ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

K V Chandramauli Column: ಶಾಸಕರಿಗೆ ವಿನಾಯಿತಿ, ಅಧಿಕಾರಿಗಳಿಗೆ ನಿಯಮ: ಏಕೀ ತಾರತಮ್ಯ ?

ಅಗತ್ಯ ಬಿದ್ದರೆ ಇವರ ವಿರುದ್ಧ ಶಿಸ್ತುಕ್ರಮಕ್ಕೆ ಸಕ್ಷಮ ಪ್ರಾಧಿಕಾರಗಳಾದ ಸ್ಪೀಕರ್ ಅಥವಾ ಸಭಾಪತಿ ಇಲ್ಲವೇ ರಾಜ್ಯಪಾಲರಿಗೆ ವರದಿ ಮಾಡಬಹುದು. ಆಸ್ತಿ ವಿವರ ಸಲ್ಲಿಸದ ಲೋಪವು ಉದ್ದೇಶಪೂರ್ವಕವೆಂದು ಅಥವಾ ದುರ್ನಡತೆಯೆಂದು ಕಂಡುಬಂದರೆ ಲೋಕಾ ಕಾಯಿದೆ ಅಧಿನಿಯಮ ೧೨(೩)ರನ್ವಯ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಬಹುದು. ಆದರೆ ಈ ಕಾಯಿದೆಯು ತಪ್ಪಿತಸ್ಥರಿಗೆ ದಂಡ ವಿಧಿಸಲು ಇಲ್ಲವೇ ಅನರ್ಹ

ಶಾಸಕರಿಗೆ ವಿನಾಯಿತಿ, ಅಧಿಕಾರಿಗಳಿಗೆ ನಿಯಮ: ಏಕೀ ತಾರತಮ್ಯ ?

-

Ashok Nayak
Ashok Nayak Nov 21, 2025 10:42 AM

ಪ್ರಚಲಿತ

ಕೆ.ವಿ.ಚಂದ್ರಮೌಳಿ

2021ರ ಕರ್ನಾಟಕ ನಾಗರಿಕ ಸೇವಾ (ನಡತೆ) ನಿಯಮಗಳಡಿ ಸರಕಾರಿ ನೌಕರರು ಸ್ಥಿರಾಸ್ತಿ ವಹಿವಾಟುಗಳಿಗೆ ಪೂರ್ವಾನುಮತಿ ಪಡೆಯುವುದು, ರೂ.50000ಕ್ಕಿಂತ ಹೆಚ್ಚಿನ ಚರ ಆಸ್ತಗಳನ್ನು ವರದಿ ಮಾಡುವುದು ಕಡ್ಡಾಯ. ಯಾವುದೇ ಆಸ್ತಿ ಖರೀದಿಸುವ ಅಥವಾ ಮಾರಾಟ ಮಾಡುವ ಮೊದಲು ಕಡ್ಡಾಯವಾಗಿ ಸರಕಾರದ ಪೂರ್ವಾನುಮತಿಯನ್ನು ಪಡೆಯಬೇಕು ಇದಕ್ಕೆ ವ್ಯತಿರಿಕ್ತವಾಗಿ, 1984ರ ಕರ್ನಾಟಕ ಲೋಕಾಯುಕ್ತ ಕಾಯಿದೆಯು ಜನಪ್ರತಿನಿಧಿಗಳಿಂದ ಕೇವಲ ವಾರ್ಷಿಕ ಆಸ್ತಿ ಘೋಷಣೆಯನ್ನು ಮಾತ್ರ ಬಯಸುತ್ತದೆ.

ಕರ್ನಾಟಕ ಲೋಕಾಯುಕ್ತ ಕಾಯಿದೆ, 1984ರ ಸೆಕ್ಷನ್ ೨೨ (೧) ರ ಪ್ರಕಾರ, ಶಾಸಕರು ಮತ್ತು ಇತರ ಸಾರ್ವಜನಿಕ ಸೇವಕರು ಪ್ರತಿ ವರ್ಷ ಜೂನ್ ೩೦ರೊಳಗೆ ಕುಟುಂಬ ಸದಸ್ಯರು ಸೇರಿದಂತೆ ಆಸ್ತಿ ಮತ್ತು ಹೊಣೆಗಾರಿಕೆಗಳ ವಾರ್ಷಿಕ ಹೇಳಿಕೆಯನ್ನು ಸಲ್ಲಿಸಬೇಕು. ಆದರೆ ಗಮನಾರ್ಹ ಸಂಖ್ಯೆಯ ಶಾಸಕರು ಈ ಕಾನೂನನ್ನು ಪಾಲಿಸುತ್ತಿಲ್ಲ.

ಲೋಕಾಯುಕ್ತ ಕಾಯಿದೆಯ ಈ ವಿಧಿ ಸಾಂಕೇತಿಕವೇನಲ್ಲ. ಇದು ಭ್ರಷ್ಟಾಚಾರ ಮತ್ತು ಅಕ್ರಮ ಆಸ್ತಿ ಸಂಪಾದನೆ ವಿರುದ್ಧ ನೈತಿಕ ಮತ್ತು ಕಾನೂನು ತಪಾಸಣೆಯ ಉದ್ದೇಶವನ್ನು ಹೊಂದಿದೆ. ಆದರೆ 2024-25ರ ಸಾಲಿನಲ್ಲೂ ಆರು ಸಚಿವರು, 66 ಶಾಸಕರು ಮತ್ತು 28 ಎಂಎಲ್ಸಿಗಳು ಸೇರಿದಂತೆ ಸುಮಾರು 200 ಶಾಸಕರು ತಮ್ಮ ಅಸ್ತಿ ಮತ್ತು ಋಣ ಬಾಧ್ಯತೆ ಪಟ್ಟಿಯನ್ನು ಸಲ್ಲಿಸಿಲ್ಲ.

ಸಚಿವರು ಮತ್ತು ಶಾಸಕರ ಈ ಬೇಜವಾಬ್ದಾರಿ ನಡೆ ಜನಪ್ರತಿನಿಧಿಗಳ ಹೊಣೆಗಾರಿಕೆ, ಪಾರದರ್ಶಕತೆ ಮತ್ತು ಕಾನೂನಿನ ಮೇಲಿನ ಗೌರವವನ್ನು ದುರ್ಬಲಗೊಳಿಸುತ್ತದೆ. ಲೋಕಾಯುಕ್ತ ಕಾನೂನಿನ ಅಧಿನಿಯಮ ೨೨ (೨) ಮತ್ತು ೨೨ (೩) ಅಡಿಯಲ್ಲಿ, ಅಸ್ತಿ ಮತ್ತು ಋಣ ಪಟ್ಟಿಯನ್ನು ಸಲ್ಲಿಸದ ಶಾಸಕರಿಂದ ವಿವರಣೆ ಕೇಳಲು ಲೋಕಾಯುಕ್ತರಿಗೆ ಅಧಿ ಕಾರವಿದೆ.

ಇದನ್ನೂ ಓದಿ: Gururaj Gantihole Column: ಶಾಶ್ವತ ಯೋಜನೆಗೆ ಕಾಯುತ್ತಿದೆ ಖಾರ್‌ ಲ್ಯಾಂಡ್‌ ಎಂಬ ಕ್ಷಾರಭೂಮಿ !

ಅಗತ್ಯ ಬಿದ್ದರೆ ಇವರ ವಿರುದ್ಧ ಶಿಸ್ತುಕ್ರಮಕ್ಕೆ ಸಕ್ಷಮ ಪ್ರಾಧಿಕಾರಗಳಾದ ಸ್ಪೀಕರ್ ಅಥವಾ ಸಭಾಪತಿ ಇಲ್ಲವೇ ರಾಜ್ಯಪಾಲರಿಗೆ ವರದಿ ಮಾಡಬಹುದು. ಆಸ್ತಿ ವಿವರ ಸಲ್ಲಿಸದ ಲೋಪವು ಉದ್ದೇಶಪೂರ್ವಕವೆಂದು ಅಥವಾ ದುರ್ನಡತೆಯೆಂದು ಕಂಡುಬಂದರೆ ಲೋಕಾ ಕಾಯಿದೆ ಅಧಿನಿಯಮ ೧೨(೩)ರನ್ವಯ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಬಹುದು.

ಆದರೆ ಈ ಕಾಯಿದೆಯು ತಪ್ಪಿತಸ್ಥರಿಗೆ ದಂಡ ವಿಧಿಸಲು ಇಲ್ಲವೇ ಅನರ್ಹಗೊಳಿಸಲು ಲೋಕಾಯುಕ್ತಕ್ಕೆ ಅಧಿಕಾರ ನೀಡಿಲ್ಲ. ಲೋಕಾ ಕಾನೂನಿನ ಜಾರಿಯು ಸಂಪೂರ್ಣವಾಗಿ ಇತರರ ರಾಜಕೀಯ ಅಥವಾ ಆಡಳಿತಾತ್ಮಕ ಇಚ್ಛಾಶಕ್ತಿಯನ್ನು ಅವಲಂಬಿಸಿದೆ.

ಶಿಕ್ಷೆ ಇಲ್ಲ ಎಂಬ ಖಾತರಿಯಿಂದಲೇ ಹೆಚ್ಚಿನ ಶಾಸಕರು ಆಸ್ತಿ ವಿವರ ನೀಡುವ ಗೋಜಿಗೆ ಹೋಗುವುದಿಲ್ಲ. ಒಟ್ಟಾರೆ ಕಾನೂನಿನ ಈ ಲೋಪ ಲೋಕಾಯುಕ್ತರ ಪಾತ್ರವನ್ನು ದಂಡನೆಗೆ ಅಧಿಕಾರವಿಲ್ಲದ, ನೈತಿಕ ಕಾವಲುಗಾರನ ಮಟ್ಟಕ್ಕೆ ಇಳಿಸಿದೆ.

Screenshot_11 ಋ

ಇದೇ ನಿಯಮವು ಸರಕಾರಿ ನೌಕರರ ವಿಚಾರಕ್ಕೆ ಬಂದಾಗ ಸಂಪೂರ್ಣವಾಗಿ ವ್ಯತಿರಿಕ್ತ ವಾಗಿದೆ. ಸಂವಿಧಾನದ 309ನೇ ವಿಧಿಯ ಅಡಿಯಲ್ಲಿ ರಚಿಸಲಾದ ಕರ್ನಾಟಕ ನಾಗರಿಕ ಸೇವಾ (ನಡತೆ) ನಿಯಮಗಳು, 2021ರ ನಿಯಮ 24ರ ಪ್ರಕಾರ, ಎಲ್ಲಾ ನೌಕರರು ತಾವು ಸೇವೆಗೆ ಸೇರಿದ ಮೂರು ತಿಂಗಳೊಳಗೆ ಮತ್ತು ನಂತರ ವಾರ್ಷಿಕವಾಗಿ ಡಿಸೆಂಬರ್ 31 ರೊಳಗೆ, ತಮ್ಮ ಮತ್ತು ತಮ್ಮ ಕುಟುಂಬ ಸದಸ್ಯರ ಚರ ಮತ್ತು ಸ್ಥಿರಾಸ್ತಿ, ಋಣಬಾಧ್ಯತೆಗಳ ವಿವರವಾದ ವರದಿಗಳನ್ನು ನಿಗದಿತ ನಮೂನೆಯಲ್ಲಿ ಸಲ್ಲಿಸಬೇಕು.

ಇದಕ್ಕೆ ವಿಫಲನಾದ ಸರಕಾರಿ ನೌಕರನ ವಿರುದ್ಧ ಸದರಿ ನಿಯಮದ ೩(೧) (ಜಿಜಿಜಿ) ರ ಅಡಿಯಲ್ಲಿ ನಡವಳಿಕೆಯ ಉಲ್ಲಂಘನೆ ಮತ್ತು ಸರಕಾರಿ ಸೇವಕನಿಗೆ ಉಚಿತವಲ್ಲದ ವರ್ತನೆ ಎಂದು ಪರಿಗಣಿಸಿ ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮ-1957ರ ನಿಯಮ ೧೧ ರ ಅಡಿಯಲ್ಲಿ ಶಿಸ್ತು ಕ್ರಮವನ್ನು ಜರುಗಿಸಲು ಅವಕಾಶವಿದೆ.

ಆಸ್ತಿ ವಿವರ ಸಲ್ಲಿಸದ ನೌಕರರ ಅಪರಾಧದ ತೀವ್ರತೆಯನ್ನು ಅವಲಂಬಿಸಿ, ದಂಡ, ವಾಗ್ದಂಡನೆ, ವೇತನ ಹೆಚ್ಚಳ ಅಥವಾ ಬಡ್ತಿ ತಡೆ, ನಷ್ಟ ವಸೂಲಾತಿ ಅಥವಾ ಶ್ರೇಣಿ ಅಥವಾ ವೇತನದಲ್ಲಿ ಕಡಿತ, ಕಡ್ಡಾಯ ನಿವೃತ್ತಿ ಅಥವಾ ವಜಾ ಸೇರಿದಂತೆ ಕಠಿಣ ಕ್ರಮ ಜರುಗಿಸಲು ಅವಕಾಶವಿದೆ.

ಹೆಚ್ಚುವರಿಯಾಗಿ, ಡಿಪಿಎಆರ್ ಸುತ್ತೋಲೆಗಳ ಪ್ರಕಾರ, ಆಸ್ತಿ ವಿವರಗಳನ್ನು ತಡವಾಗಿ ಸಲ್ಲಿಸಿದ ಅಥವಾ ಸಲ್ಲಿಸದ, ವಿಚಕ್ಷಣೆಗೆ ಅನುಮತಿ ನಿರಾಕರಿಸಿದ ನೌಕರರ ಸೇವಾ ದಾಖಲೆ ಯಲ್ಲಿ ಪ್ರತಿಕೂಲ ನಮೂದು ದಾಖಲಿಸಲು ಅವಕಾಶವಿದೆ. ಇಂಥವರ ಬಡ್ತಿ ಅಥವಾ ವರ್ಗಾವಣೆಯನ್ನು ನಿರ್ಬಂಧಿಸಬಹುದು.

2021ರ ಕರ್ನಾಟಕ ನಾಗರಿಕ ಸೇವಾ (ನಡತೆ) ನಿಯಮಗಳಡಿ ಸರಕಾರಿ ನೌಕರರು ಸ್ಥಿರಾಸ್ತಿ ವಹಿವಾಟುಗಳಿಗೆ ಪೂರ್ವಾನುಮತಿ ಪಡೆಯುವುದು,

ರೂ.50000 ಕ್ಕಿಂತ ಹೆಚ್ಚಿನ ಚರ ಆಸ್ತಿಗಳನ್ನು ವರದಿ ಮಾಡುವುದು ಕಡ್ಡಾಯ. ಯಾವುದೇ ಆಸ್ತಿ ಖರೀದಿಸುವ ಅಥವಾ ಮಾರಾಟ ಮಾಡುವ ಮೊದಲು ಕಡ್ಡಾಯವಾಗಿ ಸರಕಾರದ ಪೂರ್ವಾನುಮತಿಯನ್ನು ಪಡೆಯಬೇಕು.

ಸಾರ್ವಜನಿಕ ಸೇವೆ ಎನ್ನುವುದು ನಂಬಿಕೆಯೇ ಹೊರತು ಸವಲತ್ತಲ್ಲ. ಆದ್ದರಿಂದ, ವಾರ್ಷಿಕ ಆಸ್ತಿ ಬಹಿರಂಗಪಡಿಸುವಿಕೆಯು ಕೇವಲ ಅಧಿಕಾರಶಾಹಿ ಬಾಧ್ಯತೆಯಲ್ಲ, ಆದರೆ ನೈತಿಕ ಜವಾಬ್ದಾರಿಯಾಗಿದೆ. ಈ ತತ್ವವನ್ನು ಗೌರವಿಸುವ ಸರಕಾರಿ ನೌಕರನು ಆಡಳಿತದ ವಿಶ್ವಾ ಸಾರ್ಹತೆಯನ್ನು ಬಲಪಡಿಸುತ್ತಾನೆ, ಇದನ್ನು ನಿರ್ಲಕ್ಷಿಸುವವರು ನೈತಿಕ ಆಡಳಿತದ ಅಡಿಪಾಯವನ್ನು ದುರ್ಬಲಗೊಳಿಸುತ್ತಾರೆ.

ಪ್ರತಿಯೊಬ್ಬ ಸರಕಾರಿ ಸೇವಕನ ಮೇಲೆ ಜನರ ಹಣ, ಅಧಿಕಾರ ಮತ್ತು ವಿಶ್ವಾಸವನ್ನು ವಹಿಸಲಾಗಿದೆ. ಆದ್ದರಿಂದ ಅವರು ಕಚೇರಿಯಲ್ಲಿ ಮತ್ತು ಖಾಸಗಿ ಜೀವನದಲ್ಲಿ ಅವರ ನಡವಳಿಕೆಗೆ ಜವಾಬ್ದಾರರಾಗಿರಬೇಕು. ಈ ಹೊಣೆಗಾರಿಕೆಯನ್ನು ಎತ್ತಿ ಹಿಡಿಯಲು ಪ್ರಮುಖ ಕಾರ್ಯವಿಧಾನವೆಂದರೆ, ವಿಶೇಷವಾಗಿ ಸರಕಾರಿ ನೌಕರರಿಂದ, ಆಸ್ತಿ ಮತ್ತು ಹೊಣೆಗಾರಿಕೆ ಗಳ ವಾರ್ಷಿಕ ಘೋಷಣೆ ಮಾಡಬೇಕಾಗಿರುತ್ತದೆ.

ಇದಕ್ಕೆ ವ್ಯತಿರಿಕ್ತವಾಗಿ, 1984ರ ಕರ್ನಾಟಕ ಲೋಕಾಯುಕ್ತ ಕಾಯಿದೆಯು ಜನಪ್ರತಿನಿಧಿ ಗಳಿಂದ ಕೇವಲ ವಾರ್ಷಿಕ ಆಸ್ತಿ ಘೋಷಣೆಯನ್ನು ಮಾತ್ರ ಬಯಸುತ್ತದೆ. ಇವರು ಯಾವುದೇ ಸ್ಥಿರ, ಚರ ಆಸ್ತಿ ವಹಿವಾಟಿಗೆ ಪೂರ್ವಾನುಮತಿ ಪಡೆಯಬೇಕಿಲ್ಲ. ಅಂದರೆ ಕರ್ನಾಟಕದ ಶಾಸಕರು ಯಾವುದೇ ಕಡ್ಡಾಯ ಶಾಸನಬದ್ಧ ನಿಯಮಗಳಿಗೆ ಒಳಪಟ್ಟಿರುವು ದಿಲ್ಲ.

ಅವರ ನಡವಳಿಕೆಯು ಕೇವಲ ಶಾಸಕಾಂಗದ ಕಾರ್ಯವಿಧಾನ ಮತ್ತು ವ್ಯವಹಾರ ನಿರ್ವಹಣೆ ನಿಯಮಗಳಿಂದ ನಿರ್ದೇಶಿತವಾಗಿದೆ. ಶಾಸನ ಬದ್ಧವಲ್ಲದ ಈ ನಿಯಮಗಳು ನೀತಿ ಸಂಹಿತೆ ಮಾದರಿಯಲ್ಲಿದ್ದು ಅನುಷ್ಠಾನ ದೂರದ ಮಾತು. ಇದರಿಂದಾಗಿ ಎರಡು ವಿಭಿನ್ನ ಕಾನೂನುಗಳು ಚುನಾಯಿತ ಪ್ರತಿನಿಧಿಗಳು ಮತ್ತು ಸರಕಾರಿ ನೌಕರರ ನಡುವೆ ಸ್ಪಷ್ಟವಾದ ಹೊಣೆಗಾರಿಕೆಯ ಅಂತರವನ್ನು ( accountability gap) ಸೃಷ್ಟಿಸುತ್ತವೆ.

ಶಾಸಕರು ಮತ್ತು ಸರಕಾರಿ ನೌಕರರ ನಡುವಿನ ವ್ಯತ್ಯಾಸವು ದ್ವಂದ್ವ ನೀತಿಯನ್ನು ( double standard) ಎತ್ತಿ ತೋರಿಸುತ್ತದೆ. ಸರಕಾರಿ ನೌಕರರಿಂದ ಸಮಗ್ರತೆ ಮತ್ತು ಪಾರದ ರ್ಶಕತೆಯನ್ನು ಬಯಸುವ ಶಾಸಕರು, ತಾವೇ ಅವುಗಳನ್ನು ಅನುಸರಿಸಲು ಹಿಂಜರಿಯು ತ್ತಾರೆ.

ರಾಜಕೀಯ ಸ್ವಹಿತಾಸಕ್ತಿ ಮತ್ತು ಹಿತಾಸಕ್ತಿ ಸಂಘರ್ಷಗಳು ತಮ್ಮದೇ ಶ್ರೇಣಿಯವರ ಮೇಲೆ ಕಠಿಣ ದಂಡ ವಿಧಿಸದಂತೆ ತಡೆಯುತ್ತವೆ. ಜನಪ್ರತಿನಿಧಿಗಳು ಕಾನೂನಿನ ವಿನಾಯಿತಿ ಮತ್ತು ರಿಯಾಯಿತಿಗಳನ್ನು ತಮ್ಮ ಸವಲತ್ತು ಎಂದು ಭಾವಿಸುತ್ತಾರೆ. ವಾರ್ಷಿಕ ಆಸ್ತಿ ವಿವರ ಘೋಷಣೆಯಂತಹ ನಿಯಮಗಳನ್ನು ಇವರು ತಮ್ಮ ಕಡ್ಡಾಯ ಬಾಧ್ಯತೆ ಎಂದು ಪರಿಗಣಿಸದೆ ಕೇವಲ ಔಪಚಾರಿಕತೆ (formality) ಎಂದು ಪರಿಗಣಿಸುತ್ತಾರೆ.

ನೈತಿಕವಾಗಿ ಮತ್ತು ಸಹಜ ಕಾನೂನು ತತ್ವದಡಿ ಇದು ಸಮರ್ಥನೀಯವಲ್ಲ. ಚುನಾಯಿತ ಪ್ರತಿನಿಧಿಗಳಿಗೆ ಅಪಾರವಾದ ಸಾರ್ವಜನಿಕ ಅಧಿಕಾರ ಮತ್ತು ಸಂಪನ್ಮೂಲಗಳನ್ನು ವಹಿಸಿ ಕೊಡಲಾಗಿರುತ್ತದೆ. ಇವರ ಪ್ರಾಮಾಣಿಕತೆಗೆ ಮಾನದಂಡವನ್ನು ನಿಗದಿಪಡಿಸುವಲ್ಲಿ ವಿಫಲ ವಾದರೆ ಸಾರ್ವಜನಿಕರ ನಂಬಿಕೆ ಕುಸಿಯುತ್ತದೆ. ಇದು ಪ್ರಜಾಸತ್ತೆಯ ಆಡಳಿತವನ್ನು ದುರ್ಬಲಗೊಳಿಸುತ್ತದೆ.

ಕಾನೂನುಗಳ ಈ ದ್ವಂದ್ವ ಸಾರ್ವಜನಿಕ ಕಚೇರಿಯಲ್ಲಿ ಸಮಾನ ಹೊಣೆಗಾರಿಕೆಯ ತತ್ವ ವನ್ನು ದುರ್ಬಲಗೊಳಿಸುತ್ತದೆ. ಪಾರದರ್ಶಕತೆ ಕಾರ್ಯವಿಧಾನಗಳ ಮೇಲಿನ ಸಾರ್ವಜನಿಕ ವಿಶ್ವಾಸವನ್ನು ಕಡಿಮೆ ಮಾಡುತ್ತದೆ. ನಾಗರಿಕರಿಂದ ಮತ್ತು ಅಧಿಕಾರಿಗಳಿಂದ ಪ್ರಾಮಾಣಿ ಕತೆಯನ್ನು ನಿರೀಕ್ಷಿಸುವ ಶಾಸಕರು, ಇದೇ ಅಥವಾ ಇದಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಪಾರದರ್ಶಕತೆ ಮತ್ತು ಸಮಗ್ರತೆಯ ಮಾನದಂಡಗಳಿಗೆ ಬದ್ಧರಾಗಿರಬೇಕು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪಾರದರ್ಶಕತೆ ಅತಿ ಮುಖ್ಯ. ಈ ತತ್ವದ ಉಲ್ಲಂಘನೆಗಳು ಪರಿಣಾಮಗಳನ್ನು ಎದುರಿಸಬೇಕು. ಕರ್ನಾಟಕದ ಶಾಸಕರು ಕಾನೂನಿಗೆ ತಾವು ಹೊಣೆ ಗಾರರು ಎಂಬುದನ್ನು ತೋರಿಸಬೇಕು. ಈ ಮೂಲಕ ಕಾನೂನಿನ ಸಮಾನತೆಯನ್ನು ಎತ್ತಿ ಹಿಡಿಯಬೇಕು.

ರಾಜ್ಯದಲ್ಲಿ ಸ್ವಚ್ಛ ಆಡಳಿತದಲ್ಲಿ ನಂಬಿಕೆಯನ್ನು ಮರುಸ್ಥಾಪಿಸಬೇಕಾದರೆ ಲೋಕಾಯುಕ್ತ ಕಾಯಿದೆಯ ಸೆಕ್ಷನ್ ೨೨(೧) ಅನ್ನು ತಿದ್ದುಪಡಿ ಮಾಡಿ, ಅಗತ್ಯವಿರುವ ದಾಖಲೆಗಳು ಅಥವಾ ಮಾಹಿತಿಗಳನ್ನು ಸಮಯಕ್ಕೆ ಸರಿಯಾಗಿ ಸಲ್ಲಿಸಲು ವಿಫಲರಾದ ಸಾರ್ವಜನಿಕ ಸೇವಕರಿಗೆ ಸೂಕ್ತ ದಂಡನೆ ನಿಗದಿ ಮಾಡಬೇಕು.

ಸರಕಾರಿ ಅಧಿಕಾರಿಗಳಂತೆ ಸಂಬಳ, ಪಿಂಚಣಿ ಪಡೆಯುವ ಜನಪ್ರತಿನಿಧಿಗಳಿಗೆ ನಾಗರಿಕ ಸೇವೆಯ ಎಲ್ಲ ಕಾನೂನು ಮಾಪನಗಳು ಅನ್ವಯವಾಗಬೇಕು. ವಾರ್ಷಿಕ ಆಸ್ತಿ ವಿವರ ಘೋಷಿಸದ, ಆಸ್ತಿ ಖರೀದಿ/ಮಾರಾಟದಂತಹ ವಿಚಾರದಲ್ಲಿ ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯದ ಶಾಸಕರನ್ನು ನಿರ್ದಿಷ್ಟ ಅವಧಿಗೆ ಅಮಾನತುಗೊಳಿಸುವುದು, ತಪ್ಪಿತಸ್ಥರ ಹೆಸರನ್ನು ಸಾರ್ವಜನಿಕವಾಗಿ ಪ್ರಕಟಿಸುವುದು, ಅಥವಾ ಭವಿಷ್ಯದಲ್ಲಿ ಯಾವುದೇ ಚುನಾವಣೆಗೆ ಸ್ಪರ್ಧಿಸದಂತೆ ತಡೆಯುವುದು, ಯಾವುದೇ ಹುದ್ದೆ ಅಥವಾ ಕಚೇರಿಯನ್ನು ಹೊಂದಲು ಅನರ್ಹರೆಂದು ಘೋಷಿಸುವುದು ಅವಶ್ಯ.

ಜನಪ್ರತಿನಿಧಿಗಳ ಹೊಣೆಗಾರಿಕೆ ವಿಚಾರದಲ್ಲಿ ಲೋಕಾಯುಕ್ತರು ಕೇವಲ ವರದಿ ಮಾಡುವು ದರ ಮೇಲೆ ಅವಲಂಬಿತರಾಗದೆ, ನೇರವಾಗಿ ಕಾನೂನು ಕ್ರಮ ಜಾರಿಗೊಳಿಸುವ ಅಧಿಕಾರ ಹೊಂದಿರಬೇಕು.

ಜನಪ್ರತಿನಿಧಿಗಳ ಆಸ್ತಿ ಘೋಷಣೆಗಳು ಲೋಕಾಯುಕ್ತರ ವೆಬ್‌ಸೈಟ್‌ನಲ್ಲಿ ಸಾರ್ವಜನಿಕರಿಗೆ ಲಭ್ಯವಿರಬೇಕು, ನಾಗರಿಕರ ಪರಿಶೀಲನೆ ಮತ್ತು ಮಾಧ್ಯಮಗಳ ಮೇಲ್ವಿಚಾರಣೆಗೆ ಅವಕಾಶ ನೀಡಬೇಕು. ಶಾಸಕರು ಮತ್ತು ಅಧಿಕಾರಿಗಳು ಕರ್ತವ್ಯ ಲೋಪ ಎಸಗಿದಲ್ಲಿ ಸ್ವಯಂಚಾಲಿತ ಪರಿಣಾಮಗಳನ್ನು ಎದುರಿಸಬೇಕಾದ ಕಟ್ಟುನಿಟ್ಟಾದ ಕಾಲಮಿತಿಯನ್ನು ನಿಗದಿ ಮಾಡ ಬೇಕು.

ಕಟ್ಟುನಿಟ್ಟಾದ ಜಾರಿ ಮತ್ತು ಸ್ಪಷ್ಟತೆಯಿಲ್ಲದ ಕಾನೂನುಗಳು, ನಿಯಮಗಳು ಕಡತಕ್ಕಷ್ಟೇ ಸೀಮಿತವಾಗುತ್ತವೆ. ನಿಯಮಗಳ ಅನುಸರಣೆಯ ಕೊರತೆಯು ದಂಡಮುಕ್ತ ಸಂಸ್ಕೃತಿ ಯನ್ನು ಬೆಳೆಸುತ್ತದೆ, ಸಾರ್ವಜನಿಕರ ನಂಬಿಕೆಯನ್ನು ಹಾಳು ಮಾಡುತ್ತದೆ. ಪ್ರಜಾಪ್ರಭುತ್ವ ಸಂಸ್ಥೆಗಳ ಸಮಗ್ರತೆ ( integrity) ಯನ್ನು ದುರ್ಬಲಗೊಳಿಸುತ್ತದೆ.

ಆದ್ದರಿಂದ, ದೃಢವಾದ ಆಡಳಿತಕ್ಕಾಗಿ (robust governance) ಬಹಿರಂಗ ಘೋಷಣೆಯ ಕಾನೂನುಗಳನ್ನು (disclosure laws) ಮತ್ತು ದಂಡ (penalties) ಗಳನ್ನು ಬಲಪಡಿಸುವುದು ಅತ್ಯಗತ್ಯ.

ಆಸ್ತಿ ಬಹಿರಂಗಪಡಿಸದ ಶಾಸಕರ ಬಗ್ಗೆ ಮಾಧ್ಯಮಗಳ ಮೌನವು ಸಮಾಜದ ನೈತಿಕ ಮತ್ತು ಪ್ರಜಾಪ್ರಭುತ್ವದ ವೈಫಲ್ಯವಾಗಿದೆ, ಇದು ಭ್ರಷ್ಟಾಚಾರ ಹುಲುಸಾಗಿ ಬೆಳೆಯಲು ಮತ್ತು ಸಾರ್ವಜನಿಕರ ನಂಬಿಕೆ ನಶಿಸಲು ಅವಕಾಶ ನೀಡುತ್ತದೆ. ಜಾಗೃತ ಕಾವಲುಗಾರರಂತೆ ಮಾಧ್ಯಮಗಳು ಪಾರದರ್ಶಕತೆಯ ಲೋಪಗಳನ್ನು ಎತ್ತಿ ತೋರಿಸಬೇಕು.

ಸಚಿವರೂ ಸೇರಿದಂತೆ ರಾಜಕೀಯ ಗಣ್ಯರನ್ನು ಹೊಣೆಗಾರರನ್ನಾಗಿ ಮಾಡಲು ಸಾರ್ವ ಜನಿಕರಲ್ಲಿ ಜಾಗೃತಿ ಮೂಡಿಸಬೇಕು. ಲೋಕಾಯುಕ್ತರ ಜಾರಿ ಅಧಿಕಾರಗಳನ್ನು ಸರಕಾರಿ ನೌಕರರಿಗೆ ಅನ್ವಯವಾಗುವ ಅಧಿಕಾರಗಳೊಂದಿಗೆ ಜೋಡಿಸುವ ಮೂಲಕ, ಕರ್ನಾಟಕವು ಎಲ್ಲಾ ಹಂತದ ಸಾರ್ವಜನಿಕ ಕಚೇರಿಗಳಲ್ಲಿ ಸ್ಥಿರವಾದ ಹೊಣೆಗಾರಿಕೆ, ಸಮಗ್ರತೆ ಮತ್ತು ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಬಹುದು.

ಬಾಯ್ಲರ್‌ಗಳ ಉಪ ನಿರ್ದೇಶಕರು (ನಿವೃತ್ತ) ಮೈಸೂರು