ಅಶ್ವತ್ಥಕಟ್ಟೆ
ranjith.hoskere@gmail.com
ಯಾವುದೇ ದೇಶದ ‘ಅಭಿವೃದ್ಧಿ’ಯ ಕೈಗನ್ನಡಿಯಾಗಿ ಆ ದೇಶದ ರಸ್ತೆಗಳಿರುತ್ತವೆ. ರಸ್ತೆಯ ಕಾಮಗಾರಿ ಯ ಮೇಲೆ ಆ ದೇಶವನ್ನು ಅಳೆಯಬಹುದು. ಆದರೆ ಕಳೆದ ಎರಡು ವಾರದಿಂದ ಕರ್ನಾಟಕದಲ್ಲಿ ಇದೇ ರಸ್ತೆ ವಿಷಯ ತೀವ್ರ ಚರ್ಚೆಗೆ ಗ್ರಾಸವಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಜನರು ರಸ್ತೆ ಗುಂಡಿಗಳ ವಿಷಯದಲ್ಲಿ ಆತಂಕ ವ್ಯಕ್ತಪಡಿಸುತ್ತಿದ್ದರೆ, ಆಡಳಿತ-ಪ್ರತಿಪಕ್ಷಗಳ ನಡುವೆ ವಾಕ್ಸಮರ ನಡೆಯುತ್ತಿರುವುದನ್ನು ಗಮನಿಸಿದ್ದೇವೆ.
ಭಾರತದಲ್ಲಿ ಯಾವುದೇ ವಿಷಯವಿರಲಿ, ಕೊನೆಗೆ ಅದು ರಾಜಕೀಯವಾಗಿಯೇ ಕೊನೆಯಾಗುವುದು ಹೊಸದೇನಲ್ಲ ಎನ್ನುವುದು ಬೇರೆ ಮಾತು. ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರಾಗಿರುವ, ಸಿಲಿಕಾನ್ ಸಿಟಿ ಸೇರಿದಂತೆ ಹತ್ತಾರು ಹೆಸರು ಪಡೆದಿರುವ ರಾಜಧಾನಿ ಬೆಂಗಳೂರಿನ ರಸ್ತೆ ವಿಷಯ ದಲ್ಲಿ ನಡೆಯುತ್ತಿರುವ ಚರ್ಚೆಗೆ ಕೊನೆಯಿಲ್ಲ ಎನ್ನುವಂತಾಗಿದೆ.
‘ಗುಂಡಿಯಿಲ್ಲದ ರಸ್ತೆ ನಿರ್ಮಿಸುವ’ ಕನಸು ಹೋಗಿ, ‘ಗುಂಡಿಯಿಲ್ಲದೇ ರಸ್ತೆ ಇಲ್ಲ’ ಎನ್ನುವ ಪರಿಸ್ಥಿತಿಯಲ್ಲಿ ಬೆಂಗಳೂರಿನ ರಸ್ತೆಗಳಿವೆ. ಇದು ಬಿಜೆಪಿ ಗುಂಡಿ, ಕಾಂಗ್ರೆಸ್ ಗುಂಡಿ ಎನ್ನುವುದು ರಾಜಕೀಯ ಹೇಳಿಕೆ ಸರಿ. ಆದರೆ ಸಾರ್ವಜನಿಕರ ದೃಷ್ಟಿಯಿಂದ ಈ ಗುಂಡಿಗಳ ವಿಷಯದಲ್ಲಿ ಎಲ್ಲ ಪಕ್ಷದವರ ಸಮಾನ ಪಾಲಿದೆ ಎನ್ನುವುದು ಸ್ಪಷ್ಟ.
ಬೆಂಗಳೂರಿನ ಗುಂಡಿಗಳ ವಿಷಯದಲ್ಲಿ ಆಗುತ್ತಿರುವ ಗಲಾಟೆ ಇಂದು ಮೊನ್ನೆಯದೇನಲ್ಲ. ಬಿಜೆಪಿ, ಕಾಂಗ್ರೆಸ್ ಅಥವಾ ಜೆಡಿಎಸ್ ಸೇರಿ ಯಾರೇ ಅಧಿಕಾರದಲ್ಲಿದ್ದರೂ ರಸ್ತೆ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಿಲ್ಲ. ಗಲಾಟೆಯಾದಾಗ, ಮಾಧ್ಯಮಗಳು ಪ್ರಶ್ನಿಸಿದಾಗ ಎರಡು ದಿನ ಗುಂಡಿ ಮುಚ್ಚುವುದಾಗಿ ಹೇಳುವ ಸರಕಾರ, ಅಧಿಕಾರಿ ವರ್ಗ ವಿಷಯದ ತೀವ್ರತೆ ತಗ್ಗಿದ ಬಳಿಕ, ಗುಂಡಿಗಳನ್ನು ಮರೆತು ಹೋಗುವುದು ಸಾಮಾನ್ಯವಾಗಿದೆ.
ಹಾಗೇ ನೋಡಿದರೆ, ಇಂದು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿರುವ ಗುಂಡಿ ಸಮಸ್ಯೆ ಕೇವಲ ಬೆಂಗಳೂರಿಗೆ ಸೀಮಿತವಾಗಿಲ್ಲ. ಕರ್ನಾಟಕದ ಹಲವು ಭಾಗಗಳಲ್ಲಿ ಈ ಸಮಸ್ಯೆಯಿದೆ. ಆದರೆ ಇಲ್ಲಿರುವ ವಿಷಯ ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುವುದರಿಂದ ಕೊಂಚ ‘ಫೋಕಸ್’ ಆಗುತ್ತಿದೆ’. ಒಂದರ್ಥದಲ್ಲಿ ಗ್ರಾಮೀಣ ಭಾಗಗಳ ರಸ್ತೆಗಳಿಗೆ ಹೋಲಿಸಿದರೆ ನಗರ ಪ್ರದೇಶದ ರಸ್ತೆಗಳೇ ಹಾಳಾಗಿ ಹೋಗಿವೆ. ಮಂಗಳೂರು, ದಾವಣಗೆರೆ, ಉತ್ತರ ಕರ್ನಾಟಕ ಭಾಗದ ಹಲವು ಜಿಲ್ಲೆಗಳಲ್ಲಿ ರಸ್ತೆಗಳಿಗಿಂತ ‘ಗುಂಡಿ’ ಕಾರುಬಾರು ಹೆಚ್ಚಾಗಿದೆ ಎನ್ನುವ ಆರೋಪವಿದೆ.
ಇದನ್ನೂ ಓದಿ: Ranjith H Ashwath Column: ಜಾತಿಗಣತಿಯೆಂಬ ಜೇನುಗೂಡು
ಈ ಮಾತು ಹೇಳುತ್ತಿದ್ದಂತೆ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಮನೆಯಿರುವ ರಸ್ತೆಯಲ್ಲಿ ಗುಂಡಿಯಿದೆ. ಮುಂಬೈನಲ್ಲಿ ಪಂಚತಾರಾ ಹೋಟೆಲ್‌ಗಳಿರುವ ರಸ್ತೆ ಮುಂದೆ ಗುಂಡಿ ಯಿದೆ ಎನ್ನುವ ಮಾತನ್ನು ಕಾಂಗ್ರೆಸಿಗರು ಹೇಳುತ್ತಾರೆ. ಆದರೆ, ದೆಹಲಿ, ಮುಂಬೈನಲ್ಲಿ ಗುಂಡಿ ಗಳಿರುವುದರಿಂದ ಕರ್ನಾಟಕದಲ್ಲಿಯೂ ಗುಂಡಿಗಳಿದ್ದರೆ ತಪ್ಪಲ್ಲ ಎನ್ನುವ ವಾದವನ್ನು ಮಾತ್ರ ಒಪ್ಪಲು ಸಾಧ್ಯವಿಲ್ಲ.
ಯಾವುದೇ ಸರಕಾರ ಅಧಿಕಾರದಲ್ಲಿದ್ದರೂ, ರಸ್ತೆ ಅಭಿವೃದ್ಧಿಗೆ ಪ್ರತಿವರ್ಷ ಸಾವಿರಾರು ಕೋಟಿ ರುಪಾಯಿಗಳನ್ನು ಖರ್ಚು ಮಾಡಲಾಗುತ್ತದೆ. ಆದರೆ ಪ್ರತಿ ಮಳೆಗಾಲದ ಸಮಯದಲ್ಲಿ ಗುಂಡಿ ಸಮಸ್ಯೆಬಗ್ಗೆ ಭುಗಿಲೇಳುವ ವಿವಾದ ಮಾತ್ರ ಅಂತ್ಯವಾಗಿಲ್ಲ.
ಕಾಂಗ್ರೆಸ್ ಸರಕಾರದ ವಿರುದ್ಧ ರಾಜ್ಯಾದ್ಯಂತ ಹೋರಾಟ ನಡೆಸುತ್ತಿರುವ ಬಿಜೆಪಿಗರ ಅವಽಯಲ್ಲಿನ ಪರಿಸ್ಥಿತಿಯೂ ಭಿನ್ನವಾಗಿರಲಿಲ್ಲ. ಬೆಂಗಳೂರಿನ ಹಿರಿಯ ಸಚಿವ ರಾಮಲಿಂಗಾರೆಡ್ಡಿ ಅವರು ಕಳೆದ ವಾರ ನೀಡಿದ್ದ ಅಂಕಿ-ಅಂಶದ ಪ್ರಕಾರ 2019ರ ಬಿಜೆಪಿ ಅವಧಿಯಲ್ಲಿ ಬೆಂಗಳೂರಿನ ರಸ್ತೆ ಗುಂಡಿ ಗಳನ್ನು ಮುಚ್ಚಲು 6116 ಕೋಟಿ ಅನುದಾನ ಕೊಡಲಾಗಿತ್ತು. ಅದರಲ್ಲಿ ಬಿಜೆಪಿ ಭಾಗದ ಶಾಸಕರ ಕ್ಷೇತ್ರಗಳಿಗೆ 3346 ಕೋಟಿ ನೀಡಲಾಗಿದೆ.
ಅಲ್ಲಿಂದ ಮೂರು ವರ್ಷ ವಿವಿಧ ಹಂತದಲ್ಲಿ ರಸ್ತೆ ಅಭಿವೃದ್ಧಿಗೆ ಅನುದಾನವನ್ನು ಬಿಡುಗಡೆ ಮಾಡಿಕೊಂಡೇ ಬಂದಿವೆ. ಆದರೂ ಗುಂಡಿಗಳಿಗೆ ಮಾತ್ರ ಮುಕ್ತಿ ಸಿಕ್ಕಿಲ್ಲ. ಅಂದರೆ ಬಿಜೆಪಿ ಸರಕಾರದ ಅವಧಿಯಲ್ಲಿ ರಸ್ತೆಗಳು ಯಾವ ಗುಣಮಟ್ಟದಲ್ಲಿ ಮಾಡಲಾಗಿದೆ? ಇದೇ ಗುಂಡಿ ಸಮಸ್ಯೆಗೆ ಈ ಹಿಂದೆ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದಾಗ ಗುಂಡಿಗಳಿಂದಾಗಿ ಅಪಘಾತದಲ್ಲಿ 17 ಜನ ಮೃತಪಟ್ಟಿದ್ದರು.
ಬಿಬಿಎಂಪಿ ಆಯುಕ್ತರನ್ನು ಕರೆಸಿಕೊಂಡು ಹೈಕೋರ್ಟ್ ಛೀಮಾರಿ ಹಾಕಿತ್ತು. ಬೆಂಗಳೂರಿನ ಗುಂಡಿಗಳ ಸಮಸ್ಯೆಗೆ ಕಳಪೆ ಕಾಮಗಾರಿ, ಮಳೆಯೊಂದೇ ಕಾರಣ ಎನ್ನಲಾಗುವುದಿಲ್ಲ. ಇತ್ತೀಚಿಗೆ ನಿರ್ಮಾಣವಾಗುತ್ತಿರುವ ವೈಟ್ ಟಾಪಿಂಗ್ ರಸ್ತೆಗಳನ್ನು ಬಿಟ್ಟು ಡಾಂಬಾರು ರಸ್ತೆಗಳಲ್ಲಿ ದಿನಕ್ಕೊಂದು ಗುಂಡಿ ತೋಡುವುದನ್ನು ಗಮನಿಸಬಹುದು.
ಒಂದು ದಿನ ಜಲಮಂಡಳಿ, ಮತ್ತೊಂದು ದಿನ ಬೆಸ್ಕಾಂ, ಮಗದೊಂದು ದಿನ ಮತ್ತೊಂದು ಇಲಾಖೆ ಯಿಂದ ಗುಂಡಿಗಳನ್ನು ರಸ್ತೆಯ ಅಗಲಕ್ಕೂ ಕೊರೆಯುತ್ತಾರೆ. ಈ ರೀತಿ ಕೊರೆದ ಬಳಿಕ ಪುನಃ ಮಣ್ಣು ಹಾಕಿ, ಅದರ ಮೇಲೆ ಜಲ್ಲಿ, ಡಾಂಬಾರು ಮಿಶ್ರಣ ಹಾಕಿದರೆ ಯಾವುದೇ ಸಮಸ್ಯೆಯಿರುವು ದಿಲ್ಲ. ಆದರೆ ಬಹುತೇಕ ಸಮಯದಲ್ಲಿ ಈ ರೀತಿ ಮಾಡದೇ ಮಣ್ಣು ಮುಚ್ಚಿ ಹೋಗಿರುತ್ತಾರೆ. ಈ ರೀತಿ ಮಣ್ಣು ಮುಚ್ಚು ಹೋದ ಕೆಲವೇ ದಿನದಲ್ಲಿ ಮಣ್ಣೆಲ್ಲ ಹೋಗಿ, ಅಲ್ಲೊಂದು ‘ಗ್ಯಾಪ್’ ಸೃಷ್ಟಿ ಯಾಗುತ್ತದೆ.
ಅದು ಕೆಲವೇ ದಿನದಲ್ಲಿ ಗುಂಡಿಯಾಗಿ ವಾಹನ ಸವಾರರಿಗೆ ಬಹುದೊಡ್ಡ ಸಮಸ್ಯೆಯಾಗುತ್ತದೆ. ಕೆಲವು ಕಡೆ ಸಾರ್ವಜನಿಕರೇ ಅನಽಕೃತವಾಗಿ ಈ ರೀತಿ ರಸ್ತೆ ಅಗೆದಿದ್ದರೆ, ಬಹುತೇಕ ಸಮಯದಲ್ಲಿ ಇತರೆ ಇಲಾಖೆಗಳ ಗಮನದಲ್ಲಿದ್ದುಕೊಂಡೇ ಈ ರಸ್ತೆ ಗುಂಡಿಗಳು ನಿರ್ಮಾಣವಾಗಿರುತ್ತದೆ. ಬಿಬಿಎಂಪಿ ಹಾಗೂ ಬೆಂಗಳೂರಿನ ಇತರೆ ಇಲಾಖೆಗಳ ನಡುವಿನ ಸಮನ್ವಯ ಕೊರತೆಗೆ ವಾಹನ ಸವಾರರು ‘ಆಫ್ ರೋಡಿಂಗ್’ ಮಾಡುವ ಸ್ಥಿತಿ ನಿರ್ಮಾಣವಾಗುತ್ತಿರುವುದು ವಾಸ್ತವ. ಆದ್ದರಿಂದ ಇನ್ನಾದರೂ ಬೆಂಗಳೂರಿನ ವ್ಯಾಪ್ತಿಯಲ್ಲಿರುವ ವಿವಿಧ ಇಲಾಖೆಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಿ, ಸಾಧ್ಯವಾದಷ್ಟು ರಸ್ತೆ ಅಗೆಯುವುದಕ್ಕೆ ಬ್ರೇಕ್ ಹಾಕಬೇಕಿದೆ. ಇಲ್ಲವೇ, ಗುಂಡಿ ತೋಡಿದ ಬಳಿಕ ವೈಜ್ಞಾನಿಕವಾಗಿ ಮುಚ್ಚುವ ಕಾರ್ಯವನ್ನು ಮಾಡಬೇಕಿದೆ.
ಹಾಗೇ ನೋಡಿದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಅಧಿಕಾರಿಗಳಿಗೆ ಇನ್ನೊಂದು ತಿಂಗಳಲ್ಲಿ ಬೆಂಗಳೂರನ್ನು ‘ಗುಂಡಿ ಮುಕ್ತ’ ಮಾಡುವುದಾಗಿ ಹೇಳಿಕೊಂಡು ಓಡಾಡುತ್ತಿದ್ದಾರೆ. ಬೆಂಗಳೂರಲ್ಲಿ ಇರೋದೇ ಐದು ಸಾವಿರ ಗುಂಡಿ, ಅದರಲ್ಲಿ ನಾವು ಬಹುಪಾಲು ಗುಂಡಿ ಮುಚ್ಚಿದ್ದು, ಸಾವಿರ ಲೆಕ್ಕದಲ್ಲಿ ಬಾಕಿ ಉಳಿದಿವೆ.
ಇವುಗಳನ್ನು ಕೆಲವೇ ದಿನಗಳಲ್ಲಿ ಮುಚ್ಚುವುದಾಗಿ ಹೇಳುತ್ತಿದ್ದಾರೆ. ಆದರೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು ನೀಡುತ್ತಿರುವ ಗುಂಡಿ ಲೆಕ್ಕದಲ್ಲಿಯೇ ಸುಳ್ಳು ಲೆಕ್ಕವಿದೆ. ಇಡೀ ಬೆಂಗಳೂರಲ್ಲಿ ಐದು ಸಾವಿರ ಗುಂಡಿಗಳಿವೆ ಎಂದು ಹೇಳಿರುವ ಅಧಿಕಾರಿಗಳು, ಬೆಂಗಳೂರಿನ ಯಾವುದಾದರೂ ಒಂದು ಕ್ಷೇತ್ರಕ್ಕೆ ಭೇಟಿ ಕೊಟ್ಟರೆ ಆ ಪ್ರಮಾಣದ ಗುಂಡಿಗಳು ಸಿಗುತ್ತವೆ. ಇನ್ನು ಗುಂಡಿಗಳನ್ನು ಮುಚ್ಚುವಂತೆ ಹೇಳಿದಾಗ ‘ತೇಪೆ’ ಸಾರಿಸುವ ಕೆಲಸವನ್ನು ಗುತ್ತಿಗೆದಾರರು ಮಾಡುತ್ತಾರೆ. ಈ ತೇಪೆ ಸಾರಿಸಿದ ಕೆಲಸವನ್ನು ಮುಗಿಸಿ ಮನೆಗೆ ಹೋಗುವ ಮೊದಲೇ ಆ ತೇಪೆ ಕಿತ್ತು ಹೋಗಿ, ಅದೇ ಜಾಗದಲ್ಲಿ ಅಷ್ಟೇ ದೊಡ್ಡದಾದ ಅಥವಾ ಅದಕ್ಕಿಂತ ಆಳವಾಗಿರುವ ಗುಂಡಿಯೊಂದು ಸೃಷ್ಟಿಯಾಗಿರುತ್ತದೆ. ಆದರೆ ಗುತ್ತಿಗೆದಾರ ಆ ಕಡೆ ಹೋದ ಮೇಲೆ ಉದ್ಭವಿಸುವ ಈ ಗುಂಡಿಗೆ ಅಪ್ಪ-ಅಮ್ಮ ಯಾರೂ ಇರುವುದಿಲ್ಲ.
ರಸ್ತೆ ನಿರ್ಮಿಸುವುದು ಒಂದು ಬಾರಿಯಾದರೂ ರಸ್ತೆಗಳನ್ನು ಸಮರ್ಪಕವಾಗಿ ಇರುವಂತೆ ನೋಡಿ ಕೊಳ್ಳುವುದು ನಿರಂತರ ಪ್ರಕ್ರಿಯೆ. ಡಾಂಬಾರು ಕಿತ್ತು ಹೋಗುವುದು, ಒಳ ಚರಂಡಿ, ಕುಡಿಯುವ ನೀರಿನ ಪೈಪ್ ಅಳವಡಿಕೆ ಅಥವಾ ಸಮಸ್ಯೆ ಸೇರಿದಂತೆ ಹತ್ತು ಹಲವು ಕಾರಣಗಳಿಗೆ ಸಜ್ಜಾಗಿರುವ ರಸ್ತೆಗಳನ್ನು ಅಗೆಯಲೇಬೇಕಾಗುತ್ತದೆ.
ಇದರೊಂದಿಗೆ ಮಳೆಗಾಲದಲ್ಲಿ ರಸ್ತೆಗಳು ಹಾಳಾಗಿ ಹೋಗುವುದು ಸರ್ವೇ ಸಾಮಾನ್ಯ. ಆದ್ದರಿಂದ ನೀವು ಒಂದು ಕಡೆಯಿಂದ ಹಾಕಿಕೊಂಡು ಬಂದರೆ ಇನ್ನೊಂದು ಕಡೆಯಿಂದ ದುರಸ್ತಿಗೆ ಬರುವುದು ಸಾಮಾನ್ಯ. ಆದರೆ ಈ ರೀತಿ ಕಿತ್ತು ಹೋದಾಗಲೆಲ್ಲ ಆಡಳಿತ ವ್ಯವಸ್ಥೆ ಯಾವ ರೀತಿಯಲ್ಲಿ ನಿರ್ವಹಿಸುತ್ತದೆ? ಎಷ್ಟು ವೇಗದಲ್ಲಿ ಇದನ್ನು ಸರಿಪಡಿಸಲು ಕ್ರಮವಹಿಸುತ್ತದೆ ಎನ್ನುವುದು ಮುಖ್ಯವಾಗುತ್ತದೆ.
ಇದರೊಂದಿಗೆ ಮತ್ತೊಂದು ಪ್ರಮುಖ ಅಂಶವೆಂದರೆ, ಬೀಳುವ ಗುಂಡಿಗಳನ್ನು ಸರಿಪಡಿಸುವ ಹೊಣೆಗಾರಿಕೆಯನ್ನು ಯಾವ ರೀತಿಯಲ್ಲಿ ಹಚ್ಚಬೇಕು ಎನ್ನುವ ಬಗ್ಗೆ ಗಂಭೀರ ಚಿಂತನೆ ಇಂದಿನ ಅಗತ್ಯವೆಂದರೆ ತಪ್ಪಾಗುವುದಿಲ್ಲ.
ಏಕೆಂದರೆ, ಯಾವುದೇ ಒಬ್ಬ ಗುತ್ತಿಗೆದಾರನಿಗೆ ರಸ್ತೆ ನಿರ್ಮಾಣಕ್ಕೆ ಗುತ್ತಿಗೆ ನೀಡಿದ ಸಮಯದಲ್ಲಿಯೇ ನಿರ್ವಹಣೆಯ ಹೊಣೆಗಾರಿಕೆಯನ್ನು ನೀಡುವುದು ಟೆಂಡರ್‌ಗಳ ಷರತ್ತಿನಲ್ಲಿಯೇ ಇರುತ್ತದೆ. ಮೂರು ವರ್ಷಗಳ ಕಾಲ ನಿರ್ವಹಿಸಬೇಕು ಎನ್ನುವ ಷರತ್ತನ್ನು ಒಪ್ಪಿಗೆ ಟೆಂಡರ್ ಪಡೆದಿರುತ್ತಾರೆ. ಆದರೆ ಒಮ್ಮೆ ಕೆಲಸ ಮುಗಿದು, ಬಿಲ್ ಕ್ಲಿಯರ್ ಆದ ಬಳಿಕ ಬಹುತೇಕ ಗುತ್ತಿಗೆದಾರರು, ಅತ್ತ ತಲೆ ಹಾಕುವುದಿಲ್ಲ.
ಆದ್ದರಿಂದ ಟೆಂಡರ್‌ನಲ್ಲಿರುವ ಅವಧಿಗೆ ರಸ್ತೆಗಳ ನಿರ್ವಹಣೆ ಮಾಡುವ ಹೊಣೆಗಾರಿಕೆಯನ್ನು ಕಡ್ಡಾಯವಾಗಿ ಹೊರಿಸಲೇಬೇಕು. ಈ ಅವಽಯಲ್ಲಿ ರಸ್ತೆಗಳಲ್ಲಿ ಆಗುವ ಸಮಸ್ಯೆಗಳಿಗೆ ಆ ಗುತ್ತಿಗೆದಾರನೇ ಪರಿಹಾರ ಕಂಡುಕೊಳ್ಳಬೇಕು. ಇಲ್ಲದಿದ್ದರೆ ಆತನನ್ನು ‘ಬ್ಲಾಕ್‌ಲಿಸ್ಟ್’ಗೆ ಹಾಕುವ ಕಾನೂನು ಕಡ್ಡಾಯವಾಗಿ ಜಾರಿಯಾಗಬೇಕು.
ಯಾವುದೇ ಒಂದು ಗುಣಮಟ್ಟದ ರಸ್ತೆ ಕಾಮಗಾರಿಯಾದರೆ ಕನಿಷ್ಠ ಐದಾರು ವರ್ಷ ಯಾವುದೇ ಸಮಸ್ಯೆ ಬರುವುದಿಲ್ಲ ಎನ್ನುವುದು ತಜ್ಞರ ಅಭಿಪ್ರಾಯ. ಆದ್ದರಿಂದ ಈಗಿರುವ ಮೂರು ವರ್ಷವನ್ನು ಐದರಿಂದ ಆರು ವರ್ಷಕ್ಕೆ ವಿಸ್ತರಿಸಿದರೆ, ಕಾಮಗಾರಿಯ ಸಮಯದಲ್ಲಿ ಗುಣಮಟ್ಟಕ್ಕೆ ಕಿಂಚಿತ್ತಾ ದರೂ ‘ಗಮನ’ ಕೊಡುತ್ತಾರೆ.
ಇನ್ನು ವಿಸ್ತರಣೆ ಕೇವಲ ಕಾಗದ ಮೇಲೆ ಮಾಡುವುದಷ್ಟೇ ಅಲ್ಲದೇ, ಅದನ್ನು ಸರಿಯಾಗಿ ಕಾರ್ಯ ರೂಪಕ್ಕೆ ಬರುವಂತಹ ಕಠಿಣ ಕ್ರಮವನ್ನು ಸರಕಾರಗಳು ತೆಗೆದುಕೊಳ್ಳದಿದ್ದರೆ, ಈ ಸಮಸ್ಯೆ ಇಂದಲ್ಲ, ಇನ್ನು 10 ವರ್ಷವಾದರೂ ಹಾಗೆಯೇ ಉಳಿದುಕೊಳ್ಳುವುದು ನಿಶ್ಚಿತ. ಈಗ ಹಿಂದಿನ ಬಿಜೆಪಿ ಸರಕಾರದ ಮೇಲೆ, ಕಾಂಗ್ರೆಸ್ ನಾಯಕರು ಟೀಕಿಸುತ್ತಿರುವಂತೆ ಆಗ ಮತ್ತೊಂದು ಸರಕಾರ ‘ಹಿಂದಿನ ಸರಕಾರದ ಲೋಪ’ವೆಂದು ಹೇಳಿಕೊಂಡು ಓಡಾಡುತ್ತಿರುತ್ತಾರೆ.
ರಾಜ್ಯ ಕಾಂಗ್ರೆಸ್ ನಾಯಕರು ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಯಿಂದ, ಸರಕಾರದ ವಿಶೇಷ ಗಮನ ಹರಿಸಿ ಬೆಂಗಳೂರಿನಲ್ಲಿರುವ ಎಲ್ಲ ಗುಂಡಿಗಳನ್ನು ‘ಮುಚ್ಚುವುದಾಗಿ’ ಹೇಳಿಕೊಂಡು ಓಡಾಡುತ್ತಿದ್ದಾರೆ. ಆದರೆ ಈ ಗುಂಡಿಗಳನ್ನು ಮುಚ್ಚಿಸುವುದು ಹೇಳಿದಷ್ಟು ಸುಲಭವಲ್ಲ. ಹೀಗಿರು ವಾಗ ಬಿಜೆಪಿ ಸರಕಾರದ ಮೇಲೆ ‘ಹಾಕಿ’ ಓಡಾಡುತ್ತಿರುವ ಕಾಂಗ್ರೆಸ್ ನಾಯಕರು ಮುಂದೊಂದು ದಿನ ತಮ್ಮ ಸರಕಾರದ ಮೇಲೆ ಬಿಜೆಪಿಗರು ‘ಟೀಕಿಸುತ್ತಾರೆ’ ಎನ್ನುವುದನ್ನು ಮರೆಯಬಾರದು. ಏಕೆಂದರೆ, ಗುತ್ತಿಗೆದಾರರಿಗೆ ಗುಣಮಟ್ಟದ ಕಾಮಗಾರಿ ಮಾಡಲು ಕಮಿಷನ್ ನಿಂದ ‘ಮುಕ್ತಿ’ ಕೊಡಿಸಿದರೆ ಉತ್ತಮ ಗುಣಮಟ್ಟದ ರಸ್ತೆ ಕಾಮಗಾರಿ ಸಾಧ್ಯ. ಆದರೆ ಇದಕ್ಕೆ ಅಧಿಕಾರಿಗಳ ಮನಸ್ಥಿತಿ, ಇಡೀ ವ್ಯವಸ್ಥೆ ಬದಲಾಗಬೇಕಿದೆ. ಈ ಕ್ರಾಂತಿಕಾರ ಬದಲಾವಣೆ ಸಾಧ್ಯವೇ ಎನ್ನುವ ಪ್ರಶ್ನೆಗೆ ಬಹುತೇಕರ ಬಳಿ ಉತ್ತರವಿಲ್ಲ.