ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Gururaj Gantihole Column: ಶಾಶ್ವತ ಯೋಜನೆಗೆ ಕಾಯುತ್ತಿದೆ ಖಾರ್‌ ಲ್ಯಾಂಡ್‌ ಎಂಬ ಕ್ಷಾರಭೂಮಿ !

ರಾಜ್ಯವಾರು ಖಾರ್‌ಲ್ಯಾಂಡ್ ವಿಸ್ತರಣೆಯನ್ನು ನೋಡಿದರೆ, ಗುಜರಾತ್ ರಾಜ್ಯವು ಅತಿ ಹೆಚ್ಚು ಉಪ್ಪುಭೂಮಿ ಹೊಂದಿರುವ ರಾಜ್ಯವಾಗಿದೆ. ಸುಮಾರು 22 ಲಕ್ಷ ಹೆಕ್ಟೇರ್‌ಗಿಂತ ಹೆಚ್ಚು ಪ್ರದೇಶ ದಲ್ಲಿ ಉಪ್ಪುಭೂಮಿ ಕಂಡುಬರುತ್ತಿದ್ದು, ಇದು ಕಚ್ಚ್ ರಣ, ಸಮುದ್ರದ ಅಲೆಯು ಒಳನುಗ್ಗುವ ಪ್ರದೇಶಗಳು ಮತ್ತು ಕರಾವಳಿ ಮಾರುಕಟ್ಟೆ ವಿಸ್ತರಣೆಯ ಪರಿಣಾಮ ವಾಗಿದೆ.

ಶಾಶ್ವತ ಯೋಜನೆಗೆ ಕಾಯುತ್ತಿದೆ ಖಾರ್‌ ಲ್ಯಾಂಡ್‌ ಎಂಬ ಕ್ಷಾರಭೂಮಿ !

-

ಗಂಟಾಘೋಷ

ಕರಾವಳಿ ಪ್ರದೇಶದ ಖಾರ್‌ಲ್ಯಾಂಡ್ ಕೇವಲ ಒಂದು ಕೃಷಿ ಸಮಸ್ಯೆಯಲ್ಲ, ಅದು ಹವಾಮಾನ ಬದಲಾವಣೆ, ಪರಿಸರ ಹಾನಿ ಮತ್ತು ಮಾನವ ಚಟುವಟಿಕೆಗಳ ಸಮಗ್ರ ಪರಿಣಾಮ. ಇದಕ್ಕೆ ವಿಜ್ಞಾನಾಧಾರಿತ ಪರಿಹಾರಗಳು, ಸರಕಾರ-ಸಮಾಜ-ತಜ್ಞರ ಸಮಾಲೋಚನೆಯ ಅಗತ್ಯವಿದೆ. ಕರಾವಳಿಯ ಮಣ್ಣು, ನೀರು, ಪರಿಸರ ಮತ್ತು ಜನಜೀವನವನ್ನು ಕಾಪಾಡಲು ಕ್ರಮಗಳನ್ನು ತಕ್ಷಣ ಕೈಗೊಳ್ಳುವುದು ಕಾಲಬದ್ಧ ಹಾಗೂ ಅನಿವಾರ್ಯ.

ಭಾರತವು ವಿಭಿನ್ನ ಭೂಗರ್ಭ ರಚನೆ, ಮಳೆಯ ಸ್ವಭಾವ ಮತ್ತು ಜಲ ಚಲನವಲನ ವ್ಯವಸ್ಥೆ ವೈವಿಧ್ಯದಿಂದ ಕೂಡಿದೆ. ಆದರೆ ದೇಶದ ಹಲವು ಭಾಗಗಳಲ್ಲಿ ನೈಸರ್ಗಿಕ ಮತ್ತು ಮಾನವ ನಿರ್ಮಿತ ಕಾರಣಗಳಿಂದ ಮಣ್ಣು ಕ್ಷಾರೀಯ ಭೂಮಿಯಾಗುವ ಸಮಸ್ಯೆ ಗಂಭೀರ ವಾಗಿ ಕಾಣಿಸಿಕೊಳ್ಳುತ್ತಿದೆ. ಈ ರೀತಿಯ ಹೆಚ್ಚು ಉಪ್ಪಿನಿಂದ ಕೂಡಿದ ಪ್ರದೇಶಗಳನ್ನು ಖಾರ್‌ಲ್ಯಾಂಡ್ (ಕ್ಷಾರ ಭೂಮಿ-Salt-affected soils) ಎಂದು ಕರೆಯಲಾಗುತ್ತದೆ.

ಭಾರತದ ಕ್ಷಾರಮಣ್ಣಿನ ವಿಸ್ತರಣೆಯು ಹವಾಮಾನ ಬದಲಾವಣೆ, ಸಮುದ್ರಮಟ್ಟ ಏರಿಕೆ, ವ್ಯವಸ್ಥಿತವಲ್ಲದ ಕೃಷಿ ಪದ್ಧತಿ, ಮ್ಯಾಂಗ್ರೋವ್ ಕಾಡುಗಳ ನಾಶ ಮತ್ತು ನೀರು ನಿರ್ವಹಣೆ ಯ ಕೊರತೆಗಳಿಂದ ನಿರಂತರವಾಗಿ ಹೆಚ್ಚುತ್ತಲೇ ಇದೆ. ಖಾರ್‌ಲ್ಯಾಂಡ್ ಪ್ರದೇಶಗಳು ಹೆಚ್ಚಾ ದಷ್ಟೂ ಕೃಷಿ ಉತ್ಪಾದನೆ ಕುಸಿತ, ನೀರಿನ ಮಾಲಿನ್ಯ, ಮಣ್ಣಿನ pH ವ್ಯತ್ಯಾಸ ಮತ್ತು ಗಿಡಗಳ ಬೆಳವಣಿಗೆಯಲ್ಲಿ ಕುಂದುಕೊರತೆಗಳು ಕೂಡ ಹೆಚ್ಚಾಗುತ್ತವೆ.

ಭಾರತದಲ್ಲಿ ಉಪ್ಪು-ಭೂಮಿಯ ಒಟ್ಟು ವಿಸ್ತರಣೆ ಸುಮಾರು 6.72 ಲಕ್ಷ ಹೆಕ್ಟೇರ್, ಮತ್ತು ಇದೇ ಭೂಪ್ರದೇಶವು ಹಲವು ರಾಜ್ಯಗಳಲ್ಲಿ ಬೇರೆ ಬೇರೆ ಕಾರಣಗಳಿಂದ ಹೆಚ್ಚುತ್ತಲೇ ಬರು ತ್ತಿದೆ. ಭಾರತದಲ್ಲಿ ಕ್ಷಾರಭೂಮಿ ಎರಡು ರೀತಿಯಾಗಿದ್ದು, ಉಪ್ಪುನೀರು ಪ್ರವೇಶದಿಂದ (ಸಮುದ್ರದ ನೀರು- Saline soils) ಉಂಟಾಗುವ ಮಣ್ಣು ಮೊದಲನೆಯದಾಗಿದ್ದರೆ, ಸೋಡಿ ಯಂ ಪ್ರಮಾಣದ (Sodic soils) ಅಧಿಕತೆಯಿಂದ ಕ್ಷಾರೀಯ ಸ್ವಭಾವ ಪಡೆದ ಮಣ್ಣು ಎರಡನೆಯದಾಗಿದೆ. ಕರಾವಳಿ ಪ್ರದೇಶಗಳಲ್ಲಿ Coastal saline soils ಎಂಬ ವಿಶಿಷ್ಟ ಪ್ರಕಾರ ವೂ ಕಂಡುಬರುತ್ತದೆ.

ಇದನ್ನೂ ಓದಿ: Gururaj Gantihole Column: ಸುಸ್ಥಿರ ಜೀವನಶೈಲಿ ಎಂಬ ಮನೋಭಾವದ ನೈಜ ಬದುಕು

ರಾಜ್ಯವಾರು ಖಾರ್‌ಲ್ಯಾಂಡ್ ವಿಸ್ತರಣೆಯನ್ನು ನೋಡಿದರೆ, ಗುಜರಾತ್ ರಾಜ್ಯವು ಅತಿ ಹೆಚ್ಚು ಉಪ್ಪುಭೂಮಿ ಹೊಂದಿರುವ ರಾಜ್ಯವಾಗಿದೆ. ಸುಮಾರು 22 ಲಕ್ಷ ಹೆಕ್ಟೇರ್‌ಗಿಂತ ಹೆಚ್ಚು ಪ್ರದೇಶದಲ್ಲಿ ಉಪ್ಪುಭೂಮಿ ಕಂಡುಬರುತ್ತಿದ್ದು, ಇದು ಕಚ್ಚ್ ರಣ, ಸಮುದ್ರದ ಅಲೆಯು ಒಳನುಗ್ಗುವ ಪ್ರದೇಶಗಳು ಮತ್ತು ಕರಾವಳಿ ಮಾರುಕಟ್ಟೆ ವಿಸ್ತರಣೆಯ ಪರಿಣಾಮ ವಾಗಿದೆ.

ಇದರ ನಂತರ ಉತ್ತರಪ್ರದೇಶವು ದೊಡ್ಡ ಪ್ರಮಾಣದ ಕ್ಷಾರೀಯ ಮಣ್ಣನ್ನು ಹೊಂದಿದೆ. ಇಲ್ಲಿ ಸುಮಾರು 13 ಲಕ್ಷ ಹೆಕ್ಟೇರ್ ಪ್ರದೇಶವು sodic soils ಆಗಿ ಪರಿಣಮಿಸಿದ್ದು, ಭೂಗರ್ಭ ಜಲದ ಅತಿಯಾದ ಬಳಕೆ ಮತ್ತು ನದಿತಟ ಪ್ರದೇಶಗಳ ಮಣ್ಣಿನ ಕುಸಿತದಿಂದಾಗಿ ಈ ಸಮಸ್ಯೆ ಹೆಚ್ಚಾಗಿದೆ ಎನ್ನಲಾಗಿದೆ.

ಮಹಾರಾಷ್ಟ್ರ ಮತ್ತು ವಿದರ್ಭದ ಭಾಗಗಳಲ್ಲಿ ಕ್ಷಾರೀಯ ಮಣ್ಣು ಹೆಚ್ಚುತ್ತಿದ್ದು, ೬ ಲಕ್ಷ ಹೆಕ್ಟೇರ್‌ಗೂ ಹೆಚ್ಚು ಪ್ರದೇಶವು ಇದರಿಂದ ಪ್ರಭಾವಿತವಾಗಿದೆ. ಪಶ್ಚಿಮ ಬಂಗಾಳದ ಕರಾವಳಿಯು ಉಪ್ಪುಭೂಮಿಯಲ್ಲಿ ಮುಂಚೂಣಿಯಲ್ಲಿದ್ದು, ಸುಂದರ್‌ಬನ್ ಮತ್ತು ಗಂಗಾ-ಬ್ರಹ್ಮಪುತ್ರಾ ಡೆಲ್ಟಾ ಪ್ರದೇಶಗಳಲ್ಲಿ ೪ ಲಕ್ಷ ಹೆಕ್ಟೇರ್‌ಗಿಂತ ಹೆಚ್ಚು coastal saline soil ಕಂಡುಬರುತ್ತದೆ.

Kshara '

ರಾಜಸ್ಥಾನದಲ್ಲಿ ಮಳೆ ಕೊರತೆ, ಬೋರ್‌ವೆಲ್‌ಗಳ ಅತಿಯಾದ ನೀರೆಳೆತ ಮತ್ತು ನದಿ ನೀರಿನ ಹರಿವಿಕೆಯ ಕುಸಿತದಿಂದ ಸುಮಾರು ೩.೭ ಲಕ್ಷ ಹೆಕ್ಟೇರ್ ಮಣ್ಣು ಉಪ್ಪುಭೂಮಿಯಾಗಿದೆ. ತಮಿಳುನಾಡು, ವಿಶೇಷವಾಗಿ ಕಾರೈಕಲ್, ನಾಗಪಟ್ಟಣಂ, ಕಡಲತೀರ ಭಾಗಗಳಲ್ಲಿ ಸುಮಾರು 3.6 ಲಕ್ಷ ಹೆಕ್ಟೇರ್ ಭೂಮಿ ಕ್ಷಾರಭೂಮಿ ಪ್ರದೇಶವಾಗಿದೆ ಎಂದು ತಿಳಿದು‌ ಬರುತ್ತದೆ.

ಆಂಧ್ರ ಪ್ರದೇಶದ ಕರಾವಳಿ ಪ್ರದೇಶಗಳು, ಕೃಷ್ಣಾ-ಗೋದಾವರಿ ಡೆಲ್ಟಾ ಮತ್ತು ನದಿತೀರ ಪ್ರದೇಶಗಳಲ್ಲಿ 2.7 ಲಕ್ಷ ಹೆಕ್ಟೇರ್ ಗಿಂತ ಹೆಚ್ಚು ಉಪ್ಪುಭೂ ಮಿಯಿದೆ ಎಂದು ಅಂಕಿ-ಅಂಶಗಳು ಹೇಳುತ್ತವೆ.

ಹರಿಯಾಣ, ಪಂಜಾಬ್, ಬಿಹಾರ, ಮಧ್ಯಪ್ರದೇಶ, ಓಡಿಶಾ ಮತ್ತು ಕರ್ನಾಟಕಗಳಲ್ಲಿ ಕೂಡ ಉಪ್ಪುಭೂಮಿಯ ಸಮಸ್ಯೆ ವಿವಿಧ ಪ್ರಮಾಣಗಳಲ್ಲಿ ಕಂಡುಬರುತ್ತದೆ. ಕರಾವಳಿ ರಾಜ್ಯ ಗಳಾದ ಕೇರಳ, ಅಂಡಮಾನ್-ನಿಕೋಬಾರ್ ದ್ವೀಪಗಳು ಕೂಡ coastal saline soil ನಲ್ಲಿ ಗಮನಾರ್ಹ ಪ್ರಮಾಣದಲ್ಲಿವೆ.

ಮಳೆಗಾಲದಲ್ಲಿ ನದಿಯು ಮಿಗಿಲಾಗಿ ಹರಿದಾಗ ನದಿಗಳು ಹಾಗೂ ಸಮುದ್ರದಿಂದ ಉಪ್ಪು ನೀರು ಇಂಥ ಹತ್ತಿರದ ಕಡಿಮೆ ಎತ್ತರದ ಭೂಭಾಗಗಳಿಗೆ ಪ್ರವೇಶಿಸಲು ಅನುವು ಮಾಡಿ ಕೊಡುತ್ತದೆ. ಈ ಪ್ರದೇಶಗಳಲ್ಲಿ ಉಪ್ಪು ಬರುವ ಕಾರಣ ಭೂ-ಕೂಡಿಕೆಗೆ ಹಾನಿ ಯಾಗುತ್ತಿದ್ದು, ಸ್ಥಳೀಯರಿಗೆ ಕೃಷಿ ಹಾಗೂ ವಾಸ್ತವ್ಯಕ್ಕೂ ಇದು ಬಗೆಹರಿಯದ ಸಮಸ್ಯೆ ಯಾಗಿ ಕಾಡುತ್ತಿದೆ.

ಕರಾವಳಿ ಭಾಗದಲ್ಲಿ ಖಾರ್‌ಲ್ಯಾಂಡ್ ಪ್ರದೇಶಗಳನ್ನು ಗಮನಿಸಿದಾಗ, ಉಡುಪಿ, ಕುಂದಾ ಪುರ, ಗಂಗೊಳ್ಳಿ, ಮಲ್ಪೆ, ಬೈಂದೂರು, ಮಂಗಳೂರು ಸೇರಿದಂತೆ ಕರಾವಳಿ ಪ್ರದೇಶಗಳು ಮತ್ತು ನದಿಮುಖ-ನದಿತೀರ ಪ್ರದೇಶಗಳು ಈ ಭಾಗವಾಗಿ ಗುರುತಿಸಲ್ಪಟ್ಟಿವೆ. ಇಲ್ಲಿ ಉಪ್ಪು ಭೂಮಿಯ ಹರಡುವಿಕೆಯಿಂದಾಗಿ ಕೃಷಿ, ಮೀನುಗಾರಿಕೆ ಮತ್ತು ತೋಟಗಳಿಗೆ ಅಪಾಯ ಒದಗಿರುವುದನ್ನು ನಾವು ಗಮನಿಸಬಹುದು.

ಕರ್ನಾಟಕದಲ್ಲಿ ಖಾರ್‌ಲ್ಯಾಂಡ್ ಯೋಜನೆಯ ಒಟ್ಟು ವಿಸ್ತೀರ್ಣ 21000 ಎಕರೆಗಳಾಗಿದ್ದು, ಉಪ್ಪುನೀರು ಹೊರಗಿಡುವ ಅಣೆಕಟ್ಟುಗಳನ್ನು ನಿರ್ಮಿಸುವ ಮೂಲಕ ಕೃಷಿ ಬಳಕೆಗಾಗಿ ಮರುಪಡೆಯಲಾಗುತ್ತಿದೆ. ಸಮುದ್ರ ನೀರಿನ ಒಳನುಗ್ಗುವಿಕೆಯಿಂದ ಪ್ರಭಾವಿತವಾದ ಭೂಮಿಯನ್ನು ಮರಳಿ ಪಡೆಯುವ ಮತ್ತು ಸೀಗಡಿ ಕೃಷಿಯಂಥ ಚಟುವಟಿಕೆಗಳನ್ನು ಬೆಂಬಲಿಸುವ ದೊಡ್ಡ ಪ್ರಯತ್ನದ ಭಾಗವಾಗಿದೆ ಈ ಯೋಜನೆ.

ರಾಜ್ಯದ ಕರಾವಳಿಯಲ್ಲಿ ಹರಿಯುವ ನದಿಗಳಿಗೆ ಪ್ರಾಯೋಗಿಕ ಹಂತದಲ್ಲಿ ಜಾರಿ ಮಾಡುತ್ತಿರುವ ‘ಖಾರ್‌ಲ್ಯಾಂಡ್ ಯೋಜನೆ’ಗೆ (ಒಂದು ತಾಲೂಕಿಗೆ 100 ಕೋಟಿ ರು.ನಂತೆ) 300 ಕೋಟಿ ರು. ಮೊತ್ತದ ಕಾಮಗಾರಿಯ ಕ್ರಿಯಾಯೋಜನೆ ಜಾರಿಗೆ 2021ರಲ್ಲಿನ ಬಿಜೆಪಿ ಸರಕಾರ ಆಡಳಿತಾತ್ಮಕ ಅನುಮೋದನೆ ನೀಡಿತ್ತಲ್ಲದೆ, ಸಣ್ಣ ನೀರಾವರಿ ಇಲಾಖೆಯಿಂದ 1500 ಕೋಟಿ ರು. ಮೊತ್ತದ ‘ಖಾರ್ ಲ್ಯಾಂಡ್ ಯೋಜನೆ’ಯ ಮಾಸ್ಟರ್ ಪ್ಲಾನ್ ರೂಪಿಸ ಲಾಗಿತ್ತು. ಇದಿಷ್ಟು ಬಿಟ್ಟರೆ, ಇಂದಿಗೂ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಅಧಿಕಾರಕ್ಕೆ ಬರುತ್ತಿರುವ ಯಾವ ಸರಕಾರಗಳಿಗೂ ಇಚ್ಛಾಶಕ್ತಿ ಇದ್ದಂತೆ ಕಾಣಿಸುತ್ತಿಲ್ಲ.

ಭೂಸುಧಾರಣೆಯಾದರೂ ತೆರಿಗೆ ಪದ್ಧತಿ, ಉತ್ಪಾದನೆ, ಹೂಡಿಕೆ ಮುಂತಾದ ವೈಜ್ಞಾನಿಕ ಮತ್ತು ಸಾಮಾಜಿಕವಾಗಿ ವ್ಯತಿರಿಕವಾದ್ತ ಪ್ರಭಾವ ಮತ್ತು ಪರಿಣಾಮಗಳು ಹಾಗೇ ಉಳಿದು ಕೊಂಡಿವೆ. ಕೃಷಿ ಮತ್ತು ಸಾಮಾಜಿಕ ಬದಲಾವಣೆ ವಿಚಾರವಾಗಿ, ಈ ಪ್ರದೇಶಗಳಲ್ಲಿ ಭತ್ತದ ಗದ್ದೆಗಳಿಗೆ ಸೂಕ್ತ ನೀರಾವರಿ ಸಿಗುವುದಲ್ಲದೆ, ಉಪ್ಪುನೀರು ಮಿಶ್ರಣ ಕಡಿಮೆಗೊಳ್ಳು ವುದರಿಂದ ಕೃಷಿಯು ಸೇರಿದಂತೆ ಇತರೆ ಬದಲಾವಣೆಗಳು ಈ ಪ್ರದೇಶದಲ್ಲೂ ಬರುತ್ತವೆ ಎಂಬ ನಿರೀಕ್ಷೆ ಇಲ್ಲಿನ ಸ್ಥಳೀಯರದು.

ಕಾಲಕಾಲಕ್ಕೆ ಹವಾಮಾನ ವ್ಯತ್ಯಾಸ, ಕಡಲಿನ ಮಟ್ಟ ಏರಿಕೆ, ನದಿ ತಡಿಯಲ್ಲಿನ ಹೆಚ್ಚಿದ ಉಪ್ಪು ಪ್ರಮಾಣಗಳು ಸದ್ಯದ ಪ್ರಮುಖ ಸವಾಲುಗಳಾಗಿವೆ. ಇತ್ತೀಚೆಗೆ ವೈಜ್ಞಾನಿಕ ಪದ್ಧತಿ ಯಲ್ಲಿ ಟ್ರ್ಯಾಕರ್, ಡೈನಾಮಿಕ್ ಲ್ಯಾಂಡ್‌ಮ್ಯಾಪಿಂಗ್ ಮತ್ತು ಸ್ಯಾಟಲೈಟ್ ಡೇಟಾ ಉಪಯೋಗಿಸಿ ಕರ್ನಾಟಕದಲ್ಲಿಯು ಉಪ್ಪುಭೂಮಿಯನ್ನು ಗುರುತಿಸಲಾಗುತ್ತಿದೆ.

ಭವಿಷ್ಯದ ಕೃಷಿ ಬದುಕಿನ ದೃಷ್ಟಿಯಿಂದ ಸೂಕ್ತ ಯೋಜನಾ ನಿರ್ಣಯಗಳನ್ನು ಕೈಗೊಳ್ಳ ಬೇಕು. ಕರಾವಳಿ ಭಾಗದ ಖಾರ್‌ಲ್ಯಾಂಡ್‌ಗಳ ಪುನರುತ್ಪಾದನೆ ಹಾಗೂ ಸುಧಾರಣೆಗೆ ಪರಿಸರಪರ ಹಿತದೃಷ್ಟಿಯೊಂದಿಗೆ ವೈಜ್ಞಾನಿಕ ವಿಶ್ಲೇಷಣೆ ಜತೆಯಲ್ಲಿ ಸಾಮಾಜಿಕ ಭಾಗವ ಹಿಸುವಿಕೆ ಹಾಗೂ ಪಾರದರ್ಶಕ ನೀತಿಗಳು ಕೂಡ ಅಗತ್ಯವಾಗಿವೆ.

ಕಾಮಗಾರಿಗಳಿಂದ ಉಂಟಾಗಬಹುದಾದ ಪರಿಣಾಮಗಳ ಬಗ್ಗೆ ಸಮಗ್ರ ಎಕೋ ಸಿಸ್ಟಮ್ ಮೌಲ್ಯಮಾಪನ, ಸ್ಥಳೀಯ ಸಮುದಾಯದ ಅಭಿಪ್ರಾಯ ಹಾಗೂ ಕೃಷಿ-ವ್ಯಾಪಾರದ ಸ್ಥಿರತೆಗೆ ಬೇಕಾದ ಅಗತ್ಯ ಮಾತು-ಚರ್ಚೆಗಳು ನಡೆಯಬೇಕಿರುವುದು ಮುಖ್ಯ.

ಖಾರ್‌ಲ್ಯಾಂಡ್ ಸಮಸ್ಯೆಯ ಪರಿಣಾಮಗಳನ್ನು ಪರಿಸರದ ದೃಷ್ಟಿಯಿಂದ ನೋಡಿದರೆ, ಮಣ್ಣಿನ ಪೋಷಕಾಂಶಗಳನ್ನು ಪರಿವರ್ತನೆ ಮಾಡುವ ಸೂಕ್ಷ್ಮಜೀವಿಗಳು ಉಪ್ಪಿನಿಂದ ನಾಶವಾಗಿ ಮಣ್ಣಿನ ಉತ್ಪಾದಕತೆಯು ಕುಸಿತಗೊಳ್ಳುತ್ತದೆ. ಮ್ಯಾಂಗ್ರೋವ್ ಗಳು, ಮೀನು, ಪಕ್ಷಿಗಳು ಮತ್ತು ಚಿಪ್ಪು ಜೀವಿಗಳ ವಾಸಸ್ಥಾನಕ್ಕೆ ತೀವ್ರ ಹಾನಿಯಾಗುತ್ತದೆ.

ಇದರಿಂದ ಕರಾವಳಿ ಜೈವಿಕ ವೈವಿಧ್ಯ ಕುಸಿತಗೊಳ್ಳುತ್ತದೆ. ಮಣ್ಣು-ನೀರುಮಾಲಿನ್ಯ ಹೆಚ್ಚಾಗುತ್ತದೆ, ತಾಜಾ ನೀರಿನ ಗುಣಮಟ್ಟ ಕೂಡ ಹದಗೆಡುತ್ತದೆ. ಸಾಮಾಜಿಕ-ಆರ್ಥಿಕ ವಾಗಿ, ಖಾರ್‌ಲ್ಯಾಂಡ್ ಸಮಸ್ಯೆ ರೈತರ ಜೀವನೋಪಾಯವನ್ನು ಗಂಭೀರವಾಗಿ ಪ್ರಭಾ ವಿಸಿದೆ.

ಕೃಷಿ ಉತ್ಪಾದನೆ ಕಡಿಮೆಯಾಗುವುದರಿಂದ ಆದಾಯ ಕುಸಿತವಷ್ಟೇ ಅಲ್ಲ, ಅನೇಕ ಕುಟುಂಬಗಳು ಪರ್ಯಾಯ ಉದ್ಯೋಗಕ್ಕಾಗಿ ನಗರಗಳತ್ತ ವಲಸೆ ಹೋಗಬೇಕಾದ ಪರಿಸ್ಥಿತಿ ಬರುತ್ತದೆ. ಮೀನುಗಾರಿಕೆಯ ಮೇಲೂ ಪರಿಣಾಮವಾಗುತ್ತದೆ. ಸಮುದ್ರ, ನದಿಮುಖದಲ್ಲಿ ಉಪ್ಪುಗಾರಿಕೆಯ ವ್ಯತ್ಯಾಸದಿಂದ ಜೈವಿಕ ಜೀವಚಕ್ರಗಳು ಕುಸಿದು ಮೀನು ಸಂಗ್ರಹಣೆ ಕಡಿಮೆಯಾಗುತ್ತದೆ.

ಇವುಗಳ ಜತೆಯಲ್ಲಿ ರಸ್ತೆಗಳು, ಮನೆಗಳು, ನೀರು ಸರಬರಾಜು ವ್ಯವಸ್ಥೆಗಳು ಉಪ್ಪಿನಂಶ ದಿಂದ ಹಾನಿಗೊಳಗಾಗುತ್ತವೆ. ಈ ಸಮಸ್ಯೆ ಗಂಭೀರವಾದರೂ ಪರಿಹಾರಗಳಿಲ್ಲವೆಂದಲ್ಲ. ಇತರೆ ದೇಶಗಳು ಖಾರ್‌ಲ್ಯಾಂಡ್ (Salt-affected land) ಅನ್ನು ಪರಿಣಾಮಕಾರಿಯಾಗಿ ಹೇಗೆ ಬಳಸಿವೆ? ಎಂಬುದನ್ನು ವಿವೇಚಿಸಿದಾಗ, ಪ್ರಪಂಚದ ಅನೇಕ ದೇಶಗಳು ಕ್ಷಾರೀಯ ಮಣ್ಣನ್ನು (Salt-affected soils)ಯಶಸ್ವಿಯಾಗಿ ಬದಲಾಯಿಸಿ ಕೃಷಿ, ಉದ್ಯಾನ, ಮೀನು ಗಾರಿಕೆ, ಪರಿಸರ ಪುನರುತ್ಥಾನಗಳ ಮೂಲಕ ಅದ್ಭುತ ಫಲಿತಾಂಶ ಪಡೆದುಕೊಂಡಿವೆ.

ಇಸ್ರೇಲ್ ದೇಶವು ಮರಳು ಮಿಶ್ರಿತ ಉಪ್ಪುಮಣ್ಣನ್ನು ವಿಶ್ವದ ಅತ್ಯುತ್ತಮ ಕೃಷಿಭೂಮಿ ಪ್ರದೇಶವನ್ನಾಗಿ ಮಾರ್ಪಡಿಸಿ, ಮಾದರಿ ದೇಶವಾಗಿ ನಿಂತಿದೆ. ಇದರ ಯಶಸ್ಸಿನ ರಹಸ್ಯ ವೆಂದರೆ, ಅವರು ಕೈಗೊಂಡಂಥ ಉಪ್ಪಿನಂಶವನ್ನು ಕಂಟ್ರೋಲ್ ಮಾಡುವ ಹನಿ ನೀರಾವರಿ ಪದ್ಧತಿ.

ಜತೆಗೆ, ಉಪ್ಪುನೀರನ್ನು ತಡೆದುಕೊಂಡು ಬೆಳೆಫಲ ಕೊಡುವ ಬೆಳೆಗಳು, ಪಾಲಿಹೌಸ್ ತಂತ್ರಜ್ಞಾನದೊಂದಿಗೆ ಗ್ರೀನ್ ಹೌಸ್ ಕೃಷಿ ತಂತ್ರಜ್ಞಾನ, ಉಪ್ಪಿಳಿಕೆ (ನಿರ್ಲವಣೀಕರಣ) ಪದ್ಧತಿ ಮೂಲಕ ನೀರನ್ನು ಕೃಷಿಯಲ್ಲಿ ಮರುಬಳಕೆ ಮಾಡುವ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಇಂದು, ಹಣ್ಣು ಮತ್ತು ತರಕಾರಿಗಳನ್ನು ವಿಶ್ವಮಟ್ಟದಲ್ಲಿ ರಫ್ತು ಮಾಡುವ ಮಟ್ಟಕ್ಕೆ ಇಸ್ರೇಲ್ ಬದಲಾವಣೆ ಕಂಡಿದೆ.

ಆಧುನಿಕ ಕೃಷಿ ಜಗತ್ತಿನಲ್ಲಿ ಇದನ್ನು ವಿಶ್ವದ ಅತ್ಯಂತ ದೊಡ್ಡ Success Story ಎಂದೇ ನಾವು ಗುರುತಿಸಬಹುದು. ಇನ್ನು, ನೆದರ್ಲೆಂಡ್ಸ್ ಕೂಡ ಸಮುದ್ರ ನೀರನ್ನು ಉಪಯೋಗಿಸಿ ಬೆಳೆ ಬೆಳೆಯುವ ಪದ್ಧತಿಗೆ ಒತ್ತು ಕೊಟ್ಟಿದೆ. ಈ ಮೂಲಕ, ಸಮುದ್ರ ನೀರಿನ ಆಧಾರಿತ ಕೃಷಿಯಲ್ಲಿ ಇಂದು 300ಕ್ಕೂ ಹೆಚ್ಚು saline proof ಬೆಳೆಗಳನ್ನು ಬೆಳೆಯುತ್ತಿದೆ.

ಪಕ್ಕದ ಬಾಂಗ್ಲಾ ಕೂಡ, Coastal Salinity ಗೆ ಶಾಶ್ವತ ಪರಿಹಾರ ಕಂಡುಕೊಂಡಿದೆ. ಒಮನ್ ದೇಶವು ‘ಸೀ ವಾಟರ್ ಅಗ್ರಿಕಲ್ಚರ್’ ಅಳವಡಿಸಿಕೊಂಡಿದೆ. ಇದರಲ್ಲಿ ಚೀನಾ ಕೂಡ ಹಿಂದೆ ಬಿದ್ದಿಲ್ಲ. ಅದು ದೊಡ್ಡ ಮಟ್ಟದ Saline Land Reclamation ಮಾಡುವ ಮೂಲಕ ಎರಡು ಕೋಟಿ ಹೆಕ್ಟೇರ್ ಕ್ಷಾರಭೂಮಿಯನ್ನು ಬಳಕೆಯೋಗ್ಯವಾಗಿ ಪರಿವರ್ತಿಸಿದ್ದು, ಇದು ವಿಶ್ವದ ಅತಿದೊಡ್ಡ ಖಾರ್‌ಲ್ಯಾಂಡ್ ಪುನರುತ್ಥಾನ ಯೋಜನೆಯಾಗಿ ಗುರುತಿಸಿಕೊಂಡಿದೆ.

ಪ್ರಪಂಚದ ಅನೇಕ ದೇಶಗಳು (ಇಸ್ರೇಲ್, ನೆದರ್ಲೆಂಡ್ಸ್, ಬಾಂಗ್ಲಾದೇಶ, ಚೀನಾ, ಆಸ್ಟ್ರೇಲಿ ಯಾ) ತಮ್ಮ ಕ್ಷಾರೀಯ ಮಣ್ಣನ್ನು ವೈeನಿಕ ವಿಧಾನಗಳಿಂದ ಫಲವತ್ತುಗೊಂಡ ಭೂಮಿಯನ್ನಾಗಿ ಬದಲಿಸಿವೆ. ಮ್ಯಾಂಗ್ರೋ, ಉಪ್ಪು ತಾಳುವ ಬೆಳೆ, ಡ್ರಿಪ್ ನೀರು, ಜಿಪ್ಸಮ್ ಚಿಕಿತ್ಸೆ, sea-water farming, barrage systems ಮುಂತಾದವುಗಳಿಂದ ಲಕ್ಷಾಂತರ ಹೆಕ್ಟೇರ್ ಭೂಮಿಯು ಮತ್ತೆ ಜೀವಂತವಾಗಿದೆ.

ಕರಾವಳಿ ಭಾಗದ ಗಂಗೊಳ್ಳಿ, ಬೈಂದೂರು, ಉಡುಪಿಯಲ್ಲಿ ಇಂಥ ಯೋಜನೆಗಳನ್ನು ವಿವೇಚಿಸಿ, ಮುಂದಿನ ದಶಕಗಳಲ್ಲಿ ಕ್ಷಾರೀಯ ಮಣ್ಣು ದುಪ್ಪಟ್ಟಾಗುತ್ತ ಹೋಗುವುದನ್ನು ತಡೆಯಬೇಕಿದೆ. ಪರಿಣಾಮಕಾರಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮೂಲಕ, ಮುಂದಾಗುವ ಅಪಾಯವನ್ನು ಇಂದೇ ತಡೆದು, ಮುಂದಿನ ತಲೆಮಾರಿಗೆ ಯೋಗ್ಯ ಬದುಕಿನ ಹಾದಿ ನಿರ್ಮಿಸಬಹುದಾಗಿದೆ.

ನಮ್ಮ ಉಪ್ಪುಮಣ್ಣಿನ ವಿಚಾರಕ್ಕೆ ಪ್ರಮುಖ ಪರಿಹಾರವೆಂದರೆ ಮ್ಯಾಂಗ್ರೋವ್ ಪುನರು ತ್ಥಾನ. ಮ್ಯಾಂಗ್ರೋವ್ ಮರಗಳು ನೈಸರ್ಗಿಕವಾಗಿ ಉಪ್ಪು ನೀರನ್ನು ತಡೆಯುವ ಸಾಮರ್ಥ್ಯ ಹೊಂದಿದ್ದು, ಕರಾವಳಿ ಪ್ರದೇಶಗಳು ಮರುಜೀವ ಪಡೆಯಲು ನೆರವಾಗುತ್ತವೆ. ನದಿ-ಜಲಮಾರ್ಗಗಳ ಶುದ್ಧೀಕರಣ, ತಾಜಾ ನೀರಿನ ಹರಿವು ಹೆಚ್ಚಿಸುವ ಮೂಲಕ ಉಪ್ಪುನೀರು ನುಗ್ಗುವಿಕೆಯನ್ನು ಕಡಿಮೆ ಮಾಡಬಹುದು.

ಉದಾಹರಣೆಗೆ, ಉಪ್ಪುನೀರನ್ನು ಸಹಿಸಬಲ್ಲ ಅಕ್ಕಿ ತಳಿಗಳು, ತೆಂಗಿನ ಮರಗಳ ನಿರ್ದಿಷ್ಟ ತಳಿಗಳು ಮತ್ತು ಹಾಲೋಫೈಟ್ ಗಿಡಗಳನ್ನು ಖಾರ್‌ಲ್ಯಾಂಡ್ ಪ್ರದೇಶಗಳಲ್ಲಿ ಬೆಳೆಯಲು ಸಾಧ್ಯ. ಕರಾವಳಿ ಪ್ರದೇಶದ ಖಾರ್‌ಲ್ಯಾಂಡ್ ಕೇವಲ ಒಂದು ಕೃಷಿ ಸಮಸ್ಯೆಯಲ್ಲ, ಅದು ಹವಾಮಾನ ಬದಲಾವಣೆ, ಪರಿಸರಹಾನಿ ಮತ್ತು ಮಾನವ ಚಟುವಟಿಕೆಗಳ ಸಮಗ್ರ ಪರಿಣಾಮ. ಕರಾವಳಿಯ ಮಣ್ಣು, ನೀರು, ಪರಿಸರ ಮತ್ತು ಜನಜೀವನವನ್ನು ಕಾಪಾಡಲು ಕ್ರಮಗಳನ್ನು ತಕ್ಷಣ ಕೈಗೊಳ್ಳುವುದು ಕಾಲಬದ್ಧ ಹಾಗೂ ಅನಿವಾರ್ಯವೂ ಆಗಿದೆ.