ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Dr N Someshwara Column: ಬಣ್ಣ ಬಣ್ಣ, ರುಚಿ ರುಚಿಯಾದ, ಸುವಾಸನಭರಿತ ಅಕ್ಷರಗಳು

ಸೂರ್ಯನಿಂದ ಬರುವ ಬೆಳಕು ಸಾಗಲು ಯಾವುದೇ ಮಾಧ್ಯಮವು ಬೇಕಿಲ್ಲ. ಇದನ್ನು ವಿದ್ಯು ದಯಸ್ಕಾಂತ ರೋಹಿತ ರೂಪದ (ಎಲೆಕ್ಟ್ರೋಮ್ಯಾಗ್ನೆಟಿಕ್ ಸ್ಪೆಕ್ಟ್ರಮ್) ಸೀಮಿತ ಭಾಗ, ಅಂದರೆ 380 ಟೆರಾಹರ್ಟ್ಜ್‌ನಿಂದ 790 ಟೆರಾಹರ್ಟ್ಜ್ ನಡುವಿನ ಬೆಳಕನ್ನು ಅವುಗಳ ಆವರ್ತನವನ್ನಾ ಧರಿಸಿ ವಿವಿಧ ಬಣ್ಣಗಳಲ್ಲಿ ನೋಡಬಹುದು. ಉದಾಹರಣೆಗೆ 400-484 ಟೆರಾ ಹರ್ಟ್ಜ್ ನಡುವಿನ ಬೆಳಕು ಕೆಂಪಗೆ ಕಂಡರೆ 668-790 ಟೆರಾಹರ್ಟ್ಜ್ ಬೆಳಕು ನೇರಳೆ ಬಣ್ಣಕ್ಕೆ ಕಾಣುತ್ತದೆ

ಬಣ್ಣ ಬಣ್ಣ, ರುಚಿ ರುಚಿಯಾದ, ಸುವಾಸನಭರಿತ ಅಕ್ಷರಗಳು

ಅಂಕಣಕಾರ ಡಾ.ನಾ.ಸೋಮೇಶ್ವರ

ಹಿಂದಿರುಗಿ ನೋಡಿದಾಗ

ನನ್ನ ಬಿ.ಎಸ್ಸಿ ಪದವಿಯ ದಿನಗಳು. ನನ್ನ ಸಂಪರ್ಕಕ್ಕೆ ಬರುವ ಎಲ್ಲ ರೀತಿಯ ಪುಸ್ತಕ ಗಳನ್ನು ಓದುತ್ತಿದ್ದೆ. ಒಂದು ಪುಸ್ತಕವು ಓದಲು ಅರ್ಹವೇ, ಅದರಿಂದ ನನಗೇನಾದರೂ ಪ್ರಯೋಜನವಾಗಬಹುದೇ ಎನ್ನುವುದನ್ನು ತಿಳಿಯಲು ಕನಿಷ್ಠ ಮೊದಲ 30 ಪುಟಗಳನ್ನು ಓದುತ್ತಿದ್ದೆ. ನನಗೆ ಉಪಯುಕ್ತವಲ್ಲ ಅಥವಾ ವಿಷಯವು ನನ್ನ ತಿಳಿವಿಗೆ ಮೀರಿದ್ದು ಎಂದೆ ನಿಸಿದಾಗ ಆ ಪುಸ್ತಕವನ್ನು ತೆಗೆದು ಪಕ್ಕಕ್ಕೆ ಇಡುತ್ತಿದ್ದೆ. ಹೀಗೆ ನಾನು ‘ತಂತ್ರಶಾಸ್ತ್ರ’ಕ್ಕೆ ಸಂಬಂಧಿಸಿದ ಒಂದು ಪುಸ್ತಕವನ್ನು ಓದುತ್ತಿದ್ದೆ. ಅಲ್ಲಿ ಪ್ರತಿಯೊಂದು ಅಕ್ಷರಕ್ಕೂ ಒಂದೊಂದು ಬಣ್ಣವಿರುತ್ತದೆ. ಪ್ರತಿಯೊಂದು ಮಂತ್ರವನ್ನು ಪಠಿಸಿದಾಗ, ಆ ಅಕ್ಷರಗಳು ವಿವಿಧ ಬಣ್ಣಗಳನ್ನು ತಳೆದು ಕಣ್ಣ ಮುಂದೆ ಕುಣಿಯುತ್ತವೆ ಇತ್ಯಾದಿ ವಿವರಗಳಿದ್ದವು. ಅವುಗಳಲ್ಲಿ ಈಗಲೂ ನನ್ನ ನೆನಪಿನಲ್ಲಿರುವ ನುಡಿ ‘ಓಂ’. ಓಂಕಾರವನ್ನು ಸರಿಯಾದ ವಿಧಾನದಲ್ಲಿ ನುಡಿದರೆ, ಅದು ಬಂಗಾರ ವರ್ಣದಲ್ಲಿ ಕಾಣಿಸಿ ಕೊಳ್ಳುತ್ತದೆ ಎನ್ನುವ ವರ್ಣನೆಯಿತ್ತು.

ಇದನ್ನೆಲ್ಲ ಓದಿದಾಗ, ಇವೆಲ್ಲವೂ ‘ಅವೈಜ್ಞಾನಿಕ’ ಎಂದೆನಿಸಿತು. ಅದಕ್ಕೆ ಕಾರಣವಿದೆ. ಶಬ್ದ ಎನ್ನುವುದು ಕಂಪನ. ಕಂಪನವು ಸಾಗಲು ಒಂದು ಮಾಧ್ಯಮವು ಬೇಕು. ನಾವು ಮಾತನಾ ಡುವಾಗ ಶಬ್ದವು ಗಾಳಿಯ ಮೂಲಕ ಸಾಗುತ್ತದೆ. ಇದರ ವ್ಯಾಪ್ತಿಯು 85 ಹರ್ಟ್ಜ್ ಇಂದ 8000 ಹರ್ಟ್ಜ್‌ವರೆಗೆ ವ್ಯಾಪಿಸಬಹುದು.

ಇದನ್ನೂ ಓದಿ: Dr N Someshwara Column: ಪೋಲಿ ಮಾತುಗಳನ್ನಾಡಿಸುವ ಟೂರೆಟ್‌ ಲಕ್ಷಣಾವಳಿ

ಸೂರ್ಯನಿಂದ ಬರುವ ಬೆಳಕು ಸಾಗಲು ಯಾವುದೇ ಮಾಧ್ಯಮವು ಬೇಕಿಲ್ಲ. ಇದನ್ನು ವಿದ್ಯುದಯಸ್ಕಾಂತ ರೋಹಿತ ರೂಪದ (ಎಲೆಕ್ಟ್ರೋಮ್ಯಾಗ್ನೆಟಿಕ್ ಸ್ಪೆಕ್ಟ್ರಮ್) ಸೀಮಿತ ಭಾಗ, ಅಂದರೆ 380 ಟೆರಾಹರ್ಟ್ಜ್‌ನಿಂದ 790 ಟೆರಾಹರ್ಟ್ಜ್ ನಡುವಿನ ಬೆಳಕನ್ನು ಅವುಗಳ ಆವರ್ತನವನ್ನಾಧರಿಸಿ ವಿವಿಧ ಬಣ್ಣಗಳಲ್ಲಿ ನೋಡಬಹುದು. ಉದಾಹರಣೆಗೆ 400-484 ಟೆರಾ ಹರ್ಟ್ಜ್ ನಡುವಿನ ಬೆಳಕು ಕೆಂಪಗೆ ಕಂಡರೆ 668-790 ಟೆರಾಹರ್ಟ್ಜ್ ಬೆಳಕು ನೇರಳೆ ಬಣ್ಣಕ್ಕೆ ಕಾಣುತ್ತದೆ.

ವಾಸ್ತವದಲ್ಲಿ ಶಬ್ದ ಮತ್ತು ಬಣ್ಣಗಳ ನಡುವೆ ನೇರ ಸಂಬಂಧವೇ ಇಲ್ಲ ಎಂದು ಅನಿಸಿತು. ಈ ವಿಚಾರವನ್ನು ಅಂದೇ ನಾನು ಮರೆತುಬಿಟ್ಟೆ. ಆದರೆ ವೈದ್ಯಕೀಯ ಶಿಕ್ಷಣವನ್ನು ಸೇರಿದ ಮೇಲೆ, ‘ಮಿಶ್ರ ಸಂವೇದನೆ’ ಅಥವಾ ‘ಸೈನಿಸ್ಥೀಸಿಯ’ ಎಂಬ ಮನುಷ್ಯನ ಅನುಭವದ ಬಗ್ಗೆ ತಿಳಿಯುತ್ತಲೇ ಪೂರ್ಣವಾಗಿ ಗೊಂದಲದಲ್ಲಿ ಮುಳುಗಿದೆ. ನನಗೆ ಆದ ಗೊಂದಲವನ್ನು ಈಗ ನಿಮಗೆ ವರ್ಗಾಯಿಸುತ್ತಿದ್ದೇನೆ.

ನಾನು ‘5’ ಎಂದು ಬರೆದ ಅಂಕಿಯನ್ನು ತಾವು ಓದುತ್ತಿದ್ದೀರಿ. ಈ 5 ಎಂಬ ಅಂಕೆಯ ಬಣ್ಣ ಯಾವುದು? ಕಪ್ಪು! ಕಪ್ಪೇ ಏಕೆಂದರೆ ಮುದ್ರಣದಲ್ಲಿ, ಕಾಗದದ ಬಿಳಿಯ ಹಿನ್ನೆಲೆಯಲ್ಲಿ ಕಪ್ಪು ಅಕ್ಷರಗಳು ಎದ್ದು ಕಾಣುತ್ತವೆ. ಈ 5 ಎಂಬ ಅಂಕಿಯು ಕಪ್ಪಗೆ ಕಾಣುವ ಬದಲು (ಕಪ್ಪು ಬಣ್ಣದಲ್ಲಿಯೇ ಅದನ್ನು ಮುದ್ರಿಸಿದ್ದಾರೆ) ಕೆಂಪು ಅಥವಾ ನೀಲಿ ಇಲ್ಲವೇ ಹಸಿರು ಬಣ್ಣದಲ್ಲಿ ಕಾಣಿಸಿದರೆ?!.. ಆಗ ನಿಮಗೇನು ಅನಿಸುತ್ತದೆ. ನನಗೆ ಹುಚ್ಚು ಹಿಡಿದಿರಬಹುದು ಎಂದು ಅನಿಸುತ್ತದೆಯಲ್ಲವೆ!

ಹಾಗೆಯೇ ಅಕ್ಷರಗಳು ವಿವಿಧ ಬಣ್ಣಗಳನ್ನು ತಳೆದರೆ? ಅಂಕಿಗಳು ಹಾಗೂ ಅಕ್ಷರಗಳು ವಿವಿಧ ವಾಸನೆಯನ್ನು ಹೊರಡಿಸಿದರೆ? ಅಂಕಿಗಳು ಹಾಗೂ ಅಕ್ಷರಗಳು ವೈವಿಧ್ಯಮಯ ಸ್ವಾದವನ್ನು ನೀಡಿದರೆ? ಸಂಗೀತದ ಅಲೆಗಳು ಮೂರ್ತವೆತ್ತಿ ನಿಮ್ಮ ಮುಂದೆ ನರ್ತಿಸಲು ಆರಂಭಿಸಿದರೆ? ‘9’ ಕೋಪವನ್ನು ವ್ಯಕ್ತಪಡಿಸಿದರೆ? ‘ಜಿ’ ಸಂತಸದ ಪ್ರತೀಕವಾದರೆ? ಅಲ್ಲಿ ಯಾರೋ ಹುಡುಗಿ ತನ್ನ ಗೆಳೆಯನ್ನು ಸ್ಪರ್ಶಿಸಿದರೆ, ಆ ಸ್ಪರ್ಶಾನುಭವ ನನಗೆ ಆದರೆ... ನಿಮಗೆ ಅರೆ ಹುಚ್ಚಲ್ಲ, ಪೂರ್ತಿ ಹುಚ್ಚು ಹಿಡಿದಿದೆ ಎಂದು ಖಚಿತವಾಗುತ್ತದೆ ಸರ್ ಎಂದು ನೀವು ಉದ್ಗಾರವನ್ನು ಎಳೆಯಬಹುದು. ಆದರೆ ಇದು ಕಲ್ಪನೆಯಲ್ಲ, ಕಟ್ಟುಕಥೆಯಲ್ಲ. ವಾಸ್ತವ. ಇದನ್ನು ಅರ್ಥ ಮಾಡಿಕೊಳ್ಳ ಬೇಕಾದರೆ ಮಿಶ್ರ ಸಂವೇದನೆಯ ರೋಚಕ ಲೋಕವನ್ನು ಪ್ರವೇಶಿಸಬೇಕಾಗುತ್ತದೆ.

ತಾಂತ್ರಿಕ ಪದಗಳು: ಕೆಲವು ತಾಂತ್ರಿಕ ಪದಗಳನ್ನು ತಿಳಿದುಕೊಳ್ಳೋಣ. 5 ಎನ್ನುವುದು ದೃಶ್ಯ ಸಂವೇದನೆ. ಇದನ್ನು ‘ಪ್ರಾಥಮಿಕ ಸಂವೇದನೆ’ ಎನ್ನುತ್ತೇವೆ. ಈ 5 ಎನ್ನುವ ಸಂಖ್ಯೆ ಯು ಕಪ್ಪು ಬಣ್ಣದಲ್ಲಿ ಕಾಣುವ ಬದಲು ಇತರ ಬಣ್ಣಗಳಲ್ಲಿ ಕಂಡರೆ ಅದನ್ನು ‘ದ್ವಿತೀ ಯಕ ಸಂವೇದನೆ’ ಎಂದು ಕರೆಯುತ್ತೇವೆ. ಇಲ್ಲಿ ಪ್ರಾಥಮಿಕ ಸಂವೇದನೆಯು ದ್ವಿತೀಯಕ ಸಂವೇದನೆಗೆ ಕಾರಣವಾಗುವ ಕಾರಣ, ಈ ಪ್ರಾಥಮಿಕ ಸಂವೇದನೆಯನ್ನು ‘ಪ್ರಚೋದಕ’ ಅಥವಾ ‘ಇಂಡ್ಯೂಸರ್’ ಎಂದು ಕರೆಯಬಹುದು. ಈ ಪ್ರಾಥಮಿಕ ಪರಿಚಯದೊಡನೆ, ಮಿಶ್ರ ಸಂವೇದನೆ ಅಥವ ಸೈನಿಸ್ಥೀಸಿಯ ಎಂಬ ಪದದ ಅರ್ಥವನ್ನು ತಿಳಿದುಕೊಳ್ಳೋಣ.

ಇದು ಎರಡು ಗ್ರೀಕ್ ಶಬ್ದಗಳಿಂದ ರೂಪುಗೊಂಡಿದೆ. ‘ಸಿನ್’ + ಏಸ್ಥೆಸಿಸ್ = ಸೈನಿಸ್ಥೀಯ. ‘ಸಿನ್’ ಎಂದರೆ ಜತೆಗೆ ಅಥವಾ ‘ಒಟ್ಟೊಟ್ಟಿಗೆ’ ಎಂದರ್ಥ. ‘ಏಸ್ಥೆಸಿಸ್’ ಎಂದರೆ ‘ಸಂವೇದನೆ ಗಳ ಗ್ರಹಿಕೆ’ ಎನ್ನಬಹುದು. ಈ ಅರ್ಥವನ್ನು ಹೊಮ್ಮಿಸುವ ‘ಮಿಶ್ರ ಸಂವೇದನೆ’ ಎನ್ನುವ ಶಬ್ದವನ್ನು ಕನ್ನಡದಲ್ಲಿ ಬಳಸ ಬಹುದು.

‘ಒಂದು ಸಂವೇದನೆಯ ಅನುಭವವಾಗುವಾಗಲೇ ಮತ್ತೊಂದು ಅಥವಾ ಒಂದಕ್ಕಿಂತ ಹೆಚ್ಚಿನ ಸಂವೇದನೆಗಳ ಅನುಭವವಾಗುವಿಕೆ’ ಎಂದು ಸ್ಥೂಲವಾಗಿ ವಿವರಿಸಬಹುದು. ಸೈನೆಸ್ಥೀಸಿಯ ಎಂಬ ಪದವನ್ನು ಮೇರಿ ವಿಟನ್ ಕ್ಯಾಲ್ಕಿನ್ಸ್ (1863-1930) ಎಂಬಾಕೆ ತನ್ನ ಪ್ರಬಂಧದಲ್ಲಿ ಬಳಸುವ ಮೂಲಕ ಜನಪ್ರಿಯಗೊಳಿಸಿದಳು. ಇಂಥ ವಿಶಿಷ್ಟ ಸಾಮರ್ಥ್ಯ ವಿರುವ ವ್ಯಕ್ತಿಯನ್ನು ‘ಸೈನೆಸ್ಥೆಟಿಸ್ಟ್’ ಅಥವ ‘ಮಿಶ್ರ ಸಂವೇದಿ’ ಎಂದು ಕರೆಯಬಹುದು.

ನಮೂನೆಗಳು: 2020ರ ಅನ್ವಯ ಸುಮಾರು 100 ನಮೂನೆಯ ಮಿಶ್ರ ಸಂವೇದನೆಗಳನ್ನು ಗುರುತಿಸಲಾಗಿದೆ. ಹಾಗೆಯೇ ಸುಮಾರು 200 ಮಿಶ್ರ ಸಂವೇದಿಗಳು ಜಗತ್ತಿನಲ್ಲಿ ಇದ್ದಾರೆ ಎನ್ನಲಾಗಿದೆ. ಪ್ರಸ್ತುತ ಮುಖ್ಯವಾದ ಕೆಲವು ಮಿಶ್ರ ಸಂವೇದನೆಗಳನ್ನು ತಿಳಿದುಕೊಳ್ಳೋಣ.

-ಗ್ರಾಫೀಮ್-ಕಲರ್ ಸೈನಿಸ್ಥೀಸಿಯ: ಇದು ಸರ್ವೇ ಸಾಮಾನ್ಯವಾದ ಮಿಶ್ರ ಸಂವೇದನೆ. ಇವರಿಗೆ ಪ್ರತಿಯೊಂದು ಅಕ್ಷರವು ಅಥವಾ ಪ್ರತಿಯೊಂದು ಸಂಖ್ಯೆಯು ಒಂದು ನಿರ್ದಿಷ್ಟ ಬಣ್ಣದಲ್ಲಿ ಕಾಣುತ್ತದೆ.

- ಕ್ರೋಮೆಸ್ಥೀಸಿಯ: ಒಬ್ಬರು ಮಾತನಾಡುವುದನ್ನು ಕೇಳಿದಾಗ ಇಲ್ಲವೇ ಸಂಗೀತವನ್ನು ಆಲಿಸಿದಾಗ, ಆ ನಾದವು ಬಣ್ಣ ಬಣ್ಣಗಳ ರೂಪದಲ್ಲಿ ಕಾಣುತ್ತದೆ.

- ಲೆಕ್ಸಿಕಲ್-ಗಸ್ಟೇಟರಿ ಸೈನಿಸ್ಥೀಸಿಯ: ಶಬ್ದಗಳನ್ನು ಕೇಳಿದಾಗ, ಇವರಿಗೆ ವಿವಿಧ ರುಚಿಗಳ ಅನುಭವವಾಗುತ್ತದೆ.

- ಸ್ಪೇಶಿಯಲ್ ಸೀಕ್ವೆನ್ಸ್ ಸೈನಿಸ್ಥೀಸಿಯ: ಸಂಖ್ಯೆಗಳು, ದಿನಾಂಕಗಳು ಅವಕಾಶದ (ಸ್ಪೇಸ್) ನಿರ್ದಿಷ್ಟ ಸ್ಥಾನದಲ್ಲಿ ನಿಂತಿರುವಂತೆ ಭಾಸವಾಗುತ್ತದೆ.

- ಆಡಿಟರಿ-ಟಾಕ್ಟೆ ಲ್ ಸೈನಿಸ್ಥೀಸಿಯ: ಶಬ್ದಗಳನ್ನು ಇಲ್ಲವೇ ಸಂಗೀತವನ್ನು ಆಲಿಸಿದರೆ, ಅವು ಬಂದು ತಮ್ಮನ್ನು ಸ್ಪರ್ಶಿಸುವ ಅನುಭವವಾಗುತ್ತದೆ.

- ಮಿರರ್-ಟಚ್ ಸೈನಿಸ್ಥೀಸಿಯ: ಯಾರೋ ಒಬ್ಬರು ಪರಸ್ಪರ ಸ್ಪರ್ಶಿಸಿಕೊಂಡರೆ, ಆ ಸ್ಪರ್ಶಾನುಭವ ಇವರಿಗೆ ಆಗುತ್ತದೆ.

- ಇತರೆ ನಮೂನೆಗಳು: ಮೇಲಿನ ಅನುಭವಗಳ ವಿವಿಧ ಕ್ರಮಪಲ್ಲಟನೆ ಹಾಗೂ ಸಂಯೋ ಜನೆಗಳ ಮೂಲಕ ವೈವಿಧ್ಯಮಯ ಸಂವೇದನೆಗಳು ಏರ್ಪಡುತ್ತವೆ.

? ಕಾರಣಗಳು: ಮಿಶ್ರ ಸಂವೇದನೆಯು ಏಕೆ ಸಂಭವಿಸುತ್ತದೆ ಅಥವಾ ಹೇಗೆ ಸಂಭವಿಸುತ್ತದೆ ಎನ್ನುವ ಪ್ರಶ್ನೆಗೆ ‘ಇದಮಿತ್ಥಂ’ ಎನ್ನುವ ಉತ್ತರವು ದೊರೆತಿಲ್ಲ.

ಆದರೂ ತಾರ್ಕಿಕವಾಗಿ ಸರಿಯೆನಿಸಬಹುದಾದ ಸಿದ್ಧಾಂತಗಳನ್ನು ಮಂಡಿಸಿರುವುದುಂಟು. ಅವುಗಳನ್ನು ಸ್ಥೂಲವಾಗಿ ಗಮನಿಸೋಣ.

ನಮ್ಮ ಮಿದುಳಿನಲ್ಲಿ ಸುಮಾರು ೫೨ಕ್ಕೂ ಹೆಚ್ಚಿನ ವಿಶಿಷ್ಟ ಕ್ಷೇತ್ರಗಳು ಇರುವುದಾಗಿ ಕೋರ್ಬಿನಿಯನ್ ಬ್ರಾಡ್ಮನ್ (1868-1918) 20ನೆಯ ಶತಮಾನದಲ್ಲಿ ತಿಳಿಸಿದ್ದ. ಈ ಒಂದೊಂದು ಕ್ಷೇತ್ರವೂ ಒಂದೊಂದು ವಿಶಿಷ್ಟ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತವೆ. ಉದಾ: ನಾವು ನೋಡುವ ನೋಟವನ್ನು ಅರ್ಥೈಸುವ ದೃಶ್ಯ ಕ್ಷೇತ್ರ ಅಥವಾ ನಾವು ಕೇಳುವ ಶಬ್ದಗಳನ್ನು ಅರ್ಥೈಸುವ ಶ್ರವಣ ಕ್ಷೇತ್ರಗಳು ಇತ್ಯಾದಿ. ಈಗ ಫಂಕ್ಷನಲ್ ಎಂಆರ್‌ಐ ಹಾಗೂ ಡಿಫ್ಯೂಶನ್ ಟೆನ್ಸಾರ್ ಇಮೇಜಿಂಗ್ ಮುಂತಾದ ಹೊಸ ತಪಾಸಣಾ ಅನುಕೂಲತೆ ಗಳು ದೊರೆತಿರುವ ಕಾರಣ 52 ಎನ್ನುವ ಹಳೆಯ ಸಂಖ್ಯೆಯು 180ಕ್ಕೆ ಹೆಚ್ಚಿದೆ.

ಒಂದು ಅರೆಗೋಳದಲ್ಲಿ 180 ಕೇಂದ್ರಗಳೆಂದರೆ, ಎರಡೂ ಅರೆಗೋಳಗಳಲ್ಲಿ ಒಟ್ಟು 360 ಕೇಂದ್ರಗಳಿವೆ ಎಂದಾ ಯಿತು. ಈ ಎಲ್ಲ ಕೇಂದ್ರಗಳು ಮಿದುಳಿನ ತೊಗಟೆಯಲ್ಲಿ (ಕಾರ್ಟೆಕ್ಸ್) ಇವೆ. ತೊಗಟೆಯ ತಳದಲ್ಲಿ ಇರುವ ಹೈಪೋಥಲಾಮಸ್, ಬೇಸಲ್ ಗ್ಯಾಂಗ್ಲಿಯ, ಹಿಪ್ಪೋ ಕ್ಯಾಂ ಪಸ್, ಅಮಿಗ್ಡಲ ಮುಂತಾದ ಅಂಗಗಳಲ್ಲಿರುವ ಕ್ಷೇತ್ರಗಳನ್ನು/ನರಕೇಂದ್ರಗಳನ್ನು

ಇದರಲ್ಲಿ ಸೇರಿಸಿಲ್ಲ. ಅವು ಎಷ್ಟಿವೆ ಎನ್ನುವುದರ ಬಗ್ಗೆ ಸಂಶೋಧನೆಗಳು ಇಂದಿಗೂ ನಡೆ ಯುತ್ತಿವೆ. ಜ್ಞಾನೇಂದ್ರಿಯಗಳಿಂದ ನರಗಳು ಈ ಕ್ಷೇತ್ರ ಗಳಿಗೆ ನರಗಳು ಬರುವ ಹಾಗೆ, ಈ ಕ್ಷೇತ್ರದಿಂದ ಜ್ಞಾನೇಂದ್ರಿಯಗಳಿಗೂ ನರಗಳು ಸಾಗುತ್ತವೆ. ಇವನ್ನು ನರಪಥ ಗಳು (ನ್ಯೂರಲ್ ಪಾಥ್) ಎಂದು ಕರೆಯುತ್ತೇವೆ.

ಬೆರಕೆಯ ಪ್ರಚೋದನೆಯ ಸಿದ್ಧಾಂತ (ಕ್ರಾಸ್ ಆಕ್ಟಿವೇಶನ್ ಥಿಯರಿ): ಒಂದು ಕ್ಷೇತ್ರವು ಮತ್ತೊಂದು ಕ್ಷೇತ್ರದೊಡನೆ ಹರಟೆ ಹೊಡೆಯುವುದು. ಗ್ರಾಫೀಮ್-ಕಲರ್ ಸೈನೆಸ್ಥೀ ಸಿಯ ವನ್ನು ಪರಿಶೀಲಿಸೋಣ. ಮಿದುಳಿನಲ್ಲಿ ಅಕ್ಷರ ಗಳನ್ನು ಹಾಗೂ ಸಂಖ್ಯೆಗಳನ್ನು ಗುರುತಿ ಸುವ ಕೇಂದ್ರವು ಮಿದುಳಿನ ‘ಫ್ಯೂಸಿ-ರಂ ಗೈರಸ್’ ಎಂಬ ಭಾಗದಲ್ಲಿರುತ್ತದೆ. ಇದಕ್ಕೆ ಅತ್ಯಂತ ಸನಿಹದಲ್ಲಿಯೇ ಬಣ್ಣಗಳನ್ನು ತಿಳಿಸುವ ‘ವಿ 4’ ಎಂಬ ಕೇಂದ್ರವಿದೆ. ಈ ಎರಡೂ ಕೇಂದ್ರಗಳು ನರಗಳು ಪರಸ್ಪರ ಬೆರೆತುಕೊಂಡರೆ, ಒಂದು ಮತ್ತೊಂದನ್ನು ಪ್ರಚೋದಿಸ ಬಲ್ಲುದು. ಅಕ್ಷರಗಳು, ಅಂಕಿ ಸಂಖ್ಯೆಗಳೆಲ್ಲ ಬಣ್ಣ ಬಣ್ಣವಾಗಿ ಕಾಣುತ್ತವೆ.

ನಿಯಂತ್ರಣ ರಹಿತ ಪ್ರತಿಕ್ರಿಯಾ ಸಿದ್ಧಾಂತ: ನಮ್ಮ ದೇಹದಲ್ಲಿ ಎರಡು ಕ್ರಿಯೆಗಳು ಪರಸ್ಪರ ಸಹಕಾರದೊಡನೆ ಕೆಲಸವನ್ನು ಮಾಡುತ್ತವೆ. ನಾನು ಮೊಳಕೈಯನ್ನು ಮಡಚ ಬಲ್ಲೆ. ಮಡಚಿದ ಕೈಯನ್ನು ನೀಟಬಲ್ಲೆ. ಮಡಚಲು ಹಾಗೂ ನೀಟಲು ವಿಶಿಷ್ಟ ಗುಂಪಿನ ಸ್ನಾಯುಗಳಿವೆ. ನಾನು ಕೈಯನ್ನು ಮಡಚುವಾಗ, ನೀಟಿಸುವ ಸ್ನಾಯುಗಳು ವಿಶ್ರಾಂತ ಸ್ಥಿತಿ ಯಲ್ಲಿ ಇರಬೇಕಾಗುತ್ತದೆ. ಹಾಗೆ ನೀಟುವಾಗ ಮಡಚುವ ಸ್ನಾಯುಗಳು ವಿಶ್ರಾಂತಿಯನ್ನು ಪಡೆಯಬೇಕಾಗುತ್ತದೆ. ಒಂದು ವೇಳೆ ಎರಡೂ ಸ್ನಾಯುಗಳು ಒಟ್ಟಿಗೆ ಸಕ್ರಿಯವಾದರೆ!? ಇಂತಹದ್ದೆ ಪ್ರಕ್ರಿಯೆ ಮಿದುಳಿನ ನರಗಳಲ್ಲಿ ನಡೆಯುತ್ತದೆ. ಹಾಗಾಗಿ ವಿ-4 ಜಾಗೃತವಾಗಿ ದ್ದಾಗ, ಫ್ಯೂಸಿ-ರಂ ಗೈರಸ್ ವಿಶ್ರಾಂತವಾಗಿರಬೇಕು. ಆ ನಿಯಂತ್ರಣವು ತಪ್ಪಿದರೆ, ಎರಡೂ ಭಾಗಗಳು ಜಾಗೃತವಾಗಿ ಅಕ್ಷರಗಳು ಬಣ್ಣ ಬಣ್ಣವಾಗಿ ಕಾಣುತ್ತವೆ.

ಇವಲ್ಲದೆ ನರತಂತುಗಳ ಸಂಖ್ಯೆಯಲ್ಲಿ ಅಸಹಜ ಹೆಚ್ಚಳ ಹಾಗೂ ಹೆಚ್ಚಿದ ಚಟುವಟಿಕೆ (ಎನ್‌ಹಾನ್ಸ್‌ಡ್ ಕನೆಕ್ಟಿವಿಟಿ), ನಾವು ಉದ್ಯಾನದಲ್ಲಿ ಬಾತುಕೋಳಿಯನ್ನು ಹೋಲುವ ಗಿಡವನ್ನು ಬೆಳೆಸಬೇಕಾದರೆ, ಅ ಗಿಡವನ್ನು ಕಾಲಕಾಲಕ್ಕೆ ಸವರುತ್ತಿರಬೇಕಾಗುತ್ತದೆ (ಪ್ರೂನಿಂಗ್). ನಾವು ಬೆಳೆಯುತ್ತಿರುವಂತೆಯೇ ನಮ್ಮ ಮಿದುಳಿನಲ್ಲಿ ಅನಗತ್ಯ ನರಗಳನ್ನು ‘ಸವರುವ’ ವ್ಯವಸ್ಥೆಯು ಇರುತ್ತದೆ. ಇದು ಸಮರ್ಪಕವಾಗಿ ನಡೆಯದಿದ್ದರೆ, ಅದು ಮಿಶ್ರ ಸಂವೇದನೆಗೆ ಕಾರಣವಾಗುತ್ತವೆ.

ಇದು ಆನುವಂಶಿಕ ವಾಗಿ ಕೆಲವು ಕುಟುಂಬಗಳಲ್ಲಿ ಕಂಡುಬರುತ್ತದೆ. ನರರಾಸಾಯನಿಕ ಗಳು ಉದಾ: ಸೆರಟೋನಿನ್ ಏರುಪೇರಿ ನಿಂದಲೂ ಹೀಗಾಗಬಹುದೆಂಬ ಸಿದ್ಧಾಂತವಿದೆ. ಆದರೆ ಯಾವುದೂ ಪರಿಪೂರ್ಣವಾಗಿ ಋಜುವಾತಾಗಿಲ್ಲ.

ಸೃಜನಶೀಲತೆ: ಕವಿಗಳು, ಸಾಹಿತಿಗಳು, ಕಲಾವಿದರು, ಸಂಗೀತಗಾರರು ಮುಂತಾದ ಸೃಜಶೀಲ ಕ್ಷೇತ್ರಗಳಲ್ಲಿ ತೊಡಗಿಕೊಂಡವರಲ್ಲಿ ಮಿಶ್ರ ಸಂವೇದನೆಯು ಹೆಚ್ಚಿಗೆ ಕಂಡು ಬರುವುದನ್ನು ಮೊದಲಿನಿಂದಲೂ ಗಮನಿಸಲಾಗಿದೆ. ಈ ಮಿಶ್ರಸಂವೇದನೆಯನ್ನು ಕೃತಕವಾಗಿ ಉದ್ದೀಪಿಸಿ, ಏಕಕಾಲಕ್ಕೆ ಹಲವು ಕೆಲಸಗಳನ್ನು ನಿರ್ವಹಿಸಬಲ್ಲ ದಿಶೆಯಲ್ಲಿ ಸಂಶೋಧನೆಗಳು ನಡೆಯುತ್ತಿವೆ. ಇದು ಒಂದು ಲಕ್ಷ ಜನರಲ್ಲಿ ಒಂದರಿಂದ ನಾಲ್ವರಲ್ಲಿ ಕಂಡುಬರಬಹುದು ಎನ್ನಲಾಗಿದೆ. ಇದು ಕಾಯಿಲೆಯಲ್ಲ.

ಹಾಗಾಗಿ ಚಿಕಿತ್ಸೆಯ ಅಗತ್ಯವಿಲ್ಲ. ಇದೊಂದು ಅಂಗರಚನಾ ಹಾಗೂ ಅಂಗಕ್ರಿಯಾ ವೈಪರೀತ್ಯ ಎನ್ನಬಹುದು. ಕೆಲವು ಔಷಧಗಳ ಸೇವನೆ ಹಾಗೂ ವಶೀಕರಣದ (ಹಿಪ್ನೋಸಿಸ್) ಮೂಲಕ ತಾತ್ಕಾಲಿಕವಾಗಿ ಮಿಶ್ರ ಸಂವೇದನೆಯನ್ನುಂಟುಮಾಡಬಹುದು ಎನ್ನಲಾಗಿದೆ.

ಚಿನ್ನದ ಬಣ್ಣ: ಓಂಕಾರಕ್ಕೆ ಚಿನ್ನದ ಬಣ್ಣವಿದೆ, ‘ಕ’ಕಾರಕ್ಕೆ ಕೆಂಪು ಬಣ್ಣವಿದೆ, ‘ಚ’ಕಾರಕ್ಕೆ ನೀಲಿ ಬಣ್ಣವಿದೆ, ‘ಟ’ಕಾರಕ್ಕೆ ಹಸಿರು ಬಣ್ಣವಿದೆ, ‘ಪ’ಕಾರಕ್ಕೆ ಹಳದಿ ಬಣ್ಣವಿದೆ ಎಂಬ ವಿಚಾರವು ತಂತ್ರಶಾಸ್ತ್ರದಲ್ಲಿ ಇರುವ ಬಗ್ಗೆ ವಿವರಿಸಿದ್ದೆ. ಅದು ಮಿಶ್ರ ಸಂವೇದನೆಗೆ ಉದಾ ಹರಣೆಯೇ ಎಂದು ಕೇಳಿದರೆ, ಖಂಡಿತಾ ಇಲ್ಲವೆನ್ನುತ್ತೇನೆ. ಇದು ಶುದ್ಧ ಅಧ್ಯಾತ್ಮ ಕ್ಷೇತ್ರಕ್ಕೆ ಸಂಬಂಧಿಸಿದ್ದು. ಗುರು ಮಾರ್ಗದರ್ಶನದಲ್ಲಿ ಸಾಧನೆ ಮಾಡಿದವರಿಗೆ ಲಭಿಸುವಂಥದ್ದು ಎಂದು ಕೇಳಿದ್ದೇನೆ.

ಆದರೆ ಮಿಶ್ರ ಸಂವೇದನೆಯು ಶುದ್ಧ ವಿಜ್ಞಾನ. ಕೆಲವರಲ್ಲಿ ಮಾತ್ರ ಕಂಡುಬರುವಂಥದ್ದು. ಅವರ ಮಿದುಳಿನಲ್ಲಿರುವ ಸಹಜ ವೈಪರೀತ್ಯಗಳೇ ಈ ಅಸಹಜ ಅನುಭವಗಳಿಗೆ ಕಾರಣ ವಾಗಿರುತ್ತದೆ.