ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr Vijay Darda Column: ಭಾರತಕ್ಕೆ ಮಸಿ ಬಳಿದು ಅಮೆರಿಕಕ್ಕೆ ಏನಾಗಬೇಕಿದೆ ?

ಅಮೆರಿಕದ ಲೇಟೆಸ್ಟ್ ಚಿಂತೆ ಭಾರತದ ಗುಪ್ತಚರ ತನಿಖಾ ಏಜೆನ್ಸಿಯಾದ ರೀಸರ್ಚ್ ಅಂಡ್ ಅನಾಲಿಸಿಸ್ ವಿಂಗ್ (ರಾ) ಕುರಿತಾಗಿದೆ. ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ವಿಷಯದ ಬಗ್ಗೆ ಗಮನ ಹರಿಸಲು ಅಮೆರಿಕದಲ್ಲೊಂದು ಫೆಡರಲ್ ಆಯೋಗವಿದೆ. ಅದು 2025ನೇ ಸಾಲಿನ ‘ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ವರದಿ’ ಬಿಡುಗಡೆ ಮಾಡಿದೆ.

ಭಾರತಕ್ಕೆ ಮಸಿ ಬಳಿದು ಅಮೆರಿಕಕ್ಕೆ ಏನಾಗಬೇಕಿದೆ ?

ಅಂಕಣಕಾರ ಡಾ.ವಿಜಯ್‌ ದರಡಾ

Profile Ashok Nayak Apr 3, 2025 6:37 AM

ಅಮೆರಿಕ ಬಹಳ ಶ್ರೀಮಂತ ಮತ್ತು ಶಕ್ತಿಶಾಲಿ ದೇಶ. ನನಗೆ ಯಾವಾಗಲೂ ಅನ್ನಿಸುವುದೇನೆಂದರೆ, ತನ್ನ ದೊಡ್ಡಣ್ಣನ ಸ್ಥಾನದಿಂದ ಆ ದೇಶ ಜಗತ್ತಿನ ಎಲ್ಲಾ ಸಮಸ್ಯೆಗಳನ್ನೂ ತಲೆಯ ಮೇಲೆ ಹೊತ್ತು ಕೊಂಡು ಓಡಾಡುತ್ತಿ ರುತ್ತದೆ. ಅದೇ ವೇಳೆ, ನಾವು ಕೂಡ ಅನಗತ್ಯವಾಗಿ ಒಂದಷ್ಟು ಸಮಸ್ಯೆಗಳ ಬಗ್ಗೆ ತಲೆಕೆಡಿಸಿಕೊಳ್ಳುತ್ತಿರುತ್ತೇವೆ. ಆದ್ದರಿಂದಲೇ ಹಿರಿಯರು ಒಂದು ಮಾತು ಹೇಳಿ ದ್ದಾರೆ: ‘ಆತಂಕ ನಮ್ಮ ಬುದ್ಧಿಯನ್ನು ಕೊಲ್ಲುತ್ತದೆ, ದುಃಖ ದೇಹವನ್ನು ಕೊಲ್ಲುತ್ತದೆ’. ಆದರೆ ಅಮೆರಿಕ ಯಾವತ್ತಾ ದರೂ ದುರ್ಬಲವಾಗಿದ್ದನ್ನು ನೀವು ಕಂಡಿದ್ದೀರಾ? ಅದು ಯುದ್ಧದಲ್ಲಿ ತೊಡಗಿರುವಾಗಲೂ ಆ ದೇಶದ ಆರ್ಥಿಕ ಸಂಪತ್ತು ಬೆಳೆಯುತ್ತಲೇ ಇರುತ್ತದೆ. ಏಕೆಂದರೆ ಜಗತ್ತಿನ ಕುರಿತಾಗಿ ಅಮೆರಿಕದ ಆತಂಕ ಅಥವಾ ಕಳಕಳಿಗಳೆಲ್ಲ ಉದ್ದೇಶಪೂರ್ವಕವಾಗಿರುತ್ತವೆ. ಹೀಗಾಗಿ ಒಂದು ಸಮಸ್ಯೆ ಮುಗಿಯುತ್ತಲೇ ಇನ್ನೊಂದನ್ನು ಅದು ಕೈಗೆತ್ತಿಕೊಳ್ಳುತ್ತದೆ.

ಅಮೆರಿಕದ ಲೇಟೆಸ್ಟ್ ಚಿಂತೆ ಭಾರತದ ಗುಪ್ತಚರ ತನಿಖಾ ಏಜೆನ್ಸಿಯಾದ ರೀಸರ್ಚ್ ಅಂಡ್ ಅನಾಲಿಸಿಸ್ ವಿಂಗ್ (ರಾ) ಕುರಿತಾಗಿದೆ. ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ವಿಷಯದ ಬಗ್ಗೆ ಗಮನ ಹರಿಸಲು ಅಮೆರಿಕದಲ್ಲೊಂದು ಫೆಡರಲ್ ಆಯೋಗವಿದೆ. ಅದು 2025ನೇ ಸಾಲಿನ ‘ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ವರದಿ’ ಬಿಡುಗಡೆ ಮಾಡಿದೆ.

ಇದನ್ನೂ ಓದಿ: Dr Vijay Darda Column: ಬೆಂಕಿಗೆ ಹಿಂದು ಮುಸ್ಲಿಂ ವ್ಯತ್ಯಾಸ ತಿಳಿಯದು !

ಅದರಲ್ಲಿ, ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಮಟ್ಟ ನಿರಂತರವಾಗಿ ಕುಸಿಯುತ್ತಿದೆ ಎಂದು ಅಭಿಪ್ರಾಯ ಪಟ್ಟಿದೆ. ವಿದೇಶಗಳಲ್ಲಿ ಭಾರತೀಯ ಮೂಲದ ಧಾರ್ಮಿಕ ಅಲ್ಪಸಂಖ್ಯಾತರನ್ನು ಟಾರ್ಗೆಟ್ ಮಾಡಲಾಗುತ್ತಿದೆ, ಅದಕ್ಕೆ ಭಾರತದ ರಾ ಹೊಣೆಯಾಗಿದೆ, ಹೀಗಾಗಿ ರಾ ಏಜೆನ್ಸಿಯ ಮೇಲೆ ನಿರ್ಬಂಧ ಹೇರಬೇಕು ಎಂದು ವರದಿಯಲ್ಲಿ ಶಿಫಾರಸು ಮಾಡಿದೆ.

ಅದೇ ವರದಿಯಲ್ಲಿ, ಖಲಿಸ್ತಾನಿ ಪ್ರತ್ಯೇಕತಾವಾದಿ ಹೋರಾಟಗಾರ ಗುರ್‌ಪತ್ವಂತ್ ಸಿಂಗ್ ಪನ್ನು ಮೇಲೆ ನಡೆದಿತ್ತು ಎನ್ನಲಾದ ಹತ್ಯೆ ಯತ್ನದ ಪ್ರಸ್ತಾಪವೂ ಇದೆ. ಪನ್ನು ಭಾರತೀಯ ಮೂಲದ ಖಲಿಸ್ತಾನಿ ಪ್ರತ್ಯೇಕತಾವಾದಿ ಹೋರಾಟಗಾರನಾಗಿದ್ದು, ಅಮೆರಿಕದ ಪೌರತ್ವ ಹೊಂದಿದ್ದಾನೆ. ಅವನ ಮೇಲೆ ಅಮೆರಿಕದಲ್ಲಿ ಹತ್ಯೆಯ ಯತ್ನ ನಡೆದಿತ್ತು ಎಂದು ಈ ಹಿಂದೆ ದೊಡ್ಡ ಸುದ್ದಿಯಾಗಿತ್ತು. ಆ ಹತ್ಯೆ ಯತ್ನವನ್ನು ಭಾರತವೇ ನಡೆಸಿತ್ತು ಎಂದು ಕೆನಡಾ ಆರೋಪಿಸಿತ್ತು.

ಅದನ್ನು ಸಾಕಷ್ಟು ಬಾರಿ ಭಾರತ ನಿರಾಕರಿಸಿದೆ. ಈಗ ಮತ್ತೆ ಅಮೆರಿಕ ಅದನ್ನು ಕೆದಕುವ ಯತ್ನ ಮಾಡಿದೆ. ಅಮೆರಿಕಕ್ಕೆ ಈ ವಿಷಯದಲ್ಲಿ ಸಮಜಾಯಿಷಿ ನೀಡುವವರು ಯಾರು? ಅದು ಹೋಗಲಿ, ಸ್ವತಃ ಅಮೆರಿಕವೇ ಕಪ್ಪು ವರ್ಣೀಯರು ಮತ್ತು ಬಿಳಿ ವರ್ಣೀಯರ ನಡುವೆ ಒಡೆದು ಹೋಗಿದೆ ಎಂದು ಆ ದೇಶಕ್ಕೆ ಹೇಳುವವರು ಯಾರು? ಅಮೆರಿಕದ ಕ್ಯಾಥೋಲಿಕ್ಕರು ಮತ್ತು ಪ್ರೊಟೆಸ್ಟೆಂಟ್‌ಗಳ ನಡುವೆ ಆಳವಾದ ಕಂದಕವಿದೆ ಎಂಬುದನ್ನು ಶ್ವೇತಭವನಕ್ಕೆ ತಿಳಿಸಿಕೊಡುವವರು ಯಾರು? ಅಮೆರಿಕಕ್ಕೆ ತನ್ನ ಮೈಮೇಲಿನ ಗಾಯ ಕಾಣುವುದಿಲ್ಲ. ಆದರೂ ಬೇರೆಯವರ ವ್ಯವಹಾರದಲ್ಲಿ ಮೂಗು ತೂರಿಸುವ ಪ್ರವೃತ್ತಿಯನ್ನು ಮಾತ್ರ ಬಿಡುವುದಿಲ್ಲ!

ಅಮೆರಿಕದ ಇಂತಹ ಕಿತಾಪತಿಗಳು ಕಣ್ಣಿಗೆ ಬಿದ್ದಾಗಲೆಲ್ಲ ನನಗೆ ಪದ್ಮಭೂಷಣ ರಘುಪತಿ ಸಹಾಯ್ ಅಲಿಯಾಸ್ ಫಿರಾಕ್ ಗೋರಖಪುರಿಯವರ ‘ಡಾಲರ್ ದೇಶ್’ ಎಂಬ ಕವಿತೆ ನೆನಪಾಗುತ್ತದೆ: ಇಡೀ ಜಗತ್ತನ್ನೇ ಹಾಳು ಮಾಡು, ಜಗತ್ತಿನ ನಿರ್ಮಾತಾ ನಾನೇ ಎಂದು ಹೇಳು. ಇಡೀ ಜಗತ್ತನ್ನೇ ವಿರೋಧ ಮಾಡು, ಜಗತ್ತಿನ ನಿಜವಾದ ಸ್ನೇಹಿತ ನಾನೇ ಎಂದು ಹೇಳು!

ಇಡೀ ಜಗತ್ತು ಬೇಕಾದರೆ ಉಪವಾಸ ಬೀಳಲಿ, ನಾನೇ ಜಗತ್ತಿಗೆ ಅನ್ನ ನೀಡುತ್ತಿದ್ದೇನೆಂದು ಹೇಳು. ಜಗತ್ತಿಗೆಲ್ಲ ಒಂದಷ್ಟು ಹಣ ತೆಗೆದು ಚೆನ್ನಾಗಿ ಹಂಚು, ಬಳಿಕ ಎಲ್ಲೆಡೆಯಿಂದ ಹಣ ಬಾಚಿಕೊಳ್ಳಲು ಹೊಂಚು! ಜಗತ್ತಿನ ವ್ಯಾಪಾರವನ್ನೆಲ್ಲ ಹಾಳುಗೆಡವಿ, ಸ್ವತಃ ವ್ಯಾಪಾರಿಯಾಗಿ ಕುಳಿತುಬಿಡು. ಒಳ್ಳೆಯ, ಕೆಟ್ಟ ಮುಹೂರ್ತ ನೋಡಿಕೊಂಡು, ಜಗತ್ತಿನ ಪೂಜಾರಿಯಾಗಿ ಪವಡಿಸಿಬಿಡು!

ಫಿರಾಕ್ ಸಾಬ್ ಬಳಸಿದಷ್ಟು ಹರಿತವಾದ ಪದಗಳನ್ನು ನಾನು ಬಳಸಲು ಹೋಗುವುದಿಲ್ಲ. ಆದರೆ, ಭಾರತದ ಹೆಸರಿಗೆ ಮಸಿ ಬಳಿಯುವ ಈ ಎಲ್ಲಾ ಪ್ರಯತ್ನಗಳಲ್ಲೂ ಒಂದು ಉದ್ದೇಶವಂತೂ ಸ್ಪಷ್ಟ ವಾಗಿ ಕಾಣಿಸುತ್ತದೆ: ಭಾರತೀಯ ಸಮಾಜದಲ್ಲಿ ಒಡಕು ಉಂಟುಮಾಡಿ, ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಆರ್ಥಿಕತೆ ಇನ್ನಷ್ಟು ಬೆಳೆಯುವುದನ್ನು ತಪ್ಪಿಸುವುದು. ಇಲ್ಲದಿದ್ದರೆ ನಮ್ಮ ದೇಶದ ಪ್ರಸಿದ್ಧ ಉದ್ಯಮಿಗಳಾದ ಅದಾನಿ ಮತ್ತು ಅಂಬಾನಿಯನ್ನು ಗುರಿಯಾಗಿಸಿ ನಿರಂತರವಾಗಿ ವಿವಾದ ಗಳನ್ನು ಹುಟ್ಟುಹಾಕುವುದೇಕೆ? ಒಂದು ಕಾಲದಲ್ಲಿ ಭಾರತವು ಜಗತ್ತಿನ ಜಿಡಿಪಿಗೆ ಶೇ.25ರಷ್ಟು ಕೊಡುಗೆ ನೀಡುತ್ತಿತ್ತು.

ನಂತರ ಬ್ರಿಟಿಷರು ಬಂದು ನಮ್ಮನ್ನು ಚೆನ್ನಾಗಿ ಲೂಟಿ ಮಾಡಿದರು. ಅವರು ಬಿಟ್ಟುಹೋದಾಗ ಭಾರತ ಬಡವಾಗಿತ್ತು. ಇಲ್ಲಿನ ಸಂಪನ್ಮೂಲಗಳು ಬರಿದಾಗಿದ್ದವು. ಆದರೆ ನಾವು ಕೈಕಟ್ಟಿ ಕೂರಲಿಲ್ಲ. ದೇಶವನ್ನು ಮತ್ತೆ ಗಟ್ಟಿಯಾಗಿ ಕಟ್ಟಿದೆವು. ಬದ್ಧತೆ ಮತ್ತು ತಾಳ್ಮೆಯಿಂದ ಭಾರತದ ಮರು ನಿರ್ಮಾಣ ದಲ್ಲಿ ತೊಡಗಿಕೊಂಡೆವು. ಅದರ ಪರಿಣಾಮ ಇಂದು ಭಾರತವು ಜಗತ್ತಿನ ಐದನೇ ಅತ್ಯಂತ ಪ್ರಬಲ ವಾದ ಆರ್ಥಿಕತೆಯಾಗಿ ಹೊರಹೊಮ್ಮಿದೆ.

ಮುಂಬರುವ ವರ್ಷಗಳಲ್ಲಿ ನಮ್ಮದು ಜಗತ್ತಿನಲ್ಲೇ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ. ಬಹುಶಃ ಇದನ್ನೇ ಅಮೆರಿಕ ಅಥವಾ ಇತರ ದೇಶಗಳಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಈ ಹಿಂದೆ ಯೂ ವಿದೇಶಿ ಶಕ್ತಿಗಳು ನಮ್ಮ ದೇಶದಲ್ಲಿ ಸಾಕಷ್ಟು ಮತೀಯ ಹಿಂಸಾಚಾರಗಳನ್ನು ಪ್ರಚೋದಿಸಿ ದ್ದವು. ಅದನ್ನೆಲ್ಲ ಹೇಗೆ ಮರೆಯೋಣ? ಅಂತಹ ಪ್ರಯತ್ನಗಳು ಈಗಲೂ ನಡೆಯುತ್ತಿವೆ. ಕಾಶ್ಮೀರ ದಲ್ಲಿ ಮತ್ತು ಜಗತ್ತಿನ ನಾನಾ ಕಡೆಗಳಲ್ಲಿ ಭಯೋತ್ಪಾದನೆ ನಡೆಸುತ್ತಿರುವ ಪಾಕಿಸ್ತಾನಕ್ಕೆ ಇಷ್ಟು ವರ್ಷಗಳ ಕಾಲ ಶ್ವೇತಭವನದಿಂದ ಆರ್ಥಿಕ ನೆರವು ನೀಡಿದ್ದೇಕೆ ಎಂದು ಅಮೆರಿಕ ಆತ್ಮಾವಲೋಕನ ಮಾಡಿಕೊಳ್ಳಬೇಕು.

ಭಾರತದ ಹುಡುಗಿ ರಂಜನಿ ಶ್ರೀನಿವಾಸನ್ ಪ್ಯಾಲೆಸ್ತೀನ್ ದೇಶವನ್ನು ಬೆಂಬಲಿಸಿದಳು ಎಂಬ ಕಾರಣಕ್ಕೆ ಅಮೆರಿಕದ ಸರ್ಕಾರ ಅವಳ ವೀಸಾ ರದ್ದುಪಡಿಸಿತು. ಆದರೆ, ಅದೇ ಅಮೆರಿಕದಲ್ಲಿ ಭಾರತ ವಿರೋಧಿ ಗುರ್‌ಪತ್ವಂತ್ ಸಿಂಗ್ ಪನ್ನು ಮುಕ್ತವಾಗಿ ಓಡಾಡುತ್ತಾ, ಅವಕಾಶ ಸಿಕ್ಕಾಗಲೆಲ್ಲ ಭಾರತದ ವಿರುದ್ಧ ವಿಷ ಕಾರುತ್ತಾ ಇರುತ್ತಾನೆ. ಅವನನ್ನು ಅಮೆರಿಕ ತನ್ನ ಪ್ರಜೆಯೆಂದು ಗೌರವಿಸುತ್ತದೆ. ಏಕೆ ಈ ತಾರತಮ್ಯ? ನನಗೆ ಯಾವತ್ತಾದರೂ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನು ಭೇಟಿ ಯಾಗುವ ಅವಕಾಶ ಸಿಕ್ಕರೆ ಖಂಡಿತ ಒಂದಷ್ಟು ಪ್ರಶ್ನೆಗಳನ್ನು ಕೇಳುತ್ತೇನೆ- ಮಿಸ್ಟರ್ ಪ್ರೆಸಿಡೆಂಟ್, ನಿಮ್ಮ ದೇಶ ಮಾನವ ಹಕ್ಕುಗಳ ಹರಿಕಾರನಂತೆ ಬಿಂಬಿಸಿಕೊಳ್ಳುತ್ತದೆ.

ಆದರೂ ಏಕೆ ನಮ್ಮ ದೇಶದ ಜನರ ಕೈಗೆ ಕೋಳ ಹಾಕಿ ವಿಮಾನ ಹತ್ತಿಸಿದ್ದೀರಿ? ಏಕೆ ನಮ್ಮ ದೇಶದ ಪ್ರಸಿದ್ಧ ವಿಜ್ಞಾನಿ ಮತ್ತು ಮಾಜಿ ರಾಷ್ಟ್ರಪತಿಗಳಾಗಿದ್ದ ಎ.ಪಿ.ಜೆ. ಅಬ್ದುಲ್ ಕಲಾಂ, ನಮ್ಮ ದೇಶದ ಮಾಜಿ ವಾಣಿಜ್ಯ ಸಚಿವ ಕಮಲನಾಥ್, ಬಾಲಿವುಡ್‌ನ ಸೂಪರ್ ಸ್ಟಾರ್ ಶಾರುಖ್ ಖಾನ್‌ರನ್ನು ನಿಮ್ಮ ದೇಶದ ವಿಮಾನ ನಿಲ್ದಾಣಗಳಲ್ಲಿ ಬಟ್ಟೆ ಬಿಚ್ಚಿ ತಪಾಸಣೆ ಮಾಡಿ ಅವಮಾನಗೊಳಿಸಿದಿರಿ? ನಿಜಕ್ಕೂ ನೀವು ಏನನ್ನು ಸಾಬೀತುಪಡಿಸಲು ಹೊರಟಿದ್ದೀರಿ? ನೀವೇ ಇಡೀ ಜಗತ್ತಿಗೆ ಬಾಸ್ ಎಂದು ಮೆರೆಯಬೇಕೆ? ಜಗತ್ತಿನಲ್ಲಿ ನಿಮಗಿಂತ ಶಕ್ತಿಶಾಲಿ ಯಾರೂ ಇಲ್ಲ ಎಂದು ಎಲ್ಲರೂ ಬಹುಪರಾಕ್ ಹಾಕಬೇಕೆ? ಈಗಾಗಲೇ ಎಲ್ಲರೂ ಅದನ್ನು ಮಾಡುತ್ತಿದ್ದಾರೆ.

ಹೇಗಿದ್ದರೂ ನೀವೇ ದೊಡ್ಡವರು. ನಿಮಗಿಂತ ಶಕ್ತಿಶಾಲಿ ಯಾರೂ ಇಲ್ಲ. ಆದರೆ ನಮ್ಮ ದೇಶದ ಸಂಸ್ಕೃತಿ ಏನು ಹೇಳುತ್ತದೆ ಗೊತ್ತಾ? ಹಣ್ಣುಗಳಿಂದ ತುಂಬಿದ ಮರ ವಿನಯದಿಂದ ಬಾಗಬೇಕು. ನೀವು ಶಕ್ತಿಶಾಲಿಯಾಗಿದ್ದರೆ, ಆ ಶಕ್ತಿಯನ್ನು ದುರ್ಬಲರಿಗೆ ಸಹಾಯ ಮಾಡಲು ಬಳಸುವುದು ನಿಮ್ಮ ಕರ್ತವ್ಯ. ನಿಮಗಿರುವ ಅನುಭವ ಹಾಗೂ ಸಂಪನ್ಮೂಲಗಳನ್ನು ಬಳಸಿಕೊಂಡು ಬಡ ದೇಶಗಳಿಗೆ ತಮ್ಮ ಕಾಲಿನ ಮೇಲೆ ತಾವು ನಿಂತುಕೊಳ್ಳಲು ಸಹಾಯ ಮಾಡಿ.

ಆಗ ಎಲ್ಲರೂ ನಿಮ್ಮ ಹೆಸರು ಹೇಳಿ ಇನ್ನಷ್ಟು ಗೌರವಿಸುತ್ತಾರೆ !ಭಾರತದ ರಾ ಏಜೆನ್ಸಿಯತ್ತ ಬೆರಳು ತೋರಿಸುವುದನ್ನು ನಾವು ಒಪ್ಪುವುದಿಲ್ಲ, ಮಿಸ್ಟರ್ ಪ್ರೆಸಿಡೆಂಟ್! ನಾವು ಶಾಂತಿಯನ್ನು ಬೆಂಬಲಿಸು ವವರು. ಅಹಿಂಸೆಯ ತತ್ವವನ್ನು ಜಗತ್ತಿಗೆ ನೀಡಿದ ದೇಶ ನಮ್ಮದು. ನಮ್ಮ ದೇಶದ ಭದ್ರತಾ ಸಲಹೆ ಗಾರ ಅಜಿತ್ ದೋವಲ್ ಅವರು ರಾ ಏಜೆನ್ಸಿಯನ್ನು ಇನ್ನಷ್ಟು ಬಲಶಾಲಿ ಮಾಡಿದ್ದಾರೆ ಎಂದು ಹೇಳಿಕೊಳ್ಳುವುದಕ್ಕೆ ನಮಗೆ ಹೆಮ್ಮೆಯೆನಿಸುತ್ತದೆ.

ನಮ್ಮ ಸಾವಿರಾರು ವರ್ಷಗಳ ನಾಗರಿಕತೆಯ ಅವಧಿಯಲ್ಲಿ ಯಾವತ್ತೂ ನಾವು ಯಾರ ಮೇಲೂ ದಾಳಿ ನಡೆಸಿಲ್ಲ. ಮಿಲಿಟರಿ ದಾಳಿಯನ್ನು ಬಿಡಿ, ಸಾಂಸ್ಕೃತಿಕ ಅಥವಾ ಧಾರ್ಮಿಕ ದಾಳಿಯನ್ನೂ ನಡೆಸಿಲ್ಲ. ನದಿಗಳು, ಮರಗಳು, ಪ್ರಾಣಿಗಳು ಹೀಗೆ ನಮ್ಮ ಸುತ್ತಮುತ್ತ ಇರುವ ಎಲ್ಲಾ ಜೀವಜಂತು ಗಳನ್ನೂ ದೇವರೆಂದು ಪೂಜಿಸುವ ನಾಡು ನಮ್ಮದು. ವಸುಧೈವ ಕುಟುಂಬಕಂ ಎಂಬುದು ನಮ್ಮ ಸಿದ್ಧಾಂತ. ಆದರೆ ಒಂದು ಮಾತನ್ನು ನೆನಪಿಡಿ. ನಮ್ಮ ಮೇಲೆ ಯಾರಾದರೂ ದಬ್ಬಾಳಿಕೆ ನಡೆಸಲು ಬಂದರೆ, ನಮಗೆ ಧಮಕಿ ಹಾಕಿದರೆ ಅಥವಾ ನಮ್ಮ ಮೇಲೆ ಹಿಂಸಾಚಾರ ಎಸಗಿದರೆ ನಾವು ಸುಮ್ಮ ನಿರುವುದಿಲ್ಲ. ಮಿಸ್ಟರ್ ಪ್ರೆಸಿಡೆಂಟ್, ಇದು ಹೊಸ ಯುಗದ ಭಾರತ!

ನನಗೊಂದು ಅನುಮಾನವಿದೆ. ಅಮೆರಿಕದ ಇಂತಹ ಎಲ್ಲಾ ಪ್ರಯತ್ನಗಳು ಸ್ವತಃ ಟ್ರಂಪ್ ವಿರುದ್ಧ ಅಲ್ಲಿನವರೇ ನಡೆಸುತ್ತಿರುವ ಷಡ್ಯಂತ್ರ ಇರಬಹುದೇ? ನಮ್ಮ ಪ್ರಧಾನಿ ನರೇಂದ್ರ ಮೋದಿ ಮತ್ತು ಟ್ರಂಪ್ ನಡುವೆ ಆಪ್ತವಾದ ಸ್ನೇಹವಿದೆ. ಟ್ರಂಪ್ ಯಾವತ್ತೂ ವೈಯಕ್ತಿಕವಾಗಿ ಭಾರತವನ್ನು ದೂಷಿಸುವುದಿಲ್ಲ.

ಹೀಗಾಗಿ ಅಮೆರಿಕದ ಕೆಲ ಸ್ಥಾಪಿತ ಹಿತಾಸಕ್ತಿಗಳು (ಅಮೆರಿಕದಲ್ಲಿ ಇಂತಹ ಸಂಸ್ಥೆಗಳಿಗೆ ಯಾವುದೇ ಕೊರತೆಯಿಲ್ಲ) ಟ್ರಂಪ್‌ರನ್ನು ದುರ್ಬಲಗೊಳಿಸಲು ಈ ರೀತಿಯ ಸಂಚು ರೂಪಿಸಿರುವ ಸಾಧ್ಯತೆಗಳೂ ಇವೆ. ಆದರೆ ನಿಮಗೊಂದು ಮಾತು ಹೇಳುತ್ತೇನೆ. ಈ ರೀತಿಯ ಯಾವುದೇ ಪ್ರಯತ್ನಗಳಿಂದ ಭಾರತ ವನ್ನು ಲವಲೇಶವೂ ಅಲುಗಾಡಿಸಲು ಸಾಧ್ಯವಿಲ್ಲ. ಏಕೆಂದರೆ ಇದು ಹೊಸ ಭಾರತ.

ಭಾರತದ ‘ರಾ ತನಿಖಾ ಸಂಸ್ಥೆಯನ್ನು ನಿಷೇಧಿಸುವಂತೆ ಅಮೆರಿಕದ ಧಾರ್ಮಿಕ ಸ್ವಾತಂತ್ರ್ಯ ಗಳ ಕುರಿತಾದ ಆಯೋಗ ವರದಿ ನೀಡಿರುವುದೊಂದು ದೊಡ್ಡ ಷಡ್ಯಂತ್ರ. ಅಮೆರಿಕದ ಸಿಐಎ ಸಂಸ್ಥೆಯ ರಹಸ್ಯ ಗಳನ್ನು ಬಟಾಬಯಲು ಮಾಡಲು ಜಗತ್ತು ನಿರ್ಧರಿಸಿದರೆ ನಿಮ್ಮ ಮುಖವನ್ನು ಎಲ್ಲಿ ಮುಚ್ಚಿಟ್ಟು ಕೊಳ್ಳುತ್ತೀರಿ, ಅಂಕಲ್ ಸ್ಯಾಮ್

*

ಇಡೀ ಜಗತ್ತನ್ನೇ ಹಾಳು ಮಾಡು,

ಜಗತ್ತಿನ ನಿರ್ಮಾತಾ ನಾನೇ ಎಂದು ಹೇಳು.

ಇಡೀ ಜಗತ್ತನ್ನೇ ವಿರೋಧ ಮಾಡು,

ಜಗತ್ತಿನ ನಿಜವಾದ ಸ್ನೇಹಿತ ನಾನೇ ಎಂದು ಹೇಳು!

ಇಡೀ ಜಗತ್ತು ಬೇಕಾದರೆ ಉಪವಾಸ ಬೀಳಲಿ,

ನಾನೇ ಜಗತ್ತಿಗೆ ಅನ್ನ ನೀಡುತ್ತಿದ್ದೇನೆಂದು ಹೇಳು.

ಜಗತ್ತಿಗೆಲ್ಲ ಒಂದಷ್ಟು ಹಣ ತೆಗೆದು ಚೆನ್ನಾಗಿ ಹಂಚು,

ಬಳಿಕ ಎಲ್ಲೆಡೆಯಿಂದ ಹಣ ಬಾಚಿಕೊಳ್ಳಲು ಹೊಂಚು!

ಜಗತ್ತಿನ ವ್ಯಾಪಾರವನ್ನೆಲ್ಲ ಹಾಳುಗೆಡವಿ,

ಸ್ವತಃ ವ್ಯಾಪಾರಿಯಾಗಿ ಕುಳಿತುಬಿಡು.

ಒಳ್ಳೆಯ, ಕೆಟ್ಟ ಮುಹೂರ್ತ ನೋಡಿಕೊಂಡು,

ಜಗತ್ತಿನ ಪೂಜಾರಿಯಾಗಿ ಪವಡಿಸಿಬಿಡು