ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ್​ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishweshwar Bhat Column: ಆತ್ಮಹತ್ಯೆಯಲ್ಲೂ ಮುಂದು

ಜಪಾನಿನಲ್ಲಿ ಜನರ ದೈನಂದಿನ ನಡವಳಿಕೆಯ ಮೇಲೆ ಹೆಚ್ಚು ಪ್ರಭಾವ ಬೀರುವ ಧರ್ಮವೆಂದರೆ ಶಿಂಟೋ. ಈ ಧರ್ಮದ ಪ್ರಕಾರ, ನೀವು ಎಲ್ಲ ಸಮಯದಲ್ಲೂ ‘ಸರಿಯಾದ, ಸೈ ಎನಿಸಿಕೊಳ್ಳುವ’ ಕೆಲಸ ವನ್ನೇ ಮಾಡಬೇಕು ಮತ್ತು ದೈನಂದಿನ ಜೀವನದಲ್ಲಿ ‘ನಿಗದಿತ ಮಾರ್ಗ’ವನ್ನೇ ಅನುಸರಿಸಬೇಕು. ಇದಕ್ಕೆ ಸ್ವಲ್ಪ ಧಕ್ಕೆ ಯಾದರೂ ಅವರು ಆತ್ಮಹತ್ಯೆಗೆ ಮುಂದಾಗುತ್ತಾರೆ

ಆತ್ಮಹತ್ಯೆಯಲ್ಲೂ ಮುಂದು

ಸಂಪಾದಕರ ಸದ್ಯಶೋಧನೆ

ಜಪಾನ್ ಅತ್ಯಂತ ಅಭಿವೃದ್ಧಿ ಹೊಂದಿದ ದೇಶವಾಗಿದ್ದರೂ, ಆತ್ಮಹತ್ಯೆ ಪ್ರಕರಣಗಳಲ್ಲಿ ವಿಶ್ವದ ಗಮನ ಸೆಳೆಯುವ ಮಟ್ಟಿಗೆ ಉನ್ನತ ಸ್ಥಾನದಲ್ಲಿದೆ. ಮುಂದುವರಿದ ದೇಶಗಳ ಪೈಕಿ ಅತ್ಯಧಿಕ ಆತ್ಮಹತ್ಯೆಯ ಪ್ರಮಾಣವನ್ನು ಹೊಂದಿದ ಮತ್ತು ವಿಶ್ವದ ಎಲ್ಲ ದೇಶಗಳಲ್ಲಿ ನಾಲ್ಕನೇ ಅತಿ ಹೆಚ್ಚು ಆತ್ಮಹತ್ಯೆ ದರವನ್ನು ಹೊಂದಿದ ದೇಶವಾಗಿದೆ. ಇದಕ್ಕೆ ಕಾರಣಗಳು ಇಲ್ಲದಿಲ್ಲ. ಇದರ ಹಿಂದೆ ಹಲವು ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಮತ್ತು ವೈಯಕ್ತಿಕ ಕಾರಣಗಳಿವೆ. ಜಪಾನಿನಲ್ಲಿ ಜನರ ದೈನಂದಿನ ನಡವಳಿಕೆಯ ಮೇಲೆ ಹೆಚ್ಚು ಪ್ರಭಾವ ಬೀರುವ ಧರ್ಮವೆಂದರೆ ಶಿಂಟೋ. ಈ ಧರ್ಮದ ಪ್ರಕಾರ, ನೀವು ಎಲ್ಲ ಸಮಯದಲ್ಲೂ ‘ಸರಿಯಾದ, ಸೈ ಎನಿಸಿಕೊಳ್ಳುವ’ ಕೆಲಸವನ್ನೇ ಮಾಡಬೇಕು ಮತ್ತು ದೈನಂದಿನ ಜೀವನದಲ್ಲಿ ‘ನಿಗದಿತ ಮಾರ್ಗ’ವನ್ನೇ ಅನುಸರಿಸಬೇಕು. ಇದಕ್ಕೆ ಸ್ವಲ್ಪ ಧಕ್ಕೆ ಯಾದರೂ ಅವರು ಆತ್ಮಹತ್ಯೆಗೆ ಮುಂದಾಗುತ್ತಾರೆ. ಪ್ರಾಚೀನ ಕಾಲದಲ್ಲಿ, ಸಮುರೈ ಯೋಧರು ತಮ್ಮ ಮಾನವನ್ನು ಕಾಪಾಡಿಕೊಳ್ಳಲು ‘ಸೆಪ್ಪುಕು’ ಅಥವಾ ‘ಹರಾಕಿರಿ’ ಎಂಬ ಆತ್ಮಹತ್ಯಾ ವಿಧಾನ ವನ್ನು ಅನುಸರಿಸುತ್ತಿದ್ದರು. ಇದು ಅಪಮಾನ ಅಥವಾ ಸೋಲಿನ ನಂತರ ಮಾನವಿಲ್ಲದ ಬದುಕನ್ನು ತಿರಸ್ಕರಿಸುವ ವಿಧಾನ ಎಂದು ಭಾವಿಸಿದ್ದರು.

ಇದನ್ನೂ ಓದಿ: Vishweshwar Bhat Column: ನಗುವಾಗ ಬಾಯಿ ಮುಚ್ಚಿ

ಸಮುರೈ ಯೋಧನು ಮುಖ್ಯವಾದ ಕಾರ್ಯಾಚರಣೆಯಲ್ಲಿ ವಿಫಲನಾದರೆ, ಅವನು ತನ್ನ ಮೇಲಧಿಕಾರಿಗೆ ಮುಖ ತೋರಿಸುತ್ತಿರಲಿಲ್ಲ. ನೇರವಾಗಿ ಹೋಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದ. ಹಲವು ಶತಮಾನಗಳಿಂದ ಜಪಾನಿನ ಮನಸ್ಸು ಗಳ ಮೇಲೆ ಬೀರಿದ ಪರಿಣಾಮ ಈಗಲೂ ಮುಂದು ರಿದುಕೊಂಡು ಬಂದಿದೆ.

ಇದರಿಂದ ಆತ್ಮಹತ್ಯೆ ತಪ್ಪು ಎಂದು ನೋಡದ ಒಂದು ಮನೋಭಾವ ಇಂದಿಗೂ ಉಳಿದು ಕೊಂಡಿದೆ. ಜಪಾನಿನ ಸಮಾಜವು ಶಿಸ್ತಿನತ್ತ ಮತ್ತು ನೈತಿಕತೆಯತ್ತ ಹೆಚ್ಚು ಒಲವು ಹೊಂದಿರುವುದು ಖಚಿತ. ಆದರೆ ಇದೇ ಶಿಸ್ತಿನ ವ್ಯವಸ್ಥೆ ಕೆಲವರಿಗೆ ತೀವ್ರ ಒತ್ತಡವನ್ನು ಉಂಟುಮಾಡುತ್ತಿದೆ.

ವಿದ್ಯಾರ್ಥಿಗಳಿಂದ ಆರಂಭಿಸಿ ಉದ್ಯೋಗಸ್ಥರ ತನಕ, ಪ್ರತಿಯೊಬ್ಬ ವ್ಯಕ್ತಿಯೂ ತಮ್ಮ ಪಾತ್ರವನ್ನು ನಿಭಾಯಿಸಬೇಕಾದರೆ ಅತ್ಯಧಿಕ ನಿರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ಶೈಕ್ಷಣಿಕ ಸಾಧನೆಗಾಗಿ, ಉದ್ಯೋಗಸ್ಥರಿಗೆ ಕಂಪನಿಗಳಲ್ಲಿ ನಂಬಿಕೆಯನ್ನು ಉಳಿಸಿಕೊಳ್ಳಲು ಒತ್ತಡ ಇರುತ್ತದೆ. ಇದನ್ನು ಅವರು ‘ಕಾರೋಶಿ’ ಎಂದು ಕರೆಯುತ್ತಾರೆ. ಅಂದರೆ ‘ಒತ್ತಡದಿಂದಾಗುವ ಮರಣ ಅಥವಾ ‘ಹೆಚ್ಚು ಕೆಲಸದಿಂದಾಗುವ ಸಾವು’ ಎಂದರ್ಥ.

ಅನೇಕರು ಕೆಲಸದ ಒತ್ತಡ, ನಿದ್ರೆಯ ಕೊರತೆ, ಮಾನಸಿಕ ಖಿನ್ನತೆ ಮತ್ತು ಇತರ ಆರೋಗ್ಯ ಸಮಸ್ಯೆ ಗಳಿಂದ ಬಳಲುತ್ತಾರೆ. ಈ ಪರಿಸ್ಥಿತಿಯಲ್ಲಿ ಆತ್ಮಹತ್ಯೆಗೆ ಶರಣಾಗುತ್ತಾರೆ. 1990ರ ದಶಕದ ನಂತರ, ಜಪಾನಿನಲ್ಲಿ ಆರ್ಥಿಕ ಬೆಳವಣಿಗೆ ಸ್ಥಗಿತಗೊಂಡಾಗ, ಕಂಪನಿಗಳ ಮುಚ್ಚುವಿಕೆ, ಉದ್ಯೋಗ ಕಳೆದು ಕೊಳ್ಳುವುದು ಮತ್ತು ಸಾಲದ ಬಾಧೆಗಳು ಕೆಲವರಿಗೆ ಆತ್ಮಹತ್ಯೆಯೆಡೆ ಪ್ರಚೋದಿಸಿತು.

ಕುಟುಂಬದಲ್ಲಿ ತಂದೆಗೆ ಸಾಲವನ್ನು ಮರುಪಾವತಿಸಲು ಅಥವಾ ತನ್ನ ಮಗನ ವಿದ್ಯಾಭ್ಯಾಸ ಅಥವಾ ಮಗಳ ಮದುವೆಯ ವೆಚ್ಚವನ್ನು ಭರಿಸಲು ಸಾಧ್ಯವಾಗದಿದ್ದರೆ, ಜೀವ ವಿಮೆಯಿಂದ ಹಣವನ್ನು ಪಡೆಯಲು ಆತ್ಮಹತ್ಯೆಯ ದಾರಿ ಹಿಡಿಯುತ್ತಿರುವುದು ವಾಸ್ತವ. ಮತ್ತೊಂದೆಡೆ, ಕಂಪನಿಯೊಂದರಲ್ಲಿ ಕೆಲಸ ಮಾಡುವಾಗ ತುಂಬಾ ಗಂಭೀರವಾದ ತಪ್ಪನ್ನು ಮಾಡಿದರೆ, ಜಪಾನಿ ಯರು ತೆಗೆದುಕೊಳ್ಳುವ ಆಯ್ಕೆಗಳಲ್ಲಿ ಮುಖ್ಯವಾದುದು ಆತ್ಮಹತ್ಯೆ.

ಇತ್ತೀಚಿನ ಕಾಲದಲ್ಲಿ ಜಪಾನಿನಲ್ಲಿ ‘ಹಿಕಿಕೊಮೋರಿ’ ಎಂಬ ಪರಿಕಲ್ಪನೆ ಹೆಚ್ಚು ಕಾಣಿಸುತ್ತಿದೆ. ಅಂದರೆ, ಯುವಕ-ಯುವತಿಯರು ಸಮಾಜದಿಂದ, ಎಲ್ಲರಿಂದ ದೂರವಿದ್ದು ಏಕಾಂಗಿ ಜೀವನ ನಡೆಸುವುದು. ಈ ಒಂಟಿತನ ಮತ್ತು ಯಾರೊಂದಿಗೂ ಬೆರೆಯದ ಭಾವನೆ ಆತ್ಮಹತ್ಯೆಗೆ ಪ್ರೇರಣೆ ಯಾಗಿ ಪರಿಣಮಿಸುತ್ತಿದೆ. ಜತೆಗೆ, ಹಿರಿಯ ನಾಗರಿಕರಲ್ಲೂ ಆತ್ಮಹತ್ಯೆಯ ಪ್ರಮಾಣ ಹೆಚ್ಚುತ್ತಿದೆ.

ಒಂಟಿತನ, ಆರೋಗ್ಯ ಸಮಸ್ಯೆ, ಮಕ್ಕಳಿಂದ ದೂರ ಇರುವ ಸ್ಥಿತಿ ಅವರಲ್ಲಿ ಆತ್ಮಹತ್ಯೆಗೆ ಪ್ರಚೋದನೆ ಉಂಟುಮಾಡಬಹುದು. ಇತ್ತೀಚಿನ ದಿನಗಳಲ್ಲಿ, ಸಾಮಾಜಿಕ ಮಾಧ್ಯಮದ ಪ್ರಭಾವವೂ ಗಮನಾರ್ಹ. ಸಾಮಾಜಿಕ ಜಾಲತಾಣಗಳಲ್ಲಿ ಉಂಟಾಗುವ ಕಿರುಕುಳ (cyberbullying), ತಾರತಮ್ಯ ಮತ್ತು ಮೂದಲಿಕೆಗಳು ಕೆಲವರಲ್ಲಿ ಹತಾಶ ಭಾವನೆ ಮಾಡಿಸುತ್ತಿವೆ. ಕೆಲವರು ಆತ್ಮಹತ್ಯೆಯ ಯೋಜನೆಗಳನ್ನು ಆನ್‌ಲೈನ್‌ನಲ್ಲಿ ಹಂಚಿಕೊಳ್ಳುವ ಮೂಲಕ ಇತರರಿಗೂ ಪ್ರೇರಣೆಯಾಗುತ್ತಿದ್ದಾರೆ.

ಜಪಾನ್ ಸರಕಾರವು ಈ ಗಂಭೀರ ಸಮಸ್ಯೆಯನ್ನು ತಡೆಗಟ್ಟಲು ಹಲವು ಕ್ರಮಗಳನ್ನು ಕೈಗೊಂಡಿದೆ. ‘ಗೇಟ್‌ಕೀಪರ್’ ತರಬೇತಿ ಯೋಜನೆಗಳು, ಹಾಟ್‌ಲೈನ್‌ಗಳು, ಮನೋವೈದ್ಯಕೀಯ ಪರಿಹಾರ ಕೇಂದ್ರ ಗಳು ಮತ್ತು ಸಾರ್ವಜನಿಕ ಜಾಗೃತಿಯ ಕಾರ್ಯಕ್ರಮಗಳ ಮೂಲಕ ಆತ್ಮಹತ್ಯೆಯ ಪ್ರಮಾಣವನ್ನು ಕಡಿಮೆ ಮಾಡಲು ಪ್ರಯತ್ನಿಸಲಾಗಿದೆ.