Vishweshwar Bhat Column: ಮಾರ್ಕ್ ಟಲಿ ನೆನಪು
ನೀವು 80 ಮತ್ತು 90ರ ದಶಕದ ಕಾಲಕ್ಕೆ ಹೋಗಿ ನೋಡಿ. ಆಗಿನ್ನೂ ಚಾನೆಲ್‌ಗಳ ಅಬ್ಬರ ಇರಲಿಲ್ಲ, ಬ್ರೇಕಿಂಗ್ ನ್ಯೂಸ್‌ಗಳ ಆರ್ಭಟವಿರಲಿಲ್ಲ. ಸಂಜೆ ಏಳೋ ಎಂಟೋ ಗಂಟೆಯಾ ದಾಗ ಹಳ್ಳಿಹಳ್ಳಿಯ ಕಟ್ಟೆಗಳ ಮೇಲೆ ಕುಳಿತ ಜನರೆಲ್ಲ ಕಿವಿಗೊಡುತ್ತಿದ್ದುದು ರೇಡಿಯೋಕ್ಕೆ. ಇಂಗ್ಲಿಷ್ ಬಲ್ಲ ನಗರ ಪ್ರದೇಶಗಳ ಕೆಲ ಜನ ಬಿಬಿಸಿಯ ಆ ಒಂದು ಕಂಠಕ್ಕೆ ಎದುರು ನೋಡುತ್ತಿದ್ದರು- ‘ದಿಸ್ ಈಸ್ ಬಿಬಿಸಿ... ಐ ಆಮ್ ಮಾರ್ಕ್ ಟಲಿ’. ಅವರು ಹಾಗೆ ಇಂಗ್ಲಿಷ್ ನಲ್ಲಿ ಮಾತಾಡು ತ್ತಿದ್ದರೂ, ಇಂಗ್ಲಿಷ್ ಬಲ್ಲವರೆಲ್ಲರಿಗೂ ಅರ್ಥವಾಗುತ್ತಿತ್ತು.
-
ಸಂಪಾದಕರ ಸದ್ಯಶೋಧನೆ
ಈ ದೃಶ್ಯವನ್ನ ಕಣ್ಣ ಮುಂದೆ ತಂದುಕೊಳ್ಳಿ. ದೆಹಲಿಯ ಲೋಧಿ ಎಸ್ಟೇಟ್‌ನ ಹಳೆಯ ಬಂಗಲೆಯೊಂದರ ಜಗಲಿ. ಅಲ್ಲಿ ಒಬ್ಬ ಮನುಷ್ಯ ಕೂತಿದ್ದಾನೆ. ಕೈಯಲ್ಲಿ ಒಂದು ಹಳೆಯ ರೇಡಿಯೋ, ಮುಖದಲ್ಲಿ ಸಾವಿರಾರು ಕಥೆಗಳನ್ನ ಹೇಳಿ ಸುಸ್ತಾದವನ ತೃಪ್ತಿ, ಅಪ್ಪಟ ಬಿಳಿಯನ ದೇಹದೊಳಗೆ ಮಿಡಿಯುತ್ತಿರುವ ಹಸಿಬಿಸಿ ಭಾರತೀಯ ಆತ್ಮ.
ಆತನ ಹೆಸರು, ರೂಪ ಮತ್ತು ಭಾಷೆಯನ್ನು ಕೇಳಿದರೆ ಆತ ಭಾರತೀಯ ಎಂದು ಅನಿಸುವು ದಿಲ್ಲ. ಆದರೆ ಆತನ ಯೋಚನೆ, ಸೆಳೆತ, ಈ ಮಣ್ಣಿನದು. ಆ ಮನುಷ್ಯನ ಹೆಸರು ಸರ್ ಮಾರ್ಕ್ ಟಲಿ. ಮಾರ್ಕ್ ಟಲಿ ನಮ್ಮನ್ನು ಅಗಲಿದರು ಅನ್ನುವ ಸುದ್ದಿ ಬಂದಾಗ, ಪತ್ರಕರ್ತ ನೊಬ್ಬನ ಸಾವಿಗಿಂತ ಹೆಚ್ಚಾಗಿ, ಈ ದೇಶದ ‘ಧ್ವನಿ’ಯೊಂದು ಮೌನವಾದಂತೆ ಅನಿಸುತ್ತಿದೆ.
ನೀವು 80 ಮತ್ತು 90ರ ದಶಕದ ಕಾಲಕ್ಕೆ ಹೋಗಿ ನೋಡಿ. ಆಗಿನ್ನೂ ಚಾನೆಲ್‌ಗಳ ಅಬ್ಬರ ಇರಲಿಲ್ಲ, ಬ್ರೇಕಿಂಗ್ ನ್ಯೂಸ್‌ಗಳ ಆರ್ಭಟವಿರಲಿಲ್ಲ. ಸಂಜೆ ಏಳೋ ಎಂಟೋ ಗಂಟೆಯಾ ದಾಗ ಹಳ್ಳಿಹಳ್ಳಿಯ ಕಟ್ಟೆಗಳ ಮೇಲೆ ಕುಳಿತ ಜನರೆಲ್ಲ ಕಿವಿಗೊಡುತ್ತಿದ್ದುದು ರೇಡಿಯೋಕ್ಕೆ. ಇಂಗ್ಲಿಷ್ ಬಲ್ಲ ನಗರ ಪ್ರದೇಶಗಳ ಕೆಲ ಜನ ಬಿಬಿಸಿಯ ಆ ಒಂದು ಕಂಠಕ್ಕೆ ಎದುರು ನೋಡುತ್ತಿದ್ದರು- ‘ದಿಸ್ ಈಸ್ ಬಿಬಿಸಿ... ಐ ಆಮ್ ಮಾರ್ಕ್ ಟಲಿ’. ಅವರು ಹಾಗೆ ಇಂಗ್ಲಿಷ್ ನಲ್ಲಿ ಮಾತಾಡುತ್ತಿದ್ದರೂ, ಇಂಗ್ಲಿಷ್ ಬಲ್ಲವರೆಲ್ಲರಿಗೂ ಅರ್ಥವಾಗುತ್ತಿತ್ತು.
ಇದನ್ನೂ ಓದಿ: Vishweshwar Bhat Column: ತಜ್ಞರ ಸಲಹೆ ತೀರಾ ಅಗತ್ಯ
ಯಾಕೆ ಗೊತ್ತಾ? ಆ ಧ್ವನಿಯಲ್ಲಿ ಅಽಕಾರವಿರಲಿಲ್ಲ, ಬದಲಿಗೆ ಈ ಮಣ್ಣಿನ ಮೇಲಿನ ಅಪಾರವಾದ ಪ್ರೀತಿಯಿತ್ತು. ಆ ಧ್ವನಿ ಕೇಳಿದರೆ ಜನ ಅಂದುಕೊಳ್ಳುತ್ತಿದ್ದರು- ‘ಟಲಿ ಹೇಳಿದ್ದೀರಾ? ಹಾಗಿದ್ದರೆ ಅದು ಸತ್ಯವಿರಲೇಬೇಕು!’ ನಮ್ಮ ದೇಶದ ಜನ ಮಾರ್ಕ್ ಟಲಿ ಮಾತನ್ನ ನಂಬುತ್ತಿದ್ದರು.
ಒಬ್ಬ ಪತ್ರಕರ್ತ ಗಳಿಸಬಹುದಾದ ಅತಿದೊಡ್ಡ ಆಸ್ತಿ ಅದು. ಮಾರ್ಕ್ ಟಲಿ ಹುಟ್ಟಿದ್ದು ಕೋಲ್ಕತ್ತಾದಲ್ಲಿ. ಲಂಡನ್ನಿಗೆ ಹೋಗಿ ಆರಾಮಾಗಿ ಸೆಟಲ್ ಆಗಬಹುದಿತ್ತು. ಆದರೆ ಈ ದೇಶದ ಧೂಳು, ಆ ಹಳೆಯ ಅಂಬಾಸಿಡರ್ ಕಾರುಗಳು, ರಸ್ತೆಯ ಬದಿಯ ಚಹಾ, ಕಾಶಿಯ ಗಲ್ಲಿಗಳು ಈ ಮನುಷ್ಯನನ್ನು ಬಿಡಲೇ ಇಲ್ಲ.
ಅವರು ಬಿಬಿಸಿ ಪ್ರತಿನಿಧಿಯಾಗಿ ಭಾರತಕ್ಕೆ ಬಂದಾಗ ಇಲ್ಲಿನ ರಾಜಕೀಯ ಹಾಗಿತ್ತು. ಇಂದಿರಾ ಗಾಂಧಿಯವರ ತುರ್ತು ಪರಿಸ್ಥಿತಿಯಿರಲಿ, ಆಪರೇಷನ್ ಬ್ಲೂ ಸ್ಟಾರ್ ಇರಲಿ ಅಥವಾ ರಾಜೀವ್ ಗಾಂಧಿಯವರ ಹತ್ಯೆಯಿರಲಿ...
ಘಟನೆ ನಡೆದ ಜಾಗದಲ್ಲಿ ಮೊದಲು ಇರುತ್ತಿದ್ದದ್ದೇ ಈ ಮಾರ್ಕ್ ಟಲಿ. ಅವರಿಗೆ ಭಾರತ ಅಂದರೆ ಕೇವಲ ಒಂದು ಅಸೈನ್ಮೆಂಟ್ ಆಗಿರಲಿಲ್ಲ, ಅದೊಂದು ಎಮೋಷನ್ ಆಗಿತ್ತು. ಅವರು ಬರೀ ರಿಪೋರ್ಟರ್ ಆಗಿರಲಿಲ್ಲ, ಈ ದೇಶದ ನಾಡಿಮಿಡಿತ ಹಿಡಿದು ನೋಡುತ್ತಿದ್ದ ವೈದ್ಯನಂತಿದ್ದರು.
ಎಮರ್ಜೆನ್ಸಿ ಸಮಯದಲ್ಲಿ ಇಂದಿರಾ ಗಾಂಧಿಯವರಿಗೆ ಅತ್ಯಂತ ಹೆಚ್ಚು ಕಿರಿಕಿರಿ ಉಂಟು ಮಾಡಿದ ವ್ಯಕ್ತಿ ಅಂದರೆ ಅದು ಟಲಿ. ಅವರು ದೇಶ ಬಿಟ್ಟು ಹೋಗುವಂತೆ ಸರಕಾರ ಆದೇಶ ಮಾಡಿತ್ತು. ಆದರೆ ಟಲಿ ಹೆದರಲಿಲ್ಲ. ಸತ್ಯವನ್ನ ಹೇಳುವುದರಲ್ಲಿ ಅವರು ಎಂದೂ ರಾಜಿ ಮಾಡಿಕೊಳ್ಳಲಿಲ್ಲ.
ಆಮೇಲೆ ಅದೇ ಇಂದಿರಾ ಗಾಂಧಿಯವರು ಮೃತಪಟ್ಟಾಗ ಅವರು ನೀಡಿದ ವರದಿ ಇಂದಿಗೂ ಜನಜನಿತ ಮತ್ತು ಚರ್ಚಿತ. ಮೊದಲು ಆ ಸುದ್ದಿಯನ್ನ ಬಿತ್ತರಿಸಿದ್ದು ಟಲಿ ಎಂದು ಜನ ಈಗಲೂ ನಂಬುತ್ತಾರೆ. ಆದರೆ ಅದನ್ನು ಬಿತ್ತರಿಸಿದ್ದು ಅವರ ಸಹೋದ್ಯೋಗಿ ಸತೀಶ್ ಜೇಕಬ್. ಅದು ಟಲಿಯವರ ಕ್ರೆಡಿಬಿಲಿಟಿ!
ಇಂದಿನ ಪತ್ರಕರ್ತರು ಟೈ ಕಟ್ಟಿಕೊಂಡು ಸ್ಟುಡಿಯೋ ಒಳಗೆ ಕೂತು ಕಿರುಚಾಡುವುದೇ ಪತ್ರಿಕೋದ್ಯಮ ಅಂದುಕೊಂಡಿದ್ದಾರೆ. ಆದರೆ ಟಲಿ ಹಾಗಿರಲಿಲ್ಲ. ಅವರು ‘Slow is Beautiful’ ಎಂದು ನಂಬಿದವರು. ಭಾರತದ ರೈಲು ಪ್ರಯಾಣ ಅಂದರೆ ಅವರಿಗೆ ಪಂಚಪ್ರಾಣ. ಅಪ್ಪಟ ಭಾರತೀಯನಂತೆ ಕುರ್ತಾ ಪೈಜಾಮ ತೊಟ್ಟು, ಕುಲ್ಹಡ್ ಚಹಾದಲ್ಲಿ ಈ ದೇಶದ ಸಂಸ್ಕೃತಿಯನ್ನ ಹುಡುಕುತ್ತಿದ್ದರು.
ಅವರು ಬರೆದ ’No Full Stops in India’ ಪುಸ್ತಕ ಅವರ ಗ್ರಹಿಕೆಯ ಭಾರತಕ್ಕೆ ಪಲ್ಲವಿ ಬರೆದಂತಿದೆ. ಭಾರತ ಬದಲಾಗುತ್ತಿದೆ, ಆದರೆ ಈ ದೇಶದ ಮೂಲಸತ್ವ ಎಂದಿಗೂ ಬದಲಾಗ ಬಾರದು ಎನ್ನುವ ಹಂಬಲ ಅವರ ಪ್ರತಿ ಸಾಲಿನಲ್ಲೂ ಕಾಣುತ್ತದೆ. ಸರ್ ಮಾರ್ಕ್ ಟಲಿ ನಿಧನರಾಗಿದ್ದಾರೆ ಎನ್ನುವುದು ಭೌತಿಕ ಸತ್ಯ ಇರಬಹುದು.
ಆದರೆ ಪತ್ರಿಕೋದ್ಯಮದ ಇತಿಹಾಸದಲ್ಲಿ ಅವರ ಹೆಸರು ಸದಾಕಾಲ ಉಳಿಯುತ್ತದೆ. ಯಾವುದೇ ಪಕ್ಷದ ಪರ ಇರದೇ, ಯಾವುದೇ ಸಿದ್ಧಾಂತಕ್ಕೆ ಅಂಟಿಕೊಳ್ಳದೇ, ಕೇವಲ ‘ಸತ್ಯ’ ಮತ್ತು ‘ಸಾಮಾನ್ಯ ಮನುಷ್ಯ’ನ ಪರವಾಗಿ ಧ್ವನಿಯೆತ್ತುವ ತಾಕತ್ತು ಇದೆಯಲ್ಲ... ಅದು ಮಾರ್ಕ್ ಟಲಿ. ಇಂದು ಲೋಧಿ ಎಸ್ಟೇಟ್‌ನ ಆ ಹಳೆಯ ಬಂಗಲೆ ಖಾಲಿಯಾಗಿರಬಹುದು.
ಆದರೆ ಬಿಬಿಸಿಯ ಆ ಹಳೆಯ ರೇಡಿಯೋ ತರಂಗಗಳಲ್ಲಿ ‘ದಿಸ್ ಈಸ್ ಬಿಬಿಸಿ’ ಎನ್ನುವ ಕಂಠ ಇಂದಿಗೂ ಅನುರಣಿಸುತ್ತಲೇ ಇರುತ್ತದೆ. ಟಲಿ ಅವರೇ, ಹೋಗಿ ಬನ್ನಿ. ನಿಮ್ಮಂಥ ಪತ್ರಕರ್ತರು ನಮ್ಮ ಕಾಲದಲ್ಲಿ ಇದ್ದರು ಎಂಬುದೇ ಹೆಮ್ಮೆ.