ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Hari Paraak Column: ಕಾಸ್ಟ್ಲೀ ಕಾಂತಾರ: ವೋ ಸೆಪʼರೇಟುʼ, ಯೇ ಸೆಪʼರೇಟುʼ

ಇಂಥವರಿಗೆ ರಾಜ್ ಕುಮಾರ್ ಅಭಿಮಾನಿಗಳು ತಕ್ಕ ಪಾಠ ಕಲಿಸಿ ಅವರಿಂದ ಕ್ಷಮೆ ಕೇಳಿಸಿರುವುದೂ ಆಗಿದೆ. ಆದರೆ ಇಂಥ ಮನೋಸ್ಥಿತಿಗೆ ಕಾರಣ ಏನು ಎನ್ನುವುದನ್ನು ನೋಡಿದರೆ ಇವು ನಿರುದ್ಯೋಗದ ಫಲ ಎನಿಸಿದರೆ ತಪ್ಪಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಹಾವಳಿ ಮಾಡುವ ಇಂಥವರಿಗೆ ಓದು, ಕೆಲಸ ಇಂಥದ್ಯಾವುದರಲ್ಲೂ ಆಸಕ್ತಿ ಇರೋದಿಲ್ಲ.

Hari Paraak Column: ಕಾಸ್ಟ್ಲೀ ಕಾಂತಾರ: ವೋ ಸೆಪʼರೇಟುʼ, ಯೇ ಸೆಪʼರೇಟುʼ

-

ಹರಿ ಪರಾಕ್‌ ಹರಿ ಪರಾಕ್‌ Sep 28, 2025 8:55 AM

ತುಂಟರಗಾಳಿ

ಸಿನಿಗನ್ನಡ

ಸಾಮಾಜಿಕ ಜಾಲತಾಣಗಳಲ್ಲಿ ಸಮಾಜದ ಸ್ವಾಸ್ಥ್ಯ ಕೆಡಿಸುವುದಕ್ಕೆ ಅಂತಾನೇ ಕೆಲವರು ಕೆಲಸ ಮಾಡ್ತಾರೆ. ಅದರಲ್ಲೂ ಅಭಿಮಾನಿಗಳ ಹೆಸರಲ್ಲಿ ದುರಭಿಮಾನ ತೋರಿಸುವವರು ಇತ್ತೀಚೆಗೆ ಹೆಚ್ಚಾಗಿದ್ದಾರೆ. ಅದರಲ್ಲೂ ಕೆಲವರು ಅಸಹ್ಯ ಸ್ಥಿತಿಗೆ ಇಳಿದಿರುವುದು ನೋಡಿದರೆ ಇವರು ವಿಕೃತ ಅಭಿಮಾನಿಗಳು ಎಂಬ ಅನಿಸಿಕೆ ಮೂಡುತ್ತದೆ. ಮೊನ್ನೆ ಸುಖಾಸುಮ್ಮನೆ ಡಾ. ರಾಜ್‌ಕುಮಾರ್ ಅವರ ಕುಟುಂಬದ ಬಗ್ಗೆ ಅಸಭ್ಯ ಪೋಗಳನ್ನು ಹಾಕಿ ವಿಕೃತಿ ಮೆರೆದಿದ್ದ ಒಬ್ಬ ಕಲಹಪ್ರಿಯ ಠಾಣೆಯ ಮೆಟ್ಟಿಲು ಹತ್ತಿ ಕ್ಷಮೆ ಕೇಳಿದ್ದಾನೆ.

ಇನ್ನು ಯಾರಿಗೂ ಹೆಸರೇ ಸರಿಯಾಗಿ ಗೊತ್ತಿಲ್ಲದ ರವಿ ಚೇತನ್ ಅನ್ನೋ ಚಿಲ್ಟು ನಟನೊಬ್ಬ ‘ಅಪ್ಪುವಿಗೆ ಕರ್ನಾಟಕ ರತ್ನ ಪ್ರಶಸ್ತಿ ಕೊಟ್ಟಿದ್ದು ತಪ್ಪು’ ಅನ್ನೋ ಥರ ಮಾತಾಡಿ ಅಭಿಮಾನಿಗಳು ಗರಂ ಆದ ಮೇಲೆ ‘ಸಾರಿ’ ಅಂತ ತಡವರಿಸಿದ್ದಾನೆ.

ಇಂಥವರಿಗೆ ರಾಜ್ ಕುಮಾರ್ ಅಭಿಮಾನಿಗಳು ತಕ್ಕ ಪಾಠ ಕಲಿಸಿ ಅವರಿಂದ ಕ್ಷಮೆ ಕೇಳಿಸಿರುವುದೂ ಆಗಿದೆ. ಆದರೆ ಇಂಥ ಮನೋಸ್ಥಿತಿಗೆ ಕಾರಣ ಏನು ಎನ್ನುವುದನ್ನು ನೋಡಿದರೆ ಇವು ನಿರುದ್ಯೋಗದ ಫಲ ಎನಿಸಿದರೆ ತಪ್ಪಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಹಾವಳಿ ಮಾಡುವ ಇಂಥವರಿಗೆ ಓದು, ಕೆಲಸ ಇಂಥದ್ಯಾವುದರಲ್ಲೂ ಆಸಕ್ತಿ ಇರೋದಿಲ್ಲ.

ಯಾವ ದೊಡ್ಡ ಟ್ಯಾಲೆಂಟೂ ಇರೋದಿಲ್ಲ. ಹಾಗಾಗಿ ಫೇಸ್‌ಬುಕ್‌ನಲ್ಲಿ ಅಟೆನ್ಷನ್ ಸೀಕರ್ಸ್ ಆಗಿ ಇಂಥ ಕೆಲಸಗಳಿಗೆ ಕೈ ಹಾಕುತ್ತಾರೆ. ಆದರೆ ಸಿನಿಮಾರಂಗದಲ್ಲಿ ಇದ್ದುಕೊಂಡೇ ಅಲ್ಲಿ ಇಲ್ಲಿ ತಂದಿಟ್ಟು ನೋಡುವವರದ್ದು ಇನ್ನೊಂದು ಕೆಟಗರಿ. ಬೇಸರದ ಸಂಗತಿ ಅಂದ್ರೆ ಇದಕ್ಕೆ ಹೆಸರು ಬಳಕೆ ಆಗ್ತಿರೋದು ದರ್ಶನ್, ವಿಷ್ಣುವರ್ಧನ್ ಅಭಿಮಾನಿಗಳು ಅನ್ನೋ ಟ್ಯಾಗ್.

ಇದನ್ನೂ ಓದಿ: Hari Paraak Column: ಕೊಲೆ ಒಳ್ಳೆಯದು ?!

ಇಂಥವರು ತಮ್ಮ ನಟನ ಮೇಲಿನ ಅಭಿಮಾನದ ಹೆಸರಲ್ಲಿ ಡಾ.ರಾಜ್‌ಕುಮಾರ್ ಅಷ್ಟೇ ಅಲ್ಲ, ವಿಷ್ಣುವರ್ಧನ್ ಅವರನ್ನೂ ಬಿಡಲ್ಲ. ಸುದೀಪ್ ಅನ್ನೂ ಬಿಡಲ್ಲ. ಇಂಥ ಕೆಲಸದಲ್ಲಿ ಅದೇನೋ ವಿಕೃತ ಆನಂದ ಇವರಿಗೆ. ಇಂಥವರ ಅಕೌಂಟ್‌ಗಳು ರಿಪೋರ್ಟ್ ಆಗಿ ಲಾಕ್ ಆದರೆ ಇನ್ನೊಂದು ಅಕೌಂಟ್ ಓಪನ್ ಮಾಡುತ್ತಾರೆ. ‘ಫೇಸ್-ಟು-ಫೇಸ್’ ಯಾರೂ ಸಿಗಲ್ಲ ಎಂಬ ನಂಬಿಕೆಯಲ್ಲಿ ಅಶ್ಲೀಲವಾಗಿ ಮಾತನಾಡುತ್ತಾರೆ.

ಒಂದು ವೇಳೆ ಸಿಕ್ಕಿಬಿದ್ದು ಗೂಸಾ ತಿಂದರೆ ಕ್ಷಮೆ ಕೇಳಿ ಮತ್ತೆ ಇನ್ನೊಂದು ಹೆಸರಲ್ಲಿ ಅದೇ ಕೆಲಸಕ್ಕೆ ಇಳಿಯುತ್ತಾರೆ. ಯಾರೇ ಆಗಲಿ, ಇಂಥವರ ಬಗ್ಗೆ ಅದೆಷ್ಟು ಅಂತ ತಲೆಕೆಡಿಸಿಕೊಳ್ಳೋಕಾಗುತ್ತೆ, ಒಂದೆರಡು ಸಲ ಇವರಿಗೆ ಬುದ್ಧಿ ಕಲಿಸುವ ಕೆಲಸ ಮಾಡಬಹುದೇ ಹೊರತು, ಇವರ ರೀತಿ ಮಾಡೋ ಕೆಲಸ ಬಿಟ್ಟು ಅದೇ ಕೆಲಸ ಮಾಡೋಕಾಗಲ್ಲ ಅನ್ನೋದೇ ಇಂಥವರ ಭಂಡ ಧೈರ್ಯ.

ಲೂಸ್‌ ಟಾಕ್-‌ ಕಾಂತಾರ ನಿರ್ಮಾಪಕರು

ಏನ್ ಸರ್, ಕನ್ನಡದವರಾಗಿ ಕನ್ನಡ ಸಿನಿಮಾ ರೇಟು ಕಮ್ಮಿ ಮಾಡಿದ್ರೆ ಕೋರ್ಟಿಂದ ಸ್ಟೇ ತಂದ್ ಬಿಟ್ರಲ್ಲ?

- ಮತ್ತೆ? ನಾವು ನಮ್ಮ ‘ಕಾಂತಾರ’ ಸಿನಿಮಾಗೆ ಆರಂಭದ ಮೂರ್ನಾಲ್ಕು ವಾರದ ಹೈಪ್ ಕ್ರಿಯೇಟ್ ಮಾಡಿ ದುಡ್ಡು ಮಾಡ್ಬೇಕು. ಇಂದ್ರೆ ಆಮೇಲೆ ಜನ ಥಿಯೇಟ್ರಲ್ಲಿ ಕಾಣ್ತಾರಾ?

ಆದ್ರೂ ನಿಮ್ಮ ಮೊದಲ ‘ಕಾಂತಾರ’ ಸಿನಿಮಾ ನೋಡಿ ಹಿಟ್ ಮಾಡಿದ ಜನರಿಗೆ ಟಿಕೆಟ್ ರೇಟ್ ಜಾಸ್ತಿ ಮಾಡಿ ಹಿಂಗಾ ಕೃತಜ್ಞತೆ ತೋರಿಸೋದು?

- ವೋ ಸೆಪ‘ರೇಟು’, ಯೇ ಸೆಪ‘ರೇಟು’

ಯಾರೋ ಕಿಡಿಗೇಡಿಗಳು ‘ಕಾಂತಾರ ಸಿನಿಮಾಗೆ ಮದ್ಯಪಾನ ಮಾಡಿಕೊಂಡು ಬರಂಗಿಲ್ಲ’ ಅಂತ ಪೋಸ್ಟರ್ ಮಾಡಿದ್ರಲ್ಲ?

- ಸಿನಿಮಾಗೆ ಬಂದು ತಲೆನೋವು ಅಂತ ಆಮೇಲೆ ಬಾರಿಗೆ ಹೋಗಿ ಮದ್ಯಪಾನ ಮಾಡೋಕಿಂತ, ಕುಡ್ಕೊಂಡೇ ಬರೋದು ವಾಸಿ ಬಿಡಿ.

ಅಂದ ಹಾಗೆ, ನಿಮ್ಮ ಮುಂದಿನ ಸಿನಿಮಾ?

- ರಿಷಭ್ ಶೆಟ್ಟಿಗೆ ‘ಗರುಡ ಗಮನ ರಿಷಭ ವಾಹನ ಪಾರ್ಟ್-2’ ಮಾಡೋಣ ಅಂತಿದ್ದೀವಿ

ಹೋಗ್ಲಿ, ಕಾಂತಾರ ಫುಲ್ ಬುಕ್ಕಿಂಗ್ ಆಗಿ ಈಗಾಗ್ಲೇ ಕೋಟ್ಯಂತರ ದುಡ್ಡು ಮಾಡಿದ್ದೀರಂತೆ. ಏನನ್ನಿಸ್ತಾ ಇದೆ?

- ಐ ಲೈಕ್ ಇಟ್ ಕಾಂತಾ-ರ.

(ಕಾಲ್ಪನಿಕ ಸಂದರ್ಶನ)

ನೆಟ್‌ ಪಿಕ್ಸ್

ಖೇಮು ಒಂದು ದೊಡ್ಡ ಮಿಶನ್ ಮೇಲೆ ಹಡಗಿನಲ್ಲಿ ಹೊರಟಿದ್ದ.‌ ಅವನು ಒಂದು ದೊಡ್ಡ ಟೀಮ್‌ಗೆ ನಾಯಕನಾಗಿದ್ದ. ಆ ಹಡಗಿನಲ್ಲಿ ಒಂದು ಬೆಲೆಬಾಳುವ ವಸ್ತುವನ್ನು ಸುರಕ್ಷಿತವಾಗಿ ಸಾಗಿಸಬೇಕಿತ್ತು. ಆದರೆ ಅವರು ಹೋಗುತ್ತಿದ್ದ ಸಮುದ್ರದಲ್ಲಿ ದರೋಡೆಕೋರರ ಕಾಟ ತುಂಬಾ ಇತ್ತು. ಖೇಮುಗೆ ಈ ಮೊದಲು ದರೋಡೆಕೋರರನ್ನು ಎದುರಿಸಿ ಅನುಭವ ಇರಲಿಲ್ಲ. ಆದರೂ ಆ ವಸ್ತುವನ್ನು ಸುರಕ್ಷಿತವಾಗಿ ಕೊಂಡೊಯ್ಯುವ ಜವಾಬ್ದಾರಿಯನ್ನು ಖೇಮುಗೆ ವಹಿಸಲಾಗಿತ್ತು.

ಸರಿ, ಆಗಿದ್ದಾಗ್ಲಿ ಅಂತ ಧೈರ್ಯ ಮಾಡಿ ಖೇಮು ತನ್ನ ತಂಡದೊಂದಿಗೆ ಹೊರಟಿದ್ದ. ಸ್ವಲ್ಪ ಹೊತ್ತಾದ ಮೇಲೆ ದುರ್ಬೀನು ಹಾಕಿಕೊಂಡು ದೂರದಲ್ಲಿ ದರೋಡೆಕೋರರು ಬರ್ತಾ ಇದ್ದಾರಾ ಅಂತ ಗಮನಿಸುತ್ತಿದ್ದ ಸಹಾಯಕ ಬಂದು ಖೇಮುಗೆ ಕೇಳಿದ, “ಸರ್, ದೂರದಲ್ಲಿ ಒಂದು ದರೋಡೆಕೋರರ ಟೀಮ್ ಗನ್ ತಗೊಂಡು ಬರ್ತಾ ಇದೆ, ಏನ್ ಮಾಡೋಣ?".

ಖೇಮುಗೆ ಸಿಕ್ಕಾಪಟ್ಟೆ ಭಯ ಶುರುವಾಯಿತು. ಆದ್ರೆ ಅದನ್ನ ತೋರಿಸಿಕೊಳ್ಳದೆ, “ನಮ್ಮ ಟೀಮ್‌ಗೆ ರೆಡಿ ಆಗಿರೋಕೆ ಹೇಳು, ಜತೆಗೆ ಒಳಗೆ ಹೋಗಿ ನನ್ನ ರೆಡ್ ಕಲರ್ ಶರ್ಟ್ ತಗೊಂಡ್ ಬಾ" ಅಂದ. ಖೇಮುವಿನ ಭಯವನ್ನು ನೋಡಿ ಒಳಗೊಳಗೇ ನಗುತ್ತಿದ್ದ ಸಹಾಯಕ, “ರೆಡ್ ಕಲರ್ ಶರ್ಟ್ ಯಾಕೆ ಸರ್?" ಅಂತ ಕೇಳಿದ್ದಕ್ಕೆ, “ನನಗೇನಾದರೂ ಗುಂಡು ಬಿದ್ದು ರಕ್ತ ಬಂದ್ರೆ ಅದು ನಮ್ಮವರಿಗೆ ಕಾಣ ಬಾರದು. ಅವರು ನನ್ನನ್ನು ಆ ಸ್ಥಿತಿಯಲ್ಲಿ ನೋಡಿದ್ರೆ ನಮ್ಮ ನಾಯಕನಿಗೆ ಹಿಂಗಾಯ್ತಲ್ಲ ಅಂತ ಹೆದರಿಕೊಂಡು ಬಿಡ್ತಾರೆ, ಅದಕ್ಕೆ" ಅಂದ ಖೇಮು.

ಸ್ವಲ್ಪ ಹೊತ್ತಿನಲ್ಲಿ ಆ ದರೋಡೆಕೋರರ ಟೀಮ್ ಬಂತು. ಖೇಮು ಕಡೆಯವರು ಅವರನ್ನು ಹೊಡೆದು ಉರುಳಿಸಿದರು. ಮತ್ತೆ, ಸ್ವಲ್ಪ ಹೊತ್ತಾದ ಮೇಲೆ ದುರ್ಬೀನು ಹಾಕಿಕೊಂಡು ನೋಡು ತ್ತಿದ್ದ ಸಹಾಯಕ ಖೇಮು ಬಳಿ ಬಂದು ಕೇಳಿದ- “ಸರ್, ಈ ಸಲ 5 ಹಡಗುಗಳಲ್ಲಿ ದರೋಡೆಕೋರರು ಬರ್ತಾ ಇದ್ದಾರೆ. ಯಾವುದಕ್ಕೂ ರೆಡ್ ಕಲರ್ ಶರ್ಟ್ ಜತೆಗೆ, ನಿಮ್ಮ ಹಳದಿ ಕಲರ್ ಪ್ಯಾಂಟೂ ತರ್ಲಾ?"

ಲೈನ್‌ ಮ್ಯಾನ್

ಗಾಡಿ ಓಡಿಸುವಾಗ ಅತಿ‌ ಎಚ್ಚರಿಕೆಯಿಂದ ಇರೋರು ಏನು ಮಾಡ್ತಾರೆ?

- ರಸ್ತೆಯಲ್ಲಿ ಹಂಪ್ ಅಡ್ಡ ಬಂದ್ರೂ ಹಾರ್ನ್ ಮಾಡ್ತಾರೆ

ಸಿಕ್ ಸಿಕ್ಕಿದ್ದನ್ನೆ ಅಡ ಇಡೋಳು

- ಅಡವಿ

ಎಲ್‌ಐಸಿಯನ್ನೂ ಮಾರಲು ಮುಂದಾದ ಸರಕಾರ

- ಬಿಜೆಪಿ ‘ಮಾರಿ’ ಕಣ್ಣು ಎಲ್ ಐಸಿ ಮ್ಯಾಲೆ

ಗ್ಲೋಬಲ್ ವಾರ್ಮಿಂಗ್ ಹೆಚ್ಚಾದ್ರೆ?

- ಅದು ಪ್ರಕೃತಿ ಕೊಡ್ತಾ ಇರೋ ಗ್ಲೋಬಲ್ ವಾರ್ನಿಂಗ್

ಎಂಥಾ ಬರಗಾಲದಲ್ಲೂ, ಲೇಖಕರ ಬರವಣಿಗೆಯದ್ರೂ ಹೆಚ್ಚು ಮಾರಾಟ ಆಗೋ ವಸ್ತುಗಳು

- ಕಡ್ಲೆಪುರಿ, ಬಿಸಿಬಿಸಿ ಮಸಾಲೆದೋಸೆ

ಒಳ್ಳೆ ಡ್ರೈವಿಂಗ್ ಸ್ಕಿಲ್ ಇರೋ ಹುಡುಗಿ

- ಚಾಲಾಕಿ

ಸ್ವಿಮ್ಮಿಂಗ್ ಪೂಲ್‌ನಲ್ಲಿ ಈಜಾಡೋಕೆ ಇರಬೇಕಾದ ಅನುಮತಿ

- ‘ಡೈವಿಂಗ್’ ಲೈಸೆನ್ಸ್‌

ಕಳೆದುಕೊಂಡ ಭೂಮಿ ಮತ್ತೆ ಸಿಕ್ಕರೆ ಅದು

- ‘ಮರು’ಭೂಮಿ

ಬರೀ ಯಾಮಾರಿಸೋರೇ ಇರುವ ಊರು

- ‘ಮರುಳು’ಗಾಡು

ದೇವರ ಹೆಸರಲ್ಲಿ ಮಾಡೋ ಮೋಸ

- ಮರುಳು ‘ಗಾಡು’