Raghava Sharma Nidle Column: ಪಂಜಾಬ್ʼನಲ್ಲಿ ಬಿಜೆಪಿಗೆ ಸ್ವತಂತ್ರ ನೆಲೆ ಸಾಧ್ಯವೇ ?
ಒಂದು ವೇಳೆ ಬಿಜೆಪಿ-ಅಕಾಲಿದಳ ಮೈತ್ರಿಯಾದರೆ ಈ ಸಲ ಚತುಷ್ಕೋನ ಚುನಾವಣಾ ಸ್ಪರ್ಧೆಗೆ ಪಂಜಾಬ್ ಸಾಕ್ಷಿಯಾಗಲಿದೆ. ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ಆಕ್ರೋಶಗೊಂಡು 2020 ರಲ್ಲಿ ಎನ್‌ಡಿಎ ಮೈತ್ರಿಕೂಟದಿಂದ ಶಿರೋಮಣಿ ಅಕಾಲಿದಳ ಹೊರ ನಡೆದ ನಂತರ ಉಭಯ ಪಕ್ಷಗಳು ರಾಜ್ಯದಲ್ಲಿ ಸ್ವತಂತ್ರ ನೆಲೆ ಕಂಡುಕೊಳ್ಳಲು ಹೆಣಗಾಡುತ್ತಿವೆ.
-
ಜನಪಥ
ಪಂಜಾಬ್ ವಿಧಾನಸಭೆ ಚುನಾವಣೆಗೆ ಇನ್ನೇನು ಕೆಲವೇ ತಿಂಗಳುಗಳು ಬಾಕಿ ಇರುವಂತೆಯೇ, ಗಡಿ ರಾಜ್ಯದ ರಾಜಕೀಯ ಕಣದಲ್ಲಿ ಪ್ರಮುಖ ಬದಲಾವಣೆಗಳು ಮತ್ತು ಹೊಸ ರಾಜಕೀಯ ಸನ್ನಿವೇಶ ಗಳು ರೂಪುಗೊಳ್ಳುತ್ತಿವೆ. ಆಡಳಿತಾರೂಢ ಆಮ್ ಆದ್ಮಿ ಪಾರ್ಟಿ, ವಿಪಕ್ಷಗಳಾದ ಕಾಂಗ್ರೆಸ್, ಶಿರೋಮಣಿ ಅಕಾಲಿದಳ (ಎಸ್‌ಎಡಿ), ಬಿಜೆಪಿ ಹಾಗೂ ‘ವಾರಿಸ್ ಪಂಜಾಬ್ ದೇ’ ಪಕ್ಷಗಳ ಸುತ್ತ ರಾಜಕೀಯ ಭವಿಷ್ಯ ತೆರೆದುಕೊಳ್ಳುತ್ತಿದೆ.
ದೆಹಲಿಯಲ್ಲಿ ಅಧಿಕಾರ ಕಳೆದುಕೊಂಡ ಮಾಜಿ ಸಿಎಂ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷಕ್ಕೆ ಪಂಜಾಬ್‌ನ ರಾಜಕೀಯ ನೆಲ ದುರ್ಬಲಗೊಳ್ಳುತ್ತಿರುವುದು ಎದ್ದು ಕಾಣುತ್ತಿದೆ. ಕಳೆದ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಹಾಲಿ ಸಿಎಂ ಭಗವಂತ ಸಿಂಗ್ ಮಾನ್‌ಗಿದ್ದ ಜನಪ್ರಿಯತೆ ಈಗ ಕಾಣುತ್ತಿಲ್ಲ. ಗ್ಯಾರಂಟಿ ಯೋಜನೆಗಳು ನಮ್ಮನ್ನು ಕಾಪಾಡಲಿವೆ ಎಂದು ಆಪ್ ಹೇಳಿಕೊಳ್ಳು ತ್ತಿದ್ದರೂ, ವಾಸ್ತವ ಸ್ಥಿತಿ ಬೇರೆಯದೇ ಇದ್ದಂತಿದೆ. ರಾಜ್ಯದಲ್ಲಿ ಸದ್ಯ 5 ಕೋನದ ಸ್ಪರ್ಧೆ (ಆಪ್, ಕಾಂಗ್ರೆಸ್, ಅಕಾಲಿದಳ, ಬಿಜೆಪಿ ಮತ್ತು ವಾರಿಸ್ ಪಂಜಾಬ್ ದೇ) ಏರ್ಪಡುವ ಲಕ್ಷಣಗಳು ಕಾಣುತ್ತಿದೆ.
ಒಂದು ವೇಳೆ ಬಿಜೆಪಿ-ಅಕಾಲಿದಳ ಮೈತ್ರಿಯಾದರೆ ಈ ಸಲ ಚತುಷ್ಕೋನ ಚುನಾವಣಾ ಸ್ಪರ್ಧೆಗೆ ಪಂಜಾಬ್ ಸಾಕ್ಷಿಯಾಗಲಿದೆ. ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ಆಕ್ರೋಶಗೊಂಡು 2020ರಲ್ಲಿ ಎನ್‌ಡಿಎ ಮೈತ್ರಿಕೂಟದಿಂದ ಶಿರೋಮಣಿ ಅಕಾಲಿದಳ ಹೊರ ನಡೆದ ನಂತರ ಉಭಯ ಪಕ್ಷಗಳು ರಾಜ್ಯದಲ್ಲಿ ಸ್ವತಂತ್ರ ನೆಲೆ ಕಂಡುಕೊಳ್ಳಲು ಹೆಣಗಾಡುತ್ತಿವೆ.
ಇದನ್ನೂ ಓದಿ: Raghava Sharma Nidle Column: ವಿಜಯೇಂದ್ರ ಬ್ರ್ಯಾಂಡ್ ಮೌಲ್ಯ ವೃದ್ಧಿಸುವುದೇ ಪಾದಯಾತ್ರೆ?
2022ರಲ್ಲಿ ಆಮ್ ಆದ್ಮಿ ಪಕ್ಷದ ಪ್ರಚಂಡ ದಿಗ್ವಿಜಯದ ಮಧ್ಯೆ ಕಾಂಗ್ರೆಸ್ ಒಳಗೊಂಡಂತೆ ಮೂರೂ ಪಕ್ಷಗಳು ಧೂಳೀಪಟಗೊಂಡಿದ್ದವು. 2022ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಕೇವಲ ಶೇ. 6.6ರಷ್ಟು ಮತಗಳನ್ನು ಪಡೆದು 2 ಸೀಟುಗಳನ್ನಷ್ಟೇ ಗೆದ್ದಿತ್ತು. ಆದರೆ 2024ರ ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿ ಮತಗಳ ಪ್ರಮಾಣವನ್ನು ಶೇ.18.56ಕ್ಕೆ ಏರಿಸಿಕೊಂಡಿತು.
ಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿ ಅಧಿಕಾರಕ್ಕೆ ಬರಬೇಕೆಂಬ ಲೆಕ್ಕಾಚಾರದಲ್ಲಿ ಕೇಸರಿಪಡೆ ಇದೆ. ಯಾವ ರಾಜ್ಯದಲ್ಲಿ ಬಿಜೆಪಿ ಶೇ. 19ರಷ್ಟು ಮತಗಳ ಗಡಿ ದಾಟುತ್ತದೆಯೋ, ಅಲ್ಲಿ ಮುಂದೆ ತನ್ನದೇ ಬಲದ ಮೇಲೆ ಸರ್ಕಾರ ರಚಿಸುವ ಹಂತಕ್ಕೆ ತಲುಪುತ್ತದೆ ಎಂದು ಅಮಿತ್ ಶಾ ನಂಬಿದ್ದಾರೆ.
ಹೀಗಾಗಿ, ಆಪ್, ಕಾಂಗ್ರೆಸ್, ಅಕಾಲಿದಳ ಮತ್ತು ವಾರಿಸ್ ಪಂಜಾಬ್ ದೇ ನಡುವೆ ಮತಗಳು ವಿಭಜನೆ ಯಾದರೆ 20-22% ಮತ ಪಡೆದರೂ ಬಹುಮತದ ಗಡಿ ದಾಟಬಹುದು ಎಂಬುದು ಬಿಜೆಪಿಯ ಲೆಕ್ಕಾಚಾರ. ಪಂಜಾಬ್‌ನಲ್ಲಿ ನಗರ ಕೇಂದ್ರೀಕೃತ ಹಿಂದೂ ಪಕ್ಷ ಎಂಬ ಹಣೆಪಟ್ಟಿಯಿಂದ ಕಳಚಿ ಕೊಳ್ಳಲು ಬಿಜೆಪಿ ತೀವ್ರವಾಗಿ ಶ್ರಮಿಸುತ್ತಿದೆ. ಗ್ರಾಮೀಣ ಭಾಗದಲ್ಲಿ ನೆಲೆ ವಿಸ್ತರಿಸಲೆಂದೇ ಕಾಂಗ್ರೆಸ್‌ನ ಹಲವು ನಾಯಕರನ್ನು ಸೇರಿಸಿಕೊಂಡಿದೆ. ಅದರಿಂದ ಕಾಂಗ್ರೆಸ್‌ಮಯವಾದ ಬಿಜೆಪಿ ಎಂಬ ಅಪವಾದಕ್ಕೂ ಅದು ಗುರಿಯಾಗಿದೆ.
ಇತ್ತೀಚೆಗೆ ನಡೆದ ಪಂಚಾಯತ್ ಸಮಿತಿ ಚುನಾವಣೆಯಲ್ಲಿ ಆಪ್ 1531 ಹಾಗೂ ಕಾಂಗ್ರೆಸ್ 612 ಸ್ಥಾನ ಗೆದ್ದರೆ, ಬಿಜೆಪಿ ಗೆದ್ದಿದ್ದು ಕೇವಲ 73 ಸ್ಥಾನ ಮಾತ್ರ. ರೈತರ ಸುದೀರ್ಘ ಪ್ರತಿಭಟನೆಯ ನೆನಪು ಗಳು ಇನ್ನೂ ಹಸಿರಾಗಿರುವುದರಿಂದ ಗ್ರಾಮೀಣ ಭಾಗದಲ್ಲಿ ಬಿಜೆಪಿಗೆ ಬಲವಾದ ನೆಲೆ ಇಲ್ಲ. ಸೆ.18 ರಿಂದ ಬಿಜೆಪಿ ರಾಜ್ಯಾದ್ಯಂತ ‘ನಶಾ ಮುಕ್ತಿ ಯಾತ್ರೆ’ ಕೈಗೊಳ್ಳುತ್ತಿದೆ. ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರ ಉಸ್ತುವಾರಿಯಲ್ಲಿ ಪಂಜಾಬ್‌ನ 27000ಕ್ಕೂ ಹೆಚ್ಚು ಬೂತ್‌ಗಳ ಪೈಕಿ ಈಗಾಗಲೇ 15000ಕ್ಕೂ ಹೆಚ್ಚು ಬೂತ್‌ಗಳಲ್ಲಿ ಕಮಿಟಿಗಳನ್ನು ರಚಿಸಲಾಗಿದೆ.
ನಶಾ ಮುಕ್ತಿ ಯಾತ್ರೆ ಮೂಲಕ ಪಂಜಾಬ್‌ನ ಎಲ್ಲಾ 117 ಕ್ಷೇತ್ರಗಳನ್ನು ತಲುಪಲು 12 ದಿನಗಳ ಕಾಲ 4 ಮಾರ್ಗಗಳಲ್ಲಿ ವಿಶಾಲ ಯಾತ್ರೆ ಆಯೋಜಿಸಲಾಗಿದೆ. ಇದು ರಾಜ್ಯದಲ್ಲಿ ಕೇಸರಿಪಡೆಯ ಸ್ವಂತಂತ್ರ ನೆಲೆ ವಿಸ್ತರಿಸುವ ಕಾರ್ಯತಂತ್ರದ ಪ್ರಮುಖ ಭಾಗವೂ ಹೌದು. ಕೆಲ ತಿಂಗಳ ಹಿಂದೆ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ರವನೀತ್ ಸಿಂಗ್ ಬಿಟ್ಟು, ರಾಜ್ಯ ರಾಜಕೀಯಕ್ಕೆ ಮರಳಿದ್ದಾರೆ.
ಕಾಂಗ್ರೆಸ್‌ನಿಂದ ಬಂದ ರವನೀತ್ ಸಿಂಗ್ ಬಿಟ್ಟು (ಮಾಜಿ ಸಿಎಂ ಬೆಹಾಂತ ಸಿಂಗ್ ಮೊಮ್ಮಗ) ಲೋಕಸಭೆ ಚುನಾವಣೆಯಲ್ಲಿ ಸೋತರೂ, ರಾಜ್ಯದ ಜಾಟ್ ಸಿಖ್ ಮತದಾರರನ್ನು ಆಕರ್ಷಿಸ ಲೆಂದೇ ಕೇಂದ್ರ ಸಚಿವ ಸ್ಥಾನ ಪಡೆದಿದ್ದರು. ಈಗ ಪಕ್ಷದ ಪ್ರಧಾನ ಮುಖವಾಗಿ ಕಾಣಿಸಿಕೊಳ್ಳು ತ್ತಿದ್ದಾರೆ. ಆಮ್ ಆದ್ಮಿ ಪಾರ್ಟಿಯ ಪ್ರಮುಖ ಸಂಘಟಕ ಹಾಗೂ ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಸೇರಿದಂತೆ ಹಲವು ಆಪ್ ನಾಯಕರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಆಪ್ ಪಾರ್ಟಿಯ 7 ಸಂಸದರು ಬಿಜೆಪಿ ಜತೆ ವಿಲೀನಗೊಂಡಿದ್ದಾರೆ. ಇದು ಆಪ್‌ನ ಆಂತರಿಕ ತಂತ್ರ ಗಳನ್ನು ತಿಳಿಯಲು ಮತ್ತು ಬೂತ್ ಮಟ್ಟದ ಸಂಘಟನೆಗೆ ಸಹಕಾರಿಯಾಗಲಿದೆ ಎಂದು ಹೇಳಲಾಗು ತ್ತಿದೆ. ಆದರೆ, ದಶಕಗಳಿಂದ ಪಂಜಾಬ್‌ನಲ್ಲಿ ಪಕ್ಷವನ್ನು ಪೋಷಿಸಿ ಬೆಳೆಸಿದ, ರೈತ ಪ್ರತಿಭಟನೆಗಳ ಸಮಯದಲ್ಲಿ ದೈಹಿಕ ಹ ಮತ್ತು ಸಾರ್ವಜನಿಕ ಅಸಮಾಧಾನ ಎದುರಿಸಿದ ಮೂಲ ಬಿಜೆಪಿ ನಾಯಕರನ್ನು ಬದಿಗಿಟ್ಟು, ಕಾಂಗ್ರೆಸ್ ಹಾಗೂ ಆಪ್ ನಿಂದ ಬಂದ ನಾಯಕರಿಗೆ ಪಕ್ಷದ ಉನ್ನತ ಹುದ್ದೆಗಳನ್ನು ನೀಡಿರುವುದು ಆಂತರಿಕ ಬಂಡಾಯಕ್ಕೂ ಕಾರಣವಾಗಿದ್ದು ಸುಳ್ಳಲ್ಲ.
ಕಾಂಗ್ರೆಸ್‌ನ ಮಾಜಿ ರಾಜ್ಯಾಧ್ಯಕ್ಷ ಸುನಿಲ್ ಜಾಖಡ್ ಅವರನ್ನು ಪಂಜಾಬ್ ಬಿಜೆಪಿ ಅಧ್ಯಕ್ಷರನ್ನಾಗಿ ಮಾಡಿದ್ದು, ನಂತರ, ಮೂಲ ಹಿಂದೂ ನಾಯಕ ಹಾಗೂ ಕಾರ್ಯಾಧ್ಯಕ್ಷ ಅಶ್ವನಿ ಶರ್ಮಾ ಅವರನ್ನು ಬದಿಗೊತ್ತಿ, ಮತ್ತೊಬ್ಬ ಕಾಂಗ್ರೆಸ್ ಮೂಲದ ಜಾಟ್ ಸಿಖ್ ನಾಯಕ ಕೇವಲ್ ಸಿಂಗ್ ಧಿಲ್ಲೋನ್ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದು ಬಂಡಾಯ ಭುಗಿಲೆಬ್ಬಿಸಿತು.
ಸಾಂಪ್ರದಾಯಿಕವಾಗಿ ಆರ್‌ಎಸ್‌ಎಸ್ ತಳಹದಿಯ, ಪಂಜಾಬಿನ ನಗರ ಕೇಂದ್ರೀಕೃತ ಹಿಂದೂ ಪಕ್ಷ ಎಂದು ಬಿಜೆಪಿ ಗುರುತಿಸಿಕೊಂಡಿರುವುದರಿಂದ, ಗ್ರಾಮೀಣ ಸಿಖ್ ಮತಗಳನ್ನು ಸೆಳೆಯಲೆಂದು ದಿಲ್ಲಿಯ ನಾಯಕರು ಕಾಂಗ್ರೆಸ್ಸಿನ ಪ್ರಮುಖರನ್ನು ಮುಂಭಾಗದಲ್ಲಿ ಕೂರಿಸಿದ್ದರಿಂದಲೇ ಮೂಲ ಹಿಂದೂ ತಳಹದಿಯ ನಾಯಕರಲ್ಲಿ ಪಕ್ಷ ತನ್ನ ಮೂಲ ಸಿದ್ಧಾಂತ ಮತ್ತು ಬದ್ಧತೆ ಕಳೆದುಕೊಂಡಿದೆ ಎಂಬ ಭಾವನೆ ಮೂಡಿದೆ.
ದಶಕಗಳಿಂದ ಪಕ್ಷಕ್ಕೆ ಸೇವೆ ಸಲ್ಲಿಸಿದ ಹಿರಿಯ ನಾಯಕರನ್ನು ಹೊಸ ಸಂಘಟನಾ ಪಟ್ಟಿಯಿಂದ ಹೊರಗಿಡ ಲಾಗಿದೆ ಅಥವಾ ನಿಷ್ಕ್ರಿಯಗೊಳಿಸಲಾಗಿದೆ. 34 ವರ್ಷಗಳ ಕಾಲ ಬಿಜೆಪಿಗೆ ಸೇವೆ ಸಲ್ಲಿಸಿದ್ದ ಸುಖ್ಮಿಂದರ್ ಪಾಲ್ ಸಿಂಗ್ ಗ್ರೆವಾಲ, ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದ ಪತ್ರದಲ್ಲಿ, ಪಂಜಾಬ್ ಬಿಜೆಪಿ ಈಗ ಪಕ್ಷಕ್ಕಾಗಿ ಬೆವರು ಹರಿಸಿದ ಮೂಲ ಕಾರ್ಯಕರ್ತರ ಪಕ್ಷವಾಗಿ ಉಳಿದಿಲ್ಲ, ಅದು ಕಾಂಗ್ರೆಸ್‌ನಿಂದ ಬಂದವರಿಂದ ನಿಯಂತ್ರಿಸಲ್ಪಡುವ ಸಂಸ್ಥೆಯಾಗಿದೆ ಎಂದು ಆಕ್ರೋಶ ಹೊರಹಾಕಿದ್ದರು.
ಮಾಜಿ ಸಚಿವ ಮನೋರಂಜನ್ ಕಾಲಿಯಾ, ಅವಿನಾಶ್ ರಾಯ್ ಖನ್ನಾ, ಶ್ವೇತ್ ಮಲಿಕ್, ವಿಜಯ್ ಸಾಂಪ್ಲಾ, ಸೋಮ್ ಪ್ರಕಾಶ್ ಬೇಸರಗೊಂಡವರಲ್ಲಿ ಪ್ರಮುಖರು. ಈ ಬಂಡಾಯ ಹಿರಿಯ ನಾಯಕ ರಿಗೆ ಸೀಮಿತವಾಗಿರದೆ, ಜಿಲ್ಲೆ ಮತ್ತು ತಾಲೂಕು ಮಟ್ಟಕ್ಕೂ ಹಬ್ಬಿದೆ. ಸಂಗ್ರೂರ್, ಫರೀದ್‌ಕೋಟ್, ಹೋಶಿಯಾರ್ ಪುರದಲ್ಲಿ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ತಮ್ಮ ನಾಯಕರ ಕಡೆಗಣನೆ ಯಿಂದ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ.
ಪಂಜಾಬ್‌ನಲ್ಲಿ ಬಿಜೆಪಿ ಪರವಾಗಿ ರಾಜ್ಯವ್ಯಾಪಿ ಒಪ್ಪಿಕೊಳ್ಳುವಂತಹ ಜನಪ್ರಿಯ ‘ಸಿಎಂ ಮುಖ’ ಇಲ್ಲದಿರುವುದು ದೊಡ್ಡ ಕೊರತೆಯಾಗಿ ಕಾಡುತ್ತಿದೆ. ಸಂಸತ್ತಿನಲ್ಲಿ ಗಮನ ಸೆಳೆದು, ಈಗ ಬಿಜೆಪಿ ಪಾಳೆಯ ದಲ್ಲಿರುವ ರಾಘವ್ ಚಡ್ಡಾರನ್ನು ಸಿಎಂ ಅಭ್ಯರ್ಥಿಯನ್ನಾಗಿ ಘೋಷಿಸುವ ಲೆಕ್ಕಾಚಾರ ಇದೆಯೋ ಎಂಬ ಬಗ್ಗೆ ಸದ್ಯಕ್ಕೆ ಖಚಿತತೆ ಇಲ್ಲ.
ಪೈಲಟ್ ಎಂಟ್ರಿ- ಚನ್ನಿ ಎತ್ತ?
ಕೈ ನಾಯಕ ಭೂಪೇಶ್ ಬಘೇಲ್ ಬದಲಿಗೆ ಮಾಜಿ ಕೇಂದ್ರ ಸಚಿವ ಸಚಿನ್ ಪೈಲಟ್ ಅವರನ್ನು ರಾಜ್ಯ ಕಾಂಗ್ರೆಸ್ ಉಸ್ತುವಾರಿಯನ್ನಾಗಿ ನೇಮಕ ಮಾಡಿರುವುದು ಕಾಂಗ್ರೆಸ್‌ನ ಮಹತ್ವದ ರಾಜಕೀಯ ತಂತ್ರ ವಾಗಿದೆ. ಪಂಜಾಬ್ ಕಾಂಗ್ರೆಸ್ ನಲ್ಲಿ ಮಾಜಿ ಸಿಎಂ ಚರಂಜೀತ್ ಸಿಂಗ್ ಚನ್ನಿ ಮತ್ತು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ನಡುವೆ ತೀವ್ರ ಘರ್ಷಣೆ ನಡೆಯುತ್ತಿದೆ. ಈ ಆಂತರಿಕ ಕದನವೇ ಪಕ್ಷಕ್ಕೆ ದೊಡ್ಡ ಹಿನ್ನಡೆಯಾಗುತ್ತಿದೆ.
ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್ ಅವರೊಂದಿಗಿನ ಭಿನ್ನಮತದ ಅನುಭವ ಹೊಂದಿರುವ ಪೈಲಟ, ಪಂಜಾಬ್ ನಾಯಕರಿಗೆ ಸ್ಪಷ್ಟ ಸಂದೇಶ ನೀಡಿದ್ದಾರೆ. ಯಾರು ಹೆಚ್ಚು ಶಾಸಕರನ್ನು ಗೆಲ್ಲಿಸಿ ಕೊಂಡು ಬರುತ್ತಾರೋ, ಅವರೇ ಮುಖ್ಯಮಂತ್ರಿ ರೇಸ್‌ನಲ್ಲಿ ಮುಂಚೂಣಿಯಲ್ಲಿರುತ್ತಾರೆ ಎಂದು ನಾಯಕರಿಗೆ ತಿಳಿಸಿzರೆ. ಆಡಳಿತ ವಿರೋಧಿ ಅಲೆಯನ್ನು ಕಾಂಗ್ರೆಸ್ ತನ್ನ ಪರವಾಗಿ ತಿರುಗಿಸಿಕೊಳ್ಳ ಬೇಕಾದರೆ, ನಾಯಕರ ಒಗ್ಗಟ್ಟು ಮುಖ್ಯ. ಅದನ್ನು ನಿರ್ವಹಿಸುವುದೇ ಪೈಲಟ್‌ಗೆ ದೈತ್ಯ ಸವಾಲಾಗ ಲಿದೆ.
ಏತನ್ಮಧ್ಯೆ, ಮಾಜಿ ಸಿಎಂ ಹಾಗೂ ಸಂಸದ ಚರಂಜೀತ್ ಸಿಂಗ್ ಚನ್ನಿ ಕಾಂಗ್ರೆಸ್ ತೊರೆಯಲಿದ್ದಾ ರೆಯೇ ಎಂಬ ಅನುಮಾನಗಳು ದಟ್ಟವಾಗಿವೆ. ಸಂಸತ್ತಿನಲ್ಲಿ ಖಾದೂರ್ ಸಾಹಿಬ್ ಕ್ಷೇತ್ರದ ಸಂಸದ ಹಾಗೂ ‘ವಾರಿಸ್ ಪಂಜಾಬ್ ದೇ’ ಮುಖ್ಯಸ್ಥ ಅಮೃತಪಾಲ್ ಸಿಂಗ್ ಅವರ ಬಂಧನದ ವಿರುದ್ಧ ಚನ್ನಿ ಧ್ವನಿ ಎತ್ತಿದ್ದರು. ಇದಕ್ಕೆ ಪ್ರತಿಯಾಗಿ ಅಮೃತಪಾಲ್ ಸಿಂಗ್ ಅವರ ತಂದೆ ತರ್ಸೇಮ್ ಸಿಂಗ್ ಅವರು ಚನ್ನಿಯವರನ್ನು ಬಹಿರಂಗವಾಗಿ ಪ್ರಶಂಸಿಸಿದ್ದರು.
ಕಾಂಗ್ರೆಸ್ ನಾಯಕತ್ವದೊಂದಿಗೆ ಅಂತರ ಕಾಯ್ದುಕೊಂಡಿರುವ ಚನ್ನಿ, ತಮ್ಮ ದಲಿತ ಮತಬ್ಯಾಂಕ್ ಮತ್ತು ವಾರಿಸ್ ಪಂಜಾಬ್ ದೇ ಸಂಘಟನೆಯ ‘ಪಂಥಿಕ್’ ಪ್ರಭಾವವನ್ನು ಬಳಸಿಕೊಂಡು ಹೊಸ ರಾಜಕೀಯ ಸಮೀಕರಣಕ್ಕೆ ಮುಂದಾಗಬಹುದು ಎಂದೂ ಹೇಳಲಾಗುತ್ತಿದೆ.
‘ವಾರಿಸ್ ಪಂಜಾಬ್ ದೇ’
ಪಂಜಾಬ್ ಚುನಾವಣೆಯಲ್ಲಿ ‘ವಾರಿಸ್ ಪಂಜಾಬ್ ದೇ’ (ಡಬ್ಲ್ಯುಪಿಡಿ) ‘ವೈಲ್ಡ್ ಕಾರ್ಡ್’ ಆಗಿ ಹೊರಹೊಮ್ಮುವ ಸಾಧ್ಯತೆ ಬಗ್ಗೆ ಚರ್ಚೆಯಾಗುತ್ತಿದೆ. ಸದ್ಯ ಅಸ್ಸಾಂನ ದಿಬ್ರೂಗಢ್ ಜೈಲಿನಲ್ಲಿರುವ ಅಮೃತಪಾಲ್ ಸಿಂಗ್ ಪರವಾಗಿ ಪಂಜಾಬ್‌ನ ‘ಜೆನ್ ಝಿ’ಯುವಕರು ಮತ್ತು ಸಿಖ್ ಯುವಜನತೆ ಆಕರ್ಷಿತರಾಗುತ್ತಿದ್ದಾರೆ.
ಇಂದಿರಾ ಗಾಂಧಿ ಹತ್ಯೆಯ ಆರೋಪಿ ಖೇಹಾರ್ ಸಿಂಗ್ ಮಗ ಸತ್ವಂತ್ ಸಿಂಗ್ ಹಾಗೂ 2021ರ ಕೆಂಪುಕೋಟೆ ಘಟನೆಯ ಆರೋಪಿ ದೀಪ್ ಸಿಧು ಅವರ ಸಹೋದರ ಮಂದೀಪ್ ಸಿಂಗ್ ಸಿಧು ಅವರನ್ನು ಈಗಾಗಲೇ ಡಬ್ಲ್ಯುಪಿಡಿ ಪಕ್ಷದ ಅಭ್ಯರ್ಥಿಗಳನ್ನಾಗಿ ಘೋಷಿಸಲಾಗಿದೆ. ಇದು ಭಾವನಾತ್ಮಕವಾಗಿ ಸಿಖ್ ಯುವಕರ ಮತಗಳನ್ನು ಸೆಳೆಯುವ ತಂತ್ರ.
ಪಂಥಿಕ್ ರಾಜಕಾರಣ
ಪಂಥಿಕ್ ರಾಜಕಾರಣ ಎನ್ನುವುದು ಮುಖ್ಯವಾಗಿ ಪಂಜಾಬ್ ಹಾಗೂ ಸಿಖ್ ಸಮುದಾಯದ ಧಾರ್ಮಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಹಿತಾಸಕ್ತಿಗಳನ್ನು ಆಧರಿಸಿದ ರಾಜಕಾರಣ.
‘ಪಂಥ್’ ಎಂದರೆ ಸಿಖ್ ಸಮುದಾಯ. ಸಿಖ್ ಪರಂಪರೆಯಲ್ಲಿ ಮೀರಿ-ಪೀರಿ (ರಾಜಕೀಯ ಮತ್ತು ಧಾರ್ಮಿಕ ಅಧಿಕಾರ) ಎಂಬ ಪರಿಕಲ್ಪನೆ ಇದೆ. ಪಂಥಿಕ್ ರಾಜಕಾರಣವು ಸಿಖ್ ಧರ್ಮದ ಅಸ್ಮಿತೆ, ಪರಂಪರೆ ಮತ್ತು ಹಕ್ಕುಗಳನ್ನು ರಕ್ಷಿಸುವ ಉದ್ದೇಶ ಹೊಂದಿದೆ. ಶಿರೋಮಣಿ ಅಕಾಲಿದಳ ಐತಿಹಾಸಿಕವಾಗಿ ಪಂಥಿಕ್ ರಾಜಕಾರಣದ ಪ್ರಮುಖ ಕೇಂದ್ರಬಿಂದು. ಸಿಖ್ ಧಾರ್ಮಿಕ ಸಂಸ್ಥೆಯಾದ ಶಿರೋಮಣಿ ಗುರುದ್ವಾರ ಪ್ರಬಂಧಕ್ ಕಮಿಟಿ ಮೇಲಿನ ನಿಯಂತ್ರಣವೂ ಪಂಥಿಕ್ ರಾಜಕಾರಣ ದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಕಾಲಕ್ರಮೇಣ ಪಂಥಿಕ್ ರಾಜಕಾರಣವು ಮೂಲಭೂತವಾದಿ ಮತ್ತು ಅಭಿವೃದ್ಧಿ ಆಧಾರಿತ ರಾಜಕೀಯದ ನಡುವೆ ವಿವಿಧ ಏರಿಳಿತಗಳನ್ನು ಕಂಡಿದೆ. ಬಿಜೆಪಿ ದಶಕಗಳ ಕಾಲ ಶಿರೋಮಣಿ ಅಕಾಲಿದಳದ ಕಿರಿಯ ಪಾಲುದಾರ ಪಕ್ಷವಾಗಿತ್ತು. ಕೆಲವು ನಗರ ಪ್ರದೇಶದ ಕ್ಷೇತ್ರಗಳಿಗೆ ಸೀಮಿತ ವಾಗಿ, ಗ್ರಾಮೀಣ ಹಾಗೂ ಪಂಥಿಕ್ ಕ್ಷೇತ್ರಗಳನ್ನು ಅಕಾಲಿದಳಕ್ಕೆ ಬಿಟ್ಟುಕೊಟ್ಟಿತ್ತು.
ಮೈತ್ರಿ ಮುರಿದುಕೊಂಡ ನಂತರ 2024ರಲ್ಲಿ ಬಿಜೆಪಿ ಪಂಜಾಬ್‌ನ ಎಲ್ಲಾ 13 ಲೋಕಸಭಾ ಕ್ಷೇತ್ರ ಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿತು. ಯಾವುದೇ ಸ್ಥಾನ ಗೆಲ್ಲದಿದ್ದರೂ, ಶೇ. 18.56 ಮತಗಳಿಕೆ ಪಡೆಯುವ ಮೂಲಕ ಅಕಾಲಿದಳಕ್ಕಿಂತ (ಶೇ. 13.42) ಹೆಚ್ಚಿನ ಮತ ಪಡೆದು ತನ್ನ ಸ್ವತಂತ್ರ ಅಸ್ತಿತ್ವ ಸಾಬೀತುಪಡಿಸಿತು. ಲೋಕಸಭಾ ಚುನಾವಣೆಯಲ್ಲಿ ಬಂದ ಶೇ. 18.56 ಮತಗಳನ್ನು ವಿಧಾನಸಭಾ ಚುನಾವಣೆಯಲ್ಲಿ ಸ್ಥಾನಗಳಾಗಿ ಪರಿವರ್ತಿಸುವುದು ಬಿಜೆಪಿಗೆ ಸುಲಭದ ಹಾದಿಯಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ನೆಲೆ ಕಂಡುಕೊಳ್ಳುವುದು ಹಾಗೂ ಪಂಥಿಕ್ ರಾಜಕಾರಣದ ಸಮೀಕರಣಗಳನ್ನು ಎದುರಿಸುವುದು ಪಕ್ಷಕ್ಕೆ ಪ್ರಮುಖ ಸವಾಲಾಗಿದೆ.