ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vishweshwar Bhat Column: ಹಾಸ್ಯ ಸಾಮ್ರಾಟನ ಭೇಟಿಯ ನೆನಪೇ ಬ್ರಹ್ಮಾನಂದ !

ಕೆಲವು ತಿಂಗಳುಗಳ ಪರಿಶ್ರಮದ ನಂತರ, ಕನ್ನಡದಲ್ಲಿ ಆ ಕೃತಿ ಅಚ್ಚಾಗಿ, ಅದರ ಮೊದಲ ಮುದ್ರಿತ ಪ್ರತಿ ಕೈ ಸೇರಿದಾಗ ಉಂಟಾದ ರೋಮಾಂಚನ ಅಷ್ಟಿಷ್ಟಲ್ಲ. ತಕ್ಷಣವೇ ಹೈದರಾಬಾದ್‌ನಲ್ಲಿದ್ದ ಬ್ರಹ್ಮಾನಂದಂ ಅವರಿಗೆ ಕರೆ ಮಾಡಿ, ‘ಸರ್, ನಾನು ಅನುವಾದಿಸಿದ ನಿಮ್ಮ ಆತ್ಮಕಥೆ ಅಚ್ಚಾಗಿ ಬಂದಿದೆ. ಅದನ್ನು ನಿಮಗೆ ನೀಡಲು ಯಾವಾಗ ಬರಲಿ?’ ಎಂದು ಕೇಳಿದಾಗ, ಅಲ್ಲಿಂದ ಬಂದ ಪ್ರತಿಕ್ರಿಯೆ ನಿರೀಕ್ಷೆಗೂ ಮೀರಿದ್ದಾ ಗಿತ್ತು.

ಹಾಸ್ಯ ಸಾಮ್ರಾಟನ ಭೇಟಿಯ ನೆನಪೇ ಬ್ರಹ್ಮಾನಂದ !

-

ನೂರೆಂಟು ವಿಶ್ವ

ಚಿತ್ರರಂಗದಲ್ಲಿ ನಾಯಕ ನಟರಿಗಾಗಿ ಚಿತ್ರಮಂದಿರಕ್ಕೆ ನುಗ್ಗುವ ಅಭಿಮಾನಿಗಳನ್ನು ನಾವು ನೋಡಿ ದ್ದೇವೆ. ಆದರೆ, ಕೇವಲ ಒಬ್ಬ ಹಾಸ್ಯ ನಟನಿದ್ದಾನೆ ಎಂಬ ಒಂದೇ ಒಂದು ಕಾರಣಕ್ಕಾಗಿ ನೂರಾರು ಸಿನಿಮಾಗಳನ್ನು ಮುಗಿಬಿದ್ದು ನೋಡುವ ಅಭಿಮಾನಿ ಬಳಗ ಇಂದಿಗೂ ಯಾರಿಗಾದರೂ ಇದ್ದರೆ, ಅದು ನಿಸ್ಸಂದೇಹವಾಗಿ ತೆಲುಗು ಹಾಸ್ಯನಟ ಬ್ರಹ್ಮಾನಂದಂ ಅವರಿಗೆ.

ಟಿವಿ ರಿಮೋಟ್ ಕೈಯಲ್ಲಿ ಹಿಡಿದು ಚಾನೆಲ್ ಬದಲಾಯಿಸುವಾಗಲೋ ಅಥವಾ ಮೊಬೈಲ್ ಸ್ಕ್ರಾಲ್ ಮಾಡುವಾಗಲೋ ಆ ಮುಖ ಒಮ್ಮೆ ಕಣ್ಣಿಗೆ ಬಿದ್ದರೆ ಸಾಕು, ಬೆರಳುಗಳು ಸ್ತಬ್ದವಾಗುತ್ತವೆ. ಅವರ ಮುಖದ ಸ್ನಾಯುಗಳ ಹುಯ್ದಾಟ, ಕಣ್ಣಿನ ನೋಟ, ಚಾಲಾಕಿ ಅಭಿವ್ಯಕ್ತಿ-ಯಾವುದೇ ಸಂಭಾಷಣೆ ಇಲ್ಲದಿದ್ದರೂ ನಗಿಸಬಲ್ಲ ಅವರ ಆ ಕಲೆ ವಿರಳಾತಿವಿರಳ. ಹಾಗಂತ ನನಗೆ ಅವರ ಪರಿಚಯವಿಲ್ಲ. ಅಪ್ಪಿತಪ್ಪಿಯೂ ಭೇಟಿ ಮಾಡಿದವನಲ್ಲ.

ಅಂಥ ಅವಕಾಶವೇ ನನಗೆ ಕೂಡಿ ಬಂದಿರಲಿಲ್ಲ. ಆದರೆ, ವಿಮಾನ ನಿಲ್ದಾಣದ ಪುಸ್ತಕದ ಅಂಗಡಿ ಯಲ್ಲಿ ಕಣ್ಣಿಗೆ ಬಿದ್ದ ಅವರ ’Me Brahmanandam’ ಎಂಬ ಕೃತಿ ಇಡೀ ಕಥೆಯನ್ನೇ ಬದಲಾಯಿಸಿತು. ಪ್ರಯಾಣದ ಉದ್ದಕ್ಕೂ ಪುಟಗಳನ್ನು ತಿರುಗಿಸುತ್ತಾ ಹೋದಂತೆ, ಆ ಕೃತಿ ಕೇವಲ ಒಬ್ಬ ನಟನ ಯಶೋಗಾಥೆಯಾಗಿ ಕಾಣಲಿಲ್ಲ. ಅದು ನೂರಾರು ನೋವುಗಳ ನಡುವೆ ಅರಳಿದ ನಗುವಿನ ಮಹಾ ಸಾಗರವಾಗಿ ತೆರೆದುಕೊಂಡಿತು.

ಇದನ್ನೂ ಓದಿ: Vishweshwar Bhat‌ Column: ಜಪಾನಿನ ವೃದ್ಧರ ಡೈಪರ್

ಒಬ್ಬ ಸಾಮಾನ್ಯ ಮನುಷ್ಯ, ಅದೆಂಥ ಹುಚ್ಚು ಸಿನಿಮಾ ಅಭಿಮಾನಿಯೇ ಆಗಿರಬಹುದು, ತನ್ನ ಜೀವಿತಾವಧಿಯಲ್ಲಿ1300 ಸಿನಿಮಾಗಳನ್ನು ನೋಡಿ ಮುಗಿಸುವುದು ಸಾಧ್ಯವಿಲ್ಲದ ಮಾತು. ಅಂಥದ್ದರಲ್ಲಿ 1300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಸ್ವತಃ ನಟಿಸಿ, ಗಿನ್ನೆಸ್ ದಾಖಲೆ ಬರೆಯುವುದು ಸಾಧಾರಣದ ಮಾತೇ? ಆದರೆ ಆ ಸಾಧನೆಯ ಹಿಂದೆ ಕಿತ್ತು ತಿನ್ನುವ ಬಡತನವಿತ್ತು, ಮನೆತುಂಬ ಮಕ್ಕಳ ದೊಡ್ಡ ಸಂಸಾರವಿತ್ತು, ಹಿಂದುಳಿದ ಕುಗ್ರಾಮದ ಹಿನ್ನೆಲೆಯಿತ್ತು. ಗಾಡ್ ಫಾದರ್ ಇಲ್ಲದೇ, ಸ್ವಪ್ರಯತ್ನದಿಂದ ಜಗತ್ತೇ ತಲೆಬಾಗುವಂತೆ ಬೆಳೆದ ಆ ವ್ಯಕ್ತಿತ್ವದ ಬಗ್ಗೆ ಓದಿದಾಗ ಅಭಿಮಾನ ಗೌರವವಾಗಿ, ಗೌರವ ಆರಾಧನೆಯಾಗಿ ಬದಲಾಯಿತು.

ಪುಸ್ತಕ ಓದಿ ಮುಗಿಸಿ ಕೆಳಗಿಟ್ಟ ತಕ್ಷಣ ನನ್ನ ಮನಸ್ಸಿನಲ್ಲಿ ಮೂಡಿದ್ದು ಒಂದೇ ಆಲೋಚನೆ- ‘ಈ ಸ್ಪೂರ್ತಿದಾಯಕ ಬದುಕು ಕನ್ನಡದ ಓದುಗರಿಗೂ ತಲುಪಬೇಕು. ಈ ಸಾಧನೆ ಸಾವಿರಾರು ಮಂದಿಗೆ ಪ್ರೇರಣೆ ಆಗಬೇಕು.’ ಅದೃಷ್ಟವಶಾತ್, ಇಬ್ಬರಿಗೂ ಪರಿಚಿತರಾಗಿದ್ದ ಒಬ್ಬ ಕಾಮನ್ ಫ್ರೆಂಡ್ ಮೂಲಕ ಬ್ರಹ್ಮಾನಂದಂ ಅವರನ್ನು ಸಂಪರ್ಕಿಸುವ ಪ್ರಯತ್ನ ಯಶಸ್ವಿಯಾಯಿತು. ಕನ್ನಡಕ್ಕೆ ಅವರ ಆತ್ಮಕಥೆಯನ್ನು ಅನುವಾದಿಸುವ ಇಚ್ಛೆಯನ್ನು ವ್ಯಕ್ತಪಡಿಸಿದಾಗ, ಅವರು ಕೇವಲ ಒಬ್ಬ ನಟನಾಗಿ ವರ್ತಿಸಲಿಲ್ಲ.

ಬದಲಿಗೆ ಒಬ್ಬ ಪ್ರಬುದ್ಧ ಪ್ರಾಧ್ಯಾಪಕನಂತೆ (ಅವರು ಚಿತ್ರರಂಗಕ್ಕೆ ಬರುವ ಮುನ್ನ ತೆಲುಗು ಉಪನ್ಯಾಸಕರಾಗಿದ್ದರು) ಅನುವಾದಕನ ಪೂರ್ವಾಪರ, ಸಾಹಿತ್ಯಿಕ ಹಿನ್ನೆಲೆಯನ್ನು ಅರಿತು ಕೊಂಡು, ಅತ್ಯಂತ ಸಂತೋಷದಿಂದ ಸಮ್ಮತಿ ಸೂಚಿಸಿದರು.

Bhat and Brahmandam ok

ಕೆಲವು ತಿಂಗಳುಗಳ ಪರಿಶ್ರಮದ ನಂತರ, ಕನ್ನಡದಲ್ಲಿ ಆ ಕೃತಿ ಅಚ್ಚಾಗಿ, ಅದರ ಮೊದಲ ಮುದ್ರಿತ ಪ್ರತಿ ಕೈ ಸೇರಿದಾಗ ಉಂಟಾದ ರೋಮಾಂಚನ ಅಷ್ಟಿಷ್ಟಲ್ಲ. ತಕ್ಷಣವೇ ಹೈದರಾಬಾದ್‌ನಲ್ಲಿದ್ದ ಬ್ರಹ್ಮಾನಂದಂ ಅವರಿಗೆ ಕರೆ ಮಾಡಿ, ‘ಸರ್, ನಾನು ಅನುವಾದಿಸಿದ ನಿಮ್ಮ ಆತ್ಮಕಥೆ ಅಚ್ಚಾಗಿ ಬಂದಿದೆ. ಅದನ್ನು ನಿಮಗೆ ನೀಡಲು ಯಾವಾಗ ಬರಲಿ?’ ಎಂದು ಕೇಳಿದಾಗ, ಅಲ್ಲಿಂದ ಬಂದ ಪ್ರತಿಕ್ರಿಯೆ ನಿರೀಕ್ಷೆಗೂ ಮೀರಿದ್ದಾಗಿತ್ತು. ಅವರು ನನಗಿಂತಲೂ ಹೆಚ್ಚು ಉತ್ಸುಕರಾಗಿ, ‘ನೀವು ಈಗಲೂ ಬರಬಹುದು, ನಾಳೆಯೂ ಬರಬಹುದು. ಆದರೆ ಬಹಳ ವಿಳಂಬ ಮಾಡಬೇಡಿ’ ಎಂದರು. ಆ ಧ್ವನಿಯಲ್ಲಿದ್ದ ಆಪ್ತತೆ ಮತ್ತು ತವಕ ತಕ್ಷಣವೇ ಹೈದರಾಬಾದ್ʼನತ್ತ ಹೆಜ್ಜೆ ಇಡುವಂತೆ ಮಾಡಿತು.

ಅದಾಗಿ ಮೂರನೇ ದಿನ. ಹೈದರಾಬಾದ್‌ನ ಅವರ ಸುಂದರವಾದ ಮನೆಯ ಅಂಗಳದಲ್ಲಿ ನಾನು ಸಪತ್ನಿಕನಾಗಿ ನಿಂತಿದ್ದೆ. ಬೆಳ್ಳಿತೆರೆಯ ಮೇಲೆ ಕೋಟ್ಯಂತರ ಜನರನ್ನು ನಗಿಸಿದ ಮಹಾ ನಟನನ್ನು ಎದುರಾಗಿ ನೋಡುವ ಆ ಕ್ಷಣ ಹತ್ತಿರವಾಗುತ್ತಿತ್ತು. ಹೇಳಿ ಕೇಳಿ ಮೊದಲ ಭೇಟಿ, ಪರಿಚಯವಿಲ್ಲ.

ನಾವು ಆಗಮಿಸಿದ ಸುದ್ದಿ ತಿಳಿಯುತ್ತಿದ್ದಂತೆ, ಖುದ್ದು ಬ್ರಹ್ಮಾನಂದಂ ಅವರೇ ಮನೆಯ ಮುಖ್ಯ ದ್ವಾರದ ಬಳಿ ಬಂದು ನಮ್ಮನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಯಾವುದೇ ಹಮ್ಮು-ಬಿಮ್ಮುಗಳಿಲ್ಲದ, ಕಪ್ಪು ಬಣ್ಣದ ಪ್ಯಾಂಟ್ ಮತ್ತು ಅದೇ ಬಣ್ಣದ ಎಂಪೋರಿಯೋ ಅರ್ಮಾನಿ ಶರ್ಟ್ ಧರಿಸಿದ ಆ ಸರಳರೂಪ ನಮ್ಮನ್ನು ಬೆರಗುಗೊಳಿಸಿತು. ಕೇವಲ ಕೈ ಮುಗಿದು ಬರಮಾಡಿ ಕೊಳ್ಳಲಿಲ್ಲ, ದಶಕಗಳ ಕಾಲ ಪರಿಚಿತರಾಗಿದ್ದ ಆತ್ಮೀಯರನ್ನು ಸ್ವಾಗತಿಸುವಂತೆ ನಮ್ಮನ್ನು ತಮ್ಮ ಮನೆಯೊಳಗೆ ಬರಮಾಡಿಕೊಂಡರು.

Bhat family with R

ಬ್ರಹ್ಮಾನಂದಂ ಅವರಿಗೆ ಮೈಸೂರು ಪೇಟ ತೊಡಿಸಿ, ಜರಿಶಾಲು ಹೊದಿಸಿ, ಏಲಕ್ಕಿ ಹಾರ ಹಾಕಿ ಸನ್ಮಾನಿಸಿ, ಅವರ ಆತ್ಮಕಥೆಯ ಕನ್ನಡದ ಪ್ರತಿಗಳನ್ನು ಕೈಗಿಟ್ಟೆ. ಈ ಕ್ಷಣಕ್ಕಾಗಿ ಪುಸ್ತಕ ಅನುವಾದಕ್ಕೆ ತೊಡಗಿದ ಹತ್ತಾರು ತಿಂಗಳುಗಳಿಂದ ಕನವರಿಸಿದ್ದೆ. ನಾವು ಅಪಾರವಾಗಿ ಇಷ್ಟಪಡುವವರು ಮುಖಾ ಮುಖಿಯಾದಾಗ, ಅವರು ಯಾರೇ ಆದರೂ, ನಮ್ಮ ಸಂತೋಷ ಕಟ್ಟೆಯೊಡೆಯುವುದು ಸಹಜ. ಬ್ರಹ್ಮಾನಂದಂ ಆ ಕೃತಿಯನ್ನು ತಮ್ಮ ಎರಡು ಕೈಗಳಿಂದ ಅತ್ಯಂತ ಗೌರವಪೂರ್ವಕವಾಗಿ ಸ್ವೀಕರಿಸಿದರು. ಆ ಕಣ್ಣುಗಳಲ್ಲಿ ಮೂಡಿದ ಆನಂದ, ಸಂತೃಪ್ತಿಗೆ ಬೆಲೆ ಕಟ್ಟಲು ಸಾಧ್ಯವಿರಲಿಲ್ಲ.

ಒಬ್ಬ ಕಲಾವಿದನಿಗೆ ತನ್ನ ಬದುಕಿನ ಕಥೆ ಮತ್ತೊಂದು ಭಾಷೆಯ ಓದುಗರನ್ನು ತಲುಪುತ್ತಿದೆ ಎನ್ನುವ ಹೆಮ್ಮೆ ಮತ್ತು ತೃಪ್ತಿ ಆ ನೋಟದಲ್ಲಿ ಎದ್ದು ಕಾಣುತ್ತಿತ್ತು. ಪುಸ್ತಕವನ್ನು ಕೈಗೆತ್ತಿಕೊಂಡ ವರೇ ಅದರ ಮುಖಪುಟವನ್ನು ಪುಟ್ಟ ಮಗುವಿನ ಆಸಕ್ತಿಯಿಂದ ದಿಟ್ಟಿಸಿ ನೋಡಿದರು.

ಪುಸ್ತಕವನ್ನೊಮ್ಮೆ ಮೈದಡವಿದರು. ಮುಖಪುಟವನ್ನು ತದೇಕಚಿತ್ತದಿಂದ ಗಮನಿಸಿದರು. ಮುಖ ಪುಟ ವಿನ್ಯಾಸ, ಅಚ್ಚುಕಟ್ಟಾದ ಮುದ್ರಣ, ಅಕ್ಷರ ಸಂಯೋಜನೆ, ಅಂದ ಮತ್ತು ಕಲಾತ್ಮಕತೆ ಅವರಿಗೆ ತಕ್ಷಣವೇ ಇಷ್ಟವಾಯಿತು. ಪುಟಗಳನ್ನು ಒಂದೊಂದಾಗಿ ಮಗುಚಿ ಹಾಕುತ್ತಾ, ಒಟ್ಟಾರೆ ಕೃತಿಯ ಸೊಗಸನ್ನು ಕಂಡು ಪ್ರೀತಿಯಿಂದ ‘ಬಹಳ ಅದ್ಭುತವಾಗಿ ಮೂಡಿಬಂದಿದೆ.

ನೀವು ನನ್ನ ಕಥೆಗೆ, ನನ್ನ ಭಾವನೆಗಳಿಗೆ ಹೊಸ ರೂಪ ಕೊಟ್ಟಿದ್ದೀರಿ’ ಎಂದು ಹೇಳಿದರು. ತಕ್ಷಣ ಸಹಾಯಕನನ್ನು ಕರೆದು, ಬೇರೆ ಭಾಷೆಗಳಲ್ಲಿ ಅನುವಾದವಾಗಿರುವ ಕೃತಿಗಳನ್ನು ತರುವಂತೆ ಹೇಳಿದರು. ಆತ ಮರಾಠಿ, ತಮಿಳು, ಮಲಯಾಳಂ, ಹಿಂದಿ, ಇಂಗ್ಲಿಷ್, ಒರಿಯಾ ಭಾಷೆಗಳಲ್ಲಿ ಈಗಾಗಲೇ ಅನುವಾದವಾಗಿರುವ ಪುಸ್ತಕಗಳ ಪ್ರತಿಗಳನ್ನು ಬ್ರಹ್ಮಾನಂದಂ ಅವರ ಟೇಬಲ್ ಮೇಲೆ ಹರವಿಟ್ಟ. ಅದರ ಜತೆ ಆಗ ತಾನೇ ಬಂದ ಕನ್ನಡದ ಪ್ರತಿಯನ್ನೂ ಇಟ್ಟರು.

‘ಭಟ್ಟಗಾರು, ಮೂಲ ತೆಲುಗು ಸೇರಿದಂತೆ, ಈಗಾಗಲೇ ಎಲ್ಲ ಭಾಷೆಗಳಲ್ಲಿ ಪ್ರಕಟವಾದ ಪುಸ್ತಕ ಗಳಿಗಿಂತ ಕನ್ನಡದ ಪುಸ್ತಕ ಅತ್ಯಂತ ಸುಂದರವಾಗಿದೆ, ಉಳಿದೆಲ್ಲವುಗಳಿಗಿಂತ ಆಕರ್ಷಕವಾಗಿದೆ, ಮುದ್ರಣ ಮತ್ತು ಪುಸ್ತಕದ ಗೆಟಪ್ ದಿ ಬೆಸ್ಟ್’ ಎಂದು ಬ್ರಹ್ಮಾನಂದಂ ಉದ್ಗರಿಸಿದರು. ಆ ಮಹಾನ್ ಕಲಾವಿದನ ಬಾಯಿಂದ ಬಂದ ಈ ಮಾತುಗಳು ನನ್ನ ಪಾಲಿಗೆ ಕೇವಲ ಪ್ರಶಂಸೆಯಾಗಿರಲಿಲ್ಲ. ಅದು ನನ್ನ ತಿಂಗಳುಗಳ ನಿರಂತರ ಶ್ರಮಕ್ಕೆ ಸಿಕ್ಕ ಮನ್ನಣೆಯಾಗಿತ್ತು. ಅಷ್ಟಕ್ಕೇ ನಿಲ್ಲದ ಅವರು, ಅತ್ಯಂತ ಭಾವುಕರಾಗಿ ನನ್ನನ್ನು ಪ್ರೀತಿಯಿಂದ ಆಲಂಗಿಸಿಕೊಂಡರು.

ಒಬ್ಬ ದಂತಕಥೆಯ ಅಪ್ಪುಗೆಯಲ್ಲಿ ಭಾಷೆ-ಭಾಷೆಗಳ ಬೇಲಿ ತೆರವಾಗಿತ್ತು. ಅವರ ಆ ಆಲಿಂಗನದ ಉಷ್ಣತೆ ಹೃದಯ ಮುಟ್ಟಿದಾಗ, ಕನ್ನಡದ ಓದುಗರಿಗೆ ಅತ್ಯುತ್ತಮ ಕೃತಿ ನೀಡಬೇಕೆಂದು ಹಗಲಿರುಳು ಪಟ್ಟ ಕಷ್ಟ, ಎದುರಿಸಿದ ಒತ್ತಡಗಳೆಲ್ಲವೂ ಒಂದೇ ಕ್ಷಣದಲ್ಲಿ ಕರಗಿಹೋಗಿ ಮನಸ್ಸು ಹಗುರ ವಾಯಿತು.

ಒಬ್ಬ ಲೇಖಕನಿಗೆ ಇದಕ್ಕಿಂತ ದೊಡ್ಡ ಪ್ರಶಸ್ತಿ, ಇದಕ್ಕಿಂತ ದೊಡ್ಡ ‘ದಕ್ಷಿಣೆ’ ಬೇರೇನಿದ್ದೀತು?ಆಪ್ತವಾದ ಆ ಮಾತುಕತೆ ಮುಂದುವರಿದಂತೆ, ಬ್ರಹ್ಮಾನಂದಂ ಅವರ ವ್ಯಕ್ತಿತ್ವದ ಮತ್ತೊಂದು ಸುಂದರ ಮುಖ ಅನಾವರಣಗೊಳ್ಳುತ್ತಾ ಹೋಯಿತು. ಸಾಧಾರಣವಾಗಿ ತಾರೆಗಳು ತಮ್ಮದೇ ಲೋಕದಲ್ಲಿ ಮುಳುಗಿರುತ್ತಾರೆ, ಆದರೆ ಬ್ರಹ್ಮಾನಂದಂ ಅವರಿಗೆ ನೆರೆರಾಜ್ಯದ ಭಾಷೆ, ಸಂಸ್ಕೃತಿ ಮತ್ತು ಜನರ ಬಗ್ಗೆ ಇದ್ದ ಕಾಳಜಿ ನನ್ನನ್ನು ಬೆರಗುಗೊಳಿಸಿತು.

ವಿಶೇಷವಾಗಿ ಕನ್ನಡ ಭಾಷೆ ಮತ್ತು ಕರ್ನಾಟಕದ ಜನರ ಬಗ್ಗೆ ಮಾತನಾಡುವಾಗ ಅವರ ಧ್ವನಿ ಯಲ್ಲಿ ಒಂದು ವಿಶಿಷ್ಟವಾದ ಆದರ, ಆಪ್ತತೆ ಇತ್ತು. ಕನ್ನಡ ಚಿತ್ರರಂಗದ ಧ್ರುವತಾರೆಗಳಾದ ಡಾ.ರಾಜ್‌ಕುಮಾರ್, ಸಾಹಸಸಿಂಹ ವಿಷ್ಣುವರ್ಧನ್, ರೆಬೆಲ್ ಸ್ಟಾರ್ ಅಂಬರೀಶ್, ಕಿಚ್ಚ ಸುದೀಪ್ ಅವರೊಂದಿಗಿನ ತಮ್ಮ ಒಡನಾಟದ ದಿನಗಳನ್ನು ಅವರು ಅತ್ಯಂತ ಭಾವುಕರಾಗಿ ಮತ್ತು ಗೌರವ ಪೂರ್ವಕವಾಗಿ ಸ್ಮರಿಸಿಕೊಂಡರು.

‘ಅವರೆಲ್ಲ ಕೇವಲ ನಟರಲ್ಲ, ಶ್ರೇಷ್ಠ ಮಾನವತಾವಾದಿಗಳು. ಅವರನ್ನು ಭೇಟಿ ಮಾಡಿದಾಗಲೆಲ್ಲ ನನ್ನನ್ನು ಪ್ರೀತಿಯಿಂದ ಬರಮಾಡಿಕೊಳ್ಳುತ್ತಿದ್ದ ರೀತಿ, ತೋರುತ್ತಿದ್ದ ಪ್ರೀತಿ, ಅಭಿಮಾನ ಎಂದಿಗೂ ಮರೆಯಲಾಗದ್ದು’ ಎಂದು ಧನ್ಯತಾಭಾವದಿಂದ ಹೇಳಿದರು.

ಕರ್ನಾಟಕದ ಪ್ರೇಕ್ಷಕರ ಚಿತ್ರಾಭಿರುಚಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದ ಅವರು, ‘ಕನ್ನಡಿಗರು ಕೇವಲ ಭಾಷೆಯ ಗಡಿಗಳಿಗೆ ಸೀಮಿತವಾಗದೇ ಉತ್ತಮ ಕಲಾವಿದನನ್ನು ಮತ್ತು ಕಲಾಕೃತಿಯನ್ನು ಜಗತ್ತಿನ ಯಾವುದೇ ಮೂಲೆಯಿಂದ ಬಂದರೂ ಮನಸಾರೆ ಒಪ್ಪಿ ಆರಾಧಿಸುತ್ತಾರೆ, ಆ ಸಾಂಸ್ಕೃತಿಕ ಶ್ರೀಮಂತಿಕೆ ಕರ್ನಾಟಕಕ್ಕೆ ಮಾತ್ರ ಸಾಧ್ಯ’ ಎಂದು ಹೆಮ್ಮೆಯಿಂದ ನುಡಿದರು.

ವರ್ತಮಾನದ ಯಶಸ್ಸಿನ ಹೊಳಪಿನಿಂದ ಮಾತುಕತೆ ತಟ್ಟನೆ ಅವರ ಹಳೆಯ ದಿನಗಳ ನೆನಪಿನಾ ಳಕ್ಕೆ ಜಾರಿತು. ಬೆಳ್ಳಿತೆರೆಯ ಮೇಲೆ ಕೇವಲ ಒಂದು ಕ್ಷಣ ಮುಖ ತೋರಿಸಿದರೂ ಇಡೀ ಚಿತ್ರಮಂದಿರ ವೇ ನಗುವಿನ ಕಡಲಲ್ಲಿ ತೇಲುವಂತೆ ಮಾಡುವ ಈ ಅದ್ಭುತ ಮನುಷ್ಯನ ನಿಜ ಜೀವನದ ಆರಂಭಿಕ ದಿನಗಳು ಎಷ್ಟು ಸಂಕಷ್ಟಮಯವಾಗಿದ್ದವು, ಎಷ್ಟು ಕಣ್ಣೀರಿನಿಂದ ಕೂಡಿದ್ದವು ಎಂಬುದನ್ನು ಅವರು ಸ್ವತಃ ವಿವರಿಸಿದರು. ಆ ಕ್ಷಣದಲ್ಲಿ ಲವಲವಿಕೆಯಿಂದಿದ್ದ ಆ ಲಿವಿಂಗ್ ರೂಮಿನ ವಾತಾ ವರಣ ತುಸು ಭಾವುಕವಾಯಿತು.

‘ತೆರೆಯ ಮೇಲೆ ಜನರನ್ನು ನಗಿಸುವ ಪ್ರತಿಯೊಬ್ಬ ಹಾಸ್ಯನಟನ ಹಿಂದೆಯೂ ಒಂದು ದೊಡ್ಡ ಕಣ್ಣೀರಿನ ಕಥೆಯಿರುತ್ತದೆ ಭಟ್ಟಗಾರು’ ಎಂದು ಅವರು ನಿಟ್ಟುಸಿರಿಡುತ್ತಾ ಮಾತು ಮುಂದು ವರಿಸಿದರು. ಅವರು ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡರು. ಆಂಧ್ರಪ್ರದೇಶದ ಸಾಟೆನಪಲ್ಲಿಯ ಸಣ್ಣ ಹಳ್ಳಿಯೊಂದರಲ್ಲಿ, ಕಡುಬಡತನದ ನಡುವೆ, ಮನೆತುಂಬ ಇದ್ದ ದೊಡ್ಡ ಸಂಸಾರದಲ್ಲಿದಿನ ಕಳೆಯುವುದೇ ಒಂದು ಸಾಹಸವಾಗಿತ್ತು. ಜೀವಿಸಲು ನೂರಾರು ತಾಪತ್ರಯ ಗಳಿದ್ದವು.

ಯಾವುದೇ ಆಸ್ತಿ-ಪಾಸ್ತಿ ಇಲ್ಲದ, ತಿನ್ನಲು ಅನ್ನಕ್ಕೂ ಪರದಾಡುತ್ತಿದ್ದ ಆ ದಿನಗಳಲ್ಲಿ ಶಿಕ್ಷಣವೊಂದೇ ತಮ್ಮನ್ನು ಬದುಕಿಸಬಲ್ಲದು ಎಂದು ನಂಬಿ, ಯಾರದ್ದೋ ಮನೆಯಲ್ಲಿ ಉಳಿದುಕೊಂಡು, ಕಷ್ಟಪಟ್ಟು ಓದಿ ಎಂ.ಎ. ಮುಗಿಸಿ ಕಾಲೇಜು ಉಪನ್ಯಾಸಕರಾಗಿದ್ದು, ಉಪನ್ಯಾಸಕ ವೃತ್ತಿಯ ಅಲ್ಪ ಆದಾಯದಲ್ಲಿ ಇಡೀ ಕುಟುಂಬದ ಜವಾಬ್ದಾರಿ ಹೊತ್ತ ತಾಪತ್ರಯಯದ ದಿನಗಳು, ಅತ್ತ ಕುಟುಂಬದ ಹಸಿವು, ಇತ್ತ ಒಳಗಿನ ಕಲೆಯ ಹಸಿವು ಎರಡರ ನಡುವೆ ಸಿಲುಕಿ ಅನುಭವಿಸಿದ ಮಾನಸಿಕ ಯಾತನೆ ಹೀಗೆ ತಮ್ಮ ಬದುಕಿನ ಘಟನೆಗಳನ್ನೆಲ್ಲ ಮೆಲುಕು ಹಾಕಿದರು. ಯಾರ ಬೆಂಬಲವಿಲ್ಲದೇ, ಕೇವಲ ಸ್ವಪ್ರಯತ್ನದಿಂದ ಚಿತ್ರರಂಗಕ್ಕೆ ಕಾಲಿಟ್ಟಾಗ ಎದುರಾದ ತಿರಸ್ಕಾರಗಳು, ಅಪಮಾನಗಳು ಮತ್ತು ಅನಿಶ್ಚಿತತೆಯ ದಿನಗಳನ್ನು ಅವರು ವಿವರಿಸುತ್ತಿದ್ದಾಗ ಅವರ ಕಣ್ಣುಗಳ ಕೋನದಲ್ಲಿ ಸಣ್ಣದೊಂದು ತೇವ ಜಿನುಗುತ್ತಿತ್ತು.

ಸದಾ ಕೋಟ್ಯಂತರ ಜನರನ್ನು ನಗಿಸುವ ಮುಖದಲ್ಲಿ ಅಂದು ಬದುಕಿನ ಕಟು ಸತ್ಯದ ಗಾಂಭೀರ್ಯ ವಿತ್ತು. ಆ ಮಾತುಗಳನ್ನು ಕೇಳುತ್ತಿದ್ದ ನಮಗೂ ಗಂಟಲು ತುಂಬಿ ಬಂದಂತಾಯಿತು. ತೆರೆಯ ಮೇಲೆ ನಾವು ನೋಡಿ ಆನಂದಿಸಿದ ಆ ಹಾಸ್ಯ ಚಕ್ರವರ್ತಿಯ ಸಾಮ್ರಾಜ್ಯದ ಅಡಿಪಾಯ ಎಷ್ಟು ಕಷ್ಟದ, ಕಣ್ಣೀರಿನ ಮತ್ತು ಬೆವರಿನ ಇಟ್ಟಿಗೆಗಳಿಂದ ನಿರ್ಮಾಣವಾಗಿದೆ ಎಂಬ ಸತ್ಯ ದರ್ಶನವಾದಾಗ, ಅವರ ಬಗ್ಗೆ ನನ್ನ ಮನಸ್ಸಿನಲ್ಲಿದ್ದ ಗೌರವ ಮತ್ತು ಅಭಿಮಾನ ಇಮ್ಮಡಿಯಾಯಿತು.

ಆ ಅಪೂರ್ವ ಭೇಟಿಯ ಆ ಕ್ಷಣಗಳು ನನ್ನ ಬದುಕಿನ ಅತ್ಯಂತ ಸ್ಮರಣೀಯ ಪುಟಗಳಾಗಿ ದಾಖಲಾಗು ತ್ತಿದ್ದವು. ಕೇವಲ ಪುಸ್ತಕದ ಅನುವಾದಕನಾಗಿ ಹೋದ ನನಗೆ, ಬ್ರಹ್ಮಾನಂದಂ ಅವರು ತಮ್ಮ ಆಪ್ತ ಲೋಕದ ಬಾಗಿಲನ್ನೇ ತೆರೆದರು. ಮಾತುಕತೆಯ ನಂತರ, ಅವರು ಅತ್ಯಂತ ಪ್ರೀತಿಯಿಂದ ನನ್ನನ್ನು ಮತ್ತು ನನ್ನ ಪತ್ನಿಯನ್ನು ತಮ್ಮ ಒಳಮನೆಗೆ ಕರೆದುಕೊಂಡು ಹೋದರು. ಅಲ್ಲಿ ನಮ್ಮ ಕಣ್ಣಿಗೆ ಬಿದ್ದದ್ದು ಕಲಾ ಪ್ರೇಮಿಗಳ ಕಣ್ಮನ ಸೆಳೆಯುವ ಒಂದು ಅದ್ಭುತ ದೃಶ್ಯ!

ಕರ್ನಾಟಕದ ಹೆಮ್ಮೆಯ, ಖ್ಯಾತ ಕಲಾವಿದ ದಿವಂಗತ ಬಿ.ಕೆ.ಎಸ್. ವರ್ಮ ಅವರು ತಮ್ಮ ಅನನ್ಯ ಶೈಲಿಯಲ್ಲಿ ಬಿಡಿಸಿದ ‘ತಿರುಪತಿ ಬಾಲಾಜಿ’ಯ ಭವ್ಯ ತೈಲಚಿತ್ರವೊಂದು ಅಲ್ಲಿ ರಾರಾಜಿಸುತ್ತಿತ್ತು.

ಅಲ್ಲಿಂದ ಮುಂದೆ ಅವರು ನಮ್ಮನ್ನು ತಮ್ಮ ನಿವಾಸದ ಮೊದಲ ಮಹಡಿಗೆ ಕರೆದೊಯ್ದರು. ಆ ಮಹಡಿಯ ಮೆಟ್ಟಿಲು ಹತ್ತಿ ಒಳಗೆ ಕಾಲಿಡುತ್ತಿದ್ದಂತೆ ನಮಗೆ ಸಿನಿಮಾ ಇತಿಹಾಸದ ಜೀವಂತ ಮ್ಯೂಸಿಯಂ ಒಂದರ ಒಳಗೆ ಪ್ರವೇಶಿಸಿದ ಅನುಭವ. ಆ ಮೊದಲ ಮಹಡಿಯಿಡೀ ಅತ್ಯಂತ ಅಂದ ವಾಗಿ, ಕಲಾತ್ಮಕವಾಗಿ ಜೋಡಿಸಿಟ್ಟ ಸಾವಿರಾರು ಪ್ರಶಸ್ತಿಗಳು, ಬೆಳ್ಳಿಯ ಮತ್ತು ಚಿನ್ನದ ಪಾರಿತೋಷಕಗಳು, ದೇಶದ ವಿವಿಧ ಸಾಂಸ್ಕೃತಿಕ ಸಂಸ್ಥೆಗಳು ನೀಡಿದ ಗುಣಕಥನ ಪತ್ರಗಳು, ಸನ್ಮಾನ ಪತ್ರಗಳು ಹಾಗೂ ಸಾಲು ಸಾಲು ಬಿರುದುಗಳ ಸ್ಮರಣಿಕೆಗಳು ಅವರ ಸಾಧನೆಗೆ ಷರಾ ಬರೆದಂತಿದ್ದವು. ಅದಕ್ಕಿಂತಲೂ ಹೆಚ್ಚಾಗಿ, ಭಾರತೀಯ ಸಿನಿಮಾ ಲೋಕದ ದಿಗ್ಗಜರೊಂದಿಗೆ ಬ್ರಹ್ಮಾನಂದಂ ಅವರು ಕಳೆದ ಅಪೂರ್ವ ಕ್ಷಣಗಳ ಕಪ್ಪು-ಬಿಳುಪಿನ ಹಾಗೂ ಬಣ್ಣದ ಫೋಟೋ ಗಳನ್ನು ಅಚ್ಚುಕಟ್ಟಾಗಿ ಫ್ರೇಮ್ ಕಟ್ಟಿ ಗೋಡೆಗಳ ಮೇಲೆ ಸಾಲಾಗಿ ಜೋಡಿಸಲಾಗಿತ್ತು.

ಎನ್.ಟಿ.ಆರ್, ಅಕ್ಕಿನೇನಿ ನಾಗೇಶ್ವರ ರಾವ್, ಚಿರಂಜೀವಿ ಅವರಿಂದ ಹಿಡಿದು ಇಂದಿನ ತಲೆಮಾರಿನ ಸೂಪರ್ ಸ್ಟಾರ್ʼಗಳವರೆಗಿನ ಚಿತ್ರಗಳು ಅವರ ದಶಕಗಳ ಕಾಲದ ಸುದೀರ್ಘ ಸಿನಿಮಾ ಪಯಣಕ್ಕೆ ಸಾಕ್ಷಿಯಾಗಿದ್ದವು. ಪ್ರತಿಯೊಂದು ಫೋಟೋದ ಹಿಂದಿನ ಕಥೆಯನ್ನು, ತಮಗೆ ಸಿಕ್ಕ ಗೌರವದ ನೆನಪುಗಳನ್ನು ಅವರು ನಮಗೆ ವಿವರಿಸುವಾಗ, ಒಬ್ಬ ಸಾಧಕನ ಸಾಮ್ರಾಜ್ಯದ ವೈಭವ ಕಣ್ಣಮುಂದೆ ಅನಾವರಣಗೊಂಡಿತ್ತು. ಆ ಮಹಡಿಯ ಪ್ರತಿ ಮೂಲೆಯೂ ಅವರ ಕಠಿಣ ಪರಿಶ್ರಮಕ್ಕೆ ಕಾಲ ಕೊಟ್ಟ ವಿಜಯದ ಮುದ್ರೆಯಂತೆ ಭಾಸವಾಗುತ್ತಿತ್ತು.

ನಂತರ ಬ್ರಹ್ಮಾನಂದಂ ತಮ್ಮ ಧರ್ಮಪತ್ನಿ ಶ್ರೀಮತಿ ಲಕ್ಷ್ಮಿ ಅವರನ್ನು ಅತ್ಯಂತ ಗೌರವದಿಂದ ಪರಿಚಯಿಸಿದರು. ‘ಭಟ್ಟಗಾರು, ಇವಳೇ ನನ್ನ ಲಕ್ಷ್ಮಿ... ಇಡೀ ಜಗತ್ತು ನನ್ನ ಯಶಸ್ಸನ್ನು ನೋಡಿ ಚಪ್ಪಾಳೆ ತಟ್ಟುತ್ತಿದ್ದರೆ, ಅದರ ಹಿಂದಿದ್ದ ನನ್ನ ಕಷ್ಟದ ದಿನಗಳಲ್ಲಿ ನನ್ನ ಬೆನ್ನೆಲುಬಾಗಿ, ನೆರಳಾಗಿ ನಿಂತವಳು ಇವಳು’ ಎಂದು ಹೇಳಿದರು. ಅವರ ಆತ್ಮಕಥೆಯಲ್ಲಿ ಪತ್ನಿಯ ವ್ಯಕ್ತಿತ್ವವನ್ನು ಬ್ರಹ್ಮಾ ನಂದಂ ಅತ್ಯಂತ ಆಪ್ತವಾಗಿ ಕಟ್ಟಿಕೊಟ್ಟಿದ್ದಾರೆ.

ಕೈಯಲ್ಲಿ ಹಣವಿಲ್ಲದೇ ತಾಪತ್ರಯ ಪಡುತ್ತಿzಗಲೂ ನಗುಮುಖದಿಂದಲೇ ಸಂಸಾರ ನಿಭಾಯಿಸಿ, ಪತಿಯ ಕಲಾ ಪಯಣಕ್ಕೆ ಧೈರ್ಯ ತುಂಬಿದ ಪತ್ನಿಯ ತ್ಯಾಗವನ್ನು ಅವರು ಮೆಲುಕು ಹಾಕಿದರು. ಬ್ರಹ್ಮಾನಂದಂ ಅವರು ಮಾತಾಡುತ್ತಿದ್ದರೆ, ಅವರ ಪ್ರತಿ ಮಾತಿನಲ್ಲೂ ‘ಬಾಲಾಜಿ’ ಸ್ಮರಣೆ. ‘ಭಟ್ಟಗಾರು, ಈ ಯಶಸ್ಸು,ಈ ಕೀರ್ತಿ, ಈ ನಗು... ಇದರಲ್ಲಿ ನನ್ನದೇನೂ ಇಲ್ಲ.

ಎಲ್ಲವೂ ಆ ಬಾಲಾಜಿಯ ಮಹಿಮೆ. ನಾನು ಕೇವಲ ನಿಮಿತ್ತ ಮಾತ್ರ’ ಎಂದು ಹೆಜ್ಜೆಹೆಜ್ಜೆಗೂ ಅತ್ಯಂತ ವಿನಮ್ರರಾಗಿ ಹೇಳುತ್ತಿದ್ದರು. ಸರ್ವವನ್ನೂ ಆ ದೈವೇಚ್ಛೆಗೆ ಅರ್ಪಿಸಿದ ಒಬ್ಬ ಜ್ಞಾನಿಯ ಸ್ಥಿತಪ್ರಜ್ಞತೆ ಅವರಲ್ಲಿ ಕಾಣಿಸುತ್ತಿತ್ತು. ನಂತರ ತಾವು ಬಿಡಿಸಿದ ಪೆನ್ಸಿಲ್ ಸ್ಕೆಚ್ʼಗಳನ್ನೂ ನಮ್ಮ ಮುಂದೆ ಹರಡಿಟ್ಟರು.

ಬಿಳಿ ಕಾಗದದ ಮೇಲೆ ಪೆನ್ಸಿಲ್‌ನಿಂದ ಮೂಡಿದ್ದ ಆ ಕಲಾಕೃತಿಗಳು, ಅವುಗಳಲ್ಲಿದ್ದ ಸೂಕ್ಷ ತೆ ಮತ್ತು ಜೀವಂತಿಕೆಯನ್ನು ನೋಡಿದಾಗ ನನಗೆ ಮಾತುಗಳೇ ಹೊರಡಲಿಲ್ಲ. ಕೇವಲ ತೆರೆಯ ಮೇಲೆ ಮುಖ ಭಾವದಿಂದ ನಗಿಸುವ ಬ್ರಹ್ಮಾನಂದಂ ಅವರನ್ನು ಮಾತ್ರ ನೋಡಿದ್ದ ನನಗೆ, ಅಂದು ಅವರ ಕೈಯಲ್ಲಿದ್ದ ಪೆನ್ಸಿಲ್ ಸೃಷ್ಟಿಸಿದ ಮಾಂತ್ರಿಕತೆಯನ್ನು ಕಂಡು ಬೆರಗಾಗುವ ಸರದಿ.

ನಟನೆಯನ್ನು ಮೀರಿದ ಅವರ ಈ ಕಲಾಪ್ರೇಮ, ಆಧ್ಯಾತ್ಮಿಕ ಚಿಂತನೆ ಮತ್ತು ಅಪ್ರತಿಮ ಸೃಜನ ಶೀಲತೆಯನ್ನು ಕಂಡಾಗ, ನನಗೆ ಬ್ರಹ್ಮಾನಂದಂ ಅವರ ಒಳಗಿದ್ದ ಮತ್ತೊಂದು ‘ವಿರಾಟ ಸ್ವರೂಪ’ ಗೋಚರಿಸಿತು. ಅವರು ಕೇವಲ ಒಬ್ಬ ಹಾಸ್ಯನಟನಲ್ಲ, ಬದಲಿಗೆ ಸಾಹಿತ್ಯ, ಕಲೆ ಮತ್ತು ದೈವಭಕ್ತಿಯ ತ್ರಿವೇಣಿ ಸಂಗಮವಾದ ಒಬ್ಬ ಅಪರೂಪದ ತಪಸ್ವಿ ಎನಿಸಿತು. ನಮ್ಮ ಆ ಸುಂದರ ಭೇಟಿಯ ಮುಕ್ತಾಯದ ಕ್ಷಣ ಹತ್ತಿರವಾಗುತ್ತಿದ್ದಂತೆ, ಬ್ರಹ್ಮಾನಂದಂ ನಮಗೆ ಎಂದಿಗೂ ಮರೆಯಲಾಗದ ಒಂದು ಮಹಾ ಉಡುಗೊರೆಯೊಂದನ್ನು ನೀಡಿದರು.

ತಾವು ಸ್ವತಃ ಬಿಡಿಸಿದ ಅತ್ಯಂತ ಅದ್ಭುತವಾದ ಪೆನ್ಸಿಲ್ ರೇಖಾಕೃತಿಯೊಂದನ್ನು ಕೈಗೆತ್ತಿಕೊಂಡು, ಅದನ್ನು ಪ್ರೀತಿಯಿಂದ ನನ್ನ ಹಾಗೂ ನನ್ನ ಪತ್ನಿಯ ಕೈಗಿತ್ತರು. ಬ್ರಹ್ಮಾನಂದಂ ಸಹಿ ಇರುವ ಆ ಕಲಾಕೃತಿ ಇಂದು ನನ್ನ ಮನೆಯ ಲಿವಿಂಗ್ ರೂಮನ್ನು ಮಾತ್ರವಲ್ಲ, ನನ್ನ ಬದುಕಿನ ನೆನಪುಗಳ ಪುಟವನ್ನು ಅಲಂಕರಿಸಿದೆ. ಹೆಚ್ಚೆಂದರೆ ಹತ್ತು-ಹದಿನೈದು ನಿಮಿಷಗಳಲ್ಲಿ ಮುಗಿಯಬಹುದು ಎಂದುಕೊಂಡಿದ್ದ ಆ ಭೇಟಿ, ಸುಮಾರು ಒಂದೂವರೆ ಗಂಟೆ ದಾಟಿತ್ತು.

ಕೇವಲ ಒಬ್ಬ ಅನುವಾದಕನನ್ನಾಗಿ ಮಾತ್ರ ನೋಡದೇ, ತಮ್ಮದೇ ಕುಟುಂಬದ ಸದಸ್ಯನಂತೆ ಭಾವಿಸಿ ತಮ್ಮ ಯಶಸ್ಸಿನ ಹಿಂದಿನ ಕಣ್ಣೀರು ಮತ್ತು ಬೆವರಿನ ಕಥೆಯನ್ನು ಹಂಚಿಕೊಂಡ ಆ ಉದಾತ್ತ ಗುಣಕ್ಕೆ ಬೆಲೆ ಕಟ್ಟಲು ಸಾಧ್ಯವೇ? ಆ ಸುಂದರ-ಸೌಹಾರ್ದಯುತ ಭೇಟಿ, ಆತಿಥ್ಯ ಮತ್ತು ಬ್ರಹ್ಮಾನಂದಂ ದಂಪತಿಗಳ ಆಶೀರ್ವಾದದ ಆ ನೆನಪುಗಳು ಕಾಲ ಎಷ್ಟು ಉರುಳಿದರೂ, ನನ್ನ ಮನಸ್ಸಿನ ಆಳದಲ್ಲಿ ಶಾಶ್ವತವಾಗಿ ಉಳಿದುಕೊಳ್ಳುತ್ತವೆ. ಆ ಭೇಟಿ ನನ್ನ ಪಾಲಿಗೆ ನಿಜಕ್ಕೂ ಬ್ರಹ್ಮಾನಂದಂ!