Dr Dayanand Lingegowda Column: ಖರ್ಚುಗಾರನಿಗೆ ಕಪ್ಪು, ಮಿತವ್ಯಯಿಗೆ ಸರಕಾರದ ಚಿಪ್ಪು!
ಎರಡನೇ ವ್ಯಕ್ತಿ, ಇದೇ ಆದಾಯ ಇದ್ದರೂ, ಹೆಚ್ಚು ಸೌಕರ್ಯಯುತ ಜೀವನವನ್ನು ಆರಿಸಿಕೊಳ್ಳುತ್ತಾನೆ. ದುಬಾರಿ ಕಾರುಗಳನ್ನು ಖರೀದಿಸುತ್ತಾನೆ. ಚಾಲಕನನ್ನು ನೇಮಿಸಿಕೊಳ್ಳುತ್ತಾನೆ. ವೈಯಕ್ತಿಕ ಕಾರ್ಯದರ್ಶಿ ಯನ್ನು ಇಟ್ಟುಕೊಳ್ಳುತ್ತಾನೆ. ಹೊಸ ಮಾದರಿಯ ಮೊಬೈಲ್, ಲ್ಯಾಪ್‌ಟಾಪ್ ಮತ್ತು ಇತರೆ ಸಾಧನ ಗಳನ್ನು ಆಗಾಗ ಬದಲಾಯಿಸುತ್ತಾನೆ. ವಿದೇಶಿ ಸಮ್ಮೇಳನಗಳಿಗೆ ಹೋಗಿ ಐಷಾರಾಮಿ ಹೋಟೆಲ್‌ಗಳಲ್ಲಿ ತಂಗುತ್ತಾನೆ.
-
ತೆರಿಗೆ ಕಾಲ
ಡಾ.ದಯಾನಂದ ಲಿಂಗೇಗೌಡ
ನಾನು ಇಲ್ಲಿ ಹಂಚಿಕೊಳ್ಳುತ್ತಿರುವ ವಿಚಾರಗಳು ಸ್ಥಿರ ಸಂಬಳ ಪಡೆಯುವ ಉದ್ಯೋಗಿಗಳಿಗೆ ಅನ್ವಯಿಸುವುದಿಲ್ಲ. ಇವು ಮುಖ್ಯವಾಗಿ ಸ್ವಯಂ ಉದ್ಯೋಗಿಗಳು, ಸಣ್ಣ ಉದ್ಯಮಿಗಳು, ಖಾಸಗಿ ವೈದ್ಯರು, ಕನ್ಸಲ್ಟೆಂಟ್‌ಗಳು ಹಾಗೂ ಸೇವೆ ನೀಡುವ ಮೂಲಕ ಆದಾಯ ಗಳಿಸುವ ವೃತ್ತಿಪರರಿಗೆ ಸಂಬಂಧಿಸಿದವು. ಸ್ಥಿರ ಸಂಬಳ ಪಡೆಯುವ ಉದ್ಯೋಗಿಗಳಲ್ಲಿ ತೆರಿಗೆ ಪಾವತಿಯ ಪ್ರಮಾಣ ಸಾಮಾನ್ಯವಾಗಿ ನಿಗದಿತವಾಗಿರುತ್ತದೆ. ಅವರ ಸಂಬಳ ಹೆಚ್ಚಾಗಿ ಮುಂದಿನ ತೆರಿಗೆ ಸ್ಲ್ಯಾಬ್‌ಗೆ ಹೋದಾಗ ಮಾತ್ರ ತೆರಿಗೆಯಲ್ಲಿ ದೊಡ್ಡ ಬದಲಾವಣೆ ಉಂಟಾಗುತ್ತದೆ. ಇಂತವರು ಸಾದಾರಣವಾಗಿ ಫಾರಂ 16 ಸಲ್ಲಿಸುತ್ತಾರೆ.
ಆದರೆ ಸ್ವಯಂ ಉದ್ಯೋಗಿಗಳು ಮತ್ತು ಸಣ್ಣ ಉದ್ಯಮಿಗಳ ಪರಿಸ್ಥಿತಿ ವಿಭಿನ್ನವಾಗಿದೆ. ಅವರ ಆದಾಯವು ಅವರು ನೀಡುವ ಸೇವೆ ಅಥವಾ ನಡೆಸುವ ವ್ಯವಹಾರದ ಮೇಲೆ ಅವಲಂಬಿತ ವಾಗಿರುತ್ತದೆ. ತೆರಿಗೆ ನಿಯಮಗಳ ಪ್ರಕಾರ, ಅವರು ತಮ್ಮ ವೃತ್ತಿ ಅಥವಾ ವ್ಯವಹಾರಕ್ಕೆ ಸಂಬಂಧಿಸಿದ ನ್ಯಾಯಸಮ್ಮತ ವೆಚ್ಚ ಗಳನ್ನು ತೆರಿಗೆ ಕಡಿತವಾಗಿ ತೋರಿಸಬಹುದು.
ಉದಾಹರಣೆಗೆ ವಾಹನ ಖರೀದಿ, ಚಾಲಕರ ಅಥವಾ ಕಾರ್ಯದರ್ಶಿಯ ವೇತನ, ಕಚೇರಿ ಬಾಡಿಗೆ, ಸ್ಟೇಷನರಿ, ಪ್ರಯಾಣ ವೆಚ್ಚ, ವೃತ್ತಿಪರ ಸಮ್ಮೇಳನಗಳು, ಕಂಪ್ಯೂಟರ್, ಲ್ಯಾಪ್ ಟಾಪ್, ಮೊಬೈಲ್ ಹಾಗೂ ಇತರೆ ವ್ಯವಹಾರ ಸಂಬಂಧಿತ ವೆಚ್ಚಗಳು. ಈ ಕಾರಣದಿಂದಾಗಿ, ಸ್ವಯಂ ಉದ್ಯೋಗಿಗಳಲ್ಲಿ ತೆರಿಗೆ ಯೋಜನೆ ಮತ್ತು ಆರ್ಥಿಕ ಯೋಜನೆ, ಸ್ಥಿರ ಸಂಬಳ ಪಡೆಯುವವರಿಗಿಂತ ಸಂಪೂರ್ಣವಾಗಿ ವಿಭಿನ್ನವಾಗಿರುತ್ತದೆ. ಇವರು ಸಾಮಾನ್ಯವಾಗಿ 16ಎ ಫಾರಂ ಸಲ್ಲಿಸುತ್ತಾರೆ.
ಈ ವರ್ಗದಲ್ಲಿ ಖಾಸಗಿ ವೈದ್ಯರು ಹಾಗೂ ಕಾರ್ಪೊರೇಟ್ ಆಸ್ಪತ್ರೆಗಳಲ್ಲಿ ಶಾಶ್ವತ ನೌಕರ ರಾಗಿರದೆ ಕನ್ಸಲ್ಟೆಂಟ್ ಆಗಿ ಕಾರ್ಯನಿರ್ವಹಿಸುವ ವೈದ್ಯರೂ ಸೇರುತ್ತಾರೆ. ಇವರ ಆದಾಯವು ಅವರು ನೀಡುವ ವೈದ್ಯಕೀಯ ಸೇವೆಗಳ ಮೇಲೆ ಅವಲಂಬಿತವಾಗಿರುವು ದರಿಂದ, ಕಾನೂನು ಅನುಮತಿ ಸುವ ಮಟ್ಟಿಗೆ ವೃತ್ತಿಪರ ವೆಚ್ಚಗಳನ್ನು ತೆರಿಗೆ ಕಡಿತವಾಗಿ ತೋರಿಸಲು ಅವಕಾಶವಿರುತ್ತದೆ.
ಇದನ್ನೂ ಓದಿ: Dr Dayanand Lingegowda Column: ಆರೋಗ್ಯ ವಿಮೆಯ ಹಣವು ಸ್ಮಶಾನಕ್ಕೆ ಹೋದ ಹೆಣದಂತೆ !
ಉದಾಹರಣೆಗೆ, ಒಂದೇ ರೀತಿಯ ಕೆಲಸ ಮಾಡುವ, ಒಂದೇ ಪ್ರಮಾಣದ ಕಾನೂನುಬದ್ಧ (ಬಿಳಿ ಹಣ) ಆದಾಯ ಗಳಿಸುವ ಇಬ್ಬರು ಸ್ವಯಂ ಉದ್ಯೋಗಿಗಳನ್ನು ಕಲ್ಪಿಸಿಕೊಳ್ಳಿ. ಇಬ್ಬರೂ ಸಂಪೂರ್ಣ ಕಾನೂನು ಬದ್ಧ ಆದಾಯವನ್ನೇ ಗಳಿಸುತ್ತಿದ್ದಾರೆ ಎಂದು ಊಹಿಸೋಣ. ಮೊದಲ ವ್ಯಕ್ತಿ ಸರಳ ಜೀವನವನ್ನು ಆಯ್ಕೆ ಮಾಡುತ್ತಾನೆ. ಆರ್ಥಿಕವಾಗಿ ಸಾಧ್ಯವಿದ್ದರೂ ತನ್ನ ಕುಟುಂಬಕ್ಕೆ ಎರಡನೇ ಕಾರು ಖರೀದಿಸುವುದಿಲ್ಲ. ಅವನು ಒಂದು ಸರಳ ಕಾರನ್ನು ಮಾತ್ರ ಬಳಸುತ್ತಾನೆ. ಚಾಲಕನನ್ನು ಇಟ್ಟುಕೊಳ್ಳುವುದಿಲ್ಲ. ವೈಯಕ್ತಿಕ ಕಾರ್ಯದರ್ಶಿ ಅಥವಾ ಸಹಾಯಕರನ್ನೂ ನೇಮಿಸಿಕೊಳ್ಳುವು ದಿಲ್ಲ. ದಿನನಿತ್ಯದ ಕೆಲಸಗಳನ್ನು ತಾನೇ ನಿರ್ವಹಿಸುತ್ತಾನೆ. ಅಗತ್ಯವಿದ್ದಾಗ ಮಾತ್ರ ಸಮ್ಮೇಳನಗಳಿಗೆ ಹೋಗು ತ್ತಾನೆ. ದುಬಾರಿ ಮೊಬೈಲ್, ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್‌ಗಳನ್ನು ಆಗಾಗ ಬದಲಾಯಿಸುವುದಿಲ್ಲ. ಒಂದು ವಸ್ತುವನ್ನು ಅದರ ಉಪಯುಕ್ತ ಜೀವನ ಮುಗಿಯುವವ ರೆಗೂ ಬಳಸುತ್ತಾನೆ.
ಎರಡನೇ ವ್ಯಕ್ತಿ, ಇದೇ ಆದಾಯ ಇದ್ದರೂ, ಹೆಚ್ಚು ಸೌಕರ್ಯಯುತ ಜೀವನವನ್ನು ಆರಿಸಿಕೊಳ್ಳು ತ್ತಾನೆ. ದುಬಾರಿ ಕಾರುಗಳನ್ನು ಖರೀದಿಸುತ್ತಾನೆ. ಚಾಲಕನನ್ನು ನೇಮಿಸಿ ಕೊಳ್ಳುತ್ತಾನೆ. ವೈಯಕ್ತಿಕ ಕಾರ್ಯದರ್ಶಿ ಯನ್ನು ಇಟ್ಟುಕೊಳ್ಳುತ್ತಾನೆ. ಹೊಸ ಮಾದರಿಯ ಮೊಬೈಲ, ಲ್ಯಾಪ್‌ಟಾಪ್ ಮತ್ತು ಇತರೆ ಸಾಧನಗಳನ್ನು ಆಗಾಗ ಬದಲಾಯಿಸುತ್ತಾನೆ. ವಿದೇಶಿ ಸಮ್ಮೇಳನಗಳಿಗೆ ಹೋಗಿ ಐಷಾರಾಮಿ ಹೋಟೆಲ್‌ಗಳಲ್ಲಿ ತಂಗುತ್ತಾನೆ.
ಆದರೆ ಆರ್ಥಿಕ ವರ್ಷದ ಕೊನೆಯಲ್ಲಿ ಒಂದು ವಿಚಿತ್ರ ಸಂಗತಿ ಗೋಚರಿಸುತ್ತದೆ. ಸರಳ ಜೀವನ ನಡೆಸಿದ ಮೊದಲ ವ್ಯಕ್ತಿಯ ತೆರಿಗೆ ಹೆಚ್ಚು. ಐಷಾರಾಮಿ ಜೀವನ ನಡೆಸಿದ ಎರಡನೇ ವ್ಯಕ್ತಿಯ ತೆರಿಗೆ ಕಡಿಮೆ. ಏಕೆಂದರೆ ಎರಡನೇ ವ್ಯಕ್ತಿಯ ಅನೇಕ ವೆಚ್ಚಗಳು-ವಾಹನ, ಚಾಲಕರ ವೇತನ, ಕಾರ್ಯದರ್ಶಿಯ ಸಂಬಳ, ವೃತ್ತಿಪರ ಪ್ರಯಾಣ, ಸಮ್ಮೇಳನ ವೆಚ್ಚ, ಎಲೆಕ್ಟ್ರಾನಿಕ್ ಸಾಧನಗಳ ಮೌಲ್ಯ ಕುಸಿತ (Depreciation) ಮುಂತಾದವು- ಕಾನೂನು ಅನುಮತಿಸುವ ಮಟ್ಟಿಗೆ ತೆರಿಗೆ ಕಡಿತಕ್ಕೆ ಅರ್ಹವಾಗಬಹುದು. ಮೊದಲ ವ್ಯಕ್ತಿ ಕಡಿಮೆ ವೆಚ್ಚ ಮಾಡಿರುವುದರಿಂದ ಅವನಿಗೆ ಕಡಿತಗಳೂ ಕಡಿಮೆ. ಪರಿಣಾಮವಾಗಿ, ಒಂದೇ ಆದಾಯ ಇದ್ದರೂ ಅವನು ಹೆಚ್ಚು ತೆರಿಗೆ ಕಟ್ಟಬೇಕಾಗುತ್ತದೆ.
ಇಲ್ಲಿ ಕಾಡುವ ಪ್ರಶ್ನೆ, ನಮ್ಮ ತೆರಿಗೆ ವ್ಯವಸ್ಥೆ ಉಳಿತಾಯವನ್ನು ಪ್ರೋತ್ಸಾಹಿಸುತ್ತದೆಯೇ ಅಥವಾ ಖರ್ಚನ್ನೋ? ಇದಕ್ಕೆ ಉತ್ತರ ಸರಳ ಮತ್ತು ಸ್ಪಷ್ಟ. ನಮ್ಮ ತೆರಿಗೆ ವ್ಯವಸ್ಥೆ ಉಳಿತಾಯಕ್ಕಿಂತ ಖರ್ಚು ಮಾಡುವುದನ್ನೇ ಹೆಚ್ಚು ಪ್ರೋತ್ಸಾಹಿಸುತ್ತಿದೆ. ಸ್ವಯಂ ಉದ್ಯೋಗಿಗಳು ಮತ್ತು ಸಣ್ಣ ಉದ್ಯಮಿಗಳ ಆದಾಯ ಕಡಿಮೆಯಾದಾಗ ಸರಕಾರವೇನು ಸಾಕುವುದಿಲ್ಲ. ಆ ದೃಷ್ಟಿಯಲ್ಲಿ ಸ್ಥಿರ ಸಂಬಳ ಇಲ್ಲದ ವರು ಕಷ್ಟಕಾಲಕ್ಕೆ ಹೆಚ್ಚು ಉಳಿಸ ಬೇಕು. ಉಳಿಸಿದರೆ ತೆರಿಗೆ ಜಾಸ್ತಿ. ನಮ್ಮ ವ್ಯವಸ್ಥೆಯಲ್ಲಿ ಕಡಿಮೆ ಖರ್ಚು ಮಾಡುವವರು ಮತ್ತು ಹೆಚ್ಚು ಉಳಿತಾಯ ಮಾಡುವವರು ಕಡಿಮೆ ತೆರಿಗೆ ವಿನಾಯಿತಿ ಪಡೆಯುತ್ತಾರೆ. ಆದರೆ ಹೆಚ್ಚಿನ ವೆಚ್ಚ ಮಾಡುವವರಿಗೆ ತೆರಿಗೆ ಹೊರೆ ಕಡಿಮೆ. ಹೀಗಾಗಿ, ಈ ವ್ಯವಸ್ಥೆ ಕೆಲವೊಮ್ಮೆ ಮಿತವ್ಯಯಕ್ಕಿಂತ ಖರ್ಚನ್ನೇ ಹೆಚ್ಚು ಪ್ರೋತ್ಸಾಹಿಸುತ್ತಿದೆ ಎಂಬ ಭಾವನೆ ಮೂಡುತ್ತದೆ.
ಮತ್ತೊಂದು ಉದಾಹರಣೆ ತೆಗೆದುಕೊಳ್ಳೋಣ. ನೀವು ಪ್ರತಿದಿನ ಕಚೇರಿಗೆ ಹೋಗಲು ಕಾರಿನ ಬದಲು ಸೈಕಲ್ ಬಳಸುತ್ತೀರಿ ಎಂದು ಊಹಿಸಿ. ಇದರಿಂದ ಇಂಧನ ಉಳಿತಾಯವಾಗುತ್ತದೆ ಮತ್ತು ಟ್ರಾಫಿಕ್ ಒತ್ತಡ ಕಡಿಮೆ ಮಾಡುತ್ತದೆ. ಪರಿಸರ ಮಾಲಿನ್ಯ ಕಡಿಮೆಯಾಗುತ್ತದೆ. ಕಾರು ತಯಾರಿಕೆಯಿಂದ ಉಂಟಾಗುವ ಪರಿಸರ ಹಾನಿ ಕಡಿಮೆಯಾಗುತ್ತದೆ. ನಿಮ್ಮ ಆರೋಗ್ಯ ಉತ್ತಮವಾಗುತ್ತದೆ. ಜೀವನ ಶೈಲಿ ಸಂಬಂಧಿತ ಅನೇಕ ಕಾಯಿಲೆಗಳ ಅಪಾಯ ಕಡಿಮೆಯಾಗುತ್ತದೆ. ಆದರೆ ಸರಕಾರ ಮತ್ತು ಬಂಡವಾಳಶಾಹಿ ಇಂತವರನ್ನು ದ್ವೇಷಿಸು ತ್ತದೆ. ಏಕೆಂದರೆ ಇಂತವರಿಂದ ಆರ್ಥಿಕತೆ ಬೆಳೆಯುವು ದಿಲ್ಲ, ಕುಸಿಯುತ್ತದೆ.
ಸೈಕಲ್ ಬದಲು ಕಾರು ಖರೀದಿಸಿದರೆ ಸರಕಾರಕ್ಕೆ ಅನೇಕ ಹಂತಗಳಲ್ಲಿ ತೆರಿಗೆ ಬರುತ್ತದೆ- ವಾಹನದ ಮೇಲಿನ ಜಿಎಸ್ಟಿ, ನೋಂದಣಿ ಶುಲ್ಕ, ರಸ್ತೆ ತೆರಿಗೆ, ವಿಮೆ, ಇಂಧನ ತೆರಿಗೆ, ಸರ್ವೀಸ್, ಬಿಡಿಭಾಗಗಳು ಹೀಗೆ ಅನೇಕ ಮೂಲಗಳಿಂದ ಆದಾಯ ಬರುತ್ತದೆ. ಅರ್ಥ ವ್ಯವಸ್ಥೆ ವೃದ್ಧಿಸುತ್ತದೆ. ಆದ್ದರಿಂದ ನಮ್ಮ ತೆರಿಗೆ ವ್ಯವಸ್ಥೆ ಹಣ ಉಳಿತಾಯಕ್ಕಿಂತ ಉಪಭೋಗವನ್ನು (Consumption) ಹೆಚ್ಚು ಉತ್ತೇಜಿಸುತ್ತದೆ ಎಂಬ ಅಭಿಪ್ರಾಯ ಮೂಡು ತ್ತದೆ. ಆದ್ದರಿಂದ ಸಣ್ಣ ಸೈಕಲ್ ಟ್ರ್ಯಾಕ್ ಮಾಡಲು ಹಿಂಜರಿಯುವ ಸರಕಾರ, ದೊಡ್ಡ ರಸ್ತೆ ಮಾಡಲು ಆಸಕ್ತಿ ತೋರುತ್ತದೆ.
ನನಗೆ ನನ್ನ ಕೆಲವು ಸಹೋದ್ಯೋಗಿಗಳ ಜೀವನ ಶೈಲಿ ಬಹಳ ವರ್ಷದವರೆಗೂ ನನಗೆ ಅರ್ಥ ವಾಗಿರಲಿಲ್ಲ. ನನ್ನ ಸಹೋದ್ಯೋಗಿಗಳ ಆರಂಭದಲ್ಲಿ ಅವರು ಏಕೆ ದುಬಾರಿ ಕಾರುಗಳು, ಚಾಲಕರು, ಸಹಾಯಕರು, ದುಬಾರಿ ಗ್ಯಾಜೆಟ್‌ಗಳು ಮತ್ತು ಐಷಾರಾಮಿ ಪ್ರವಾಸಗಳನ್ನು ಆಯ್ಕೆ ಮಾಡುತ್ತಾರೆ ಎಂದು ಆಶ್ಚರ್ಯ ವಾಗುತ್ತಿತ್ತು. ಅದು ಅವರ ವೈಯಕ್ತಿಕ ಆಸಕ್ತಿ ಎಂದುಕೊಂಡಿದ್ದೆ. ಆದರೆ ತೆರಿಗೆ ವ್ಯವಸ್ಥೆಯನ್ನು ಅರ್ಥ ಮಾಡಿಕೊಂಡ ನಂತರ ನನಗೆ ಮತ್ತೊಂದು ಆಯಾಮ ಗೋಚರಿಸಿತು. ಅವರು ಉದ್ದೇಶಪೂರ್ವಕವಾಗಿ ಮಾಡುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ ನಮ್ಮ ತೆರಿಗೆ ವ್ಯವಸ್ಥೆ ಹೆಚ್ಚಿನ ಕಾನೂನು ಬದ್ಧ ವ್ಯವಹಾರ ವೆಚ್ಚ ಮಾಡುವವರಿಗೆ, ಸರಳ ಜೀವನ ನಡೆಸಿ ಉಳಿತಾಯ ಮಾಡುವವ ರಿಗಿಂತ ಹೆಚ್ಚಿನ ತೆರಿಗೆ ಲಾಭವನ್ನು ನೀಡುವಂತಿದೆ.
ಹಿಂದಿರುಗಿ ನೋಡಿದಾಗ, ನಾನು ಸರಳ ಜೀವನ ಆಯ್ಕೆ ಮಾಡಿಕೊಂಡಿದ್ದರಿಂದ ಜೀವನದಲ್ಲಿ ಕಳೆದುಕೊಂಡಿದ್ದೇ ಹೆಚ್ಚು ಅನಿಸುತ್ತಿದೆ. ಮೋದಿಯವರಿಗೆ ಹಣ ಕೊಡುವ ಬದಲು ನನ್ನ ಅನುಕೂಲಕ್ಕೆ ಖರ್ಚು ಮಾಡಿದ್ದರೆ ಒಳ್ಳೆಯದಿತ್ತು ಎನಿಸುತ್ತಿದೆ. ಇದು ತೆರಿಗೆ ವಿರೋಧಿ ಲೇಖನವಲ್ಲ. ಸರಕಾರ ತೆರಿಗೆ ಸಂಗ್ರಹಿಸಬಾರದು ಎನ್ನುವ ಅಭಿಪ್ರಾಯವೂ ಅಲ್ಲ. ಇದು ಕೇವಲ ಒಂದು ಪ್ರಶ್ನೆ: ಸರಳ ಜೀವನ, ಉಳಿತಾಯ ಮತ್ತು ಪರಿಸರ ಸ್ನೇಹಿ ಜೀವನಶೈಲಿಯನ್ನು ಅನುಸರಿಸುವವರಿಗೂ ತೆರಿಗೆ ವ್ಯವಸ್ಥೆಯಲ್ಲಿ ಸಮಾನ ಪ್ರೋತ್ಸಾಹ ಸಿಗಬಾರದೆ?
ತೆರಿಗೆ ಕಟ್ಟಿ ಬ್ಯಾಂಕಿನಲ್ಲಿ ಠೇವಣಿ ಇಟ್ಟ ಹಣಕ್ಕೆ ಬರುವ ಬಡ್ಡಿಗೆ ಸರಕಾರ ತೆರಿಗೆ ವಿಧಿಸುತ್ತದೆ. ಬ್ಯಾಂಕಿಂಗ್ ವ್ಯವಸ್ಥೆ ಸರಕಾರದ ಜೀವಾಳ. ಬ್ಯಾಂಕ್‌ಗಳು ನಡೆಯಲು ಜನರು ಠೇವಣಿ ಇಡಬೇಕು. ಆ ಠೇವಣಿಯಿಂದ ಜನರು ಸಾಲ ಪಡೆದು ವ್ಯವಹಾರ ಮಾಡಿ ದೇಶದ ಆರ್ಥಿಕತೆಗೆ ಸಹಕಾರ ನೀಡುತ್ತಾರೆ. ಉಳಿತಾಯದ ಹಣ ಬ್ಯಾಂಕಿನಲ್ಲಿ ಇರಿಸುವುದು ದೇಶದ ಅಭಿವೃದ್ಧಿಗೆ ಸಹಕಾರಿ. ಆದರೆ ಸರಕಾರ ಬಡ್ಡಿಗೆ ತೆರಿಗೆ ವಿಧಿಸುವುದರ ಮೂಲಕ ಏನು ಸಂದೇಶ ನೀಡುತ್ತಿದೆ?
ಇದಕ್ಕೆ ಪರಿಹಾರ ಏನು? ಒಮ್ಮೆ ಡಾ. ಸುಬ್ರಮಣಿಯನ್ ಸ್ವಾಮಿ ಅವರು ಆದಾಯಕ್ಕೆ ತೆರಿಗೆ ವಿಧಿಸುವ ಬದಲು, ಜನರು ಖರ್ಚಿನ (Consumption) ಆಧಾರದ ಮೇಲೆ ತೆರಿಗೆ ವಿಧಿಸುವ ವ್ಯವಸ್ಥೆ ಯನ್ನು ಪ್ರಸ್ತಾಪಿಸಿದ್ದನ್ನು ನೆನಪಿಸಿಕೊಳ್ಳಬಹುದು. ಈ ವ್ಯವಸ್ಥೆಯಲ್ಲಿ ಹಣ ಗಳಿಸಿದಾಗ ಆದಾಯದ ಮೇಲೆ ತೆರಿಗೆ ಇರುವುದಿಲ್ಲ. ಜನರು ಖರ್ಚು ಮಾಡಿದಾಗ ಮಾತ್ರ ತೆರಿಗೆ ಕಟ್ಟಬೇಕು. ಅಂತಹ ವ್ಯವಸ್ಥೆಯಲ್ಲಿ ಉಳಿತಾಯ ಮಾಡುವವರು, ತಮ್ಮ ವ್ಯವಹಾರದಲ್ಲಿ ಮರುಹೂಡಿಕೆ ಮಾಡುವವರು ಅಥವಾ ಷೇರು ಮಾರುಕಟ್ಟೆಯಂತಹ ಉತ್ಪಾದಕ ಹೂಡಿಕೆಗಳಲ್ಲಿ ಹಣ ಹೂಡುವವರು ಅನಗತ್ಯ ವಾಗಿ ಹೆಚ್ಚಿನ ತೆರಿಗೆ ತೆರುವುದಿಲ್ಲ. ಇದರಿಂದ ಬಹಳಷ್ಟು ಉಪಯೋಗಗಳಿವೆ. ಉಳಿತಾಯ ವೈಯಕ್ತಿಕವಾಗಿ ಹೆಚ್ಚಾಗಬಹುದು. ಬಂಡವಾಳ ನಿರ್ಮಾಣಕ್ಕೆ ಉತ್ತೇಜನ ಸಿಗಬಹುದು. ಉದ್ಯಮ ಶೀಲತೆ ಬೆಳೆಯಬಹುದು ಮತ್ತು ದೇಶದ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಬಹುದು. ಅಷ್ಟೇ ಅಲ್ಲ ಕಡಿಮೆ ಉಪಯೋಗ ಪರಿಸರ ಸ್ನೇಹಿ. ಕಷ್ಟ ಕಾಲದಲ್ಲಿ ಅಥವಾ ನಿವೃತ್ತ ಕಾಲದಲ್ಲಿ ಸರಕಾರದ ಸಹಾಯವಿಲ್ಲದೆ ಜನರು ಉಳಿಸಿದ ಹಣ ಬಳಸಬಹುದು.
ತೆರಿಗೆ ಕಟ್ಟುವರಿಗೆ ಈ ದೇಶದಲ್ಲಿ ಯಾವುದೇ ವಿಶೇಷ ಅನುಕೂಲಗಳು ಇಲ್ಲ. ಕನಿಷ್ಠ ಪಕ್ಷ ತೆರಿಗೆ ಪಾವತಿಸುವವರಿಗೆ ಕೆಲವು ಅನುಕೂಲವನ್ನಾದರೂ ಮಾಡಿಕೊಡಿ. ಉದಾಹರಣೆಗೆ ತೆರಿಗೆ ಕಟ್ಟುವರಿಗೆ ಸರಕಾರಿ ಸೇವೆಗಳಲ್ಲಿ ಆದ್ಯತೆ, ತ್ವರಿತ ಅರ್ಜಿಗಳ ತ್ವರಿತ ವಿಲೇವಾರಿ, ವಿಶೇಷ ಸೇವಾ ಕೌಂಟರ್‌ಗಳು ಅಥವಾ ಇತರೆ ಕಾನೂನು ಅಥವಾ ಆಡಳಿತಾತ್ಮಕ ಸೌಲಭ್ಯ ಗಳು. ದಯವಿಟ್ಟು ತೆರಿಗೆದಾರನಿಗೆ ಏನಾದರು ಕೊಡಿ. ಇದರಿಂದ ತೆರಿಗೆ ನೀಡಿದ ನಾಗರಿಕರಿಗೆ ಗೌರವ ನೀಡುವುದರ ಜೊತೆಗೆ ಪ್ರಾಮಾಣಿಕ ತೆರಿಗೆ ಪಾವತಿಯನ್ನು ಉತ್ತೇಜಿಸಬಹುದು.
ಸದ್ಯದ ತೆರಿಗೆ ಪದ್ಧತಿ ‘ಉಳಿತಾಯ ಮಾಡುವವರಿಗೆ ಚಿಪ್ಪು, ಖರ್ಚುಗಾರನಿಗೆ ಕಪ್ಪು’ ಎನ್ನುವಂತಿದೆ. ಸದ್ಯದ ಪದ್ಧತಿ ತೆರಿಗೆಗಳ್ಳತನವನ್ನು ಉತ್ತೇಜಿಸುತ್ತದೆ. ಅತಿ ಕೊಳ್ಳುಬಾಕ ಸಂಸ್ಕೃತಿ ಉತ್ತೇಜಿಸುವ ತೆರಿಗೆ ಪದ್ಧತಿ ಪರಿಸರ ಮಾರಕ. ಈ ದೇಶದಲ್ಲಿ ತೆರಿಗೆದಾರನಿಗೆ ಕನಿಷ್ಠ ಗೌರವದ ಅವಶ್ಯಕತೆ ಇದೆ. ನಮ್ಮ ಮಾತು ಯಾರಾದರೂ ಕೇಳಿಸಿಕೊಳ್ಳುತ್ತಿದ್ದಾರಾ?