Theft Case: ದುಬೈಯಲ್ಲಿ ಚಿನ್ನದ ನೆಕ್ಲೆಸ್ ಕದ್ದ ಯುರೋಪಿಯನ್ ಮಹಿಳೆಗೆ 3.5 ಲಕ್ಷ ರೂ. ದಂಡ
ದುಬೈಗೆ ಬಂದಿದ್ದ ಯುರೋಪ್ ಮಹಿಳೆಯೋಬ್ಬಳು ಕಳ್ಳತನ ಮಾಡಿ ಸಿಕ್ಕಿಬಿದ್ದ ಘಟನೆ ಬಹಳ ತಡವಾಗಿ ಬೆಳಕಿಗೆ ಬಂದಿದೆ. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮಹಿಳೆಗೆ ದಂಡ ವಿಧಿಸಿದ್ದು, ಭಾವನಾತ್ಮಕ ಒತ್ತಡಕ್ಕೆ ಒಳಗಾಗಿ ಈ ಕೃತ್ಯ ಎಸಗಿರುವುದಾಗಿ ತಿಳಿಸಿದ್ದಾಳೆ.
-
ದುಬೈ: ದುಬೈ(Dubai)ಯ ಜುವೆಲ್ಲರಿಯೊಂದರ ಚಿನ್ನದ ನೆಕ್ಲೆಸ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಯುರೋಪಿಯನ್ (European) ಮಹಿಳೆ ತಪ್ಪಿತಸ್ಥೆ ಎಂದು ಸಾಬೀತಾಗಿದ್ದು, ಅಲ್ಲಿನ ನ್ಯಾಯಾಲಯ ಆಕೆಗೆ ದಂಡ ಹಾಗೂ ಪರಿಹಾರ ರೂಪದಲ್ಲಿ ಒಟ್ಟು 15,000 ದಿರ್ಹಾಮ್‌ಗಳು ಅಂದರೆ, ಸುಮಾರು 3.5 ಲಕ್ಷ ರೂಪಾಯಿ ಪಾವತಿಸುವಂತೆ ಆದೇಶಿಸಿದೆ.
ದಿ ಖಲೀಜ್ ಟೈಮ್ಸ್(The Khaleej Times) ವರದಿಯ ಪ್ರಕಾರ, ದುಬೈ ಮಿಸ್ಡೀಮೀನರ್ಸ್ ಮತ್ತು ವೈಲೇಶನ್ಸ್ ನ್ಯಾಯಾಲಯವು (Misdemeanours and Violations Court) ಆಕೆಗೆ 5,000 ದಿರ್ಹಾಮ್‌ಗಳು (1.19 ಲಕ್ಷ ರೂ.) ದಂಡ ಹಾಗೂ ಕಳುವಾದ ಚಿನ್ನದ ನೆಕ್ಲೆಸ್‌ನ ಮೌಲ್ಯಕ್ಕೆ ಸಮಾನವಾದ 10,000 ದಿರ್ಹಾಮ್‌ಗಳು (2.39 ಲಕ್ಷ ರೂ.) ಪರಿಹಾರವಾಗಿ ಪಾವತಿಸಲು ಸೂಚಿಸಿದೆ. ಈ ಘಟನೆ ಈ ವರ್ಷದ ಮಾರ್ಚ್‌ನಲ್ಲಿ ನಡೆದಿದ್ದು, ಮಹಿಳೆ ಅಂಗಡಿಯಿಂದ ಹೊರಬಂದ ಕೆಲವೇ ಕ್ಷಣಗಳಲ್ಲಿ ನೆಕ್ಲೆಸ್ ಕಳ್ಳತನವಾಗಿರುವುದು ಬೆಳಕಿಗೆ ಬಂದಿತ್ತು.
ಈ ಸುದ್ದಿಯನ್ನು ಓದಿ: Viral Video: ಗಡದ್ದಾಗಿ ತಿಂದು ಹೋಟೆಲ್ ಬಿಲ್ ಪಾವತಿಸದೆ ಪರಾರಿಯಾದ ಪ್ರವಾಸಿಗರು; ಬೆನ್ನಟ್ಟಿದ ಸಿಬ್ಬಂದಿ
ಗ್ರಾಹಕರ ಭೇಟಿ ಬಳಿಕ ಕಾಣೆಯಾಗಿತ್ತು ನೆಕ್ಲೆಸ್
ಜುವೆಲ್ಲರಿಯಲ್ಲಿ ಆಭರಣಗಳ ಡಿಸ್ಪ್ಲೇಯಿಂದ 10,000 ದಿರ್ಹಾಮ್ ಮೌಲ್ಯದ ನೆಕ್ಲೆಸ್ ಕಾಣೆಯಾಗಿತ್ತು. ಅಂಗಡಿಯ ಸಿಬ್ಬಂದಿ ಗಮನಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಬಳಿಕ ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸಿದಾಗ, ಆ ಮಹಿಳೆ ನೆಕ್ಲೆಸ್ ಅನ್ನು ತಮ್ಮ ಹ್ಯಾಂಡ್‌ಬ್ಯಾಗ್‌ನಲ್ಲಿ ಇಟ್ಟುಕೊಂಡು ಅಂಗಡಿಯಿಂದ ಹೊರಟಿರುವುದು ಕಾಣಿಸಿದೆ. ಆ ದೃಶ್ಯಾವಳಿಯನ್ನು ವಶಕ್ಕೆ ಪಡೆದ ಪೊಲೀಸರು, ವಾಹನದ ವಿವರಗಳ ಮೂಲಕ ಆರೋಪಿಯನ್ನು ಪತ್ತೆಹಚ್ಚಿ, ಕೆಲವೇ ದಿನಗಳಲ್ಲಿ ಬಂಧಿಸಿದ್ದರು.
ಭಾವನಾತ್ಮಕ ಯಾತನೆಯಿಂದ ಕೃತ್ಯ ನಡೆದಿದೆ ಆರೋಪಿಯ ಹೇಳಿಕೆ
ವಿಚಾರಣೆಯ ವೇಳೆ ನೆಕ್ಲೆಸ್ ಕದ್ದಿರುವುದಾಗಿ ಮಹಿಳೆ ಒಪ್ಪಿಕೊಂಡಿದ್ದಾಳೆ. "ಕಳವು ಮಾಡುವ ಉದ್ದೇಶ ಇರಲಿಲ್ಲ. ತನ್ನ ಸಹೋದರಿಯ ಸಾವಿನ ಸುದ್ದಿ ಕೇಳಿದ ತಕ್ಷಣ ತಾನು ಭಾವನಾತ್ಮಕವಾಗಿ ಕುಗ್ಗಿ ತಾಳ್ಮೆ ಕಳೆದುಕೊಂಡಿದ್ದೆ" ಆರೋಪಿ ಮಹಿಳೆ ಪೊಲೀಸರಿಗೆ ತಿಳಿಸಿದ್ದಾಳೆ.
ಮಹಿಳೆ ಪರ ವಕೀಲರು, ಆಕೆಯ ಮಾನಸಿಕ ಸ್ಥಿತಿಯನ್ನು ಉಲ್ಲೇಖಿಸಿ ನ್ಯಾಯಾಲಯದಲ್ಲಿ ಕ್ಷಮೆ ಕೋರಿ ಮನವಿ ಸಲ್ಲಿಸಿದ್ದರು. ಆದರೆ ನ್ಯಾಯಾಲಯವು ದೃಶ್ಯಾವಳಿ ಹಾಗೂ ಸಾಕ್ಷ್ಯಾಧಾರಗಳನ್ನು ಪರಿಗಣಿಸಿ, "ಇದು ಉದ್ದೇಶಪೂರ್ವಕ ಕೃತ್ಯ. ಆರೋಪಿಯ ವರ್ತನೆಯಿಂದ ಆಕೆ ಸಂಪೂರ್ಣ ಅರಿವಿನಲ್ಲೇ ಈ ಕೃತ್ಯ ಎಸಗಿರುವುದು ಸ್ಪಷ್ಟವಾಗುತ್ತದೆ” ಎಂದು ನ್ಯಾಯಾಧೀಶರು ಖಲೀಜ್ ಟೈಮ್ಸ್‌ಗೆ ತಿಳಿಸಿದ್ದಾರೆ.
ಇನ್ನು ನ್ಯಾಯಾಲಯವು ಆಕೆಗೆ ದಂಡ ಹಾಗೂ ಪರಿಹಾರವನ್ನು ಪಾವತಿಸಲು ಆದೇಶಿಸಿದ್ದು, ಈ ತೀರ್ಪಿನಿಂದ ಪ್ರಕರಣ ಮುಕ್ತಾಯಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೆಹಲಿಯ ಜ್ಯುವೆಲ್ಲರಿ ಕಳ್ಳತನ
ಕೆಲವೇ ದಿನಗಳ ಹಿಂದೆ ದೆಹಲಿ ಲಕ್ಷ್ಮೀ ನಗರದಲ್ಲಿರುವ ಜ್ಯುವೆಲ್ಲರಿ ಅಂಗಡಿಯೊಂದರಲ್ಲಿ ನಡೆದ ಮತ್ತೊಂದು ಕಳವು ಘಟನೆಯ ಸಿಸಿಟಿವಿ ದೃಶ್ಯಾವಳಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಆ ವಿಡಿಯೋದಲ್ಲಿ ಇಬ್ಬರು ಮಹಿಳೆಯರು ಚಾಲಾಕಿತನದಿಂದ ಅಸಲಿ ಚಿನ್ನದ ಬಂಗಾರ ಕದ್ದು ನಕಲಿ ಉಂಗುರ ಇಟ್ಟು ಕ್ಷಣಾರ್ಧದಲ್ಲಿ ಪರಾರಿಯಾಗಿದ್ದರು.