Dr Sadhanashree Column: ನಿಧಾನವೇ ಆಯುರ್ವೇದದ ವಿಧಾನ ?
ಆಯುರ್ವೇದ ವೈದ್ಯರಿಗೆ ವೈರಸ್ ಬ್ಯಾಕ್ಟೀರಿಯಾದ ಕಾಯಿಲೆ ಗಳನ್ನು ಗುಣಪಡಿಸುವುದಕ್ಕೆ ಬರುವುದಿಲ್ಲ. ಆಯುರ್ವೇದ ಔಷಧಿ ತೆಗೋಬೇಕಾದ್ರೆ ಮಾಂಸವನ್ನು ಬಿಡಬೇಕು.
Ashok Nayak
Jan 4, 2025 7:14 AM
ಸ್ವಾಸ್ಥ್ಯವೆಂಬ ಸ್ವಾತಂತ್ರ್ಯ
ಡಾ.ಸಾಧನಶ್ರೀ
ಆಯುರ್ವೇದವು ನಮ್ಮ ಭಾರತ ಭೂಮಿಯ ವಿಶಿಷ್ಟವಾದ ವಿಜ್ಞಾನವೆಂದು ನಾವು ಎದೆ ಉಬ್ಬಿಸಿಕೊಳ್ಳುವುದಕ್ಕಿಂತಅದರ ಬಗ್ಗೆ ಮೂಗು ಮುರಿಯುವುದೇ ಜಾಸ್ತಿ. ಇವತ್ತಿಗೂ ಆಯುರ್ವೇದದ ಬಗ್ಗೆ ಜನರಲ್ಲಿ ಹಲವಾರು ತಪ್ಪು ಕಲ್ಪನೆಗಳಿವೆ.
ಉದಾಹರಣೆಗೆ: ಆಯುರ್ವೇದ ಅಪ್ಡೇಟ್ ಆಗಿಲ್ಲ, ಆಯುರ್ವೇದ ವೈದ್ಯರಿಗೆ ವೈರಸ್ ಬ್ಯಾಕ್ಟೀರಿಯಾದ ಕಾಯಿಲೆ ಗಳನ್ನು ಗುಣಪಡಿಸುವುದಕ್ಕೆ ಬರುವುದಿಲ್ಲ. ಆಯುರ್ವೇದ ಔಷಧಿ ತೆಗೋಬೇಕಾದ್ರೆ ಮಾಂಸವನ್ನು ಬಿಡಬೇಕು.ಉಷ್ಣ ಮತ್ತು ಶೀತಗಳಿಂದ ಆಗುವ ಕಾಯಿಲೆಗಳಿಗೆ ಮಾತ್ರ ಆಯುರ್ವೇದದ ಚಿಕಿತ್ಸೆ ಲಭ್ಯ. ಆಯುರ್ವೇದ ಅಂದರೆ ಬರೀ ಬಾಡಿ ಮಸಾಜ. ಆಯುರ್ವೇದ ಔಷಧಿಗಳು ಕಹಿ. ಆಯುರ್ವೇದ ತುಂಬಾ ಹೀಟ್ ಮಾಡುತ್ತೆ. ಆಯುರ್ವೇದಔಷಽಗಳಲ್ಲಿ ಲೆಡ್- ಮರ್ಕ್ಯುರಿ ಇರೋದ್ರಿಂದ ಅದು ವಿಷ. ಆಯುರ್ವೇದ ಅಂದ್ರೆ ಮನೆ ಮದ್ದು.
ಆಯುರ್ವೇದ ಚಿಕಿತ್ಸೆ ಅಂದರೆ ಅಜ್ಜಿ ಹೇಳುವ ಅಡುಗೆ ಮನೆಯ ಚಿಕಿತ್ಸೆಗಳು. ಆಯುರ್ವೇದ ಔಷಧಿ ತೆಗೆದು ಕೊಂಡರೆ ಗ್ಯಾಂರಟಿ ಗಂಡು ಮಗು ಆಗುತ್ತೆ. ಆಯುರ್ವೇದ ವೈದ್ಯರು ಅಂದ್ರೆ ಅಳಲೇಕಾಯಿ ಪಂಡಿತರು. ವಾತ-ಪಿತ್ತ-ಕಫ ಬರಿ ಇಮ್ಯಾಜಿನೇಷನ್ ಅಷ್ಟೇ… ಇತ್ಯಾದಿ ಇತ್ಯಾದಿ … ಇವಿಷ್ಟು ಕಲ್ಪನೆಗಳು ಅಥವಾ ಅಭಿಪ್ರಾಯಗಳು ಒಂದು ಕಡೆಯಾದರೆ ಮತ್ತೊಂದು ಕಡೆ ಇರುವ ಬಹಳ ಮುಖ್ಯವಾದ ಅಭಿಪ್ರಾಯವೆಂದರೆ ಆಯುರ್ವೇದ ಔಷಧಿಗಳು ಮತ್ತು ಚಿಕಿತ್ಸೆಗಳು ಬಹಳ ನಿಧಾನ.
ಮೊನ್ನೆ ಯಾವುದೋ ಒಂದು ಮಗುವಿಗೆ ರಾತ್ರೋರಾತ್ರಿ ತೀವ್ರವಾದ ಜ್ವರ ಪ್ರಾರಂಭವಾಯಿತು. ಮಗುವಿನ ತಾಯಿ ಆಯುರ್ವೇದ ಚಿಕಿತ್ಸಾಲಯಕ್ಕೆ ಮಗುವನ್ನು ಕರೆದುಕೊಂಡು ಹೊರಟಿ ದ್ದೇನೆ ಎಂದು ಹೇಳಿದ್ದೇ ತಡ, ಪಕ್ಕದ ಮನೆಯವರು ತಕ್ಷಣ ಮಧ್ಯೆ ಬಾಯಿ ಹಾಕಿ ‘ಅಯ್ಯೋ ಆಯುರ್ವೇದಾನಾ? ಅದು ಏನಿದ್ದರೂ ಸೊಂಟ ನೋವು / ಗಂಟು ನೋವಿಗೆ ಸರಿ. ಇದಕ್ಕೆಲ್ಲ ಅಲ್ಲಮ್ಮಾ!’ ಎಂದರು. ಆ ಮಗುವಿನ ಚಿಕ್ಕಪ್ಪನೂ ಸಹ ‘ಅಯ್ಯೋ, ಇಂತಹ ಸಂದರ್ಭದಲ್ಲಿ ಯಾಕೆ ಪ್ರಯೋಗ ಮಾಡ್ತೀಯಾ? ಹಾಸ್ಪಿಟಲ್‌ಗೆ ಹೋಗೋಣ’ ಅಂತ ಹೇಳಿದ್ರು ಮಗುವಿನ ಚಿಕ್ಕಮ್ಮನಂತೂ, ‘ನೋಡಮ್ಮ, ಇದು ತಕ್ಷಣ ಚಿಕಿತ್ಸೆ ಕೊಡಿಸುವ ಸಂದರ್ಭ.
ಆಯುರ್ವೇದ ತುಂಬಾ ನಿಧಾನ, ಆಮೇಲೆ ಪ್ರಾಣಕ್ಕೆ ಏನಾದರೂ ಅಪಾಯವಾದರೆ ನೀನೇ ಹೊಣೆ’ ಎಂದು ಹೆದರಿಸಿ ಯೇ ಬಿಟ್ಟರು. ಹಾಗಾಗಿ ಆ ಮಗುವಿನ ತಾಯಿ ದೂರವಾಣಿಯಲ್ಲಿಯೇ ಮಗುವಿನ ಜ್ವರದ ತಾಪವನ್ನು ಇಳಿಸುವ ಕೆಲವು ಪರಿಹಾರಗಳನ್ನು ಕೇಳಿಕೊಂಡರು. ಅದನ್ನು ಪಾಲಿಸಿದ ಮೇಲೆ ಮಗುವಿನ ಜ್ವರವು ವೇಗವಾಗಿ ಇಳಿದಿದ್ದನ್ನು ಕಂಡು ಎಲ್ಲರೂ ಹುಬ್ಬೇರಿಸಿದರು- ಆಯುರ್ವೇದದಲ್ಲಿ ಇಷ್ಟೊಂದು ಬೇಗ ಗುಣವಾಗುತ್ತಾ ಎಂದು. ಆಗ ಯಾರೋ ಹಿಂದೆ ಹೇಳಿದ್ದು ನೆನಪಾಯಿತು. ಆಯುರ್ವೇದ ಚಿಕಿತ್ಸೆ ತುಂಬಾ ನಿಧಾನವಾಗಿ ಕೆಲಸ ಮಾಡುತ್ತಲ್ವಾ ಡಾಕ್ಟ್ರೇ. ಎಂದು ಹೇಳಿದರು. ಆದರೆ, ಅವರು ತಂದಿದ್ದ ದಪ್ಪನೆಯ ಮೆಡಿಕಲ್ ಫೈಲ್ ಅನ್ನು ನೋಡುತ್ತಾ ಎನಿಸಿದ್ದು ಆಯುರ್ವೇದಕ್ಕೆ ಬರುವವರು ತುಂಬಾ ನಿಧಾನವೇ ಹೊರತು ಆಯುರ್ವೇದವಲ್ಲ ಎಂದು.
ಬೇರೆ ಎಲ್ಲ ವೈದ್ಯಕೀಯ ಪದ್ಧತಿಗಳನ್ನು ಪ್ರಯೋಗ ಮಾಡಿ, ಬೇರೆ ಬೇರೆ ಕಡೆ ಸುತ್ತಾಡಿ, ಎಲ್ಲ ರೀತಿಯ ಚಿಕಿತ್ಸೆಗಳನ್ನು ತೆಗೆದುಕೊಂಡು, ಸಿಗುವ ಎಲ್ಲ ಮಾತ್ರೆಗಳನ್ನು ನುಂಗಿ, ಪ್ರಾರಂಭಿಕ ಕಾಯಿಲೆಯು ಯಾವ ಯಾವ ಸ್ವರೂಪವನ್ನೋ ಪಡೆದುಕೊಂಡು ತೊಂದರೆ ಕಡಿಮೆಯಾಗದೆ ಇದ್ದಾಗ ನೆನಪಾಗುವುದು ಆಯುರ್ವೇದ! ಆದರೆ, ಎಲ್ಲರೂ ಹೇಳು ವುದು ಮಾತ್ರ ಆಯುರ್ವೇದ ನಿಧಾನವೆಂದು. ಯಾವುದೇ ರೋಗವನ್ನು ಮೊಳಕೆಯ ಸಂಪೂರ್ಣವಾಗಿ ಗುಣಪಡಿಸು ವುದು ಬಹಳ ಸುಲಭ ಮತ್ತು ಶೀಘ್ರ! ಆದರೆ ಅದೇ ವ್ಯಾಧಿಯು ಹೆಮ್ಮರವಾದಾಗ ಅದನ್ನು ಮತ್ತೆ ಬುಡ ಸಮೇತ ಕಿತ್ತೊಗೆಯಲು ಸಾಕಷ್ಟು ಸಮಯವೇ ಬೇಕು.
ಆದರೆ ಆಯುರ್ವೇದ ನಿಜವಾಗಿಯೂ ನಿಧಾನವೇ ಎಂದು ನೋಡೋಣ. ಸ್ನೇಹಿತರೇ, ರೋಗಿಗಳು ಮತ್ತು ಅವರ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಪ್ರಯತ್ನಿಸುತ್ತಿರುವ ಪ್ರತಿಯೊಂದು ವೈದ್ಯಕೀಯ ವ್ಯವಸ್ಥೆಗೂ ಆಯುರ್ವೇದವು ಅತ್ಯಂತ ಸುಂದರವಾದ ಮಾರ್ಗಸೂಚಿಯನ್ನು ನೀಡುತ್ತದೆ. ಅದು ಹೇಳುತ್ತದೆ, ಚಿಕಿತ್ಸೆಯು (ಔಷಧಿಗಳ ರೂಪದಲ್ಲಿರಬಹುದು, ಶಸ್ತ್ರಚಿಕಿತ್ಸೆ, ಶಮನ ಚಿಕಿತ್ಸೆಗಳು, ಆಹಾರಕ್ರಮ, ಸಮಾಲೋಚನೆ ಇತ್ಯಾದಿ) ಒಂದು ರೋಗವನ್ನು ಗುಣಪಡಿಸುವಾಗ ಇನ್ನೊಂದು ರೋಗವನ್ನು ಪ್ರಚೋದಿಸಿದರೆ ಅದು ಸರಿಯಾದ ಚಿಕಿತ್ಸೆಯಲ್ಲ; ಬದಲಿಗೆ, ಸರಿಯಾದ ಚಿಕಿತ್ಸೆ ಅಥವಾ ‘ಶುದ್ಧ ಚಿಕಿತ್ಸಾ’ ಎಂದರೆ, ಒಂದು ರೋಗವನ್ನು ಶಮನ ಮಾಡುವಾಗ ಮತ್ತೊಂದು ಕಾಯಿಲೆಯನ್ನು ಪ್ರಚೋದಿಸದೆ ಸಾಮ್ಯತೆಯನ್ನು ನೀಡುವಂತಹದ್ದು.
ಇದು ಪ್ರತಿ ಚಿಕಿತ್ಸೆಯ ಗುರಿಯಾಗಿರಬೇಕು. ಅಂತೆಯೇ, ತಪ್ಪು ಚಿಕಿತ್ಸೆಯ ಪರಿಣಾಮದಿಂದ ಉದ್ಭವಿಸುವ ರೋಗ ವನ್ನು ಗುಣಪಡಿಸಲು ಕಷ್ಟಸಾಧ್ಯ! ಇದು ಎಲ್ಲ ವೈದ್ಯರಿಗೂ ಆಯುರ್ವೇದ ನೀಡುವ ಗಂಭೀರ ಸೂಚನೆ!ಈ ತತ್ತ್ವಶಾಸ್ತ್ರವು ಚಿಕಿತ್ಸಾಲಯದಲ್ಲಿ ಕಂಡ ಕೆಲವು ಉದಾಹರಣೆಗಳನ್ನು ನೆನಪಿಸುತ್ತದೆ:
ರೋಗಿ 1 - ನೆಗಡಿ ಪ್ರಾರಂಭವಾಗುತ್ತದೆ - ಔಷಧಿಯ ಕೋರ್ಸ್ ಶುರು - ಶೀತವು ಜ್ವರವಾಗಿ ಬೆಳೆಯುತ್ತದೆ - ಅದಕ್ಕೆ ಮತ್ತೊಂದು ‘- ಮೆಡಿಸಿನ್’ ಸೇವಿಸಿದಾಗ - ಜ್ವರವು ಒಣ ಕೆಮ್ಮಾಗಿ ಬದಲಾಗುತ್ತದೆ, ಅದು ವಾರಗಟ್ಟಲೆ ಇರುತ್ತದೆ, ಜೊತೆಗೆ ಸಾಕಷ್ಟು ದೌರ್ಬಲ್ಯವೂ ಸೇರಿಕೊಳ್ಳುತ್ತದೆ. ಯಾವ ಔಷಧಕ್ಕೂ ಬಗ್ಗದಿದ್ದಾಗ ಅವಳು ಆಯುರ್ವೇದ ವೈದ್ಯರನ್ನು ಸಂಪರ್ಕಿಸುತ್ತಾಳೆ.
ರೋಗಿ 2 - ಉಸಿರಾಟದ ತೊಂದರೆ / ಶ್ವಾಸದ ಸಮಸ್ಯೆ - ಔಷಧಿಗಳ ದೀರ್ಘ ಕೋರ್ಸ್ ಅನ್ನು ನೀಡಲಾಯಿತು - ಸ್ವಲ್ಪ ಸಮಯದ ನಂತರ ಶ್ವಾಸ ಕಡಿಮೆಯಾಯಿತಾದರೂ, ದಿನ ಕಳೆದಂತೆ ಚರ್ಮದ ತೊಂದರೆ ಪ್ರಾರಂಭವಾಗಿ ಅದು ಎಕ್ಜೀಮಾ ಕಡೆ ತಿರುಗಿತು ಆಗ ಸಹಾಯಕ್ಕಾಗಿ ಆಯುರ್ವೇದ ಚಿಕಿತ್ಸೆಯನ್ನು ಪಡೆಯಲು ನಿರ್ಧರಿಸಿ ಕ್ಲಿನಿಕ್ ಗೆ ಬಂದರು.
ರೋಗಿ 3 - ಕೆಟ್ಟ ಜೀರ್ಣಕ್ರಿಯೆ ಮತ್ತು ಹೊಟ್ಟೆ ನೋವು ಸಮಸ್ಯೆ ಜಾಸ್ತಿ ಆಯಿತು - ‘ವೇಗದ ಪರಿಹಾರ’ ಬೇಕೆಂದು - ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಂಡರು - ನಂತರ ವಿಪರೀತ ಮುಟ್ಟಿನ ನೋವು ಪ್ರಾರಂಭವಾಯಿತು
ಮತ್ತೆ ತ್ವರಿತ ಪರಿಹಾರವನ್ನು ತೆಗೆದುಕೊಂಡರು (ಪೇನ್ ಕಿಲರ್) - ಸ್ವಲ್ಪ ಸಮಯದ ನಂತರ ಅಸಹನೀಯ ತಲೆ ನೋವು ಕಾಣಿಸಿಕೊಂಡಿತು - ನೋವಿನ ಗುಳಿಗೆ ಅವಳ ನೋವನ್ನು ‘ವೇಗವಾಗಿ’ ಕೊಂದಿತು- ಆದರೆ ದಿನ ಕಳೆದಂತೆ ಸ್ತನಗಳಲ್ಲಿ ತೀವ್ರವಾದ ನೋವು ಕಾಣಿಸಿಕೊಂಡಿತು! ಸುಮಾರು ಒಂದು ವರ್ಷಗಳ ಕಾಲ ನಡೆದ ತನ್ನ ನೋವಿನ ಕಥೆಯನ್ನು ಕೊನೆಗೊಳಿಸಲು ಆಯುರ್ವೇದಕ್ಕೆ ಬಂದರು!
ಮೇಲಿನ ಎಲ್ಲ ಪ್ರಕರಣಗಳಲ್ಲಿ ನಾನು ಕಂಡ ಸಾಮಾನ್ಯ ವಿಷಯವೆಂದರೆ ಕಾಯಿಲೆ ಬಂದಾಗ Quick Relief ಬಯಸುವುದು ಮತ್ತು ಆಯುರ್ವೇದವನ್ನು ‘ನಿಧಾನ’ ಎಂದು ಭಾವಿಸಲು ಆಯುರ್ವೇದ ಚಿಕಿತ್ಸೆಗೆ ಬರದಿರುವುದು.ವೇಗವಾಗಿ ಶಮನ ಪಡೆಯಲು ಸೇವಿಸಿದ ಗುಳಿಗೆಗಳಿಂದ ನಿಜವಾಗಿ ಆಗಿದ್ದಾದರೂ ಏನು? ಹೌದು! ಆ ಗುಳಿಗೆಗಳಿಂದ ಆರಂಭಿಕ ಸಮಸ್ಯೆಯ ತೀವ್ರತೆಯು ತಕ್ಷಣವೇ ಕಡಿಮೆ ಆದರೂ ಸಹ ಅದು ಬೇರೆ ಬೇರೆ ಕಾಯಿಲೆಗಳ ಸ್ವರೂಪ ಪಡೆದು ಅವುಗಳಿಂದ ನರಳುವ ಅವಧಿಯನ್ನೇನು ಕಡಿಮೆ ಮಾಡಲಿಲ್ಲ. ಹಾಗಾದರೆ ಸ್ನೇಹಿತರೆ ನೀವೇ ಯೋಚನೆ ಮಾಡಿ: ನೀವು ಸೇವಿಸುವ, ಬಹಳ ಪ್ರಿಯವಾದ ‘- ಮೆಡಿಸಿನ್’ ನಿಜವಾಗಿಯೂ ಸಹಾಯ ಮಾಡುತ್ತಿದೆಯೇ? ಬನ್ನಿ ಈ‘ವೇಗ’ ಮತ್ತು ‘ನಿಧಾನ’ ಚಿಕಿತ್ಸೆಗಳ ಬಗ್ಗೆ ಸ್ವಲ್ಪ ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡೋಣ!
ಬೇರೆ ಯಾವುದೋ ವೇಗವಾಗಿ ಕೆಲಸ ಮಾಡುವ ವಸ್ತುವನ್ನು ಆಧಾರವಾಗಿ ಇಟ್ಟುಕೊಂಡಾಗ ಮಾತ್ರ ಮತ್ತೊಂದು ವಸ್ತುವನ್ನು ನಿಧಾನ ಎಂದು ಪರಿಗಣಿಸಲು ಸಾಧ್ಯ. ಇದೇ ತತ್ವವನ್ನು ನಾವು ವೈದ್ಯಕೀಯ ಪದ್ಧತಿಗಳಿಗೂ ಅನ್ವಯಿ ಸುವುದಾದರೆ ಆಯುರ್ವೇದವನ್ನು ‘ನಿಧಾನ’ ಎಂದು ಕರೆಯುವಂತೆ ಮಾಡುವ ಆ ‘- ವರ್ಕಿಂಗ್’ ಔಷಧಿಗಳಸಮಾಚಾರವೇನು?ಆ ‘- ಮೆಡಿಸಿನ್’ ವಾಸ್ತವವಾಗಿ ಏನು ಮಾಡುತ್ತದೆ? ? Immediate Pain Relief ಎಂದು ಬೇರೆ ಬೇರೆ ರಿಸರ್ಚಗಳು ಮತ್ತು ಆಡ್ ಗಳು ಸಾರುವಂತೆ, ಪೇನ್ ಕಿಲರ್ಗಳಿಗೆ ನಿಜವಾಗಿಯೂ ಸಮಸ್ಯೆಯ ಆಳಕ್ಕೆ ಹೋಗಲು ಸಮಯವೇ ಇಲ್ಲ.
ಏಕೆಂದರೆ ಇದು ನಿಮಿಷಗಳಲ್ಲಿ ನಿಮಗೆ ಫಲಿತಾಂಶಗಳನ್ನು ನೀಡಬೇಕಾಗುತ್ತದೆ! ಆದ್ದರಿಂದ ಅದು ಮತ್ತೊಂದು ಸುಲಭ ದಾರಿಯನ್ನು ಹುಡುಕಿಕೊಳ್ಳುತ್ತದೆ . ಅದೇನಪ್ಪ ಅಂದರೆ , ರೋಗಲಕ್ಷಣಗಳಿಂದ ನಿಮ್ಮ ಅರಿವಿನಸಂಪರ್ಕವನ್ನು ಕಡಿತಗೊಳಿಸುವುದು! ಯಾವ ನರಗಳು ನೋವನ್ನು ನಿಮ್ಮ ಗಮನಕ್ಕೆ ತರುತ್ತದೆಯೋ ಆ ನರಗಳನ್ನು block ಮಾಡುವುದು. ಈ ಕ್ರಿಯೆಯು ಎಷ್ಟು ಗಾಢವಾಗಿ ನಡೆಯುತ್ತದೆ ಎಂದರೆ ರೋಗಲಕ್ಷಣಗಳು ಮತ್ತು ಮೂಲ ಸಮಸ್ಯೆಯು ದೇಹದಲ್ಲಿ ಗಟ್ಟಿಯಾಗಿ ನೆಲೆಯೂರಿದ್ದರೂ ಸಹ ನೀವು ಮಾತ್ರ ಅವುಗಳನ್ನು ಅನುಭವಿಸು ವುದೇ ಇಲ್ಲ. ಸ್ನೇಹಿತರೇ , ನೋವಿನ ಗುಳಿಗೆಗಳಿಗೆ ಇದಿಷ್ಟೇ ಕೆಲಸವೇ ಹೊರತು, ನೀವು ರೋಗದಿಂದ ಚೇತರಿಸಿ ಕೊಳ್ಳಲು ಅದು ಯಾವ ರೀತಿಯೂ ಸಹಾಯ ಮಾಡುತ್ತಿಲ್ಲ. ಇದು ಸ್ಪಷ್ಟವಾಗಿ ಸಮಸ್ಯೆಯ ಸ್ವರೂಪವನ್ನು ಮಾತ್ರ ಬದಲಾಯಿಸುತ್ತಿದೆಯೇ ಹೊರತು ನಿಮ್ಮನ್ನು ’ಗುಣಪಡಿಸುತ್ತಿಲ್ಲ’ !
ಇನ್ನು, ನಿಧಾನ ಎಂದು ಕರೆಯಲ್ಪಡುವ ಆಯುರ್ವೇದ ಔಷಧವು ಏನು ಮಾಡುತ್ತದೆ ಎಂದು ನೋಡೋಣ. ಮೊದಲನೆಯದಾಗಿ, ಅದು ನಿಮ್ಮ ಸಮಸ್ಯೆಯ ಮೂಲಕ್ಕೆ ಹೋಗಲು ಸ್ವಲ್ಪ ಸಮಯವನ್ನು ತೆಗೆದುಕೊಳ್ಳುತ್ತದೆ. ಆದರೆ ನೆನಪಿಡಿ, Diagnosis ಸರಿಯಾಗಿ ಚಿಕಿತ್ಸೆ ಪ್ರಾರಂಭವಾದಾಗ ಇದು ಕ್ಷಣಾರ್ಧದಲ್ಲಿಯೂ ಸಂಭವಿಸಬಹುದು. ಎಷ್ಟೋ ರೋಗಿಗಳಲ್ಲಿ ಕೆಲವೇ ಗಂಟೆಗಳೊಳಗೆ ಜ್ವರದ ತಾಪವನ್ನು ಇಳಿಸಿದ್ದುಂಟು, ಸುಟ್ಟ ಗಾಯಗಳ ವೇದನೆ ಯನ್ನು ಶಮನ ಮಾಡಿದ್ದುಂಟು, ತೀವ್ರವಾದ ನೋವನ್ನು ಕಡಿಮೆಮಾಡಿದ್ದುಂಟು. ನಂತರ, ಆ ನಿಧಾನ ಔಷಧವು ದೇಹ ದಲ್ಲಿನ ಬೇರೇ ಬೇರೇ ರೀತಿಯ ಅಸಮತೋಲನವನ್ನು ಸಮತೋಲನಗೊಳಿಸಲು ಪ್ರಯತ್ನಿಸುತ್ತದೆ.
ಜೊತೆಗೆ, ಅಸಮತೋಲನಕ್ಕೆ ಕಾರಣವಾದ ಪರಿಸರವನ್ನು ಸರಿದೂಗಿಸುತ್ತದೆ. ವ್ಯಾಧಿ ಉತ್ಪತ್ತಿಯ ಕಾರಣವನ್ನು ನಿವಾರಿಸುವ ಮೂಲಕ ಅಥವಾ ಅದನ್ನು ದೇಹದಿಂದ ಹೊರಹಾಕುವ ಮೂಲಕ ದೋಷಗಳ ಸಾಮ್ಯತೆಯನ್ನು ಸಾಧಿಸುವುದರ ಜೊತೆಗೆ ಧಾತುಗಳನ್ನು ಬಲಗೊಳಿಸಿ ಸ್ವಾಸ್ಥ್ಯವನ್ನು ಸ್ಥಾಪಿಸುತ್ತದೆ. ಈ ಎಲ್ಲ ಪ್ರಕ್ರಿಯೆಗಳಿಂದ ನೀವು ಗುಣಮುಖರಾಗುತ್ತೀರಿ, ಮತ್ತೆ ಆರೋಗ್ಯವನ್ನು ಅನುಭವಿಸುತ್ತೀರಿ! ನಿಜವಾದ ಅರ್ಥದಲ್ಲಿ ಗುಣಮುಖರಾಗುವು ದೆಂದರೆ ರೋಗೋಪಶಮನವಾಗಿ, ಆ ಪ್ರಕ್ರಿಯೆಯಲ್ಲಿ ಬೇರೇ ಯಾವ ಕಾಯಿಲೆಯೂ ಉತ್ಪತ್ತಿಯಾಗದೆ, ಶರೀರ-ಇಂದ್ರಿಯ-ಮನಗಳಲ್ಲಿ ಲವಲವಿಕೆಯ ಅನುಭವವಾಗುವುದು. ಆದರೆ ಆಯುರ್ವೇದದ ಚಿಕಿತ್ಸೆಯ ಪ್ರಯತ್ನ ಇಲ್ಲಿಗೇ ನಿಲ್ಲುವುದಿಲ್ಲ. ಆಯುರ್ವೇದ ವೈದ್ಯರು ನಿಮ್ಮ ಆಹಾರ - ವಿಹಾರ - ವಿಚಾರಗಳ ಬಗ್ಗೆ ತಿಳಿದುಕೊಂಡು, ನಿಮ್ಮ ಯಾವ ತಪ್ಪು ಕ್ರಮದಿಂದ ನಿಮಗೆ ಕಾಯಿಲೆ ಬಂತೆಂದು ನಿಮಗೆ ತಿಳಿಸುತ್ತಾರೆ.
ಉದಾಹರಣೆಗೆ- ಅಲರ್ಜಿಯ ಸಮಸ್ಯೆಯಿಂದ ಹಲವಾರು ವರ್ಷಗಳಿಂದ ವ್ಯಕ್ತಿಯೊಬ್ಬರು ನರಳುತ್ತಿದ್ದರು. ಎಷ್ಟು ಉಪಚಾರ ಮಾಡಿಕೊಂಡರೂ ಸಮಾಧಾನ ಸಿಗಲಿಲ್ಲ. ನಂತರ ಬೇರೆ ದಾರಿ ತೋಚದೆ ಆಯುರ್ವೇದ ವೈದ್ಯರ ಬಳಿ ಹೋದಾಗ, ವೈದ್ಯರು ಅವರನ್ನು ದೀರ್ಘವಾಗಿ ವಿಚಾರಿಸಿದಾಗ ಸಮಸ್ಯೆಯ ಕಾರಣ ತಿಳಿಯಿತು. ವೈದ್ಯರು ಆರೋಗಿಯ ನೀರು ಸೇವನಾ ಕ್ರಮವನ್ನು ತಿದ್ದುಪಡಿಸಿದಾಗ ಸಮಸ್ಯೆ ಬೇಗ ಪರಿಹಾರವಾಗಿದ್ದಲ್ಲದೇ ಆ ಜ್ಞಾನವು ಅವರಿಗೆ ಮತ್ತೆ ಆ ರೋಗವು ಮರುಕಳಿಸದ ಹಾಗೆ ಕಾಪಾಡಿತು. ಹೀಗೆ ಮಾಡಿದಾಗ ಮಾತ್ರ ಚಿಕಿತ್ಸೆ ಸಾರ್ಥಕ ಮತ್ತು ಸಂಪೂರ್ಣ! ಇದು ನಿಜವಾದ ಅರ್ಥದಲ್ಲಿ ಚಿಕಿತ್ಸೆಯಾಗಿದೆ. ಆದರೆ, ಮೆಡಿಸಿನ್ ಕೇವಲ ರೋಗಲಕ್ಷಣಗಳನ್ನುಮುಚ್ಚಿಡುವ ಬ್ಯಾಂಡ್ ಏಡ್ ಆಗಿದೆ ಅಷ್ಟೇ!
ಗುಳಿಗೆ ನುಂಗಿದ 5 ನಿಮಿಷದಲ್ಲಿ ಸಿಗುವ ಸಮಾಧಾನ ಕ್ಷಣಿಕ ಮತ್ತು ಎಂದಿಗೂ ಅಪೂರ್ಣ! ಹಾಗಾಗಿ ಈ ಎರಡೂಪದ್ಧತಿಗಳನ್ನು ಒಂದೇ ತಕ್ಕಡಿಯಲ್ಲಿ ಹಾಕಿ ತೂಗಿ ಒಂದು slow ಮತ್ತೊಂದು fast ಎಂದು ಹೇಳುವುದಕ್ಕೆ ಯಾವ ಅರ್ಥವೂ ಇಲ್ಲ! ಸ್ನೇಹಿತರೆ, ಆಯುರ್ವೇದ ನಿಧಾನವಲ್ಲ; ಅದು ತೆಗೆದುಕೊಳ್ಳುವ ಸಮಯವು ನಿಮಗೆ ಚಿಕಿತ್ಸೆನೀಡಲು, ನಿಮ್ಮನ್ನು ಗುಣಪಡಿಸಲು ಮತ್ತು ನಿಮ್ಮನ್ನು ಪುನಃ ಸ್ವಸ್ಥರನ್ನಾಗಿಸಲು ಅಗತ್ಯವಿರುವ ನಿಜವಾದ ಸಮಯ! ಹಾಗಾಗಿ ನೀವು ಆರಿಸಿಕೊಳ್ಳಿ.
ನೀವು ಅನಾರೋಗ್ಯವನ್ನು ಗುಣಪಡಿಸಿಕೊಳ್ಳಲು ಬಯಸುತ್ತೀರಾ ಅಥವಾ ಅದನ್ನು ಕೇವಲ ಬಚ್ಚಿಡಲು ಬಯಸು ವಿರಾ? 10 ವರ್ಷಗಳಿಂದ ಇರುವ ಕಾಯಿಲೆಯನ್ನು 10 ನಿಮಿಷದಲ್ಲಿ ಸರಿ ಮಾಡುವುದು ಸರಿಯೇ ಎಂದು ನೀವೇ ಯೋಚಿಸಿ!
ಇದನ್ನೂ ಓದಿ: Dr Sadhanashree Column: ಆಯುರ್ವೇದದಲ್ಲಿ ಕೂದಲಿನ ಆರೈಕೆ ಹೇಗೆ ?