ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mohan Vishwa Column: ಆಫ್ಘಾನಿಸ್ತಾನದ ಕಮ್ಯುನಿಸ್ಟ್ ಆಡಳಿತ

ರಷ್ಯಾ ಪರವಾಗಿದ್ದ ರಾಜನೊಬ್ಬ ಅಂದಿನ ಬ್ರಿಟಿಷ್ ಆಕ್ರಮಿತ ಭಾರತದ ಮೇಲೆ, ಹೈದರ್ ಪಾಸ್ ಮೂಲಕ ದಾಳಿ ಮಾಡಿದ್ದ. ಇದ್ದಕ್ಕಿದ್ದಂತೆ ತಮ್ಮ ಮೇಲೆ ಎರಗಿದ ಆಫ್ಘನ್ನರನ್ನು ಕಂಡ ಬ್ರಿಟಿಷರು ತಬ್ಬಿ ಬ್ಬಾಗಿದ್ದರು. ಈ ದಾಳಿಯಲ್ಲಿ ಸಾವಿರಾರು ಬ್ರಿಟಿಷ್ ಸೈನಿಕರು ಸಾವನ್ನಪ್ಪಿದ್ದರು. ಮತ್ತೊಂದೆಡೆ ಅಫ್ಘಾನಿ ಸ್ತಾನದ ಸಾವಿರಾರು ಸೈನಿಕರು ಸಾವನ್ನಪ್ಪಿದ್ದರು.

Mohan Vishwa Column: ಆಫ್ಘಾನಿಸ್ತಾನದ ಕಮ್ಯುನಿಸ್ಟ್ ಆಡಳಿತ

-

ವೀಕೆಂಡ್‌ ವಿತ್‌ ಮೋಹನ್

camohanbn@gmail.com

ಆಫ್ಘನ್ನರು ಎರಡು ಬಾರಿ ಬ್ರಿಟಿಷರಿಗೆ ಮಣ್ಣು ಮುಕ್ಕಿಸಿದ ನಂತರ, ಅವರ ತಂಟೆಗೆ ಹೋದರೆ ಉಳಿಗಾಲವಿಲ್ಲವೆಂಬ ವಿಷಯ ಬ್ರಿಟಿಷರಿಗೆ ತಿಳಿಯಿತು. ಮೊದಲನೇ ಮಹಾಯುದ್ಧದಲ್ಲಿ ಅಫ್ಘಾನಿ ಸ್ತಾನವು ಯಾರ ಪರವಾಗಿಯೂ ನಿಲ್ಲಲಿಲ್ಲ, ಯಾರ ವಿರುದ್ದವೂ ಯುದ್ಧ ಮಾಡಲಿಲ್ಲ. ಬ್ರಿಟಿಷರಿಗೆ ಅವರು ಕೊಟ್ಟಿದ್ದ ಹೊಡೆತದ ಪರಿಣಾಮ ಇತರ ದೇಶಗಳು ಅವರ ತಂಟೆಗೆ ಹೋಗಿರಲಿಲ್ಲ.

ಮೊದಲನೇ ಮಹಾಯುದ್ಧ ಮುಗಿದ ನಂತರ, ಭೌಗೋಳಿಕವಾಗಿ ಜಗತ್ತಿನಲ್ಲಿ ಹಲವು ಬದಲಾವಣೆ ಗಳಾದವು. ಹೊಸ ದೇಶಗಳು ಹುಟ್ಟಿಕೊಂಡವು, ಹಲವು ದೇಶಗಳು ಇತರ ದೇಶಗಳೊಂದಿಗೆ ಸೇರಿ ಕೊಂಡವು, ನೂತನ ಒಪ್ಪಂದಗಳಾದವು. ಇದ್ಯಾವುದರ ಬಗ್ಗೆಯೂ ಅಫ್ಘಾನಿಸ್ತಾನ ತಲೆಕೆಡಿಸಿ ಕೊಳ್ಳಲಿಲ್ಲ. ಆದರೆ ಮೊದಲನೇ ಮಹಾಯುದ್ಧದಲ್ಲಿ ದಣಿದಿದ್ದ ಬ್ರಿಟಿಷರಿಗೆ ಮೊದಲ ಬಾರಿಗೆ ಅಫ್ಘಾನಿಸ್ತಾನ ಕಾಲು ಕೆರೆದುಕೊಂಡು ಯುದ್ಧಕ್ಕೆ ಬಂದಿತು.

ರಷ್ಯಾ ಪರವಾಗಿದ್ದ ರಾಜನೊಬ್ಬ ಅಂದಿನ ಬ್ರಿಟಿಷ್ ಆಕ್ರಮಿತ ಭಾರತದ ಮೇಲೆ, ಹೈದರ್ ಪಾಸ್ ಮೂಲಕ ದಾಳಿ ಮಾಡಿದ್ದ. ಇದ್ದಕ್ಕಿದ್ದಂತೆ ತಮ್ಮ ಮೇಲೆ ಎರಗಿದ ಆಫ್ಘನ್ನರನ್ನು ಕಂಡ ಬ್ರಿಟಿಷರು ತಬ್ಬಿಬ್ಬಾಗಿದ್ದರು. ಈ ದಾಳಿಯಲ್ಲಿ ಸಾವಿರಾರು ಬ್ರಿಟಿಷ್ ಸೈನಿಕರು ಸಾವನ್ನಪ್ಪಿದ್ದರು. ಮತ್ತೊಂದೆಡೆ ಅಫ್ಘಾನಿಸ್ತಾನದ ಸಾವಿರಾರು ಸೈನಿಕರು ಸಾವನ್ನಪ್ಪಿದ್ದರು. ಈ ಘಟನೆ ನಡೆದ ಕೆಲವು ವರ್ಷಗಳ ಕಾಲ ಇಬ್ಬರೂ ಸುಮ್ಮನಿದ್ದರು.

ನಂತರ ಅಫ್ಘಾನಿಸ್ತಾನದ ಸಿಂಹಾಸನವನ್ನು ಅಮಾನು ಎಂಬ ರಾಜ ಅಲಂಕರಿಸಿದ, ಈತ ಕಟ್ಟರ್ ಮುಸ್ಲಿಂ ಸಂಪ್ರದಾಯಗಳ ವಿರೋಧಿಯಾಗಿದ್ದ. ಪಾಶ್ಚಿಮಾತ್ಯರ ಸಂಸ್ಕೃತಿಗೆ ಮಾರು ಹೋಗಿದ್ದ ಈತನಿಗೆ, ಅವರ ರೀತಿಯ ಜೀವನ ನಡೆಸಬೇಕೆಂಬ ಆಸೆಯಿತ್ತು. ಆಫ್ಘನ್ನರನ್ನು ನಿಧಾನವಾಗಿ ಪಾಶ್ಚಿಮಾತ್ಯ ಸಂಸ್ಕೃತಿಯೆಡೆಗೆ ಕರೆದುಕೊಂಡು ಹೋಗಬೇಕೆಂಬ ಹಂಬಲವಿತ್ತು.

ಇದನ್ನೂ ಓದಿ: ‌Mohan Vishwa Column: ಆರೆಸ್ಸೆಸ್‌ನ ಕಾರ್ಮಿಕ ಮತ್ತು ಮಹಿಳಾ ಸಂಘಟನೆ

ಬ್ರಿಟಿಷರು ತಮ್ಮ ಸಂಸ್ಕೃತಿಯನ್ನು ಬಲವಂತವಾಗಿ ಆಫ್ಘನ್ನರ ಮೇಲೆ ಹೇರಲು ಪ್ರಯತ್ನಿಸಿ ಎರಡು ಬಾರಿ ಸೋತು ಸುಣ್ಣವಾಗಿದ್ದರು. ಆದರೆ ಈ ಬಾರಿ ಕುರಿಯೊಂದು ತೋಳದ ಬಳಿ ಬಂದಂತೆ ಅಲ್ಲಿನ ರಾಜ ಬ್ರಿಟಿಷರ ಸಂಸ್ಕೃತಿಯನ್ನು ಒಪ್ಪಿಕೊಳ್ಳಲು ಸಿದ್ಧನಾಗಿದ್ದರಿಂದ ಬ್ರಿಟಿಷರಿಗೆ ಹಳಸಿಹೋಗಿದ್ದ ಹಳೆಯ ಅಸೆ ಚಿಗುರಿತು.

1927ರಲ್ಲಿ ಆತನನ್ನು ಯುರೋಪಿಗೆ ಕರೆಸಿಕೊಳ್ಳಲಾಯಿತು. ಬ್ರಿಟನಿನ್ನಲ್ಲಿ ಆತನಿಗೆ ರಾಜಾತಿಥ್ಯ ವನ್ನು ನೀಡಲಾಯಿತು. ಬೀದಿ ಬೀದಿಗಳಲ್ಲಿ ದೊಡ್ಡ ಕಾರುಗಳಲ್ಲಿ ಮೆರವಣಿಗೆ ಮಾಡಲಾಯಿತು. ಆತನನ್ನು ಬ್ರಿಟನ್ನಿನ ವಿವಿಧ ಮಾರುಕಟ್ಟೆಗಳಿಗೆ ಕರೆದುಕೊಂಡು ಹೋಗಲಾಯಿತು, ಆಧುನಿಕ ಬಂದೂಕುಗಳು, ಕಾರುಗಳು, ಪಾಶ್ಚಿಮಾತ್ಯ ಶೈಲಿಯ ಬಟ್ಟೆಗಳು, ದುಬಾರಿ ವೆಚ್ಚದ ಗಡಿಯಾರ ಗಳನ್ನು ಉಡುಗೊರೆಯಾಗಿ ನೀಡಿ ಅದ್ಭುತವಾದ ಉಪಚಾರದೊಂದಿಗೆ ನೋಡಿಕೊಳ್ಳಲಾಯಿತು.

ಹತ್ತಾರು ರೋಲ್ಸ್ ರಾಯ್ಸ್ ಕಾರುಗಳನ್ನು ಉಡುಗೊರೆಯಾಗಿ ಆತನಿಗೆ ನೀಡಲಾಯಿತು. ಬೆಂಗಾಡಿ ನಂತಿದ್ದ ಅಫ್ಘಾನಿಸ್ತಾನದಿಂದ ಹೊರಬಂದು ಯುರೋಪಿನ ಸೌಂದರ್ಯವನ್ನು ನೋಡಿದ ಆತನಿಗೆ ಅಲ್ಲಿನ ಸಂಸ್ಕೃತಿಯನ್ನು ಅಫ್ಘಾನಿಸ್ತಾನಕ್ಕೆ ಪರಿಚಯಿಸಬೇಕೆಂಬ ಮಹಾದಾಸೆಯಿತ್ತು.‌

ಸರಿಯಾಗಿ ಸೈಕಲ್ಲುಗಳನ್ನೇ ಕಾಣದ ಬಡದೇಶಕ್ಕೆ, ರೋಲ್ಸ್‌ ರಾಯ್ಸ್‌ ಕಾರುಗಳು ಬಂದದ್ದು ಆಫ್ಘನ್ನ ರಿಗೆ ಇಷ್ಟವಾಗಲಿಲ್ಲ. ಆತ ಬ್ರಿಟಿಷರೊಂದಿಗೆ ಸೇರಿ ಕುಡಿಯಲು ಕಲಿತಿದ್ದ ವಿಚಾರ ಆಫ್ಘನ್ ಸೈನಿಕ ರಿಗೆ ತಿಳಿಯಿತು. ಬ್ರಿಟನ್‌ನಿಂದ ಬಂದವನಿಗೆ ಅಫ್ಘಾನಿಸ್ತಾನದಲ್ಲಿ ನೂತನ ತಂತ್ರಜ್ಞಾನವನ್ನು ಪರಿಚಯಿಸಬೇಕು, ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ನೀಡಬೇಕೆಂಬ ಒಳ್ಳೆಯ ಆಶಯವಿತ್ತು.

ಪ್ರಜಾಪ್ರಭುತ್ವದಡಿಯಲ್ಲಿ ಚುನಾವಣೆ ನಡೆಸಬೇಕೆಂಬ, ಒಳ್ಳೆಯ ಸಂವಿಧಾನವನ್ನು ರಚಿಸಬೇಕೆಂಬ ಬಯಕೆಯಿತ್ತು. ಆದರೆ ಅಲ್ಲಿನ ಜನರಿಗೆ ಆತನ ಆಶಯಗಳು ಅವರ ಅನಾದಿ ಕಾಲದ ಇಸ್ಲಾಂ ಆಚರಣೆಯನ್ನು ಮುರಿಯುವಂತೆ ಗೋಚರಿಸಿತ್ತು. ಕೆಲದಿನಗಳ ನಂತರ ಸಂಪೂರ್ಣ ಮುಖ ಕಾಣುವ ರಾಜನ ಹೆಂಡತಿಯ ಚಿತ್ರಪಟವೊಂದು ಕಾಬುಲ್ ನಗರದ ಬೀದಿಗಳಲ್ಲಿ ಹರಿದಾಡ ತೊಡಗಿತು.

ಇದನ್ನು ಕಂಡ ಆಫ್ಘನ್ನರಿಗೆ, ಆತನನ್ನು ಮುಂದುವರಿಯಲು ಬಿಟ್ಟರೆ ತಮ್ಮ ಮನೆಯ ಹೆಂಗಸರ ಸಂಪ್ರದಾಯಗಳನ್ನು ಮುರಿಸಿ ಬಿಡುತ್ತಾನೆಂಬ ಭಯ ಕಾಡತೊಡಗಿತು. ಪರಿಣಾಮ, ಎಲ್ಲರೂ ಸೇರಿ ಆತನ ಕುಟುಂಬವನ್ನೇ ಅಫ್ಘಾನಿಸ್ತಾನದಿಂದ ಓಡಿಸಿ ಬಿಟ್ಟರು. 19ನೇ ಶತಮಾನದಲ್ಲಿ ಬ್ರಿಟಿಷರು ಅಫ್ಘಾನಿಸ್ತಾನದ ಮೇಲೆ ದಾಳಿಗಳನ್ನು ನಡೆಸಿ ಕೈ ಸುಟ್ಟುಕೊಂಡಿದ್ದರು. 1929ರಿಂದ 1979ರವರೆಗೂ ಅಫ್ಘಾನಿಸ್ತಾನದಲ್ಲಿ ಶಾಂತಿ ನೆಲೆಸಿತ್ತು.

ಬ್ರಿಟಿಷರು ಅವರ ತಂಟೆಗೆ ಮತ್ತೆ ಹೋಗಲಿಲ್ಲ. 1975ರ ಆಸುಪಾಸಿನಲ್ಲಿ ಜಗತ್ತಿನ ಅರ್ಧಭಾಗವನ್ನು ಕಮ್ಯುನಿಸ್ಟರು ಅಳುತ್ತಿದ್ದರು. ಒಂದೆಡೆ ಕಮ್ಯುನಿ ದೇಶ ರಷ್ಯಾ, ಮತ್ತೊಂದೆಡೆ ಅಮೆರಿಕ, ಮಧ್ಯ ಪ್ರಾಚ್ಯದಲ್ಲಿ ತಮ್ಮ ಶಕ್ತಿ ಪ್ರದರ್ಶನ ಮಾಡಬೇಕಿತ್ತು.

ಆಫ್ಘನ್ನರಿಗೆ ಬಿಲಿಯನ್‌ಗಟ್ಟಲೆ ರಷ್ಯನ್ ರೂಬೆಲಗಳು ಸಹಾಯದ ರೂಪದಲ್ಲಿ ಬರಲಾರಂಭಿಸಿ ದವು. ದೊಡ್ಡ ದೊಡ್ಡ ಕಟ್ಟಡಗಳನ್ನು ನಿರ್ಮಿಸಲು ರಷ್ಯನ್ನರು ಆಫ್ಘನ್ನರಿಗೆ ಸಹಾಯ ಮಾಡಿದರು. ಅಲ್ಲಿನ ರೈತರಿಗೆ ಅನುಕೂಲವಾಗುವಂತೆ ಅಣೆಕಟ್ಟುಗಳನ್ನು ಕಟ್ಟಿಸಿಕೊಟ್ಟರು.

ಕಾರ್ಖಾನೆಗಳನ್ನು ತೆರೆಯಲು ಅನುಕೂಲ ಮಾಡಿಕೊಟ್ಟರು. ವರ್ಷಕ್ಕೆ ಕೇವಲ ಶೇ.೨ರ ದರದಲ್ಲಿ ಬಿಲಿಯನ್ ಗಟ್ಟಲೆ ಹಣವನ್ನು ಸಾಲವನ್ನಾಗಿ ನೀಡಲಾಯಿತು. ಅತ್ತ ಅಮೆರಿಕ ಕೂಡ ಬಿಲಿಯನ್‌ ಗಟ್ಟಲೆ ಹಣವನ್ನು ಆಫ್ಘನ್ನರಿಗೆ ನೀಡಿತು. ಅವರೂ ದೊಡ್ಡ ದೊಡ್ಡ ಅಣೆಕಟ್ಟುಗಳನ್ನು ಕಟ್ಟಿಸಿ ಕೊಟ್ಟರು, ವಿದ್ಯಾಭ್ಯಾಸಕ್ಕಾಗಿ ವಿಶ್ವವಿದ್ಯಾಲಯಗಳನ್ನು ಕಟ್ಟಿಸಿದರು.

ಅಫ್ಘಾನಿಸ್ತಾನದ ಜನರಿಗೆ ಒಂದೆಡೆ ಅಮೆರಿಕದ ನೀತಿಗಳು, ಮತ್ತೊಂದೆಡೆ ರಷ್ಯಾದ ಕಮ್ಯುನಿಸ್ಟ್‌ ನೀತಿಗಳಲ್ಲಿ ಯಾವುದನ್ನು ಒಪ್ಪಿಕೊಳ್ಳಬೇಕೆಂಬ ಗೊಂದಲವಿತ್ತು. ಹೆಚ್ಚಿನ ಜನರು ಕಮ್ಯುನಿಸ್ಟ್‌ ದೇಶ ರಷ್ಯಾದ ನೀತಿಯ ಪರವಾಗಿದ್ದರು. ಆದರೆ ಕೆಲವು ಆಫ್ಘನ್ನರಿಗೆ ತಮ್ಮ ಅನಾದಿಕಾಲದ ಮುಸಲ್ಮಾನ್ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕಿತ್ತು.

ಕಮ್ಯುನಿಸ್ಟ್‌ ನೀತಿ ಹಾಗು ಕಟ್ಟರ್ ಇಸ್ಲಾಂ ಪಾಲಿಸುವವರ ನಡುವೆ ನೇರ ಹಣಾಹಣಿ ಪ್ರಾರಂಭ ವಾಗಿತ್ತು. ಆಫ್ಘನ್ನಿನ ಜನರ ಮದ್ಯೆ ಕಂದಕಗಳು ಸೃಷ್ಟಿಯಾದವು. ದೇವರನ್ನೇ ನಂಬದ ನಾಸ್ತಿಕ ಕಮ್ಯುನಿ ನೀತಿಯನ್ನು ಕಟ್ಟರ್ ಇಸ್ಲಾಂ ಸಂಪ್ರದಾಯಸ್ಥರು ಒಪ್ಪಲು ತಯಾರಿರಲಿಲ್ಲ. ಏಪ್ರಿಲ್ 1978ರಲ್ಲಿ ನಡೆದ ಚುನಾವಣೆಯಲ್ಲಿ ಮೊಟ್ಟ ಮೊದಲ ಬಾರಿಗೆ ಕಟ್ಟರ್ ಇಸ್ಲಾಂ ಸಂಪ್ರದಾಯ ವಾದಿಗಳ ಅಫ್ಘಾನಿಸ್ತಾನದಲ್ಲಿ ಕಮ್ಯುನಿ ಆಡಳಿತ ಜಾರಿಗೆ ಬಂದಿತು.

ನೂರ್ ಮೊಹಮ್ಮದ್ ತಾರಕಿ ಕಮ್ಯುನಿ ಪಕ್ಷದಿಂದ ಚುನಾಯಿತನಾಗಿ ಅಫ್ಘಾನಿಸ್ತಾನದ ಅಧ್ಯಕ್ಷ ನಾದ. ತನ್ನ ಪ್ರಣಾಳಿಕೆಯಲ್ಲಿ, ಜಾತ್ಯತೀತತೆ, ಲಿಂಗ ಸಮಾನತೆ, ವಿದ್ಯಾಭ್ಯಾಸ ಎಲ್ಲವನ್ನು ಜಾರಿಗೆ ತರುವುದಾಗಿ ಹೇಳಿದ್ದ. ಅಧಿಕಾರಕ್ಕೆ ಬಂದ ಕೇವಲ ಒಂದು ವರ್ಷದಲ್ಲಿ ಅಫ್ಘಾನಿಸ್ತಾನದ ಮಸೀದಿ ಗಳಲ್ಲಿ ಜನರೇ ಇಲ್ಲದಂತೆ ಮಾಡುತ್ತೇನೆಂದು ಹೇಳಿದ್ದ. ಇವನ ಪ್ರಣಾಳಿಕೆಯನ್ನು ನೋಡಿ ಜನರು ಇವನನ್ನು ಚುನಾಯಿಸಿದ್ದರೆಂದರೆ, ಅವರಿಗೆ ಬದಲಾವಣೆ ಬೇಕಿತ್ತೆಂದರ್ಥ.

ಈತ ಪ್ರಣಾಳಿಕೆಯಲ್ಲಿ ಹೇಳಿದ್ದ ವಿಚಾರಗಳನ್ನು ತನ್ನ ಆಡಳಿತದಲ್ಲಿ ಸಂಪೂರ್ಣವಾಗಿ ಜಾರಿಗೆ ತಂದಿದ್ದ. ನಿಧಾನವಾಗಿ ಅಫ್ಘಾನಿಸ್ತಾನದಲ್ಲಿ ಬದಲಾವಣೆ ಕಾಣತೊಡಗಿತು. ಪಾಶ್ಚಿಮಾತ್ಯ ಸಂಸ್ಕೃತಿ ಇಡೀ ದೇಶವನ್ನು ಆವರಿಸಿಕೊಳ್ಳಲು ಪ್ರಾರಂಭಿಸಿತು. ಆದರೆ ಒಳಗೊಳಗೇ ಕಟ್ಟರ್ ಸಂಪ್ರದಾಯ ವಾದಿಗಳಿಗೆ ಇವನ ಆಡಳಿತ ಇಷ್ಟವಿರಲಿಲ್ಲ.

ಬಲವಂತವಾಗಿ ಇವನು ಅಫ್ಘನ್ ಜನರ ಮೇಲೆ ಕಮ್ಯುನಿಸ್ಟ್‌ ನೀತಿಯನ್ನು ಹೇರುವ ಮೂಲಕ ಸಾವಿರಾರು ವರ್ಷಗಳ ಕಟ್ಟರ್ ಸಂಪ್ರದಾಯಗಳನ್ನು ಹಾಳುಗೆಡವುತ್ತಿದ್ದಾನೆಂಬ ಕೋಪವಿತ್ತು. ಆತನ ಆಡಳಿತದ ವಿರುದ್ಧ ಪ್ರತಿನಿತ್ಯ ಪ್ರತಿಭಟನೆಗಳು ಪ್ರಾರಂಭವಾದವು. ಕಟ್ಟರ್ ಕಮ್ಯುನಿಸ್ಟ್‌ ಪ್ರತಿಪಾದಕನಾಗಿದ್ದ ಈತ ತನ್ನ ಸರಕಾರದ ವಿರುದ್ಧ ತಿರುಗಿಬಿದ್ದಿದ್ದ ಸುಮಾರು 12000 ಜನರನ್ನು ನೇಣಿಗೇರಿಸಿದ್ದ.

ತನ್ನ ಮಾತು ಕೇಳದವರನ್ನು ಮುಲಾಜಿಲ್ಲದೆ ಜೈಲಿಗೆ ತಳ್ಳುತ್ತಿದ್ದ. 1979ರ ಹೊತ್ತಿಗೆ ಅಂದರೆ ಅಧಿಕಾರಕ್ಕೆ ಬಂದ ಕೇವಲ ಒಂದು ವರ್ಷದಲ್ಲಿ, ಈತನ ವಿರುದ್ಧ ಇತರ ಕಮ್ಯುನಿಸ್ಟ್ ಬೆಂಬಲಿಗರೂ ತಿರುಗಿಬಿದ್ದರು. ಅಫ್ಘಾನಿಸ್ತಾನದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು. ನಂತರ ನೂರ್ ಮೊಹಮ್ಮದ್ ತಾರಕಿ ರಷ್ಯನ್ನರ ಸಹಾಯ ಕೇಳಿದ್ದ. ‌

ಆತನಿಗೆ ಸಹಾಯ ಮಾಡಲು ರಷ್ಯಾ ಒಪ್ಪಿಕೊಂಡಿತ್ತು. ಇದರ ಮಧ್ಯೆ ದೊಡ್ಡದೊಂದು ಅನಾಹುತ ನಡೆದುಹೋಯಿತು. ನೂರ್ ಮೊಹಮ್ಮದ್ ತಾರಕಿಯನ್ನು ಕೊಲ್ಲಲಾಯಿತು. ಸಹಾಯ ಕೇಳಿ ಕೊಂಡು ಬಂದಿದ್ದ ನೂರ್ ಮೊಹಮ್ಮದ್ ತಾರಕಿಯ ಸಾವನ್ನು ರಷ್ಯನ್ನರು ಸಹಿಸಲಿಲ್ಲ. ಅಫ್ಘಾನಿ ಸ್ತಾನ ತಮ್ಮ ತೆಕ್ಕೆಯಿಂದ ಕಸಿದು ಹೋಗುತ್ತದೆಯೆಂಬ ಭಯದಿಂದ ಅಫ್ಘಾನಿಸ್ತಾನದ ಮೇಲೆ ರಷ್ಯನ್ನರು ಮಿಲಿಟರಿ ಕಾರ್ಯಾಚರಣೆ ನಡೆಸಲು ಮುಂದಾದರು, 1979ರಲ್ಲಿ ಸುಮಾರು 80000 ರಷ್ಯನ್ ಸೈನಿಕರು ಕಾಬುಲ್ ನಗರಕ್ಕೆ ಬಂದಿಳಿದರು.

ರಷ್ಯಾ ತನ್ನ ಅತ್ಯಾಧುನಿಕ ಅಸಗಳೊಂದಿಗೆ ಅಫ್ಘಾನಿಸ್ತಾನದ ಮೇಲೆ ಮುಗಿ ಬಿದ್ದಿತ್ತು. 12 ತಿಂಗಳಲ್ಲಿ ಅಫ್ಘಾನಿಸ್ತಾನದಲ್ಲಿದ್ದ ಸಮಸ್ಯೆಯನ್ನು ಬಗೆಹರಿಸಬೇಕೆಂದಿದ್ದ ರಷ್ಯನ್ನರಿಗೆ ಹೊರಬರಲು 9 ವರ್ಷ ಗಳು ಬೇಕಾದವು. 9 ವರ್ಷದಲ್ಲಿ ಸಾವಿರಾರು ರಷ್ಯನ್ ಸೈನಿಕರು, ಲಕ್ಷಾಂತರ ಆಫ್ಘನ್ನರು ಸತ್ತರು. ಪ್ರತಿಯೊಂದು ಸಾವು ಸಹ ಸೇಡಿನ ಜ್ವಾಲೆಯಾಗಿ ಎರಡೂ ಕಡೆಯಿಂದ ಆಕ್ರಮಣ ಮಾಡುವಂತಾ ಯಿತು. ಯಾರೊಬ್ಬರೂ ಸೋಲಲು ತಯಾರಿರಲಿಲ್ಲ.

ಹೊರ ಜಗತ್ತಿಗೆ ರಷ್ಯಾ, ಅಫ್ಘಾನಿಸ್ತಾನದಲ್ಲಿ ನಡೆಸುತ್ತಿರುವುದು ಒಂದು ಸಣ್ಣ ಕಾರ್ಯಾಚರಣೆ ಯೆನಿಸಿತ್ತು. 1988ರಲ್ಲಿ ರಷ್ಯಾ ದೇಶ, ಇನ್ನು ತಾನು ಇದನ್ನು ಮುಂದುವರಿಸುವುದರಲ್ಲಿ ಯಾವುದೇ ಅರ್ಥವಿಲ್ಲವೆಂದು ತಿಳಿದು ಸೈನ್ಯವನ್ನು ವಾಪಾಸ್ ಕರೆಸಿಕೊಂಡು ಕಾರ್ಯಾಚರಣೆಯನ್ನು ನಿಲ್ಲಿಸಿತು. ಅಫ್ಘಾನಿಸ್ತಾನದ ಭೌಗೋಳಿಕ ಪ್ರದೇಶಗಳನ್ನು ಹೊರಗಿನವರು ಅರ್ಥ ಮಾಡಿಕೊಳ್ಳು ವುದು ಬಹಳ ಕಷ್ಟ.

ಅಲ್ಲಿನ ಹವಾಮಾನ ಬದಲಾವಣೆಗಳನ್ನು ಊಹಿಸಿಕೊಳ್ಳುವುದು ಸುಲಭದ ಮಾತಲ್ಲ. ಕಿರಿದಾದ ಕಣಿವೆ ಪ್ರದೇಶಗಳಲ್ಲಿ ಸಾವಿರಾರು ವರ್ಷಗಳಿಂದ ವಾಸಿಸುತ್ತಿರುವ ಬುಡಕಟ್ಟು ಜನಾಂಗಕ್ಕೆ ಅಲ್ಲಿನ ಇಂಚಿಂಚು ಭೂಪ್ರದೇಶದ ಅನುಭವವಿದೆ. ಅತ್ಯಾಧುನಿಕ ಮಿಲಿಟರಿ ಉಪಕರಣಗಳ ಸಹಾಯದಿಂದ ಅಮೆರಿಕ ದೇಶ ಒಸಾಮಾ ಬಿನ್ ಲಾಡೆನ್ ವಿರುದ್ಧ ನಡೆಸಿದ ಕಾರ್ಯಾಚರಣೆಯಲ್ಲಿ ಹುಡುಕಾಡದ ಗುಹೆಗಳಿಲ್ಲ, ಆದರೂ ಒಸಾಮಾ ಅಫ್ಘಾನಿಸ್ತಾನದಲ್ಲಿ ಸಿಗಲಿಲ್ಲ.

ಆಫ್ಘನ್ನರು ಮೂಲತಃ ಕಟ್ಟರ್ ಇಸ್ಲಾಂ ಸಂಪ್ರದಾಯವಾದಿಗಳು, ಅವರ ನೆಲದಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಸ್ಥಾಪಿಸಲು ಮುಂದಾದ ದೊಡ್ಡ ದೇಶಗಳು ಬರಿಗೈಯಲ್ಲಿ ವಾಪಾಸ್ ಬಂದಿವೆ.