IND vs ENG: ಐದನೇ ಟೆಸ್ಟ್‌ಗೆ ಭಾರತ ತಂಡದಲ್ಲಿ 3 ಬದಲಾವಣೆಯನ್ನು ಸೂಚಿಸಿದ ಇರ್ಫಾನ್ ಪಠಾಣ್!
Irfan Pathan on India's Playing XI: ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಣ ಐದನೇ ಹಾಗೂ ಟೆಸ್ಟ್ ಸರಣಿಯ ಕೊನೆಯ ಪಂದ್ಯ ಜುಲೈ 31 ರಂದು ಆರಂಭವಾಗಲಿದೆ. ಈ ಪಂದ್ಯಕ್ಕೆ ಭಾರತ ತಂಡದ ಪ್ಲೇಯಿಂಗ್ xiನಲ್ಲಿ ಮೂರು ಬದಲಾವಣೆಯನ್ನು ಮಾಡಿಕೊಳ್ಳಬೇಕು ಎಂದು ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಆಗ್ರಹಿಸಿದ್ದಾರೆ.

ಭಾರತ ತಂಡದಲ್ಲಿ ಮೂರು ಬದಲಾವಣೆಯನ್ನು ಮಾಡಬೇಕೆಂದು ಆಗ್ರಹಿಸಿದ ಇರ್ಫಾನ್ ಪಠಾಣ್.

ಲಂಡನ್: ಇಂಗ್ಲೆಂಡ್ ವಿರುದ್ಧ ಐದನೇ ಹಾಗೂ ಟೆಸ್ಟ್ ಸರಣಿಯ ಕೊನೆಯ ಪಂದ್ಯಕ್ಕೆ (IND vs ENG) ಭಾರತ ತಂಡದ ಪ್ಲೇಯಿಂಗ್ Xiನಲ್ಲಿ ಮೂರು ಬದಲಾವಣೆ ಮಾಡಿಕೊಳ್ಳಬೇಕೆಂದು ಟೀಮ್ ಇಂಡಿಯಾ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ (Irfan Pathan) ಸಲಹೆ ನೀಡಿದ್ದಾರೆ. ಇದರಲ್ಲಿ ಬೌಲಿಂಗ್ ವಿಭಾಗದಲ್ಲಿ ಎರಡು ಬದಲಾವಣೆ, ಇನ್ನುಳಿದ ಒಂದು ಸ್ಥಾನದಲ್ಲಿ ಗಾಯಾಳು ರಿಷಭ್ ಪಂತ್ (Rishabh Pant) ಬದಲು ಧ್ರುವ್ ಜುರೆಲ್ ಅವರನ್ನು ಆಡಲಿದ್ದಾರೆಂದು ತಿಳಿಸಿದ್ದಾರೆ. ಜುಲೈ 31 ರಂದು ಐದನೇ ಟೆಸ್ಟ್ ಪಂದ್ಯ ಕೆನಿಂಗ್ಟನ್ ಓವಲ್‌ನಲ್ಲಿ ಆರಂಭವಾಗಲಿದೆ.
ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಗಂಭೀರ ಗಾಯಕ್ಕೆ ತುತ್ತಾಗಿದ್ದ ರಿಷಭ್ ಪಂತ್ ಅವರು ಐದನೇ ಟೆಸ್ಟ್ ಪಂದ್ಯದಿಂದ ಹೊರ ನಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಸ್ಥಾನದಲ್ಲಿ ಧ್ರುವ್ ಜುರೆಲ್ ಆಡುವುದು ಬಹುತೇಕ ಖಚಿತವಾಗಿದೆ. ಮ್ಯಾಂಚೆಸ್ಟರ್ ಟೆಸ್ಟ್ ಮೊದಲನೇ ದಿನ ಕ್ರಿಸ್ ವೋಕ್ಸ್ ಅವರ ಎಸೆತದಲ್ಲಿ ರಿಷಭ್ ಪಂತ್ ರಿವರ್ಸ್ ಸ್ವೀಪ್ ಹೊಡೆಯಲು ಪ್ರಯತ್ನಿಸಿ ಚೆಂಡನ್ನು ತಮ್ಮ ಬಲ ಪಾದಕ್ಕೆ ತಗುಲಿಸಿಕೊಂಡಿದ್ದರು. ಆ ಮೂಲಕ ಅವರ ಪಾದದ ಗಾಯ ಗಂಭೀರವಾಗಿತ್ತು. ವರ್ಕ್‌ಲೋಡ್ ಮ್ಯಾನೇಜ್‌ಮೆಂಟ್ ಕಾರಣ ಜಸ್‌ಪ್ರೀತ್ ಬುಮ್ರಾ ಅವರು ಐದನೇ ಟೆಸ್ಟ್ ಆಡುವುದು ಅನುಮಾನ. ಹಾಗಾಗಿ ಅವರ ಸ್ಥಾನದಲ್ಲಿ ಚೈನಾಮನ್ ಸ್ಪಿನ್ನರ್ ಕುಲ್ದೀಪ್ ಯಾದವ್ ಆಡಬೇಕೆಂದು ಆಗ್ರಹಿಸಿದ್ದಾರೆ. ಇನ್ನು ಕಳೆದ ಪಂದ್ಯದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಅನ್ಷುಲ್ ಕಾಂಬೋಜ್ ಅವರ ಬದಲು ಅರ್ಷದೀಪ್ ಸಿಂಗ್ ಅಥವಾ ಪ್ರಸಿಧ್ ಕೃಷ್ಣ ಅವರನ್ನು ಆಡಿಸಬೇಕು ಎಂದಿದ್ದಾರೆ.
IND vs ENG 5th Test: ಅಂತಿಮ ಟೆಸ್ಟ್‌ನ ಪಿಚ್ ರಿಪೋರ್ಟ್, ಹವಾಮಾನ ವರದಿ ಹೀಗಿದೆ
"ರಿಷಭ್ ಪಂತ್ ಅವರ ಸ್ಥಾನದಲ್ಲಿ ಧ್ರುವ್ ಜುರೆಲ್ ಆಡಲಿದ್ದಾರೆ. ಅವರು ಐದನೇ ಟೆಸ್ಟ್ ಪಂದ್ಯದಲ್ಲಿ ಬ್ಯಾಟ್ ಮಾಡಲಿದ್ದಾರೆ. ಇನ್ನು ಜಸ್‌ಪ್ರೀತ್ ಬುಮ್ರಾ ಅವರ ಸ್ಥಾನದಲ್ಲಿ ಕುಲ್ದೀಪ್ ಯಾದವ್ ಆಡಲಿದ್ದಾರೆ. ಯುವ ವೇಗಿ ಅನ್ಷುಲ್ ಕಾಂಬೋಜ್ ಅವರು ಸ್ಥಾನದಲ್ಲಿ ಅರ್ಷದೀಪ್ ಸಿಂಗ್ ಡೆಬ್ಯೂಟ್ ಮಾಡಬಹುದು. ಅರ್ಷದೀಪ್ ಸಿಂಗ್ ಅವರು ಇನ್ನೂ ವಿಭಿನ್ನವಾಗಿದ್ದಾರೆ. ಅವರು ವೈಟ್ ಬಾಲ್ ಕ್ರಿಕೆಟ್‌ನಲ್ಲಿ ನಿಯಮಿತವಾಗಿ ಆಡುತ್ತಿದ್ದಾರೆ ಹಾಗೂ ವಿಕೆಟ್ ಪಡೆಯುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಅವರು ಐದನೇ ಟೆಸ್ಟ್ ಪಂದ್ಯದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಬಹುದು. ಇನ್ನು ನೀವು ಪ್ರಸಿಧ್ ಕೃಷ್ಣ ಅವರನ್ನು ನೋಡಬಹುದು. ಈಗ ನಿಮ್ಮಲ್ಲಿ ಆರು ಬೌಲಿಂಗ್ ಆಯ್ಕೆಗಳಿವೆ. ವೇಗದ ಬೌಲರ್‌ಗಳು ದಣಿದಿದ್ದಾರೆ. ಕುಲ್ದೀಪ್ ಯಾದವ್ ತಾಜಾತನದಿಂದ ಕೂಡಿದ್ದಾರೆ. ಟ್ರಂಪ್ ಕಾರ್ಡ್ ರೂಪದಲ್ಲಿ ಕುಲ್ದೀಪ್ ಯಾದವ್ ಅವರನ್ನು ಆಡಿಸಬೇಕಾಗಿದೆ," ಎಂದು ಇರ್ಫಾನ್ ಪಠಾಣ್ ತಿಳಿಸಿದ್ದಾರೆ.
IND vs ENG: ಓವಲ್‌ನ ಐದನೇ ಟೆಸ್ಟ್ ಪಂದ್ಯದಲ್ಲಿ ಅರ್ಷದೀಪ್ ಸಿಂಗ್ ಆಡುವುದು ಪಕ್ಕಾ!
ವಾಷಿಂಗ್ಟನ್ ಸುಂದರ್‌ಗೆ ಇರ್ಫಾನ್ ಪಠಾಣ್ ಮೆಚ್ಚುಗೆ
ಕಳೆದ ಪಂದ್ಯದಲ್ಲಿ ಶತಕ ಸಿಡಿಸಿದ್ದ ವಾಷಿಂಗ್ಟನ್ ಸುಂದರ್ ಅವರನ್ನು ಇದೇ ವೇಳೆ ಇರ್ಫಾನ್ ಪಠಾಣ್ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ವಾಷಿಂಗ್ಟನ್ ಅವರು ಬೌಲಿಂಗ್ ಜೊತೆಗೆ ಬ್ಯಾಟಿಂಗ್‌ನಲ್ಲಿ ಡೆಪ್ತ್ ತಂದುಕೊಡಲಿದ್ದಾರೆ. ಅವರು ಐದು ಅಥವಾ ಆರನೇ ಸ್ಥಾನಗಳಲ್ಲಿ ಆಡುವುದು ಬಹುತೇಕ ಖಚಿತ ಎಂದು ಪಠಾಣ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
"ವಾಷಿಂಗ್ಟನ್ ಸುಂದರ್ ಅವರು 7,8, 9 ಕ್ರಮಾಂಕಗಳಲ್ಲಿ ಬ್ಯಾಟ್ ಮಾಡಿದ್ದರು. ಆದರೆ, ಕಳೆದ ಪಂದ್ಯದಲ್ಲಿ ಅನಿರೀಕ್ಷಿತವಾಗಿ ಐದನೇ ಕ್ರಮಾಂಕದಲ್ಲಿ ಆಡಿ ರನ್‌ಗಳನ್ನು ಗಳಿಸಿದ್ದರು. ಅವರು ಬೌಲಿಂಗ್ ಜೊತೆಗೆ ಬ್ಯಾಟಿಂಗ್‌ನಲ್ಲಿಯೂ ತಂಡಕ್ಕೆ ಡೆಪ್ತ್ ತಂದುಕೊಡಲಿದ್ದಾರೆ. ಇದು ತಂಡದಲ್ಲಿ ದೊಡ್ಡ ವ್ಯತ್ಯಾಸವನ್ನು ತಂದುಕೊಡಲಿದೆ. ಅವರು 5 ಅಥವಾ 6ನೇ ಕ್ರಮಾಂಕಗಳಲ್ಲಿ ಆಡಬಹುದು," ಎಂದು ಮಾಜಿ ಆಲ್‌ರೌಂಡರ್ ತಿಳಿಸಿದ್ದಾರೆ.