ʻಮಹಾನ್ ಕಿಲಾಡಿʼ ರಿಯಾಲಿಟಿ ಶೋ ಮೂಲಕ ಎಂಟ್ರಿ ಕೊಟ್ಟ ʻಕಾಮಿಡಿ ಕಿಲಾಡಿಗಳುʼ ಖ್ಯಾತಿಯ ಮಿಂಚು; ಜಡ್ಜ್ ಸ್ಥಾನದಲ್ಲಿ ಗಣೇಶ್ ಸಹೋದರ ಮಹೇಶ್ ಕೃಷ್ಣ
'ಕಾಮಿಡಿ ಕಿಲಾಡಿಗಳು' ಖ್ಯಾತಿಯ ಮಿಂಚು ಸಾರಥ್ಯದಲ್ಲಿ 'ಮಹಾನ್ ಕಿಲಾಡಿ' ಎಂಬ ಹೊಸ ರಿಯಾಲಿಟಿ ಶೋ ಅಧಿಕೃತವಾಗಿ ಸಜ್ಜಾಗಿದ್ದು, ಇದರ ಪೋಸ್ಟರ್ ಹಾಗೂ ಟ್ರೇಲರ್ ಲೋಕಾರ್ಪಣೆಗೊಂಡಿದೆ. ಚಿತ್ರರಂಗದಲ್ಲಿ ಅವಕಾಶ ವಂಚಿತರಾದಾಗ ಧೃತಿಗೆಡದೆ ಮಿಂಚು ಈ ವೇದಿಕೆ ಸೃಷ್ಟಿಸಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಸಹೋದರ ಮಹೇಶ್ ಕೃಷ್ಣ ಜಡ್ಜ್ ಆಗಿರುವ ಈ ಶೋ ಶೀಘ್ರದಲ್ಲೇ ಯೂಟ್ಯೂಬ್‌ನಲ್ಲಿ ಪ್ರಸಾರವಾಗಲಿದೆ.
-
ಪ್ರತಿಭೆ ಎಂಬುದು ಯಾರೊಬ್ಬರ ಸ್ವತ್ತಲ್ಲ ಎಂಬುದನ್ನು ಸಾಬೀತುಪಡಿಸಲು ಹಾಗೂ ರಾಜ್ಯದ ಮೂಲೆ ಮೂಲೆಯ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಲು ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಮಿಂಚು ಸಾರಥ್ಯದಲ್ಲಿ ಹೊಸ ರಿಯಾಲಿಟಿ ಶೋ ಸಜ್ಜಾಗಿದೆ. ʻಟ್ಯಾಲೆಂಟ್ ನಿಮ್ಮದು ವೇದಿಕೆ ನಮ್ಮದು’ ಎಂಬ ಅಡಿಬರಹದೊಂದಿಗೆ ಮೂಡಿಬರುತ್ತಿರುವ ‘ಮಹಾನ್ ಕಿಲಾಡಿ’ ರಿಯಾಲಿಟಿ ಶೋನ ಪೋಸ್ಟರ್, ಟೈಟಲ್ ಸಾಂಗ್ ಹಾಗೂ ಟ್ರೇಲರ್ ಇತ್ತೀಚೆಗಷ್ಟೇ ಅದ್ಧೂರಿಯಾಗಿ ಲೋಕಾರ್ಪಣೆಗೊಂಡಿತು.
ವಿಧಾನ ಪರಿಷತ್ ಸದಸ್ಯರಾದ ಟಿ. ಶರವಣ, ಉದ್ಯಮಿಗಳಾದ ಡಾ. ಎನ್. ನರಸಿಂಹಮೂರ್ತಿ, ಶ್ರೀಕಾಂತ್, ಡಾ. ಮೋಕ್ಷಗೊಂಡ ಗುರೂಜಿ ಹಾಗೂ ಶ್ರೀ ಭಾರ್ಗವ ಅವರು ಕಾರ್ಯಕ್ರಮಕ್ಕೆ ಅಧಿಕೃತವಾಗಿ ಚಾಲನೆ ನೀಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಈ ವೇಳೆ ಮಾತನಾಡಿದ ಎಂಎಲ್‌ಸಿ ಶರವಣ, ಕಲಾವಿದರ ಶ್ರಮ ಹಾಗೂ ಹೊಸ ಪ್ರಯತ್ನವನ್ನು ಶ್ಲಾಘಿಸಿ, ಇಂತಹ ಪ್ರತಿಭೆಗಳು ಮುಂಚೂಣಿಗೆ ಬರಬೇಕು. ಈ ಶೋಗೆ ಸರ್ಕಾರದಿಂದಲೂ ಅನುದಾನ ದೊರೆಯುವಂತೆ ಮಾಡಲು ಶಿಫಾರಸ್ಸು ಮಾಡುವುದಾಗಿ ಭರವಸೆ ನೀಡಿದರು.
Jagappa: ಗಿಲ್ಲಿ ನಟ ನೋಡಿ ನಾನೇನು ಉರ್ಕೊಂಡಿಲ್ಲ; 'ಕಾಮಿಡಿ ಕಿಲಾಡಿಗಳು' ಖ್ಯಾತಿಯ ಜಗ್ಗಪ್ಪ
ಅವಕಾಶಕ್ಕಾಗಿ ಕಾಯದೆ ತಾವೇ ವೇದಿಕೆ ಸೃಷ್ಟಿಸಿದ ಮಿಂಚು
ರಿಯಾಲಿಟಿ ಶೋನ ಮುಖ್ಯ ರೂವಾರಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಿಂಚು ಮಾತನಾಡಿ, "ಕೆಲವು ಕಾರಣಗಳಿಂದ ಚಿತ್ರರಂಗದಲ್ಲಿ ಅವಕಾಶಗಳು ಸಿಗದೇ ಇದ್ದಾಗ, ಕೈಕಟ್ಟಿ ಕೂರದೆ ನನ್ನ ಅವಕಾಶವನ್ನು ನಾನೇ ಸೃಷ್ಟಿಸಿಕೊಳ್ಳಬೇಕು ಅಂದುಕೊಂಡೆ. ನಾನು ಕಲಿತ ಕಲೆಯನ್ನು ಬೇರೆಯವರಿಗೂ ಹೇಳಿಕೊಡಬೇಕೆಂಬ ನನ್ನ ಆಲೋಚನೆಗೆ ಗೆಳೆಯ ಪ್ರವೀಣ್ ಗಸ್ತಿ ಬೆನ್ನೆಲುಬಾಗಿ ನಿಂತರು. ಕಡಿಮೆ ಬಜೆಟ್‌ನಲ್ಲಿ ಆರಂಭವಾದ ಈ ಕನಸು ಇಂದು ದೊಡ್ಡದಾಗಿ ಬೆಳೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಜಾಹೀರಾತು ನೀಡಿದಾಗ ರಾಜ್ಯಾದ್ಯಂತ 1000ಕ್ಕೂ ಹೆಚ್ಚು ಆಕಾಂಕ್ಷಿಗಳು ಬಂದಿದ್ದರು. ಮೂರು ಹಂತಗಳ ಆಡಿಷನ್ ನಡೆಸಿ, ಅಂತಿಮವಾಗಿ 22 ಅತ್ಯುತ್ತಮ ಪ್ರತಿಭೆಗಳನ್ನು ಆಯ್ಕೆ ಮಾಡಿದ್ದೇವೆ. ಇವರಿಗೆ 7 ವಾರಗಳ ಕಾಲ ಪರಿಣಿತರಿಂದ ವಿಶೇಷ ತರಬೇತಿ ನೀಡಿ ಕ್ಯಾಮೆರಾ ಮುಂದೆ ನಿಲ್ಲಿಸಲಾಗಿದೆ" ಎಂದು ಹರ್ಷ ವ್ಯಕ್ತಪಡಿಸಿದರು.
ಗಣೇಶ್ ಸಹೋದರ ಮಹೇಶ್ ಕೃಷ್ಣ ಜಡ್ಜ್
ಈ ರಿಯಾಲಿಟಿ ಶೋಗೆ ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರ ಸಹೋದರ ಮಹೇಶ್ ಕೃಷ್ಣ, ಮಿಂಚು ಹಾಗೂ ಪ್ರವೀಣ್ ಗಸ್ತಿ ಗೋಕಾಕ್ ತೀರ್ಪುಗಾರರಾಗಿ ಜವಾಬ್ದಾರಿ ನಿಭಾಯಿಸಲಿದ್ದಾರೆ. ಇನ್ನುಳಿದಂತೆ ಕಿರಣ್‌ಕುಮಾರ್ ನಿರ್ದೇಶನದ ಹೊಣೆ ಹೊತ್ತಿದ್ದರೆ, ಚಿದಂಬರ ಪೂಜಾರಿ ಮೆಂಟರ್ ಆಗಿ, ಶ್ರೀ ಪಲ್ಲವಿ ಸ್ಕ್ರಿಪ್ಟ್ ರೈಟರ್ ಆಗಿ ಹಾಗೂ ದಿಲೀಪ್ ಕುಮಾರ್ ಎಚ್. ಆರ್. ಕ್ರಿಯೇಟಿವ್ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪುಟ್ಟರಾಜು ಡಿಜಿಟಲ್ ಪ್ರಮೋಟರ್ ಆಗಿ ಸಾಥ್ ನೀಡಿದ್ದಾರೆ.
Comedy Khiladigalu: ಝೀ ಕನ್ನಡದಲ್ಲಿ ವೀಕ್ಷಕರಿಗೆ ನಗೆಯ ರಸ ದೌತಣ: ಕಾಮಿಡಿ ಕಿಲಾಡಿಗಳು ಶೋ ಶೀಘ್ರದಲ್ಲೇ ಪ್ರಾರಂಭ!
ಯೂಟ್ಯೂಬ್‌ನಲ್ಲಿ ಪ್ರಸಾರವಾಗಲಿದೆ ಈ ಶೋ
ಅಕ್ಷರ ಸ್ಟುಡಿಯೋದ ಗೌರಿಪ್ರಸಾದ್ ಅವರ ಸಹಕಾರದಲ್ಲಿ ಶೋ ಚಿತ್ರೀಕರಣಗೊಂಡಿದ್ದು, ಅಕ್ಷಯ್ ಮೊಕಾಶಿ ಛಾಯಾಗ್ರಹಣ ಹಾಗೂ ಸುನಿಲ್-ಸುರೇಶ್ ಅವರ ಸಂಕಲನ ಈ ಶೋಗೆ ಇದೆ. ಜೂನ್ 13 ರಿಂದ ಶೋನ ಶೀರ್ಷಿಕೆ ಹಾಡು ಅಧಿಕೃತವಾಗಿ ಹೊರಬರಲಿದ್ದು, ಮುಂದಿನ ದಿನಗಳಲ್ಲಿ ಪ್ರತಿ ಶುಕ್ರವಾರ ಮತ್ತು ಶನಿವಾರದಂದು ಒಂದು ಗಂಟೆಯ ಕಾಲ ʻಮಿಂಚು ಎಂಟರ್‌ಟೈನ್‌ಮೆಂಟ್ಸ್ ಯೂಟ್ಯೂಬ್’ ಚಾನೆಲ್‌ನಲ್ಲಿ ಈ ಮಹಾನ್ ಕಿಲಾಡಿ ಶೋ ಪ್ರಸಾರವಾಗಲಿದೆ. ಈಗಾಗಲೇ ಕೆಲವು ಪ್ರಮುಖ ವಾಹಿನಿ ಹಾಗೂ ಓಟಿಟಿ ಸಂಸ್ಥೆಗಳು ಈ ಶೋ ಪ್ರಸಾರ ಮಾಡಲು ಆಸಕ್ತಿ ತೋರಿಸಿದ್ದು, ವಿಜೇತರಿಗೆ ಸಿಗುವ ನಗದು ಬಹುಮಾನದ ವಿವರಗಳನ್ನು ಶೀಘ್ರದಲ್ಲೇ ಪ್ರಕಟಿಸುವುದಾಗಿ ತಂಡ ಪ್ರಕಟಿಸಿದೆ.