ತುಂಟರಗಾಳಿ
ಸಿನಿಗನ್ನಡ
ಚಿತ್ರರಂಗದಲ್ಲಿ ಈಗ ಹೊಸದೊಂದು ಚಾಳಿ ಶುರುವಾಗಿದೆ. ಅದು ಚಿತ್ರದ ಕಲೆಕ್ಷನ್ ವಿಚಾರದ್ದು. ಮೊದಲೆಲ್ಲ ಸಿನಿಮಾ ಒಂದು, 100 ದಿನ ಓಡಿದ್ರೂ ನಿರ್ಮಾಪಕರು ಬಾಯಲ್ಲಿ ಕೋಟಿ ಅನ್ನೋಕೆ ಮುಂಚೆ ಕೋಟಿ ಸಲ ಯೋಚನೆ ಮಾಡ್ತಾ ಇದ್ರು. ಈಗ ಮಾತೆತ್ತಿದರೆ ಬಾಯಿಗೆ ಬಂದ ಹಾಗೆ ಮೊದಲ ದಿನವೇ ಕೋಟಿಗಟ್ಟಲೆ ಲೆಕ್ಕದಲ್ಲಿ ಮಾತಾಡ್ತಾರೆ. ಆದ್ರೆ ಇದ್ಯಾವುದೂ ಅಫಿಷಿಯಲ್ ಹೇಳಿಕೆ ಅಲ್ಲ. ಕೆಲವು ‘ಬಿ’ ಮತ್ತು ‘ಸಿ’ ಗ್ರೇಡ್ ವೆಬ್‌ಸೈಟುಗಳು, ಯುಟ್ಯೂಬ್ ಚಾನೆಲ್ಲುಗಳು ಮೊದಲ ದಿನದ ಮಾರ್ನಿಂಗ್ ಶೋ ಅಥವಾ ಈಗಿನ ಟ್ರೆಂಡ್‌ನಂತೆ ಅರ್ಲಿ ಮಾರ್ನಿಂಗ್ ಶೋ ಮುಗಿಯೋ ಮೊದಲೇ ಕೋಟಿಗಳ ಲೆಕ್ಕ ಬರೆಯೋಕೆ ಶುರುಮಾಡಿರ್ತವೆ.
ಇದಕ್ಕೆ ಚಿತ್ರದ ನಿರ್ಮಾಪಕರು ಹೌದು ಅಂತಲೂ ಹೇಳಲ್ಲ, ಇಲ್ಲ ಅಂತಲೂ ಹೇಳಲ್ಲ. ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ, ‘ಹೌದಾ, ಅಷ್ಟೊಂದ್ ಕಲೆಕ್ಷನ್ ಆಗಿದೆಯಾ, ನಮಗೇ ಗೊತ್ತಿಲ್ಲ’ ಅಂತ ನಿರ್ಮಾಪಕರೇ ಹೇಳ್ತಾರೆ. ಪ್ರಶಾಂತ್ ನೀಲ್ ಅವರ ‘ಸಲಾರ್’ ಚಿತ್ರದ ಕಥೆ ಇದೇ ಆಗಿತ್ತು. 50 ಕೋಟಿ, 100 ಕೋಟಿ ಅಂತ ಶುರುವಾಗಿ 1000 ಕೋಟಿ ಮಾಡುತ್ತೆ ಅಂತೆ ರಿಪೋರ್ಟುಗಳು ಬಂದಿದ್ದವು.
ಅದಾದ ನಂತರ ನಿರ್ಮಾಪಕರು ತಮ್ಮ ಅಫಿಷಿಯಲ್ ಸೋಷಿಯಲ್ ಮೀಡಿಯಾ ಪೇಜ್‌ಗಳಿಂದ ಅಂಥ ರಿಪೋರ್ಟ್‌ಗಳನ್ನು ತೆಗೆದುಹಾಕಿದ್ದರು. ಇವೆಲ್ಲ ಏನಿದ್ರೂ ಚಿತ್ರಮಂದಿರಕ್ಕೆ ಪ್ರೇಕ್ಷಕರನ್ನು ಸೆಳೆಯಲು ಮಾಡುವ ತಂತ್ರ ಎನ್ನಲಾಗುತ್ತಿದೆ. ಇದಕ್ಕೆ ಸಹಾಯ ಮಾಡುವಂತೆ ಕಾರ್ಪೋರೇಟ್ ಬುಕ್ಕಿಂಗ್ ಎನ್ನುವ ಹೊಸ ದಂಧೆ ಶುರುವಾಗಿದೆ. ಇದು ಸುಳ್ಳು ಟಿಕೆಟ್ ಬುಕ್ಕಿಂಗ್ ತೋರಿಸುವ ಕೆಲಸ ಎಂದು ಸಿನಿಪಂಡಿತರು ಹೇಳುತ್ತಿzರೆ. ಅದಾದ ನಂತರ ‘ಸಲಾರ್’ ಚಿತ್ರ ಇದ್ದಕ್ಕಿದ್ದಂತೆ ತನ್ನ ಪ್ರಚಾರ ನಿಲ್ಲಿಸಿತ್ತು. ಅದರ ಬೆನ್ನ, ಜನವರಿ ಆರಂಭದ ‘ಸಲಾರ್’ ಒಟಿಟಿಗೆ ಬಂದಿತ್ತು.
ಇದೆಲ್ಲದರ ನಡುವೆ ಒಂದು ಸಿನಿಮಾ ಎಷ್ಟರ ಮಟ್ಟಿಗೆ ಹಿಟ್ ಆಗಿದೆ ಅನ್ನೋದು ನಮ್ಮ ಊಹೆಗೆ ಬಿಟ್ಟಿದ್ದು. ನಂತರ ನಮ್ಮ ಕನ್ನಡದ ‘ಕಾಟೇರ’ ಚಿತ್ರ ಕೂಡಾ ಇದೇ ರೀತಿಯ ಪ್ರಚಾರದ ಹಾದಿ ಹಿಡಿದಿತ್ತು. ಈ ಪರಂಪರೆ ಇನ್ನೂ ಮುಂದುವರಿದಿದೆ. ಇದನ್ನೆ ನೋಡಿ, ಒಂದು ಸಿನಿಮಾದ ಕಲೆಕ್ಷನ್ ಅಸಲಿಯತ್ತು ಗೊತ್ತಾಗುವುದು ಹೇಗೋ ಅಂತಿದ್ದಾನೆ ಕನ್ನಡ ಪ್ರೇಕ್ಷಕ.
ಇದನ್ನೂ ಓದಿ: Hari Paraak Column: ಧಾರಾವಾಹಿ ನಿರ್ಮಿಸುವ ಪ್ರೊಡಕ್ಷನ್ ಹೌಸ್: ಸೋಪ್ ಫ್ಯಾಕ್ಟರಿ
ಲೂಸ್ ಟಾಕ್ -ತೇಜಸ್ವಿ ಸೂರ್ಯ
ಏನ್ ಸರ್, ಇತ್ತೀಚೆಗೆ ಅಮೆರಿಕಕ್ಕೆ ಹೋಗಿದ್ದಾಗ ಡೊನಾಲ್ಡ್ ಟ್ರಂಪ್ ನಿಮ್ಮನ್ನ ‘ಗೆಟ್ ಔಟ್’ ಅಂತ ಡೋರ್ ತೋರಿಸಿದ್ರಂತೆ?
- ಅವೆಲ್ಲ ಸುಳ್ಳು, ಎಮರ್ಜೆನ್ಸಿ ಡೋರ್ ಯಾವುದು ಅಂತ ನಂಗೊತ್ತಿಲ್ವ? ಅವರೇನೂ ಡೋರ್ ತೋರಿಸಿಲ್ಲ, ನಾನೇ ಓಪನ್ ಮಾಡ್ಕೊಂಡು ಬಂದೆ.
ಸರಿ, ಅಂತೂ ಎಮರ್ಜೆನ್ಸಿ ಅಂದ್ರೆ ಇಂದಿರಾ ಗಾಂಧಿ ಬಿಟ್ರೆ ನೀವೇ ನೆಕ್ಸ್ಟ್ ಎಲ್ಲರಿಗೂ ನೆನಪಾಗೋದು ಅಲ್ವಾ?
- ಓಹ್ ಥ್ಯಾಂಕ್ಸ್, ಅವರ ಜತೆ ನನ್ನನ್ನ ಕಂಪೇರ್ ಮಾಡಿದ್ದಕ್ಕೆ ಆದ್ರೆ ತೇಜಸ್ವಿ ಸೂರ್ಯ ಅಂದ್ರೆ ಅವರ ಜತೆ ಜಮೀರ್ ಅಹ್ಮದ್ ಕೂಡಾ ನೆನಪಾಗ್ತಾರೆ ಬಿಡಿ.
- ಏನ್ರೀ ಇದು, ಒಂದೇ ಸಲ ಇಂದಿರಾ ಗಾಂಧಿಯಿಂದ ಜಮೀರ್ ಅಹ್ಮದ್ ಲೆವೆಲ್‌ಗೆ ಇಳಿಸಿಬಿಟ್ರಲ್ಲ. ದೇವರು ಮೆಚ್ತಾನಾ..
ಸೂರ್ಯ ಅಂದ ಮೇಲೆ ಬೆಳಗ್ಗೆ ಹುಟ್ಟೋ ಹಾಗೆ ಸಂಜೆ ಮುಳುಗಲೇಬೇಕಲ್ಲ?
- ಮುಳುಗ್ದೇ ಇದ್ರೂ ನೀವು ನನ್ನ ಮುಳುಗಿಸ್ತೀರ ಬಿಡಿ
ಅದ್ಸರಿ, ಯುವ ಎಂಪಿಗಳು ಅಂತ ಇದ್ದಿದ್ದು ನೀವು ಮತ್ತು ಪ್ರತಾಪ್ ಸಿಂಹ. ಆದರೆ ಅವರು ತಮ್ಮ ಕೆಲಸದಿಂದ ಸುದ್ದಿ ಮಾಡಿದ್ರೆ ನೀವು ಬರೀ ಮಾತಿನಿಂದ ಸುದ್ದಿಯಲ್ಲಿರ್ತೀರ ಅಲ್ವಾ?
- ಮತ್ತೆ, ಎಲ್ಲರೂ ಕೆಲಸ ಮಾಡ್ಕೊಂಡ್ ಕೂತ್ಕೊಂಡ್ರೆ ಮಾತಾಡೋರ್ ಯಾರು?
(ಕಾಲ್ಪನಿಕ ಸಂದರ್ಶನ)
ನೆಟ್ ಪಿಕ್ಸ್
ಖೇಮು ಯಾವಾಗ್ಲೂ ಸಿಕ್ಕಾಪಟ್ಟೆ ಕುಡೀತಿದ್ದ. ಕುಡಿದರೆ ಅವನಿಗೆ ಮೈಮೇಲೆ ಜ್ಞಾನವೇ ಇರುತ್ತಿರ ಲಿಲ್ಲ. ತನ್ನ ಸುತ್ತಮುತ್ತ ಅಷ್ಟೇ ಅಲ್ಲ, ತನಗೆ ಏನಾಗ್ತಾ ಇದೆ ಅನ್ನೋದೂ ಅವನಿಗೆ ಗೊತ್ತಾಗ್ತಾ ಇರಲಿಲ್ಲ. ಖೇಮು ಮನೆಯ ಕುಡಿಯುತ್ತಿದ್ದರಿಂದ ಖೇಮುಶ್ರೀಗೆ ಇದರ ಅನುಭವ ಹಲವಾರು ಬಾರಿ ಆಗಿ ಬೇಸತ್ತುಹೋಗಿದ್ದಳು. ಆದರೆ ಖೇಮು ಅದನ್ನು ನಂಬಲು ತಯಾರಿರುತ್ತಿರಲಿಲ್ಲ.
‘ನಾನು ಎಷ್ಟೇ ಕುಡಿದರೂ ಅಲರ್ಟ್ ಆಗಿ ಇರ್ತೀನಿ, ನಂಗೆ ಗೊತ್ತಾಗುತ್ತೆ’ ಅಂತನೇ ವಾದಿಸ್ತಾ ಇದ್ದ. ಒಂದು ದಿನ ಖೇಮುಶ್ರೀ, ತನ್ನ ಗಂಡ ಕುಡಿದ ಮೇಲೆ ಅವನಿಗೆ ಮೈಮೇಲೆ ಜ್ಞಾನ ಇರಲ್ಲ ಅನ್ನೋದನ್ನ ಪ್ರೂವ್ ಮಾಡೇ ಮಾಡ್ತೀನಿ ಅಂತ ಚಾಲೆಂಜ್ ಮಾಡಿದಳು. ಖೇಮು ಕೂಡ ಅದಕ್ಕೆ ಒಪ್ಪಿದ. ಸರಿ, ಒಂದು ದಿನ ಖೇಮು ೩ ಲಾರ್ಜ್ ವಿಸ್ಕಿ ಕುಡಿದು ಟೈಟಾದ. ಮನೆಯ ಎಣ್ಣೆ ಸ್ಟಾಕ್ ಇಟ್ಟಿರುತ್ತಿದ್ದುದರಿಂದ ಖೇಮುಶ್ರೀಗೆ ‘ಇನ್ನೊಂದು ಲಾರ್ಜ್ ವಿಸ್ಕಿ ತಗೊಂಬಾ’ ಅಂದ, ತಂದು ಕೊಟ್ಟಳು ಖೇಮುಶ್ರೀ.
ಅದನ್ನು ಅವನು ಕುಡಿದ ನಂತರ ಮೊದಲೇ ಪ್ಲ್ಯಾನ್ ಮಾಡಿದಂತೆ ಖೇಮುವನ್ನು ಹಿಗ್ಗಾಮುಗ್ಗಾ ಬಾರಿಸತೊಡಗಿದಳು ಖೇಮುಶ್ರೀ. ಖೇಮು ನೆಲದ ಮೇಲೆ ಬಿದ್ದು ಹೊರಳಾಡಿದ ನಂತರ ಎದ್ದು ಅವಳ ಮುಖ ನೋಡಿ, ‘ಮತ್ತೆ ಇನ್ನೊಂದು ಲಾರ್ಜ್ ವಿಸ್ಕಿ ತಗೊಂಡ್ ಬಾ’ ಅಂದ. ವಿಸ್ಕಿ ರಿಪೀಟ್ ಆದಂತೆ ಅದನ್ನು ಕುಡಿದ ನಂತರ ಖೇಮುಶ್ರಿ ಒದೆ ಕೂಡ ರಿಪೀಟ್ ಆಯ್ತು.
ಒದೆ ತಿಂದು ಬಿದ್ದು, ಮತ್ತೆ ಎದ್ದು ಹೆಂಡತಿ ಮುಖವನ್ನು ಗುರಾಯಿಸಿದ ಖೇಮು ಹೇಳಿದ ‘ಇನ್ನೊಂದು ಲಾರ್ಜ್ ವಿಸ್ಕಿ ತಗೊಂಡ್ ಬಾ’. ‘ಓ, ನನ್ನ ಗಂಡನಿಗೆ ಎಷ್ಟು ಕುಡಿದರೂ ತನ್ನ ಸುತ್ತಮುತ್ತ ಏನಾಗ್ತಾ ಇದೆ ಅಂತ ಗೊತ್ತಾಗ್ತಿದೆಯಲ್ಲ ಸಾಕು’ ಅಂತ ಖೇಮುಶ್ರೀ ಖುಷಿಯಾಗಿ ಇನ್ನೊಂದು ತಂದು ಕೊಟ್ಳು. ಮತ್ತೆ ಏಟನ್ನೂ ಕೊಟ್ಟಳು.
ಈ ಸಲ ಒದೆ ತಿಂದು ಕೆಳಗೆ ಬಿದ್ದು, ಹೆಂಡ್ತಿಯನ್ನು ಗುರಾಯಿಸಿದ ಖೇಮು ಹೇಳಿದ, ‘ಇನ್ನೊಂದ್ ಲಾರ್ಜ್ ರಮ್ ತಗೊಂಡ್ ಬಾ’. ಅದಕ್ಕೆ ಖೇಮುಶ್ರೀ, ‘ಅಲ್ಲರೀ, ನೀವು ಆವಾಗಿಂದ ವಿಸ್ಕಿ ಅಲ್ವಾ ಕುಡಿತಾ ಇದೋದು?’ ಅಂದ್ಳು. ಅದಕ್ಕೆ ಖೇಮು ಹೇಳಿದ, ‘ವಿಸ್ಕಿ ಕುಡಿತಾ ಇದ್ದೀನಿ ಅಂತ ನಂಗೊತ್ತು, ನಾನು ಅಲರ್ಟ್ ಆಗೇ ಇದ್ದೀನಿ. ಆದ್ರೆ, ವಿಸ್ಕಿ ಕುಡಿದ್ರೆ ಯಾಕೋ ಆವಾಗಿಂದ ಸಿಕ್ಕಾಪಟ್ಟೆ ಮೈ ಕೈ ನೋವಾಗ್ತಿದೆ. ಅದಕ್ಕೆ ಈ ಸಲ ರಮ್ ತಗೊಂಡ್ ಬಾ’.
ಲೈನ್ ಮ್ಯಾನ್
ಸದಾ ಅಭಿವೃದ್ಧಿಯ ಜಪ ಮಾಡೋ ದೇಶ
- ಜಪಾನ್
ಸರ್ಕ್ಯುಲೇಶನ್ ಕಡಿಮೆ ಆಗಿರೋ ಡೈಲಿ ಪತ್ರಿಕೆ
- ‘ವೀಕ್’ಲಿ
‘ಮೂಗು’ ಔಟ್ ಆಫ್ ಆರ್ಡರ್ ಆಗಿದ್ರೆ ಅದು
- ‘ನಾಕ್’ ಔಟ್
ಮೂಗು ಕಟ್ಟಿಕೊಂಡ್ರೆ ಅದು
- ‘ನಾಕಾ’ ಬಂದಿ
ನೀವು ಸರಿಯಾಗಿ ಯೋಚನೆ ಮಾಡ್ತಾ ಇಲ್ಲ ಅನ್ನೋದನ್ನು ಕಣ್ಣು, ಮೂಗು ಪದಗಳನ್ನ ಬಳಸಿ ಹೇಳುವಾಗ ಆಗುವ ವ್ಯತ್ಯಾಸ
- ನೀವು ‘ವಕ್ರ’ದೃಷ್ಟಿ ಬೀರ‍್ತಾ ಇದ್ದೀರಿ.
- ನೀವು ನಿಮ್ಮ ಮೂಗಿನ ‘ನೇರಕ್ಕೆ’ ಮಾತಾಡ್ತಾ ಇದ್ದೀರಿ.
ಭಾಷಾ ಬಳಕೆ
- ಕನ್ನಡ ಮಾತಾಡೋನಷ್ಟೇ ಅಲ್ಲ, ಕನ್ನಡಿ ಮಾರೋನು ಕೂಡಾ ಕನ್ನಡಿಗನೇ
ಪೊಲೀಸರೇ ಹೆಚ್ಚಾಗಿರುವ ಪ್ರದೇಶ
- ಪೊಲೀಸ್ ‘ಬೆಲ್ಟ್’
ಜನಸಂದಣಿಯಲ್ಲಿ ಸಮಯ ನೋಡಿ ಕಾದು ಹೊಂಚು ಹಾಕಿ ಜನರ ಪರ್ಸ್, ಮೊಬೈಲ್ ಎತ್ತೋನು
- ‘ವೆಯ್ಟ್’ ‘ಲಿಫ್ಟರ್’
ಬ್ಯಾಟ್ಸ್‌ಮನ್‌ಗಳು ರನೌಟ್ ಆಗ್ತಾ ಇರೋದನ್ನ ತಡೆಯಲಾಗದೆ ಕೈಚೆಲ್ಲಿ ಕೂತ ಕ್ಯಾಪ್ಟನ್ ಮಾತುಗಳು
- ವಿ ಹ್ಯಾವ್ ರನ್ ಔಟ್ ಆಫ್ ಐಡಿಯಾಸ್
ರಸ್ತೆ ಅಡವಿಟ್ಟು ಸಾಲ ಪಡೆದ ಪಾಕಿಸ್ತಾನ
- ಜೀವ್ನ ರೋಡಿಗ್ ಬರೋದು ಅಂದ್ರೆ ಇದೇನಾ?