ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vinayaka M Bhat Column: ಒಳ್ಳೆಯ ಮಾತನಾಡಲೂ ಸತತ ಅಭ್ಯಾಸದ ಬಲ ಬೇಕು !

ಮನೆಯಲ್ಲಾಗಲೀ, ಸ್ನೇಹಿತರಲ್ಲಾಗಲೀ, ಹೆಂಡತಿಯ ಜತೆಗಾಗಲೀ ಅಥವಾ ಮಕ್ಕಳ ಜತೆಗಾಗಲೀ ಮಾತನಾಡುವಾಗ ನಾವು ಒಂದು ಮೇಲ್ಮೆಯನ್ನು ಕಾಯ್ದುಕೊಂಡರೆ, ಸಾರ್ವಜನಿಕ ವೇದಿಕೆ ಗಳಲ್ಲಿ ಮಾತನಾಡುವಾಗಲೂ ಅದೇ ಸುಸಂಸ್ಕೃತ ಮಾತುಗಳು ಬರುತ್ತೆ. ಅದಿಲ್ಲದಿದ್ದರೆ, ಅಸಂಬದ್ಧ ಮಾತನಾಡುವ ಇಂದಿನ ರಾಜಕಾರಣಿಗಳ, ಸಮಾಜದಲ್ಲಿ ತೋರಿಕೆಗೆ ದೊಡ್ಡವ ರೆನಿಸಿಕೊಂಡೂ ಸಣ್ಣವರಾಗುವವರ ಹಾಗಾಗುತ್ತದೆ.

ಒಳ್ಳೆಯ ಮಾತನಾಡಲೂ ಸತತ ಅಭ್ಯಾಸದ ಬಲ ಬೇಕು !

-

ವಿದ್ಯಮಾನ

ಸಮಾಜದಲ್ಲಿ ಒಬ್ಬರನ್ನು ಅವರ ನಡೆ ಹಾಗೂ ನುಡಿ ಎರಡನ್ನೂ ಪರಿಗಣಿಸಿ ಸಜ್ಜನರು ಅಥವಾ ದುರ್ಜನರು ಎಂದು ಪರಿಗಣಿಸಲಾಗುತ್ತದೆ. ಒಬ್ಬರ ಶಾರೀರಿಕ ಬಣ್ಣ, ಮೈಕಟ್ಟು, ಮುಖಭಾವದಿಂದ ಅವರ ವ್ಯಕ್ತಿತ್ವವನ್ನು ನಿರ್ಧಾರಮಾಡಲು ಆಗದು, ಅತ್ಯಂತ ಕುರೂಪಿ ಯಾಗಿದ್ದವ ಸುಮನಸ್ಕನಾಗಿರಬಹುದು, ನೋಡಲು ಸಿಡುಕನಂತೆ ಮುಖಭಾವವುಳ್ಳವ, ಆಂತರಂಗಿಕವಾಗಿ ಶಾಂತ ಮನಸ್ಕನಾಗಿರಬಹುದು.

ಕಪ್ಪಗಿದ್ದವನ ಮನಸ್ಸು ಅತ್ಯಂತ ಶ್ವೇತ ಶುಭ್ರವಾಗಿರಬಹುದು. ಆದರೆ ಒಬ್ಬರ ಜತೆಗೆ ಹತ್ತು ಮಾತುಗಳನ್ನಾಡಿದರೆ ಸಾಕು, ಅವರ ಸರ್ವಬಣ್ಣವೂ ಬಯಲಾಗಿ ಬಿಡುತ್ತವೆ. ಅವರ ನಾಲಿಗೆ ಅವರ ವ್ಯಕ್ತಿತ್ವವನ್ನು ಬಟಾಬಯಲು ಮಾಡಿ ಬಿಡುತ್ತದೆ. ಅದಕ್ಕೇ ಹೇಳುವುದು ಮುಖವೇ ಮನಸ್ಸಿನ ಕೈಗನ್ನಡಿ ಎಂದು.

ಇಲ್ಲಿ ಮುಖ ಎಂದರೆ ಮಾತು ಅಥವಾ ನಾಲಿಗೆ ಎಂದರ್ಥ ಮಾಡಿಕೊಳ್ಳಬೇಕು. ರಾಜಕಾರಣಿ ಗಳು ಮಾತ್ರವಲ್ಲ, ಸಮಾಜದಲ್ಲಿ ವಿವಿಧ ಕ್ಷೇತ್ರಗಳಲ್ಲಿ ದೊಡ್ದವರು ಎನಿಸಿಕೊಂಡವರು ಬಾಯಿಬಿಟ್ಟು ಕೆಟ್ಟಿರುವುದನ್ನು ನಾವು ನೋಡುತ್ತೇವೆ.

ನಾನು ಧಾರವಾಡದಲ್ಲಿ ಕಾಲೇಜಿನಲ್ಲಿ ಓದುತ್ತಿದ್ದ ಕಾಲ, ಕರ್ನಾಟಕ ಸರಕಾರದ ಕ್ರೀಡಾ ಹಾಗೂ ಯುವಜನ ಇಲಾಖೆಯು ಯುವಕವಿಗಳ ತರಬೇತಿ ಶಿಬಿರವನ್ನು ಬೆಳಗಾವಿಯಲ್ಲಿ ಏರ್ಪಡಿಸಿತ್ತು, ಉತ್ತರಕರ್ನಾಟಕದ ಎಲ್ಲ ಜಿಲ್ಲೆಗಳಿಂದ ವಿದ್ಯಾರ್ಥಿಗಳು ಆ ಶಿಬಿರದಲ್ಲಿ ಪಾಲ್ಗೊಂಡಿದ್ದರು, ನಾನೂ ಈ ಶಿಬಿರದಲ್ಲಿ ಧಾರವಾಡವನ್ನು ಪ್ರತಿನಿಧಿಸಿದ್ದೆ.

ಇದನ್ನೂ ಓದಿ: Vinayak M Bhat Column: ಹೆಸರು ಮಾತ್ರ ದೊಡ್ಡದು, ಆದರೆ ಮೊಸರು ತೆಳ್ಳಗೇ !

ಉತ್ತರ ಕರ್ನಾಟಕದ ಅನೇಕ ಕವಿಗಳು ಹಾಗೂ ಬರಹಗಾರರು ಈ ಶಿಬಿರಕ್ಕೆ ಬಂದು ನಮ್ಮಂಥಾ ಯುವಕರಿಗೆ ಮಾರ್ಗದರ್ಶನ ನೀಡುತ್ತಿದ್ದರು. ಒಂದು ಅವಧಿಗೆ, ಕವಿ, ನಾಟಕ ಕಾರ, ಸಂಘಟನಕಾರ, ಪತ್ರಿಕಾ ಸಂಪಾದಕ, ಆಡಳಿತಗಾರ, ಕನ್ನಡ ಹೋರಾಟಗಾರ ಹೀಗೆ ವಿಭಿನ್ನ ನೆಲೆಗಳ ‘ಚಂಪಾ’ ಎಂದೇ ಹೆಸರಾಗಿದ್ದ ಚಂದ್ರಶೇಖರ ಪಾಟೀಲರು ಉಪನ್ಯಾಸ ನೀಡುತ್ತಿದ್ದರು, ‘ಇಸಂ’ಗಳ ಮೂಸೆಯಿಂದ ಮಾತನಾಡುತ್ತಾ ಅವರು ಹಿಂದೂ ಧರ್ಮ, ಮೇಲು- ಕೀಳು ಜಾತಿ, ಹಿಂದೂ ಸನ್ಯಾಸಿಗಳ ಢೋಂಗಿತನ ಇತ್ಯಾದಿ ಈ ಕಾರ್ಯ ಕ್ರಮಕ್ಕೆ ಸಂಬಂಧವಿಲ್ಲದ ಮಾತುಗಳನ್ನಾಡುತ್ತಾ, ಜಗನ್ನಾಥ ಪುರಿ ಕ್ಷೇತ್ರದ ಗೋವರ್ಧನ ಪೀಠದ ಶಂಕರಾಚಾರ್ಯರನ್ನು ಹೀಯಾಳಿಸುವ ಧಾಟಿಯಲ್ಲಿ, ಅವರು ಪೂರಿ ಸ್ವಾಮಿ, ಇಡ್ಲಿ ಸ್ವಾಮಿ, ವಡಾ ಸ್ವಾಮಿ ಮುಂತಾಗಿ ಕೀಳು ಮಾತನಾಡಲು ಶುರುವಿಟ್ಟುಕೊಂಡರು, ನೀವು ಹೀಗೇ ಮಾತಾನಾಡಿದರೆ ದೇವರಾಣೆ ನಾವು ಎದ್ದು ಹೋಗಬೇಕಾಗುತ್ತದೆ ಎಂದು ನಾವು ಕೆಲವು ಜನ ಅಂದು ಪ್ರತಿಭಟಿಸಿದ್ದೆವು ಕೂಡಾ.

ಯುವ ಬರಹಗಾರರಿಗೆ ಬರವಣಿಗೆಯ ಬಗ್ಗೆ ಹೇಳಲಿಕ್ಕೆ ಬಂದ ಪಾಟೀಲರು ತಮ್ಮ ನಿಯಂತ್ರಣವಿಲ್ಲದ ಮಾತಿನಿಂದಾಗಿ ನಮ್ಮಂಥಾ ಚಿಕ್ಕವರೆದುರಿಗೆ ಇನ್ನೂ ಚಿಕ್ಕವರಾಗಿ ಹೋದರು. ಕನ್ನಡ ನಾಡು-ನುಡಿ, ಸಂಸ್ಕೃತಿಯ ರಕ್ಷಣೆಗಾಗಿ ನಿರಂತರ ಹೋರಾಡುತ್ತಾ ಬಂದಿರುವ ಚಂಪಾರವರ ಅವರ ಕುರಿತು ಅಪಾರ ಗೌರವವಿದೆ, ಇಂಥವರೂ ಆಡಬಾರದ ಮಾತನ್ನಾಡಿ ಸಣ್ಣವರಾಗುವುದಿದೆ ಎಂದು ಹೇಳುವುದಕ್ಕಾಗಿ ಒಂದು ಉದಾಹರಣೆಯಾಗಿ ಈ ಘಟನೆಯನ್ನು ಹೇಳಿದ್ದೇನೆ, ಇಂಥವರು ನಮ್ಮ ನಿತ್ಯಬದುಕಿನಲ್ಲಿ ಅನೇಕ ಸಿಗುತ್ತಾರೆ.

ಒಮ್ಮೆ, ಪ್ರೊ.ಎನ್.ಎಸ್.ಭಟ್, ಬಾಡ ಎನ್ನುವ ವಿದ್ವಾಂಸರೊಬ್ಬರು, ಮೊದಲು ಶ್ರೀ ಕೃಷ್ಣ ಸಂಧಾನಕ್ಕೆ ಹಾಗೂ ಎರಡನೇಯದಾಗಿ ಭೀಷ್ಮ ಪರ್ವಕ್ಕೆ ಕೃಷ್ಣನ ಪಾತ್ರ ವಹಿಸಿ ತಾಳಮದ್ದಲೆಯ ಕಾರ್ಯಕ್ರಮದಲ್ಲಿ ಅರ್ಥ ಹೇಳುತ್ತಿದ್ದರು, ಈ ಎರಡೂ ಪ್ರಸಂಗಗಳಲ್ಲಿ ಶ್ರೀಕೃಷ್ಣನ ಪಾತ್ರವೇ ಪ್ರಮುಖವಾದದ್ದು ಹಾಗೂ ಹೆಚ್ಚಿನ ‘ಸ್ಕ್ರೀನ್ ಟೈಮ್’ ಇರುವಂಥಾ ಪಾತ್ರ ಅದು. ‌

ಸರಿ ಸುಮಾರು ಎಂಟು ತಾಸುಗಳ ಅವರ ಅರ್ಥಗಾರಿಕೆಯಲ್ಲಿ, ಪಾತ್ರಕ್ಕೆ ತಕ್ಕಂತೆ ರೋಷ, ಸಿಟ್ಟು, ಹತಾಶೆ ಮುಂತಾದ ಎಲ್ಲ ರಸ ಭಾವಗಳೂ ಇದ್ದವು. ಆದರೆ ಅಷ್ಟು ಹೊತ್ತು ಮಾತನಾಡಿದರೂ ಒಂದೇ ಒಂದು ಅಪಶಬ್ಧ ಅವರ ಬಾಯಿಂದ ಬರಲಿಲ್ಲ ಎನ್ನುವುದು ನನಗೆ ಸೋಜಿಗವಾಗಿ ಕಂಡಿತು. ಇದು ಹೇಗೆ ಸಾಧ್ಯ ಎಂದು ಭಟ್ಟರನ್ನು ಹತ್ತಿರದಿಂದ ಬಲ್ಲವರಿಂದ ಕೇಳಿದಾಗ, ನೋಡಿ, ಎಂಟು ತಾಸಲ್ಲ, ಎಂಟು ದಿನ ಸತತವಾಗಿ ಅವರು ಮಾತನಾಡಿದರೂ ಅವರ ಬಾಯಿಂದ ಅಪಶಬ್ಧವನ್ನು ನಿರೀಕ್ಷಿಸಲು ಸಾಧ್ಯವಿಲ್ಲ, ಕಾರಣ ಅವರಿರುವುದೇ ಹಾಗೆ, ಖಾಸಗಿಯಾಗಿ ಅವರ ಜತೆಗೆ ಮಾತನಾಡುವಾಗಲೂ ಅವರದ್ದು ಇದೇ ಗುಣಮಟ್ಟದ ಮಾತಿರುತ್ತದೆ ಎಂದಿದ್ದರು.

Screenshot_3

ಸಂಸ್ಕಾರವಂತರು ಎನ್ನುವುದು ಅವರ ಮಾತುಗಳು ತೋರಿಸುತ್ತದೆ ಎನ್ನುವುದಕ್ಕೆ ಮಾದರಿ ಯಾಗಿ ಪ್ರೊ.ಎನ್.ಎಸ್.ಭಟ್, ಬಾಡ ಅವರು ಸದಾ ನನ್ನ ಸ್ಮೃತಿಯಲ್ಲಿ ಉಳಿಯುತ್ತಾರೆ. ಇಂದಿಗೂ ಇಂಥವರೂ ಸಮಾಜದಲ್ಲಿ ಅಲ್ಲಲ್ಲಿಯಾದರೂ ನಮಗೆ ನೋಡಲು ಸಿಗುತ್ತಾರೆ.

ನಮ್ಮ ಬಾಯಲ್ಲಿ ಒಳ್ಳೆಯ ಮಾತುಗಳು ಬರಬೇಕಾದರೆ, ಅದು ಸುಮ್ಮನೇ ಬರುವುದಿಲ್ಲ, ಒಳ್ಳೆಯ ಮಾತುಗಳು ಆಕಸ್ಮಾತ್ತಾಗಿ ಬರುವ ವಿಷಯವಲ್ಲ, ಅದಕ್ಕೆ ಸಾಧನೆ ಬೇಕಾಗುತ್ತೆ, ಪೂರ್ವ ಸಂಸ್ಕಾರ ಬೇಕಾಗುತ್ತೆ, ಸತತ ಅಭ್ಯಾಸ ಬೇಕಾಗುತ್ತೆ.

ಮನೆಯಲ್ಲಾಗಲೀ, ಸ್ನೇಹಿತರಲ್ಲಾಗಲೀ, ಹೆಂಡತಿಯ ಜತೆಗಾಗಲೀ ಅಥವಾ ಮಕ್ಕಳ ಜತೆಗಾಗಲೀ ಮಾತನಾಡುವಾಗ ನಾವು ಒಂದು ಮೇಲ್ಮೆಯನ್ನು ಕಾಯ್ದುಕೊಂಡರೆ, ಸಾರ್ವ ಜನಿಕ ವೇದಿಕೆಗಳಲ್ಲಿ ಮಾತನಾಡುವಾಗಲೂ ಅದೇ ಸುಸಂಸ್ಕೃತ ಮಾತುಗಳು ಬರುತ್ತೆ. ಅದಿಲ್ಲದಿದ್ದರೆ, ಅಸಂಬದ್ಧ ಮಾತನಾಡುವ ಇಂದಿನ ರಾಜಕಾರಣಿಗಳ, ಸಮಾಜದಲ್ಲಿ ತೋರಿಕೆಗೆ ದೊಡ್ಡವರೆನಿಸಿಕೊಂಡೂ ಸಣ್ಣವರಾಗುವವರ ಹಾಗಾಗುತ್ತದೆ.

ಇಂಥವರನ್ನು ನೋಡಿಯೇ ದಾಸರು, ‘ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ, ವಿಚಾರವಿಲ್ಲದೆ ಪರರ ದೂಷಿಸುವುದಕೆ ಚಾಚಿಕೊಂಡಿರುವಂಥ ನಾಲಿಗೆ’ ಎಂದು ಜರಿದಿರುವುದು.

ನಾವೆಲ್ಲ ಚಿಕ್ಕವರಿರುವಾಗ ಎರಡು ಗಿಳಿಗಳ ಕಥೆ ಹೇಳುತ್ತಿದ್ದರು, ಒಂದು ಒಳ್ಳೆಯಯವರ ಸಹವಾಸದಲ್ಲಿ ಬೆಳೆದು ಒಳ್ಳೆಯ ಮಾತನ್ನು ಕಲಿತ ಗಿಳಿ, ಇನ್ನೊಂದು ಕೆಟ್ಟವರ ಸಹವಾಸ ದಲ್ಲಿ ಬೆಳೆದು ಕೆಟ್ಟ ಕೆಟ್ಟ ಮಾತನ್ನಾಡುವ ಗಿಳಿ. ಒಂದು ಕಾಡಿನಲ್ಲಿ ತಾಯಿ ಗಿಳಿ ಮತ್ತು ಅದರ ಎರಡು ಪುಟ್ಟ ಮರಿಗಳು ವಾಸವಾಗಿದ್ದವು. ಒಂದು ದಿನ ಭೀಕರ ಗಾಳಿ-ಮಳೆಗೆ ಸಿಲುಕಿ ತಾಯಿ ಗಿಳಿ ಮರಣಹೊಂದುತ್ತದೆ ಮತ್ತು ಮರಿಗಳೆರಡೂ ಪರಸ್ಪರ ದೂರವಾಗಿ ಬೇರೆ ಬೇರೆ ಕಡೆಗೆ ಹಾರಿ ಬೀಳುತ್ತವೆ.

ಮೊದಲನೆಯ ಗಿಳಿ ದರೋಡೆಕೋರರ ಅಥವಾ ಕಟುಕರ ಗುಡಿಸಲಿನ ಬಳಿ ಬೀಳುತ್ತದೆ. ಅಲ್ಲಿ ದಿನಾಲೂ ದರೋಡೆಕೋರರು ಮಾತನಾಡುವ ಕೆಟ್ಟ ಮಾತುಗಳು, ಹಿಡಿಯಿರಿ, ಕಡಿಯಿರಿ, ಕೊಲ್ಲಿ ಎಂಬ ಅರಚಾಟಗಳನ್ನು ಕೇಳಿಸಿಕೊಳ್ಳುತ್ತಾ ಬೆಳೆಯುತ್ತದೆ. ಇದರಿಂದಾಗಿ ಆ ಗಿಳಿಯೂ ಸಹ ಅದೇ ರೀತಿ ಕೆಟ್ಟದಾಗಿ ಮಾತನಾಡಲು ಕಲಿಯುತ್ತದೆ.

ಎರಡನೆಯ ಗಿಳಿ ಒಬ್ಬ ಋಷಿಯ ಆಶ್ರಮದ ಹತ್ತಿರ ಬಂದು ಬೀಳುತ್ತದೆ. ಆಶ್ರಮದಲ್ಲಿ ಋಷಿ ಗಳು ಮಾಡುವ ಪ್ರಾರ್ಥನೆ, ಶಾಂತಿಯುತ ಮಾತುಗಳು ಮತ್ತು ಅತಿಥಿ ಸತ್ಕಾರದ ರೀತಿನೀತಿ ಗಳನ್ನು ದಿನವೂ ಕೇಳುತ್ತಾ ಬೆಳೆಯುತ್ತದೆ. ಇದರಿಂದಾಗಿ ಈ ಗಿಳಿಯು ಅತ್ಯಂತ ವಿನಯ ಶೀಲವಾಗಿ ಮತ್ತು ಮಧುರವಾಗಿ ಮಾತನಾಡಲು ಕಲಿಯುತ್ತದೆ.

ಒಂದು ದಿನ ಆ ದಾರಿಯಲ್ಲಿ ಹೋಗುತ್ತಿದ್ದ ರಾಜನೊಬ್ಬ ಸುಸ್ತಾಗಿ ವಿಶ್ರಾಂತಿ ಪಡೆಯಲು ಮೊದಲು ದರೋಡೆಕೋರರ ಗುಡಿಸಲಿನ ಬಳಿ ಬರುತ್ತಾನೆ. ಆಗ ಅಲ್ಲಿನ ಗಿಳಿಯು ಇವನನ್ನು ಹಿಡಿಯಿರಿ, ಕೊಲ್ಲಿ, ಲೂಟಿ ಮಾಡಿ! ಎಂದು ಕಿರುಚತೊಡಗುತ್ತದೆ.

ಹೆದರಿದ ರಾಜ ಅಲ್ಲಿಂದ ಓಡಿ ಆಶ್ರಮದ ಬಳಿ ಬರುತ್ತಾನೆ. ಅಲ್ಲಿನ ಗಿಳಿಯು ಅತ್ಯಂತ ಪ್ರೀತಿ ಯಿಂದ ಸ್ವಾಗತ ಮಹಾರಾಜರೇ, ಒಳಗೆ ಬಂದು ವಿಶ್ರಾಂತಿ ಪಡೆಯಿರಿ ಎಂದು ಸ್ವಾಗತಿಸು ತ್ತದೆ. ಒಂದೇ ತಾಯಿಯ ಮಕ್ಕಳಾದರೂ ಇವುಗಳ ನಡುವಿನ ಈ ವ್ಯತ್ಯಾಸವನ್ನು ಕಂಡು ರಾಜನಿಗೆ ಆಶ್ಚರ್ಯವಾಗುತ್ತದೆ. ಆಗ ಆಶ್ರಮದ ಗಿಳಿಯು ನಾವು ಯಾರ ಜತೆ ಇರುತ್ತೇವೆ ಯೋ ಅವರ ಗುಣ ನಮಗೂ ಬರುತ್ತದೆ ಎಂಬ ಸತ್ಯವನ್ನು ವಿವರಿಸುತ್ತದೆ.

ಕಥೆಯ ನೀತಿ, ‘ಸಂಸರ್ಗಜಾಃ ದೋಷಗುಣಾಃ ಭವಂತಿ’ ದೋಷ ಹಾಗೂ ಗುಣಗಳೆರಡೂ ಸಂಸರ್ಗದಿಂದ ಅಂದರೆ ಸಹವಾಸದಿಂದ ಬರುತ್ತದೆ. ಆದ್ದರಿಂದ ಯಾವಾಗಲೂ ಒಳ್ಳೆಯ ವರ ಸಹವಾಸ ಮಾಡಬೇಕು ಎನ್ನುವುದೇ ಆಗಿದೆ. ಮಾತು ಬಲ್ಲವನಿಗೆ ಜಗಳವಿಲ್ಲ ಅಂತ ಹೇಳುವುದಿದೆ, ಏನೇ ಮಾತನಾಡಿದರೂ ‘ಪ್ರಿಯಂ ಭೂಯಾತ್’ ಪ್ರೀತಿಯಿಂದ ಮಾತಾಡು ಎನ್ನುತ್ತೆ ನಮ್ಮ ಸಂಸ್ಕೃತಿ.

‘ಪ್ರಿಯವಾಕ್ಯ ಪ್ರದಾನೇನ ಸರ್ವೆ ತುಷ್ಯಂತಿ ಜಂತವಃ ತಸ್ಮಾತ್ ತದೇವ ವಕ್ತವ್ಯಂ ವಚನೇಕಾ ದರಿದ್ರತಾ’ ಪ್ರೀತಿಯ ಮಾತನ್ನು ಎಲ್ಲರೂ ಇಷ್ಟಪಡುವಾಗ ಅದನ್ನೇ ಆಡಲು ಮಾತಿಗೆ ಬರವೇನು ಎಂದು ಕೇಳುತ್ತದೆ ಸುಭಾಷಿತ. ಡಿವಿಜಿ ಅವರು ಮಾತಿನ ಕುರಿತು ಹೀಗೆ ಹೇಳು ತ್ತಾರೆ, ಮಾತು ಬೆಳ್ಳಿಯ ಗೆಜ್ಜೆ, ಮೌನ ಬಂಗಾರದ ಮುದ್ರೆ ಮಾತು ಮುತ್ತಿನ ಹಾರದಂತಿರಲಿ ಮಂಕುತಿಮ್ಮ ಮಿತಭಾಷಿ ಅತಿಹಾಸಿ ಅತಿಚಿಂತೆಗಳ ಕಳೆದು ಜಿತಕಂಠನಾಗಿ ಲಘುಭುಜಿ ಯಪ್ಪ ಮನುಜನ್ಗೆ ಶುತಿಶಾಸ್ತ್ರ ಪುರಾಣತರ್ಕಂಗಳೇಕಯ್ಯಾ ದೃತಿವಂತನವನೆ ಸುಖಿ ಮಂಕುತಿಮ್ಮ ಅರಿತು ಮಾತನಾಡು, ಹರಟಿ ಕೆಡಬೇಡ ಉರಿಗಣ್ಣಿನೊಳು ನೋಡು, ಪರರ ನೀತಿಯ ಬರಿ ಮಾತಿನಲಿ ಬೆಳೆದು ಅರಿವು ಕುಗ್ಗಿಸಬೇಡ ಮರುಳೆ, ನೀನರಿಯೆಯಾ ಮಂಕು ತಿಮ್ಮ ಕಡಿಮೆ ಮಾತನಾಡುವ, ಹೆಚ್ಚು ನಗುವ, ಅತಿಯಾದ ಚಿಂತೆಗಳಿಲ್ಲದ, ಮಾತಿನ ಮೇಲೆ ಹತೋಟಿ ಇರುವ ಮತ್ತು ಮಿತವಾಗಿ ಆಹಾರ ಸೇವಿಸುವ ಮನುಷ್ಯನಿಗೆ ಯಾವುದೇ ಪುರಾಣ ಅಥವಾ ಶಾಸಗಳ ಅಗತ್ಯವಿಲ್ಲ.

ಅವನೇ ನಿಜವಾದ ಸುಖಿ ಎನ್ನುತ್ತಾರೆ ನಮ್ಮ ಗುಂಡಪ್ಪನವರು. ಪ್ರತಿ ಚುನಾವಣಾ ಸಮಯ ದಲ್ಲಿನ ಪ್ರಚಾರ ಸಭೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ದೇಶದ ರಾಜಕೀಯ ಅಥವಾ ರಾಜಕಾರಣಿಗಳು Culture ದೃಷ್ಟಿಯಿಂದ ಕೆಳಗಿಳಿಯುತ್ತಿದ್ದಾರೋ, ಮೇಲೇರುತ್ತಿದ್ದಾರೋ ಅಥವಾ ಇರುವ ಮಟ್ಟವನ್ನಾದರೂ ಕಾಯ್ದುಕೊಂಡಿದ್ದಾರೋ ಎನ್ನುವುದು ಸುಲಭವಾಗಿ ಗೊತ್ತಾಗಿ ಬಿಡುತ್ತದೆ.

ನಮ್ಮ ರಾಜಕಾರಣಿಗಳ ನೇಕರು ಕ್ಯಾಮೆರಾ ಮುಂದೆ ಮಾತ್ರ ಬ್ರದರ್, ಅಮ್ಮ, ತಾಯಿ ಎಂದೆಲ್ಲಾ ಪೋಸು ಕೊಡುವುದು, ಅದೇ ಅವರನ್ನು ಖಾಸಗೀಯಾಗಿ ನೋಡಬೇಕು, ಬಾಯಲ್ಲಿ ಬರುವ ಶಬ್ಧಗಳೆಲ್ಲ ಸೊಂಟದ ಕೆಳಗಿನವೇ ಆಗಿರುತ್ತವೆ. ಆ ದೃಷ್ಟಿಯಿಂದ ನಮ್ಮ ಹಿರಿಯ ಖರ್ಗೆಯವರನ್ನು ಮೆಚ್ಚಲೇ ಬೇಕು, ಅವರದ್ದು ಹಿಂದೊಂದು ಮುಂದೊಂದು ಇಲ್ಲವೇ ಇಲ್ಲ.

ಅವರ ಇತ್ತೀಚಿನ ಹೇಳಿಕೆಗಳನ್ನು ನೋಡುವಾಗ ಅವರು ಮಾತನಾಡುವುದೇ ಹೀಗೆ ಅಂತ ಕಾಣುತ್ತದೆ. ಅದಲ್ಲದಿದ್ದರೆ, ಗುಜರಾತಿನವರು ಅಶಿಕ್ಷಿತರು ಎನ್ನುವುದು, ಬಿಜೆಪಿ, ಸಂಘ ಪರಿವಾರದವರು ವಿಷಸರ್ಪಗಳು, ನೀವು ನಮಾಜ್ ಮಾಡುವುದನ್ನೂ ಬಿಟ್ಟು ಅವುಗಳನ್ನು ಮೊದಲು ಹೊಡೆದು ಕೊಲ್ಲಬೇಕು ಎಂದು ಕುರಾನ್‌ನಲ್ಲಿ ಹೇಳಿದೆ ಎನ್ನುವುದು, ದೇಶದ ಪ್ರಧಾನಿಯನ್ನು ಭಯೋತ್ಪಾದಕ ಎನ್ನುವುದು ಸಾಧ್ಯವಾಗುತ್ತಿರಲಿಲ್ಲ.

ಇಂಥಾ ಮಾತುಗಳು, ಒಂದು ಅರವತ್ತು ದಾಟಿದ ಅರಳುಮರಳಿನಿಂದ ಬರುತ್ತೆ ಅಥವಾ ಅಭ್ಯಾಸದಿಂದ ಮಾತ್ರ ಬರುತ್ತೆ. ಚುನಾವಣೆ ಪ್ರಚಾರ ಸಭೆ ಅಂದ ಮೇಲೆ ‘ಗಾಲಿ-ಗಲೋಚ್’ ಸ್ವಾಭಾವಿಕ, ನಮ್ಮ ಮೋದಿಯವರೂ ಪ್ರಧಾನಿಯಾಗಿ ಮಾತನಾಡುವ ಹಾಗೆ ಚುನಾವಣಾ ಪ್ರಚಾರ ಸಭೆಗಳಲ್ಲಿ ಮಾತನಾಡಲ್ಲ, ಶುದ್ಧ ರಾಜಕಾರಣಿಯ ಹಾಗೆಯೇ ಮಾತನಾಡುತ್ತಾರೆ, ಆದರೆ ಅವರ ಬಾಯಲ್ಲಿ ಅಪಶಬ್ಧ ಬಂದಿದ್ದು ಕಡಿಮೆ ಎನ್ನುವುದನ್ನು ಒಪ್ಪಲೇಬೇಕು.

ಮೋದಿ ನೇತೃತ್ವದ ‘ಎನ್‌ಡಿಎ’ ಕೂಟವನ್ನು ಬ್ಯಾಟ್ಸ್‌ಮನ್ʼಗಳಿಗೆ ಹೋಲಿಸಿ, ‘ಇಂಡಿ’ ಕೂಟವನ್ನು ಬೌಲರ್‌ಗಳಿಗೆ ಹೋಲಿಸಿ ಕಾಲ್ಪನಿಕವಾಗಿ ಮಾತನಾಡುವುದಾದರೆ, ಬ್ಯಾಟ್ಮನ್‌ ಗಳಿಗೆ ಅನುಕೂಲವಾಗುವ ಅಂಕಣದಲ್ಲಿ, ಬೌಲರ್‌ಗಳ ಜವಾಬ್ದಾರಿ ಹೆಚ್ಚಾಗಿರುತ್ತದೆ, ನಿಖರವಾದ ಲೈನ್ ಮತ್ತು ಲೆಂಥ್ ಕಾಪಾಡಿಕೊಳ್ಳಬೇಕು, ವೇಗದಲ್ಲಿ ಆಗಾಗ ವ್ಯತ್ಯಾಸ ಮಾಡಬೇಕು, ಬ್ಯಾಟ್ಸ್‌ಮನ್‌ನ ‘ಮೈಂಡ್ ರೀಡ್’ ಮಾಡಬೇಕು ಇತ್ಯಾದಿ. ಅಂತೂ ಬ್ಯಾಟ್ಸ್‌ ಮನ್ ತಪ್ಪು ಮಾಡುವಂತೆ ಪ್ರಚೋದಿಸುತ್ತಿರಬೇಕಾಗುತ್ತದೆ,

ಫ್ಲಾಟ್ ಟ್ರಾಕ್ ನಲ್ಲಿ ಆಗ ಮಾತ್ರ ವಿಕೆಟ್ ಪಡೆಯುವ ಅವಕಾಶವಾಗುತ್ತದೆ, ಅದಲ್ಲದೇ, ಓವರಿಗೆ ಮೂರು ವೈಡ್, ಎರಡು ನೋಬಾಲ್ ಮಾಡಿದರೆ ಕಥೆ ಮುಗಿಯಿತು ಎಂತಲೇ ಅರ್ಥ. ಮೊದಲೇ ಬ್ಯಾಟಿಂಗ್ ಪಿಚ್, ಧುರಂಧರ ಬ್ಯಾಟ್ಸ್‌ಮನ್‌ಗಳು, ಅಂದ ಮೇಲೆ ಕೇಳಬೇಕೆ? ಅವರಿಗೆ ಹಬ್ಬದೂಟ ಬಡಿಸಿದಂತಾಗುತ್ತದೆ ಅಷ್ಟೇ.

ತಲೆಬುಡವಿಲ್ಲದ, ತಮ್ಮ ಮನೆಯನ್ನೇ ಕೆಡಿಸುವ ಕಾಂಗ್ರೆಸ್‌ಗರ ಇಂಥಾ ಮಾತುಗಳನ್ನು ವೈಡ್, ನೋಬಾಲಿಗೆ ಹೋಲಿಸಬಹುದು. ಎದುರಾಳಿಯನ್ನು ಔಟ್ ಮಾಡುವ ಮಾತು ಒತ್ತಟ್ಟಿಗಿರಲಿ, ಅವರಿಗೆ ಒಂದು ಹೆಚ್ಚುವರಿ ಬಾಲ್ ಮತ್ತು ರನ್ ಸಿಕ್ಕಿದ ಹಾಗಾಗುತ್ತದೆ, ನೋಬಾಲ್ ಆದ್ರಂತೂ ಫ್ರೀ ಹಿಟ್ ಬೇರೆ ಸಿಗುತ್ತೆ.

ಖರ್ಗೆಯವರು, ರಾಹುಲ್ ಗಾಂಧಿ ಒಟ್ಟಾರೆ ಕಾಂಗ್ರೆಸ್ ಇದೇ ಥರದ ಅನಗತ್ಯ ಮಾತುಗಳ ನ್ನಾಡಿ ಮೊದಲೇ ಸೋಲಿಲ್ಲದ ಸರದಾರನಂತೆ ಮೆರೆಯುತ್ತಿರುವ ಬಿಜೆಪಿಯನ್ನು ಅನಾಯಾಸವಾಗಿ ವಿರೋಧಿಗಳೇ ಗೆಲ್ಲಿಸುತ್ತಿದ್ದಾರೇನೋ ಅನಿಸುತ್ತಿದೆ. ಇಂದು, ಅರಿಯದವ ರಿಂದಲೇ ತುಂಬಿ ತುಳುಕುತ್ತಿರುವ ಕಾಂಗ್ರೆಸ್‌ಗೆ ಹಿರಿಯರಾದ ಖರ್ಗೆಯವರು ಉತ್ತಮ ದಾರಿದೀಪವಾಗಬಹುದು ಎಂದುಕೊಂಡರೆ, ಖರ್ಗೆಯವರು ಅಸಂಗತ ಮಾತನಾಡುವು ದರಲ್ಲಿ ರಾಹುಲ್ ಗಾಂಧಿಯನ್ನೂ ಮೀರಿಸುವ ಹಾಗೆ ಕಾಣುತ್ತಿದೆ.

ಮಾತನಾಡುವ ಮಲ್ಲಿಕಾರ್ಜುನ ಖರ್ಗೆಯವರಿಗಿಂತ, ಮೌನವಾಗಿರುತ್ತಿದ್ದ ಮನಮೋಹನ ಸಿಂಗರೇ ಲೇಸಾಗಿತ್ತೇನೋ ಎನಿಸುತ್ತಿದೆ. ಹಾಗಂತ ಮೌನ ಎನ್ನುವುದು ಮಾತನಾಡದೇ ಇರುವ ಸ್ಥಿತಿ ಮಾತ್ರ ಅಲ್ಲ, ಅಂತಃಕರಣವೂ ನಿಶ್ಚಲ ನೀರಿನಂತೆ ಪ್ರಶಾಂತವಾಗಿರುವ ಸ್ಥಿತಿಯಾಗಿದೆ. ‘ಮಾತನಾಡದ, ಮನಸಿಗಂಟದ, ಆತುಮನೆ ತಾನಾಗಿ ಭಾವಿಸಿ, ಮಾತು ಮಿತವಾಗಿರುತ ಮಾತಾಡಿದೆನು ಯೆಂಬುದೂ, ಮಾತನಾಡಲೆಯಿಲ್ಲವೆಂಬೀ ಮಾತಡಗಿ, ಹೃದಯದೊಳಗಾತ್ಮಜ್ಯೋತಿಯ ಸುಧಾ ರಸದಿ ಬೆರೆಸುವುದೇ ಮೌನವೆನಿಸುವುದು’ ಎಂದು ಕನ್ನಡದ ಕವಿಯೊಬ್ಬ ಅರ್ಥವತ್ತಾಗಿ ಮೌನವನ್ನು ವರ್ಣಿಸುತ್ತಾನೆ.

ಮೌನದ ಈ ವ್ಯಾಖ್ಯೆಯಲ್ಲಿ ಮಿತವಾದ ಮಾತಿಗೆ ಅವಕಾಶವಿದೆ. ಇರಲಿ, ಮಾತಿನ ಕುರಿತೊಂದಿಷ್ಟು ಮಾತುಗಳನ್ನು ಕೇಳಿದ್ದಾಯಿತು. ಈ ಎಲ್ಲ ಮಾತು ಕಥೆಗಳಿಂದ ನಾವು ಏನು ಕಲಿಯಬೇಕು ಅಂತ ಕೇಳಿದರೆ, ಕೆಲವರ ಮಾತುಗಳಿಂದ ಹೇಗೆ ಆಡಬೇಕು ಎನ್ನುವು ದನ್ನು ಕಲಿತರೆ, ಇನ್ನು ಕೆಲವರಿಂದ ಹೇಗೆ ಆಡಬಾರದು ಎನ್ನುವುದನ್ನು ಕಲಿಯಬಹು ದಾಗಿದೆ.