ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Raghava Sharma Nidle Column: ನಿತೀಶ್‌ ರನ್ನು ಮುಗಿಸಲು ಚಿರಾಗ್‌, ಪಾಸ್ವಾನ್‌ ವ್ಯೂಹ

1990ರ ನಂತರದ ವಿಧಾನಸಭೆ ಚುನಾವಣೆಗೆ ಹೋಲಿಸಿದರೆ 2020ರ ಚುನಾವಣೆ ರಾಜ್ಯದಲ್ಲಿ ಹೊಸ ಇತಿಹಾಸ ಸೃಷ್ಟಿಸಿತ್ತು. 30 ವರ್ಷಗಳ ನಂತರ ಮೊದಲ ಬಾರಿಗೆ ರಾಷ್ಟ್ರೀಯ ಪಕ್ಷವೊಂದು (ಬಿಜೆಪಿ) ರಾಜ್ಯ ಚುನಾವಣೆಯಲ್ಲಿ ಅಗ್ರಮಾನ್ಯ ಪಕ್ಷವಾಗಿ ಹೊರಹೊಮ್ಮಿತ್ತು. ಅಲ್ಲಿಯವರೆಗೆ ರಾಷ್ಟ್ರೀಯ ಜನತಾದಳ (ಆರ್‌ಜೆಡಿ) ಮತ್ತು ಜೆಡಿಯು ಎಂಬ ಎರಡು ಪ್ರಾದೇಶಿಕ ಪಕ್ಷಗಳ ಪ್ರಾಬಲ್ಯಕ್ಕೆ ಸಾಕ್ಷಿಯಾಗಿದ್ದ ಬಿಹಾರದಲ್ಲಿ ಮೊದಲ ಬಾರಿಗೆ ಬಿಜೆಪಿಗೆ ಹಿರಿಯಣ್ಣನ ಸ್ಥಾನ ಸಿಕ್ಕಿತ್ತು.

ನಿತೀಶ್‌ ರನ್ನು ಮುಗಿಸಲು ಚಿರಾಗ್‌, ಪಾಸ್ವಾನ್‌ ವ್ಯೂಹ

Ashok Nayak Ashok Nayak Jul 21, 2025 2:10 PM

ರಾಘವ ಶರ್ಮ ನಿಡ್ಲೆ

skraghu99@gmail.com

ಬಿಹಾರ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಸಿಎಂ ನಿತೀಶ್ ಕುಮಾರ್ ಈಗಾಗಲೇ ಹಲವು ಜನಪ್ರಿಯ ಯೋಜನೆಗಳನ್ನು ಘೋಷಿಸುತ್ತಾ, ಚುನಾವಣಾ ಲಾಭ-ಲೆಕ್ಕಾಚಾರ ದಲ್ಲಿ ತೊಡಗಿದ್ದಾರೆ. ಎನ್‌ಡಿಎ ಮೈತ್ರಿಕೂಟದ ಮಿತ್ರಪಕ್ಷ ಜೆಡಿಯುಗೆ ಈ ಚುನಾವಣೆಯಲ್ಲಿ ಸೀಟುಗಳನ್ನು ಹೆಚ್ಚಿಸಿಕೊಂಡು, ಕಳೆದು ಹೋಗಿರುವ ರಾಜಕೀಯ ಪ್ರಾಬಲ್ಯ ಮರುಸ್ಥಾಪಿಸುವ ಸವಾಲಿದೆ. ಒಂದು ವೇಳೆ ಈ ಬಾರಿಯೂ 2020ರ ಫಲಿತಾಂಶವೇ ಪುನಾರವರ್ತನೆಯಾದರೆ, ಅದು ಜೆಡಿಯು ರಾಜಕೀಯ ಅಧಃಪತನಕ್ಕೆ ನಾಂದಿ ಹಾಡುವುದು ನಿಶ್ಚಿತ. ಎಲ್ಲಕ್ಕಿಂತ ಮುಖ್ಯವಾಗಿ, ವೃದ್ಧಾಪ್ಯ ದಲ್ಲಿರುವ ನಿತೀಶ್‌ಗೆ ಉತ್ತಮ ಫಲಿತಾಂಶ ಪಡೆದುಕೊಂಡು, ನಂತರ ಪಕ್ಷದ ನಾಯಕತ್ವ ವನ್ನು ಮತ್ತೊಬ್ಬರಿಗೆ ಹಸ್ತಾಂತರ ಮಾಡುವ ಯೋಚನೆಯಿದ್ದಂತಿದೆ. ಆದರೆ, ಲೋಕಜನಶಕ್ತಿ ಪಾರ್ಟಿಯ (ರಾಮ್ ವಿಲಾಸ್-ಆರ್‌ವಿ) ನಾಯಕ, ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ನಡೆಗಳನ್ನು ನೋಡಿದರೆ, 2020ರಂತೆ ಈ ಸಲವೂ ಜೆಡಿಯು ಮತಗಳನ್ನು ವಿಭಜಿಸಿ, ನಿತೀಶ್‌ಗೆ ಹಾನಿ ಮಾಡುವ ಉದ್ದೇಶವಿರುವುದು ಸ್ಪಷ್ಟ.

1990ರ ನಂತರದ ವಿಧಾನಸಭೆ ಚುನಾವಣೆಗೆ ಹೋಲಿಸಿದರೆ 2020ರ ಚುನಾವಣೆ ರಾಜ್ಯದಲ್ಲಿ ಹೊಸ ಇತಿಹಾಸ ಸೃಷ್ಟಿಸಿತ್ತು. 30 ವರ್ಷಗಳ ನಂತರ ಮೊದಲ ಬಾರಿಗೆ ರಾಷ್ಟ್ರೀಯ ಪಕ್ಷವೊಂದು (ಬಿಜೆಪಿ) ರಾಜ್ಯ ಚುನಾವಣೆಯಲ್ಲಿ ಅಗ್ರಮಾನ್ಯ ಪಕ್ಷವಾಗಿ ಹೊರಹೊಮ್ಮಿತ್ತು. ಅಲ್ಲಿಯವರೆಗೆ ರಾಷ್ಟ್ರೀಯ ಜನತಾದಳ (ಆರ್‌ಜೆಡಿ) ಮತ್ತು ಜೆಡಿಯು ಎಂಬ ಎರಡು ಪ್ರಾದೇಶಿಕ ಪಕ್ಷಗಳ ಪ್ರಾಬಲ್ಯಕ್ಕೆ ಸಾಕ್ಷಿಯಾಗಿದ್ದ ಬಿಹಾರದಲ್ಲಿ ಮೊದಲ ಬಾರಿಗೆ ಬಿಜೆಪಿಗೆ ಹಿರಿಯಣ್ಣನ ಸ್ಥಾನ ಸಿಕ್ಕಿತ್ತು.

ಹೀಗಿದ್ದರೂ, ಪಿಎಂ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಜೆಡಿಯು ನಾಯಕ ನಿತೀಶ್ ರನ್ನೇ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿದ್ದರು. ಆದರೆ, ಬಿಜೆಪಿಯಿಂದ ಇಬ್ಬರು ಉಪ ಮುಖ್ಯಮಂತ್ರಿಗಳಿರುವಂತೆ ನೋಡಿಕೊಂಡಿದ್ದರು.

ಕಳೆದ ಚುನಾವಣೆಯಲ್ಲಿ ಆಡಳಿತ ವಿರೋಧಿ ಅಲೆ ನಿತೀಶ್ ಕುಮಾರ್ ಮೇಲಿತ್ತೇ ವಿನಃ ಬಿಜೆಪಿ ವಿರುದ್ಧ ವಿರೋಧಿ ವಾತಾವರಣ ಇರಲಿಲ್ಲ. ತಮ್ಮ ಬಗ್ಗೆ ಜನರಲ್ಲಿ ಹಿಂದಿದ್ದ ವಿಶ್ವಾಸಾರ್ಹತೆ ಈ ಬಾರಿ ಇದ್ದಂತಿಲ್ಲ ಎಂಬುದು ಚುನಾವಣಾ ಪ್ರಚಾರಗಳಿಗೆ ಅಲ್ಪ ಜನಸ್ಪಂದನೆ ಸಿಕ್ಕಾಗಲೇ ನಿತೀಶ್ ಅರಿವಿಗೆ ಬಂದಿತ್ತು. ಕೊನೆ-ಕೊನೆಗಂತೂ ನಿತೀಶ್ ತೀರಾ ಹತಾಶರಾದವಂತೆ ಕಂಡುಬಂದಿದ್ದರು. ಇದು ನನ್ನ ಕೊನೆ ಚುನಾವಣೆ, ಮತ್ತೊಂದು ಅವಕಾಶ ಕೊಡಿ ಎಂದು ಮತದಾರರಲ್ಲಿ ಅಂಗಲಾಚಿ ದ್ದರು.

ಇದನ್ನೂ ಓದಿ: Raghava Sharma Nidle Column: ಆಲಮಟ್ಟಿ ಎತ್ತರ: ಇಷ್ಟು ವರ್ಷ ಕಾದಿದ್ದೇ ಮುಳುವಾಯ್ತೇ ?

2020ರಲ್ಲಿ ಜೆಡಿಯು ಪ್ರಾಬಲ್ಯ ತಗ್ಗಿಸಿ, ಬಿಜೆಪಿ ಸೀಟುಗಳು ದ್ವಿಗುಣಗೊಳಿಸುವಲ್ಲಿ ಚಿರಾಗ್ ಮಹತ್ವದ ಪಾತ್ರ ವಹಿಸಿದ್ದು ರಾಜ್ಯದ ಪಾಲಿಗೆ ಐತಿಹಾಸಿಕ ಬೆಳವಣಿಗೆ. ಎಲ್‌ಜೆಪಿಯ ವ್ಯವಸ್ಥಿತ ಮತವಿಭಜನೆ ತಂತ್ರ ಬಿಜೆಪಿಗೆ ಭಾರೀ ಲಾಭ ತಂದುಕೊಟ್ಟಿತ್ತು. ನಾನು ಪ್ರಧಾನಿ ಮೋದಿಜೀಯವರ ಹನುಮಾನ್ ಎನ್ನುತ್ತಲೇ, 137 ಸ್ಥಾನಗಳಲ್ಲಿ ಚಿರಾಗ್ ಅವರು ಎಲ್‌ಜೆಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು.

ಜೆಡಿಯು ಬಲಿಷ್ಠವಿದ್ದ ಕ್ಷೇತ್ರಗಳ ಹೆಚ್ಚು ಅಭ್ಯರ್ಥಿಗಳನ್ನು ಹಾಕಿದ್ದ ಚಿರಾಗ್, ಜೆಡಿಯು ಮತ ಗಳನ್ನು ವಿಭಜಿಸುವಲ್ಲೂ ಯಶಸ್ವಿಯಾದರು. ಇದರಿಂದಾಗಿ, 2015ರಲ್ಲಿ 71 ಕ್ಷೇತ್ರಗಳಲ್ಲಿ ಶಾಸಕ ಸ್ಥಾನ ಹೊಂದಿದ್ದ ಜೆಡಿಯು, 2020ರಲ್ಲಿ 43ಕ್ಕಿಳಿದಿತ್ತು. ಸ್ಪರ್ಧಿಸಿದ 115 ಸ್ಥಾನಗಳಲ್ಲಿ 72ರಲ್ಲಿ ಜೆಡಿಯು ಸೋಲುಂಡಿತ್ತು. ಈ ಎಲ್ಲಾ ಕ್ಷೇತ್ರಗಳಲ್ಲಿ ಎಲ್‌ಜೆಪಿ ಮತ ಪಾಲು ಹೆಚ್ಚಿದ್ದಲ್ಲದೆ, ಜೆಡಿಯು ಮತಗಳ ವಿಭಜನೆ ಅಂತಿಮ ಫಲಿತಾಂಶವನ್ನು ಪರಿಣಾಮಕಾರಿಯಾಗಿ ಬದಲಿಸಿತ್ತು.

ಮಿತ್ರಪಕ್ಷ ಜೆಡಿಯುವನ್ನು ಹಣಿಯುವ ಚಿರಾಗ್ ತಂತ್ರಗಾರಿಕೆಯನ್ನು ಬಿಜೆಪಿ ವಿರೋಧಿಸಲೇ ಇಲ್ಲ. ‘ಬೇಡಪ್ಪಾ, ನೀನು ಸುಮ್ಮನಿರು ಎಂದು ಚಿರಾಗ್‌ಗೆ ಬಿಜೆಪಿಯವರು ತಿಳಿಹೇಳಲಿಲ್ಲ. ಏಕೆಂದರೆ, ನಿತೀಶ್ ಪ್ರಭಾವಳಿ ತಗ್ಗಬೇಕು ಮತ್ತು ಅಂತಿಮವಾಗಿ ಬಿಜೆಪಿ ಮುಂದೆ ಅವರು ಬಗ್ಗಬೇಕು ಎನ್ನು ವುದೇ ಮೋದಿ-ಶಾ ಆಶಯವಾಗಿತ್ತು. ಹಾಗಾಗಿ, ಅವಕಾಶ ಸಿಕ್ಕಾಗಲೆ ಮಾಜಿ ಕೇಂದ್ರ ಸಚಿವ, ದಿವಂಗತ ರಾಮ್ ವಿಲಾಸ್ ಪಾಸ್ವಾನ್ರನ್ನು ಹೊಗಳುತ್ತಾ, ಜೆಡಿಯು ವಿರುದ್ಧದ ವ್ಯೂಹ ರಚನೆಯಲ್ಲಿ ಎಲ್ಜೆಪಿ ಜತೆ ಕೈಜೋಡಿಸಿದ್ದರು.

ಈ ಸಲವೂ ಚಿರಾಗ್ 5 ವರ್ಷದ ಹಿಂದಿನ ಚುನಾವಣಾ ರಣನೀತಿಯನ್ನೇ ನಿತೀಶ್ ವಿರುದ್ಧ ಪ್ರಯೋಗಿಸಲು ಮುಂದಾಗಿದ್ದಾರೆ. ಇದನ್ನು ಬಿಜೆಪಿ ಆಣತಿಯಂತೆಯೇ ಮಾಡುತ್ತಿದ್ದಾರೆಂಬ ಅನುಮಾನವೆದ್ದಿದೆ. ರಾಷ್ಟ್ರಮಟ್ಟದಲ್ಲಿ ಎನ್‌ಡಿಎ ಮಿತ್ರನಾಗಿ ಮತ್ತು ಕೇಂದ್ರದಲ್ಲಿ ಸಚಿವರೂ ಆಗಿರುವುದರಿಂದ ಈಗಿನ ಲೆಕ್ಕಾಚಾರಗಳ ಪ್ರಕಾರ ಚಿರಾಗ್ ಎನ್‌ಡಿಎ ಮೈತ್ರಿಕೂಟದಲ್ಲಿದುಕೊಂಡೇ ರಾಜ್ಯ ಚುನಾವಣೆ ಎದುರಿಸಲಿದ್ದಾರೆ. ಜೆಡಿಯು ಕೂಡ ಎನ್‌ಡಿಎ ಮಿತ್ರಪಕ್ಷ.

ಆದರೆ, ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಇತ್ತೀಚಿನ ಹತ್ಯೆ ಪ್ರಕರಣಗಳನ್ನು ಉಲ್ಲೇಖಿಸಿ, ಪರೋಕ್ಷವಾಗಿ ನಿತೀಶ್ ನಾಯಕತ್ವನ್ನು ಪ್ರಶ್ನಿಸುತ್ತಿರುವ ಚಿರಾಗ್ ಪಾಸ್ವಾನ್, ಕಳೆದ ಬಾರಿ ಅರ್ಧ ಮುಗಿಸಿದ್ದ ನಿತೀಶರನ್ನು ಈ ಬಾರಿ ಪೂರ್ಣ ಮುಗಿಸುತ್ತೇನೆ ಎಂದು ಶಪಥ ಮಾಡಿದಂತಿದೆ. ಬಿಜೆಪಿ ಒಳಗೊಂಡ ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟವನ್ನೇ ಪ್ರಶ್ನಿಸು ತ್ತಿದ್ದೇನೆ ಎನ್ನುವುದು ಚಿರಾಗ್‌ಗೆ ಗೊತ್ತಿದ್ದರೂ, ವ್ಯವಸ್ಥಿತ ವ್ಯೂಹತಂತ್ರದೊಂದಿಗೆ ಚುನಾವಣಾ ಕಣಕ್ಕೆ ಅವರು ಧುಮುಕಿದಂತಿದೆ.

ರಾಷ್ಟ್ರ ರಾಜಕಾರಣದ ಬದಲಿಗೆ, ರಾಜ್ಯಕ್ಕೆ ಮರಳಬೇಕೆಂಬ ತವಕದಲ್ಲಿರುವ ಚಿರಾಗ್, ಈಗ ಸಿಎಂ ಸೀಟಿನ ಮೇಲೆ ಕಣ್ಣಿಲ್ಲ ಎನ್ನುತ್ತಿದ್ದಾರೆ. ಆದರೆ, ರಾಜಕೀಯದಲ್ಲಿ ಯಾರೂ ಸನ್ಯಾಸಿಗಳಲ್ಲ ಎನ್ನುವುದು ವಾಸ್ತವ. ರಾಜ್ಯದ ಎಲ್ಲಾ 243 ಕ್ಷೇತ್ರಗಳಲ್ಲಿ ಸ್ಪರ್ಧಿಸಿ, ಎನ್‌ಡಿಎ ಗೆಲುವನ್ನು ಖಚಿತಪಡಿಸಿಕೊಳ್ಳುವುದು ನನ್ನ ಗುರಿ ಎಂದು ಕೆಲ ದಿನಗಳ ಹಿಂದೆ ಚಿರಾಗ್ ಪ್ರಕಟಿಸಿದ್ದರು. ವಿಧಾನಸಭೆಯಲ್ಲಿ ಸದ್ಯ ಎಲ್‌ಜೆಪಿ (ಆರ್‌ವಿ)ಗೆ ಶಾಸಕ ಸ್ಥಾನವಿಲ್ಲ. ಈ ಬಾರಿ ಮತ್ತೆ ಖಾತೆ ತೆರೆದು ಸಂಖ್ಯೆ ಏರಿಸಿಕೊಳ್ಳಲು ಚಿರಾಗ್ ವೇದಿಕೆ ಸಿದ್ಧಪಡಿಸಿಕೊಳ್ಳುತ್ತಿದ್ದಾರೆ.

ಹಾಗಂತ, ಕಳೆದ ಬಾರಿಯಂತೆ ಈ ಸಲವೂ ಅಂದಾಜು 115 ಸೀಟುಗಳ ಪಾಲನ್ನು ಕೇಳಿರುವ ಜೆಡಿಯು, ಎಲ್’ಜೆಪಿ ಸ್ಪರ್ಧಿಸುವ ಸೀಟುಗಳನ್ನು ಹೆಚ್ಚಿಸುವ ವಾದ ಒಪ್ಪಲಿಕ್ಕಿಲ್ಲ. 2020ರ ಕಳಪೆ ನಿರ್ವಹಣೆ ಹೊರತಾಗಿಯೂ ತನ್ನ ಸ್ಥಾನಗಳನ್ನು ಜೆಡಿಯು ಎಲ್ಜೆಪಿಗೆ ಬಿಟ್ಟುಕೊಡಲು ಸುತಾರಾಂ ಒಪ್ಪಲಿಕ್ಕಿಲ್ಲ. ಇಂಥಾ ಜಟಿಲ ಸನ್ನಿವೇಶದಲ್ಲಿ, ಚಿರಾಗ್ ತೆಗೆದುಕೊಳ್ಳುವ ನಿಲುವು ನಿರ್ಣಾಯಕ ಎನಿಸಿಕೊಳ್ಳಲಿದೆ. ಸೀಟು ಹಂಚಿಕೆ ಬಗ್ಗೆ ಅಸಮಾಧಾನಗೊಂಡು ನಂತರ ಪ್ರತ್ಯೇಕ ಸ್ಪರ್ಧೆಗೆ ಚಿರಾಗ್ ಮನಸ್ಸು ಮಾಡಬಹುದು. ಇದಕ್ಕೆ ಬಿಜೆಪಿ ಮೌನ ಸಮ್ಮತಿ ನೀಡುವ ಸಾಧ್ಯತೆಯೂ ಹೆಚ್ಚು. ಇಂಥಾ ರಾಜಕೀಯ ಸನ್ನಿವೇಶ ನಿರ್ಮಾಣವಾದರೆ ಅದು ಮತ್ತೆ ನಿತೀಶ್‌ಗೆ ಹಾನಿ ಮಾಡಬಹುದು.

2005ರ ಫೆಬ್ರವರಿಯಲ್ಲಿ ನಡೆದ ವಿಧಾನಸಭೆ ಚುನಾವಣೆ ಮತ್ತು ಅಕ್ಟೋಬರ್‌ನಲ್ಲಿ ನಡೆದಿದ್ದ ಮಧ್ಯಂತರ ಚುನಾವಣೆಯಲ್ಲಿ ಎಲ್‌ಜೆಪಿ ಎರಡಂಕಿಗಿಂತ ಹೆಚ್ಚು ಮತಪಾಲು ಪಡೆದಿದ್ದು ಬಿಟ್ಟರೆ, ಉಳಿದ ಯಾವ ಚುನಾವಣೆಯಲ್ಲೂ ಎಲ್‌ಜೆಪಿ ವೋಟ್‌ಷೇರು ಎರಡಂಕಿ ದಾಟಿಲ್ಲ. ಪಾಸ್ವಾನ್ ಸಮುದಾಯ ಬಿಟ್ಟರೆ ದಲಿತ ಸಮುದಾಯದೊಳಗಿನ ಇತರೆ ಜಾತಿಗಳನ್ನು ಆಕರ್ಷಿಸಲು ರಾಮ್ ವಿಲಾಸ್ ಪಾಸ್ವಾನ್‌ಗೆ ಸಾಧ್ಯವಾಗಲೇ ಇಲ್ಲ.

ರಾಜ್ಯದ ಒಟ್ಟಾರೆ ಜನಸಂಖ್ಯೆಯಲ್ಲಿ ದಲಿತರ ಪ್ರಮಾಣ 19.65ರಷ್ಟಿದೆ. ಈ ಹಿನ್ನೆಲೆಯಲ್ಲಿ ತಮ್ಮನ್ನು ಪಾಸ್ವಾನ್ ಸಮುದಾಯಕ್ಕಷ್ಟೇ ಸೀಮಿತಗೊಳಿಸದೆ, ರಾಜ್ಯವ್ಯಾಪಿ ಒಪ್ಪುವ ನಾಯಕನಾಗಲು ಚಿರಾಗ್ ಹೊರಟಿದ್ದಾರೆ. ಹೀಗಾಗಿ, ಈ ಸಲದ ಬಿಹಾರ ಚುನಾವಣೆ ಚಿರಾಗ್ ಪಾಲಿಗೆ ಭದ್ರ ಭವಿಷ್ಯ ರೂಪಿಸುವ ಮಹತ್ವದ ಚುನಾವಣೆ. ಮತ್ತೊಂದೆಡೆ, ಪಲ್ಟು ರಾಮ ಕುಖ್ಯಾತಿಯ ನಿತೀಶ್ ಕುಮಾರ್‌ಗೆ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳುವ ನಿರ್ಣಾಯಕ ಚುನಾವಣೆಯೂ ಹೌದು.

‘ಬಹುಜನ’ ನಾಯಕನಾಗುವ ಪ್ರಯತ್ನ: ಚಿರಾಗ್ ಅವರು ದಲಿತ ಸಮುದಾಯದ ಪಾಸ್ವಾನ್ ಎಂದೂ ಕರೆಯಲ್ಪಡುವ ದುಸಾಧ್ ಜಾತಿಗೆ ಸೇರಿದವರು. ಪರಿಶಿಷ್ಟ ಜಾತಿಗೆ ಒಳಪಟ್ಟ ಈ ಮಂದಿ ವಿಶೇಷವಾಗಿ ಬಿಹಾರ, ಉತ್ತರ ಪ್ರದೇಶ ಮತ್ತು ಜಾರ್ಖಂಡ್‌ನಲ್ಲಿ ಕಂಡುಬರುತ್ತಾರೆ. ರಾಮ್ ವಿಲಾಸ್‌ ರಂತೆ ತನ್ನನ್ನು ಕೇವಲ ದಲಿತ ನಾಯಕ ಎಂದು ಬಿಂಬಿಸಿಕೊಳ್ಳುವ ಬದಲು, ಹಿಂದುಳಿದ ವರ್ಗ, ಒಬಿಸಿ, ಬುಡಕಟ್ಟು ಜನಾಂಗ ಮತ್ತು ಅಲ್ಪಸಂಖ್ಯಾತರನ್ನೊಳಗೊಂಡ ಬಹುಜನ ನಾಯಕನನ್ನಾಗಿ ರೂಪಿಸಿಕೊಳ್ಳಬೇಕು ಎನ್ನುವುದು ಚಿರಾಗ್ ಆಶಯ.

ಇದೇ ಕಾರಣಕ್ಕಾಗಿ, ಕಳೆದ ಜೂನ್ 29ರಂದು ನಿತೀಶ್ ಕುಮಾರ್ ಅವರ ಮಾತೃ ಜಿಲ್ಲೆ ನಳಂದಾ ದಲ್ಲಿ ಬಹುಜನ್ ಭೀಮ್ ಸಂಕಲ್ಪ ಸಮಾಗಮ ಎಂಬ ಸಮಾವೇಶ ಹಮ್ಮಿಕೊಂಡಿದ್ದರು. ಎಲ್‌ಜೆಪಿ (ರಾಮ್ ವಿಲಾಸ್) ಸ್ಥಾಪನೆಯಾದ ಮೂರು ವರ್ಷಗಳ ಬಳಿಕ ಚಿರಾಗ್, ಬಹುಜನರ ಹೆಸರಲ್ಲಿ ಇಂಥದ್ದೊಂದು ಕಾರ್ಯಕ್ರಮ ಏರ್ಪಡಿಸಿದ್ದರು. ಮೀಸಲು ಅಲ್ಲದ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿ ಸುವುದಾಗಿಯೂ ಅವರು ಘೋಷಿಸಿದ್ದಾರೆ.

ಮೋದಿಯ ಹನುಮನಂತಿದ್ದ ಚಿರಾಗ್

ಕಳೆದ ಚುನಾವಣೆಯಲ್ಲಿ ತಾನು ಪ್ರಧಾನಿ ನರೇಂದ್ರ ಮೋದಿಯವರ ಹನುಮಾನ್ ಎಂದೇ ಪ್ರಚಾರ ಮಾಡಿದ್ದ ಚಿರಾಗ್, ಈಗಲೂ ಅದೇ ಮಾತನ್ನು ಪುನರುಚ್ಚರಿಸುತ್ತಿದ್ದಾರೆ. ಹಾಗೆ ನೋಡಿದರೆ, 2020ರ ನಂತರದಲ್ಲಿ ಮೋದಿ-ಚಿರಾಗ್ ಸಂಬಂಧ ಮತ್ತಷ್ಟು ದೃಢವಾಗಿದೆ. 2018ರಲ್ಲಿ ಸುಪ್ರೀಂಕೋರ್ಟ್‌ನ ಯು.ಯು. ಲಲಿತ್ ಮತ್ತು ಎ.ಕೆ. ಗೋಯೆಲ್ ಒಳಗೊಂಡ ದ್ವಿಸದಸ್ಯ ನ್ಯಾಯಪೀಠ ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆಗಟ್ಟುವಿಕೆ ಕಾಯಿದೆಯಲ್ಲಿ ತಿದ್ದುಪಡಿ ತಂದ ತೀರ್ಪು ಪ್ರಕಟಿಸಿದ್ದನ್ನು ಪ್ರಶ್ನಿಸಿದ್ದ ಚಿರಾಗ್ ಪಾಸ್ವಾನ್, ಉತ್ತರ ಭಾರತದಲ್ಲಿ ಪ್ರತಿಭಟನೆಗಳನ್ನು ನಡೆಸಿ, ರಾಷ್ಟ್ರಮಟ್ಟದಲ್ಲಿ ಗುರುತಿಸಿ ಕೊಂಡಿದ್ದರು.

ನ್ಯಾ.ಎ.ಕೆ.ಗೋಯೆಲ್ ನಿವೃತ್ತಿ ಬಳಿಕ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ಮುಖ್ಯ ನ್ಯಾಯಾಧೀಶರನ್ನಾಗಿ ನೇಮಕ ಮಾಡಿದ್ದನ್ನೂ ಪ್ರಶ್ನಿಸಿದ್ದ ಅವರು, ನೇಮಕಾತಿ ರದ್ದುಗೊಳಿಸು ವಂತೆ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದರು. ಸುಪ್ರೀಂಕೋರ್ಟ್ ತೀರ್ಪು ಜಾರಿಗೊಳ್ಳದಂತೆ ನೋಡಿಕೊಳ್ಳಲು ಸುಗ್ರೀವಾe ಹೊರಡಿಸಬೇಕು ಎಂಬ ಚಿರಾಗ್ ಹಠಕ್ಕೆ ಮಣಿದಿದ್ದ ಕೇಂದ್ರ ಸುಗ್ರೀವಾಜ್ಞೆ ಹೊರಡಿಸಲು ಒಪ್ಪಿಕೊಂಡಿತ್ತು. 2024ರ ಆಗಸ್ಟ್‌ನಲ್ಲಿ ಪರಿಶಿಷ್ಟ ಜಾತಿಗಳ ಉಪ-ವರ್ಗೀಕರಣಕ್ಕೆ ಅವಕಾಶ ನೀಡಿದ್ದ ಸುಪ್ರೀಂಕೋರ್ಟ್ ಸಂವಿಧಾನ ಪೀಠದ ತೀರ್ಪನ್ನು ಚಿರಾಗ್ ಪಾಸ್ವಾನ್ ವಿರೋಧಿಸಿದ್ದರು.

ಸುಪ್ರೀಂಕೋರ್ಟ್‌ನ ಎಸ್‌ಸಿ/ಎಸ್‌ಟಿ ಕೆನೆಪದರದ ನಿಲುವಿಗೂ ಆಕ್ಷೇಪ ತೆಗೆದಿದ್ದರು. ಕೇಂದ್ರ ಸರಕಾರ ಚಿರಾಗ್ ಅಭಿಪ್ರಾಯಗಳನ್ನು ಪರಿಗಣಿಸಿ, ಕೆಲ ತಿದ್ದುಪಡಿಗಳನ್ನು ತಂದು, ದಲಿತರು ಮತ್ತು ಆದಿವಾಸಿಗಳ ಮೇಲೆ ಕೆನೆಪದರ ನೀತಿ ಅನ್ವಯವಾಗದಂತೆ ನೋಡಿಕೊಳ್ಳಲು ನಿರ್ಧರಿಸಿತು ಮತ್ತು ಈ ನಿಟ್ಟಿನಲ್ಲಿ ಕ್ಯಾಬಿನೆಟ್ ನಿರ್ಣಯವನ್ನೂ ಅಂಗೀಕರಿಸಿತ್ತು.

(ಲೇಖಕರು ಹಿರಿಯ ಪತ್ರಕರ್ತರು)