ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ranjith H Ashwath Column: ಜಾತಿಗಣತಿಯೆಂಬ ಜೇನುಗೂಡು

ಸಿದ್ದರಾಮಯ್ಯನವರ ಸರಕಾರದ ಅವಧಿಯಲ್ಲಿ ‘ಕೋಲ್ಡ್ ಸ್ಟೋರೇಜ್’ ಸೇರಿದ್ದ ಜಾತಿ ಗಣತಿಯ ವರದಿಯನ್ನು ಹೊರತೆಗೆಯುವುದಕ್ಕೂ ಸಿದ್ದರಾಮಯ್ಯರ ನೇತೃತ್ವದ ಕಾಂಗ್ರೆಸ್ ಸರಕಾರ ಮತ್ತೆ ಅಧಿಕಾರಕ್ಕೆ ಬರಬೇಕಾಯಿತು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ವರದಿ ಯನ್ನು ಸಂಪುಟ ಒಪ್ಪಿದ್ದು, ಬಹಿರಂಗಗೊಳಿಸಿದ್ದು, ಅದಕ್ಕೆ ಅಲ್ಪಸಂಖ್ಯಾತ ಹಾಗೂ ದಲಿತ ಹೊರತುಪಡಿಸಿ ಬಹುತೇಕ ಸಮುದಾಯಗಳು ವಿರೋಧಿಸಿದ್ದು ಗೊತ್ತಿರು ವಂಥದ್ದೇ.

ಜಾತಿಗಣತಿಯೆಂಬ ಜೇನುಗೂಡು

-

ಅಶ್ವತ್ಥಕಟ್ಟೆ

ಜಾತ್ಯತೀತ ರಾಷ್ಟ್ರ ಎನ್ನುವ ‘ಹಣೆಪಟ್ಟಿ’ಯನ್ನು ಭಾರತ ಹೊಂದಿದ್ದರೂ, ಜಾತಿ‘ಯೇತರ’ ಯೋಚನೆ, ಯೋಜನೆ ನಮ್ಮಲ್ಲಿ ಸಾಧ್ಯವಿಲ್ಲ ಎನ್ನುವುದು ವಾಸ್ತವ. ಜಾತಿಗಳನ್ನು ಮೀರಿ, ಎಲ್ಲರಿಗೂ ಸಮಬಾಳು ನೀಡಬೇಕು ಎನ್ನುವ ಆಶಯ ರಾಜಕಾರಣಿಗಳ ‘ಭಾಷಣ’ಕ್ಕೆ ಮಾತ್ರ ಸೀಮಿತ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ.

ಹಾಗೆಂದ ಮಾತ್ರಕ್ಕೆ ಜಾತಿಗಳ ಸಂಖ್ಯೆ ಹಾಗೂ ಜಾತಿಯಲ್ಲಿರುವ ಜನರ ಸಂಖ್ಯೆ ಲೆಕ್ಕ ಹಾಕುವುದು ಜೇನುಗೂಡಿಗೆ ಕೈಹಾಕದಂತೆ. ಹೌದು, ಈ ಹಿಂದೆ ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದಾಗಲೇ ಹಿಂದುಳಿದ ವರ್ಗಗಳ ಆಯೋಗದಿಂದ ಸಾಮಾಜಿಕ -ಶೈಕ್ಷಣಿಕ-ಆರ್ಥಿಕ ಸಮೀಕ್ಷೆಯ ಹೆಸರಲ್ಲಿ ಜಾತಿಗಣತಿಯನ್ನು ನಡೆಸಿದ್ದರು.

ಆದರೆ ನಡೆಸಲು ಮುಂದಾದ ಬಳಿಕ ಅದರಿಂದ ಎದುರಾಗಬಹುದಾದ ‘ಆನಾಹುತ’ ಅರಿತು ಕಾಂತರಾಜು ಆಯೋಗದ ವರದಿಯನ್ನು ‘ಕೋಲ್ಡ್ ಸ್ಟೋರೇಜ್’ನಲ್ಲಿಟ್ಟಿದ್ದರು. ಇದಾದ ಬಳಿಕ ಎರಡು ಸರಕಾರ ಬದಲಾದರೂ, ಆ ವರದಿಯನ್ನು ಮುಟ್ಟುವ ಸಾಹಸಕ್ಕೆ ಮಾತ್ರ ಯಾರೂ ಕೈಹಾಕಲಿಲ್ಲ.

ಇದನ್ನೂ ಓದಿ: Ranjith H Ashwath : ಈ ಸಮೀಕ್ಷೆಯಲ್ಲಿ ಸಿಗುವುದೇ ಜಾತಿಗಳ ನಿಖರ ಲೆಕ್ಕ ?

ಸಿದ್ದರಾಮಯ್ಯನವರ ಸರಕಾರದ ಅವಧಿಯಲ್ಲಿ ‘ಕೋಲ್ಡ್ ಸ್ಟೋರೇಜ್’ ಸೇರಿದ್ದ ಜಾತಿ ಗಣತಿಯ ವರದಿಯನ್ನು ಹೊರತೆಗೆಯುವುದಕ್ಕೂ ಸಿದ್ದರಾಮಯ್ಯರ ನೇತೃತ್ವದ ಕಾಂಗ್ರೆಸ್ ಸರಕಾರ ಮತ್ತೆ ಅಽಕಾರಕ್ಕೆ ಬರಬೇಕಾಯಿತು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ವರದಿಯನ್ನು ಸಂಪುಟ ಒಪ್ಪಿದ್ದು, ಬಹಿರಂಗಗೊಳಿಸಿದ್ದು, ಅದಕ್ಕೆ ಅಲ್ಪಸಂಖ್ಯಾತ ಹಾಗೂ ದಲಿತ ಹೊರತುಪಡಿಸಿ ಬಹುತೇಕ ಸಮುದಾಯಗಳು ವಿರೋಧಿಸಿದ್ದು ಗೊತ್ತಿರು ವಂಥದ್ದೇ.

ಈ ವಿರೋಧವೆಲ್ಲವನ್ನೂ ಗಮನಿಸಿದ ಪಕ್ಷದ ಹೈಕಮಾಂಡ್, ಈ ಗೊಂದಲದಿಂದ ಆಚೆ ಬರಲು ಮತ್ತೊಂದು ‘ಬೃಹತ್ ಗೋಜಲು’ ಸೃಷ್ಟಿಸುವ ಮರು ಸಮೀಕ್ಷೆ ನಡೆಸುವಂತೆ ಸೂಚನೆ ನೀಡಿತ್ತು. ಇದರಿಂದಾಗಿ, ರಾಜ್ಯ ಸರಕಾರ ‘ಅನಿವಾರ್ಯ’ವಾಗಿ ಮತ್ತೊಮ್ಮೆ ಜೇನುಗೂಡಿಗೆ ಹೈಹಾಕಿದೆ.

ಈಗಾಗಲೇ ರಾಜ್ಯಾದ್ಯಂತ ಸುಮಾರು 1.75 ಲಕ್ಷ ಶಿಕ್ಷಕರು ಸೇರಿದಂತೆ ಸುಮಾರು ಎರಡು ಲಕ್ಷ ಸಮೀಕ್ಷಾಕಾರರಿಂದ ಸಮೀಕ್ಷೆ ಆರಂಭಗೊಂಡಿದೆ. ಆದರೆ ಆರಂಭಕ್ಕೂ ಮೊದಲು ವಿವಿಧ ಜಾತಿಗಳಿಂದ ಎದುರಾದ ಹೈಡ್ರಾಮ ಕಾಂಗ್ರೆಸ್‌ಗೆ ನುಂಗಲಾರದ ತುತ್ತಾಗಿದೆ ಎಂದರೆ ತಪ್ಪಾಗುವುದಿಲ್ಲ. ಇದು ಇಲ್ಲಿಗೇ ತಣ್ಣಗಾಗುವ ವಿರೋಧವಲ್ಲ. ಬದಲಿಗೆ ಸಮೀಕ್ಷೆಯ ಪ್ರತಿ ಹಂತದಲ್ಲಿಯೂ ಈ ರೀತಿಯ ಗೊಂದಲ-ಗೋಜಲನ್ನು ಸರಕಾರ ಎದುರಿಸಲೇಬೇಕು.

ಅದರಲ್ಲಿಯೂ ಈ ಬಾರಿ, ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿರುವವರಿಗೆ ತಮ್ಮ ಮೂಲಜಾತಿಯನ್ನು ಸೇರಿಸಿ ಕ್ರಿಶ್ಚಿಯನ್ನರಲ್ಲಿ ಹೊಸ ಉಪಜಾತಿಗಳನ್ನು ಸೃಷ್ಟಿಸಿದ್ದು ತೀವ್ರ ವಿರೋಧಕ್ಕೆ ಕಾರಣವಾಗಿದೆ. ಈಗ ಇವುಗಳನ್ನು ‘ನಿಷ್ಕ್ರಿಯ’ಗೊಳಿಸುವ ಮೂಲಕ ಸಮಾಧಾನಪಡಿಸುವ ಪ್ರಯತ್ನವನ್ನು ಸರಕಾರ ಮಾಡಿದೆ. ಆದರೆ ಹಿಂದುಳಿದ ವರ್ಗಗಳ ಆಯೋಗದ ಈ ನಡೆ ಸರಕಾರದ ವಿರುದ್ಧ ಜನರಲ್ಲಿ ‘ಆಕ್ರೋಶ’ ಹುಟ್ಟಿಸುವಂತೆ ಮಾಡಿರುವುದಂತೂ ಸುಳ್ಳಲ್ಲ.

ಈಗ ಆರಂಭಗೊಂಡಿರುವ ಜಾತಿಗಣತಿಯ ವರದಿ ಸಲ್ಲಿಕೆ, ಸಂಪುಟದಲ್ಲಿ ಒಪ್ಪಿಗೆ ಹಾಗೂ ಜಾರಿ ದೂರದ ಮಾತಾಯಿತು. ಏಕೆಂದರೆ, ಇದಕ್ಕೆ ಹಲವು ಕಾನೂನಾತ್ಮಕ ಹಾಗೂ ರಾಜಕೀಯ ಕಾರಣಗಳಿವೆ. ಆದರೆ ಸದ್ಯ ಎದುರಾಗಲಿರುವ ಸ್ಥಳೀಯ ಸಂಸ್ಥೆ ಚುನಾವಣೆ ಯಲ್ಲಿ ಇದು ಪಕ್ಷಕ್ಕೆ ಹೊಡೆತ ನೀಡುವುದೇ ಎನ್ನುವುದು ಹಲವು ಕಾಂಗ್ರೆಸ್ಸಿಗರಲ್ಲಿರುವ ಆತಂಕ.

ಏಕೆಂದರೆ, ರಾಜಕೀಯ ವ್ಯವಸ್ಥೆಯಲ್ಲಿ ಭದ್ರ ಸ್ಥಾನದಲ್ಲಿರುವ ಲಿಂಗಾಯತ-ಒಕ್ಕಲಿಗ ಸಮುದಾಯಗಳು ಈ ಸಮೀಕ್ಷೆಗೆ ಈಗಲೂ ವಿರೋಧ ವ್ಯಕ್ತಪಡಿಸುತ್ತಿವೆ. ಈ ಗಣತಿಯಿಂದ ಜಾತಿಗಳ ಜನಸಂಖ್ಯೆ ಬಹಿರಂಗವಾದರೆ ಆಗಬಹುದಾದ ಸಮಸ್ಯೆ ಅರಿತು, ಇದನ್ನು ಸಾಧ್ಯ ವಾದಷ್ಟು ಮುಂದೂಡುವ ಪ್ರಯತ್ನದಲ್ಲಿ ಬಹುತೇಕ ರಾಜಕೀಯ ನಾಯಕರಿದ್ದಾರೆ.

ಹಾಗೆ ನೋಡಿದರೆ, ಜಾತಿಗಣತಿಯ ಕಿಡಿ ಹೊತ್ತಿದಾಗಿನಿಂದ ಒಂದೊಂದು ಸಮುದಾಯ ಒಂದೊಂದು ರೀತಿಯಲ್ಲಿ, ಸಮುದಾಯದ ಸ್ವಾಮೀಜಿಗಳು, ಮುಖಂಡರು ಒಂದೊಂದು ರೀತಿಯಲ್ಲಿ ಹೇಳಿಕೆ ಅಥವಾ ಅಭಿಪ್ರಾಯವನ್ನು ಮಂಡಿಸುತ್ತಿದ್ದಾರೆ. ಆದರೆ ‘ವೈಜ್ಞಾನಿಕ’ ವಾಗಿ ಈ ಸಮೀಕ್ಷೆ ನಡೆಸಲು ಸಾಧ್ಯವೇ ಎನ್ನುವ ಪ್ರಶ್ನೆಯನ್ನು ಎತ್ತಿರುವುದು ಮಾತ್ರ ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳು ಎಂದರೆ ತಪ್ಪಾಗುವುದಿಲ್ಲ.

ಕಳೆದ ಶನಿವಾರ ಒಕ್ಕಲಿಗರ ಸಭೆಯಲ್ಲಿ ಮಾತನಾಡುವ ವೇಳೆ, ಕ್ರಿಶ್ಚಿಯನ್ ಕುರುಬ, ಒಕ್ಕಲಿಗ, ಲಿಂಗಾಯತ ಎನ್ನುವ ಜಾತಿಗಳಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಅವರು, ಈ ಸಮೀಕ್ಷೆಯನ್ನು ಮುಂದಕ್ಕೆ ಹಾಕಬೇಕು ಎನ್ನುವ ಆಗ್ರಹವನ್ನು ಮಾಡಿದ್ದರು. ಇದರ ಜತೆಜತೆಗೆ ತೆಲಂಗಾಣದಲ್ಲಿರುವ 3.5 ಕೋಟಿ ಜನಸಂಖ್ಯೆಯನ್ನು ಸಮೀಕ್ಷೆ ಮಾಡಲು ಮೂರು ತಿಂಗಳು ತೆಗೆದುಕೊಂಡಿರುವಾಗ, ನಮ್ಮಲ್ಲಿ ಕೇವಲ 15 ದಿನದಲ್ಲಿ ಸಮೀಕ್ಷೆ ಮುಗಿಸಲು ಹೇಗೆ ಸಾಧ್ಯ? ಇದರೊಂದಿಗೆ ಗ್ರಾಮೀಣ ಭಾಗದಲ್ಲಿ ಬಹುತೇಕ ರೈತರು ಈ ಸಮಯದಲ್ಲಿ ಹೊಲಗಳಿಗೆ ಹೋಗಿರುತ್ತಾರೆ.

ದಸರಾ ರಜೆಗೆಂದು ಜನರು ಹೊರಗೆ ಹೋಗುತ್ತಾರೆ. ಹೀಗಿರುವಾಗ, ನಿಗದಿತ ಸಮಯಕ್ಕೆ ಎಲ್ಲರೂ ಸಿಗುವುದು ಕಷ್ಟ, ಆದ್ದರಿಂದ ಸಮೀಕ್ಷೆಗೆ ಹೆಚ್ಚುವರಿ ಸಮಯ ನೀಡಬೇಕು ಎನ್ನುವ ತಾಂತ್ರಿಕ ಅಂಶವನ್ನು ಹೇಳಿದ್ದಾರೆ. ಆದರೆ ಅದನ್ನು ಕೇಳಿಸಿಕೊಳ್ಳುವ ಪರಿಸ್ಥಿತಿ ಯಲ್ಲಿ ಮಾತ್ರ ಆಯೋಗದ ಅಧ್ಯಕ್ಷರಿಲ್ಲ.

ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಮಧುಸೂದನ್ ನಾಯಕ್ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡುವ ವೇಳೆ, ‘ನಿತ್ಯ ಏಳೆಂಟು ಮನೆಗಳ ಸಮೀಕ್ಷೆ ನಡೆಸಿದರೂ, 15 ದಿನದಲ್ಲಿ ರಾಜ್ಯವನ್ನು ಕವರ್ ಮಾಡಬಹುದು’ ಎನ್ನುವ ಮಾತನ್ನು ಹೇಳಿದ್ದಾರೆ. ಆದರೆ ಆಯೋಗ ಸಿದ್ಧಪಡಿಸಿರುವ 60 ಪ್ರಶ್ನೆಗಳಿಗೆ ಸಮರ್ಪಕ ಉತ್ತರ ಪಡೆಯುವುದು ಸುಲಭವಲ್ಲ.

ಅಧ್ಯಕ್ಷರು ಹೇಳುವಂತೆ, ನಗರ ಪ್ರದೇಶದಲ್ಲಿ ಸಾರ್ವಜನಿಕರು ಕೇಳಿದ ಕೂಡಲೇ ಎಲ್ಲ ಉತ್ತರ ಹಾಗೂ ದಾಖಲೆಗಳನ್ನು ನೀಡಬಹುದು. ಆದರೆ ಗ್ರಾಮೀಣ ಭಾಗದಲ್ಲಿ ಇದು ಅಂದುಕೊಂಡಷ್ಟು ಸುಲಭಕ್ಕಿಲ್ಲ. ಅನೇಕ ಪೋಷಕರಿಗೆ ತಮ್ಮ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಸ್ಪಷ್ಟತೆಯಿರುವುದಿಲ್ಲ. ಇನ್ನು ಕೆಲವೊಮ್ಮೆ ಮಕ್ಕಳು ಕೆಲಸಕ್ಕೆಂದು ಬೇರೆಡೆ ಇರುವಾಗ, ಅವರ ಹುದ್ದೆ, ವಿದ್ಯಾರ್ಹತೆ ಸೇರಿದಂತೆ ಹಲವು ವಿಷಯಗಳು ಪೋಷಕರಿಗೆ ನಿಖರವಾಗಿ ತಿಳಿದಿರುವುದಿಲ್ಲ.

ಹೀಗಿರುವಾಗ ಸ್ಪಷ್ಟ ಮಾಹಿತಿ ನಮೂದು ಮಾಡಲು, ಸಮೀಕ್ಷಾಕಾರರಿಗೆ ಹೆಚ್ಚು ಸಮಯ ಬೇಕಾಗುತ್ತದೆ. ಇದರೊಂದಿಗೆ ವ್ಯಕ್ತಿಯೊಬ್ಬರ ಫಾರ್ಮ್ ಪೂರ್ಣಗೊಳಿಸಬೇಕು ಎಂದರೆ 60 ಪ್ರಶ್ನೆಗಳಿಗೆ ಉತ್ತರಿಸಬೇಕು. ಕುಟುಂಬವೊಂದರಲ್ಲಿ ನಾಲ್ಕು ಜನರಿದ್ದರೆ 240 ಬಾರಿ ಪ್ರಶ್ನೆಗಳನ್ನು ಭರ್ತಿ ಮಾಡಬೇಕು. ಒಂದೊಂದು ಪ್ರಶ್ನೆಗೆ 30 ಸೆಕೆಂಡ್ ಎಂದುಕೊಂಡರೂ ಕನಿಷ್ಠ 30 ನಿಮಿಷ ಬೇಕಾಗುತ್ತದೆ.

ಮನೆಯಲ್ಲಿ ನಾಲ್ಕು ಜನರಿದ್ದರೆ ಎರಡು ಗಂಟೆ ಅಗತ್ಯ. ಇದರೊಂದಿಗೆ ಸಮೀಕ್ಷಾಕಾರರು ಆಗಮಿಸುತ್ತಿದ್ದಂತೆ ಎಲ್ಲ ಮಾಹಿತಿಯನ್ನು ಸಜ್ಜುಗೊಳಿಸಿಕೊಂಡು ಯಾರೂ ಕೂತಿರುವು ದಿಲ್ಲ. ಆದ್ದರಿಂದ ಹೇಗೆ ಲೆಕ್ಕಹಾಕಿದರೂ ಒಂದು ಮನೆಯ ಸಮೀಕ್ಷೆಗೆ ಕನಿಷ್ಠ ಎರಡೂವರೆ ತಾಸು ಅಗತ್ಯ. ಅಂದರೆ ನಿತ್ಯ ನಾಲ್ಕೈದು ಮನೆ ಮಾಡಿದರೆ ಹೆಚ್ಚು ಎನ್ನುವುದು ವಾಸ್ತವ.

ಇನ್ನು ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಕೊಳ್ಳಬಹುದು ಎನ್ನುವ ಆಯ್ಕೆಯನ್ನು ಆಯೋಗ ನೀಡಿದೆ. ಆದರೆ ಎಷ್ಟು ಜನರಿಗೆ ಇದನ್ನು ಮಾಡಲು ಸಾಧ್ಯ ಎನ್ನುವ ಪ್ರಶ್ನೆಗೆ ಆಯೋಗವೇ ಉತ್ತರ ನೀಡಬೇಕಿದೆ. ಇದಿಷ್ಟು ಸಮೀಕ್ಷೆಗೆ ತೆರಳುವ ಶಿಕ್ಷಕರ ಸಮಸ್ಯೆ. ‘ಹೆಚ್ಚುವರಿ ದುಡ್ಡುಕೊಡುತ್ತೇವೆ, ಮಾಡುತ್ತಾರೆ’ ಎನ್ನುವ ಭಾವನೆಯಲ್ಲಿ ಕೆಲವರಿದ್ದಾರೆ. ಆದರೆ ಇದಕ್ಕಿಂತ ಮಿಗಿಲಾಗಿ ರಾಜಕೀಯ ಸವಾಲುಗಳನ್ನು ಈಗಾಗಲೇ ನೋಡಿದ್ದೇವೆ.

ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಸಾಮಾಜಿಕ-ಆರ್ಥಿಕ-ಶೈಕ್ಷಣಿಕ ಸಮೀಕ್ಷೆಯ ಹೆಸರಲ್ಲಿ ಜಾತಿಗಣತಿ ಮಾಡಲು ಮುಂದಾದ ಸಮಯದಲ್ಲಿ ಯಾವ ಸಚಿವರು ‘ವಿರೋಧಿಸಿದ್ದರೋ’ ಅದೇ ಸಚಿವರು ಅಥವಾ ಆ ಸಮುದಾಯದ ಸಚಿವರು ಈಗಲೂ ವಿರೋಧಿಸುತ್ತಿದ್ದಾರೆ.

ಅದರಲ್ಲಿಯೂ ಸಿದ್ದರಾಮಯ್ಯ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ಎಂ.ಬಿ. ಪಾಟೀಲ್ ಅವರೇ ಈ ಗಣತಿಗೆ ಸಚಿವ ಸಂಪುಟದಲ್ಲಿ ವಿರೋಧಿಸಿದ್ದು ಸಿದ್ದರಾಮಯ್ಯ ಅವರನ್ನು ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದೆ. ಎಂ.ಬಿ.ಪಾಟೀಲರು ಮಾತ್ರವಲ್ಲದೇ, ಲಿಂಗಾಯತ-ಒಕ್ಕಲಿಗ ಸಮುದಾಯದ ಬಹುತೇಕ ಸಚಿವರು ಈ ಗಣತಿಯ ವಿಷಯದಲ್ಲಿ ‘ಇಕ್ಕಟ್ಟಿಗೆ’ ಸಿಲುಕಿದ್ದಾರೆ.

ಏಕೆಂದರೆ, ಸಿದ್ದರಾಮಯ್ಯ ಅವರು ಮರುಸಮೀಕ್ಷೆ ನಡೆಸಲು ಸ್ವ ಇಚ್ಛೆಯಿಂದ ಮುಂದಾ ಗಿಲ್ಲ, ಬದಲಿಗೆ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರ ಸೂಚನೆಯ ಮೇರೆಗೆ ನಡೆಸಲು ದೆಹಲಿಯಲ್ಲಿ ಒಪ್ಪಿದ್ದಾರೆ. ಹೀಗಿರುವಾಗ, ಮರುಸಮೀಕ್ಷೆಗೆ ಜಾತಿಗಳಲ್ಲಿ ವಿರೋಧ ವ್ಯಕ್ತವಾದ ಮಾತ್ರಕ್ಕೆ, ಗಣತಿ ನಡೆಸಬೇಡಿ ಎಂದು ಒತ್ತಡ ಹೇರಿದರೆ, ಹೈಕಮಾಂಡ್ ವಿರೋಧವನ್ನು ಕಟ್ಟಿಕೊಳ್ಳಬೇಕಾಗುತ್ತದೆ.

ಒಂದು ವೇಳೆ ನಡೆಸಲು ‘ಒಪ್ಪಿಗೆ’ ನೀಡಿದರೆ, ಸಮುದಾಯದ ವಿರೋಧವನ್ನು ಕಟ್ಟಿಕೊಳ್ಳಬೇಕಾಗುತ್ತದೆ. ಅದರಲ್ಲಿಯೂ ಜಾತಿಗಣತಿಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಲಿಂಗಾಯತ ಹಾಗೂ ಒಕ್ಕಲಿಗ ನಾಯಕರಲ್ಲಿ ಕೆಲವರು, ಗಣತಿಯನ್ನು ಒಪ್ಪಿಕೊಂಡರೆ ‘ಭವಿಷ್ಯ’ದಲ್ಲಿ ಸಮುದಾಯದ ನಾಯಕತ್ವವನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.

ಆದ್ದರಿಂದ ಸಮುದಾಯದ ನಾಯಕರಾಗಬೇಕೆಂಬ ಮಹತ್ವಾಕಾಂಕ್ಷೆ ಹೊಂದಿರುವ ಡಿ.ಕೆ. ಶಿವಕುಮಾರ್, ಎಂ.ಬಿ. ಪಾಟೀಲ್, ಈಶ್ವರ್ ಖಂಡ್ರೆಯವರಂಥ ನಾಯಕರಿಗೆ ಕಾಂಗ್ರೆಸ್ ಸರಕಾರದ ಈ ನಿರ್ಧಾರ ನುಂಗಲಾರದ ತುತ್ತಾಗಿದೆ ಎಂದರೆ ತಪ್ಪಾಗುವುದಿಲ್ಲ. ಹಾಗೆ ನೋಡಿದರೆ, ಈ ವಿಷಯದಲ್ಲಿ ಪ್ರತಿಪಕ್ಷದವರು ಅಂತರ ಕಾಯ್ದುಕೊಳ್ಳುವ ಪ್ರಯತ್ನ ದಲ್ಲಿದ್ದಾರೆ.

ಮೇಲ್ನೋಟಕ್ಕೆ ಸರಕಾರದ ವಿರುದ್ಧ ರಾಜಕೀಯ ಹೇಳಿಕೆಗಳನ್ನು ನೀಡುತ್ತಿದ್ದಾರೆಯೇ ವಿನಾ, ಈ ವಿಷಯದಲ್ಲಿ ಸ್ಪಷ್ಟ ನಿಲುವು ತೆಗೆದುಕೊಂಡರೆ ಏನಾಗಬಹುದೋ ಎನ್ನುವ ಆತಂಕ ಅವರನ್ನು ಒಳಗೊಳಗೇ ಕಾಡುತ್ತಿದೆ. ಈ ಆತಂಕದ ಕಾರಣಕ್ಕಾಗಿಯೇ ಕಾಂತರಾಜು ಆಯೋಗ ಸಲ್ಲಿಸಿದ ಜಾತಿಗಣತಿಯ ವರದಿಯನ್ನು ಮುಟ್ಟುವ ಪ್ರಯತ್ನವನ್ನು ಬಿಜೆಪಿ, ಜೆಡಿಎಸ್ ಸರಕಾರಗಳು ಮಾಡಿರಲಿಲ್ಲ.

ಆದರೀಗ ಕಾಂಗ್ರೆಸ್, ಕಾಂತರಾಜು ವರದಿಯನ್ನು ಮಂಡಿಸಿ, ಹೈಕಮಾಂಡ್ ಒತ್ತಡಕ್ಕೆ ಮರುಸಮೀಕ್ಷೆಗೆ ಮುಂದಾಗಿರುವುದರಿಂದ, ಪ್ರತಿಪಕ್ಷಗಳವರು ‘ಸಹಜ’ವಾಗಿಯೇ ರಾಜಕೀಯ ಲಾಭದ ಲೆಕ್ಕಾಚಾರದಲ್ಲಿದ್ದಾರೆ. ಆದರೆ ಬಹಿರಂಗವಾಗಿ ವಿರೋಧಿಸಿದರೆ ಈ ವರದಿಯಿಂದ ಲಾಭದ ನಿರೀಕ್ಷೆಯಲ್ಲಿರುವ ಜಾತಿಗಳು ತಿರುಗಿಬೀಳಬಹುದು ಎನ್ನುವ ಆತಂಕವಿರುವುದರಿಂದ ಕಾದು ನೋಡುವ ತಂತ್ರಕ್ಕೆ ನಾಯಕರು ಜಾರಿದ್ದಾರೆ. ಏಕೆಂದರೆ, ಸಾರ್ವಜನಿಕರು, ಮಠ-ಮಾನ್ಯಗಳಿಂದಲೇ ಸರಕಾರದ ಈ ನಡೆಗೆ ‘ಅಕ್ಷೇಪ’ ವ್ಯಕ್ತವಾಗುತ್ತಿದೆ.

ಇದರಿಂದ ಕಾಂಗ್ರೆಸ್‌ಗೆ ಡ್ಯಾಮೇಜ್ ಆದರೆ ಅದರ ನೇರಲಾಭ ಪ್ರತಿಪಕ್ಷಗಳಿಗೆ ಆಗುತ್ತದೆ. ಹೀಗಿರುವಾಗ, ವಿರೋಧಿಸುತ್ತಿರುವ ಸಮುದಾಯವನ್ನು ಒಲೈಸುವ ನೆಪದಲ್ಲಿ, ಜಾತಿ ಗಣತಿಯ ಬೆಂಬಲಕ್ಕೆ ನಿಂತಿರುವ ಸಮುದಾಯದ ವಿರೋಧ ಕಟ್ಟಿಕೊಳ್ಳುವ ಬದಲು ‘ತಟಸ್ಥ’ವಾಗಿದ್ದುಕೊಂಡು ಎರಡೂ ಕಡೆಯಿಂದ ಆಗಬಹುದಾದ ಲಾಭವನ್ನು ಗಿಟ್ಟಿಸಿಕೊಳ್ಳುವ ಲೆಕ್ಕಾಚಾರದಲ್ಲಿವೆ ಪ್ರತಿಪಕ್ಷಗಳು.

ಆದರೆ ಕಾಂಗ್ರೆಸ್ ಹೈಕಮಾಂಡ್‌ನ ಮರುಸಮೀಕ್ಷೆಯ ಐಡಿಯಾದಿಂದ ಯಾರಿಗೆ ಎಷ್ಟರ ಮಟ್ಟಿಗೆ ಲಾಭ-ನಷ್ಟವಾಗಲಿದೆ ಎನ್ನುವುದು ಶೀಘ್ರವೇ ಎದುರಾಗಲಿರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಹಿರಂಗವಾಗುವುದಂತೂ ಸ್ಪಷ್ಟ.