ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ ಸುನಿತಾ ವಿಲಿಯಮ್ಸ್​

Dr N Someshwara Column: ಅಲೆದಾಡುವ ಗರ್ಭಕೋಶ ಮತ್ತು ಮಾನಸಿಕ ಅನಾಥರು

ಹಿಸ್ಟೀರಿಯ, ಮನುಕುಲದ ಅತ್ಯಂತ ಹಳೆಯ ಕಾಯಿಲೆಗಳಲ್ಲಿ ಒಂದು. ಈಜಿಪ್ಷಿಯನ್ ನಾಗರಿಕತೆ ಯಿಂದ ಹಿಡಿದು 20ನೆಯ ಶತಮಾನದ ಆದಿಭಾಗದವರೆಗೆ ಜನರನ್ನು ಮೌಢ್ಯದಲ್ಲಿ ಮುಳುಗಿಸಿದ್ದ ಮಾನಸಿಕ ಸಮಸ್ಯೆ. ನಮ್ಮ ದೇಹ ಮತ್ತು ಮನಸ್ಸುಗಳ ನಡುವೆ ಇರುವ ಸಂಬಂಧ, ಇವೆರಡರ ಅಸ್ವಸ್ಥತೆ ಯಿಂದ ಬರುವ ಕಾಯಿಲೆಗಳು ಇವನ್ನು ನಾವು ಅರ್ಥ ಮಾಡಿಕೊಂಡಿಲ್ಲ.

ಅಲೆದಾಡುವ ಗರ್ಭಕೋಶ ಮತ್ತು ಮಾನಸಿಕ ಅನಾಥರು

ಹಿಂದಿರುಗಿ ನೋಡಿದಾಗ

ಅದು 1632ನೆಯ ವರ್ಷ. ಫ್ರಾನ್ಸ್ ದೇಶದ ಲೌಡನ್ ಎಂಬ ಹಳ್ಳಿ. ಅಲ್ಲಿ ಒಂದು ಕಾನ್ವೆಂಟ್. ಆ ಕಾನ್ವೆಂಟಿನಲ್ಲಿ ಉರ್ಸುಲೈನ್ ಕ್ರೈಸ್ತ ಸನ್ಯಾಸಿನಿಯರು. ಹತ್ತಿರದಲ್ಲಿಯೇ ಓರ್ವ ಕ್ರೈಸ್ತ ಪಾದ್ರಿ ಫಾದರ್ ಉರ್ಬೈನ್ ಗ್ರಾಂಡೀರ್ ವಾಸವಾಗಿದ್ದ. ಊರು ಚಿಕ್ಕದಾದರೂ ಊರಿನ ರಾಜಕೀಯವು ಮಹತ್ತರ ವಾಗಿಯೇ ಇತ್ತು. ಮಧ್ಯಯುಗದ ಎಲ್ಲ ದೇಶಗಳಲ್ಲಿರುವಂತೆ ಚರ್ಚ್ ರಾಜನಿಗಿಂತಲೂ ಸರ್ವಶಕ್ತ ವಾಗಿತ್ತು. ಒಂದು ದಿನ, ಕಾನ್ವೆಂಟಿನಲ್ಲಿದ್ದ ಉರ್ಸುಲಾ ಕ್ರೈಸ್ತ ಸನ್ಯಾಸಿನಿಯರಲ್ಲಿ ವಿಚಿತ್ರ ವರ್ತನೆಗಳು ಕಂಡು ಬಂದವು.

ಕೆಲವರಿಗೆ ಸೆಳವು (ಕನ್ವಲ್ಷನ್ಸ್) ಬಂದಿತು. ಹಲವರು ಕೀಚಲು ಧ್ವನಿಯಲ್ಲಿ ಜೋರಾಗಿ ಚೀರಲಾ ರಂಭಿಸಿದರು. ಇನ್ನುಳಿದವರು ಅರ್ಥವಾಗದ ಬೇರೆ ಬೇರೆ ಭಾಷೆಗಳಲ್ಲಿ ಮಾತನಾಡಲಾ ರಂಭಿಸಿದರು. ಅಸಹ್ಯ ಸನ್ನೆಗಳನ್ನು ಮಾಡುತ್ತಾ ಬೈಯುತ್ತಿದ್ದರು. ತಮ್ಮ ಕಣ್ಣ ಮುಂದೆ ಏನೇನೋ ಕಾಣುತ್ತಿದೆ ಎಂದು ಬಡಬಡಿಸಿದರು.

ತಮ್ಮ ಕಣ್ಣಿಗೆ ಕಾಣದ ಅದೃಶ್ಯ ದುಷ್ಟ ಶಕ್ತಿಗಳು ತಮ್ಮನ್ನು ಹೊಡೆದು, ಬಡಿದು ಹಿಂಸಿಸುತ್ತಿವೆ ಎಂದು ದೂರಿದರು. ಎಲ್ಲಕ್ಕಿಂತ ಮುಖ್ಯವಾಗಿ ಫಾದರ್ ಗ್ರಾಂಡೀರ್ ಈ ದುಷ್ಟಶಕ್ತಿಗಳನ್ನು ತಮ್ಮೆಡೆ ಕಳುಹಿಸುತ್ತಿದ್ದಾನೆಂದು ದೂರಿದರು. ಅದರಲ್ಲೂ ಮದರ್ ಸುಪೀರಿಯರ್ ಜೀನ್ ದೆಸ್ ಆಂಗೆಸ್, ಗ್ರಾಂಡೀರ್ ದುಷ್ಟಶಕ್ತಿಗಳ ಜತೆಯಲ್ಲಿ ಒಪ್ಪಂದ ಮಾಡಿಕೊಂಡಿದ್ದಾನೆಂದು, ಅವನೇ ಹೆಣ್ಣು ಮಕ್ಕಳನ್ನು ಗೋಳು ಹೊಯ್ದುಕೊಳ್ಳಲು ಆ ಭೂತಗಳನ್ನು ಕಳುಹಿಸುತ್ತಾನೆಂದು, ಸ್ವಯಂ ಅವನೇ ಒಂದು ದೊಡ್ಡ ಭೂತವೆಂದು, ಇನ್ನಿಲ್ಲದಂತೆ ದೂರಿದಳು.

ಇದನ್ನೂ ಓದಿ: Dr N Someshwara Column: ಹುಳುಗಳನ್ನು ಔಷಧವನ್ನಾಗಿ ಬಳಸಬಹುದೇ ?

ಫಾದರ್ ಗ್ರಾಂಡೀರ್ ಯುವಕ. ಸ್ಫುರದ್ರೂಪಿ. ನೋಡುಗರನ್ನು ಸಮ್ಮೋಹನಗೊಳಿಸುವ ಗುಣ. ಹೆಣ್ಣು ಮಕ್ಕಳನ್ನು ಸೂಜಿಗಲ್ಲಿನಂತೆ ಆಕರ್ಷಿಸಬಲ್ಲಾತ. ಸ್ವಲ್ಪ ಅಹಂಕಾರಿ. ಹಳ್ಳಿಯಲ್ಲಿದ್ದ ಹಲವ ರಿಗೆ ಇವನ ಮೇಲೆ ಹೊಟ್ಟೆಕಿಚ್ಚು. ಕಾರ್ಡಿನಲ್ ರಿಷೆಲ್ಯೂ ವಿಧಿಸಿದ ನಿಯಮಗಳನ್ನು ಮೀರಿದ್ದಾನೆ ಎಂಬ ಆರೋಪವನ್ನು ಹೊರಿಸಿ, ಅವನ ನಡತೆ ಸರಿಯಿಲ್ಲವೆಂದು ಕರೆದು ವಾಗ್ದಂಡನೆಯನ್ನು ನೀಡಿದ್ದರು.

ಅವನ ಶತ್ರುಗಳಿಗೆ ಇಷ್ಟರಿಂದ ತೃಪ್ತಿಯಾಗಿರಲಿಲ್ಲ. ಹಾಗಾಗಿ ಕ್ರೈಸ್ತಸನ್ಯಾಸಿನಿಯರ ದೂರಿನ ಆಧಾರದ ಮೇಲೆ, ಅವನ ಬಹಿರಂಗ ವಿಚಾರಣೆಯನ್ನು ನಡೆಸಿದರು. ಅವನು ನಿಜಕ್ಕೂ ವಾಮಾ ಚಾರದಲ್ಲಿ ತೊಡಗಿದ್ದಾನೆ ಎನ್ನುವುದಕ್ಕೆ ಯಾವುದೇ ಭೌತಿಕ ಸಾಕ್ಷ್ಯ ದೊರೆಯಲಿಲ್ಲ. ಕೊನೆಗೆ ಗ್ರಾಂಡೀರ್ ಸೈತಾನನ (ಸೇಟನ್) ಜತೆಯಲ್ಲಿ ಒಡಂಬಡಿಕೆಯನ್ನು ಮಾಡಿಕೊಂಡಿರುವ ಒಂದು ಲ್ಯಾಟಿನ್ ಭಾಷೆಯ ಪತ್ರವನ್ನು ವಿಚಾರಣಾ ಸಭೆಯಲ್ಲಿ ಹಾಜರುಪಡಿಸಿದರು.

ಈ ಪತ್ರದ ಆಧಾರದ ಮೇಲೆ, ಗ್ರಾಂಡೀರ್ ತಪ್ಪಿತಸ್ಥನೆಂದು ಘೋಷಿಸಿದರು. ಅವನನ್ನು ನಾನಾ ರೀತಿಯಲ್ಲಿ ಹಿಂಸಿಸಿದರು. ಕೊನೆಗೆ ಆಗಸ್ಟ್ 18, 1634ರಂದು, ಚೌಕದ ನಡುವೆ ಒಂದು ಕಂಬವನ್ನು ನೆಟ್ಟು ಅದಕ್ಕೆ ಅವನನ್ನು ಬಿಗಿದರು. ಸುತ್ತಲೂ ಒಣಕಟ್ಟಿಗೆಯನ್ನು ಪೇರಿಸಿ ಬೆಂಕಿಯನ್ನಿಟ್ಟರು. ನೋಡನೋಡುತ್ತಿರುವಂತೆಯೇ ಗ್ರಾಂಡೀರ್ ಸುಟ್ಟು ಬೂದಿಯಾದ! ವಾಸ್ತವದಲ್ಲಿ ಏನು ನಡೆಯಿತು? ಇದು ‘ಸಾಮೂಹಿಕ ಹಿಸ್ಟೀರಿಯ’ ಅಥವಾ ‘ಮಾಸ್ ಹಿಸ್ಟೀರಿಯ’ ಎನ್ನುವ ಮಾನಸಿಕ ಅಸ್ವಸ್ಥತೆ. ಕಾನ್ವೆಂಟ್ ಸನ್ಯಾಸಿನಿಯರು ತೀರಾ ಕಟ್ಟುನಿಟ್ಟಿನ ಪರಿಸರದಲ್ಲಿ ಬೆಳೆಯುತ್ತಿದ್ದರು.

ಲೈಂಗಿಕ ಅಭಿವ್ಯಕ್ತಿಗೆ ಅವಕಾಶವಿರಲಿಲ್ಲ. ಕ್ಷುದ್ರ ರಾಜಕೀಯ ಚಟುವಟಿಕೆಗಳು ವಿಜೃಂಭಿಸುತ್ತಿದ್ದವು. ಚರ್ಚಿನಲ್ಲಿ ಅಧಿಕಾರಕ್ಕಾಗಿ ಒಳಗೊಳಗೆ ಕಚ್ಚಾಟ ನಡೆಯುತ್ತಿದ್ದವು. ಇವೆಲ್ಲವನ್ನು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಅನುಭವಿಸುತ್ತಿದ್ದ ಕ್ರೈಸ್ತ ಸನ್ಯಾಸಿನಿಯರು, ಅಪ್ರಜ್ಞಾಪೂರ್ವಕವಾಗಿ ನಾನಾ ಅಸಹಜ ನಡವಳಿಕೆಯನ್ನು ತೋರಿಸಲಾರಂಭಿಸಿದರು. ಗ್ರಾಂಡೀರ್‌ನನ್ನು ಮಟ್ಟ ಹಾಕಲೆಂದೇ ಕಾದಿದ್ದ ಜನರು ಮದರ್ ಸುಪೀರಿಯರ್‌ರನ್ನು ಪುಸಲಾಯಿಸಿದರು.

ಅಧಿಕಾರವರ್ಗದವರ ಒತ್ತಾಯಕ್ಕೆ ಮಣಿದು, ಗ್ರಾಂಡೀರ್ ಬಗ್ಗೆ ಇಲ್ಲಸಲ್ಲದ ದೂರನ್ನು ನೀಡಿದಾಗ ನಂತರ ಮದರ್ ಸುಪೀರಿಯರ್ ಒಪ್ಪಿಕೊಂಡರು. ಹೀಗೆ ನಾನಾ ಮಾನಸಿಕ ಸಮಸ್ಯೆಗಳು, ಧಾರ್ಮಿಕ ಮೌಢ್ಯಗಳು, ರಾಜಕೀಯ ಕುತಂತ್ರಗಳು ಹಾಗೂ ಪಕ್ಷಪಾತಪೂರಿತ ನ್ಯಾಯ ವ್ಯವಸ್ಥೆಯ ಕಾರಣ, ಗ್ರಾಂಡೀರ್ ದಾರುಣವಾಗಿ ಸಾವಿಗೆ ಒಳಗಾದ. ಈ ಪ್ರಕರಣವನ್ನು ಆಲ್ಡಸ್ ಹಕ್ಸಲೇ ‘ಡೆವಿಲ್ಸ್ ಆಫ್ ಲೌಡನ್’ ಎಂಬ ಹೆಸರಿನಲ್ಲಿ ಕಾದಂಬರಿಯಾಗಿ ಪ್ರಕಟಿಸಿದರೆ, ಕೆನ್ ರೆಸೆಲ್ 1971ರಲ್ಲಿ ‘ದಿ ಡೆವಿಲ್ಸ್’ ಎನ್ನುವ ಚಿತ್ರವನ್ನಾಗಿಸಿದ. ‌

ಹಿಸ್ಟೀರಿಯ, ಮನುಕುಲದ ಅತ್ಯಂತ ಹಳೆಯ ಕಾಯಿಲೆಗಳಲ್ಲಿ ಒಂದು. ಈಜಿಪ್ಷಿಯನ್ ನಾಗರಿಕತೆ ಯಿಂದ ಹಿಡಿದು 20ನೆಯ ಶತಮಾನದ ಆದಿಭಾಗದವರೆಗೆ ಜನರನ್ನು ಮೌಢ್ಯದಲ್ಲಿ ಮುಳುಗಿಸಿದ್ದ ಮಾನಸಿಕ ಸಮಸ್ಯೆ. ನಮ್ಮ ದೇಹ, ನಮ್ಮ ಮನಸ್ಸು, ನಮ್ಮ ದೇಹ ಮತ್ತು ಮನಸ್ಸುಗಳ ನಡುವೆ ಇರುವ ಸಂಬಂಧ, ಇವೆರಡರ ಅಸ್ವಸ್ಥತೆಯಿಂದ ಬರುವ ಕಾಯಿಲೆಗಳು ಇವುಗಳನ್ನು ಇಂದಿಗೂ ನಾವು ಪೂರ್ಣವಾಗಿ ಅರ್ಥ ಮಾಡಿಕೊಂಡಿಲ್ಲ.

ಅನಾದಿ ಕಾಲದಿಂದಲೂ ಹೆಣ್ಣುಮಕ್ಕಳನ್ನು ದ್ವಿತೀಯ ದರ್ಜೆಯ ಪ್ರಜೆಯನ್ನಾಗಿ ನಡೆಸಿಕೊಂಡು ಬಂದಿದ್ದೇವೆ. ಹೆಣ್ಣು ಎಂದರೆ ಲೈಂಗಿಕ ಸುಖಕ್ಕಾಗಿ ಇರುವ, ಮಕ್ಕಳನ್ನು ಹೆರುವ ಯಂತ್ರ ಎಂದು ಭಾವಿಸಿರುವುದೇ ಹೆಚ್ಚು. ಹೆಣ್ಣುಮಕ್ಕಳ ಅಸ್ಮಿತೆಯನ್ನು ಗುರುತಿಸದೆ, ಆಕೆಯನ್ನು ಓರ್ವ ಮನುಷ್ಯ ಳಂತೆ ಕಾಣದೆ, ಆಕೆಗೆ ತನ್ನ ಭಾವನೆಗಳನ್ನು ವ್ಯಕ್ತಪಡಿಸಲು ಅವಕಾಶವನ್ನೇ ನೀಡದೇ ಬೆಳೆಸಿ ಕೊಂಡು ಬರುತ್ತಿರುವ ಕಾರಣ, ಆಕೆಯಲ್ಲಿ ದಮ್ಯವಾಗಿರುವ ಭಾವನೆಗಳು ನಾನಾ ರೂಪದಲ್ಲಿ ಹೊರಹೊಮ್ಮುತ್ತವೆ.

ಈ ಎಲ್ಲವನ್ನು ‘ಹಿಸ್ಟೀರಿಯ’ ಎಂಬ ಹೆಸರಿನಲ್ಲಿ ಕರೆದು ಅಮಾನವೀಯವಾಗಿ ನಡೆಸಿಕೊಂಡದ್ದನ್ನು ಇತಿಹಾಸದಾದ್ಯಂತ ನೋಡಬಹುದು. ‘ಹಿಸ್ಟೀರಿಯ’ ಎಂಬುದರ ಮೂಲ ‘ಹಿಸ್ಟೆರ’ ಎಂಬ ಶಬ್ದ. ಹಿಸ್ಟೆರ ಎಂದರೆ ಗರ್ಭಕೋಶ ಎಂದರ್ಥ. ಹಾಗಾಗಿ ಹಿಸ್ಟೀರಿಯ ಎಂದರೆ ‘ನಡೆದಾಡುವ ಗರ್ಭಕೋಶ’ ಎಂದರ್ಥ. ಕ್ರಿ.ಪೂ.1900ರ ಆಸುಪಾಸಿನ ಈಜಿಪ್ಷಿಯನ್ನರ ಕಾಲದ ‘ಈಬರ್ಸ್ ಪ್ಯಾಪಿರಸ್’ ಎಂಬ ವೈದ್ಯಕೀಯ ಗ್ರಂಥದಲ್ಲಿ ಹಿಸ್ಟೀರಿಯದ ಮೊದಲ ಪ್ರಸ್ತಾಪವಿದೆ. ಹೆಣ್ಣುಮಕ್ಕಳಲ್ಲಿ ಕಂಡು ಬರಬಹುದಾದ ರೋಗಲಕ್ಷಣಗಳಲ್ಲಿ ಉಸಿರುಕಟ್ಟುವಿಕೆ, ಸೆಳವು, ಮಾನಸಿಕ ಏರುಪೇರುಗಳಿಗೆ ‘ಚಲಿಸುವ ಗರ್ಭಕೋಶವೇ ಕಾರಣ’ ಎಂದು ಭಾವಿಸುತ್ತಿದ್ದರು.

ಗರ್ಭಕೋಶವು ‘ಮಹಾ ತುಂಟ ಅಂಗ’. ಇದು ಆಗಾಗ್ಗೆ ತನ್ನ ಎಡೆಯನ್ನು ಬಿಟ್ಟು, ದೇಹದ ಎಲ್ಲ ಕಡೆ ಚಲಿಸುತ್ತಾ, ಆಯಾ ಅಂಗದ ಮೇಲೆ ಒತ್ತಡವನ್ನು ಹಾಕಿ, ನಾನಾ ರೋಗಲಕ್ಷಣಗಳಿಗೆ ಕಾರಣ ವಾಗುತ್ತದೆ ಎನ್ನುವುದು ಈ ಮೌಢ್ಯದ ಸಾರಾಂಶ. ಎಲ್ಲೆಲ್ಲೋ ಅಲೆಯುತ್ತಿರುವ ಗರ್ಭಕೋಶವನ್ನು ಸ್ವಸ್ಥಾನಕ್ಕೆ ಬರುವಂತೆ ಒಲಿಸಲು ಎರಡು ರೀತಿಯ ಚಿಕಿತ್ಸೆಯನ್ನು ನೀಡುತ್ತಿದ್ದರು.

ಮೊದಲನೆಯದು ಮೂಗಿನ ಬಳಿ ಅತ್ಯಂತ ಕೆಟ್ಟವಾಸನೆ ಬೀರುವ ವಸ್ತುವನ್ನು ಇಡುತ್ತಿದ್ದರು. ಅದೇ ವೇಳೆ ಯೋನಿದ್ವಾರದ ಬಳಿ ಸುಗಂಧದ್ರವ್ಯಗಳನ್ನು ಇಡುತ್ತಿದ್ದರು. ಗರ್ಭಕೋಶವು ಕೆಟ್ಟ ವಾಸನೆಯನ್ನು ತಡೆದುಕೊಳ್ಳಲಾಗದೆ, ಸುಗಂಧದ್ರವ್ಯಗಳಿಗೆ ಆಕರ್ಷಿತವಾಗಿ ಸ್ವಸ್ಥಾನಕ್ಕೆ ಬರುತ್ತದೆ ಎನ್ನುವುದು ಚಿಕಿತ್ಸೆಯ ಸಾರಾಂಶವಾಗಿತ್ತು. ಗ್ರೀಕರ ಹಿಪ್ಪೋಕ್ರೇಟ್ಸ್ (ಕ್ರಿ.ಪೂ.460-ಕ್ರಿ.ಪೂ.370) ಸಹ ಚಲಿಸುವ ಗರ್ಭಕೋಶ ಸಿದ್ಧಾಂತವನ್ನು ನಂಬಿದ್ದ. ಲೈಂಗಿಕ ಸುಖ ವಂಚಿತರಾದ ಹೆಣ್ಣುಮಕ್ಕಳ ಗರ್ಭಕೋಶವು ಒಣಗಿ ಹಗುರವಾಗುತ್ತದೆ.

ಹಾಗಾಗಿ ಅದು ಒಡಲಿನಲ್ಲೆಲ್ಲ ಓಡಾಡುತ್ತದೆ ಎನ್ನುವುದು ಆತನ ನಿಲುವು. ಇದರ ಹಿನ್ನೆಲೆಯಲ್ಲಿ ಅವನು ಹಿಸ್ಟೀರಿಯ ಪೀಡಿತ ಹೆಣ್ಣು ಮಕ್ಕಳಿಗೆ ಬೇಗನೆ ಮದುವೆಯಾಗುವಂತೆ ಹಾಗೂ ಹೆಚ್ಚು ಹೆಚ್ಚು ಸಲ ಸಂಭೋಗವನ್ನು ಮಾಡುವಂತೆ ಹೇಳುತ್ತಿದ್ದ. ಗ್ರೀಕ್ ಮತ್ತು ರೋಮನ್ ಯುಗವು ಅವಸಾನವಾಗುತ್ತಿರುವಂತೆಯೇ ಇಡೀ ಯುರೋಪಿನಾದ್ಯಂತ ಕಗ್ಗತ್ತಲ ಯುಗವು ಆರಂಭವಾ ಯಿತು.

ಈ ಅವಧಿಯಲ್ಲಿ ಅಜ್ಞಾನವು ಎಲ್ಲೆಡೆ ತುಂಬಿ ತುಳುಕುತ್ತಿತ್ತು. ಜಮೀನುದಾರರು ಪ್ರಬಲರಾಗಿ ರೈತರಿಂದ ಸುಂಕವನ್ನು ವಸೂಲಿ ಮಾಡುತ್ತಿದ್ದರು. ಜಮೀನುದಾರರು ಮತ್ತು ರೈತರಿಂದ ರಾಜ ಹಾಗೂ ಚರ್ಚ್ ಹಣವನ್ನು ಪಡೆಯುತ್ತಿದ್ದವು. ಹಾಗಾಗಿ ಯುರೋಪಿನಲ್ಲಿ ಶ್ರೀಸಾಮಾನ್ಯನ ಬದುಕು ದುರ್ಭರವಾಗಿತ್ತು. ಎಲ್ಲೆಡೆ ಚರ್ಚ್ ಮತ್ತು ರಾಜನದೇ ದರ್ಬಾರು! ಇಂಥ ಅವಧಿಯಲ್ಲಿ ನಡೆದ ಒಂದು ಘಟನೆಯನ್ನು ಈಗಷ್ಟೇ ನೋಡಿದ್ದೇವೆ.

ಹೆಣ್ಣುಮಕ್ಕಳ ದೈಹಿಕ ಹಾಗೂ ಮಾನಸಿಕ ನೋವುಗಳಿಗೆ ದೆವ್ವ, ಭೂತ, ಪಿಶಾಚಿ, ಮಾಟ, ವಾಮಾ ಚಾರಗಳೇ ಕಾರಣ ಎಂದು ಎಲ್ಲರೂ ನಂಬಿದರು. ಇವರಿಗೆ ಭೂತೋಚ್ಚಾಟನೆಯಂಥ (ಎಕ್ಸಾರ್ಸಿಸಂ) ಹಾಗೂ ಕ್ರೌರ್ಯಾತಿಕ್ರೌರ್ಯ ಶಿಕ್ಷೆಗಳನ್ನು ಕೊಡುತ್ತಿದ್ದರು. ಹಲವರನ್ನು ಬಹಿರಂಗವಾಗಿ ಕೊಲ್ಲುತ್ತಿದ್ದರು.

ಯುರೋಪಿನ 14ರಿಂದ 17ನೆಯ ಶತಮಾನದವರೆಗಿನ ಕಾಲವನ್ನು ‘ನವೋದಯ’ ಅಥವಾ ‘ರಿನೇಸಾನ್ಸ್’ ಯುಗ ಎಂದು ಕರೆಯುವುದುಂಟು. ಪ್ರಾಚೀನ ಹಾಗೂ ಅರ್ವಾಚೀನ ಅರಿವನ್ನು ಒಗ್ಗೂಡಿಸಿ, ವೈಜ್ಞಾನಿಕ ಸಿದ್ಧಾಂತಗಳನ್ನು ಹೊಸದಾಗಿ ರೂಪಿಸುವ ಪ್ರಾಮಾಣಿಕ ಪ್ರಯತ್ನಗಳು ಈ ಅವಧಿಯಲ್ಲಿ ನಡೆದವು. ಆದರೂ ಹೆಣ್ಣುಮಕ್ಕಳ ಸ್ಥಿತಿಗತಿಯು ಸುಧಾರಿಸಲಿಲ್ಲ. ಆದರೆ ‘ಗರ್ಭ ಕೋಶವು ಇದ್ದಲ್ಲಿಯೇ ಇರುತ್ತದೆ, ಅದು ಚಲಿಸುವುದಿಲ್ಲ’ ಎನ್ನುವ ಸತ್ಯವನ್ನು ಒಪ್ಪಿದ್ದರು. ಆದರೂ ‘ಹೆಣ್ಣುಮಕ್ಕಳ ಭಾವನಾತ್ಮಕ ಅಸ್ಥಿರತೆಗೆ ಮೂಲವು ಆಕೆಯ ಜನನಾಂಗಗಳಲ್ಲಿಯೇ ಇದೆ’ ಎಂಬ ಪರಿಕಲ್ಪನೆಯು ಬದಲಾಗಲಿಲ್ಲ.

18ನೆಯ ಶತಮಾನದಲ್ಲಿ ನರವಿಜ್ಞಾನದ ಬೆಳವಣಿಗೆಯ ಹಿನ್ನೆಲೆಯಲ್ಲಿ ಹಿಸ್ಟೀರಿಯವು ಒಂದು ನರವೈಪರೀತ್ಯವಿರಬಹುದು ಎನ್ನುವ ಸಿದ್ಧಾಂತವನ್ನು ಫ್ರೆಂಚ್ ವೈದ್ಯ ಫಿಲಿಪ್ಪೆ ಪೈನಲ್ (1745-1824) ಮಂಡಿಸಿದ. ಅಪಸ್ಮಾರ, ವಿಷಣ್ಣತೆ ಅಥವಾ ಮೆಲಾಂಕೋಲಿಯದ ಹಾಗೆ ಹಿಸ್ಟೀರಿಯವು ಮಿದುಳಿನಲ್ಲಿಯೇ ಹುಟ್ಟುತ್ತದೆ ಎಂದು ಭಾವಿಸಿದ. ಇದಕ್ಕೆ ಚಿಕಿತ್ಸೆಯಾಗಿ ಅವೈಜ್ಞಾನಿಕ ರಕ್ತ ವಿಮೋಚನೆ ಮತ್ತು ವಿರೇಚನವನ್ನು ಸೂಚಿಸಿದ. ಜತೆಗೆ ನೈತಿಕ ಚಿಕಿತ್ಸೆ (ಮಾರಲ್ ಥೆರಪಿ) ಆರಂಭಿಸಿ, ರೋಗಿಯು ಪ್ರಶಾಂತ ವಾತಾವರಣದಲ್ಲಿ ಇರಬೇಕೆಂದ.

ಗಂಡಸರಿಗೂ ಹಿಸ್ಟೀರಿಯದ ಲಕ್ಷಣಗಳು ಕಂಡುಬಂದರೂ, ಅವರಿಗೆ ಹಿಸ್ಟೀರಿಯವಾಗಿದೆ, ಎನ್ನದೇ ಮತ್ಯಾವುದೋ ಕಾರಣವನ್ನು ನೀಡುತ್ತಿದ್ದರು. ಇದಕ್ಕೆ ಪುರುಷ ದಬ್ಬಾಳಿಕೆಯೇ ಕಾರಣ. ಹಾಗಾಗಿ ಹಿಸ್ಟೀರಿಯವು ಕೇವಲ ಹೆಣ್ಣುಮಕ್ಕಳ ರೋಗವೆಂಬ ಅಂಶವು ಬೇರೂರಿತು. 19ನೆಯ ಶತಮಾನದಲ್ಲಿ ಫ್ರೆಂಚ್ ಜೀನ್ ಮಾರ್ಟಿನ್ ಷಾರ್ಕಾಟ್ (1825-1893) ಎಂಬ ನರವೈದ್ಯನು ಸಾಲ್ಪೀತ್ರಿಯೇ ಆಸ್ಪತ್ರೆ ಯಲ್ಲಿ ಹಿಸ್ಟೀರಿಯದ ಲಕ್ಷಣಗಳನ್ನು ಬಹಿರಂಗವಾಗಿ ಪ್ರದರ್ಶಿಸಲಾರಂಭಿಸಿದ.

ನೂರಾರು ಪ್ರೇಕ್ಷಕರ ಎದುರು ಹೆಣ್ಣುಮಕ್ಕಳನ್ನು ವಶೀಕರಣಕ್ಕೆ (ಹಿಪ್ನೋಸಿಸ್) ಒಳಪಡಿಸಿ, ಹಿಸ್ಟೀರಿಯದ ಲಕ್ಷಣಗಳು ಎನ್ನಲಾದ ದೇಹವು ಸೆಡೆತುಕೊಳ್ಳುವುದು ಅಥವಾ ಸೆಳೆತಕ್ಕೆ ಒಳಗಾಗುವು ದನ್ನು ಪ್ರದರ್ಶಿಸುತ್ತಿದ್ದ. ಇದೇ ವೇಳೆಗೆ ವಿಕ್ಟೋರಿಯನ್ ಇಂಗ್ಲೆಂಡಿನಲ್ಲಿ ಸಿರಿವಂತ ಹೆಣ್ಣುಮಕ್ಕಳ ಹಿಸ್ಟೀರಿಯ ಚಿಕಿತ್ಸೆಯೆಂದು ‘ವಿಶ್ರಾಂತಿ ಚಿಕಿತ್ಸೆ’ ಅಥವಾ ‘ರೆಸ್ಟ್ ಕ್ಯೂರ್’ ಆರಂಭವಾಯಿತು. ಅಮೆರಿಕದ ಸೈಲಾಸ್ ವೀರ್ ಮಿಷೆಲ್ (1829-1914) ಎಂಬ ವೈದ್ಯನು ಏಕಾಂತವಾಸ, ಪರಿಪೂರ್ಣ ವಿಶ್ರಾಂತಿ ಹಾಗೂ ಬಲವಂತವಾಗಿ ಊಟವನ್ನು ಮಾಡಿಸಿದ.

ಈ ಚಿಕಿತ್ಸೆಯು ಎಷ್ಟು ಕ್ರೌರ್ಯವಾಗಿತ್ತು ಎನ್ನುವುದನ್ನು ಷಾರ್ಲೊಟ್ ಪೆರ್ಕಿನ್ಸ್ ಗಿಲ್ಮನ್ (1860-1935) ‘ದಿ ಯೆಲ್ಲೋ ಪೇಪರ್’ ಎನ್ನುವ ಕೃತಿಯಲ್ಲಿ ವಿವರಿಸಿದಳು. ಇದೇ ವೇಳೆಗೆ ವಿಯನ್ನಾದಲ್ಲಿ ಸಿಗ್ಮಂಡ್ ಫ್ರಾಯ್ಡ್ (1856-1939) ಮತ್ತು ಜೋಸೆಫ್ ಬ್ರೂಯರ್ (1842-1925) ಹಿಸ್ಟೀರಿಯಕ್ಕೆ ದಮನಿತ ಭಾವನೆಗಳು, ಅದರಲ್ಲೂ ಕೆಟ್ಟ ಲೈಂಗಿಕ ಅನುಭವಗಳೇ ಕಾರಣ ಎಂಬ ಸಿದ್ಧಾಂತವನ್ನು ಒಪ್ಪಿದ್ದರು.

ಜೋಸೆಫ್ ಬ್ರೂಯರನ ರೋಗಿಯಾಗಿದ್ದ ‘ಅನ್ನಾ ಓ’ ತನ್ನ ‘ಮಾತನಾಡುವ ಚಿಕಿತ್ಸೆ’ ಅಥವಾ ‘ಟಾಕಿಂಗ್ ಥೆರಪಿ’ಯ ಮೂಲಕ ಮನೋ‌ ವೈದ್ಯಕೀಯದಲ್ಲಿ ಒಂದು ಹೊಸ ಮಾರ್ಗವನ್ನು ರೂಪಿಸಿ‌ ದ್ದಳು (ನೋಡಿ- ‘ವಿಶ್ವವಾಣಿ’ 09.04.25. ಮನೋವೈದ್ಯಕೀಯಕ್ಕೆ ಮಹಾ ತಿರುವನ್ನು ಕೊಟ್ಟ ಅನ್ನಾ ಓ). 20ನೆಯ ಶತಮಾನದಲ್ಲಿ ‘ಹಿಸ್ಟೀರಿಯ’ ಎನ್ನುವ ರೋಗ ನಿಧಾನವು ಅಪರೂಪವಾಗಲಾ ರಂಭಿಸಿತು.

ಫ್ರಾಯ್ಡ್ ಸಿದ್ಧಾಂತಗಳ ‘ಮನೋವಿಶ್ಲೇಷಣೆ’ ಅಥವಾ ‘ಸೈಕೋ-ಅನಾಲಿಸಿಸ್’ ಮೂಲಕ ಮನಸ್ಸಿನ ಆಂತರ್ಯವನ್ನು ಅನಾವರಣ ಮಾಡುವ ಪ್ರಯತ್ನಗಳು ನಡೆದವು. 1980ರಲ್ಲಿ ಅಮೆರಿಕದ ‘ಡಯಾಗ್ನೋಸ್ಟಿಕ್ ಆಂಡ್ ಸ್ಟಾಟಿಸ್ಟಿಕ್ ಮಾನ್ಯುವಲ್ ಹಿಸ್ಟೀರಿಯ’ ಎಂಬ ಅಧಿಕೃತ ಗ್ರಂಥವು, ಹಿಸ್ಟೀರಿಯ ಎಂಬ ರೋಗನಿದಾನವನ್ನು ಬಿಟ್ಟು ಬಿಟ್ಟಿತು. ಯಾವುದೇ ದೈಹಿಕ ಕಾರಣಗಳಿಲ್ಲದೆ ಕಂಡುಬರುವ ಸೆಳವು, ಸೆಡೆತ ಮತ್ತು ಅಂಧತ್ವವನ್ನು ‘ಕನ್ವರ್ಷನ್ ಡಿಸಾರ್ಡರ್’ ಎಂದು ಕರೆಯಿತು.

ಉರ್ಸುಲೈನ್ ಕ್ರೈಸ್ತ ಸನ್ಯಾಸಿಯರು ತೋರಿದಂಥ ಸಾಮೂಹಿಕ ಅಸಹಜ ವರ್ತನೆಗಳು ಅತಿ ಒತ್ತಡದ ಕಾರಣ ಅಥವಾ ಬಲವಾದ ಮನೋಸಲಹೆಯ ಮೇಲೆ ಕಂಡುಬರಬಹುದು. ಇಂಥದನ್ನು ‘ಮಾಸ್ ಸೈಕೋಜೆನಿಕ್ ಇಲ್ನೆಸ್’ ಎಂದಿತು.

ನಿಖರ ದೈಹಿಕ ಕಾರಣಗಳಿಲ್ಲದೆ ಕಂಡುಬರುವ ಮನೋ- ಯಾತನೆಗಳಿಗೆ ಹಾಗೂ ದೈಹಿಕ ಲಕ್ಷಣಗಳಿಗೆ ‘ಸೊಮಾಟಿಕ್ ಸಿಂಪ್ಟಮ್ ಡಿಸಾರ್ಡರ್’ ಎಂಬ ಹೆಸರನ್ನು ನೀಡಿತು. 2012ರಲ್ಲಿ ನ್ಯೂಯಾರ್ಕಿನ ‘ಲೇ ರಾಯ್’ ಪ್ರದೇಶದಲ್ಲಿ ಹದಿಹರೆಯದ ಹೆಣ್ಣುಮಕ್ಕಳು ಅನಿಯಂತ್ರಿತ ಕೆಟ್ಟ ಕೆಟ್ಟ ಮಾತುಗಳನ್ನು ಆಡಲಾರಂಭಿಸಿದರು ಹಾಗೂ ಅವರ ದೇಹವು ಹೇಗೆ ಹೇಗೋ ನುಲಿಯಲಾ ರಂಭಿಸಿತು.

ಇದನ್ನು ಟಿವಿ ಮಾಧ್ಯಮವು ಎಲ್ಲೆಡೆ ಪ್ರಸಾರ ಮಾಡಿತು. ಟಿವಿ ಪ್ರಸಾರವಾದ ಮೇಲೆ ಅವರ ವರ್ತನೆಗಳು ಮತ್ತಷ್ಟು ಬಿಗಡಾಯಿಸಿದವು. 16ನೆಯ ಶತಮಾನದ ಉರ್ಸುಲೈನ್ ಕ್ರೈಸ್ತಸನ್ಯಾಸಿಯರ ಪ್ರಕರಣವು ಮರುಕಳಿಸಿತ್ತು. ನಾವು ಮನಸ್ಸಿನ ಬಗ್ಗೆ ಏನೆಲ್ಲ ತಿಳಿದಿದ್ದೇವೆ ಎಂದು ಬೀಗುತ್ತಿರುವ ವೇಳೆಯಲ್ಲಿ- ಭಾವನೆಗಳು ನಮ್ಮ ದೇಹದಲ್ಲಿ ಹೇಗೆ ಮೂಡುತ್ತವೆ? ಸಮಾಜದ ನಿರೀಕ್ಷೆಗಳು ಹೇಗೆ ಮಾನಸಿಕ ಕಾಯಿಲೆಗಳಿಗೆ ಕಾರಣವಾಗುತ್ತವೆ?

ಅವ್ಯಕ್ತ ‘ಮಾನಸಿಕ ಅನಾಥ’ರನ್ನು ಹೇಗೆ ಗುರುತಿಸುವುದು ಹಾಗೂ ಸಾಂತ್ವನವನ್ನು ನೀಡುವುದು? ಈ ಪ್ರಶ್ನೆಗಳಿಗೆ ಉತ್ತರವನ್ನು ತಿಳಿಯಬೇಕಾಗಿದೆ.