆಂದು ಹೇಳಿದ್ದರೆ.
ಆದರೆ ಕಾಂಗ್ರೆಸ್ ಪಕ್ಷದ ವಿಷಯ ಬಂದಾಗ ಮಾತ್ರ ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯಾ ನಂತರದ ಕಾಂಗ್ರೆಸ್ ಒಂದೇ ಎಂಬ ತರ್ಕವನ್ನು ಹೇಳಿ ತಮ್ಮ ಇಬ್ಬಗೆಯ ನೀತಿಯನ್ನು ಪ್ರದರ್ಶಿಸು ತ್ತಾರೆ. ಅಖಂಡ ಭಾರತ ವಿಭಜನೆಯಾದ ನಂತರ ಜಿನ್ನಾ ನೇತೃತ್ವದ ‘ಆಲ್ ಇಂಡಿಯಾ ಮುಸ್ಲಿಂ ಲೀಗ್’ ಪಾಕಿಸ್ತಾನದಲ್ಲಿ ‘ಪಾಕಿಸ್ತಾನ ಮುಸ್ಲಿಂ ಲೀಗ್’ ಪಕ್ಷವಾಗಿ ಬದಲಾಯಿತು.
ಭಾರತದಲ್ಲಿ ಉಳಿದುಕೊಂಡ ಆಲ್ ಇಂಡಿಯಾ ಮುಸ್ಲಿಂ ಲೀಗ್‌ನ ಸದಸ್ಯರುಗಳು 1948ರ ಮಾರ್ಚ್ 10ರಂದು ಮದ್ರಾಸಿನಲ್ಲಿ ಒಂದು ಸಭೆ ನಡೆಸಿದರು. ಆ ಸಭೆಯಲ್ಲಿ, ಭಾರತದಲ್ಲಿ ಉಳಿದುಕೊಂಡ ಪಕ್ಷದ ಹೆಸರನ್ನು ‘ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್’ ಎಂದು ಮರುನಾಮಕರಣ ಮಾಡಿದರು.
ಒಂದು ಧರ್ಮಕ್ಕೆ ಸೀಮಿತವಾಗಿ ತನ್ನ ಪಕ್ಷದ ಮೂಲ ಹೆಸರಿನ ಮುಸ್ಲಿಂ ಪದವಿಟ್ಟುಕೊಂಡಿರುವ ಪಕ್ಷ ಜಾತ್ಯತೀತವಾಗಲು ಹೇಗೆ ಸಾಧ್ಯ? 1947ರಲ್ಲಿ ಧರ್ಮದ ಆಧಾರದ ಮೇಲೆ ಹುಟ್ಟಿಕೊಂಡ ‘ಇಸ್ಲಾ ಮಿಕ್ ರಿಪಬ್ಲಿಕ್ ಆಫ್ ಪಾಕಿಸ್ತಾನ’ ತನ್ನ ಹೆಸರಿನಲ್ಲಿನ ಜಾತ್ಯತೀತತೆಯನ್ನು ತೆಗೆದು ಹಾಕಿದೆ. ಆದರೆ ಭಾರತದ ಸಂವಿಧಾನದಲ್ಲಿ ಇಂದಿರಾ ಗಾಂಧಿ ಜಾತ್ಯತೀತತೆ ಪದವನ್ನು ಸೇರಿಸಿದ್ದಾರೆ.
ಎಡಚರರು ನೀಡುವ ಸಲಹೆಯನ್ನು ಯಥಾವತ್ತಾಗಿ ಪರಿಗಣಿಸಿದ್ದ ಕಾಂಗ್ರೆಸ್ ದೇಶದೆಡೆ ಮಕಾಡೆ ಮಲಗಿತ್ತು. ರಾಹುಲ್ ಗಾಂಧಿಯವರನ್ನು ಪ್ರಧಾನಿ ಮಾಡಬೇಕೆಂಬ ಎಡಚರರ ಉದ್ದೇಶ ಅವರ ಬಾಯಿಯಿಂದ ಇಲ್ಲಸಲ್ಲದ ಮಾತುಗಳನ್ನಾಡಿಸುತ್ತಿದೆ. ಕಮ್ಯುನಿ ದೇಶ ಚೀನಾದಲ್ಲಿ ಭಾರತೀಯ ಮೂಲದ ಕಮ್ಯುನಿಸ್ಟರ ಆಟ ನಡೆಯುವುದಿಲ್ಲ. ಹೆಸರಿಗೆ ಚೀನಾ ಕಮ್ಯುನಿಸ್ಟ್ ದೇಶವಾದರೂ ಅಲ್ಲಿರುವ ಬಿಲೇನಿಯರ್‌ಗಳ ಸಂಖ್ಯೆಗೇನೂ ಕಡಿಮೆ ಇಲ್ಲ.
ಅಖಂಡ ಭಾರತ ವಿಭಜನೆಯಾದ ನಂತರ ಭಾರತದಲ್ಲಿ ಉಳಿದುಕೊಂಡ ಮುಸಲ್ಮಾನರು ಇಂದಿಗೂ ದೇಶದಲ್ಲಿ ಸುರಕ್ಷಿತವಾಗಿದ್ದಾರೆ. ಪಾಕಿಸ್ತಾನದ ಉದಯಕ್ಕೆ ಕಾರಣವಾಗಿ ಪಾಕಿಸ್ತಾನ ಮುಸ್ಲಿಂ ಲೀಗ್ ಪಕ್ಷ ಸ್ಥಾಪನೆ ಮಾಡಿದ ಜಿನ್ನಾನ ದೇಶದಲ್ಲಿ ಉಳಿದುಕೊಂಡಿರುವ ಹಿಂದೂಗಳ ಪರಿಸ್ಥಿತಿ ದಯನೀಯವಾಗಿದೆ. ಅಖಂಡ ಭಾರತದ ವಿಭಜನೆಗೆ ಕಾರಣವಾದ ಪಕ್ಷ ಭಾರತದಲ್ಲಿ ರಾಹುಲ್ ಗಾಂಧಿಯವರಿಗೆ ಜಾತ್ಯತೀತವಾಗಿ ಕಾಣುತ್ತದೆ, ಆದರೆ ಅದರ ಪಾಕಿಸ್ತಾನದ ಭಾಗ ಹಿಂದೂಗಳ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಸುತ್ತಿದ್ದರೂ ಪಾಕಿಸ್ತಾನದಲ್ಲಿ ಜಾತ್ಯತೀತತೆ ನೆನಪಾಗುವು ದಿಲ್ಲ.
‘ಪೌರತ್ವ ತಿದ್ದುಪಡಿ ಕಾಯ್ದೆ’ಯ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಪಾಕಿಸ್ತಾನದ ಹಿಂದೂಗಳು ಭಾರತದ ಪೌರತ್ವ ಪಡೆಯುವುದನ್ನು ವಿರೋಧಿಸಿದ ರಾಹುಲ್ ಗಾಂಧಿಯವರು, ‘ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್’ ಪಕ್ಷವನ್ನು ಸಂಪೂರ್ಣವಾಗಿ ಜಾತ್ಯತೀತವೆನ್ನುತ್ತಾರೆ.
ಇಂದಿರಾ ಗಾಂಧಿಯವರ ಕಾಲದಲ್ಲಿ ಸಂವಿಧಾನವನ್ನು ತಿದ್ದುಪಡಿ ಮಾಡಿ ಸೇರಿಸಿದ ‘ಜಾತ್ಯತೀತ’ ಪದವನ್ನು ಸದಾ ಮುನ್ನೆಲೆಗೆ ತಂದು ಮಾತನಾಡುವ ಕಾಂಗ್ರೆಸ್ಸಿಗರಿಗೆ, ವಂದೇ ಮಾತರಂ ಗೀತೆ ಯನ್ನು ವಿರೋಧಿಸುವಾಗ ಜಾತ್ಯತೀತತೆ ನೆನಪಾಗುವುದಿಲ್ಲ. ಹೆಣ್ಣು ಮಕ್ಕಳ ಹಕ್ಕುಗಳ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುವ ಕಾಂಗ್ರೆಸ್ಸಿಗರಿಗೆ, ಭಾರತ ಮಾತೆಯನ್ನು ತಾಯಿಗೆ ಹೋಲಿಸಿ ರಚಿಸಿರುವ ‘ವಂದೇ ಮಾತರಂ’ ಗೀತೆಯನ್ನು ವಿರೋಧಸುವವರ ವಿರುದ್ಧ ಮಾತನಾಡುವ ಧೈರ್ಯ ವಿಲ್ಲ.
ವಂದೇ ಮಾತರಂ ಗೀತೆಯ ವಿಚಾರದಲ್ಲಿ ಮೂರ್ತಿ ಪೂಜೆಯನ್ನು ವಿರೋಧಿಸುತ್ತೇವೆಂದು ಹೇಳು ವವರು ಮತ್ತೊಂದೆಡೆ ಟಿಪ್ಪು ಸುಲ್ತಾನನನ್ನು ಆರಾಧಿಸುತ್ತಾರೆ. ಭಾರತ ಮಾತೆಯನ್ನು ಹೆಣ್ಣಿಗೆ (ತಾಯಿ) ಹೋಲಿಸಿ ವಂದೇ ಮಾತರಂ ಗೀತೆ ಬರೆದಿರುವುದು ಅವರಿಗೆ ಸಮಸ್ಯೆಯಾಗಿರಬಹುದು. ಮೊಹಮ್ಮದ್ ಅಲಿ ಜಿನ್ನಾ ಪಾಕಿಸ್ತಾನಕ್ಕೆ ಹೋದ ನಂತರವೂ ಆತನ ಮನಸ್ಥಿತಿಯವರು ಇಂದಿಗೂ ಭಾರತದಲ್ಲಿದ್ದಾರೆ. ಅಂಥವರನ್ನು ಕಾಂಗ್ರೆಸ್ ಪಕ್ಷವು ನೀರು, ಗೊಬ್ಬರ ಹಾಕಿ ಪೋಷಿಸುತ್ತಲೇ ಇದೆ...!