ಯಕ್ಷಪ್ರಶ್ನೆ
ಸುರೇಂದ್ರ ಪೈ, ಭಟ್ಕಳ
ಕೇಂದ್ರವು 2026-27ನೇ ಸಾಲಿನಿಂದ ೩ನೇ ತರಗತಿಯಿಂದ ಸಿಬಿಎಸ್‌ಇ ಪಠ್ಯಕ್ರಮದಲ್ಲಿ ‘ಕೃತಕ ಬುದ್ಧಿಮತ್ತೆ’ (ಎಐ) ಕಲಿಕೆ ಯನ್ನು ಸೇರ್ಪಡೆ ಮಾಡಲು ಮುಂದಾಗಿದ್ದು, ಇದು ನಿಜಕ್ಕೂ ಮರುಪರಿಶೀಲನೆಗೆ ಒಳಪಡಬೇಕಾದ ಸಂಗತಿಯಾಗಿದೆ. ಕಾರಣ, ಇಂದಿನ ಮಕ್ಕಳಿಗೆ ಬೇಕಿರುವುದು ‘ಎಐ’ ಶಿಕ್ಷಣವಲ್ಲ, ಬದಲಾಗಿ ನೈತಿಕ ಮತ್ತು ಮೌಲ್ಯ ಶಿಕ್ಷಣ. ಇದನ್ನು ಸರಕಾರವು ಮರೆತಂತಿದೆ.
ಈಗಾಗಲೇ ‘ಜೆನ್ ಝೀ’ ಪೀಳಿಗೆಯವರು ಪ್ರಾರಂಭದಲ್ಲೇ ಎಲ್ಲವನ್ನೂ ಕಲಿತು ಯಾವ ಹಂತಕ್ಕೆ ಹೋಗಿದ್ದಾರೆ ಎಂಬುದಕ್ಕೆ ಇತ್ತೀಚಿನ ಹಲವಾರು ಘಟನೆಗಳೇ ಜ್ವಲಂತ ಸಾಕ್ಷಿಯಾಗಿವೆ. ಪಾಲಕರು ಅನ್ಯ ಕಾರಣದಿಂದಾಗಿ ಮಕ್ಕಳ ಪೋಷಣೆಯಲ್ಲಿ ತಾವು ತೋರಿದ ನಿರ್ಲಕ್ಷ್ಯದಿಂದಾಗಿ ತಂತ್ರಜ್ಞಾನಕ್ಕೆ ಒಗ್ಗಿಕೊಂಡು, ಅದನ್ನೇ ಜೀವನದ ಅವಿಭಾಜ್ಯ ಅಂಗವೆಂದು ಭಾವಿಸಿಯಾಗಿದೆ.
ಇದು ಗೊತ್ತಿದ್ದೂ ಸರಕಾರವು ಪ್ರೈಮರಿ ಹಂತದಲ್ಲೇ ಮಕ್ಕಳಿಗೆ ‘ಎಐ ಟೂಲ್’ ಸಂಬಂಧಿತ ಪಠ್ಯಕ್ರಮವನ್ನು ಅಳವಡಿಸುವ ತಯಾರಿ ನಡೆಸಿರುವುದು ಆತಂಕಕಾರಿ. ಆಧುನಿಕ ಅವಶ್ಯಕತೆಗೆ ತಕ್ಕಂತೆ ಬೋಧನಾ ವಿಷಯದಲ್ಲಿ ಬದಲಾವಣೆ ಆಗಬೇಕಿರುವುದೇನೋ ಸರಿ. ಅದಕ್ಕೂ ಮೊದಲು ಪ್ರಾಥಮಿಕ ಶಾಲಾ ಹಂತದಲ್ಲಿ ಮಕ್ಕಳಿಗೆ ಸಿಗಬೇಕಾದ ‘ತಳ ಹದಿ ಮಟ್ಟದ ಕಲಿಕೆ’ಯ ಕಡೆಗೆ ಒತ್ತುನೀಡಬೇಕಲ್ಲವೇ? ಶಿಕ್ಷಣದ ನಿಜವಾದ ಉದ್ದೇಶ ಸರಿ-ತಪ್ಪುಗಳನ್ನು ಅರಿಯುವಿಕೆ.
ಇದನ್ನೂ ಓದಿ: Surendra Pai Column: ನಾಲ್ಕಾರು ಐ.ಡಿ ಗಳು, ಹತ್ತಾರು ಕನ್‌ಫ್ಯೂಷನ್ ಗಳು !
ಇಂದು ಪಾಲಕರ ಸಭೆಯಲ್ಲಿ ಭಾಗವಹಿಸುವ ಬಹುತೇಕರು, “ಅಯ್ಯೋ, ನಮ್ಮ ಮಕ್ಕಳು ಮನೆಗೆ ಬಂದ ತಕ್ಷಣವೇ ಮೊಬೈಲ್ ಹಿಡಿದು ಕೂರುತ್ತಾರೆ" ಎಂದು ಗೋಳಿಡುತ್ತಾರೆ. ಶಾಲೆಯಲ್ಲಿ ಪ್ರಾಜೆಕ್ಟ್ ನೀಡಿದ್ದಾರೆ, ನೋಟ್ಸ್ ಕೊಟ್ಟಿದ್ದಾರೆ ಎಂದೆಲ್ಲಾ ಸುಳ್ಳು ಕಾರಣ ನೀಡಿ ಮಕ್ಕಳು ಪಾಲಕರನ್ನೇ ಯಾಮಾರಿಸುತ್ತಿರುವುದು ವಾಡಿಕೆಯಾಗಿ ಬಿಟ್ಟಿದೆ.
ಇದೆಲ್ಲವೂ ಶುರುವಾಗಿದ್ದು ಕರೋನಾ ಕಾಲ ಘಟ್ಟದಲ್ಲಿ. ಕರೋನಾ ಅಪ್ಪಳಿಸುವುದಕ್ಕೂ ಮೊದಲು ಮಕ್ಕಳು ಸಾಮಾಜಿಕ ಜಾಲತಾಣಗಳಿಂದ ಸಾಕಷ್ಟು ಅಂತರವನ್ನು ಕಾಯ್ದುಕೊಂಡಿದ್ದರು. ಶಾಲೆಗಳು ಕೂಡ ಆನ್‌ಲೈನ್ ಶಿಕ್ಷಣದಿಂದ ದೂರವಿದ್ದವು. ಆಗೆಲ್ಲಾ ಮಕ್ಕಳ ಕಲಿಕೆಯಲ್ಲಿ ನೈಜತೆ, ಕ್ರಿಯಾಶೀಲತೆ, ಅನ್ವೇಷಣಾ ಸಾಮರ್ಥ್ಯಗಳು ಕಂಡುಬರುತ್ತಿದ್ದವು.
ಆನ್‌ಲೈನ್ ಬೋಧನಾ ಕ್ರಮಕ್ಕೆ ಅನಿವಾರ್ಯವಾಗಿ ಒಡ್ಡಿ ಕೊಳ್ಳಬೇಕಾಗಿ ಬಂದಾಗ, ಅದರ ಪರಿಣಾಮವೆಂಬಂತೆ ಮಕ್ಕಳು ಸಾಮಾಜಿಕ ಜಾಲತಾಣಗಳ ಚಟಕ್ಕೆ ಬಿದ್ದರು. ಮೊಬೈಲ್‌ನಲ್ಲಿ ನೋಡಿದ್ದೇ ಸರಿ, ಓದಿದ್ದೇ ನಿಜ ಎಂಬ ಗ್ರಹಿಕೆಗೆ ಒಳಗಾದರು. ಗ್ರಂಥಾಲಯಗಳಿಗೆ ಭೇಟಿ ನೀಡುವು ದನ್ನು ಮರೆತರು, ಸುಳ್ಳನ್ನೇ ಸತ್ಯವೆಂದು ನಂಬಿ ಅದನ್ನೇ ಪರೀಕ್ಷೆಯಲ್ಲಿ ಬರೆಯಲು ಮುಂದಾದರು.
ನೋಡನೋಡುತ್ತಿದ್ದಂತೆ ‘ಆನ್‌ಲೈನ್ ಕಲಿಕೆಯೇ ಇಂದಿನ ಅವಶ್ಯಕತೆ’ ಎನ್ನುವಷ್ಟರ ಮಟ್ಟಿಗೆ ಪ್ರಚಾರ ಮಾಡಲಾಯಿತು. ಅನೇಕ ಖಾಸಗಿ ಕಂಪನಿಗಳು ಶೈಕ್ಷಣಿಕ ಆಪ್ ಗಳನ್ನು ಸೃಷ್ಟಿಸಿ ಕೋಟ್ಯಂತರ ರುಪಾಯಿಯನ್ನು ಲಪಟಾಯಿಸಿದವು. ವಾಸ್ತವವಾಗಿ, ಊಟದೆಲೆಯಲ್ಲಿ ಉಪ್ಪಿಗೆ/ಉಪ್ಪಿನಕಾಯಿಗೆ ಇರುವಷ್ಟು ಪ್ರಾಮುಖ್ಯದ ಮಟ್ಟಕ್ಕೆ ಕಲಿಕೆಯನ್ನು ಆಸಕ್ತಿದಾಯಕವಾಗಿಸುವು ದಕ್ಕೆ ಮಾತ್ರವೇ ತಂತ್ರಜ್ಞಾನ ಆಧಾರಿತ ಕಲಿಕೆ ಇರಬೇಕಿತ್ತು.
ಮಕ್ಕಳ ಮನೋ ವೈಜ್ಞಾನಿಕ ಹಿನ್ನೆಲೆಯನ್ನು/ಧೋರಣೆಯನ್ನು ಆಧರಿಸಿ ಹೇಳುವುದಾದರೆ, ೪೫ ನಿಮಿಷ ಅವಧಿಯ ಒಂದು ತರಗತಿಯಲ್ಲಿ ಮಕ್ಕಳು ಕೇವಲ 10-15 ನಿಮಿಷದವರೆಗೆ ತಮ್ಮ ಅವಧಾನವನ್ನು ವಿಷಯದತ್ತ ಕೇಂದ್ರೀಕರಿಸಲು ಸಾಧ್ಯ. ಹಾಗಾಗಿ ಕಲಿಕೆಯನ್ನು ಪುನರಾವರ್ತಿಸು ವಲ್ಲಿ ದೃಕ್-ಶ್ರವಣ ಸಾಧನಗಳು, ‘ಎಐ’ ಉಪಕರಣಗಳು ಸೀಮಿತ ವ್ಯಾಪ್ತಿಯಲ್ಲಿ ಪ್ರಭಾವ ಬೀರುತ್ತವೆ.
ಹಾಗಾಗಿ ಒಂದು ಹಂತದಲ್ಲಿ ಇವು ಉಪಯುಕ್ತ. ಆದರೆ, ಇವನ್ನು ಕಲಿಕೆಯ ಜತೆಜತೆಯಲ್ಲಿ ನಿತ್ಯದ ಪಠ್ಯಕ್ರಮದ ಭಾಗವನ್ನಾಗಿಸಬೇಕೇ ವಿನಾ, ಕಲಿಕೆಯಿಂದ ಪ್ರತ್ಯೇಕವಾಗಿಸುವುದು ತಪ್ಪು. ಪ್ರೈಮರಿ ಹಂತದಲ್ಲಿ ಮಕ್ಕಳಿಗೆ ಬೇಕಿರುವುದು ‘ಎಐ’ ಶಿಕ್ಷಣವಲ್ಲ, ಬದಲಾಗಿ ಆಧುನಿಕ ತಂತ್ರಜ್ಞಾನದ ಜಗತ್ತಿ ನಲ್ಲಿ ನಿತ್ಯವೂ ಕಳೆದು ಹೋಗುತ್ತಿರುವ ಮೌಲ್ಯ ಮತ್ತು ನೈತಿಕ ಸಂಸ್ಕಾರಯುತ ಶಿಕ್ಷಣ. ಆಧುನಿಕತೆ ಗೆ ತಕ್ಕಂತೆ ಮಕ್ಕಳಿಗೆ ತಂತ್ರಜ್ಞಾನ-ಆಧರಿತ ಶಿಕ್ಷಣವನ್ನು ನೀಡಬೇಕು, ನಿಜ.
ಹಾಗಂತ ಮಕ್ಕಳ ಮಾನಸಿಕ ಮತ್ತು ಬೌದ್ಧಿಕ ಮಟ್ಟವನ್ನು ಪರಿಗಣಿಸದೆಯೇ, ಸರಕಾರವೇ ಎಲ್ಲ ವನ್ನೂ ಅವೈಜ್ಞಾನಿಕ ನೆಲೆಗಟ್ಟಿನಲ್ಲಿ ಶಿಕ್ಷಣ ವ್ಯವಸ್ಥೆಯೊಳಗೆ ತುರುಕುವುದು ಸರಿಯಲ್ಲ. ಇಂದಿನ ಮಕ್ಕಳು ಬಹಳಷ್ಟು ವಿಷಯಗಳಲ್ಲಿ ಮುಂದಿದ್ದಾರೆ; ಆದರೆ ಅವರಲ್ಲಿ ಕಾಣೆಯಾಗುತ್ತಿರುವುದು ಮಾನವೀಯ ಮೌಲ್ಯಗಳ ಮತ್ತು ಸಾಮಾಜಿಕ ಜವಾಬ್ದಾರಿಯ ಅರಿವು.
ಇವುಗಳನ್ನು ಪಠ್ಯ ಕ್ರಮದ ಮೂಲಕವೇ ಅವರಲ್ಲಿ ಬಿತ್ತುವ ಕೆಲಸ ವಾಗಬೇಕಿದೆ. ಮೊದಲೆಲ್ಲಾ ಭಾಷಾ ವಿಷಯ ಸೇರಿದಂತೆ ವಿಜ್ಞಾನ, ಸಮಾಜ ವಿಜ್ಞಾನ ಪಠ್ಯಕ್ರಮಗಳಲ್ಲೂ ನೈತಿಕ ಮತ್ತು ಮೌಲ್ಯ ಶಿಕ್ಷಣವನ್ನು ಪರೋಕ್ಷವಾಗಿ ಅಳವಡಿಸಲಾಗುತ್ತಿತ್ತು. ‘ಗೋವಿನ ಹಾಡು’ ಎಂಬ ಪದ್ಯದ ಹೆಸರು ಕೇಳಿದಾಕ್ಷಣ ಪ್ರತಿಯೊಬ್ಬರಿಗೂ ಅದರಿಂದ ಕಲಿತ ಜೀವನದ ಮೌಲ್ಯ ನೆನಪಾಗುತ್ತದೆ.
ಆದರೆ ಈಗ ಪಠ್ಯ ಕ್ರಮದ ಆಯ್ಕೆಯ ವಿಷಯದಲ್ಲಿ ಜಾತಿ, ಧರ್ಮ, ಮತಗಳ ಕೊಳಕು ವಾಸನೆ ಹರಡುತ್ತಿದೆ. ಹೀಗಾಗಿ ಮಕ್ಕಳಿಗೆ ಬಾಲ್ಯದಲ್ಲಿ ತಿದ್ದಿ ತೀಡುವ ಕೆಲಸಕ್ಕೆ ಬೇಕಾದ ನೀತಿಕಥೆಗಳಂಥ ಮಾಧ್ಯಮ ಇಲ್ಲದಂತಾಗಿದೆ. ಇಷ್ಟೂ ಮೀರಿ ‘ಎಐ’ ಬೇಕೇ ಬೇಕಾದರೆ, ವಿಜ್ಞಾನ ವಿಷಯದ ಪಠ್ಯಕ್ರಮದಲ್ಲಿ ಅದರ ಒಂದೆರಡು ಪಾಠಗಳನ್ನು, ಮಾಡ್ಯೂಲ್ ಗಳನ್ನು ಸೇರಿಸಲಿ. ಆಗ ವಿಷಯ ಕಲಿಕೆಯೊಂದಿಗೆ ‘ಎಐ’ ಪಾಠವೂ ನಡೆಯುತ್ತದೆ.
ಮುಖ್ಯವಾಗಿ ಎಐ ತಂತ್ರಜ್ಞಾನದ ಬಳಕೆಯು, ಮಕ್ಕಳು ಬಾಲ್ಯದಲ್ಲೇ ತಮ್ಮ ಆಲೋಚನಾ ಶಕ್ತಿ ಯನ್ನು ಕಳೆದುಕೊಳ್ಳುವಂತೆ ಮಾಡುವ ವಿಧಾನವಾಗಿದೆ. ಏಕೆಂದರೆ, ಸ್ವಂತಿಕೆಯನ್ನು ಕಲಿಸ ಬೇಕಾದ ಕಡೆ ‘ಎಐ’ ಮಕ್ಕಳ ದಿಕ್ಕು ತಪ್ಪಿಸುತ್ತಿದೆ. ಬಹುತೇಕ ಖಾಸಗಿ ಶಾಲೆಗಳು ‘ಎಐ ಕೋಚಿಂಗ್ ನೀಡುತ್ತೇವೆ’ ಎಂದು ದೊಡ್ಡ ಪ್ರಮಾಣದ ಪ್ರಚಾರ ಮಾಡಿ ಲಕ್ಷಾಂತರ ರುಪಾಯಿಯನ್ನು ದೋಚು ತ್ತಿವೆ.
ನಾವು ದುಡ್ಡು ಕೊಟ್ಟು ಕಲಿಯುತ್ತಿರುವುದು ನಮ್ಮ ಜ್ಞಾನದ ವೃದ್ಧಿಗಲ್ಲ, ಬದಲಾಗಿ ಸ್ವಂತಿಕೆ ಯನ್ನು ಕಳೆದುಕೊಳ್ಳಲು ಎಂದು ಗಟ್ಟಿಯಾಗಿ ಹೇಳುವವರು ಇಲ್ಲವಾಗಿದ್ದಾರೆ. ‘ಅಭಿವೃದ್ಧಿ’ ಎಂಬ ಹೆಸರನ್ನು ಮುಂದುಮಾಡಿಕೊಂಡು ಎಲ್ಲರನ್ನೂ ದಿಕ್ಕು ತಪ್ಪಿಸುವ ಹುನ್ನಾರ ಇನ್ನಾದರೂ ನಿಲ್ಲಬೇಕಿದೆ.
ಕೇಂದ್ರ ಶಿಕ್ಷಣ ಇಲಾಖೆಯು ಇತ್ತೀಚೆಗೆ ಬಿಡುಗಡೆ ಮಾಡಿರುವ 2024-25ನೇ ಸಾಲಿನ ಖಿಈಐಖಉ+ ಆಧಾರಿತ ವರದಿಯ ಅಂಕಿ-ಅಂಶಗಳ ಪ್ರಕಾರ, ನಮ್ಮ ದೇಶದಲ್ಲಿ ೧ ಲಕ್ಷಕ್ಕೂ ಹೆಚ್ಚಿನ ಏಕೋ ಪಾಧ್ಯಾಯ ಶಾಲೆಗಳಿದ್ದು ೩೩ ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.
ಅದೆಷ್ಟೋ ಶಾಲೆಗಳಲ್ಲಿ ತರಗತಿ ನಡೆಸಲು ಕೊಠಡಿ, ಗ್ರಂಥಾಲಯ, ಆಟದ ಮೈದಾನ, ಶೌಚಾಲಯ, ವಿದ್ಯುತ್ ಸಂಪರ್ಕದಂಥ ಮೂಲಭೂತ ಸೌಲಭ್ಯಗಳೇ ಇಲ್ಲ. ಇಂಥ ಪ್ರಾಥಮಿಕ ಸಮಸ್ಯೆಗಳನ್ನು ಬಗೆಹರಿಸುವ ಯೋಜನೆಗಳನ್ನು ರೂಪಿಸುವ ಬದಲು, ಅನ್ಯದೇಶಗಳಲ್ಲಿ ‘ಎಐ’ ಶಿಕ್ಷಣ ಚಾಲ್ತಿ ಯಲ್ಲಿದೆ ಎಂದು ನಮ್ಮಲ್ಲೂ ಅಳವಡಿಸಲು ಹೊರಟರೆ, ಅದು ನ್ಯಾಯವೇ? ಯಾವೆಲ್ಲಾ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ‘ಎಐ’ ಆಧಾರಿತ ಶಿಕ್ಷಣ ಚಾಲ್ತಿಯಲ್ಲಿದೆ ಎನ್ನಲಾಗುತ್ತದೆಯೋ ಅಲ್ಲೆಲ್ಲಾ ಪ್ರಾಥಮಿಕ ಶಿಕ್ಷಣವು ಭದ್ರ ಬುನಾದಿಯನ್ನು ಹೊಂದಿದೆ.
ಬೇರುಗಳನ್ನೇ ಗಟ್ಟಿಗೊಳಿಸದೆ ‘ಎಐ’ ಶಿಕ್ಷಣ ನೀಡುತ್ತೇವೆ ಎಂದರೆ, ಅದರ ಸಮರ್ಪಕ ಅನುಷ್ಠಾನ ಖಂಡಿತವಾಗಿಯೂ ಸಾಧ್ಯವಿಲ್ಲ. ಕೇಂದ್ರ ಸರಕಾರವು ಈಗಾಗಲೇ ಜಾರಿಗೆ ತಂದಿರುವ ‘ಎನ್‌ಇಪಿ’ (ರಾಷ್ಟ್ರೀಯ ಶಿಕ್ಷಣ ನೀತಿ) ಅನುಷ್ಠಾನ ಇನ್ನೂ ಮರ್ಪಕವಾಗಿಲ್ಲದಿರುವುದು ಇದಕ್ಕೇ ಅಲ್ಲವೇ? ಈ ಪರಿಕಲ್ಪನೆಯ ಕುರಿತಂತೆ ಗಣನೀಯ ಸಂಖ್ಯೆಯಲ್ಲಿ ಕಾರ್ಯಾಗಾರಗಳನ್ನು ನಡೆಸಿದರೂ ಅದಿನ್ನೂ ಗೊಂದಲದ ಗೂಡಾಗಿಯೇ ಉಳಿದಿದೆ.
ಆದ್ದರಿಂದ, ಯಾವುದೇ ಯೋಜನೆಯ ಘೋಷಣೆಯಿಂದ ಫಲ ಸಿಗುವುದಿಲ್ಲ, ಅದಕ್ಕೆ ಪೂರಕವಾದ ಸಂಪನ್ಮೂಲ-ಸೌಕರ್ಯಗಳನ್ನು ಮೊದಲು ಹೊಂದಿಸಿಕೊಳ್ಳಬೇಕು. ನಮ್ಮಲ್ಲಿ ಸಾಕಷ್ಟು ಮಾನವ ಸಂಪನ್ಮೂಲವಿದ್ದರೂ, ಸೂಕ್ತ ತರಬೇತಿಯಿಲ್ಲದೆ ಅದು ನಷ್ಟವಾಗುತ್ತಿದೆ. ನಮ್ಮ ನೆಲ-ಜಲ, ಸಂಸ್ಕೃತಿಯ ಅಂತಃಸತ್ವವನ್ನು ಮಕ್ಕಳಲ್ಲಿ ಮೂಡಿಸಬೇಕೇ ವಿನಾ, ಆಧುನಿಕತೆಗೆ ತಕ್ಕಂತೆ ಎಲ್ಲ ಬಾಬತ್ತುಗಳಲ್ಲೂ ನಾವು ಬದಲಾಗ ಬೇಕೆಂಬ ನಿಯಮವಿಲ್ಲ.
ರಾಜ್ಯ ಸರಕಾರವು ೧ರಿಂದ ೧೦ನೇ ತರಗತಿವರೆಗೆ ಮೌಲ್ಯ ಶಿಕ್ಷಣ ನೀಡಲು ಸಜ್ಜಾಗಿದ್ದು, ಅದಕ್ಕಾಗಿ ಪ್ರತ್ಯೇಕ ಪುಸ್ತಕಗಳನ್ನು ರಚಿಸಲಾಗಿದೆ. ಇಂಥ ಕ್ರಮಗಳು ಸ್ವಾಗತಾರ್ಹ. ಆದರೆ, ಜೀವನದ ಅವಿಭಾಜ್ಯ ಅಂಗವಾಗಿರುವ ಮೌಲ್ಯ ಮತ್ತು ನೈತಿಕ ಶಿಕ್ಷಣವನ್ನು ಇತರ ವಿಷಯದ ಪಾಠ ಗಳೊಂದಿಗೆ ಅಳವಡಿಸಿಕೊಂಡು ಬೋಧಿಸುವಂತೆ ಪಠ್ಯಕ್ರಮವನ್ನು ರಚಿಸಬೇಕೇ ವಿನಾ, ಪ್ರತ್ಯೇಕ ಪಠ್ಯಕ್ರಮ ರಚಿಸುವುದು ಕೆಲವೊಮ್ಮೆ ನಿರ್ಲಕ್ಷ್ಯಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ.
ಕೆಲವು ಖಾಸಗಿ ಶಾಲೆಗಳಲ್ಲಿ ಮೌಲ್ಯಶಿಕ್ಷಣದ ಪ್ರತ್ಯೇಕ ಪಠ್ಯಪುಸ್ತಕವಿದೆ. ಆದರೆ, ಈ ವಿಷಯಗಳನ್ನು ವಾರ್ಷಿಕ ಪರೀಕ್ಷೆಯ ಅಂಕಗಳಿಗೆ ಪರಿಗಣಿಸಲಾಗುವುದಿಲ್ಲವಾದ್ದರಿಂದ, ಕಾಟಾಚಾರಕ್ಕೆ ಅವನ್ನು ಕಲಿಯುವ/ಕಲಿಸುವ ಮನಸ್ಥಿತಿ ಮಕ್ಕಳಲ್ಲಿ/ಪಾಲಕರಲ್ಲಿ ಕಂಡುಬರುತ್ತಿದೆ. ಒಂದು ವೇಳೆ, ‘ಎಐ’ ಶಿಕ್ಷಣವನ್ನು ಪ್ರಾಥಮಿಕ ಹಂತದಲ್ಲಿ ಅಳವಡಿಸಿದರೂ, ಅದು ವಿಜ್ಞಾನ ಪಠ್ಯಕ್ರಮದಲ್ಲೇ ರೆಗ್ಯುಲರ್ ಪಾಠದಂತೆ ಇರಬೇಕು; ಆಗ ಮಕ್ಕಳಿಗೆ ಹೊರೆ ಎನಿಸುವುದಿಲ್ಲ.
ಮುಖ್ಯವಾಗಿ ಖಾಸಗಿ ಶಾಲೆಯವರು ಪಾಲಕರಿಂದ ಇದಕ್ಕೆ ಪ್ರತ್ಯೇಕವಾಗಿ ಶುಲ್ಕ ವಸೂಲಿ ಮಾಡುವುದು ತಪ್ಪುತ್ತದೆ. ಶಿಕ್ಷಣದ ಸಂಪೂರ್ಣ ಖಾಸಗೀಕರಣವನ್ನೂ ತಡೆಯಬಹುದು. “ಶಿಕ್ಷಣ ವೆಂದರೆ ಕೇವಲ ಸಾಕ್ಷರತೆಯಲ್ಲ, ಬದಲಿಗೆ ದೇಹ- ಮನಸ್ಸು- ಆತ್ಮದ ಸಮಗ್ರ ಬೆಳವಣಿಗೆಯಾಗಿದೆ. ಶಿಕ್ಷಣದಲ್ಲಿ ನೈತಿಕ ಮೌಲ್ಯಗಳನ್ನು ಅಳವಡಿಸಿದರೆ, ವಿದ್ಯಾರ್ಥಿಯು ಇವೆಲ್ಲವನ್ನೂ ಪಡೆಯ ಬಹುದು. ಆಗ ಆತ ಆತ್ಮವಿಶ್ವಾಸವುಳ್ಳ, ಸ್ವಾವಲಂಬಿ ಮತ್ತು ಸಮಾಜದ ಬಗ್ಗೆ ಹೊಣೆಗಾರಿಕೆಯುಳ್ಳ ನಾಗರಿಕನಾಗುತ್ತಾನೆ" ಎಂದಿದ್ದರು ಗಾಂಧೀಜಿ.
ಆದರೆ ನಾವು ಮಾತ್ರ ಸ್ವಂತಿಕೆಯನ್ನೇ ಪರದೇಸಿಗರ ಕೈಯಲ್ಲಿ ನೀಡಿ ಕುಳಿತಿದ್ದೇವೆ. ‘ಮೆಕಾಲೆ ಶಿಕ್ಷಣ ಪದ್ಧತಿ ಸರಿಯಿಲ್ಲ’ ಎಂದು ಬೊಬ್ಬಿಡುತ್ತಾ ಬಂದಿರುವ ನಾವು ಇಂದು ಮಾಡುತ್ತಿರುವುದೇನು?
(ಲೇಖಕರು ಶಿಕ್ಷಕರು)