ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Raghava Sharma Nidle Column: ಮೋದಿ ಬಿಡಿ, ನಿಮ್ಮ ಪರ್ಯಾಯ ಮಾದರಿ ಏನು ರಾಹುಲ್‌ ?

ಮೋದಿ ವಿರುದ್ಧ ಯಾರು? ಎಂಬ ಪ್ರಶ್ನೆಯ ಜೊತೆಗೆ ಮೋದಿ ನಂತರ ಏನು? ಎಂಬ ಪ್ರಶ್ನೆಗೂ ಉತ್ತರ ನೀಡಬೇಕಾಗುತ್ತದೆ. ಇಲ್ಲಿಯೇ ರಾಹುಲ್ ಗಾಂಧಿಯವರ ಇತ್ತೀಚಿನ ರಾಜಕೀಯ ಶೈಲಿಯ ಬಗ್ಗೆ ಚರ್ಚೆ ಮುಖ್ಯವಾಗುತ್ತದೆ. ಇಂದೋರ್‌ನಲ್ಲಿ ಕೆಲ ದಿನಗಳ ಹಿಂದೆ ನಡೆದ ಛಾತ್ರೋ ಕೀ ಗೂಂಜ್‌ʼನಲ್ಲಿ ಅವರು ದೇಶದ ರಾಷ್ಟ್ರೀಯ ಭದ್ರತಾ ಸಲಹೆಗಾರ, ದೇಶಕ್ಕಾಗಿ ತನ್ನ ಪ್ರಾಣವನ್ನೂ ಲೆಕ್ಕಿಸದೆ ಶತ್ರುರಾಷ್ಟ್ರ ಪಾಕಿಸ್ತಾನ ದಲ್ಲಿ ಎಷ್ಟೋ ವರ್ಷಗಳ ಕಾಲ ಗೂಢಚರ್ಯೆ ಕೆಲಸ ಮಾಡಿದ್ದ ಅಜಿತ್ ದೋವಲ್‌ರನ್ನು ತಮ್ಮ ರಾಜಕೀಯ ಲಾಭಕ್ಕೆ ಎಳೆದು ತಂದದ್ದು ವ್ಯಾಪಕ ಟೀಕೆಗೆ ಗ್ರಾಸವಾಯಿತು.

ಮೋದಿ ಬಿಡಿ, ನಿಮ್ಮ ಪರ್ಯಾಯ ಮಾದರಿ ಏನು ರಾಹುಲ್‌ ?

-

ಜನಪಥ

2029ರ ಲೋಕಸಭೆ ಚುನಾವಣೆ ಇನ್ನೂ ದೂರದಲ್ಲಿದೆ. ಆದರೆ ಭಾರತದ ರಾಷ್ಟ್ರೀಯ ರಾಜಕೀಯ ದಲ್ಲಿ ಅದರ ನೆರಳು ಈಗಲೇ ಕಾಣಿಸಿಕೊಳ್ಳುತ್ತಿದೆ. ನರೇಂದ್ರ ಮೋದಿ ನೇತೃತ್ವದ ಬಿಜೆಪಿ-ಎನ್‌ಡಿಎ ಸರ್ಕಾರ ಒಂದು ಕಡೆ ತನ್ನ ಆಡಳಿತದ ದಾಖಲೆ ಮುಂದಿಟ್ಟುಕೊಂಡು ಮುಂದುವರಿಯಲು ಸಿದ್ಧವಾಗುತ್ತಿದ್ದರೆ, ಮತ್ತೊಂದೆಡೆ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ತಮ್ಮನ್ನು ಪರ್ಯಾಯ ರಾಷ್ಟ್ರೀಯ ನಾಯಕನಾಗಿ ಸ್ಥಾಪಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ.

ಈ ಹಿಂದಿನ ವಿವಿಧ ಚುನಾವಣೆಗಳಲ್ಲೂ ಅವರು ಕಾಂಗ್ರೆಸ್ ನಾಯಕನಾಗಿ ಅಘೋಷಿತ ಪ್ರಧಾನಿ ಅಭ್ಯರ್ಥಿ ಯಾಗಿದ್ದರೂ, ದೇಶದ ಜನರು ಅವರನ್ನು ಸ್ವೀಕರಿಸಲಿಲ್ಲ. ಅಷ್ಟೇ ಏಕೆ, ಪ್ರತಿಪಕ್ಷಗಳು ಕೂಡ ಅವರನ್ನು ಒಪ್ಪಲಿಲ್ಲ. ಈಗಲೂ ಒಪ್ಪಿದಂತೆ ಕಾಣುತ್ತಿಲ್ಲ. ಇರಲಿ. 2024ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 99 ಸ್ಥಾನಗಳಿಗೆ ಏರಿತು ಮತ್ತು ಬಿಜೆಪಿ 240 ಸ್ಥಾನಗಳಿಗೆ ಇಳಿಯಿತು.

ಇದರಿಂದ ಹಿಂದಿನ ಅವಧಿಗಿಂತ ಭಿನ್ನವಾದ ಸಂಸತ್ತಿನ ರಾಜಕೀಯ ಸಮೀಕರಣ ನಿರ್ಮಾಣ ವಾಯಿತು. ರಾಹುಲ್ ಗಾಂಧಿ ಪ್ರತಿಪಕ್ಷ ನಾಯಕರಾಗಿ ಈಗ ಹೆಚ್ಚು ಸಕ್ರಿಯರಾಗಿದ್ದು, ಮೋದಿ ಸರ್ಕಾರದ ವಿರುದ್ಧ ನಿರಂತರ ರಾಜಕೀಯ ಮತ್ತು ಸಂಸದೀಯ ಹೋರಾಟ ನಡೆಸುತ್ತಿದ್ದಾರೆ. ಈಚಿನ ದಿನಗಳಲ್ಲಿ ಅವರು ಕೇಂದ್ರದ ವಿರುದ್ಧ ಮತ್ತಷ್ಟು ಆಕ್ರಮಣಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದು, ದೇಶದ ಯುವ ವರ್ಗದಲ್ಲಿ ಬಿಜೆಪಿ ವಿರೋಧಿ ಮನಸ್ಸನ್ನು ಗಟ್ಟಿಗೊಳಿಸುವ ಶತ ಪ್ರಯತ್ನ ಮಾಡುತ್ತಿದ್ದಾರೆ.

ಇದನ್ನೂ ಓದಿ: Raghava Sharma Nidle Column: ಪಂಜಾಬ್‌ʼನಲ್ಲಿ ಬಿಜೆಪಿಗೆ ಸ್ವತಂತ್ರ ನೆಲೆ ಸಾಧ್ಯವೇ ?

ದೇಶದ ವಿವಿಧೆಡೆ ಛಾತ್ರೋ ಕೀ ಗೂಂಜ್ (ವಿದ್ಯಾರ್ಥಿಗಳ ಧ್ವನಿ) ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾ, ಯುವ ಮತವರ್ಗವನ್ನು ಕಾಂಗ್ರೆಸ್‌ನತ್ತ ಸೆಳೆಯುವ ಕಾರ್ಯತಂತ್ರ ಜಾರಿ ಮಾಡಿದ್ದಾರೆ. ಆದರೆ 2029ರಲ್ಲಿ ಪ್ರಧಾನಿಯಾಗುವ ಯಾವುದೇ ರಾಷ್ಟ್ರೀಯ ರಾಜಕೀಯ ಪ್ರಯತ್ನಕ್ಕೆ ಕೇವಲ ಮೋದಿ ವಿರೋಧ ಸಾಕಾಗುವುದಿಲ್ಲ.

ಮೋದಿ ವಿರುದ್ಧ ಯಾರು? ಎಂಬ ಪ್ರಶ್ನೆಯ ಜೊತೆಗೆ ಮೋದಿ ನಂತರ ಏನು? ಎಂಬ ಪ್ರಶ್ನೆಗೂ ಉತ್ತರ ನೀಡಬೇಕಾಗುತ್ತದೆ. ಇಲ್ಲಿಯೇ ರಾಹುಲ್ ಗಾಂಧಿಯವರ ಇತ್ತೀಚಿನ ರಾಜಕೀಯ ಶೈಲಿಯ ಬಗ್ಗೆ ಚರ್ಚೆ ಮುಖ್ಯವಾಗುತ್ತದೆ. ಇಂದೋರ್‌ನಲ್ಲಿ ಕೆಲ ದಿನಗಳ ಹಿಂದೆ ನಡೆದ ಛಾತ್ರೋ ಕೀ ಗೂಂಜ್‌ʼನಲ್ಲಿ ಅವರು ದೇಶದ ರಾಷ್ಟ್ರೀಯ ಭದ್ರತಾ ಸಲಹೆಗಾರ, ದೇಶಕ್ಕಾಗಿ ತನ್ನ ಪ್ರಾಣವನ್ನೂ ಲೆಕ್ಕಿಸದೆ ಶತ್ರುರಾಷ್ಟ್ರ ಪಾಕಿಸ್ತಾನ ದಲ್ಲಿ ಎಷ್ಟೋ ವರ್ಷಗಳ ಕಾಲ ಗೂಢಚರ್ಯೆ ಕೆಲಸ ಮಾಡಿದ್ದ ಅಜಿತ್ ದೋವಲ್‌ರನ್ನು ತಮ್ಮ ರಾಜಕೀಯ ಲಾಭಕ್ಕೆ ಎಳೆದು ತಂದದ್ದು ವ್ಯಾಪಕ ಟೀಕೆಗೆ ಗ್ರಾಸವಾಯಿತು.

ಅಜಿತ್ ದೋವಲ್ ಅವರು ನಿಮ್ಮ ಫೊನ್, ವಾಟ್ಸಾಪ್, ಫೇಸ್‌ಬುಕ್ ಮತ್ತು ಇತರ ಸಂವಹನಗಳ ಮೇಲೆ ನಿಯಂತ್ರಣ ಹೊಂದಿದ್ದಾರೆ ಹಾಗೂ ಫೋನ್ ಟ್ಯಾಪಿಂಗ್ ಮೂಲಕ ಎಲ್ಲಾ ಮಾಹಿತಿಯನ್ನು ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರಿಗೆ ನೀಡುತ್ತಿರುತ್ತಾರೆ ಎನ್ನುವುದು ರಾಹುಲ್ ಆರೋಪ. ಹಾಗಾದರೆ, ದೇಶದ ಭದ್ರತೆಗೆ ಸಂಬಂಧಿಸಿದ ವಿಚಾರಗಳಲ್ಲಿ ಅನುಮಾನಾಸ್ಪದ ವ್ಯಕ್ತಿಗಳ ಫೋನ್ ಟ್ಯಾಪ್ ಮಾಡಿ ಸರ್ಕಾರಕ್ಕೆ ಮಾಹಿತಿ ನೀಡುವುದು ತಪ್ಪೇ? ಇಂತಹಾ ಸಾಮಾನ್ಯ ಜ್ಞಾನವೂ ರಾಹುಲ್‌ರಲ್ಲಿ ಇಲ್ಲವೇ? ಅಥವಾ ಸುಳ್ಳು ಮಾಹಿತಿ ನೀಡಿಯಾದರೂ ಸರಿ, ಯುವಕರ ದಾರಿ ತಪ್ಪಿಸಿ ತಮ್ಮೆಡೆಗೆ ಸೆಳೆದುಕೊಳ್ಳಬೇಕೆಂಬ ಹತಾಶ ಪ್ರಯತ್ನದ ಭಾಗವೇ ಇದು? ದೇಶದ ಭದ್ರತಾ ಸಲಹೆಗಾರರು ಹೇಗೆ ಕೆಲಸ ಮಾಡುತ್ತಾರೆ ಮತ್ತು ಅವರ ಕಾರ್ಯವ್ಯಾಪ್ತಿಗಳೇನು ಎಂಬ ಮಾಹಿತಿ ಇಲ್ಲದಿದ್ದರೆ, ಹಿಂದೆ ಯುಪಿಎ ಸರ್ಕಾರದಲ್ಲಿದ್ದ ಗೃಹ/ರಕ್ಷಣಾ ಸಚಿವರ ಬಳಿ ರಾಹುಲ್ ಚರ್ಚಿಸಬಹುದು. ಆದರೆ, ರಾಜಕೀಯ ಲಾಭಕ್ಕಾಗಿ ದೇಶದ ಭದ್ರತಾ ಉನ್ನತಾಧಿಕಾರಿಗಳನ್ನೂ ಬೀದಿಗೆಳೆದು ತರುವುದು ಭವಿಷ್ಯದ ಪ್ರಧಾನಿ ಎಂದು ಬಿಂಬಿಸಿಕೊಳ್ಳುವ ವ್ಯಕ್ತಿಗೆ ಶೋಭೆ ತರುವುದಿಲ್ಲ ಮತ್ತು ಜನರಲ್ಲೂ ನಿಮ್ಮ ಬಗ್ಗೆ ವಿಶ್ವಾಸ ಮೂಡುವುದಿಲ್ಲ.

Screenshot_3 RG

ಏಕೆಂದರೆ, ಇದು ಸಾಮಾನ್ಯ ರಾಜಕೀಯ ಟೀಕೆಯಲ್ಲ. ಇದು ರಾಷ್ಟ್ರೀಯ ಭದ್ರತೆ, ನಾಗರಿಕರ ಖಾಸಗಿತನ ಮತ್ತು ಸರ್ಕಾರದ ಅಧಿಕಾರದ ಬಳಕೆ ಕುರಿತ ಗಂಭೀರ ಆರೋಪ. ಅದೇ ರೀತಿ, ಇಂದೋರ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯವರ ಬಗೆಗಿನ ಮಿಮಿಕ್ರಿಗೆ ಕೂಡ ವ್ಯಾಪಕ ಆಕ್ಷೇಪ ಕೇಳಿಬಂತು. ಕಾಂಗ್ರೆಸ್‌ನ ಕೆಲ ನಾಯಕರೇ ಆ ಮಿಮಿಕ್ರಿ ತಪ್ಪಿಸಬಹುದಿತ್ತು ಮತ್ತು ಅದರಿಂದ ವಿದ್ಯಾರ್ಥಿಗಳ ಮೂಲ ವಿಚಾರಗಳು ಹಿಂಬದಿಗೆ ಹೋದವು ಎಂದು ಬೇಸರ ವ್ಯಕ್ತಪಡಿಸಿ ದ್ದಾರೆ.

ವಿದ್ಯಾರ್ಥಿಗಳ ನಿರುದ್ಯೋಗ, ಪರೀಕ್ಷಾ ಅಕ್ರಮ, ನೇಮಕಾತಿ ವಿಳಂಬ ಮತ್ತು ಶಿಕ್ಷಣದ ಸಮಸ್ಯೆಗಳ ಕುರಿತು ನಡೆದ ಕಾರ್ಯಕ್ರಮದ ಕೇಂದ್ರ ಸಂದೇಶವು, ದೋವಲ್ ಮತ್ತು ಮೋದಿ ಕುರಿತ ವೈಯಕ್ತಿಕ ಆರೋಪಗಳ ಕಡೆಗೆ ತಿರುಗಿತು. ಜನರಿಗೆ ಸಮಸ್ಯೆ ಪರಿಹಾರ ಬೇಕು. ಆದರೆ, ವ್ಯಂಗ್ಯ, ರಾಜಕೀಯ ನಾಟಕೀಯತೆಯೇ ವಿಜೃಂಭಿಸಿದರೆ ಮೂಲ ಉದ್ದೇಶ ಬದಿಗೆ ಸರಿಯುತ್ತದೆ. ತಮ್ಮ ರಾಜಕೀಯ ಕಾರ್ಯಾಚರಣೆ ಮೋದಿ ವಿರೋಧದಿಂದ ಪರ್ಯಾಯ ನಾಯಕತ್ವದವರೆಗೆ ಎಂಬುದು ರಾಹುಲ್‌ಗೆ ಇನ್ನೂ ಸ್ಪಷ್ಟವಾಗಿ ಅರ್ಥವಾಗಿಲ್ಲವೋ ಗೊತ್ತಿಲ್ಲ. ಆದರೆ, ಅವರ ಕೆಲ ಕಾರ್ಯಶೈಲಿ ನೋಡಿದರೆ, ಹಿಂದಿನ ಅನುಭವಗಳಿಂದ ಇನ್ನೂ ಪಾಠ ಕಲಿತಿಲ್ಲ ಅನ್ನಿಸುವುದಂತೂ ನಿಜ.

ಮೋದಿ ಬಗೆಗಿನ ಮಿಮಿಕ್ರಿ ಹೇಗೆ ತಪ್ಪೋ, ಎಐ ಬಳಸಿಕೊಂಡು ಸೋನಿಯಾ ಗಾಂಧಿಯವರನ್ನು ಬಾರ್ ಡ್ಯಾನ್ಸರ್ ಎಂದು ಗೇಲಿ ಮಾಡುವುದೂ ಅಷ್ಟೇ ತಪ್ಪು. ಇದರ ಬಗ್ಗೆ ಬಿಜೆಪಿ ನಾಯಕರ ಮೌನ ಹಾಗೂ ಇಂಥವುಗಳನ್ನು ಬಿಜೆಪಿ ರಾಜ್ಯ ಘಟಕಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದು ಅವರ ಅಸಹ್ಯಕರ ಮನಸ್ಥಿತಿಗೆ ಸಾಕ್ಷಿ. ಮೋದಿಯವರ ಕುರಿತ ಮಿಮಿಕ್ರಿ ಟೀಕೆಗೆ ಒಳಗಾಗುವುದಾದರೆ, ರಾಜಕೀಯ ವಿರೋಧಿಗಳನ್ನು ಗುರಿಯಾಗಿಸಿಕೊಂಡು ಎಐ ಅಥವಾ ಇತರ ಡಿಜಿಟಲ್ ತಂತ್ರಜ್ಞಾನಗಳ ಮೂಲಕ ಅವಹೇಳನಕಾರಿ ವಿಷಯಗಳನ್ನು ಸೃಷ್ಟಿಸುವುದನ್ನೂ ಅದೇ ರೀತಿಯ ನೈತಿಕ ಮಾನದಂಡದಿಂದ ನೋಡಬೇಕು.

ಒಂದು ಪಕ್ಷದ ಬೆಂಬಲಿಗರು ಮಾಡುವ ತಪ್ಪನ್ನು ಮತ್ತೊಂದು ಪಕ್ಷದ ಬೆಂಬಲಿಗರು ಮಾಡುವು ದರಿಂದ ಸಮರ್ಥಿಸಲಾಗುವುದಿಲ್ಲ. ಇದು ಎಲ್ಲಾ ರಾಜಕೀಯ ಪಕ್ಷಗಳಿಗೂ ಸಮಾನವಾಗಿ ಅನ್ವಯಿಸುವ ರಾಜಕೀಯ ನೈತಿಕತೆಯ ಪ್ರಶ್ನೆ. ರಾಹುಲ್ ಗಾಂಧಿ ವಿಚಾರಕ್ಕೆ ಬರುವುದಾದರೆ; ಅವರ ಮುಂದೆ ಇರುವ ದೊಡ್ಡ ಸವಾಲು ಮೋದಿಯವರನ್ನು ಟೀಕಿಸುವುದೊಂದೇ ಅಲ್ಲ.

ಸಮಾಜ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಅರಿವು ನಿಮಗೆ ಇದೆಯೇ? ಇದ್ದರೆ, ಸಮಸ್ಯೆಗಳಿಗೆ ನಿಮ್ಮ ಪರಿಹಾರ ಏನು? ನೀವು ಆ ಪರಿಹಾರವನ್ನು ಆಡಳಿತದಲ್ಲಿ ಜಾರಿಗೆ ತರಬಲ್ಲಿರಾ ಎಂಬ ಬಗ್ಗೆ ಜನತೆಗೆ ಸ್ಪಷ್ಟತೆ ನೀಡುವುದು. ನಿರುದ್ಯೋಗ, ಪರೀಕ್ಷಾ ಅಕ್ರಮಗಳು, ಶಿಕ್ಷಣ, ಸಾಮಾಜಿಕ ಅಸಮಾನತೆ, ಸಾಂವಿಧಾನಿಕ ಸಂಸ್ಥೆಗಳ ಸ್ವಾಯತ್ತತೆ ಮುಂತಾದ ವಿಷಯಗಳನ್ನು ರಾಹುಲ್ ನಿರಂತರವಾಗಿ ಎತ್ತುತ್ತಿದ್ದಾರೆ.

ಪಿಆರ್‌ಎಸ್ ಇಂಡಿಯಾ ಸಂಸ್ಥೆಯ ಮಾಹಿತಿ ಪ್ರಕಾರ, 2024-26ರ ಅವಧಿಯಲ್ಲಿ ರಾಹುಲ್ ಗಾಂಧಿ ಲೋಕಸಭೆಯ 17 ಚರ್ಚೆಗಳಲ್ಲಿ ಭಾಗವಹಿಸಿದ್ದು, 64 ಪ್ರಶ್ನೆಗಳನ್ನು ಕೇಳಿದ್ದಾರೆ; ರಾಷ್ಟ್ರೀಯ ಸರಾಸರಿ ಕ್ರಮವಾಗಿ 21.5 ಚರ್ಚೆಗಳು ಮತ್ತು 120 ಪ್ರಶ್ನೆಗಳಾಗಿವೆ. ಈ ಅಂಕಿಅಂಶಗಳು ಅವರ ಸಂಸದೀಯ ಪಾತ್ರವನ್ನು ಅಳೆಯಲು ಒಂದು ಸೂಚಕ ಮಾತ್ರ. ನಾಯಕತ್ವದ ಸಂಪೂರ್ಣ ಮೌಲ್ಯ ಮಾಪನವಾಗುವುದಿಲ್ಲ.

ರಾಹುಲ್ ಗಾಂಧಿ ಬಗ್ಗೆ ಬಹಳ ಕಾಲದಿಂದ ಒಂದು ಗ್ರಹಿಕೆ (perception) ಇದೆ. ಅವರು ಗಂಭೀರ ರಾಜಕೀಯ ವಿಷಯಗಳನ್ನು ಹಾಸ್ಯ, ವ್ಯಂಗ್ಯ ಅಥವಾ ಅತಿರಂಜಿತ ಹೇಳಿಕೆಗಳ ಮೂಲಕ ಮಂಡಿಸು ತ್ತಾರೆ ಎಂಬುದು. ಅವರ ಸಮರ್ಥಕರಿಗೂ ಅದು ಹಲವು ಬಾರಿ ಇರುಸು ಮುರುಸು ಉಂಟು ಮಾಡಿದ್ದುಂಟು.

ಚುನಾವಣಾ ರಾಜಕೀಯದಲ್ಲಿ ವ್ಯಂಗ್ಯ ಕೂಡ ಪ್ರಮುಖ ರಾಜಕೀಯ ಅಂಶ. ಒಬ್ಬ ನಾಯಕ ಪ್ರಧಾನಿ ಯಾಗಲು ಬಯಸಿದಾಗ ಮತದಾರರು ಅವರ ಬಗ್ಗೆ ಕೇವಲ ಅವರು ಯಾರನ್ನು ವಿರೋಧಿ ಸುತ್ತಾರೆ? ಎಂದು ನೋಡುವುದಿಲ್ಲ. ಅವರು ಪ್ರಧಾನಿಯಾಗಿ ರಾಷ್ಟ್ರವನ್ನು ಮುನ್ನಡೆಸುವಷ್ಟು ಗಂಭೀರರೇ? ಎಂಬ ಬಗ್ಗೆಯೂ ಅವಲೋಕಿಸುತ್ತಾರೆ.

ಮೋದಿ-ಅಜಿತ್ ದೋವಲ್ ಕುರಿತ ವ್ಯಂಗ್ಯ, ಮಿಮಿಕ್ರಿ, ತೀವ್ರ ವೈಯಕ್ತಿಕ ದಾಳಿ ಇತ್ಯಾದಿಗಳು ಅವರ ಬೆಂಬಲಿಗರಿಗೆ ಪರಿಣಾಮಕಾರಿ ರಾಜಕೀಯ ಆಯುಧವಾಗಬಹುದು. ಆದರೆ ಯಾರನ್ನು ಬೆಂಬಲಿಸ ಬೇಕು ಎಂಬ ವಿಷಯದಲ್ಲಿ ತಟಸ್ಥ ಅಥವಾ ನಿರ್ಧಾರ ಮಾಡದ ಮತದಾರರಲ್ಲಿ ಅದು ಯಾವ ಗ್ರಹಿಕೆ ಸೃಷ್ಟಿಸುತ್ತದೆ ಎನ್ನುವುದನ್ನೂ ಅರ್ಥಮಾಡಿಕೊಳ್ಳಬೇಕಲ್ಲವೇ? ರಾಹುಲ್ ಗಾಂಧಿಗೆ ಸವಾಲುಗಳಿರುವಂತೆ ಮೋದಿ ಸರ್ಕಾರದ ಮೇಲೂ ಜನರ ಅಸಮಾಧಾನಕ್ಕೆ ಕಾರಣವಾಗಬಹು ದಾದ ವಿಷಯಗಳಿವೆ.

ಉದ್ಯೋಗ, ಬೆಲೆ ಏರಿಕೆ, ರೈತರ ಸಮಸ್ಯೆಗಳು, ಪರೀಕ್ಷಾ ಅಕ್ರಮಗಳು, ಕೇಂದ್ರ-ರಾಜ್ಯ ಸಂಬಂಧಗಳು, ಸಂಸ್ಥೆಗಳ ಸ್ವಾಯತ್ತತೆ, ತೆರಿಗೆ ಮತ್ತು ಡಿಜಿಟಲ್ ಆರ್ಥಿಕತೆಯ ಕೆಲ ಅಚ್ಚರಿಯ ನಿರ್ಧಾರಗಳಿಂದ ಸರ್ಕಾರದ ವಿರುದ್ಧ ಪ್ರಶ್ನೆಗಳು ಮುಂದುವರಿಯುತ್ತಿವೆ. ಎಸ್ಸಿ/ಎಸ್ಟಿ, ಒಬಿಸಿ ಸಮುದಾಯಗಳ ವಿಪರೀತ ಓಲೈಕೆಯ ನಿರ್ಧಾರಗಳು ಈಚಿನ ದಿನಗಳಲ್ಲಿ ಮೇಲ್ವರ್ಗದವರನ್ನೂ ಮೋದಿ ಸರ್ಕಾರದ ಮೇಲೆ ಮುನಿಸಿಕೊಳ್ಳುವಂತೆ ಮಾಡಿದೆ.

ಇತ್ತೀಚಿನ UPI MDR (Merchant Discount Rate) ವಿವಾದ ಸರ್ಕಾರದ ವಿರುದ್ಧದ ಮುನಿಸಿನ ಒಂದು ಉದಾಹರಣೆ. ರೂ. 2000ಕ್ಕಿಂತ ಹೆಚ್ಚಿನ (ವ್ಯಕ್ತಿಯಿಂದ ವ್ಯಕ್ತಿಗೆ ಅಲ್ಲ) ಕೆಲ ವ್ಯಾಪಾರಿ ಯುಪಿಐ ಪಾವತಿಗಳ ಮೇಲೆ 0.4% ಎಂಡಿಆರ್ ವಿಧಿಸಲು ಕೇಂದ್ರ ತೀರ್ಮಾನಿಸಿದೆ.

ಅಂತಿಮವಾಗಿ, ವ್ಯಾಪಾರಿ ತನ್ನ ಆರ್ಥಿಕ ಹೊರೆಯನ್ನು ಗ್ರಾಹಕನ ಮೇಲೆ ಹಾಕುತ್ತಾನೆಯೇ ವಿನಃ ನಾನು ದೇಶಕ್ಕಾಗಿ ಕೊಡುಗೆ ನೀಡುತ್ತೇನೆ ಎಂಬ ಮನಸ್ಥಿತಿಯನ್ನಂತೂ ಹೊಂದಿರುವುದಿಲ್ಲ. ಅಂಥವರಿದ್ದರೂ, ದುರ್ಬೀನು ಹಾಕಿ ಹುಡುಕಬೇಕು. ಆದರೂ, ಇದರ ಅಂತಿಮ ರಾಜಕೀಯ ಪರಿಣಾಮವನ್ನು ಈಗಲೇ ಅಳೆಯಲು ಸಾಧ್ಯವಿಲ್ಲ. ಆದರೆ ಒಂದಂತೂ ಸ್ಪಷ್ಟ: ಜನರಿಗೆ ನೇರವಾಗಿ ತಟ್ಟುವ ಆರ್ಥಿಕ ವಿಷಯಗಳು, ಮೋದಿ ಸರ್ಕಾರದ ವಿರುದ್ಧ ಪ್ರತಿಪಕ್ಷಕ್ಕೆ ರಾಜಕೀಯ ಅವಕಾಶ ನೀಡಬಲ್ಲವು.

2024ರ ಫಲಿತಾಂಶವೇ ಮುಖ್ಯ ಸಂಗತಿಯೊಂದನ್ನು ತೋರಿಸಿದೆ: ಬಿಜೆಪಿ 303ರಿಂದ 240ಕ್ಕೆ ಇಳಿದಾಗ ಕಾಂಗ್ರೆಸ್ 52ರಿಂದ 99ಕ್ಕೆ ಏರಿತು. ಇದರಿಂದ ಕಾಂಗ್ರೆಸ್‌ಗೆ ಸಂಸತ್ತಿನಲ್ಲಿ ಹಿಂದಿನ ಅವಧಿಗಿಂತ ದೊಡ್ಡ ಪ್ರತಿಪಕ್ಷದ ಪಾತ್ರ ದೊರಕಿತು. ಅಂದರೆ ಮೋದಿ ವಿರೋಧಿ ಮತದಾರರು ಇದ್ದಾರೆ ಎಂಬುದು ರಾಜಕೀಯ ವಾಸ್ತವ. ಆದರೆ ಮೋದಿ ವಿರೋಧಿ ಮತ ಸ್ವಯಂಚಾಲಿತವಾಗಿ ರಾಹುಲ್ ಗಾಂಧಿಯ ಪರ ಮತವಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ.

ಮೋದಿ ವಿರುದ್ಧ ಅಸಮಾಧಾನ ಎಂದರೆ ರಾಹುಲ್ ಗಾಂಧಿಗೆ ಬೆಂಬಲ ಎಂದರ್ಥವಲ್ಲ. ಈ ಎರಡರ ನಡುವೆ ಒಂದು ರಾಜಕೀಯ ಸೇತುವೆ ಕಟ್ಟಬೇಕಾಗಿದೆ. ಆ ಸೇತುವೆಯೇ ವಿಶ್ವಾಸಾರ್ಹ ಪರ್ಯಾಯ ಆಡಳಿತದ ಭರವಸೆ. ಅಥವಾ ಹಾಲಿ ಆಡಳಿತದ ನಾಯಕತ್ವದಲ್ಲಿ ಬದಲಾವಣೆ ಎನ್ನುವ ವಿಚಾರವೂ ಅನೇಕರಲ್ಲಿದೆ. ಈ ನಡುವೆ, ಈಗಲೂ TINA factor (There is no alternative) ಬಿಜೆಪಿ ಪರ ಅಭಿಪ್ರಾಯ ರೂಪುಗೊಳ್ಳುವಲ್ಲಿ ಬಹುದೊಡ್ಡ ಪಾತ್ರವಹಿಸುತ್ತಿದೆ ಎನ್ನುವುದು ಗಮನಾರ್ಹ.

2029ರ ಮೊದಲು ರಾಹುಲ್ ಗಾಂಧಿ ತಮ್ಮ ರಾಜಕೀಯ ಸಂದೇಶವನ್ನು ಹೇಗೆ ರೂಪಿಸುತ್ತಾರೆ ಎನ್ನುವುದು ಮುಖ್ಯವಾಗುತ್ತದೆ. ವೈಯಕ್ತಿಕ ದಾಳಿಯಿಂದ ನೀತಿ ಚರ್ಚೆಯತ್ತ ಹಾಗೂ ಮೋದಿ, ಶಾ ಅಥವಾ ದೋವಲ, ಅದಾನಿ, ಅಂಬಾನಿ, ಮೋಹನ್ ಭಾಗವತ್‌ರನ್ನು ವೈಯಕ್ತಿಕವಾಗಿ ವ್ಯಂಗ್ಯ ಮಾಡುವುದಕ್ಕಿಂತ ಉದ್ಯೋಗ ಹೇಗೆ ಸೃಷ್ಟಿಸುವಿರಿ? ಶಿಕ್ಷಣ ವ್ಯವಸ್ಥೆಯನ್ನು ಹೇಗೆ ಸುಧಾರಿಸುವಿರಿ? ರಕ್ಷಣಾ ನೀತಿ ಏನು? ಚೀನಾ ಕುರಿತು ನಿಮ್ಮ ನೀತಿ ಏನು? ಆರ್ಥಿಕ ಬೆಳವಣಿಗೆ ಹೇಗೆ? ಕೃಷಿ ಆದಾಯ ಹೇಗೆ ಹೆಚ್ಚಿಸುವಿರಿ? ಯುಪಿಐ ಮತ್ತು ಡಿಜಿಟಲ್ ಆರ್ಥಿಕತೆ ವಿರೋಧಿಸುವುದಾದರೆ ನಿಮ್ಮ ಪರ್ಯಾಯ ಮಾದರಿ ಏನು ಎಂಬೆ ಹತ್ತಾರು ಪ್ರಶ್ನೆಗಳಿಗೆ ನಿರ್ದಿಷ್ಟ ಉತ್ತರ ನೀಡುವುದು ಪ್ರಧಾನ ಮಂತ್ರಿ ಅಭ್ಯರ್ಥಿಯ ಚಿತ್ರಣಕ್ಕೆ ಹೆಚ್ಚು ಮಹತ್ವದ್ದಾಗಬಹುದು.

ಲೋಕಸಭೆಯಲ್ಲಿ ವಿಪಕ್ಷ ನಾಯಕನಾಗಿ ಸರ್ಕಾರದ ತಪ್ಪುಗಳನ್ನು ತೋರಿಸುವುದು ಒಂದು ಪಾತ್ರವಾದರೆ, ಪ್ರಧಾನಿ ಅಭ್ಯರ್ಥಿಯಾಗಿ ಪರ್ಯಾಯ ಮಾದರಿ ವಿವರಿಸುವುದು ಮತ್ತೊಂದು ಪಾತ್ರ. ಮೋದಿ ಸರ್ಕಾರಕ್ಕೂ ಇದೇ ರೀತಿಯ ದ್ವಂದ್ವವಿದೆ. ದೀರ್ಘ ಆಡಳಿತದ ಅನುಭವ ಮತ್ತು ನಿರಂತರ ನಾಯಕತ್ವದ ಲಾಭ ಒಂದು ಕಡೆಯಾದರೆ, ಬೆಲೆ ಏರಿಕೆ, ನಿರುದ್ಯೋಗ, ತೆರಿಗೆಯ ಬರೆ ಹಾಗೂ ವಿವಿಧ ನೀತಿ ನಿರ್ಧಾರಗಳ ಕುರಿತ ಅಸಮಾಧಾನದ ಬಿಸಿಯನ್ನು ಎದುರಿಸಬೇಕಾದ ಅಗತ್ಯತೆ ಮತ್ತೊಂದೆಡೆ.

ಅದೇ ಸಮಯದಲ್ಲಿ, ಮೋದಿ ಸರ್ಕಾರದ ಬಗ್ಗೆ ಎದ್ದಿರುವ ಅಸಮಾಧಾನವು 2029ರವರೆಗೆ ಇಷ್ಟೇ ಗಟ್ಟಿಯಾಗಿರುತ್ತದೆ ಎಂದು ಈಗಲೇ ಹೇಳಲಸಾಧ್ಯ. ಆದರೆ, ಮುಂಬರುವ ಉತ್ತರ ಪ್ರದೇಶ ಹಾಗೂ ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಸಣ್ಣ ಸುಳಿವು ಸಿಗಬಹುದು.