ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Raghav Sharma Nidle Column: ನಿಮ್ಮ ಮಂಗಾಟಕ್ಕೆ ಜಾಗತಿಕ ವೇದಿಕೆಯೇ ಬೇಕಿತ್ತಾ ?

ಅರೆಬೆತ್ತಲೆ ವೀರರು ಪ್ರತಿಭಟನೆ ಮಾಡಿದ್ದು ಸೂಚನೆ ಮೇರೆಗೆ. ಅದೇ ಕಾರಣಕ್ಕೆ ಯುವಕರು ಶಾಂತಿಯುತ ಪ್ರತಿಭಟನೆ ಮಾಡುತ್ತಿದ್ದರು ಎಂದು ರಾಹುಲ್ ಸಮರ್ಥಿಸಿದರು. ಅಷ್ಟಕ್ಕೂ ಎಐ ಜಾಗತಿಕ ಸಮಾವೇಶಕ್ಕೂ ಇಂಡೋ-ಅಮೆರಿಕ ವ್ಯಾಪಾರ ಒಪ್ಪಂದಕ್ಕೂ ಯಾವುದೇ ಸಂಬಂಧ ಇರಲಿಲ್ಲ. ಆದರೆ, ಕಾಂಗ್ರೆಸ್ ಪಕ್ಷ ಮತ್ತು ರಾಹುಲ್ ಗಾಂಧಿ ತಮ್ಮ ಬೌದ್ಧಿಕ ದಿವಾಳಿತನ ಪ್ರದರ್ಶಿಸಿ, ದೇಶದ ಮಾನ ಹರಾಜು ಹಾಕಲು ಈ ವೇದಿಕೆಯನ್ನು ಬಳಸಿ ಕೊಂಡರು.

ನಿಮ್ಮ ಮಂಗಾಟಕ್ಕೆ ಜಾಗತಿಕ ವೇದಿಕೆಯೇ ಬೇಕಿತ್ತಾ ?

-

ಜನಪಥ

ಮುಂದಿನ ತಿಂಗಳಲ್ಲಿ ಪಂಚ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ತಮಿಳುನಾಡಿನ ಮೈತ್ರಿ ಸರಕಾರದ ಪಾಲುದಾರ ಪಕ್ಷವಾಗಿದೆ ಕಾಂಗ್ರೆಸ್. ಇನ್ನು, ಕರ್ನಾಟಕ, ತೆಲಂಗಾಣ ಮತ್ತು ಹಿಮಾಚಲ ಪ್ರದೇಶದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್‌ಗೆ ಬೇರೆಲ್ಲೂ ಭದ್ರ ರಾಜಕೀಯ ನೆಲೆಯಿಲ್ಲ. ಇವನ್ನೆಲ್ಲ ನೋಡುತ್ತಿದ್ದರೆ, ಕಾಂಗ್ರೆಸ್ ಪಕ್ಷದ ಭವಿಷ್ಯಕ್ಕೆ ಮತ್ತಷ್ಟು ಮಂಕು ಕವಿಯುವಂತೆ ಕಾಣುತ್ತಿದೆ.

2014ರಿಂದ ರಾಜಕೀಯದಲ್ಲಿ ಅತಿ ಹೆಚ್ಚು ವಿಮರ್ಶೆಗೊಳಗಾದ ನಾಯಕತ್ವ ಎಂದರೆ ಬಹುಶಃ ರಾಹುಲ್ ಗಾಂಧಿಯವರದ್ದೇ ಇರಬೇಕು. ಸತತ ಮೂರು ಲೋಕಸಭೆ ಚುನಾವಣೆ ಗಳಲ್ಲಿ ಪಕ್ಷದ ಸೋಲು, ವಿವಿಧ ವಿಧಾನಸಭೆ ಚುನಾವಣೆಗಳಲ್ಲಿನ ಹಿನ್ನಡೆ, ಸಂಘಟನಾ ದೌರ್ಬಲ್ಯಗಳಿಂದಾಗಿಯೇ ಅವರ ನಾಯಕತ್ವದ ಬಗ್ಗೆ ಪ್ರಶ್ನೆಗಳು ಏಳುತ್ತಲೇ ಇರುತ್ತವೆ.

ಕೆಲ ತಿಂಗಳುಗಳ ಹಿಂದಷ್ಟೇ ಬಿಹಾರದಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತದ್ದನ್ನೂ ನಾವು ನೋಡಿದೆವು. ಆದರೆ, ಅಚ್ಚರಿ ಎಂದರೆ, ರಾಹುಲ್ ಗಾಂಧಿ ನಾಯಕತ್ವ ‘ರಿ-ಲಾಂಚ್’ ಆಗುತ್ತಲೇ ಇರುತ್ತದೆ..! ಅಷ್ಟರ ಮಟ್ಟಿಗೆ ಕಾಂಗ್ರೆಸ್‌ಗೆ ಅವರು ಅನಿವಾರ್ಯರು.

ವಾಸ್ತವದಲ್ಲಿ ಕಾಂಗ್ರೆಸ್‌ಗೆ ‘ತಳಮಟ್ಟದಿಂದ’ ಪಕ್ಷ ಸಂಘಟನೆ ಆಗಬೇಕಿರುವ ಅಗತ್ಯವಿದೆ. ಆದರೆ ಅದು ಆಗುತ್ತಿಲ್ಲ, ನಾಯಕತ್ವದ ಗೊಂದಲಗಳು ಬಗೆಹರಿಯುತ್ತಿಲ್ಲ. ಚುನಾವಣೆ ವೇಳೆ ನಾಯಕತ್ವವು ದಿಟ್ಟತನವನ್ನು ಪ್ರದರ್ಶಿಸುತ್ತಿಲ್ಲ. ಸೋಲಿಗೆ ಹೆದರಿ ರಾಹುಲ್ ಗಾಂಧಿಯವರು ಕ್ಷೇತ್ರ ಬದಲಾಯಿಸುವುದನ್ನು ನಿಲ್ಲಿಸುತ್ತಿಲ್ಲ.

ಆದರೆ, ‘ಸೋಲಿನ ಸರದಾರ’ ಎಂಬ ಬೇಡದ ಪಟ್ಟವಿದ್ದರೂ, ಅವರದ್ದೇ ನಾಯಕತ್ವವನ್ನು ನೆಚ್ಚಿಕೊಂಡು, ಆಡಳಿತಾರೂಢ ಬಿಜೆಪಿ ಹಾಗೂ ಇತರೆ ಸರಕಾರಗಳನ್ನು ಎದುರಿಸುವ ಕಾಂಗ್ರೆಸ್ಸಿಗರ ತಾಳ್ಮೆಯನ್ನು ಮೆಚ್ಚಲೇಬೇಕಾಗುತ್ತದೆ.

ಗಾಂಧಿ ಪರಿವಾರದ ಕೈಯಲ್ಲಿ ಅಧಿಕಾರದ ಕೀಲಿಕೈ ಇರದಿದ್ದರೆ ಪಕ್ಷವೇ ಹೋಳಾದೀತು ಎಂಬ ಆತಂಕವೂ ಇದಕ್ಕೆ ಕಾರಣ ಇದ್ದಿರಬಹುದು. ಬಿಹಾರದಲ್ಲಿ ರಾಹುಲ್ ಗಾಂಧಿ ನಾಯಕತ್ವದ ವೈಖರಿ ನೋಡಿದ ಮೇಲಂತೂ ‘ಚುನಾವಣೆಯಲ್ಲಿ ಸೋಲುವುದು ಹೇಗೆ?’ ಎನ್ನುವುದಕ್ಕೆ ರಾಹುಲ್ ಗಾಂಧಿಗಿಂತ ಒಳ್ಳೆಯ ಸಬ್ಜೆಕ್ಟ್ ಮೆಟೀರಿಯಲ್ ಮತ್ತೊಂದು ಸಿಗದು ಎಂದು ಅನಿಸಿದ್ದು ಸುಳ್ಳಲ್ಲ. ‌

ಇದನ್ನೂ ಓದಿ: Raghava Sharma Nidle Column: ತಿವಾರಿ ಜಾತಿ ಕೇಳಿ ಹಲ್ಲೆಗೈದದ್ದು ಸಾಮಾನ್ಯ ಘಟನೆಯೇ ?

ಕೆಲ ದಿನಗಳ ಹಿಂದೆ ಅಸ್ಸಾಂ ಕಾಂಗ್ರೆಸ್ ನಾಯಕ ಭೂಪೇನ್ ಬೋರಾ ಪಕ್ಷಕ್ಕೆ ರಾಜೀನಾಮೆ ನೀಡಿ ಹೊರ ನಡೆದು, ಫೆ.22ರಂದು ಬಿಜೆಪಿಗೆ ಸೇರ್ಪಡೆಯಾದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ನಿಷ್ಕ್ರಿಯತೆಯಿಂದ ಬೇಸರಗೊಂಡು ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಕೇಸರಿ ಶಾಲು ಹಾಕಿಕೊಂಡರು.

ಅಸ್ಸಾಂ ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ಹಿಮಾಂತ ಬಿಸ್ವ ಶರ್ಮರೊಂದಿಗೆ ಸಂಪರ್ಕದಲ್ಲಿದ್ದುಕೊಂಡೇ ಈ ಬೆಳವಣಿಗೆ ನಡೆದಿದೆ. ಹಾಗಂತ ಅವರನ್ನು ಉಳಿಸಿಕೊಳ್ಳುವ ಯತ್ನ ಮಾಡಬಹುದಿತ್ತು. ರಾಜೀನಾಮೆ ವಾಪಸ್ ಪಡೆದುಕೊಳ್ಳಿ ಎಂದು ಭೂಪೇನ್‌ಗೆ ಅನೇಕರು ಒತ್ತಾಯಿಸಿದ್ದರು.

“ನಾನು ಪಕ್ಷದಲ್ಲಿ ಪದೇಪದೆ ಅವಮಾನಕ್ಕೀಡಾಗುತ್ತಿದ್ದೇನೆ" ಎಂದು ರಾಹುಲ್ ಗಾಂಧಿ ಯವರಲ್ಲಿ ಹೇಳಿಕೊಂಡಾಗ, “ನಾನು ಕೂಡ ಅವಮಾನಕ್ಕೀಡಾಗುತ್ತಿದ್ದೇನೆ. ನಿಮ್ಮದು ಏನೂ ಅಲ್ಲ" ಎಂದು ಉತ್ತರ ನೀಡಿದ್ದರಂತೆ ರಾಹುಲ್ ಗಾಂಧಿ. ಇಂಥ ಉತ್ತರ ಬಂದ ಮೇಲೆ ಯಾರು ತಾನೇ ಪಕ್ಷದಲ್ಲಿ ಉಳಿದುಕೊಂಡಾರು? ಹೀಗಾಗಿ, ನಿಮ್ಮ ಸಹವಾಸ ಸಾಕು ಎಂದು ಭೂಪೇನ್ ಬೋರಾ ರಾಜೀನಾಮೆ ಸಲ್ಲಿಸಿದರು.

congress-1_MP ok

ರಾಜ್ಯ ನಾಯಕರನ್ನು ಕಡೆಗಣಿಸುವುದು ಮತ್ತು ಅವರ ಬೇಕು-ಬೇಡಗಳನ್ನು ಕಿವಿಗೆ ಹಾಕಿ ಕೊಳ್ಳದಿರುವುದು ರಾಹುಲ್‌ಗೆ ಹೊಸದೇನಲ್ಲ. ರಾಹುಲರ ರಾಜಕೀಯ ವೈಖರಿ ಊಹಿಸಲ ಸಾಧ್ಯ ಮತ್ತು ಇಂದಿನ ಬದಲಾದ ರಾಜಕೀಯದ ಡೈನಮಿಕ್ಸ್‌ಗೆ ಅದು ಹೊಂದಿ ಕೊಳ್ಳುವುದೂ ಇಲ್ಲ.

ಹಾಗೆ ನೋಡಿದರೆ, ಅಸ್ಸಾಂ ಸಿಎಂ ಹಿಮಾಂತ ಶರ್ಮ ಕೂಡ ಒಂದೊಮ್ಮೆ ಕಾಂಗ್ರೆಸ್ ಪಕ್ಷದ ಪ್ರತಿಭೆಯಾಗಿದ್ದವರು. ಅವರು ಬಿಜೆಪಿ ಸೇರಲು ಕಾರಣ ಇದೇ ರಾಹುಲ್ ಗಾಂಧಿ. ಪಕ್ಷ ದೊಳಗಿರುವ ಪ್ರತಿಭೆಗಳನ್ನು ಬಳಸಿಕೊಳ್ಳಲು ರಾಹುಲ್ ಗಾಂಧಿಯವರಿಗೆ ಸಾಮರ್ಥ್ಯ ವಾಗಲೀ, ರಾಜಕೀಯ ಪ್ರಬುದ್ಧತೆ, ನೈಪುಣ್ಯವಾಗಲೀ ಯಾವುದೂ ಇರಲಿಲ್ಲ.

ಈಗಲೂ ಇದ್ದಂತಿಲ್ಲ. ಅವರ ಮಾತು/ನಡೆಯಲ್ಲಿನ ಅಹಂಕಾರ ಪಕ್ಷಕ್ಕೆ ಹಾನಿ ಮಾಡುತ್ತಿದೆ. ಇಲ್ಲದಿದ್ದರೆ, ಈಶಾನ್ಯದ ಏಳೂ ರಾಜ್ಯಗಳಲ್ಲಿ ಹಿಡಿತ ಸಾಧಿಸಿದ್ದ ಹಿಮಾಂತ ಬಿಸ್ವರಂಥ ನಾಯಕರನ್ನು ದಿಲ್ಲಿಯಲ್ಲಿ ಮೂರು ದಿನ ಕಾಯಿಸುತ್ತಾರೆ ಎಂದರೆ..!

2016ರಲ್ಲಿ ಹಿಮಾಂತ ಬಿಜೆಪಿ ಸೇರುತ್ತಿದ್ದಂತೆ, ಅವರ ನೇತೃತ್ವದ ಬಿಜೆಪಿ ತನ್ನ ರಾಜಕೀಯ ಬಾಹುಗಳನ್ನು ಈಶಾನ್ಯದಲ್ಲಿ ವ್ಯವಸ್ಥಿತವಾಗಿ ವಿಸ್ತರಿಸಿಕೊಂಡಿತು. ಈಗ ಮತ್ತೊಮ್ಮೆ ಗೌರವ್ ಗೊಗೊಯ್ ನೇತೃತ್ವದಲ್ಲಿ ಮುಂಬರುವ ಅಸ್ಸಾಂ ಚುನಾವಣೆಯನ್ನು ಎದುರಿಸಲು ಸಜ್ಜಾಗಿರುವ ಕಾಂಗ್ರೆಸ್‌ಗೆ ಸಿಎಂ ಹಿಮಾಂತ ಬಿಸ್ವ ಶರ್ಮ ನಾಯಕತ್ವದ ಪ್ರಬಲತೆ, ಜನಪ್ರಿಯತೆ ಹಾಗೂ ಸಂಘಟನಾ ಚಾತುರ್ಯದ ದೈತ್ಯ ಸವಾಲಿದೆ.

ಇರಲಿ, ರಾಹುಲ್ ನಾಯಕತ್ವದತ್ತ ಬರೋಣ. ಕೆಲ ದಿನಗಳ ಹಿಂದೆ, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್‌ಗೆ (ಎಐ) ಸಂಬಂಧಿಸಿ ದೆಹಲಿಯ ಭಾರತ್ ಮಂಟಪಂನಲ್ಲಿ ಜಾಗತಿಕ ಮಟ್ಟದ ‘ಇಂಡಿಯಾ ಎಐ ಇಂಪ್ಯಾಕ್ಟ್ ಸಮಿಟ್’ ಎಂಬ ಬೃಹತ್ ಜಾಗತಿಕ ಶೃಂಗಸಭೆ ನಡೆಯಿತು ಮತ್ತು ವಿವಿಧ ದೇಶಗಳ ಪ್ರತಿನಿಧಿಗಳು, ಕಂಪನಿಗಳು ಅದರಲ್ಲಿ ಪಾಲ್ಗೊಂಡಿದ್ದವು.

ಎಐ ಭವಿಷ್ಯ ಹಾಗೂ ಭಾರತದ ಪಾಲ್ಗೊಳ್ಳುವಿಕೆ ದೃಷ್ಟಿಯಿಂದ ಇದು ಮಹತ್ವದ ಸಮ್ಮೇಳನವಾಗಿತ್ತು. ಆದರೆ, ರಾಹುಲ್ ಗಾಂಧಿಯವರ ಕಾಂಗ್ರೆಸ್ ಮಾಡಿದ್ದೇನು? ‘ಪ್ರಧಾನಿ ನರೇಂದ್ರ ಮೋದಿ ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಂಡು ದೇಶವನ್ನು ಮಾರಾಟ ಮಾಡಿದ್ದಾರೆ ಮತ್ತು ಎಪ್‌ಸ್ಟೀನ್ ಫೈಲ್‌ಗಳಿಗೆ ಉತ್ತರ ನೀಡಿ’ ಎಂದು ಯುವ ಕಾಂಗ್ರೆಸ್‌ನ ಕೆಲ ಅರೆಬೆಂದ ಯುವಕರನ್ನು ಸಮ್ಮೇಳನಕ್ಕೆ ಕಳುಹಿಸಿ, ಕೋಲಾಹಲ ಎಬ್ಬಿಸಿ ದರು. ಈ ಯುವಕರು ಅರೆಬೆತ್ತಲಾಗಿ ಜಾಗತಿಕ ಸಮಾವೇಶಕ್ಕೆ ಕಪ್ಪು ಚುಕ್ಕೆ ತಂದಿಟ್ಟರು.

ಅರೆಬೆತ್ತಲೆ ವೀರರು ಪ್ರತಿಭಟನೆ ಮಾಡಿದ್ದು ಸೂಚನೆ ಮೇರೆಗೆ. ಅದೇ ಕಾರಣಕ್ಕೆ ಯುವಕರು ಶಾಂತಿಯುತ ಪ್ರತಿಭಟನೆ ಮಾಡುತ್ತಿದ್ದರು ಎಂದು ರಾಹುಲ್ ಸಮರ್ಥಿಸಿದರು. ಅಷ್ಟಕ್ಕೂ ಎಐ ಜಾಗತಿಕ ಸಮಾವೇಶಕ್ಕೂ ಇಂಡೋ-ಅಮೆರಿಕ ವ್ಯಾಪಾರ ಒಪ್ಪಂದಕ್ಕೂ ಯಾವುದೇ ಸಂಬಂಧ ಇರಲಿಲ್ಲ. ಆದರೆ, ಕಾಂಗ್ರೆಸ್ ಪಕ್ಷ ಮತ್ತು ರಾಹುಲ್ ಗಾಂಧಿ ತಮ್ಮ ಬೌದ್ಧಿಕ ದಿವಾಳಿತನ ಪ್ರದರ್ಶಿಸಿ, ದೇಶದ ಮಾನ ಹರಾಜು ಹಾಕಲು ಈ ವೇದಿಕೆಯನ್ನು ಬಳಸಿ ಕೊಂಡರು.

ವಿದೇಶಗಳಿಗೆ ತೆರಳಿ ಅಲ್ಲಿನ ಜನಪ್ರತಿನಿಧಿಗಳು, ಯುವಕರ ಮುಂದೆ ಭಾರತದ ಆಡಳಿತ ನೀತಿ, ಕ್ರಮಗಳ ಬಗ್ಗೆ ಋಣಾತ್ಮಕವಾಗಿ ಮಾತನಾಡುವ ಚಾಳಿ ಹೊಂದಿರುವ ರಾಹುಲ್ ಗಾಂಧಿ, ಈ ಸಲ ಭಾರತದ ದೇಶದ ಮಾನ ಕಳೆಯುವ ಕೆಲಸ ಮಾಡಿದ್ದಾರೆ. ಈ ಬಗ್ಗೆ ಅವರಿಗೆ ಯಾವುದೇ ಪಶ್ಚಾತ್ತಾಪ ವಿದ್ದಂತಿಲ್ಲ.

ಎಐ ಜಾಗತಿಕ ಸಮ್ಮೇಳನದಲ್ಲಿ ಪ್ರತಿಭಟನೆ ಮಾಡಬಾರದಿತ್ತು ಎಂದು ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ಕಾಂಗ್ರೆಸ್‌ನಿಂದ ಅಂತರ ಕಾಯ್ದುಕೊಂಡರು. ಹಿರಿಯ ರಾಜಕಾರಣಿ ಮಾರ್ಗರೇಟ್ ಆಳ್ವ ಕೂಡ ಕಾಂಗ್ರೆಸ್ ಯುವಕರ ಕ್ರಮಕ್ಕೆ ಕಿಡಿಕಾರಿ ದರು.

ರಾಜಕೀಯ ಎದುರಾಳಿಗಳನ್ನು ರಾಜಕೀಯವಾಗಿಯೇ ಎದುರಿಸಬೇಕು ಮತ್ತು ಬಗ್ಗು ಬಡಿಯಬೇಕು. ಆದರೆ ಅದು ರಾಹುಲ್‌ಗೆ ಸಾಧ್ಯವಾಗುತ್ತಿಲ್ಲ. ಅವರಿಗೆ ಚುನಾವಣೆಗಳನ್ನು ಗೆಲ್ಲಲಾಗುತ್ತಿಲ್ಲ ಮತ್ತು ಆ ಹತಾಶೆ ಮಡುಗಟ್ಟಿದೆ. ತಮ್ಮ ಸೋಲಿಗೆ ಚುನಾವಣಾ ಆಯೋಗ ವೇ ಕಾರಣ ಎಂದು ಆಯೋಗದ ಮೇಲೆ ಗೂಬೆ ಕೂರಿಸುತ್ತಾ, ತಮ್ಮ ಹಾಗೂ ಪಕ್ಷದ ನ್ಯೂನತೆಗಳನ್ನು ಬದಿಗೆ ಸರಿಸುತ್ತಿರುವ ರಾಹುಲ್‌ಗೆ, ನಾಗರಿಕ ಸಮಾಜಕ್ಕೆ ಹಿತವೆನಿಸದ ರೀತಿ ವರ್ತಿಸಿದರೆ, ಜನ ನಮ್ಮನ್ನು ಮತ್ತಷ್ಟು ದೂರ ಸರಿಸುತ್ತಾರೆ ಎಂಬ ಸಾಮಾನ್ಯ ಜ್ಞಾನವೂ ಇದ್ದಂತಿಲ್ಲ.

ಹಾಗಿದ್ದರೆ, ಈ ರಾಹುಲ್ ಗಾಂಧಿಯವರಿಗೆ ಸಲಹೆ ನೀಡುವವರು ಎಂಥವರಿರಬಹುದು? ಚುನಾವಣೆ ಸವಾಲುಗಳನ್ನು ಎದುರಿಸಲಾಗದ ವ್ಯಕ್ತಿಗಳೇ ರಾಹುಲ್ ಗಾಂಧಿಯವರ ಸುತ್ತ ಕಾಣಸಿಗುತ್ತಾರೆ.

ಅಂಥವರಿಂದ ಜನರ ನಾಡಿಮಿಡಿತ ಅರ್ಥ ಮಾಡಿಕೊಳ್ಳಲು ಸಾಧ್ಯವಿದೆಯೇ? ಪ್ರತಿ ವಿಷಯದಲ್ಲೂ ಪ್ರಧಾನಿ ಮೋದಿಯವರನ್ನು ಎಳೆದು ತರುತ್ತಿರುವ ರಾಹುಲ್ ಗಾಂಧಿ ಯವರ ಮಾತುಗಳನ್ನು ಜನರು ಗಂಭೀರವಾಗಿ ಸ್ವೀಕರಿಸಿದ್ದರೆ ಬಿಜೆಪಿ ಎಲ್ಲಾ ಚುನಾವಣೆ ಗಳಲ್ಲಿ ಸೋಲಬೇಕಿತ್ತು. ಆದರೆ, ರಾಹುಲ್ ಗಾಂಧಿಯವರ ಮಾತುಗಳಿಗೆ ಜನರು ಮನ್ನಣೆ ನೀಡುತ್ತಿಲ್ಲ.

ಬಹುಶಃ ಇದು ಕೂಡ ಹತಾಶೆಗೆ ಕಾರಣವಾಗಿ, ಮಂಗಾಟದಂಥ ವರ್ತನೆಗಳನ್ನು ರಾಹುಲ್ ಸಮರ್ಥಿಸುತ್ತಿರಬಹುದು. ಕೆಲ ದಿನಗಳ ಹಿಂದೆ ನಡೆದ ಬಜೆಟ್ ಅಧಿವೇಶನದಲ್ಲಿ ಲೋಕ ಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ಕಾಂಗ್ರೆಸ್ ಪಕ್ಷವು ಅವಿಶ್ವಾಸ ನಿರ್ಣಯವನ್ನು ಮಂಡಿಸಿತು.

ಇದರಿಂದ ಬೇಸರಗೊಂಡ ಸ್ಪೀಕರ್, ‘ಈ ವಿಷಯ ಇತ್ಯರ್ಥವಾಗುವ ತನಕ ಸ್ಪೀಕರ್ ಕುರ್ಚಿ ಯಲ್ಲಿ ಕೂರುವುದಿಲ್ಲ’ ಎಂದು ತೀರ್ಮಾನಿಸಿದರು. ಅವಿಶ್ವಾಸ ನಿರ್ಣಯ ಸೋಲು ಕಾಣಲಿದೆ ಎಂಬುದು ಗೊತ್ತಿದ್ದರೂ, ಸ್ಪೀಕರ್‌ರನ್ನು ಇಕ್ಕಟ್ಟಿನಲ್ಲಿ ಸಿಲುಕಿಸಬೇಕೆಂದೇ ಕಾಂಗ್ರೆಸ್ಸಿಗರು ಈ ತೀರ್ಮಾನ ಮಾಡಿದ್ದರು.

ಪ್ರಧಾನಿ ಮೋದಿಯವರ ಭಾಷಣದ ದಿನದಂದು ಅವರನ್ನು ಮಹಿಳಾ ಸಂಸದರು ಸುತ್ತು ವರಿಯುವ ಯೋಜನೆ ಹಾಕಿಕೊಂಡಿದ್ದಾರೆ ಎಂಬ ಪೂರ್ವ ಮಾಹಿತಿ ಸಿಕ್ಕಿದ್ದರಿಂದಲೇ ಒಂದು ದಿನದ ನಂತರ ರಾಜ್ಯಸಭೆಯಲ್ಲಿ ಪಿಎಂ ಮೋದಿ ಭಾಷಣ ಮಾಡಿದ್ದರು. ಪ್ರಧಾನಿ ಯನ್ನು ಸುತ್ತುವರಿಯಬೇಕು ಎನ್ನುವುದು ರಾಹುಲ್ ಸೂಚನೆಯಾಗಿತ್ತು.

ಲೋಕಸಭೆ ವಿಪಕ್ಷ ನಾಯಕನಾದ ಮೇಲೆ ಅವರ ಕಣ್ಗಾವಲಿನ ಇಂಥದ್ದೇ ನಡೆಯ ಬೇಕಲ್ಲವೇ? ಬಜೆಟ್ ಅಧಿವೇಶನದಲ್ಲಿ ಅಜೆಂಡಾದಲ್ಲಿರುವ ವಿಷಯ ಮಾತನಾಡುವ ಬದಲು ನಿವೃತ್ತ ಸೇನಾ ಮುಖ್ಯಸ್ಥ ನರಾವಣೆ ಅವರು ಬರೆದ ಪುಸ್ತಕದಲ್ಲಿನ ಕೆಲ ಅಂಶಗಳ ಬಗ್ಗೆ ಕೇಂದ್ರ ಸರಕಾರ ಉತ್ತರ ನೀಡಬೇಕು ಅಂತ ಹಠ ಹಿಡಿದರೆ ಯಾವ ಸ್ಪೀಕರ್ ತಾನೇ ಒಪ್ಪಿಯಾರು? ಅದೂ ಅಲ್ಲದೆ, ಪ್ರಕಟವಾಗದ ಪುಸ್ತಕವು ಚರ್ಚೆಯ ವಿಚಾರವಾಗಲು ಸಾಧ್ಯವೇ ಇಲ್ಲ. ಈ ಬಗ್ಗೆ ಚರ್ಚಿಸಬೇಕು ಎನ್ನುವ ಹಕ್ಕು ರಾಹುಲ್ ಗಾಂಧಿಯವರಿಗೆ ಖಂಡಿತ ಇದೆ.

ಆದರೆ, ಅದಕ್ಕೆ ಸಂಸತ್ ವೇದಿಕೆಯಾಗಿರಲಿಲ್ಲ. ಪತ್ರಿಕಾಗೋಷ್ಠಿ ಮಾಡಿ ಸ್ಪಷ್ಟನೆ ಕೇಳಬಹು ದಿತ್ತು. ರಾಹುಲರ ಉದ್ದೇಶ ಬೇರೆಯೇ ಇತ್ತು. ಪಿಎಂ ಮೋದಿಯವರನ್ನು ಗುರಿ ಮಾಡ ಲೆಂದು ಅವರು ಸಂಸತ್ ಕಲಾಪಗಳನ್ನು ಬಲಿಗೊಡಲು ಮುಂದಾದರು. ಅಧಿವೇಶನ ನಡೆಯುತ್ತಿದ್ದಾಗ ಕಾಂಗ್ರೆಸ್ ಸಂಸದರು ಪದೇ ಪದೆ ಸದನದ ಬಾವಿಗೆ ಹೋಗಿ ಸ್ಪೀಕರ್ ಮೇಲೆ ಕಾಗದಗಳನ್ನು ಎಸೆಯುತ್ತಿದ್ದರು.

ಸದನದ ನಿಯಮಗಳನ್ನು ಪಾಲಿಸದ ಕಾರಣ ಅವರನ್ನು ಲೋಕಸಭಾ ಸ್ಪೀಕರ್ ಅಮಾನತುಗೊಳಿಸಿದರು. ಸದನದ ನಿಯಮ ಗಾಳಿಗೆ ತೂರಿ ವರ್ತಿಸಿದರೆ ಸ್ಪೀಕರ್ ಅವರು ಕ್ರಮ ಕೈಗೊಳ್ಳಬೇಕು. ಅದನ್ನೇ ಸ್ಪೀಕರ್ ಬಿರ್ಲಾ ಮಾಡಿದ್ದರು. 2024ರ ಲೋಕಸಭಾ ಚುನಾವಣೆಯ ನಂತರ, ಸಂಸತ್ತಿನ ಒಳ-ಹೊರಗೆ ಕಾಂಗ್ರೆಸ್ ಹೆಚ್ಚು ಆಕ್ರಮಣಕಾರಿಯಾಗಿದೆ.

ಈ ಹತಾಶೆ ತುಂಬಿದ ಆಕ್ರಮಣಕಾರಿತ್ವದಲ್ಲಿ ಅಹಂಕಾರ, ಹುಸಿ ನೈತಿಕತೆ ಎದ್ದು ಕಾಣು ತ್ತಿದ್ದು, ಸಂಸತ್ತಿನಲ್ಲಿ ಒಂದು ದಿನವೂ ಕಲಾಪವು ಸಹಜ ಸ್ಥಿತಿಯಲ್ಲಿ ನಡೆಯುತ್ತಿಲ್ಲ. ಸದನವು ಸುಗಮವಾಗಿ ನಡೆಯುವುದು ಕಾಂಗ್ರೆಸ್‌ಗೆ ಬೇಕಾಗಿಯೂ ಇಲ್ಲ. ರಾಹುಲ್ ಗಾಂಧಿ ಕೂಡ ರಾಷ್ಟ್ರಪತಿಗಳ ಭಾಷಣಕ್ಕೆ ಸಂಬಂಧಿಸಿದ ಯಾವುದೇ ವಿಷಯವನ್ನು ಪ್ರಸ್ತಾಪಿಸು ತ್ತಿಲ್ಲ.

ಸದನದಲ್ಲಿ ತಮ್ಮ ಮನಸ್ಸಿಗೆ ಯೋಗ್ಯ ಎನಿಸುವ, ಸಾಕ್ಷ್ಯಾಧಾರವಿಲ್ಲದ ವಿಚಾರಗಳನ್ನಷ್ಟೇ ಪ್ರಶ್ನಿಸಿ ಕೋಲಾಹಲ ಎಬ್ಬಿಸುತ್ತಾರೆ. ಸ್ಪೀಕರ್ ಮಧ್ಯಪ್ರವೇಶಿಸಿದಾಗ ‘ಏಕಪಕ್ಷೀಯ ನಡೆ’ ಎಂದು ಆರೋಪ ಮಾಡುತ್ತಾರೆ. ರಾಹುಲ್ ಗಾಂಧಿಯವರ ಇಂಥ ವರ್ತನೆಗಳನ್ನು ಹತ್ತಿಕ್ಕಲೆಂದೇ ಬಿಜೆಪಿ ಅವರ ಸದಸ್ಯತ್ವ ರದ್ದತಿಗೆ ನೋಟಿಸ್ ನೀಡಿದೆ.

ಮುಂದಿನ ತಿಂಗಳಲ್ಲಿ ಪಂಚ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ತಮಿಳುನಾಡಿನ ಮೈತ್ರಿ ಸರಕಾರದ ಪಾಲುದಾರ ಪಕ್ಷವಾಗಿದೆ ಕಾಂಗ್ರೆಸ್. ಇನ್ನು, ಕರ್ನಾಟಕ, ತೆಲಂಗಾಣ ಮತ್ತು ಹಿಮಾಚಲ ಪ್ರದೇಶದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್‌ಗೆ ಬೇರೆಲ್ಲೂ ಭದ್ರ ರಾಜಕೀಯ ನೆಲೆಯಿಲ್ಲ.

ರಾಹುಲ್ ಗಾಂಧಿ ಮತ್ತು ಅವರ ಬೆಂಬಲಿಗರ ಮಂಗಾಟ ನೋಡುತ್ತಿದ್ದರೆ, ಪಕ್ಷದ ಭವಿಷ್ಯಕ್ಕೆ ಮತ್ತಷ್ಟು ಮಂಕು ಕವಿಯುವಂತೆ ಕಾಣುತ್ತಿದೆ. ಪ್ರಧಾನಿ ಮೋದಿ ನೇತೃತ್ವದ ಸರಕಾರವನ್ನು ಪ್ರಶ್ನಿಸಲು, ಉತ್ತರ ನೀಡಿ ಆಗ್ರಹಿಸಲು ಎಷ್ಟೋ ವಿಚಾರಗಳಿವೆ. ಆದರೆ, ಅಂಥ ಅವಕಾಶ ಗಳನ್ನು ನಾಜೂಕಿನಿಂದ ಬಳಸಿಕೊಳ್ಳಲು ರಾಹುಲರಿಗೆ ಸಾಧ್ಯವಾಗುತ್ತಿಲ್ಲ.

ಬದಲಿಗೆ, ರಾಹುಲರ ವರ್ತನೆಗಳು ಅವರ ಪಕ್ಷಕ್ಕೇ ತಿರುಗುಬಾಣವಾಗುತ್ತಿವೆ. 2014ರಿಂದ ಹಿಡಿದು ಇಲ್ಲಿಯವರೆಗಿನ ಬಿಜೆಪಿಯ ವಿವಿಧ ಚುನಾವಣಾ ಗೆಲುವುಗಳ ಹಿಂದೆ TINA factor (There is no alternative) ಸಾಕಷ್ಟು ಕೆಲಸ ಮಾಡಿದೆ. ಪರ್ಯಾಯ ನಾಯಕತ್ವ ಹಾಗೂ ಪ್ರಬಲ-ಪ್ರಬುದ್ಧ ವಿಪಕ್ಷವಿಲ್ಲದಿರುವುದು ಬಿಜೆಪಿಗೆ ವರದಾನ. ಆದರೆ, ಅದು ದೇಶಕ್ಕೆ ಮಾರಕ.

(ಲೇಖಕರು ಹಿರಿಯ ಪತ್ರಕರ್ತರು)