ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ್​ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr N Someshwara Column: ಕೋಪನ್‌ ಹೇಗನ್‌ ಹಿಪ್ನಾಸಿಸ್‌ ಡಬಲ್‌ ಮರ್ಡರ್‌ ಕೇಸ್‌

ಡಬಲ್ ಮರ್ಡರ್ ಪ್ರಕರಣವು ಕೆಳಗಿನ ಎಲ್ಲ ನ್ಯಾಯಾಲಯಗಳಲ್ಲಿ ತೀರ್ಪನ್ನು ಕಾಣದೆ ಡ್ಯಾನಿಶ್ ಪರಮೋಚ್ಚ ನ್ಯಾಯಾಲಯಕ್ಕೆ ಹೋಯಿತು. ಅಲ್ಲಿ ಸುದೀರ್ಘ ವಿಚಾರಣೆಯು ನಡೆಯಿತು. ಕೊನೆಗೆ ನ್ಯಾಯಾಲಯವು ಈ ಕೆಳಕಂಡಂತೆ ತೀರ್ಪನ್ನು ನೀಡಿತು: ನೀಲ್ಸನ್ ಪ್ರಜ್ಞಾಪೂರ್ವಕವಾಗಿ ಹಾರ್ಡ್ರ ಪ್‌ನ ಮೇಲೆ ಸಂಮೋಹನವನ್ನು ಪ್ರಯೋಗಿಸಿ ಅವನನ್ನು ವಶಪಡಿಸಿಕೊಂಡಿದ್ದ. ವಶ್ಯಸುಪ್ತ ಸ್ಥಿತಿಯಲ್ಲಿ ಅವನಿಂದ ಬ್ಯಾಂಕ್ ದರೋಡೆ ಹಾಗೂ ಕೊಲೆಯನ್ನು ಮಾಡಿಸಿದ

ಕೋಪನ್‌ ಹೇಗನ್‌ ಹಿಪ್ನಾಸಿಸ್‌ ಡಬಲ್‌ ಮರ್ಡರ್‌ ಕೇಸ್

ಹಿಂದಿರುಗಿ ನೋಡಿದಾಗ

ಮಾರ್ಚ್ 29, 1951. ಕೋಪನ್ ಹೇಗನ್, ಡೆನ್ಮಾರ್ಕ್. ಒಂದು ಬ್ಯಾಂಕ್ ದರೋಡೆಯ ಪ್ರಯತ್ನ ನಡೆದು ಇಬ್ಬರು ಬ್ಯಾಂಕ್ ನೌಕರರು ಕೊಲೆಯಾದರು. ಒಬ್ಬ ಬ್ಯಾಂಕಿಗೆ ಬಂದ. ಕ್ಯಾಶಿಯರನ ಬಳಿಗೆ ಹೋದ. ಹಣವನ್ನು ಕೇಳಿದ, ಅವನು ಕೊಡಲಿಲ್ಲ. ಕೂಡಲೆ ಗನ್ ತೆಗೆದು ಗುಂಡು ಹಾರಿಸಿದ. ಅಲ್ಲಿಗೆ ಬಂದ ಮ್ಯಾನೇಜರನ ಮೇಲೂ ಗುಂಡು ಹಾರಿಸಿ ಕೊಂದ. ಅವನ ಹೆಸರು ಪ್ಯಾಲೆ ಹಾರ್ಡ್ರಪ್. ವಿಶ್ವದ ಎರಡನೆಯ ಮಹಾಯುದ್ಧದಲ್ಲಿ ಹೋರಾಡಿದ್ದ ಓರ್ವ ಮಾಜಿ ಯೋಧ. ಇಬ್ಬರನ್ನು ಕೊಂದ ಹಾರ್ಡ್ರಪ್ ಬ್ಯಾಂಕಿನ ಹೊರಗೆ ಬಂದ. ಅಲ್ಲಿದ್ದ ಬೈಸಿಕಲ್ಲನ್ನು ಏರಿದ. ಪಕ್ಕದ ರಸ್ತೆಗೆ ಹೋಗಿ ಒಂದು ಕಟ್ಟಡದ ಒಳಗೆ ಅವಿತುಕೊಂಡ. ಆದರೆ ಪೊಲೀಸರು ತ್ವರಿತವಾಗಿ ಅಲ್ಲಿಗೆ ಬಂದರು. ಹಾರ್ಡ್ರಪ್, ಪ್ರತಿರೋಧವನ್ನು ತೋರದೆ ಪೊಲೀಸರಿಗೆ ಶರಣಾದ.

ಬ್ಯಾಂಕಿನ ಹೊರಗೆ ಇದ್ದ ಬೈಸಿಕಲ್ ಬ್ಯುಯೋರ್ನ್ ಶೋವ್ ನೀಲ್ಸನ್ ಎಂಬುವವನದಾಗಿತ್ತು. ಅವನು ಪೊಲೀಸರ ಬಳಿಗೆ ಬಂದ. “ಬೈಸಿಕಲ್ ನನ್ನದು. ಆದರೆ ಬ್ಯಾಂಕ್ ದರೋಡೆ ಪ್ರಯತ್ನ ಮತ್ತು ಡಬಲ್ ಮರ್ಡರಿಗೂ ನನಗೂ ಸಂಬಂಧವಿಲ್ಲ" ಎಂದ.

ನೀಲ್ಸನ್ ಹಾಗೂ ಹಾರ್ಡ್ರಪ್ ಇಬ್ಬರೂ ಸೈನ್ಯದಲ್ಲಿದ್ದು, ಸೈನ್ಯದಲ್ಲಿ ಮಾಡಿದ ಒಂದು ತಪ್ಪು ಕೆಲಸ ಕ್ಕಾಗಿ, ‘ಹಾರ್ಸೆನ್ಸ್ ಸ್ಟೇಟ್ ಪ್ರಿಸನ್’ ಎಂಬ ಜೈಲಿನಲ್ಲಿ ಒಂದೇ ಕೋಣೆಯಲ್ಲಿ ಶಿಕ್ಷೆಯನ್ನು ಅನುಭವಿ ಸುತ್ತಿದ್ದರು. ಇಬ್ಬರ ಸ್ನೇಹ ಗಳಸ್ಯ ಕಂಠಸ್ಯ! ನೀಲ್ಸನ್ ಭಾರತೀಯ ಯೋಗ ಮತ್ತು ವಶೀಕರಣದ ಬಗ್ಗೆ ಹಾರ್ಡ್ರಪ್ಪನಿಗೆ ಪರಿಚಯ ಮಾಡಿಕೊಟ್ಟ.

ಇದನ್ನೂ ಓದಿ: Dr N Someshwara Column: ಅಲೆದಾಡುವ ಗರ್ಭಕೋಶ ಮತ್ತು ಮಾನಸಿಕ ಅನಾಥರು

ಹಾರ್ಡ್ರಪ್ “ನಾನು ಬ್ಯಾಂಕ್ ದರೋಡೆ ಮಾಡಲಿಲ್ಲ. ನಾನು ಯಾರನ್ನೂ ಕೊಲ್ಲಲಿಲ್ಲ! ನನ್ನನ್ನು ಸಂಮೋಹನಗೊಳಿಸಿ ನನ್ನಿಂದ ಈ ಕೆಲಸವನ್ನು ಮಾಡಿಸಿದವನು ನೀಲ್ಸನ್" ಎಂದು ಪೊಲೀಸರ ಬಳಿ ಬಾಯಿಬಿಟ್ಟ. ನೀಲ್ಸನ್ ಬುದ್ಧಿವಂತ. ಮತ್ತೊಬ್ಬರನ್ನು ದುರುಪಯೋಗಿಸಿಕೊಳ್ಳುವುದರಲ್ಲಿ ಸಿದ್ಧಹಸ್ತ. ಇವನು ಸಂಮೋಹನ, ವಶೀಕರಣ, ವಶ್ಯಸುಪ್ತಿ ಎಂಬೆಲ್ಲ ಅರ್ಥವನ್ನು ಹೊಮ್ಮಿಸುವ ‘ಹಿಪ್ನಾಟಿಸಂ’ ಅನ್ನು ‘ಕರಗತ’ಗೊಳಿಸಿಕೊಂಡಿದ್ದ.

ಮತ್ತೊಬ್ಬರನ್ನು ಸದಾ ತನ್ನ ‘ನಿಯಂತ್ರಣ’ದಲ್ಲಿ ಇಟ್ಟುಕೊಳ್ಳುವ ಕಲೆಯನ್ನು ಕಲಿತಿದ್ದ. ಜೈಲಿನಲ್ಲಿ ನೀಲ್ಸನ್ ಪ್ರತಿದಿನ ಹಾರ್ಡ್ರಪ್‌ನನ್ನು ಸಂಮೋಹನಕ್ಕೆ ಒಳಪಡಿಸುತ್ತಿದ್ದ. ಅವನು ಸಂಮೋಹನ ಸ್ಥಿತಿಯಲ್ಲಿರುವಾಗ, ಅವನಿಂದ ತನಗೆ ಅಗತ್ಯವಾದ ಎಲ್ಲ ಕೆಲಸಗಳನ್ನು ಮಾಡಿಸಿಕೊಳ್ಳುತ್ತಿದ್ದ.

ಡಬಲ್ ಮರ್ಡರ್ ಕೇಸ್ ಅತೀವ ಕುತೂಹಲಕ್ಕೆ ಎಡೆ ಮಾಡಿತು. ಪೊಲೀಸರ ವಶದಲ್ಲಿದ್ದ ಹಾರ್ಡ್ರ ಪ್‌ನನ್ನು ನ್ಯಾಯವೈದ್ಯಕೀಯ ವಿಜ್ಞಾನದಲ್ಲಿ ಪರಿಣತಿಯನ್ನು ಪಡೆದಿದ್ದ ಡಾ.ಮ್ಯಾಕ್ಸ್ ಶ್ಮೆಟ್ ಪರೀಕ್ಷಿಸಿದ್ದ. ಹಾರ್ಡ್ರಪ್ ವಶೀಕರಣಕ್ಕೆ ಸುಲಭವಾಗಿ ಈಡಾಗಬಲ್ಲ ದುರ್ಬಲ, ಬಹುಶಃ ವಶ್ಯ ಸುಪ್ತಿಯ ಪ್ರಭಾವದಲ್ಲಿ ಅಪರಾಧವನ್ನು ಮಾಡಿರಬಹುದು ಎಂದ.

ಡಬಲ್ ಮರ್ಡರ್ ಪ್ರಕರಣವು ಕೆಳಗಿನ ಎಲ್ಲ ನ್ಯಾಯಾಲಯಗಳಲ್ಲಿ ತೀರ್ಪನ್ನು ಕಾಣದೆ ಡ್ಯಾನಿಶ್ ಪರಮೋಚ್ಚ ನ್ಯಾಯಾಲಯಕ್ಕೆ ಹೋಯಿತು. ಅಲ್ಲಿ ಸುದೀರ್ಘ ವಿಚಾರಣೆಯು ನಡೆಯಿತು. ಕೊನೆಗೆ ನ್ಯಾಯಾಲಯವು ಈ ಕೆಳಕಂಡಂತೆ ತೀರ್ಪನ್ನು ನೀಡಿತು: ನೀಲ್ಸನ್ ಪ್ರಜ್ಞಾಪೂರ್ವಕವಾಗಿ ಹಾರ್ಡ್ರ ಪ್‌ನ ಮೇಲೆ ಸಂಮೋಹನವನ್ನು ಪ್ರಯೋಗಿಸಿ ಅವನನ್ನು ವಶಪಡಿಸಿಕೊಂಡಿದ್ದ. ವಶ್ಯಸುಪ್ತ ಸ್ಥಿತಿಯಲ್ಲಿ ಅವನಿಂದ ಬ್ಯಾಂಕ್ ದರೋಡೆ ಹಾಗೂ ಕೊಲೆಯನ್ನು ಮಾಡಿಸಿದ.

ನೀಲ್ಸನ್, ಹಾರ್ಡ್ರಪ್‌ನನ್ನು ಹಲವು ಸಲ ಸಂಮೋಹನಕ್ಕೆ ಒಳಪಡಿಸಿದ್ದ. ಅವನ ಮೇಲೆ ಮಾನಸಿಕ ಪ್ರಭುತ್ವವನ್ನು ಸ್ಥಾಪಿಸಿದ್ದ. ತಾನು ಹೇಳಿದಂತೆ ಕೇಳುವ ಹಾಗೆ ರೂಢಿಸಿಕೊಂಡಿದ್ದ. ಬ್ಯಾಂಕನ್ನು ದೋಚಲೆತ್ನಿಸಿ, ಇಬ್ಬರನ್ನು ಕೊಂದ ಅಪರಾಧಕ್ಕೆ ಹಾರ್ಡ್ರಪ್‌ನನ್ನು ಮಾನಸಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುವಂತೆ ಸೂಚಿಸಿತು. ದರೋಡೆ ಹಾಗೂ ಕೊಲೆಗೆ ಪ್ರಚೋದಿಸಿದ್ದ ನೀಲ್ಸನ್ ಮಾನಸಿಕ ಆಸ್ಪತ್ರೆಯಲ್ಲಿ ಜೀವಮಾನಪೂರ್ಣ ಉಳಿಯುವಂತೆ ಸೂಚಿಸಿತು.

‘ಕೋಪನ್‌ಹೇಗನ್ ಹಿಪ್ನಾಸಿಸ್ ಮರ್ಡರ್ ಪ್ರಕರಣ’ವು ವೈಜ್ಞಾನಿಕವಾಗಿ ಹಾಗೂ ಕಾನೂನಾತ್ಮಕ ವಾಗಿ ಇಂದಿಗೂ ಚರ್ಚೆಯಲ್ಲಿರುವ ವಿಷಯವಾಗಿದೆ. ಬಹಳಷ್ಟು ಮನೋವೈದ್ಯರು ಸಂಮೋಹನ ವಿದ್ಯೆಯ ಮೂಲಕ ಒಬ್ಬ ವ್ಯಕ್ತಿಯನ್ನು, ಅವನ ನೈತಿಕ ಪರಿಧಿಯನ್ನು ಮೀರಿ, ಅಪರಾಧದಲ್ಲಿ ತೊಡಗುವಂತೆ ಪ್ರಚೋದಿಸಲು ಸಾಧ್ಯವಿಲ್ಲ ಎನ್ನುತ್ತಾರೆ.

ಕೆಲವರು ದುರ್ಬಲ ವ್ಯಕ್ತಿತ್ವ ಇರುವವರ ಮೇಲೆ ನಿರಂತರವಾಗಿ ಸಂಮೋಹನವನ್ನು ಪ್ರಯೋಗಿಸು ತ್ತಿದ್ದರೆ, ಒಂದಲ್ಲ ಒಂದು ದಿನ ಅವರನ್ನು ವಶ್ಯಸುಪ್ತ ಸ್ಥಿತಿಯಲ್ಲಿಟ್ಟು ಅವರಿಂದ ಬೇಕಾದ್ದನ್ನು ಮಾಡಿಸಬಹುದು ಎನ್ನುತ್ತಾರೆ. ಆದರೆ ಇಂಥವರ ಸಂಖ್ಯೆ ಹೆಚ್ಚಿಲ್ಲ ಎನ್ನುವುದು ಗಮನೀಯ.

ಕೋಪನ್‌ಹೇಗನ್ ಹಿಪ್ನಾಸಿಸ್ ಮರ್ಡರ್ ಪ್ರಕರಣವು ‘ವಶೀಕರಣದಿಂದ ಬ್ಯಾಂಕ್ ದರೋಡೆ ಹಾಗೂ ಕೊಲೆಯನ್ನು ಮಾಡಿಸಲು ಸಾಧ್ಯ’ ಎಂದು ನ್ಯಾಯಾಲಯವು ಒಪ್ಪಿಕೊಂಡ ಅಪರೂಪದಲ್ಲಿ ಅಪರೂಪದ ಪ್ರಕರಣ. ಇಂಥ ಮತ್ತೊಂದು ಪ್ರಕರಣವು ಇದುವರೆಗೂ ಸಂಭವಿಸಲಿಲ್ಲ. ಮನಸ್ಸು, ವಶೀಕರಣ, ಬ್ಯಾಂಕ್ ದರೋಡೆ ಹಾಗೂ ಕೊಲೆ- ಒಳ್ಳೆಯ ಬಾಕ್ಸ್ ಆಫೀಸ್ ಫಾರ್ಮುಲಾ ಆದ ಕಾರಣ, ‘ದ ಗಾರ್ಡಿಯನ್ ಏಂಜಲ್’ (2018) ಎಂಬ ಚಲನಚಿತ್ರವು ನಿರ್ಮಾಣವಾಯಿತು. ಈ ಚಿತ್ರವು ಬಿಡುಗಡೆಯಾದ ಮೇಲೆ ಸಂಮೋಹನ ವಿದ್ಯೆಯ ಇತಿ-ಮಿತಿಯ ಬಗ್ಗೆ ಜಗತ್ತಿನಾದ್ಯಂತ ಚರ್ಚೆಯು ಆರಂಭವಾಗಿದೆ.

ಏನಿದು ಹಿಪ್ನಾಟಿಸಂ?

ಸಂಮೋಹನ, ವಶೀಕರಣ, ವಶ್ಯಸುಪ್ತಿ ಎನ್ನುವುದು ಒಂದು ಪರವಶ ಸ್ಥಿತಿ (ಟ್ರಾನ್ಸ್ ಸ್ಟೇಟ್). ಮನಸ್ಸು ಹೆಚ್ಚು ಜಾಗೃತವಾಗಿರುತ್ತದೆ. ವಿಶೇಷ ಏಕಾಗ್ರತೆಯನ್ನು ತೋರುತ್ತದೆ. ಸೂಚನಾ ಶೀಲತೆ ಯನ್ನು (ಸೂಚನೆಗಳನ್ನು ಪರಿಪಾಲಿಸುವಿಕೆ) ಪಡೆದಿರುತ್ತದೆ.

ಸಂಮೋಹನದ (ಹಿಪ್ನಾಟಿಸಂ) ಬಗ್ಗೆ ನಮ್ಮಲ್ಲಿ ಸಾಕಷ್ಟು ತಪ್ಪು ಕಲ್ಪನೆಗಳಿವೆ. ಸಂಮೋಹನಕ್ಕೆ ಒಳಗಾದವನು (ಹಿಪ್ನೋಟೈಜ಼್ಡ್) ತನ್ನ ಪ್ರeಯನ್ನು ಕಳೆದುಕೊಳ್ಳುವುದಿಲ್ಲ. ನಿದ್ರಾಸ್ಥಿತಿಗೆ ಹೋಗುವು ದಿಲ್ಲ. ಅವನ ಮನಸ್ಸು ಸಂಮೋಹನಕಾರನ (ಹಿಪ್ನಾಟಿಸ್ಟ್) ವಶದಲ್ಲಿ ಇರುವುದಿಲ್ಲ.

ಸಂಮೋಹನಕ್ಕೆ ಒಳಗಾದವನ ಸ್ಥಿತಿಯು ಸಹಜವಾಗಿರುತ್ತದೆ. ಸಹಜ ಎಂದರೆ, ಮನಸ್ಸು ಯಾವುದೇ ರೀತಿಯ ಒತ್ತಡಗಳಿಲ್ಲದೆ ಅತ್ಯಂತ ಸಡಿಲ ಹಾಗೂ ವಿಶ್ರಾಂತ ಸ್ಥಿತಿಯಲ್ಲಿರುತ್ತದೆ. ಆಂತರಿಕ ಏಕಾಗ್ರ ತೆಯು ಜಾಗೃತವಾಗಿರುತ್ತದೆ. ಒಂದು ರೀತಿ ‘ಸುತ್ತಮುತ್ತಲಿನ ಜಗತ್ತಿನ ಪರಿವೆಯನ್ನು ಮರೆತು ತನ್ನ ಇಷ್ಟದ ಪುಸ್ತಕದಲ್ಲಿ ಆಳವಾಗಿ ತಲ್ಲೀನವಾಗಿರುವ ಸ್ಥಿತಿ’.

ಇಂಥ ಸ್ಥಿತಿಯಲ್ಲಿ ನಾವು ನೀಡುವ ಸಲಹೆಗಳನ್ನು ಸ್ವೀಕರಿಸಲು ಮನಸ್ಸು ಹೆಚ್ಚು ಮುಕ್ತವಾಗಿರು ತ್ತದೆ. ಹೀಗೆ ಒಬ್ಬ ವ್ಯಕ್ತಿಯ ಆಲೋಚನೆಗಳನ್ನು, ಭಾವನೆಗಳನ್ನು ಹಾಗೂ ವರ್ತನೆಗಳನ್ನು ಬದಲಾಯಿಸುವುದು ಸುಲಭವಾಗುತ್ತದೆ.

ಆಧುನಿಕ ಮನೋವೈದ್ಯಕೀಯದಲ್ಲಿ, ಹೀಗೆ ಉಪಯುಕ್ತ ಸಲಹೆಯನ್ನು ನೀಡುವುದೇ ‘ಸಂಮೋಹನ ಚಿಕಿತ್ಸೆ’ ಅಥವಾ ‘ಹಿಪ್ನೋಥೆರಪಿ’. ಸಂಮೋಹನ ಚಿಕಿತ್ಸೆಯಿಂದ ಆತಂಕವನ್ನು ನಿವಾರಿಸಬಹುದು, ದೈಹಿಕ ನೋವನ್ನು ಶಮನಗೊಳಿಸಬಹುದು ಹಾಗೂ ಧೂಮಪಾನವನ್ನು ಬಿಟ್ಟುಬಿಡುವಂತೆ ಸೂಚಿಸಬಹುದು.

ವೈಜ್ಞಾನಿಕವೋ-ಪರಮ ಮೌಢ್ಯವೋ?

ವಿಜ್ಞಾನವು ಸಂಮೋಹನ ವಿದ್ಯೆಯ ಅಸ್ತಿತ್ವವನ್ನು ಒಪ್ಪುತ್ತದೆ. ಪರವಶ ಸ್ಥಿತಿಯಲ್ಲಿರುವಾಗ, ಮಿದುಳಿನಲ್ಲಿ ತಲೆದೋರುವ ಬದಲಾವಣೆಗಳನ್ನು ಸ್ಕ್ಯಾನಿಂಗ್ ಮೂಲಕ ದಾಖಲಾಗಿಸಲಾಗಿದೆ. ಅಮೆರಿಕ, ಯುಕೆ, ಕೆನಡ, ಆಸ್ಟ್ರೇಲಿಯಾ, ಜರ್ಮನಿ, ಫ್ರಾನ್ಸ್, ಭಾರತ, ದಕ್ಷಿಣ ಆಫ್ರಿಕ ಹಾಗೂ ನ್ಯೂಜ಼ಿಲೆಂಡ್ ದೇಶಗಳಲ್ಲಿ ಸಂಮೋಹನ ಚಿಕಿತ್ಸೆಯನ್ನು, ಪೂರಕ ಚಿಕಿತ್ಸೆಯನ್ನಾಗಿ (ಕಾಂಪ್ಲಿ ಮೆಂಟರಿ ಥೆರಪಿ) ಕಾನೂನು ಬದ್ಧವಾಗಿ ನೀಡಲು ಸಾಧ್ಯವಿದೆ. ಆದರೆ ನಮ್ಮ ಮಾಧ್ಯಮಗಳು ಸಂಮೋಹನ ಚಿಕಿತ್ಸೆಯ ವಿರೂಪಗೊಳಿಸಿದ ಚಿತ್ರಣ ನೀಡಿದ್ದು, ವೇದಿಕೆಗಳ ಮೇಲೆ ಕೆಲವರ ಅವೈಜ್ಞಾನಿಕ ಪ್ರದರ್ಶನಗಳು ಹಾಗೂ ಕೆಲವರ ಪ್ರತಿಪಾದನೆಗಳಿಂದಾಗಿ ಸಂಮೋಹನ ಚಿಕಿತ್ಸೆಯ ಬಗ್ಗೆ ಜನಸಾಮಾನ್ಯರಲ್ಲಿ ಗೊಂದಲ ಉಂಟಾಗಿದೆ.

ಇತಿಹಾಸ

ಹಿಪ್ನೋಸಿಸ್ ಎನ್ನುವ ತಾಂತ್ರಿಕ ಪದವು ಬಳಕೆಗೆ ಬರುವ ಮೊದಲೇ ಈ ಚಿಕಿತ್ಸೆಯು ಅಸ್ತಿತ್ವದಲ್ಲಿತ್ತು. ಕ್ರಿ.ಪೂ.1500 ವರ್ಷಗಳ ಹಿಂದೆ ಇದ್ದ ಪ್ರಾಚೀನ ಈಜಿಪ್ಟಿನಲ್ಲಿ ‘ನಿದ್ರಾ ದೇವಾಲಯಗಳು’ ಅಥವಾ ‘ಸ್ಲೀಪ್ ಟೆಂಪಲ್ಸ್’ ಅಸ್ತಿತ್ವದಲ್ಲಿದ್ದವು. ಪುರೋಹಿತರು ವ್ಯಕ್ತಿಗಳನ್ನು ‘ಪರವಶ’ರನ್ನಾಗಿಸಿ, ಚೆನ್ನಾಗಿ ನಿದ್ರೆ ಮಾಡುವಂತೆ ಸೂಚನೆಗಳನ್ನು ನೀಡುತ್ತಿದ್ದರು. ನಿದ್ರೆಯಲ್ಲಿ ಅವರು ಕಾಣುವ ಕನಸುಗಳಿಗೆ ಅರ್ಥವನ್ನು ಸೂಚಿಸಿ, ಅವರ ಮಾನಸಿಕ ಸಮಸ್ಯೆಗಳನ್ನು ಪರಿಹರಿಸುತ್ತಿದ್ದರು.

ಪ್ರಾಚೀನ ಭಾರತದಲ್ಲಿ ಸಂಮೋಹನ ವಿದ್ಯೆ ಅಸ್ತಿತ್ವದಲ್ಲಿತ್ತು. ಉಪನಿಷತ್ತುಗಳಲ್ಲಿ ‘ಸಂಮೋಹನ’ ಎಂಬ ಹೆಸರು ಇಲ್ಲ. ಆದರೆ ‘ಮನಸ್ಸು’ ಮತ್ತು ‘ಪ್ರಾಣ’ಗಳ ಮೇಲೆ ಹತೋಟಿಯನ್ನು ಸಾಧಿಸಿ, ಆಳವಾದ ‘ಸಮಾಧಿ’ ಸ್ಥಿತಿಯನ್ನು ತಲುಪುವ ಬಗ್ಗೆ ಪ್ರಸ್ತಾಪವಿದೆ. ಯೋಗಸೂತ್ರವು ‘ಧಾರಣ’, ‘ಧ್ಯಾನ’ ಹಾಗೂ ‘ಸಮಾಧಿ’ ಸ್ಥಿತಿಯನ್ನು ಪ್ರಸ್ತಾಪಿಸುತ್ತದೆ.

‘ಪರಚಿತ್ತಜ್ಞಾನ’, ‘ವಶಿತ್ವ’ಗಳ ಉಲ್ಲೇಖವಿದೆ. ಅಷ್ಟಸಿದ್ಧಿಗಳಲ್ಲಿ ವಶಿತ್ವವೂ ಸೇರಿದೆ. ಸಾಧನೆಯನ್ನು ಪಡೆದವರು ಕೇವಲ ‘ತ್ರಾಟಕ’ ಅಥವಾ ದಿಟ್ಟಿಸಿನೋಡುವುದರ ಮೂಲಕ ಮತ್ತೊಬ್ಬರ ಮನದಿಂಗಿತ ವನ್ನು ತಿಳಿಯಬಲ್ಲರು ಹಾಗೂ ಅವರ ಸೂಚನೆಗಳನ್ನು ಪಾಲಿಸಬಲ್ಲರು. ಭೋಜನ ‘ಸಮರಾಂಗಣ ಸೂತ್ರಧಾರ’ವು ಹಾಗೂ ‘ಕುಟ್ಟಿನಿ ಮತ’ವು ಸಂಮೋಹನದಿಂದ ಶತ್ರುಗಳನ್ನು ದಿಕ್ಕುತಪ್ಪಿಸಬಹುದು ಎನ್ನುತ್ತವೆ. ಮಹಾಭಾರತದಲ್ಲಿ ಕೃಷ್ಣನು ‘ವಿಶ್ವರೂಪ’ವನ್ನು ತೋರುವುದು ಸಹ ‘ಸಂಮೋಹನ’ದ ಒಂದು ಭಾಗವೆಂದು ಹೇಳುವವರೂ ಉಂಟು. ಸ್ವಾಮಿ ವಿವೇಕಾನಂದ, ಅರಬಿಂದೊ, ರಮಣ ಮಹರ್ಷಿಗಳು ಮನಸ್ಸಿನ ಅಪಾರ ಶಕ್ತಿಯನ್ನು ಉಪಯೋಗಿಸಿಕೊಂಡು, ಸುಲಭವಾಗಿ ಸಮಾಧಿ ಸ್ಥಿತಿಯನ್ನು ತಲುಪುತ್ತಿದ್ದರು.

ಯುರೋಪಿನಲ್ಲಿ ಸಂಮೋಹನದ ಬಗೆಗಿನ ಆಸಕ್ತಿಯು 18ನೆಯ ಶತಮಾನದಲ್ಲಿ ಆರಂಭವಾಯಿತು. ಜರ್ಮನಿಯ ಫ್ರಾಂಜ಼್ ಆಂಟನ್ ಮೆಸ್ಮರ್ (1734-1815) ಓರ್ವ ವೈದ್ಯ. ಆಧುನಿಕ ಸಂಮೋಹನ ಚಿಕಿತ್ಸೆಗೆ ತಳಪಾಯವನ್ನು ಹಾಕಿದವನು. ಇವನು ‘ಮ್ಯಾಗ್ನೆಟಿಸ್ಮಸ್ ಅನಿಮಾಲಿಸ್’ ಅಥವಾ ‘ಅನಿಮಲ್ ಮ್ಯಾಗ್ನೆಟಿಸಮ್’ ಎಂಬ ‘ಜೈವಿಕ ಅಯಸ್ಕಾಂತತ್ವ’ದ ಅಸ್ತಿತ್ವವನ್ನು ಪ್ರತಿಪಾದಿಸಿದ. ಈ ಸಿದ್ಧಾಂತದ ಪ್ರಕಾರ ಪ್ರತಿಯೊಂದು ಜೀವಿಯಲ್ಲಿಯೂ ಒಂದು ‘ಅಯಸ್ಕಾಂತ ದ್ರವ’ವಿರುತ್ತದೆ. ಇದು ದೇಹದಾದ್ಯಂತ ಹರಿಯುತ್ತಿರುತ್ತದೆ. ಯಾವುದಾದರೂ ಕಾರಣದಿಂದ ಈ ಹರಿಯುವಿಕೆಗೆ ಅಡೆತಡೆ ಯುಂಟಾದರೆ ಅಥವಾ ಏರುಪೇರಾದರೆ ಆಗ ಕಾಯಿಲೆಗಳು ಬರುತ್ತವೆ.

ಚಿಕಿತ್ಸಕನು ಅಯಸ್ಕಾಂತಗಳನ್ನು ಬಳಸಿ ಅಥವಾ ಬರಿಗೈಯನ್ನು ವ್ಯಕ್ತಿಯ ಮೈಮೇಲೆ ಹಾಯಿಸಿ ಇಲ್ಲವೇ ಸ್ಪರ್ಶಿಸಿ, ನಿಂತಿದ್ದ ಅಯಸ್ಕಾಂತೀಯ ದ್ರವವು ಮುಕ್ತವಾಗಿ ಹರಿಯುವಂತೆ ಮಾಡಬಹುದು ಎನ್ನುವುದು ಈತನ ಸಿದ್ಧಾಂತದ ತಿರುಳು. ಮೆಸ್ಮರ್ ಒಬ್ಬೊಬ್ಬರಿಗೆ ಚಿಕಿತ್ಸೆಯನ್ನು ನೀಡುವುದರ ಜತೆಯಲ್ಲಿ ಸಾಮೂಹಿಕವಾಗಿಯೂ ಚಿಕಿತ್ಸೆಯನ್ನು (ಮಾಸ್ ಹಿಪ್ನೋಥೆರಪಿ) ನೀಡುತ್ತಿದ್ದ. ಅನೇಕ ಸಲ ಚಿಕಿತ್ಸೆಗೆ ಒಳಗಾಗುತ್ತಿದ್ದವರಿಗೆ ನಾನಾ ರೀತಿಯ ಸೆಳವು ಬರುತ್ತಿತ್ತು. ಅಸಹಜ ಶಬ್ದಗಳನ್ನು ಹೊರಡಿಸುತ್ತಿದ್ದರು. ಕೆಲವು ಸಲ ಪ್ರಜ್ಞೆಯು ತಪ್ಪುತ್ತಿತ್ತು.

ಮೆಸ್ಮರನ ಚಿಕಿತ್ಸೆಯ ವೈಜ್ಞಾನಿಕ ಋಜುತ್ವದ ಬಗ್ಗೆ ಜನಸಾಮಾನ್ಯರಲ್ಲಿ ಗೊಂದಲಗಳುಂಟಾದವು. ಆಗ ಫ್ರಾನ್ಸಿನ ಅರಸ ‘ಕಿಂಗ್ ಲೂಯಿ-16’ (1784) ‘ಫ್ರೆಂಚ್ ರಾಯಲ್ ಕಮಿಷನ್’ ಎಂಬ ಆಯೋಗ ವನ್ನು ರೂಪಿಸಿದ. ಮೆಸ್ಮರ್ ನೀಡುವ ಚಿಕಿತ್ಸೆಯ ಸತ್ಯಾಸತ್ಯತೆಯನ್ನು ಪರೀಕ್ಷಿಸುವಂತೆ ಕೇಳಿ ಕೊಂಡ. ಈ ಆಯೋಗದಲ್ಲಿ ಬೆಂಜ಼ಮಿನ್ ಫ್ರಾಂಕ್ಲಿನ್, ಡಾ.ಜೋಸೆಫ್ ಇಗ್ನೇಸ್ ಗಿಲೋಟಿನ್ (ಫ್ರೆಂಚ್ ಕ್ರಾಂತಿಯಲ್ಲಿ ಶಿರಚ್ಛೇದನ ಯಂತ್ರವನ್ನು ರೂಪಿಸಿದವನು), ಆಂಟಾಯ್ನ್ ಲವಾಸಿಯರ್, ಜೀನ್ ಬ್ಯಾಪ್ಟಿಸ್ಟ್ ಲೆ ರಾಯ್, ಜೀನ್ ಸಿಲ್ವೈನ್ ಬೈಲಿ ಮುಂತಾದವರೆಲ್ಲರೂ ಇದ್ದರು. ‌

ಇವರು ಒಂದು ಪ್ರಯೋಗವನ್ನು ಮಾಡಿದರು. ಅನಾರೋಗ್ಯ ಪೀಡಿತಳಾದ ಓರ್ವ ಮಹಿಳೆಯನ್ನು ಆಯ್ಕೆ ಮಾಡಿದರು. ಆಕೆಯ ಕಣ್ಣುಗಳಿಗೆ ಬಟ್ಟೆಯನ್ನು ಕಟ್ಟಿದರು. ಮೆಸ್ಮರನು ತನಗೆ ಚಿಕಿತ್ಸೆಯನ್ನು ನೀಡುವುದನ್ನು ಆಕೆಯು ಕಣ್ಣಾರೆ ನೋಡುವುದು ಅಸಾಧ್ಯವಾಯಿತು. ‘ಈಗ ಮೆಸ್ಮರ್ ಚಿಕಿತ್ಸೆ ಯನ್ನು ನೀಡುತ್ತಿದ್ದಾನೆ’ ಎಂದು ಗಟ್ಟಿಯಾಗಿ ಹೇಳಿದರು. ಆದರೆ ಮೆಸ್ಮರನನ್ನು ಆಕೆಯಿಂದ ಬಹಳ ದೂರವಿರಿಸಿದರು. ತಕ್ಷಣವೇ ಆಕೆಯಲ್ಲಿ ಸೆಳವು ಕಂಡುಬಂದಿತು.

ಮಲಗಿದಲ್ಲಿಯೇ ಕಂಪಿಸಲಾರಂಭಿಸಿದಳು. ಬಾಯಿಯಿಂದ ಅಸಹಜ ಶಬ್ದಗಳು ಹೊರಬಂದವು. ಕೊನೆಗೆ ಆಕೆ ಮೂರ್ಛಿತಳಾದಳು. ಸ್ವಲ್ಪ ಹೊತ್ತಿನ ನಂತರ ಆಕೆಗೆ ಎಚ್ಚರವಾಯಿತು. ಹಾಗೆಯೇ ಮಲಗಿರುವಂತೆ ಆಕೆಗೆ ಹೇಳಿದರು. ಈಗ ಮೆಸ್ಮರನನ್ನು ಕರೆಯಿಸಿ, ಆ ಮಹಿಳೆಗೆ ಯಾವುದೇ ಸೂಚನೆ ಯನ್ನು ನೀಡದೆ, ಚಿಕಿತ್ಸೆಯನ್ನು ನೀಡುವಂತೆ ಹೇಳಿದರು.

ಮೆಸ್ಮರ್ ಆಕೆಯ ಒಡಲಿನ ಮೇಲೆ ತನ್ನ ಹಸ್ತವನ್ನು ಹಾಯಿಸಿದ. ಮೆಸ್ಮರ್ ಚಿಕಿತ್ಸೆಯನ್ನು ನೀಡು ತ್ತಿರುವುದು ಆಕೆಯ ಕಣ್ಣಿಗೆ ಕಾಣುತ್ತಿರಲಿಲ್ಲ. ಹಾಗಾಗಿ ಆಕೆಯ ದೇಹದಲ್ಲಿ ಯಾವುದೇ ಬದಲಾವಣೆ ಗಳು ಕಂಡುಬರಲಿಲ್ಲ. ಮೆಸ್ಮರನ ಚಿಕಿತ್ಸೆಯು ವಿಫಲವಾಗಿತ್ತು.

ಆಯೋಗದ ಸದಸ್ಯರು ಒಟ್ಟಿಗೆ ಕುಳಿತು ಚರ್ಚಿಸಿದರು. ಅವರ ಚರ್ಚೆಯ ಸಾರಾಂಶವು ಈ ಕೆಳ ಕಂಡಂತಿತ್ತು: ಜೈವಿಕ ಅಯಸ್ಕಾಂತತ್ವ ಎನ್ನುವುದು ಇಲ್ಲ ವ್ಯಕ್ತಿಯು ಮೆಸ್ಮರನನ್ನು ತಮ್ಮ ಕಣ್ಣಾರೆ ಕಂಡರೆ ಮಾತ್ರ, ಅವರಲ್ಲಿ ವಿವಿಧ ಪರಿಣಾಮಗಳು ಕಂಡುಬರುತ್ತಿದ್ದವು.

ಹಲವರು ಗುಣಮುಖರಾಗುತ್ತಿದ್ದರು. ಇದಕ್ಕೆ ಕಾರಣ ವ್ಯಕ್ತಿಯ ನಂಬಿಕೆ ಹಾಗೂ ಮೆಸ್ಮರ್ ನೀಡು ತ್ತಿದ್ದ ಸಲಹೆ (ಮನೋದೈಹಿಕ ಪ್ರಭಾವಗಳು) ಗಳ ಪರಿಣಾಮ. ಮೆಸ್ಮರ್ ನೀಡುತ್ತಿದ್ದ ಚಿಕಿತ್ಸೆಯು ಹಲವರಿಗೆ ಉತ್ತಮ ಪರಿಣಾಮವನ್ನುಂಟು ಮಾಡಿತ್ತು. ಆದರೆ ಅದಕ್ಕೆ ಕಾರಣ ಜೈವಿಕ ಅಯ ಸ್ಕಾಂತತ್ವದ ದೋಷ ನಿವಾರಣೆಯಲ್ಲ.

ವ್ಯಕ್ತಿಯ ಮನಸ್ಸಿಗೆ ದೊರೆಯುತ್ತಿದ್ದ ಸಲಹೆಯ ಪರಿಣಾಮದಿಂದ ಅವರು ಗುಣಮುಖ ರಾಗು ತ್ತಿದ್ದರು. ಈ ಆಯೋಗದ ವರದಿಯು, ಜೈವಿಕ ಅಯಸ್ಕಾಂತತ್ವ ಎನ್ನುವುದು ಇಲ್ಲವೇ ಇಲ್ಲ ಎಂದು ಸಾರಿದಾಗ, ಜನಸಾಮಾನ್ಯರಿಗೆ ಮೆಸ್ಮರನ ಮೇಲಿದ್ದ ನಂಬಿಕೆಯು ಹೊರಟುಹೋಯಿತು. ಇದರೊ ಡನೆ ಅವನ ಅವನತಿಯೂ ಆರಂಭವಾಯಿತು.

ಇವತ್ತು ಕೆಲವೆಡೆ ಸಾರ್ವಜನಿಕವಾಗಿ ವೇದಿಕೆಯ ಮೇಲೆ ಸಂಮೋಹನ ಚಿಕಿತ್ಸೆಯ ಪ್ರದರ್ಶನವನ್ನು ತೋರಿಸುವುದುಂಟು. ಅಂಥ ಪ್ರದರ್ಶನಗಳ ಹಿಂದೆ ಮೆಸ್ಮರನ ಸ್ಪೂರ್ತಿಯಿದೆ.