ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishweshwar Bhat Column: ಇಳಿದು ಬಾ ತಾಯಿ ಇಳಿದು ಬಾ, ಸಂತೇಶಿವರಕ್ಕೆ ಹರಿದು ಬಾ !

ನಾನು ನನ್ನ ಹುಟ್ಟಿದ ಊರಿಗೆ ಋಣ ಸಂದಾಯ ಮಾಡಬೇಕು’ ಎಂದು ಡಾ.ಭೈರಪ್ಪನವರು ಆರಂಭಿಸಿದರು. ‘ಇದು ನನ್ನ ಪಾಲಿಗೆ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆ. ಇದಕ್ಕೆ ಸುಮಾ ರು 25 ಕೋಟಿ ತಗುಲಬಹುದು ಎಂದು ಅಂದಾಜು ಮಾಡಲಾಗಿದೆ. ನೀವು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಳಿ ಈ ವಿಷಯ ಪ್ರಸ್ತಾಪ ಮಾಡಲು ಸಾಧ್ಯವಾ?’ ಎಂದು ಕೇಳಿದರು. ಅದಕ್ಕೆ ನಾನು ‘ಖಂಡಿತ ಮಾಡುತ್ತೇನೆ’ ಎಂದು ಹೇಳಿದೆ

ಇಳಿದು ಬಾ ತಾಯಿ ಇಳಿದು ಬಾ, ಸಂತೇಶಿವರಕ್ಕೆ ಹರಿದು ಬಾ !

ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್‌ ಅಂಕಣ

ನೂರೆಂಟು ವಿಶ್ವ

ಸುಮಾರು ಮೂರು ವರ್ಷಗಳ ಹಿಂದೆ... ಒಂದು ದಿನ ಡಾ.ಎಸ್.ಎಲ.ಭೈರಪ್ಪನವರು, ‘ಭಟ್ರೇ, ನಾನು ಒಂದು ಮುಖ್ಯವಾದ ವಿಷಯ ನಿಮ್ಮೊಂದಿಗೆ ಮಾತಾಡಬೇಕಿತ್ತು’ ಎಂದು ಹೇಳಿದರು. ‘ಸಾರ್, ದಯವಿಟ್ಟು ಹೇಳಿ’ ಎಂದೆ. ‘ನಾನು ಅನೇಕರಿಗೆ ಹೇಳಿದೆ. ಎಲ್ಲಿಂದಲೂ ಅಷ್ಟೇನೂ ಸಮಾಧಾನದ ಪ್ರತಿಕ್ರಿಯೆ ಸಿಗಲಿಲ್ಲ. ಕೊನೆಗೆ ಬಹಳ ಯೋಚನೆ ಮಾಡಿ ಈ ವಿಷಯವನ್ನು ನಿಮಗೆ ಹೇಳುತ್ತಿದ್ದೇನೆ. ಇದು ನಿಮ್ಮಿಂದ ಸಾಧ್ಯ, ಮಾಡಿ ಕೊಡ್ತೀರಾ?’ ಎಂದು ಕೇಳಿದರು. ಡಾ.ಭೈರಪ್ಪನವರು ಎಂದೂ ಹಾಗೆ ಕೇಳಿದವರಲ್ಲ. ಅದಕ್ಕಿಂತ ಮುಖ್ಯವಾಗಿ ಅವರ ವಿಷಯದಲ್ಲಿ ನಾನು ಮುಂಗಾಲಪುಟಕಿ. ಅವರು ಕೇಳೋದು ಹೆಚ್ಚಾ? ನಾನು ಮಾಡೋದು ಹೆಚ್ಚಾ? ‘ನಾನು ಹುಟ್ಟಿದ ಚನ್ನರಾಯಪಟ್ಟಣ ತಾಲೂಕಿನ ಸಂತೇ ಶಿವರ ಮತ್ತು ಸುತ್ತ ಮುತ್ತಲ ಮೂವತ್ತು ಗ್ರಾಮಗಳಿಗೆ ನೀರು ಪೂರೈಸುವ ಯೋಜನೆಯನ್ನು ಈಡೇರಿಸಬೇಕಾ ದುದು ನನ್ನ ಕರ್ತವ್ಯ.

ನಾನು ನನ್ನ ಹುಟ್ಟಿದ ಊರಿಗೆ ಋಣ ಸಂದಾಯ ಮಾಡಬೇಕು’ ಎಂದು ಡಾ.ಭೈರಪ್ಪನವರು ಆರಂಭಿಸಿದರು. ‘ಇದು ನನ್ನ ಪಾಲಿಗೆ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆ. ಇದಕ್ಕೆ ಸುಮಾರು 25 ಕೋಟಿ ತಗುಲಬಹುದು ಎಂದು ಅಂದಾಜು ಮಾಡಲಾಗಿದೆ. ನೀವು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಳಿ ಈ ವಿಷಯ ಪ್ರಸ್ತಾಪ ಮಾಡಲು ಸಾಧ್ಯವಾ?’ ಎಂದು ಕೇಳಿದರು. ಅದಕ್ಕೆ ನಾನು ‘ಖಂಡಿತ ಮಾಡುತ್ತೇನೆ’ ಎಂದು ಹೇಳಿದೆ. ಆದರೆ ನನ್ನ ಕೆಲಸ-ಕಾರ್ಯಗಳ ಮಧ್ಯದಲ್ಲಿ ಕಳೆದುಹೋದೆ. ಒಂದೆರಡು ಬಾರಿ ಬೊಮ್ಮಾಯಿ ಯವರನ್ನು ಭೇಟಿ ಮಾಡಿದರೂ, ಈ ವಿಷಯ ಪ್ರಸ್ತಾಪಿಸಲು ಆಗಲಿಲ್ಲ. ಪ್ರಾಯಶಃ ಅದಕ್ಕೆ ಪೂರಕ ಸನ್ನಿವೇಶ, ಪರಿಸ್ಥಿತಿ ಒದಗಿ ಬಂದಿರಲಿಲ್ಲ.

ಇದನ್ನೂ ಓದಿ: Vishweshwar Bhat Column: ಚಪ್ಪಲಿ ಬಿಟ್ಟು ಒಳಬನ್ನಿ

ಆದರೆ ಡಾ.ಭೈರಪ್ಪನವರು ಮಾತ್ರ ಪ್ರತಿ ವಾರ ಫೋನ್ ಮಾಡಿ ನೆನಪಿಸುತ್ತಲೇ ಇದ್ದರು. ಒಂದು ದಿನ ನನ್ನ ಎಲ್ಲ ಕೆಲಸಗಳನ್ನು ಬದಿಗಿರಿಸಿ, ಬೊಮ್ಮಾಯಿ ಅವರ ಮನೆಗೆ ಹೋದೆ. ‘ಸಾರ್, ಡಾ.ಭೈರಪ್ಪ ಅವರು ಒಂದು ವಿಶೇಷ ಮನವಿ ಮಾಡಿಕೊಂಡಿದ್ದಾರೆ. ಅವರು ನಿಮ್ಮನ್ನು ಭೇಟಿ ಮಾಡಬೇಕಂತೆ. ಅರ್ಧ ಗಂಟೆ ಸಮಯ ಕೋರಿದ್ದಾರೆ. ನೀವು ಹೇಳಿದರೆ ಅವರು ಮೈಸೂರಿನಿಂದ ಬರುತ್ತಾರೆ. ಅವರಿಗೆ ಈಗ (ಮೂರು ವರ್ಷಗಳ ಹಿಂದೆ) ತೊಂಬತ್ತು ವರ್ಷ. ನಿಮ್ಮನ್ನು ಭೇಟಿ ಮಾಡುವುದನ್ನು ಬಿಟ್ಟರೆ ಅವರಿಗೆ ಬೇರೆ ಕೆಲಸ ಇಲ್ಲ.

ಹೀಗಾಗಿ ನೀವು ಅವರಿಗಾಗಿಯೇ ಅರ್ಧ ಗಂಟೆ ಸಮಯ ನೀಡಬೇಕು’ ಎಂದಾಗ ಬೊಮಾಯಿ ಯವರು ಸಕಾರಾತ್ಮಕ ವಾಗಿ ಪ್ರತಿಕ್ರಿಯಿಸಿದರು. ‘ಅದಕ್ಕಾಗಿ ಅವರೇ ಬರುತ್ತಾರಾ? ಬೇಕಾದರೆ ನಾನು ಮೈಸೂರಿಗೆ ಹೋದಾಗ ಅವರನ್ನು ಭೇಟಿ ಮಾಡುತ್ತೇನೆ’ ಎಂದರು ಮುಖ್ಯಮಂತ್ರಿ ಗಳು.

‘ಇಲ್ಲ.. ಅವರೇ ಇಲ್ಲಿ ಬಂದು ನಿಮ್ಮನ್ನು ಭೇಟಿ ಮಾಡುತ್ತಾರೆ’ ಎಂದು ಹೇಳಿದೆ. ಅದಕ್ಕೆ ತಕ್ಷಣ ಸಮ್ಮತಿಸಿದ ಮುಖ್ಯಮಂತ್ರಿಗಳು, ಯಾವ ದಿನ, ಯಾವ ಸಮಯಕ್ಕೆ ಕರೆದುಕೊಂಡು ಬರಬೇಕು ಎಂಬುದನ್ನು ಹೇಳಿದರು.

ಆ ದಿನ ಬೆಳಗ್ಗೆ ನಂಜನಗೂಡು ಮೋಹನ್ ಅವರು ಒಂದು ಕಾರನ್ನು ವ್ಯವಸ್ಥೆ ಮಾಡಿ, ತಮ್ಮ ಮಗ ಪ್ರದ್ಯುಮ್ನನನ್ನು ಡಾ.ಭೈರಪ್ಪನವರೊಂದಿಗೆ ಜತೆ ಮಾಡಿ, ಬೆಂಗಳೂರಿನಲ್ಲಿ ರುವ ನನ್ನ ಮನೆಗೆ ಕರೆದುಕೊಂಡು ಬಂದರು. ನಮ್ಮ ಮನೆಯಲ್ಲಿ ಉಪಾಹಾರ ಸೇವಿಸಿ, ಮುಖ್ಯಮಂತ್ರಿ ಬೊಮ್ಮಾಯಿ ಮನೆಗೆ ತೆರಳಿದೆವು. ಬೊಮ್ಮಾಯಿ ಅವರು ನಮಗಾಗಿ ಕಾಯುತ್ತಲೇ ಇದ್ದರು.

ಅವರನ್ನು ಭೇಟಿ ಮಾಡಲು ಸುಮಾರು ನೂರಾರು ಜನ ಕಾಯುತ್ತಿದ್ದರು. ಆ ಪೈಕಿ ಅವರ ಪಕ್ಷದ ಶಾಸಕರು ಮತ್ತು ಮಂತ್ರಿಗಳೂ ಇದ್ದರು. ಅವರೆಲ್ಲರ ಕಡೆ ನೋಡಿ, ‘ನಾನು ಇನ್ನು ಒಂದು ಗಂಟೆ ಸಿಗಲಾರೆ, ಡಾ.ಭೈರಪ್ಪನವರನ್ನು ಕಾಣಬೇಕಿದೆ’ ಎಂದು ಹೇಳಿ, ‘ನನಗೆ ಯಾರೂ ಡಿಸ್ಟರ್ಬ್ ಮಾಡಬೇಡಿ, ತೀರಾ ತುರ್ತಿನ ಸಂದರ್ಭವನ್ನು ಹೊರತುಪಡಿಸಿ’ ಎಂದು ತಮ್ಮ ಸಹಾಯಕರಿಗೆ ಹೇಳಿ ಬಾಗಿಲು ಹಾಕಿಸಿದರು.

ಕಾಲೇಜು ದಿನಗಳಿಂದ ಬೊಮ್ಮಾಯಿಯವರು ಡಾ.ಭೈರಪ್ಪನವರ ಕಾದಂಬರಿಗಳನ್ನು ಓದಿಕೊಂಡಿದ್ದರೂ, ಅವರನ್ನು ಮುಖಾಮುಖಿ ಭೇಟಿ ಮಾಡುತ್ತಿದ್ದುದು ಅದೇ ಮೊದಲು. ಬೊಮ್ಮಾಯಿ ಅವರು ಡಾ.ಭೈರಪ್ಪನವರಿಗೆ ಖುದ್ದಾಗಿ ಕಾಫಿ ಸುರುವಿ ಕೊಟ್ಟರು. ಡಾ.ಭೈರಪ್ಪನವರ ಸಾಹಿತ್ಯವನ್ನು ತಮ್ಮ ಗ್ರಹಿಕೆಯ ನೆಲೆಯಲ್ಲಿ ಬೊಮ್ಮಾಯಿಯವರು ವ್ಯಾಖ್ಯಾನಿಸಿದರು. ‘ಪರ್ವ’ ಕಾದಂಬರಿಯ ಬಗ್ಗೆ ಬೊಮ್ಮಾಯಿ ಹೇಳಿದ ಮಾತುಗಳು ಡಾ.ಭೈರಪ್ಪನವರಿಗೆ ಅಚ್ಚರಿ ಮೂಡಿಸಿತು.

‘ಈ ರಾಜಕಾರಣದ ಜಂಜಡಗಳ ಮಧ್ಯೆಯೂ ನೀವು ನನ್ನ ಕೃತಿಯನ್ನು ಓದಿದ್ದೀರಲ್ಲ?’ ಎಂದು ಸಂತೋಷ ವ್ಯಕ್ತಪಡಿಸಿದರು. ಅನಂತರ ಡಾ.ಭೈರಪ್ಪನವರು ತಾವು ಬಂದ ಕಾರಣ ವನ್ನು ಸಾದ್ಯಂತವಾಗಿ ವಿವರಿಸಿದರು. ಅವರ ಮಾತುಗಳನ್ನು ತದೇಕಚಿತ್ತದಿಂದ ಬೊಮ್ಮಾ ಯಿಯವರು ಕೇಳಿಸಿಕೊಂಡರು.

ಡಾ.ಭೈರಪ್ಪನವರು ಕೊಟ್ಟ ಮನವಿ ಪತ್ರದ ಮೇಲೆ, ‘ಆದ್ಯತೆ ಮೇರೆಗೆ ಈ ಯೋಜನೆಗೆ 25 ಕೋಟಿ ರುಪಾಯಿಯನ್ನು ಬಿಡುಗಡೆ ಮಾಡುವುದು’ ಎಂದು ಬರೆದು ಕೆಳಗೆ ರುಜು ಹಾಕಿ, ತಮ್ಮ ಸಹಾಯಕನನ್ನು ಕರೆದು, ‘ಈ ಅರ್ಜಿಯನ್ನು ನೀವೇ ಫಾಲೋ ಅಪ್ ಮಾಡಬೇಕು ಮತ್ತು ಕಾಲಕಾಲಕ್ಕೆ ನನಗೆ ತಿಳಿಸಬೇಕು’ ಎಂದು ಹೇಳಿದರು. ಈ ಒಂದು ಗಂಟೆಯ ಅವಧಿ ಯಲ್ಲಿ ಬೊಮ್ಮಾಯಿಯವರು ಯಾರನ್ನೂ ಭೇಟಿ ಮಾಡಲಿಲ್ಲ ಮತ್ತು ಒಂದೇ ಒಂದು ಫೋನ್ ಕರೆಯನ್ನೂ ಸ್ವೀಕರಿಸಲಿಲ್ಲ.

ನಂತರ ಡಾ.ಭೈರಪ್ಪನವರನ್ನು ಕಾರಿನ ತನಕ ಬಂದು ಹತ್ತಿಸಿ ಆತ್ಮೀಯವಾಗಿ ಬೀಳ್ಕೊಟ್ಟರು. ರಾಜ್ಯದ ಮುಖ್ಯಮಂತ್ರಿಯೊಬ್ಬರು ಡಾ.ಭೈರಪ್ಪನವರನ್ನು ನಡೆಸಿಕೊಂಡ ಪರಿ ಅದು. ಬೊಮ್ಮಾಯಿ ಅವರ ನಡೆ ಡಾ.ಭೈರಪ್ಪನವರಲ್ಲಿ ವಿಶೇಷ ಸಂತಸ, ಸಮಾಧಾನವನ್ನು ತಂದಿತ್ತು.

ಆದಾಗಿ ಎರಡು ತಿಂಗಳು ಕಳೆದು ಹೋಯಿತು. ನಾನು ಬೊಮ್ಮಾಯಿಯವರ ವಿಶೇಷ ಕರ್ತವ್ಯಾಧಿಕಾರಿ ರಂಗರಾಜು ಅವರ ಸಂಪರ್ಕದಲ್ಲಿದ್ದೆ. ಅವರು ಆ ಫೈಲಿನ ಜಾಡಿನ ಮೇಲೆ ಕಣ್ಣಿಟ್ಟಿದ್ದರು. ಇಷ್ಟಾಗಿಯೂ ನಿರೀಕ್ಷಿತ ಪ್ರಗತಿ ಕಾಣಲಿಲ್ಲ. ಆದರೆ ಡಾ.ಭೈರಪ್ಪನವರು ಮಾತ್ರ ಹತ್ತು ದಿನಕ್ಕೊಮ್ಮೆ ನನಗೆ ಫೋನ್ ಮಾಡಿ ವಿಚಾರಿಸುತ್ತಿದ್ದರು. ಅವರ ಮಗ ಉದಯ ಶಂಕರ ಕೂಡ ಆ ಫೈಲಿ ಹಿಂದೆ ಬಿದ್ದಿದ್ದರು. ಅವರು ಸಹ ನನಗೆ ಆಗಾಗ ಫೋನ್ ಮಾಡಿ ಫಾಲೋ ಅಪ್ ಮಾಡುತ್ತಿದ್ದರು. ಈ ಮಧ್ಯೆ ಒಮ್ಮೆ ಬೊಮ್ಮಾಯಿಯವರನ್ನು ಭೇಟಿಯಾದಾಗ, ’ಡಾ.ಭೈರಪ್ಪನವರ ಅರ್ಜಿ ಬಗ್ಗೆ ನೀವು ಸ್ವಲ್ಪ ಗಮನಹರಿಸ ಬೇಕಿತ್ತು.

ಫೈಲ್ ಓಡಾಟ ನಿರೀಕ್ಷಿತ ವೇಗವನ್ನು ಪಡೆಯುತ್ತಿಲ್ಲ. ಈಗಾಗಲೇ ಡಾ.ಭೈರಪ್ಪನವರು ನಿಮ್ಮನ್ನು ಭೇಟಿಯಾಗಿ ನಾಲ್ಕು ತಿಂಗಳುಗಳಾದವು. ಅವರು ಆಗಾಗ ಫೋನ್ ಮಾಡುತ್ತಾ ಕೇಳುತ್ತಿರುತ್ತಾರೆ’ ಎಂದೆ. ಅವರು ತಮ್ಮ ಸಹಾಯಕರನ್ನು ಕರೆದು, ‘ಈ ವಿಷಯದಲ್ಲಿ ಯಾವ ಕಾರಣವನ್ನೂ ಹೇಳುವಂತಿಲ್ಲ. ಇದನ್ನು ಆದ್ಯತೆ ಮೇರೆಗೆ ಮಾಡುವಂತೆ ಹೇಳಿದ್ದಾನಲ್ಲ? ಆದರೂ ಯಾಕೆ ವಿಳಂಬವಾಗುತ್ತಿದೆ?’ ಎಂದು ಗದರಿದರು.

ಮುಖ್ಯಮಂತ್ರಿಗಳು ಎಷ್ಟೇ ವೇಗವಾಗಿ ಹೋಗಲು ಬಲವಾಗಿ ಎಕ್ಸಿಲರೇಟರ್ ತುಳಿದರೂ, ಸರಕಾರಿ ವಾಹನ ಒಂದು ವೇಗವನ್ನು ಮೀರಿ ಓಡುವುದಿಲ್ಲ. ಕಾರಣ ಅದು ಕ್ರಮಿಸುವುದೇ ಗಂಟೆಗೆ ಇಪ್ಪತ್ತು ಕಿಮೀ ವೇಗದಲ್ಲಿ. ಹೀಗಿರುವಾಗ ಅದು ನೂರೈವತ್ತು ಕಿಮೀ ವೇಗದಲ್ಲಿ ಚಲಿಸಬೇಕು ಎಂದು ನಿರೀಕ್ಷಿಸುವುದು ತಪ್ಪು. ಅದು ಸಾಧ್ಯವೂ ಇಲ್ಲ. ಆದರೆ ಗಂಟೆಗೆ ಇಪ್ಪತ್ತು ಕಿಮೀ ವೇಗದದರೂ, ಎಲ್ಲೂ ನಿಲ್ಲದಂತೆ ಚಲಿಸುವುದು ಸಾಧ್ಯವಿದೆ.

ಆದರೆ ಡಾ.ಭೈರಪ್ಪನವರು ಕೊಟ್ಟ ಫೈಲನ್ನು ಹುಡುಕುವುದೇ ದೊಡ್ಡ ಕೆಲಸವಾಗಿತ್ತು. ಅದರ ಬೆಂಬತ್ತಿ ಹೋಗುವವರು ಯಾರೂ ಇರಲಿಲ್ಲ. ಅದರ ಹಿಂದೆ ಶಾಸಕರಾಗಲಿ, ರಾಜಕಾರಣಿ ಗಳಾಗಲಿ ಇರಲಿಲ್ಲ. ಅಧಿಕಾರಿಗಳಿಗೂ ಯಾವ ಆಸಕ್ತಿಯೂ ಇರಲಿಲ್ಲ. ಆದರೆ ಡಾ.ಭೈರಪ್ಪನ ವರು ಹಿಡಿದ ಪಟ್ಟು ಬಿಟ್ಟಿರಲಿಲ್ಲ. ವಾರಕ್ಕೆ, ಹತ್ತು ದಿನಗಳಿಗೊಮ್ಮೆ ನನಗೆ ಫೋನ್ ಮಾಡುತ್ತಲೇ ಇದ್ದರು. ನಾನು ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿ ಹಿಂದೆ ಬಿದ್ದಿದ್ದೆ.

ಇನ್ನೊಂದು ಸಂದರ್ಭದಲ್ಲಿ, ಬೊಮ್ಮಾಯಿಯವರ ಜತೆ ಕುಳಿತು ಊಟ ಮಾಡುವಾಗ, ಈ ವಿಷಯವನ್ನು ಪ್ರಸ್ತಾಪಿಸಿದೆ. ‘ಡಾ.ಭೈರಪ್ಪನವರು ನಿಮ್ಮನ್ನು ಭೇಟಿ ಮಾಡಿ ಆರು ತಿಂಗಳು ಕಳೆದುಹೋಯಿತು. ಆದರೆ ಕೆಲಸವಿನ್ನೂ ಆಗಿಲ್ಲ’ ಎಂದೆ. ಅವರು ತಕ್ಷಣ ತಮ್ಮ ಆಪ್ತ ಸಹಾಯಕನಿಗೆ ಫೋನ್ ಮಾಡಿ ಚೆನ್ನಾಗಿ ಕ್ಲಾಸ್ ತೆಗೆದುಕೊಂಡರು.

‘ಇನ್ನೊಂದು ವಾರ ಸಮಯ ಕೊಡುತ್ತೇನೆ. ಅಷ್ಟರೊಳಗೆ ಆಗದಿದ್ದರೆ ಸುಮ್ಮನಿರುವುದಿಲ್ಲ’ ಎಂದು ಗದರಿದರು. ಅಲ್ಲಿ ತನಕ ಯಾವುದೋ ಕಾಲುದಾರಿಯಲ್ಲಿದ್ದ ಫೈಲ್, ಮುಖ್ಯರಸ್ತೆಗೆ ಬಂದು ವೇಗವನ್ನು ಪಡೆಯಿತು. ಬೊಮ್ಮಾಯಿಯವರು ಮುಖ್ಯಮಂತ್ರಿ ಸ್ಥಾನದಿಂದ ನಿರ್ಗ‌ ಮಿಸುವುದಕ್ಕೆ ಇನ್ನೂ ನಾಲ್ಕು ತಿಂಗಳುಗಳು ಇರುವಾಗ ಫೈಲ್ ಗೆ ಮುಕ್ತಿ ದೊರಕಿದೆ ಮತ್ತು ಖಜಾನೆಯಿಂದ ಸದರಿ ಯೋಜನೆಗೆ ಹಣ ಬಿಡುಗಡೆಯಾಗಿದೆ ಎಂಬ ಸುದ್ದಿ ಬಂದಿತು.

ಈ ವಿಷಯವನ್ನು ಡಾ.ಭೈರಪ್ಪನವರಿಗೆ ತಿಳಿಸಿದೆ. ಅವರ ಸಂತಸಕ್ಕೆ ಪಾರವೇ ಇರಲಿಲ್ಲ. ಆಗಲೇ ಸಂತೇಶಿವರಕ್ಕೆ ನೀರು ಬಂದಷ್ಟು ಅವರಿಗೆ ಆನಂದವಾಯಿತು. ಛಲ ಬಿಡದ ತ್ರಿವಿಕ್ರಮನಂತೆ ಅವರು ಹೋರಾಡಿದ್ದರು. ಈ ಯೋಜನೆ ಈಡೇರುವ ತನಕ ಅವರು ಒಂದು ದಿನವೂ ವಿರಮಿಸಲಿಲ್ಲ.

ಅವರ ಪ್ರತಿ ಕರೆಯಲ್ಲೂ ತಮ್ಮ ಹುಟ್ಟೂರಿಗೆ ನೀರು ತರುವ ಯೋಜನೆಯ ಹಿಂದೆ ಅವರ ಪ್ರಾಮಾಣಿಕ ಪರಿಶ್ರಮ, ಕಳಕಳಿ ಎದ್ದು ಕಾಣುತ್ತಿತ್ತು. ಇದೊಂದು ಕೆಲಸ ಆದರೆ ಸಾಕಪ್ಪ ಎಂಬ ಭಾವನೆ ಅವರಲ್ಲಿ ದಟ್ಟೈಸಿತ್ತು. ಬೊಮ್ಮಾಯಿಯವರು ಸಹ ಈ ವಿಷಯದಲ್ಲಿ ಮಾತಿಗೆ ತಕ್ಕಂತೆ ನಡೆದುಕೊಂಡರು. ಹತ್ತಾರು ಸಲ ಅವರಿಗೆ ಹೇಳಿದಾಗಲೂ ಒಂದು ಸಲವೂ ಅವರು ಅಸಹನೆ ತೋರಲಿಲ್ಲ. ಬೇಸರ ಮಾಡಿಕೊಳ್ಳಲಿಲ್ಲ.

‘ಭಟ್ರೇ, ಈ ಕೆಲಸ ಆಗುವ ತನಕ ನನಗೆ ಹೇಳುತ್ತಲೇ ಇರಿ. ನೀವೂ ನನ್ನ ಅಧಿಕಾರಿಗಳ ಜತೆ ಫಾಲೋ ಅಪ್ ಮಾಡುತ್ತಿರಿ. ನನ್ನ ಬಿಡುವಿಲ್ಲದ ಕಾರ್ಯಕ್ರಮಗಳ ಮಧ್ಯೆ ಈ ಕೆಲಸ ಹಾಗೆ ಆಗದೇ ಹೋಗಬಾರದು’ ಎಂದು ಹೇಳುತ್ತಿದ್ದರು. ಈ ವಿಷಯದಲ್ಲಿ ಅವರು ತೋರಿದ ಬದ್ಧತೆ, ಕಾಳಜಿಯನ್ನು ಶ್ಲಾಘಿಸಲೇಬೇಕು.

ಇಷ್ಟೆಲ್ಲ ಆಗಿ ಎರಡು ವರ್ಷಗಳಾದವು. ಸುಮಾರು ನಾಲ್ಕು ತಿಂಗಳ ಹಿಂದೆ, ಒಂದು ದಿನ ಬೆಳಗ್ಗೆ ಡಾ.ಭೈರಪ್ಪನವರು ಫೋನ್ ಮಾಡಿ, ಅಂತೂ ಸಂತೇಶಿವರಕ್ಕೆ ನೀರು ಬಂದಿತು ಎಂದು ದೀರ್ಘ ನಿಟ್ಟುಸಿರು ಬಿಟ್ಟರು. ಆ ಉದ್ಗಾರದಲ್ಲಿ ಸಂತಸ, ಸಮಾಧಾನ ಮತ್ತು ಸಾರ್ಥಕತೆ, ಧನ್ಯತೆಯ ಪಸೆಯಿತ್ತು. ಅಲ್ಲಿನ ಕೆರೆ ಮತ್ತು ಸುತ್ತಮುತ್ತಲ ಇಪ್ಪತ್ತು ಗ್ರಾಮಗಳ ಕೆರೆಗಳೂ ಭರ್ತಿಯಾಗಿದ್ದವು. ಇದರಿಂದಾಗಿ ಅಂತರ್ಜಲ ಮಟ್ಟವೂ ಏರಿತ್ತು. ತಮ್ಮ ಜೀವಿ ತದ ಕೊನೆ ಹಂತದಲ್ಲಿ ತಾವು ಕಂಡಿದ್ದ ಕನಸು ನನಸಾದ ಬಗ್ಗೆ ಡಾ.ಭೈರಪ್ಪನವರ ಖುಷಿ ಯ ಮಟ್ಟವೂ ಏರಿತ್ತು.

ಒಂದು ದಿನ ಅವರು ಸುಮಾರು ಒಂದು ಗಂಟೆ ಫೋನಿನಲ್ಲಿ ಮಾತಾಡಿ ತಮಗಾದನಂದ ವನ್ನು ಹಂಚಿಕೊಂಡಿದ್ದರು. ಈ ಇಡೀ ಘಟನೆಗೆ ಸಾಕ್ಷಿಯಾದ ಬಗ್ಗೆ ನನಗೂ ಅತೀವ ಸಂತಸವಾಗಿತ್ತು. ಡಾ.ಭೈರಪ್ಪನವರು ಮಾತ್ರ ಪತ್ರಿಕಾ ಸಂದರ್ಶನವೊಂದರಲ್ಲಿ ಈ ಯೋಜನೆಯ ಸಿಂಹಪಾಲನ್ನು ನನಗೇ ಕೊಟ್ಟಿದ್ದರು. ನಿಸ್ಸಂದೇಹವಾಗಿ, ಇದರಲ್ಲಿ ನನ್ನ ಪಾತ್ರವೇನೂ ಇರಲಿಲ್ಲ. ಇದರ ಸಂಪೂರ್ಣ ಪಾಲು ಡಾ.ಭೈರಪ್ಪನವರಿಗೆ ಮತ್ತು ಬೊಮ್ಮಾ ಯಿಯವರಿಗೆ ಸಲ್ಲಬೇಕು. ಇದೇನಿದ್ದರೂ ‘ಕೇಳಿದವರು’ ಮತ್ತು ’ಕೊಟ್ಟವರು’ ಇಬ್ಬರ ಮಧ್ಯೆ ನಡೆದಿದ್ದು!

ಸಾಮಾನ್ಯವಾಗಿ, ಡಾ.ಭೈರಪ್ಪನವರಂಥ ಸಾಹಿತಿಗಳು ಮುಖ್ಯಮಂತ್ರಿಯವರನ್ನು ಭೇಟಿ ಯಾದರೆ, ಅವರು ಕೊಡುವ ಮನವಿಗಳೇ ಬೇರೆ. ನನಗೆ ಆ ಪ್ರಶಸ್ತಿ ಕೊಡಿಸಿ, ಈ ಹುದ್ದೆ ಕೊಡಿಸಿ, ನನ್ನ ಹೆಸರನ್ನು ಅದಕ್ಕೆ ಶಿಫಾರಸು ಮಾಡಿ, ಇದಕ್ಕೆ ಮಾಡಿ ಮತ್ತು ನಮ್ಮ ಟ್ರಸ್ಟಿಗೆ ನಿವೇಶನ ಕೊಡಿಸಿ, ನನ್ನ ಪುತ್ರನಿಗೆ ಬಿಡಿಎ ಸೈಟ್ ಕೊಡಿ ಎಂಬ ಬೇಡಿಕೆಗಳಿರುತ್ತವೆ.

ಇಲ್ಲವೇ ತಮ್ಮ ಚೇಲಾಗಳ ಪರವಾಗಿ ಲಾಬಿ ಮಾಡಲು ಬಂದಿರುತ್ತಾರೆ. ಆದರೆ ಡಾ.ಭೈರಪ್ಪ ನವರು ಮುಖ್ಯಮಂತ್ರಿಯವರಿಗೆ, ‘ನಾನು ಹುಟ್ಟಿದ ಊರಿಗೆ ನೀರು ಕೊಡಿ’ ಎಂಬ ವಿಲಕ್ಷಣ ಬೇಡಿಕೆ ಹೊತ್ತು ಆ ಇಳಿವಯಸ್ಸಿನಲ್ಲಿ ಮೈಸೂರಿನಿಂದ ಬಂದಿದ್ದು ಬೊಮ್ಮಾಯಿಯವರಲ್ಲಿ ಅಚ್ಚರಿಯನ್ನುಂಟು ಮಾಡಿತ್ತು. ಅಷ್ಟೇ ಅಲ್ಲ, ಅದು ಡಾ.ಭೈರಪ್ಪನವರ ಬಗ್ಗೆ ವಿಶೇಷ ಅಭಿಮಾನ ಮೂಡುವಂತೆಯೂ ಮಾಡಿತ್ತು. ಇದರಲ್ಲಿ ಅವರ ಯಾವ ಸ್ವಾರ್ಥವೂ ಇರ ಲಿಲ್ಲ. ತಮ್ಮ ಊರು ಮತ್ತು ಸುತ್ತ ಮುತ್ತಲ ಗ್ರಾಮಗಳ ಜನರ ಹಿತವನ್ನು ಬಿಟ್ಟರೆ ಮತ್ತೇನೂ ಇರಲಿಲ್ಲ.

ತಮ್ಮೂರಿನ ಕೆರೆಗಳನ್ನು ತುಂಬಿಸಲು ಕಾರಣರಾದ ಡಾ.ಭೈರಪ್ಪನವರಿಗೆ ಸಂತೇಶಿವರದ ಗ್ರಾಮಸ್ಥರು ಕೃತಜ್ಞತಾ ಪೂರ್ವಕ ಅಭಿನಂದನಾ ಸಮಾರಂಭವನ್ನು ಏರ್ಪಡಿಸಿದ್ದರು. ಅದೇ ಊರಿನ ಕೃಷ್ಣಪ್ರಸಾದ ಅವರು ಮುಂದಾಗಿ ಈ ಕಾರ್ಯಕ್ರಮದ ಸಂಘಟನೆಯನ್ನು ಹೊತ್ತುಕೊಂಡರು.

ಶಾಸಕ ಸಿ.ಎನ್.ಬಾಲಕೃಷ್ಣ ಕೈ ಜೋಡಿಸಿದರು. ಆಗಲೂ ಡಾ.ಭೈರಪ್ಪನವರು ಹತ್ತಾರು ಸಲ ಫೋನ್ ಮಾಡಿ, ‘ಭಟ್ಟರೇ, ನೀವು ಈ ಕಾರ್ಯಕ್ರಮಕ್ಕೆ ಬರಲೇಬೇಕು, ನೀವು ನನ್ನ ಪಕ್ಕ ದಲ್ಲಿಯೇ ಕುಳಿತುಕೊಳ್ಳಬೇಕು, ಬೊಮ್ಮಾಯಿಯವರನ್ನು ಕರೆದುಕೊಂಡು ಬರುವ ಹೊಣೆ ನಿಮ್ಮದೇ’ ಎಂದು ಹೇಳಿದರು. ಈ ವಿಷಯವನ್ನು ಬೊಮ್ಮಾಯಿಯವರಿಗೆ ಹೇಳಿದಾಗ ‘ಆಯಿತು, ಹೋಗೋಣ’ ಎಂದರು.

ಮೊನ್ನೆ ಬೊಮ್ಮಾಯಿ ಮತ್ತು ನಾನು ಸಂತೇಶಿವರಕ್ಕೆ ಹೋಗಿ ಆ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಂದೆವು. ಬರುವಾಗ ಬೊಮ್ಮಾಯಿಯವರು, ‘ಭಟ್ರೇ, ನಾನು ಮುಖ್ಯಮಂತ್ರಿ ಯಾಗಿ ನನ್ನ ಅವಧಿಯಲ್ಲಿ ಲಕ್ಷಾಂತರ ಕೋಟಿ ರುಪಾಯಿಗಳನ್ನು ಬೇರೆ ಬೇರೆ ಯೋಜನೆ ಗಳಿಗೆ ನೀಡಿರಬಹುದು.

ಅವುಗಳೆಲ್ಲವೂ ನನಗೆ ನೆನಪಿಲ್ಲ. ಆದರೆ ಸಂತೇಶಿವರಕ್ಕೆ ನೀಡಿದ ಈ 25 ಕೋಟಿ ರುಪಾಯಿ ಯನ್ನು ಮರೆಯಲು ಸಾಧ್ಯವಿಲ್ಲ. ನನ್ನಿಂದ ಒಂದು ಒಳ್ಳೆಯ ಕೆಲಸ ಮಾಡಿಸಿದಿರಿ’ ಎಂದರು ಭಾವುಕರಾಗಿ. ಜತೆಯಲ್ಲಿದ್ದ ಹಿರಿಯ ಸ್ನೇಹಿತರಾದ ರಮಣಶ್ರೀ ಷಡಕ್ಷರಿಯವರೂ ದನಿ ಗೂಡಿಸಿದರು. ಡಾ.ಭೈರಪ್ಪ ನಮ್ಮ ಕಣ್ಣಲ್ಲಿ ಇನ್ನೂ ದೊಡ್ಡವರಾಗಿ ಕಾಣುತ್ತಿದ್ದರು!