Gubbi News: ಸರ್ಕಾರಿ ಶಾಲೆಗೆ ಕಾಂಪೌಂಡ್ ನಿರ್ಮಾಣಕ್ಕೆ ಒತ್ತಾಯಿಸಿ ಗುಬ್ಬಿ ಹಿತ ರಕ್ಷಣಾ ಸಮಿತಿ ಧರಣಿ
1952 ರಲ್ಲಿ ಮೈಸೂರು ಅರಸರಿಂದ ಆರಂಭವಾದ ಸರ್ಕಾರಿ ಈ ಶಾಲೆ ಸಾವಿರಾರು ವಿದ್ಯಾರ್ಥಿಗಳ ಶೈಕ್ಷಣಿಕ ಹಿತ ಕಾದಿದೆ. ಆದರೆ ಮೂಲಭೂತ ಅವಶ್ಯಕತೆಗಳ ಪೈಕಿ ಕಾಂಪೌಂಡ್ ಇಲ್ಲದೆ ಶಾಲಾ ಕಟ್ಟಡ ಹಾಳು ಸುರಿದಿದೆ. ಈ ತಡೆಗೋಡೆಗೆ ಹಲವು ಬಾರಿ ಸಾರ್ವಜನಿಕರು ಬೇಡಿಕೆ ಸಲ್ಲಿಸಿದ್ದರೂ ನಿರ್ಮಾಣ ಮಾಡಿಲ್ಲ

-

ಗುಬ್ಬಿ: ಅಮೃತ ಮಹೋತ್ಸವ ಆಚರಣೆಗೆ ಸಮೀಪದಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢಶಾಲೆ ಮುಂಭಾಗ ಇದ್ದ ಕಾಂಪೌಂಡ್ ಬಿದ್ದು 20 ವರ್ಷ ಕಳೆದರೂ ಯಾವ ಜನಪ್ರತಿನಿಧಿ ಇತ್ತ ಕಡೆ ಗಮನಹರಿಸಿದ ಹಿನ್ನಲೆ ಗುಬ್ಬಿ ಪಟ್ಟಣ ಹಿತ ರಕ್ಷಣಾ ಸಮಿತಿ ವತಿಯಿಂದ ಇದೇ ತಿಂಗಳ 23 ರಂದು ಧರಣಿ ನಡೆಸಿ ಸಾರ್ವಜನಿಕರ ಗಮನ ಸೆಳೆಯಲಿದೆ ಎಂದು ಹಿತ ರಕ್ಷಣಾ ಸಮಿತಿಯ ಅಧ್ಯಕ್ಷ ಎಚ್.ಡಿ.ಯಲ್ಲಪ್ಪ ತಿಳಿಸಿದರು.
ಇದನ್ನೂ ಓದಿ: Gubbi News: ಪ್ರಜಾ ಸಂಗ್ರಾಮ ಕೋ-ಆಪರೇಟಿವ್ ಸೊಸೈಟಿ ವತಿಯಿಂದ ಷೇರು ಪ್ರಮಾಣ ಪತ್ರ ವಿತರಣೆ
ಪಟ್ಟಣದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು 1952 ರಲ್ಲಿ ಮೈಸೂರು ಅರಸರಿಂದ ಆರಂಭವಾದ ಸರ್ಕಾರಿ ಈ ಶಾಲೆ ಸಾವಿರಾರು ವಿದ್ಯಾರ್ಥಿಗಳ ಶೈಕ್ಷಣಿಕ ಹಿತ ಕಾದಿದೆ. ಆದರೆ ಮೂಲಭೂತ ಅವಶ್ಯಕತೆಗಳ ಪೈಕಿ ಕಾಂಪೌಂಡ್ ಇಲ್ಲದೆ ಶಾಲಾ ಕಟ್ಟಡ ಹಾಳು ಸುರಿದಿದೆ. ಈ ತಡೆಗೋಡೆಗೆ ಹಲವು ಬಾರಿ ಸಾರ್ವಜನಿಕರು ಬೇಡಿಕೆ ಸಲ್ಲಿಸಿದ್ದರೂ ನಿರ್ಮಾಣ ಮಾಡಿಲ್ಲ. ಈ ನಿಟ್ಟಿನಲ್ಲಿ ದಿವ್ಯ ನಿರ್ಲಕ್ಷ್ಯ ಬಗ್ಗೆ ಸಾರ್ವಜನಿಕರ ಗಮನ ಸೆಳೆಯಲು ಅ.23 ರಂದು ಬೆಳಿಗ್ಗೆ 10 ಗಂಟೆಗೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದರು.
ರಾಷ್ಟ್ರೀಯ ಹೆದ್ದಾರಿ ಪಕ್ಕದ ಸರ್ಕಾರಿ ಕಾಲೇಜು ಮತ್ತು ಪ್ರೌಢಶಾಲೆ ಈಗಾಗಲೇ ದಾಖಲಾತಿ ಕೊರತೆ ಎದುರಿಸುತ್ತಿದೆ. ತಡೆ ಗೋಡೆ ಇಲ್ಲದೆ ಶಾಲಾ ಮೈದಾನಕ್ಕೆ ಬರುವ ಎಲ್ಲಾ ವಾಹನಗಳ ಕರ್ಕಶ ಶಬ್ದ ಮಕ್ಕಳ ಭವಿಷ್ಯಕ್ಕೆ ಪೆಟ್ಟು ನೀಡಿದೆ. ಮಕ್ಕಳಲ್ಲಿ ಏಕಾಗ್ರತೆ ಕೊರತೆಗೂ ವಾಹನಗಳ ಸಂಚಾರ ಕಾರಣವಾಗಿದೆ. ಇದೆಲ್ಲಕ್ಕೂ ಕಾಂಪೌಂಡ್ ನಿರ್ಮಾಣ ಅಗತ್ಯವಿದೆ. ಜನಪ್ರತಿನಿಧಿಗಳು ಕಾಳಜಿ ವಹಿಸಿಲ್ಲ. ಜತೆಗೆ ಶಿಕ್ಷಣ ಇಲಾಖೆ ತೋರುತ್ತಿರುವ ಜಾಣ ಮೌನ ಹಾಗೂ ಜಾಣ ಕುರುಡು ಬಗ್ಗೆ ಸಾರ್ವಜನಿಕರಿಗೆ ತಿಳಿಸುವ ನಿಟ್ಟಿನಲ್ಲಿ ಧರಣಿ ಸತ್ಯಾಗ್ರಹ ನಡೆಯಲಿದೆ. ಈ ಸಾಮಾಜಿಕ ಕಾರ್ಯಕ್ಕೆ ಸಾಮಾಜಿಕ ಸಂಘ ಸಂಸ್ಥೆಗಳು, ಹಳೇ ವಿದ್ಯಾರ್ಥಿಗಳು ಹಾಗೂ ಸಮಾಜ ಸೇವಕರು ಸಾಥ್ ನೀಡಬೇಕೆಂದು ಮನವಿ ಮಾಡಿದರು.