ಸಂಪಾದಕರ ಸದ್ಯಶೋಧನೆ
ಮೊನ್ನೆ ಕೇರಳ ಸಾಹಿತ್ಯ ಸಂಭ್ರಮದಲ್ಲಿ (ಲಿಟ್ ಫೆಸ್ಟ್) ಭಾಗವಹಿಸಲು ವಿಕಿಪೀಡಿಯಾ ಸಂಸ್ಥಾಪಕ ಜಿಮ್ಮಿ ವೇಲ್ಸ್ ಆಗಮಿಸಿದ್ದರು. ಅವರೊಂದಿಗೆ ಪತ್ರಕರ್ತರು ಮಾತಾಡುತ್ತಾ, ‘ಜಗತ್ತಿನಾದ್ಯಂತ ಜನರಲ್ಲಿ ನಂಬಿಕೆ ಎಂಬ ಗುಣ ಕ್ಷೀಣಿಸುತ್ತಿದೆಯಾ?’ ಎಂದು ಕೇಳಿದರು. ಅದಕ್ಕೆ ಜಿಮ್ಮಿ ವೇಲ್ಸ್, ‘ನಾನು ಯಾವತ್ತೂ ಎಡೆಲ್ಮನ್ ಟ್ರ ಬ್ಯಾರೋಮೀಟರ್ ( Edelman Trust Barometer) ಸಮೀಕ್ಷೆಯನ್ನು ಗಂಭೀರವಾಗಿ ಪರಿಗಣಿಸುತ್ತೇನೆ.
ಜಗತ್ತಿನ ಅನೇಕ ದೇಶಗಳಲ್ಲಿ ಕಳೆದ ಇಪ್ಪತ್ತಾರು ವರ್ಷಗಳಿಂದ ಈ ಸಮೀಕ್ಷೆ ನಡೆಯುತ್ತಿದೆ. ಆ ಪ್ರಕಾರ ಜಗತ್ತಿನೆಡೆ ನಂಬಿಕೆ ಕ್ಷೀಣಿಸುತ್ತಿದೆ’ ಎಂದು ಹೇಳಿದರು. ಹಾಗಾದರೆ ಎಡೆಲ್ಮನ್ ಟ್ರಸ್ಟ್ ಬ್ಯಾರೋಮೀಟರ್ ಸಮೀಕ್ಷೆ ಅಂದ್ರೆ ಏನು? ಈ ಸಮೀಕ್ಷೆಗೆ ಯಾಕೆ ಅಷ್ಟು ಮಹತ್ವ? ಇದು ಜಾಗತಿಕ ಮಟ್ಟದಲ್ಲಿ ಸರಕಾರಗಳು, ವ್ಯವಹಾರ ಸಂಸ್ಥೆಗಳು, ಮಾಧ್ಯಮಗಳು ಮತ್ತು ಎನ್‌ಜಿಒಗಳ (NGO) ಮೇಲಿರುವ ಸಾರ್ವಜನಿಕ ನಂಬಿಕೆಯನ್ನು ಅಳೆಯುವ ಒಂದು ವಾರ್ಷಿಕ ಸಮೀಕ್ಷೆಯಾಗಿದೆ.
ವಿಶ್ವದ ಪ್ರಸಿದ್ಧ ಸಾರ್ವಜನಿಕ ಸಂಪರ್ಕ (PR) ಸಂಸ್ಥೆಯಾದ ‘ಎಡೆಲ್ಮನ್’ ಇದನ್ನು ಪ್ರತಿ ವರ್ಷ ನಡೆಸುತ್ತದೆ. ಈ ಸಮೀಕ್ಷೆಯು ಕೇವಲ ಅಂಕಿ-ಅಂಶಗಳಲ್ಲ, ಬದಲಿಗೆ ಜಗತ್ತು ಹೇಗೆ ಬದಲಾಗುತ್ತಿದೆ ಮತ್ತು ಜನರ ಆಲೋಚನಾಲಹರಿ ಹೇಗಿದೆ ಎಂಬುದನ್ನು ತೋರಿಸುವ ದಿಕ್ಸೂಚಿಯಾಗಿದೆ.
ಇದನ್ನೂ ಓದಿ: Vishweshwar Bhat Column: ಮಾರ್ಕ್ ಟಲಿ ನೆನಪು
2000ನೇ ಇಸವಿಯಲ್ಲಿ ಪ್ರಾರಂಭವಾದ ಈ ಸಮೀಕ್ಷೆಯು ಇಂದು 25 ವರ್ಷಗಳನ್ನು ಪೂರೈಸಿದೆ. ಪ್ರತಿ ವರ್ಷ ದಾವೋಸ್ʼನಲ್ಲಿ ನಡೆಯುವ ವಿಶ್ವ ಆರ್ಥಿಕ ವೇದಿಕೆ (World Economic Forum) ಸಭೆಯ ಸಂದರ್ಭದಲ್ಲಿ ಈ ವರದಿಯನ್ನು ಬಿಡುಗಡೆ ಮಾಡಲಾಗು ತ್ತದೆ.
ಸುಮಾರು 28ಕ್ಕೂ ಹೆಚ್ಚು ದೇಶಗಳಲ್ಲಿ, 32000ಕ್ಕೂ ಹೆಚ್ಚು ಜನರನ್ನು ಸಂದರ್ಶಿಸಿ ಈ ವರದಿಯನ್ನು ಸಿದ್ಧಪಡಿಸಲಾಗುತ್ತದೆ. ಇದು ಪ್ರಮುಖವಾಗಿ ನಾಲ್ಕು ಸಂಸ್ಥೆಗಳ ಮೇಲೆ ಕೇಂದ್ರೀಕರಿಸುತ್ತದೆ- 1) ಸರಕಾರ 2) ವ್ಯವಹಾರ ಸಂಸ್ಥೆಗಳು 3) ಮಾಧ್ಯಮ 4) ಸರಕಾರೇತರ ಸಂಸ್ಥೆಗಳು (NGOs). ಎಡೆಲ್ಮನ್ ಸಂಸ್ಥೆಯು ನಂಬಿಕೆಯನ್ನು ಅಳೆಯಲು ಎರಡು ಪ್ರಮುಖ ಅಂಶಗಳನ್ನು ಬಳಸುತ್ತದೆ- ಸಾಮರ್ಥ್ಯ (Competence): ಒಂದು ಸಂಸ್ಥೆಯು ತಾನು ನೀಡಿದ ಭರವಸೆಯನ್ನು ಈಡೇರಿಸುವ ಶಕ್ತಿ ಹೊಂದಿದೆಯೇ? ಹಾಗೂ ನೈತಿಕತೆ (Ethics): ಆ ಸಂಸ್ಥೆ ಯು ಸರಿಯಾದ ಹಾದಿಯಲ್ಲಿ ನಡೆಯುತ್ತಿದೆಯೇ? ಅದು ಸಮಾಜಕ್ಕೆ ಒಳ್ಳೆಯದನ್ನು ಮಾಡುತ್ತಿದೆಯೇ? ಸಮೀಕ್ಷೆಯ ಪ್ರಕಾರ, ಸಾಮಾನ್ಯವಾಗಿ ವ್ಯವಹಾರ ಸಂಸ್ಥೆಗಳು ‘ಸಾಮರ್ಥ್ಯ’ದಲ್ಲಿ ಮುಂದಿದ್ದರೆ, ಎನ್‌ಜಿಒಗಳು ‘ನೈತಿಕತೆ’ಯಲ್ಲಿ ಮುಂದಿರುತ್ತವೆ.
ಆದರೆ ಇತ್ತೀಚಿನ ವರ್ಷಗಳಲ್ಲಿ ಜನರ ನಂಬಿಕೆಯು ಸಂಸ್ಥೆಗಳಿಗಿಂತ ಹೆಚ್ಚಾಗಿ ವ್ಯಕ್ತಿಗಳ ಮೇಲೆ (ಉದಾಹರಣೆಗೆ, ವಿಜ್ಞಾನಿಗಳು, ತಾಂತ್ರಿಕ ತಜ್ಞರು) ಕೇಂದ್ರೀಕೃತವಾಗುತ್ತಿದೆ. ಇತ್ತೀಚಿನ ವರ್ಷಗಳ ವರದಿಗಳು ಕೆಲವು ಆತಂಕಕಾರಿ ಮತ್ತು ಕುತೂಹಲಕಾರಿ ವಿಷಯಗಳನ್ನು ಎತ್ತಿ ತೋರಿಸಿವೆ.
ಮೊದಲನೆಯದು, ನಾವೀನ್ಯದ ಮೇಲಿನ ಭಯ (Innovation at Risk). ಹೊಸ ತಂತ್ರಜ್ಞಾನ ಗಳು (AI, ಗ್ರೀನ್ ಎನರ್ಜಿ ಇತ್ಯಾದಿ) ವೇಗವಾಗಿ ಬೆಳೆಯುತ್ತಿವೆ. ಆದರೆ ಜನರು ಈ ಬದಲಾವಣೆಗಳನ್ನು ಸಂಶಯದಿಂದ ನೋಡುತ್ತಿದ್ದಾರೆ.
ತಂತ್ರಜ್ಞಾನವು ಸಮಾಜದ ಒಳಿತಿಗಿಂತ ಹೆಚ್ಚಾಗಿ ಉದ್ಯೋಗ ನಷ್ಟ ಅಥವಾ ತಪ್ಪು ಮಾಹಿತಿ ಗೆ ಕಾರಣವಾಗಬಹುದು ಎಂಬ ಭಯ ಹೆಚ್ಚುತ್ತಿದೆ. ಎರಡನೆಯದು, ಧ್ರುವೀಕರಣ ( Polarization). ಸಮಾಜವು ಎರಡು ಭಾಗಗಳಾಗಿ ವಿಭಜನೆಯಾಗುತ್ತಿದೆ. ಒಂದು ಗುಂಪಿನ ವರು ಇನ್ನೊಂದು ಗುಂಪಿನವರನ್ನು ನಂಬಲು ಸಿದ್ಧರಿಲ್ಲ.
ಇದು ಪ್ರಜಾಪ್ರಭುತ್ವಕ್ಕೆ ದೊಡ್ಡ ಸವಾಲಾಗಿದೆ ಎಂದು ವರದಿ ಹೇಳುತ್ತದೆ. ಮೂರನೆಯದು, ನಂಬಿಕೆಯ ಅಂತರ (The Trust Gap). ಶ್ರೀಮಂತರು ಮತ್ತು ಬಡವರ ನಡುವಿನ ನಂಬಿಕೆ ಯ ಅಂತರ ಹೆಚ್ಚುತ್ತಿದೆ. ಆರ್ಥಿಕವಾಗಿ ಸದೃಢರಾದವರು ಸಂಸ್ಥೆಗಳ ಮೇಲೆ ಹೆಚ್ಚಿನ ನಂಬಿಕೆ ಹೊಂದಿದ್ದರೆ, ಸಾಮಾನ್ಯ ಜನರು ವ್ಯವಸ್ಥೆಯ ಮೇಲೆ ಭರವಸೆ ಕಳೆದುಕೊಳ್ಳು ತ್ತಿದ್ದಾರೆ.
ಎಡೆಲ್ಮನ್ ಟ್ರಸ್ಟ್ ಬ್ಯಾರೋಮೀಟರ್‌ನಲ್ಲಿ ಭಾರತವು ಯಾವಾಗಲೂ ಅಗ್ರಸ್ಥಾನ ಗಳಲ್ಲಿರುತ್ತದೆ. ಭಾರತೀಯರು ತಮ್ಮ ಸರಕಾರ, ವ್ಯವಹಾರ ಸಂಸ್ಥೆಗಳು ಮತ್ತು ಮಾಧ್ಯಮ ಗಳ ಮೇಲೆ ವಿಶ್ವದ ಇತರ ದೇಶಗಳಿಗೆ ಹೋಲಿಸಿದರೆ ಹೆಚ್ಚಿನ ನಂಬಿಕೆ ಹೊಂದಿದ್ದಾರೆ.
ಚೀನಾ ಮತ್ತು ಇಂಡೋನೇಷ್ಯಾಗಳ ಜತೆಗೆ ಭಾರತವು ‘ಟ್ರಸ್ಟ್ ಇಂಡೆಕ್ಸ್’ನಲ್ಲಿ ಮೊದಲ ಮೂರು ಸ್ಥಾನಗಳಲ್ಲಿ ಕಾಣಿಸಿಕೊಳ್ಳುತ್ತದೆ. ವಿಶೇಷವಾಗಿ, ಭಾರತೀಯರು ತಮ್ಮ ಉದ್ಯೋಗ ದಾತರ ಮೇಲೆ ಅತಿ ಹೆಚ್ಚು ನಂಬಿಕೆ ಇಡುತ್ತಾರೆ ಎಂಬುದು ಗಮನಾರ್ಹ ಅಂಶ. ಸಮೀಕ್ಷೆ ಯು ಪ್ರತಿ ಸಂಸ್ಥೆಗೆ ಕೆಲವು ಸಂದೇಶಗಳನ್ನು ನೀಡುತ್ತದೆ.
ಕೇವಲ ಲಾಭ ಗಳಿಸುವುದು ಮಾತ್ರವಲ್ಲದೆ, ಸಾಮಾಜಿಕ ಸಮಸ್ಯೆಗಳಿಗೂ ಸ್ಪಂದಿಸಬೇಕು, ಉದ್ಯೋಗಿಗಳಿಗೆ ನೈತಿಕ ಬೆಂಬಲ ನೀಡಬೇಕು ಎಂದು ವ್ಯವಹಾರ ಸಂಸ್ಥೆಗಳಿಗೆ ಸೂಚಿಸು ತ್ತದೆ. ಸಾರ್ವಜನಿಕರಲ್ಲಿ ಸುರಕ್ಷತೆಯ ಭಾವನೆ ಮೂಡಿಸಬೇಕು ಮತ್ತು ತಪ್ಪು ಮಾಹಿತಿ ಯನ್ನು ನಿಯಂತ್ರಿಸಬೇಕು ಎಂದು ಸರಕಾರಗಳಿಗೆ ಹೇಳುತ್ತದೆ.