ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Kiran Upadhyay Column: ಕ್ರಿಕೆಟ್‌ ದುಡ್ಡು; ದುಬೈನಲ್ಲಿ ಜಾತ್ರೆ !

1986ರಲ್ಲಿ ನಡೆದ ಆಸ್ಟ್ರೋ-ಏಷ್ಯಾ ಕಪ್‌ನ ಅಂತಿಮ ಪಂದ್ಯವು ಭಾರತೀಯರ ಮನದಲ್ಲಿ ಸದಾ ಗಾಯವಾಗಿ ಉಳಿಯುವ ಪಂದ್ಯವಾಗಿತ್ತು. ಅದಕ್ಕೂ 3 ವರ್ಷದ ಮೊದಲಷ್ಟೇ ವಿಶ್ವಕಪ್ ಗೆದ್ದು ಬೀಗುತ್ತಿದ್ದ ಭಾರತ ತಂಡ, ಶಾರ್ಜಾದಲ್ಲಿ ನಡೆದ ಮೊದಲ ಆಸ್ಟ್ರೋ-ಏಷ್ಯಾ ಕಪ್‌ನ ಅಂತಿಮ ಪಂದ್ಯದ ಕೊನೆಯ ಎಸೆತದಲ್ಲಿ ಆಘಾತಕಾರಿ ಸೋಲನ್ನು ಅನುಭವಿಸಿತ್ತು. ನಾಲ್ಕು ರಾಷ್ಟ್ರಗಳು ಆಡಿದ ಈ ಪಂದ್ಯಾವಳಿಯಲ್ಲಿ ಭಾರತ ಶ್ರೀಲಂಕಾವನ್ನು, ಪಾಕಿಸ್ತಾನ ನ್ಯೂಜಿಲೆಂಡ್ ತಂಡ ವನ್ನು ಸೋಲಿಸಿ ಅಂತಿಮ ಹಣಾಹಣಿಗೆ ತಲುಪಿದ್ದವು

ಕ್ರಿಕೆಟ್‌ ದುಡ್ಡು; ದುಬೈನಲ್ಲಿ ಜಾತ್ರೆ !

ಅಂಕಣಕಾರ ಕಿರಣ್‌ ಉಪಾಧ್ಯಾಯ

ವಿದೇಶವಾಸಿ

dhyapaa@gmail.com

1980 ಮತ್ತು 90ರ ದಶಕದಲ್ಲಿ ಭಾರತೀಯರಿಗೆ, ಅದರಲ್ಲೂ ಕ್ರಿಕೆಟ್ ಪ್ರಿಯರಿಗೆ ಶಾರ್ಜಾ ಪರಿಚಿತ ಹೆಸರು. ಅದಕ್ಕೂ ಮೊದಲು ಕೊಲ್ಲಿ ರಾಷ್ಟ್ರಗಳ ಪೈಕಿ ಒಂದಾದ ಯುಎಇಯಲ್ಲಿ ಅಂಥ ಒಂದು ನಗರವಿದೆ ಎಂದು ಬಹುತೇಕ ಜನರಿಗೆ ಗೊತ್ತೇ ಇರಲಿಲ್ಲ. ಆ ದಿನಗಳಲ್ಲಿ ಭಾರತದಿಂದ ತಪ್ಪಿಸಿಕೊಂಡು, ತಲೆಮರೆಸಿಕೊಂಡಿದ್ದ ಭೂಗತ ಪಾತಕಿ ದಾವೂದ್ ಇಬ್ರಾ ಹಿಂ ಶಾರ್ಜಾದ ಕ್ರಿಕೆಟ್ ಪಂದ್ಯದಲ್ಲಿ ಕಾಣಿಸಿಕೊಳ್ಳುತ್ತಿದ್ದ. ಹಲವಾರು ಧಾರಾವಾಹಿ, ಚಲನಚಿತ್ರಗಳಲ್ಲಿ ನಟಿಸಿದರೂ ಜನರಿಗೆ ಪರಿಚಿತರಾಗದ ಅಂಜು ಮಹೇಂದ್ರ ರಿಂದ ಹಿಡಿದು ಮಂದಾಕಿನಿ, ಪೂನಮ್ ಧಿಲ್ಲೋನ್‌ವರೆಗೆ, ಬಾಲಿವುಡ್‌ನ ರಾಜೇಶ್ ಖನ್ನಾ, ಅನಿಲ್ ಕಪೂರ್ ರಿಂದ ಹಿಡಿದು ರಾಜ್‌ಕಪೂರ್‌ವರೆಗಿನ ನಟ-ನಟಿಯರು ಶಾರ್ಜಾ ಕ್ರಿಕೆಟ್ ಸ್ಟೇಡಿ ಯಂನಲ್ಲಿ ಕಾಣಿಸಿಕೊಳ್ಳುತ್ತಿದ್ದರು.

ಇರಲಿ, ಕ್ರಿಕೆಟ್‌ಗೆ ಸಂಬಂಧಪಟ್ಟಂತೆ ಶಾರ್ಜಾ ಹೆಸರು ಮಾಡಲು ಕಾರಣವೆಂದರೆ ಆ ದಿನಗಳಲ್ಲಿ ನಡೆದ ಎರಡು ಪ್ರಮುಖ ಘಟನೆಗಳು. ಒಂದು ಮೈದಾನದಲ್ಲಿ ನಡೆದ ಪಂದ್ಯಕ್ಕೆ ಸಂಬಂಧಿಸಿದ್ದಾದರೆ, ಇನ್ನೊಂದು ಮೈದಾನದ ಹೊರಗೆ, ಡ್ರೆಸ್ಸಿಂಗ್ ರೂಮ್‌ನಲ್ಲಿ ನಡೆದ ಘಟನೆ.

ಇದನ್ನೂ ಓದಿ: Kiran Upadhyay Column: ದೂರಕೆ ಹಕ್ಕಿಯು ಹಾರುತಿದೆ, ನೋಡಿದಿರಾ ?

1986ರಲ್ಲಿ ನಡೆದ ಆಸ್ಟ್ರೋ-ಏಷ್ಯಾ ಕಪ್‌ನ ಅಂತಿಮ ಪಂದ್ಯವು ಭಾರತೀಯರ ಮನದಲ್ಲಿ ಸದಾ ಗಾಯವಾಗಿ ಉಳಿಯುವ ಪಂದ್ಯವಾಗಿತ್ತು. ಅದಕ್ಕೂ 3 ವರ್ಷದ ಮೊದಲಷ್ಟೇ ವಿಶ್ವಕಪ್ ಗೆದ್ದು ಬೀಗುತ್ತಿದ್ದ ಭಾರತ ತಂಡ, ಶಾರ್ಜಾದಲ್ಲಿ ನಡೆದ ಮೊದಲ ಆಸ್ಟ್ರೋ-ಏಷ್ಯಾ ಕಪ್‌ನ ಅಂತಿಮ ಪಂದ್ಯದ ಕೊನೆಯ ಎಸೆತದಲ್ಲಿ ಆಘಾತಕಾರಿ ಸೋಲನ್ನು ಅನುಭವಿಸಿತ್ತು. ನಾಲ್ಕು ರಾಷ್ಟ್ರಗಳು ಆಡಿದ ಈ ಪಂದ್ಯಾವಳಿಯಲ್ಲಿ ಭಾರತ ಶ್ರೀಲಂಕಾ ವನ್ನು, ಪಾಕಿಸ್ತಾನ ನ್ಯೂಜಿಲೆಂಡ್ ತಂಡವನ್ನು ಸೋಲಿಸಿ ಅಂತಿಮ ಹಣಾಹಣಿಗೆ ತಲುಪಿ ದ್ದವು. ಅಂತಿಮ ಪಂದ್ಯದಲ್ಲಿ ಪಾಕಿಸ್ತಾನದ ಪರವಾಗಿ ಶತಕ ಸಿಡಿಸಿದ ಜಾವೇದ್ ಮಿಯಂ ದಾದ್, ಕೊನೆಯ ಎಸೆತದಲ್ಲಿ ಸಿಕ್ಸರ್ ಹೊಡೆದು ಹೀರೋ ಆಗಿದ್ದರೆ, ಭಾರತದ ಪರವಾಗಿ, ಮೊದಲ ಹುದ್ದರಿಯೂ ಸೇರಿದಂತೆ 3 ವಿಕೆಟ್ ಪಡೆದ ಚೇತನ್ ಶರ್ಮಾ ಖಳನಾಯಕನ ಸ್ಥಾನದಲ್ಲಿದ್ದರು.

ಆ ಪಂದ್ಯದ ಕೊನೆಯ ಓವರ್ ನಲ್ಲಿ ಪಾಕಿಸ್ತಾನಕ್ಕೆ ಗೆಲ್ಲಲು 11 ರನ್ ಬೇಕಾಗಿತ್ತು, ಕೊನೆಯ 3 ವಿಕೆಟ್ ಉಳಿದುಕೊಂಡಿತ್ತು. ಮೊದಲ 5 ಎಸೆತದಲ್ಲಿ 2 ವಿಕೆಟ್ ಕಳೆದುಕೊಂಡು, 7 ರನ್ ಗಳಿಸಿದ ಪಾಕಿಸ್ತಾನಕ್ಕೆ ಕಪ್ ಗೆಲ್ಲಲು ಕೊನೆಯ ಎಸೆತದಲ್ಲಿ 4 ರನ್ ಬೇಕಾಗಿತ್ತು, ಕೊನೆಯ ಹುದ್ದರಿ ಉಳಿದಿತ್ತು. ಕೊನೆಯ ಎಸೆತದಲ್ಲಿ ಜಾವೇದ್ ಮಿಯಾಂದಾದ್ ಸಿಕ್ಸರ್ ಹೊಡೆದು ಪಾಕಿಸ್ತಾನವನ್ನು ಗೆಲ್ಲಿಸಿದ್ದು, ಚೇತನ್ ಶರ್ಮ ಗಳಗಳನೆ ಅತ್ತಿದ್ದು ಇಂದಿಗೂ ಮನದಲ್ಲಿ ಸ್ಥಾಯಿಯಾಗಿದೆ.

ಇನ್ನೊಂದು ಘಟನೆ ಇನ್ನೂ ಕುತೂಹಲಕಾರಿಯಾದದ್ದು. ಅದು ಬೆಳಕಿಗೆ ಬಂದದ್ದು ಕೆಲವು ದಿನಗಳ ನಂತರವೇ. ಅದು 1987ರಲ್ಲಿ ನಡೆದ ಘಟನೆ. ಅಂದು ಚಿತ್ರನಟ ಮೆಹಮೂದ್ ಮತ್ತು ಇತರ ಸಹಾಯಕರೊಂದಿಗೆ ದಾವೂದ್ ಇಬ್ರಾಹಿಂ ಭಾರತೀಯ ಕ್ರಿಕೆಟ್ ತಂಡದ ಡ್ರೆಸ್ಸಿಂಗ್ ರೂಮಿಗೆ ಬಂದಿದ್ದ. ದಾವುದ್ ಇಬ್ರಾಹಿಂನನ್ನು ‘ಖ್ಯಾತ ಉದ್ಯಮಿ’ ಎಂದು ಭಾರತ ತಂಡದವರಿಗೆ ಮೆಹಮೂದ್ ಪರಿಚಯಿಸಿದ್ದರು. ಆಗ ದಾವೂದ್ ಭಾರತ ತಂಡದ ಆಟಗಾರರಿಗೆ ಒಂದು ಆಫರ್ ನೀಡಿದ್ದ.

ಮಾರನೇ ದಿನ ನಡೆಯಬೇಕಾಗಿದ್ದ ಅಂತಿಮ ಪಂದ್ಯದಲ್ಲಿ ಭಾರತ ಗೆದ್ದರೆ, ಪ್ರತಿ ಆಟಗಾರ ನಿಗೂ ಒಂದು ಟೊಯೋಟಾ ಕಾರ್ ಉಡುಗೊರೆ ನೀಡುವುದಾಗಿ ಹೇಳಿದ್ದ ದಾವೂದ್. ಅದನ್ನು ಕೇಳಿದ ಭಾರತೀಯ ತಂಡದ ಸದಸ್ಯರೆಲ್ಲ ಆಶ್ಚರ್ಯಕ್ಕೊಳಗಾಗಿದ್ದರು. ಏಕೆಂದರೆ, ಅದುವರೆಗೆ ಆ ರೀತಿಯ ಕೊಡುಗೆಯ ಮಾತನ್ನು ಯಾರೂ ಆಡಿರಲಿಲ್ಲ.

ಅಷ್ಟರಲ್ಲಿ, ತಂಡದ ನಾಯಕರಾಗಿದ್ದ ಕಪಿಲ್ ದೇವ್, ಪತ್ರಿಕಾಗೋಷ್ಠಿ ಮುಗಿಸಿ ಡ್ರೆಸ್ಸಿಂಗ್ ರೂಮಿಗೆ ಬಂದರು. ಕೂಡಲೇ ಅಲ್ಲಿಯ ವಾತಾವರಣ ಬದಲಾಯಿತು. ಕಪಿಲ್ ದೇವ್ ಬಾಗಿಲಿನಲ್ಲಿಯೇ ನಿಂತು, ಮೆಹಮೂದ್‌ರನ್ನು ಕುರಿತು ಡ್ರೆಸ್ಸಿಂಗ್ ರೂಮ್‌ನಿಂದ ಹೊರಗೆ ಬರುವಂತೆ ಕೇಳಿಕೊಂಡರು. ನಂತರ ದಾವುದ್ ಇಬ್ರಾಹಿಂನನ್ನು ಕಂಡು ‘ನೀವು ಯಾರು? ಇಲ್ಲಿಂದ ಹೊರಗೆ ಹೋಗಿ, ಹೊರಗಿನವರಿಗೆ ಡ್ರೆಸ್ಸಿಂಗ್ ರೂಮಿನ ಒಳಗೆ ಬರಲು ಅವಕಾಶ ವಿಲ್ಲ’ ಎಂದು ಸಿಟ್ಟಿನಲ್ಲಿಯೇ ಹೇಳಿದರು.

ದಾವೂದ್ ಒಂದೂ ಮಾತಾಡದೇ ಡ್ರೆಸ್ಸಿಂಗ್ ರೂಮಿನಿಂದ ಹೊರಗೆ ನಡೆದಿದ್ದ. ಆಗ ಭಾರತ ತಂಡದಲ್ಲಿದ್ದ ದಿಲೀಪ್ ವೆಂಗಸರ್ಕರ್‌ರನ್ನು ಹೊರತುಪಡಿಸಿ ಉಳಿದವರಿಗೆ ದಾವೂದ್ ಇಬ್ರಾಹಿಂನ ಗುರುತೂ ಸಿಕ್ಕಿರಲಿಲ್ಲ. ಸ್ವತಃ ಕಪಿಲ್ ದೇವ್‌ಗೂ ಗೊತ್ತಿರಲಿಲ್ಲ! ಇದನ್ನು ಕೆಲವು ದಿನಗಳ ನಂತರ ವೆಂಗಸರ್ಕರ್ ಅವರೇ ಒಂದು ಸಂದರ್ಶನದಲ್ಲಿ ಹೇಳಿ ದ್ದರು.

ಎರಡನೆಯ ಘಟನೆ ಸುಮ್ಮನೆ ನೆನಪಾಯಿತು ಎಂದು ಹೇಳಿದೆ ಬಿಟ್ಟರೆ ಅದಕ್ಕೂ, ದುಬೈ ನಲ್ಲಿನ ಕ್ರಿಕೆಟ್ ಆಟದ ಬೆಳವಣಿಗೆಗೂ ಯಾವುದೇ ಸಂಬಂಧವಿಲ್ಲ. ಆದರೆ, ಆಸ್ಟ್ರೋ-ಏಷ್ಯಾ ಕಪ್ ನಂತರ ಶಾರ್ಜಾದ ಜತೆಗೆ ಯುಎಇಯ ಇತರ ರಾಜ್ಯಗಳಾದ ದುಬೈ, ಅಬುಧಾಬಿ ಯಲ್ಲಿಯೂ ಕ್ರಿಕೆಟ್ ಹುಚ್ಚು ಹೆಚ್ಚಿತು. ಹಾಗಾದರೆ ಅದಕ್ಕೂ ಮೊದಲು ಯುಎಇಯಲ್ಲಿ ಕ್ರಿಕೆಟ್ ಆಟ ಇರಲಿಲ್ಲವೇ? ಇತಿಹಾಸ ತೆಗೆದು ನೋಡಿದರೆ, ಯುಎಇ ಮತ್ತು ಕ್ರಿಕೆಟ್‌ನ ಸಂಬಂಧ ಒಂದೂಕಾಲು ಶತಮಾನಕ್ಕೂ ಹಿಂದಿನದು.

1892ರಲ್ಲಿಯೇ ಬ್ರಿಟಿಷ್ ಸೇನೆ ಈ ಪ್ರದೇಶದಲ್ಲಿ ಕ್ರಿಕೆಟ್ ಆಟವನ್ನು ಪರಿಚಯಿಸಿತು. ಈ ಪ್ರದೇಶಕ್ಕೆ ಆಗಿನ್ನೂ ಯುಎಇ ಎಂಬ ಹೆಸರು ಬಂದಿರಲಿಲ್ಲ. ‘ಟ್ರೂಷಿಯಲ್ ಸ್ಟೇಟ್ಸ್’ (SಜಿZ ಖಠಿZಠಿo) ಎಂಬ ಹೆಸರಿನಿಂದ ಈ ಪ್ರದೇಶವನ್ನು ಕರೆಯಲಾಗುತ್ತಿತ್ತು. ಎರಡನೇ ಮಹಾ‌ ಯುದ್ಧದ ಸಮಯದಲ್ಲಿ ಬ್ರಿಟಿಷ್ ರಾಯಲ್ ಏರ್ ಫೋರ್ಸ್ ಹಾಗೂ ಇತರ ಕಾಮನ್ವೆಲ್ತ್ ಪಡೆಗಳಾದ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್‌ನ ಪ್ರಜೆಗಳು ದುಬೈ, ಶಾರ್ಜಾ, ಅಜ್ಮಾನ್, ಅಬುಧಾಬಿಯಂಥ ನಗರಗಳಲ್ಲಿ ನೆಲೆಸಿದ್ದರಿಂದ, ಆಗಲೇ ಅಲ್ಲಿ ಕ್ರಿಕೆಟ್ ಹರಡಿ ಕೊಂಡಿತ್ತು. ಆ ಕಾಲದಲ್ಲಿ ಶಾರ್ಜಾದ ಸುತ್ತಮುತ್ತ ಕೆಲವು ಪಿಚ್‌ಗಳನ್ನು ಬ್ರಿಟಿಷರು ನಿರ್ಮಿಸಿದ್ದರು.

ಯುದ್ಧ ಮುಗಿದ ನಂತರ ಬ್ರಿಟಿಷ್ ಸೇನಾಪಡೆ ಹಿಂತಿರುಗಿದರೂ ಅಲ್ಲಿ ಉಳಿದುಕೊಂಡಿದ್ದ ಇತರ ಬ್ರಿಟಿಷ್ ಮತ್ತು ವಿದೇಶಿ ಪ್ರಜೆಗಳು ಆಟವನ್ನು ಮುಂದುವರಿಸಿದ್ದರು. ಆದರೂ ಅಲ್ಲಿ ಸ್ಥಳೀಯ ಆಟಗಳು ನಡೆಯುತ್ತಿದ್ದವೇ ವಿನಾ ರಾಷ್ಟ್ರೀಯ ಅಥವಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರಿಕೆಟ್ ನಡೆಯುತ್ತಿರಲಿಲ್ಲ. ಸತ್ಯ ಏನು ಎಂದರೆ, ಯುಎಇಯ ಮೊದಲ ಕ್ರಿಕೆಟ್ ಮಂಡಳಿ ಸ್ಥಾಪಿತವಾದದ್ದು ಶಾರ್ಜಾದಲ್ಲಿಯೂ ಅಲ್ಲ, ದುಬೈನಲ್ಲಿಯೂ ಅಲ್ಲ. ‌

ದಾಖಲೆಗಳ ಪ್ರಕಾರ, 1971ರಲ್ಲಿ ಅಲ್-ಐನ್ ನಗರದಲ್ಲಿ ಯುಎಇಯ ಮೊದಲ ಕ್ರಿಕೆಟ್ ಮಂಡಳಿ ಸ್ಥಾಪನೆಗೊಂಡಿತ್ತು. ಆದರೆ, ನಂತರದ ದಿನಗಳಲ್ಲಿ ಆಟದ ಜನಪ್ರಿಯತೆ ಕುಸಿ ಯಿತು. ಕೆಲವು ವರ್ಷದ ನಂತರ, ದಕ್ಷಿಣ ಏಷ್ಯಾ ದೇಶಗಳಾದ ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶದ ಜನರು ಈ ದೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಂದು ನೆಲೆಸಲು ಪ್ರಾರಂಭಿಸಿದಾಗ, ಇದಕ್ಕೆ ಪುನಃ ಜೀವ ಬಂತು.

ಜತೆಗೆ, ಭಾರತ ಮತ್ತು ಪಾಕಿಸ್ತಾನದಲ್ಲಿ ಶಿಕ್ಷಣ ಪಡೆದ ಸ್ಥಳೀಯ ಅರಬ್ಬರು ಕ್ರಿಕೆಟ್ ಕ್ಲಬ್‌ ಗಳನ್ನು ಸ್ಥಾಪಿಸಿ, ಮೈದಾನ ನಿರ್ಮಿಸಿ, ಶಾರ್ಜಾ ಸ್ಟೇಡಿಯಂ ಕಟ್ಟಿ, ಪಂದ್ಯಾವಳಿಗಳನ್ನು ಏರ್ಪಡಿಸಲು ಆರಂಭಿಸಿದರು. ಅದಕ್ಕೆ ಪೂರಕವಾಗಿ, ಈಗಾಗಲೇ ಹೇಳಿದಂತೆ, ಶಾರ್ಜಾದಲ್ಲಿ ನಡೆದ ಪಂದ್ಯಾವಳಿಯು ಯುಎಇ ಕ್ರಿಕೆಟ್‌ಗೆ ಹೊಸ ತಿರುವು ನೀಡಿತು.

ಅಲ್ಲಿಂದ ಹಿಡಿದು, ಈಗ ನಡೆಯುತ್ತಿರುವ ಐಸಿಸಿ ಏಕದಿನ ಚಾಂಪಿಯ ಟ್ರೋಫಿವರೆಗೆ ಆ ದೇಶದಲ್ಲಿನ ಕ್ರಿಕೆಟ್ ಪ್ರಯಾಣ ಎಲ್ಲರಿಗೂ ತಿಳಿದೇ ಇದೆ. ನಿಮಗೆ ತಿಳಿದಿರಲಿ, ಈಗಿನ ಅಫ್ಘಾನಿ ಸ್ತಾನದ ರಾಷ್ಟ್ರೀಯ ತಂಡದ ಹೋಂ-ಗ್ರೌಂಡ್ ಇರುವುದು ಅಬುಧಾಬಿಯಲ್ಲಿ. ಅವರು ತಮ್ಮ ದಿನನಿತ್ಯದ ಅಭ್ಯಾಸ ನಡೆಸುವುದು ಅಬುಧಾಬಿ ಕ್ರೀಡಾಂಗಣದ ಪಕ್ಕದಲ್ಲಿ ರುವ ಮೈದಾನದಲ್ಲಿ. ಭಾರತದ ಐಪಿಎಲ್ ಪಂದ್ಯಾಟದಲ್ಲಿ ಭಾಗವಹಿಸುವ ರಾಜಸ್ಥಾನ್ ರಾಯಲ್ಸ ತಂಡದ ಹೋಂ-ಗ್ರೌಂಡ್ ಕೂಡ ದುಬೈನಲ್ಲಿದೆ.

ಆದರೆ ಒಂದು ಕುತೂಹಲಕಾರಿ ಅಂಶವೆಂದರೆ, ದಕ್ಷಿಣ ಏಷ್ಯಾದ ಜನರು ಅಧಿಕವಾಗಿರುವ ಇತರ ಕೊಲ್ಲಿ ರಾಷ್ಟ್ರಗಳಲ್ಲಿ ಕ್ರಿಕೆಟ್ ಆಡಲು ಬೇಕಾದ ಉತ್ತಮ ಗುಣಮಟ್ಟದ ಸೌಲಭ್ಯ ಇನ್ನೂ ನಿರ್ಮಾಣಗೊಂಡಿಲ್ಲ.ಈಗ ದುಬೈನಲ್ಲಿ ಕ್ರಿಕೆಟ್ ಹುಚ್ಚು ಹೇಗಿದೆ ಎನ್ನುವುದಕ್ಕೆ ಒಂದು ಉದಾಹರಣೆ ಹೇಳುತ್ತೇನೆ.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಲಂಡನ್‌ನಲ್ಲಿರುವ ಸ್ನೇಹಿತ ಗಣಪತಿ ಭಟ್ ಅವರು ಫೋನ್ ಮಾಡಿ, ನಾವು ಬಹ್ರೈನ್‌ಗೆ ಕ್ರಿಕೆಟ್ ತಂಡವನ್ನು ಕರೆದುಕೊಂಡು ಬರುತ್ತೇವೆ, ಒಂದು ಪಂದ್ಯ ಆಯೋಜಿಸಲು ಸಾಧ್ಯವಾಗಬಹುದೇ? ಎಂದು ಕೇಳಿದರು. ಆದರೆ ಬಹ್ರೈನ್‌ನಲ್ಲಿ ಕ್ರಿಕೆಟ್ ಬೋರ್ಡ್, ರಾಷ್ಟ್ರೀಯ ತಂಡ ಇದ್ದರೂ ಒಂದೇ ಒಂದು ಹಸಿರು ಹುಲ್ಲುಗಾವಲಿನ ಕ್ರಿಕೆಟ್ ಮೈದಾನ ಇಲ್ಲ. ಹಾಗಾಗಿ, ದುಬೈನಲ್ಲಿ ಆಯೋಜಿಸಿದರೆ ಆದೀತೇ? ಎಂದು ಕೇಳಿದೆ.

ಅದಕ್ಕೆ ಅವರು ಒಪ್ಪಿದಾಗ, ನಾನು ಸೆಪ್ಟೆಂಬರ್ ತಿಂಗಳಿನಲ್ಲಿ ಆ ಯೋಜನೆಗೆ ಕಾರ್ಯೋ ನ್ಮುಖನಾದೆ. ನಿಜ ಹೇಳುತ್ತೇನೆ, ಅಲ್ಲಿಯವರೆಗೂ ಯುಎಇಯಲ್ಲಿ ಕ್ರಿಕೆಟ್ ಆಡುತ್ತಾರೆ, ಮೈದಾನವಿದೆ ಎಂದು ತಿಳಿದಿತ್ತೇ ವಿನಾ ಅದರ ಅಗಲ, ಸುತ್ತಳತೆ, ವ್ಯಾಪ್ತಿ ತಿಳಿದಿರಲಿಲ್ಲ. ನಿಮಗೆ ಆಶ್ಚರ್ಯವಾಗಬಹುದು, ಸೆಪ್ಟೆಂಬರ್ ತಿಂಗಳಿನಲ್ಲಿಯೇ ಮುಂದಿನ 6 ತಿಂಗಳಿಗೆ ಯಾವುದೇ ಮೈದಾನ ಲಭ್ಯವಿರಲಿಲ್ಲ.

ಒಂದು ವಿಷಯ ತಿಳಿದಿರಲಿ, ದುಬೈನಲ್ಲಿ ಕ್ರಿಕೆಟ್ ಪಂದ್ಯಾಟಗಳು ಹೆಚ್ಚಾಗಿ ನಡೆಯುವುದು ಸೆಪ್ಟೆಂಬರ್‌ನಿಂದ ಮಾರ್ಚ್ ತಿಂಗಳವರೆಗೆ ಮಾತ್ರ. ಅದರ ನಂತರ ತಾಪಮಾನ ಹೆಚ್ಚಾಗು ವುದರಿಂದ, ಹೊರಗಡೆ ಕ್ರಿಕೆಟ್ ಆಡುವುದು ಕಷ್ಟಸಾಧ್ಯ. ಆ ಸಮಯದಲ್ಲಿ ಬಹುತೇಕ ಮೈದಾನದ ಪಿಚ್‌ಗಳು ಪುನರ್‌ನಿರ್ಮಾಣಗೊಳ್ಳುತ್ತವೆ. ಆದರೆ ನನಗೆ ಆಶ್ಚರ್ಯವಾದದ್ದು, ದುಬೈನಲ್ಲಿಯೇ ಐವತ್ತಕ್ಕೂ ಹೆಚ್ಚು ಮೈದಾನಗಳಿವೆ. ನಾನು ಹೇಳುತ್ತಿರುವುದು ಎಲ್ಲ ವ್ಯವಸ್ಥೆಯನ್ನು ಹೊಂದಿದ ಕ್ರಿಕೆಟ್ ಮೈದಾನವೇ ಹೊರತು ಕಾಕುಪೋಕು, ಖಾಸಾಭದ್ರ, ಲೆಕ್ಕಕ್ಕುಂಟು-ಆಟಕ್ಕಿಲ್ಲ ಎಂಬಂಥ ಮೈದಾನವಲ್ಲ.

ಹಸಿರು ಹುಲ್ಲುಗಾವಲಿನಿಂದ ಹಿಡಿದು ಹೊನಲು ಬೆಳಕಿನವರೆಗೆ, ಕ್ಯಾಮೆರಾದಿಂದ ಹಿಡಿದು ಎಲ್ಇಡಿ, ಸ್ಕೋರ್ ಬೋರ್ಡಿನವರೆಗೆ, ಪೆವಿಲಿಯನ್ನಿಂದ ಹಿಡಿದು ಡ್ರೆಸ್ಸಿಂಗ್ ರೂಮಿನ‌ ವರೆಗೆ ಎಲ್ಲವೂ ಇರುವಂಥ ಮೈದಾನಗಳು. ಇಂಥ ಮೈದಾನಗಳಲ್ಲಿ ಪಿಚ್ಚಿನ ಎರಡೂ ಕಡೆ ಇರುವ ಸ್ಟಂ, ಎರಡು ಹೊಸ ಚೆಂಡುಗಳು, ಇಬ್ಬರು ಅಂಪೈರ್‌ಗಳು, ಕುಡಿಯುವ ನೀರು ಇತ್ಯಾದಿಗಳನ್ನು ಪೂರೈಸಲಾಗುತ್ತದೆ.

ಪ್ರತಿ 3 ಗಂಟೆಯ ಅವಧಿಯಂತೆ ಮೈದಾನವನ್ನು ಬಾಡಿಗೆಗೆ ನೀಡುತ್ತಾರೆ. ಒಂದು ಅವಧಿಗೆ ಸುಮಾರು 50ರಿಂದ 80ಸಾವಿರ ರುಪಾಯಿ ಬಾಡಿಗೆ ಇರುತ್ತದೆ. ವೈ-ಫೈ, ವೀಕ್ಷಕ ವಿವರಣೆ ಕಾರರು ಅಥವಾ ಇನ್ನೂ ಹೆಚ್ಚಿನ ವ್ಯವಸ್ಥೆ ಬೇಕಾದಲ್ಲಿ, ಇನ್ನೂ ಹೆಚ್ಚು ಹಣ ನೀಡ ಬೇಕಾಗುತ್ತದೆ. ಈ 3 ಗಂಟೆಯ ಅವಧಿಯನ್ನು ದಿನದ 24 ಗಂಟೆಯೂ ಬಾಡಿಗೆಗೆ ನೀಡುತ್ತಾರೆ.

ನೀವು ಬೇಕಾದರೆ ಮಧ್ಯರಾತ್ರಿ 12 ಗಂಟೆ ಅಥವಾ ಬೆಳಗಿನ ಜಾವ 3 ಗಂಟೆಯ ಅವಧಿ ಯನ್ನೂ ಬಾಡಿಗೆಗೆ ಪಡೆಯಬಹುದು. ದುಬೈ ಮಾತ್ರವಲ್ಲ, ಶಾರ್ಜಾ, ಅಜ್ಮಾನ್, ಅಬುಧಾಬಿ ಯಲ್ಲಿಯೂ ಈ ರೀತಿಯ ವ್ಯವಸ್ಥೆ ಇದೆ. ಅವನ್ನೆಲ್ಲ ಸೇರಿಸಿದರೆ ಒಟ್ಟೂ ಮೈದಾನಗಳ ಸಂಖ್ಯೆ ನೂರು ದಾಟುತ್ತದೆ. ಅಷ್ಟಾದರೂ, ನಾನು ಸೆಪ್ಟೆಂಬರ್‌ನಲ್ಲಿ ವಿಚಾರಿಸಿದಾಗ, ಫೆಬ್ರವರಿ ತಿಂಗಳಿನವರೆಗೆ ಕೆಲವು ದಿನ ಅಲ್ಲಿ-ಇಲ್ಲಿ, ಒಂದೋ-ಎರಡೋ ಅವಧಿಯಲ್ಲಿ ಮಾತ್ರ ಮೈದಾನ ಲಭ್ಯವಿತ್ತೇ ವಿನಾ, ನಮಗೆ ಬೇಕಾದ ವಾರಾಂತ್ಯಕ್ಕಾಗಲೀ ಅಥವಾ ನಮಗೆ ಬೇಕಾದ ಸಮಯಕ್ಕಾಗಲೀ ಮೈದಾನ ಲಭ್ಯವಿರಲಿಲ್ಲ.

ಅಂದರೆ, ಒಂದು ಕ್ರಿಕೆಟ್ ಆಟದಿಂದ ಆರರಿಂದ ಏಳು ತಿಂಗಳ ಅವಧಿಯಲ್ಲಿ ಈ ದೇಶ ಗಳಿಸುವ ಹಣದ ಬಗ್ಗೆ ಯೋಚಿಸಿ. ನೆನಪಿರಲಿ, ಇಲ್ಲಿ ಇದು 4 ದಶಕದಿಂದ ಈಚೆಗೆ ಜನಪ್ರಿ ಯವಾದ ಆಟ. ಇದು ಇಂಗ್ಲೆಂಡ್, ಭಾರತ, ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್ ತಂಡಗಳಂತೆ ಬಹುಕಾಲದಿಂದ ಕ್ರಿಕೆಟ್ ಆಡಿದ ದೇಶವಲ್ಲ. ಭಾರತದಲ್ಲಿರುವಷ್ಟು ಕ್ರಿಕೆಟ್ ಆಟಗಾರರು ಅಥವಾ ಮೈದಾನಗಳು ಕೂಡ ಈ ದೇಶದಲ್ಲಿಲ್ಲ. ಆದರೆ ನಮ್ಮ ಬೆಂಗಳೂರಿ‌ ಗಿಂತಲೂ ಚಿಕ್ಕದಾಗಿರುವ ಪ್ರದೇಶದಲ್ಲಿ, ದಕ್ಷಿಣ ಏಷ್ಯಾದ ಜನರೇ ಹೆಚ್ಚು ತುಂಬಿ ಕೊಂಡಿರುವುದನ್ನು ಮನಗಂಡು, ಅವರ ಕ್ರಿಕೆಟ್ ಹುಚ್ಚನ್ನು ಪರಿಗಣಿಸಿ, ನೂರಾರು ಕ್ರಿಕೆಟ್ ಮೈದಾನವನ್ನು ಸಿದ್ಧಪಡಿಸಿ, ಅದರಿಂದಲೂ ವ್ಯಾಪಾರ ಮಾಡಬಹುದು ಎಂಬ ವಿಚಾರ ದುಬೈಗೆ ಬಂತಲ್ಲ!

ಅದಕ್ಕೇ ಹೇಳುವುದು, ದುಬೈ ಬೇರೆ ಊರಿನಂತಲ್ಲ! ಯುಎಇ ಇತರ ದೇಶಗಳಂತಲ್ಲ! ಯಾವುದೇ ಒಂದು ಕ್ಷೇತ್ರದಲ್ಲಿ ಹಣವಿದೆ ಎಂದು ಅನ್ನಿಸಿದರೆ, ಒಂದು ಕ್ಷಣವೂ ವಿಳಂಬ ಮಾಡದೆ, ಅದನ್ನು ತನ್ನದಾಗಿಸಿಕೊಳ್ಳಲು ಮಾಡುವ ಪ್ರಯತ್ನವಿದೆಯಲ್ಲ, ಅದು ಎಲ್ಲ ರಿಂದ ಸಾಧ್ಯವಿಲ್ಲ.

ಅದಕ್ಕಾಗಿಯೇ ಆ ದೇಶ, ಅದರಲ್ಲೂ ದುಬೈ ಇಷ್ಟವಾಗುತ್ತದೆ. ಬಹುಶಃ ಈ ಕಾರಣ ಕ್ಕಾಗಿಯೇ ಕ್ರಿಕೆಟ್ ಆಟವನ್ನು ನಿಯಂತ್ರಿಸುವ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಇಇ) ತನ್ನ ಪ್ರಧಾನ ಕಚೇರಿಯನ್ನು 2005ರಿಂದ ದುಬೈನಲ್ಲಿ ಸ್ಥಾಪಿಸಿಕೊಂಡು, ವಿಪರೀತ ತಾಪಮಾನದಲ್ಲೂ ತಣ್ಣಗೆ ಕುಳಿತಿದೆ. ಪ್ರತಿಷ್ಠಿತ ತಂಡಗಳೂ ದುಬೈ ಕಡೆಗೆ ಮುಖ ಮಾಡು ತ್ತಿವೆ. ಒಟ್ಟಿನಲ್ಲಿ, ಯಾವುದೋ ದೇಶದ ಕ್ರಿಕೆಟ್ ದುಡ್ಡು, ದುಬೈನಲ್ಲಿ ಜಾತ್ರೆ...!