Turuvekere Prasad Column: ʼಚಿಂವ್ ಚಿಂವ್ʼ ಗುಬ್ಬಿಯಿಂದ ದೊಡ್ಡಣ್ಣನ ʼಬೌ ಬೌʼ ಲಾಬಿಯವರೆಗೆ
ಪ್ರಾಕೃತಿಕ ಸಂಪನ್ಮೂಲವಾಗಿದ್ದ ಕಾಡನ್ನು ಪ್ರವಾಸಿ ಸಂಪನ್ಮೂಲವನ್ನಾಗಿಸಲಾಗಿದೆ. ಮನುಷ್ಯನು ಕಾಡುಗಳನ್ನು ಕಡಿದು ರೆಸಾರ್ಟ್‌ಗಳನ್ನು ನಿರ್ಮಿಸಿ, ಕಾಡುಪ್ರಾಣಿಗಳ ಬದುಕಿನ ಸ್ವಾತಂತ್ರ್ಯವನ್ನು ಕಿತ್ತುಕೊಂಡಿದ್ದಾನೆ. ಈ ಅತಿಕ್ರಮಣದಿಂದಾಗಿ ಕಾಡುಪ್ರಾಣಿಗಳು ದಿಕ್ಕೆಟ್ಟು ನಾಡಿಗೆ ಬಂದು ಸಾಯುತ್ತಿವೆ. ಕಾಡಿನ ಪ್ರಾಕೃತಿಕ ಸೊಬಗು ಮತ್ತು ಕೋಟಿ ಕೋಟಿ ಜೀವವೈವಿಧ್ಯಗಳ ರಕ್ಷಣೆಗಿಂತ, ಬೃಹತ್ ಯೋಜನೆ, ಗಣಿಗಾರಿಕೆ, ಕೈಗಾರಿಕೆಗಳೇ ಮುಖ್ಯವಾಗಿ ಬಿಟ್ಟಿವೆ


ತನ್ನಿಮಿತ್ತ
ತುರುವೇಕೆರೆ ಪ್ರಸಾದ್
(ಇಂದು ವಿಶ್ವಭೂಮಿ ದಿನ)
ಒಂದು: ಮನೆಯ ಅಂಗಳದಲ್ಲಿ ‘ಚಿಂವ್’ಗುಡುತ್ತಿದ್ದ ಗುಬ್ಬಚ್ಚಿಗಳು ಕಾಣೆಯಾಗಿ ವರ್ಷಗಳೇ ಆಗಿ ಹೋದವು. ಹೆಂಚಿನ ಮನೆಯ ಮಾಡಿನ ಸಂದುಗಳಲ್ಲಿ, ಹುಲ್ಲುಗಳ ಮಧ್ಯೆ ಮರಿಯಿಟ್ಟು ಜತನ ದಿಂದ ಕಾಪಾಡುತ್ತಿದ್ದ ಗುಬ್ಬಚ್ಚಿಗಳು ಈಗೆಲ್ಲೋ ಮಾಯವಾಗಿವೆ. ಹೆಂಚು, ಮಾಡಿನ ಮನೆಗಳು ಹೋಗಿ ತಾರಸಿ ಮನೆಗಳು ಬಂದವು, ಅವುಗಳ ಪಕ್ಕದಲ್ಲೇ ವಿದ್ಯುತ್ ತಂತಿಗಳು ಹಾದುಹೋದವು. ಹಸಿರು ಹೂವಿನಿಂದ ಕಂಗೊಳಿಸುತ್ತಿದ್ದ ಮನೆಯಂಗಳ ಕಾಂಕ್ರೀಟ್ ಸುರಿಸಿಕೊಂಡು ಸಪಾಟಾ ಯಿತು. ಮನೆ ಮೇಲೆ ಸೋಲಾರು, ಒಳಗೆ ನಲ್ಲಿ ಬಂದು ಹೊರಗೆಲ್ಲೂ ನೀರಿನ ಪಸೆ ಇಲ್ಲದಾಯಿತು. ಹೊರಗೆ ಮಾಲಿನ್ಯಗೊಂಡ ಜಲಮೂಲಗಳು, ಇದರ ಜತೆಗೆ ಪ್ರವಾಹ, ಚಂಡ ಮಾರುತ, ಎಲ್-ನಿನೊಗಳ ಅಬ್ಬರ. ಕಾಡಲ್ಲಿ, ಮರಳುಗಾಡಲ್ಲಿ, ಹುಲ್ಲುಗಾವಲಲ್ಲಿ ಇರಲಾಗದೆ ಮನುಷ್ಯನನ್ನೇ ನಂಬಿ ಬಂದ ಪುಟ್ಟ ಗುಬ್ಬಿಗಳನ್ನು ಮನುಷ್ಯ ತೀರಾ ನಿಕೃಷ್ಟವಾಗಿ ನಡೆಸಿಕೊಂಡುಬಿಟ್ಟ.
ಎರಡು: ನಗರೀಕರಣ, ಕೈಗಾರಿಕೀಕರಣ ಹೆಚ್ಚಿದಂತೆಲ್ಲಾ ಕಾಡು ನಾಶವಾಗುತ್ತಿದೆ. ಮನುಷ್ಯ ತನ್ನ ಸ್ವಾರ್ಥ ಮತ್ತು ಐಷಾರಾಮಿ ಬದುಕಿಗಾಗಿ ಕಾಡಿನ ಬೆಲೆಬಾಳುವ ಮರಗಳನ್ನು ಕಡಿದುರುಳಿಸಿದ್ದಾನೆ. ಅವನ ನಿರ್ಲಕ್ಷ್ಯದಿಂದಾಗಿ ಸಾವಿರಾರು ಎಕರೆಗಳಷ್ಟು ಕಾಡು, ಕಾಳ್ಗಿಚ್ಚಿಗೆ ಬಲಿಯಾಗಿದೆ. ಅಲ್ಲಿದ್ದ ಬುಡಕಟ್ಟು ಜನರನ್ನು ಒಕ್ಕಲೆಬ್ಬಿಸಲಾಗಿದೆ. ಪ್ರಭಾವಿಗಳು, ರಾಜಕಾರಣಿಗಳು ನೂರಾರು ಎಕರೆ ಕಾಡನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಕಾಡೆಂಬುದು ಮೋಜು-ಮಸ್ತಿಯ ವ್ಯಾಪಾರಿ ತಾಣವಾಗಿ ಬಿಟ್ಟಿದೆ.
ಇದನ್ನೂ ಓದಿ: Turuvekere Prasad Column: ಕಡಿಮೆಯಾಗಲಿ ಸಾಮಾಜಿಕ ಅಂತರ, ಹವಾಮಾನ ಅವಾಂತರ
ಪ್ರಾಕೃತಿಕ ಸಂಪನ್ಮೂಲವಾಗಿದ್ದ ಕಾಡನ್ನು ಪ್ರವಾಸಿ ಸಂಪನ್ಮೂಲವನ್ನಾಗಿಸಲಾಗಿದೆ. ಮನುಷ್ಯನು ಕಾಡುಗಳನ್ನು ಕಡಿದು ರೆಸಾರ್ಟ್‌ಗಳನ್ನು ನಿರ್ಮಿಸಿ, ಕಾಡುಪ್ರಾಣಿಗಳ ಬದುಕಿನ ಸ್ವಾತಂತ್ರ್ಯವನ್ನು
ಕಿತ್ತುಕೊಂಡಿದ್ದಾನೆ. ಈ ಅತಿಕ್ರಮಣದಿಂದಾಗಿ ಕಾಡುಪ್ರಾಣಿಗಳು ದಿಕ್ಕೆಟ್ಟು ನಾಡಿಗೆ ಬಂದು ಸಾಯುತ್ತಿವೆ. ಕಾಡಿನ ಪ್ರಾಕೃತಿಕ ಸೊಬಗು ಮತ್ತು ಕೋಟಿ ಕೋಟಿ ಜೀವವೈವಿಧ್ಯಗಳ ರಕ್ಷಣೆಗಿಂತ, ಬೃಹತ್ ಯೋಜನೆ, ಗಣಿಗಾರಿಕೆ, ಕೈಗಾರಿಕೆಗಳೇ ಮುಖ್ಯವಾಗಿಬಿಟ್ಟಿವೆ.
ಹಾಗಾಗಿ ಪ್ರಭುತ್ವಗಳು ಡಾ.ಕಸ್ತೂರಿ ರಂಗನ್ ಅವರಂಥ ಪರಿಸರ ತಜ್ಞರ ವರದಿಗಳನ್ನೇ ತಿರಸ್ಕರಿಸು ತ್ತಿವೆ. ‘ಪಶ್ಚಿಮಘಟ್ಟ ಉಳಿಸಿ, ಕಾಡು ಉಳಿಸಿ’ ಎನ್ನುವುದು ಕೇವಲ ಘೋಷಣೆಯಾಗಿಯೇ ಉಳಿದು ಹೋಗಿದೆ.
ಮೂರು: ಮನುಷ್ಯನು ಬಹುಶಃ ಜಲಮೂಲದ ಮೇಲೆ ಮಾಡಿದಷ್ಟು ಆಕ್ರಮಣವನ್ನು ಬೇರಾವ ನೈಸರ್ಗಿಕ ಮೂಲದ ಮೇಲೂ ಮಾಡಿಲ್ಲ ಎನಿಸುತ್ತದೆ. ಅಷ್ಟರ ಮಟ್ಟಿಗೆ ಮನುಷ್ಯ ನೀರಿನ ದುರುಪಯೋಗ ಮಾಡಿದ್ದಾನೆ. ಹನಿಹನಿ ನೀರಿನ ಬೆಲೆಯನ್ನೇ ಅರಿಯದೆ ನೀರನ್ನು ಬೇಕಾಬಿಟ್ಟಿ ಬಳಸಿ, ಇಡೀ ಮನುಕುಲವೇ ನರಳುವಂತೆ ಮಾಡಿದ್ದಾನೆ. ಮೇಲ್ಮೈ ನೀರನ್ನೆಲ್ಲಾ ಆಪೋಶನ ತೆಗೆದುಕೊಂಡಿದ್ದು ಸಾಲದೆಂಬಂತೆ, ಅಂತರ್ಜಲಕ್ಕೂ ಲಗ್ಗೆಯಿಟ್ಟು ಅದನ್ನೂ ಬರಿದಾಗಿಸಿದ್ದಾನೆ (ಕಳೆದ ವರ್ಷ ಬೆಂಗಳೂರಿನಲ್ಲಿ ಒಂದು ಟ್ಯಾಂಕ್ ನೀರಿನ ಬೆಲೆ 4-5 ಸಾವಿರ ರುಪಾಯಿಗೆ ಏರಿದ್ದು, ನೀರಿನಲ್ಲಿ ವಾಹನ ತೊಳೆದವರಿಗೆ ದಂಡ ಹಾಕುವ ಪರಿಸ್ಥಿತಿ ಬಂದದ್ದು ನೆನಪಿರಬಹುದು!). ಕೆರೆ-ಕಟ್ಟೆಗಳನ್ನು ಮುಚ್ಚಿ ಹಾಕಿ ವೈಭವೋಪೇತ ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸಿದ್ದಾನೆ.
ಕೈಗಾರಿಕಾ ತ್ಯಾಜ್ಯವನ್ನು ನದಿಗೆ ಹರಿಬಿಟ್ಟಿದ್ದಾನೆ. ಊರೂರಿನ ಕೆರೆಗಳ ಲಕ್ಷಾಂತರ ಅಚ್ಚುಕಟ್ಟು ಪ್ರದೇಶಗಳನ್ನು ಒತ್ತುವರಿ ಮಾಡಿಕೊಂಡು ನೀರಿನ ಪಾತ್ರವನ್ನೇ ಕಬಳಿಸಿದ್ದಾನೆ. ಕೆರೆಗಳಲ್ಲೆಲ್ಲಾ ಪ್ಲಾಸ್ಟಿಕ್, ಕೊಳಚೆ, ಹೂಳು ತುಂಬಿಸಿ ಅವುಗಳ ‘ನೀರು ಸಂಗ್ರಹಣಾ ಸಾಮರ್ಥ್ಯ’ವನ್ನು ಕುಗ್ಗಿಸಿ, ಕೆರೆಗಳನ್ನು ನಿಷ್ಪ್ರಯೋಜಕವಾಗಿಸಿದ್ದಾನೆ. ನದಿಗಳ ಸ್ವಾಭಾವಿಕ ಪಾತ್ರವನ್ನೇ ತಿರುಗಿಸಿ, ಅವನ್ನು ಒಂದಕ್ಕೊಂದು ಜೋಡಿಸಿ, ತನ್ನ ಸ್ವಾರ್ಥ ಸಾಧಿಸಲು ಹೊರಟಿದ್ದಾನೆ.
ನಾಲ್ಕು: ಇನ್ನು ಹವಾಮಾನದ ವಿಷಯಕ್ಕೆ ಬಂದರೆ, ಭೂಮಿಯ ತಾಪಮಾನ ದಿನೇದಿನೆ ಹೆಚ್ಚುತ್ತಿದೆ ಎಂದು ಹವಾಮಾನ ತಜ್ಞರು ಎಚ್ಚರಿಸುತ್ತಲೇ ಬಂದಿದ್ದಾರೆ. ಈ ಭೂತಾಪವನ್ನು ನಿಯಂತ್ರಿಸಲೆಂದೇ ಸ್ಥಾಪನೆಗೊಂಡ ‘ಕ್ಯೂಟೋ ಪ್ರೋಟೋಕಾಲ್’ ಸಂಸ್ಥೆ ಈಗ ಕೇವಲ ‘ನಾಮ್-ಕೆ-ವಾಸ್ತೆ’ ಸಂಸ್ಥೆ ಯಾಗಿದೆ. ಹವಾಮಾನ ಬದಲಾವಣೆ ಕುರಿತಂತೆ ಹಲವು ಒಪ್ಪಂದಗಳಾಗಿದ್ದರೂ, ಮುಂದುವರಿದ ದೇಶಗಳೇ ಅವಕ್ಕೆ ಬದ್ಧವಾಗಿಲ್ಲ. ಜಗತ್ತಿನ ದೊಡ್ಡಣ್ಣ ಅಮೆರಿಕವೇ ಹಿಂದಿನ ಟ್ರಂಪ್ ಆಡಳಿತಾವಧಿ ಯಲ್ಲಿ ‘ಪ್ಯಾರಿಸ್ ಒಪ್ಪಂದ’ದಿಂದ ಹಿಂದೆ ಸರಿದು ದೊಡ್ಡ ಆಘಾತ ನೀಡಿತು. ಈಗ ಅದೇ ಟ್ರಂಪ್ ಮತ್ತೆ ಅಮೆರಿಕದ ಅಧ್ಯಕ್ಷರಾಗಿದ್ದಾರೆ.
ಅಂದ ಮೇಲೆ, ದೊಡ್ಡಣ್ಣ ಈ ಅಭಿಯಾನದ ನೇತೃತ್ವ ವಹಿಸುವುದಂತೂ ಕನಸಿನ ಮಾತೇ! ಚೀನಾ, ಬ್ರಿಟನ್‌ನಂಥ ಹಲವು ದೇಶಗಳು ವಸಾಹತು ನೆಪದಲ್ಲಿ ಬೃಹತ್ ಉದ್ದಿಮೆಗಳನ್ನು, ಕೈಗಾರಿಕೆಗಳನ್ನು ಅಭಿವೃದ್ಧಿಶೀಲ ದೇಶಗಳಲ್ಲಿ ಸ್ಥಾಪಿಸಿ, ಇಂಗಾಲಾನಿಲದ ಬೃಹತ್ ಪ್ರಮಾಣದ ಹೊರಸೂಸುವಿಕೆಗೆ ಕಾರಣವಾಗಿವೆ. ನವೀಕರಿಸಬಹುದಾದ ಇಂಧನಗಳು, ಕ್ಲೀನ್ ಪವರ್ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಲೆಂದು ಮುಂದುವರಿದ ದೇಶಗಳು ಇತರೆ ಬಡದೇಶಗಳಿಗೆ ನೆರವಾಗುವ ಮೂಲಕ ದೊಡ್ಡತನ ಮೆರೆಯಬೇಕಿದೆ.
ಯುದ್ಧದ ವಿಷಯದಲ್ಲಿ ಉಕ್ರೇನ್‌ಗೆ ನೆರವಾಗಿದ್ದಕ್ಕಾಗಿಯೇ ಅಪಾರ ಪ್ರಮಾಣದ ಖನಿಜ ಸಂಪತ್ತ ನ್ನು ಬಾಚಿಕೊಳ್ಳುವ ಹುನ್ನಾರದಲ್ಲಿರುವ ಅಮೆರಿಕದಿಂದ ಇದನ್ನೆಲ್ಲಾ ಹೇಗೆ ನಿರೀಕ್ಷಿಸಲಾದೀತು? ‘ಯಥಾ ದೊಡ್ಡಣ್ಣ, ತಥಾ ಚಿಕ್ಕಣ್ಣ..!’.
ಉಪಸಂಹಾರ: ಇದನ್ನೆಲ್ಲಾ ಹೇಳಿದ ಕಾರಣವೆಂದರೆ, ಏಪ್ರಿಲ್ 22ರ ದಿನವನ್ನು ‘ವಿಶ್ವ ಭೂಮಿ ದಿನ’ವನ್ನಾಗಿ ಆಚರಿಸುತ್ತಿದ್ದೇವೆ. ಪರಿಸರ ಮತ್ತು ಜೀವವೈವಿಧ್ಯದ ರಕ್ಷಣೆ, ಓಝೋನ್ ಪದರ ಸವಕಳಿ, ಮಿತಿಮೀರುತ್ತಿರುವ ಜನಸಂಖ್ಯೆ ಇವುಗಳ ಕುರಿತು ಜಾಗೃತಿ ಮೂಡಿಸಲು ಪ್ರಪಂಚ ದಾದ್ಯಂತ ಹಲವು ದೇಶಗಳು ಈ ದಿನವನ್ನು ಆಚರಿಸುತ್ತವೆ. ಹಾಗೆಯೇ, ಕಳೆದ ತಿಂಗಳು ಮಾರ್ಚ್ 20ರಿಂದ 23ರವರೆಗೆ ನಾವು ಕ್ರಮವಾಗಿ ‘ವಿಶ್ವ ಗುಬ್ಬಚ್ಚಿ ದಿನ’ (ಮಾ.20), ‘ವಿಶ್ವ ಅರಣ್ಯ ದಿನ’ (ಮಾ.21), ‘ವಿಶ್ವ ಜಲ ದಿನ’ (ಮಾ.22) ಹಾಗೂ ‘ವಿಶ್ವ ಹವಾಮಾನ ದಿನ’ (ಮಾ.23) ಆಚರಿಸಿದ್ದೇವೆ.
ಈ ಐದೂ ಆಚರಣೆಗಳು ಒಂದಕ್ಕೊಂದು ಸಂಬಂಧವುಳ್ಳಂಥವು ಮತ್ತು ನಿಸರ್ಗದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಅತ್ಯಂತ ಮಹತ್ವಪೂರ್ಣ ದಿನಗಳು. ಮೇಲಿನ ಎಲ್ಲಾ ದುರಂತಗಳಿಗೆ ಕಾರಣ- ಮನುಷ್ಯನ ದುರಾಸೆ ಮತ್ತು ಮಹದಾಕಾಂಕ್ಷೆ. ಆಧುನೀಕರಣ ಗೊಳ್ಳುವ ಹಂಬಲದಲ್ಲಿ, ನಾಗರಿಕ ದಾಪುಗಾಲಿನ ಹೆಜ್ಜೆಗಳಲ್ಲಿ ಮನುಷ್ಯ ನಿಸರ್ಗವನ್ನು, ಸೃಷ್ಟಿಯ ನಿಯಮಗಳನ್ನು ಧಿಕ್ಕರಿಸಿ ಪಾತಾಳಕ್ಕೆ ತುಳಿದುಬಿಟ್ಟಿದ್ದಾನೆ.
ತಾನೊಬ್ಬನೇ ಶ್ರೇಷ್ಠಜೀವಿ ಎಂದು ಭ್ರಮಿಸಿ ಕೋಟಿ ಕೋಟಿ ಜೀವವೈವಿಧ್ಯವನ್ನೇ ವಿನಾಶದ ಅಂಚಿಗೆ ತಂದು ನಿಲ್ಲಿಸಿದ್ದಾನೆ. ಪರಸ್ಪರ ದೊಡ್ಡಣ್ಣಗಳಾಗುವ ಉಮೇದಿನಲ್ಲಿ, ಸಾಮ್ರಾಜ್ಯ ವಿಸ್ತರಿಸುವ ವಾಂಛೆಯಲ್ಲಿ ಸಾಮಾನ್ಯರ ಜೀವನವನ್ನು ಜರ್ಜರಗೊಳಿಸಿ, ಅಸ್ಥಿರಗೊಳಿಸಿ ಮೆರೆದಿದ್ದಾನೆ. ಜಾಗತಿಕ ಪ್ರಜ್ಞೆಯೇ ಸಾಮಾನ್ಯರ ಪ್ರಜ್ಞೆಯೂ ಆಗಿದೆ. ಅದೇ ಸಾಮ್ರಾಜ್ಯಶಾಹಿ ಪ್ರವೃತ್ತಿ, ಧನದಾಹ, ಷಾರಾಮಿ ಬದುಕಿನ ಹಪಾಹಪಿ, ಸ್ವಾರ್ಥ, ದುರಾಸೆ ಬಹುತೇಕರನ್ನು ಸರಳ ಜೀವನದಿಂದ ಅತ್ಯಂತ ಸಂಕೀರ್ಣ, ವೈಭವೋಪೇತ ಲೋಲುಪ ಜೀವನದತ್ತ ಮುಖಮಾಡುವಂತೆ ಮಾಡಿದೆ.
ಸರಳವಾಗಿ ಬದುಕುವುದೇ ಅವಮಾನ ಎಂದು ಮನುಷ್ಯ ಭ್ರಮಿಸಿದ್ದಾನೆ. ‘ನೀನೂ ಬದುಕು, ಬೇರೆಯವರನ್ನೂ ಬದುಕಲು ಬಿಡು’ ಎಂಬ ಮಾತಿಗೆ ಅರ್ಥವೇ ಇಲ್ಲವಾಗಿದೆ. ‘ಪ್ರಕೃತಿಯು ನುಷ್ಯನ ಆಸೆಗಳನ್ನು ಈಡೇರಿಸುತ್ತದೆಯೇ ಹೊರತು, ದುರಾಸೆಗಳನ್ನಲ್ಲ’ ಎಂಬ ಮಹಾತ್ಮ ಗಾಂಧಿಯವರ ಮಾತು ಅದೆಷ್ಟು ಸತ್ಯವಲ್ಲವೇ? ಮನುಕುಲ ಇನ್ನೂ ರಸಾತಳ ತಲುಪುವ ಮುನ್ನ, ತಾನು ಪ್ರಕೃತಿಯ ಒಂದು ಯಃಕಶ್ಚಿತ್ ಭಾಗವೇ ಹೊರತು ಪ್ರಕೃತಿಯನ್ನು ಆಳುವ ಯಜಮಾನನಲ್ಲ ಎಂಬುದನ್ನು ಮನುಷ್ಯ ಮನಗಾಣಬೇಕು.
(ಲೇಖಕರು ಸಾಹಿತಿ)