ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Narayan Yaji Column: ಪರತತ್ತ್ವದ ಸಾಕಾರ ಮೂರ್ತಿ ಮೃಣ್ಮಯಿ ಗಣೇಶ

ಗಣೇಶನನ್ನು ನಾವು ಮೂರ್ತಿಯಲ್ಲಿ ಸೃಷ್ಟಿಸುವುದಿಲ್ಲ; ನಮ್ಮೊಳಗೂ, ಇಡೀ ಸೃಷ್ಟಿಯಲ್ಲೂ ನಿತ್ಯವಾಗಿ ನೆಲೆಸಿರುವ ಗಣನಾಯಕ ತತ್ತ್ವವನ್ನು ಮೂರ್ತಿಯ ಮೂಲಕ ಪ್ರಕಟಿಸಿಕೊಳ್ಳುತ್ತೇವೆ. ಹೇಗೆ ಅರಣಿ ಕಟ್ಟಿಗೆಯಲ್ಲಿ ಅಗ್ನಿ ಅಡಗಿದ್ದರೂ ಮಥನ ಮಾಡಿದಾಗ ಮಾತ್ರ ಅದು ಪ್ರಕಟವಾಗುತ್ತದೆಯೋ, ಹಾಗೆಯೇ ಪರಮಚೈತನ್ಯವೂ ನಮ್ಮ ಅಂತರಂಗದಲ್ಲಿ ಅಡಗಿದೆ; ಭಕ್ತಿ, ಜ್ಞಾನ, ಸಾಧನೆ ಮತ್ತು ಆತ್ಮಪ್ರಜ್ಞೆಯ ಮಥನದಿಂದ ಅದು ಜಾಗೃತವಾಗುತ್ತದೆ.

ಪರತತ್ತ್ವದ ಸಾಕಾರ ಮೂರ್ತಿ ಮೃಣ್ಮಯಿ ಗಣೇಶ

-

Profile
Ashok Nayak Sep 14, 2026 7:31 AM

ಬೆನಕ ನಮನ

ನಾರಾಯಣ ಯಾಜಿ

ಸ್ವಾತ್ಮಸಂಸ್ಥಮಜಂ ಶುದ್ಧಂ ತ್ವಾಮದ್ಯ ಗಣನಾಯಕ | ಅರಣ್ಯಾಮಿವ ಹವ್ಯಾಶಂ ಮರ್ತಯ ಓ ಗಣನಾಯಕನೇ! ನೀನು ನನ್ನ ಆತ್ಮದಲ್ಲಿ ನೆಲೆಗೊಂಡಿರುವ, ಜನ್ಮರಹಿತನಾದ, ಶುದ್ಧಸ್ವರೂಪ ನಾದವನು. ಅರಣಿಯಲ್ಲಿ ಅಡಗಿರುವ ಅಗ್ನಿಯನ್ನು ಮಥನದ ಮೂಲಕ ಹೊರಗೆ ಪ್ರಕಟಿಸುವಂತೆ, ನಿನ್ನ ನಿತ್ಯ ಸ್ವರೂಪವನ್ನು ಈ ಮೂರ್ತಿಯಲ್ಲಿ ಆವಾಹಿಸುತ್ತೇನೆ. ಗಣಪತಿ ಮನೆಮನೆಗೆ ಬರುತ್ತಾನೆ. ಮಣ್ಣಿನಿಂದ ರೂಪುಗೊಂಡ ಅವನ ವಿಗ್ರಹವನ್ನು ಭಕ್ತಿಯಿಂದ ಪ್ರತಿಷ್ಠಾಪಿಸುತ್ತೇವೆ. ಪೂಜಿಸುತ್ತೇವೆ. ಮಂತ್ರಗಳನ್ನು ಪಠಿಸುತ್ತೇವೆ. ನೈವೇದ್ಯ ಅರ್ಪಿಸುತ್ತೇವೆ.

ಕೆಲವು ದಿನಗಳ ನಂತರ ಅದೇ ವಿಗ್ರಹವನ್ನು ಜಲದಲ್ಲಿ ವಿಸರ್ಜಿಸುತ್ತೇವೆ. ವಿಗ್ರಹಾರಾಧನೆಯಲ್ಲಿ ದೇವರನ್ನು ಪ್ರತಿಷ್ಠಾಪಿಸುವಾಗ ಹೇಳುವ ಮಂತ್ರದ ಹಿಂದಿರುವ ತಾತ್ವಿಕ ತತ್ವವನ್ನು ಅರ್ಥ ಮಾಡಿಕೊಂಡರೆ ಮಣ್ಣಿನ ಗಣಪತಿಯನ್ನು ತಂದು ಪೂಜಿಸಿ ನಂತರ ಅದನ್ನು ನೀರಿನಲ್ಲಿ ವಿಸರ್ಜಿ ಸುವ ಕ್ರಿಯೆಯ ಹಿಂದಿರುವ ತಾತ್ವಿಕ ತತ್ವ ಅರ್ಥವಾಗುತ್ತದೆ. ಸನಾತನ ಧರ್ಮ ಚರಾಚರ ಪ್ರಪಂಚದ ಸರ್ವದರಲ್ಲಿಯೂ ದೇವರ ರೂಪವನ್ನೇ ಕಾಣುವುದರಿಂದ ನೀರಿನಲ್ಲಿ ವಿಸರ್ಜಿಸುವುದು ಎಂದರೆ ಒಂದು ರೂಪದಿಂದ ಇನ್ನೊಂದಕ್ಕೆ ಬದಲಾಯಿಸುವುದಾಗಿದೆ.

ಗಣೇಶನನ್ನು ನಾವು ಮೂರ್ತಿಯಲ್ಲಿ ಸೃಷ್ಟಿಸುವುದಿಲ್ಲ; ನಮ್ಮೊಳಗೂ, ಇಡೀ ಸೃಷ್ಟಿಯಲ್ಲೂ ನಿತ್ಯವಾಗಿ ನೆಲೆಸಿರುವ ಗಣನಾಯಕ ತತ್ತ್ವವನ್ನು ಮೂರ್ತಿಯ ಮೂಲಕ ಪ್ರಕಟಿಸಿಕೊಳ್ಳುತ್ತೇವೆ. ಹೇಗೆ ಅರಣಿ ಕಟ್ಟಿಗೆಯಲ್ಲಿ ಅಗ್ನಿ ಅಡಗಿದ್ದರೂ ಮಥನ ಮಾಡಿದಾಗ ಮಾತ್ರ ಅದು ಪ್ರಕಟವಾಗು ತ್ತದೆಯೋ, ಹಾಗೆಯೇ ಪರಮಚೈತನ್ಯವೂ ನಮ್ಮ ಅಂತರಂಗದಲ್ಲಿ ಅಡಗಿದೆ; ಭಕ್ತಿ, ಜ್ಞಾನ, ಸಾಧನೆ ಮತ್ತು ಆತ್ಮಪ್ರಜ್ಞೆಯ ಮಥನದಿಂದ ಅದು ಜಾಗೃತವಾಗುತ್ತದೆ.

ಇದನ್ನೂ ಓದಿ : Narayana Yaji Column: ಉತ್ತರ ಕನ್ನಡದಿಂದ ವಿಶ್ವವೇದಿಕೆಗೆ !

ಮಣ್ಣಿನಿಂದ ಗಣಪತಿಯ ವಿಗ್ರಹವನ್ನು ರೂಪಿಸಿ, ಭಕ್ತಿಯಿಂದ ಪೂಜಿಸಿ, ಅಂತಿಮವಾಗಿ ಅದನ್ನೇ ಜಲದಲ್ಲಿ ವಿಸರ್ಜಿಸುವ ಈ ಆಚರಣೆಯ ಹಿಂದೆ ಅನಿತ್ಯವಾದ ರೂಪದಿಂದ ನಿತ್ಯವಾದ ತತ್ತ್ವದ ಕಡೆಗೆ ಸಾಗುವ ಸನಾತನ ಸಂದೇಶ ಅಡಗಿದೆ.

ಗಣೇಶ ಗೀತೆ: ಭಗವದ್ಗೀತೆಯಂತೆಯೇ ಗಣೇಶ ಗೀತೆಯೂ ಇದೆ. ಅದರ ಕಥೆ ತುಂಬಾ ಸಾರಸ್ಯಕರ ವಾದುದು. ಪ್ರಾಚೀನ ಕಾಲದಲ್ಲಿ ವರೇಣ್ಯ ಎಂಬ ರಾಜನಿದ್ದನು. ಆತನಿಗೆ ಸಂತಾನವಿರಲಿಲ್ಲ.

ಆತನು ಮುನಿಗಳ ಉಪದೇಶದಂತೆ ಉಗ್ರವಾದ ತಪಸ್ಸನ್ನು ಆಚರಿಸಿದನು. ಆಗ ಗಜಾನನನು ಚತುರ್ಭುಜ ಆನೆಯ ಮುಖ, ಸುವರ್ಣದಂತಹ ದಿವ್ಯ ಕಾಂತಿ ಹಾಗೂ ಕಿರೀಟ, ಆಭರಣಗಳಿಂದ ಶೋಭಿಸುವ ದಿವ್ಯ ಪರಬ್ರಹ್ಮ ರೂಪದಲ್ಲಿ ಪ್ರತ್ಯಕ್ಷನಾಗುತ್ತಾನೆ. ರಾಜನಿಗೆ ಪ್ರಸನ್ನನಾಗಿ, ನಾನೇ ನಿನ್ನ ಮಗನಾಗಿ ಹುಟ್ಟುತ್ತೇನೆ ಎಂದು ವರ ನೀಡಿದನು. ಅದರಂತೆ ವರೇಣ್ಯನ ರಾಣಿ ಮಾಲಿನಿಯ ಗರ್ಭದಲ್ಲಿ ಗಣಪತಿಯು ಮಗುವಾಗಿ ಜನಿಸಿದನು. ಆದರೆ, ಮಗು ಜನಿಸಿದಾಗ ಅದು ನಾಲ್ಕು ಕೈಗಳು ಹಾಗೂ ಆನೆಯ ಮುಖವನ್ನು ಹೊಂದಿತ್ತು. ಇದನ್ನು ಕಂಡ ವರೇಣ್ಯ ರಾಜನು ಅeನದಿಂದ ಭಯಪಟ್ಟು, ಈ ಮಗು ನಮಗೆ ಶಾಪಗ್ರಸ್ತವಾಗಿ ಬಂದಿದೆ ಎಂದು ಭಾವಿಸಿ, ಮಗುವನ್ನು ಅರಣ್ಯದಲ್ಲಿ ತೊರೆಯುವಂತೆ ಆಜ್ಞಾಪಿಸಿದನು.

ಕಾಡಿನಲ್ಲಿ ತೊರೆದ ಮಗುವನ್ನು ಪರಾಶರ ಮಹರ್ಷಿಗಳು ಮತ್ತು ಅವರ ಪತ್ನಿ ವತ್ಸಲಾದೇವಿ ಕಂಡು, ತಮ್ಮ ಜ್ಞಾನದೃಷ್ಟಿಯಿಂದ ಮಗುವಿನ ದಿವ್ಯತೆಯನ್ನು ಅರಿತು ತಮ್ಮ ಆಶ್ರಮಕ್ಕೆ ತಂದು ‘ಗಜಾನನ’ ಎಂದು ನಾಮಕರಣ ಮಾಡಿ ಪ್ರೀತಿಯಿಂದ ಸಾಕಿ ಬೆಳೆಸಿದರು. ಬಾಲಕನಿಗೆ ಸಕಲ ಶಾಸ್ತ್ರ ಮತ್ತು ವಿದ್ಯೆಗಳನ್ನು ಧಾರೆ ಎರೆದರು.

Ganapa ok

ಗಜಾನನನು ಪರಾಶರ ಮಹರ್ಷಿಗಳ ಆಶ್ರಮದಲ್ಲಿದ್ದಾಗಲೇ, ದೇವತೆಗಳು ಮತ್ತು ಋಷಿಮುನಿಗಳಿಗೆ ತೀವ್ರ ಉಪದ್ರವ ನೀಡುತ್ತಿದ್ದ ಸಿಂಧೂರ ಎನ್ನುವ ಎಂಬ ದೈತ್ಯನು ಆಶ್ರಮದ ಮೇಲೆ ದಾಳಿ ಮಾಡಲು ಬರುತ್ತಾನೆ. ಬಾಲಕ ಗಜಾನನನು ಆತನೊಂದಿಗೆ ಭೀಕರ ಯುದ್ಧ ಮಾಡಿ, ಆತನನ್ನು ಮರ್ದಿಸಿ ಸಂಹರಿಸುತ್ತಾನೆ. ಯುದ್ಧದಲ್ಲಿ ದೈತ್ಯನ ರಕ್ತ(ಸಿಂಧೂರ)ವು ಗಜಾನನನ ದೇಹದಾದ್ಯಂತ ಲೇಪನವಾಗುತ್ತದೆ.

ಅಂದಿನಿಂದ ಗಣಪತಿಗೆ ಕೆಂಪು ಸಿಂಧೂರವನ್ನು ಅರ್ಪಿಸುವ ಸಂಪ್ರದಾಯವೂ ಪ್ರಾರಂಭ ವಾಯಿತು. ಆಶ್ರಮದಲ್ಲಿ ನಡೆದ ಈ ದೈತ್ಯ ಸಂಹಾರ ಮತ್ತು ಗಜಾನನನ ಅಪಾರ ಮಹಿಮೆಯು ವರೇಣ್ಯ ರಾಜನಿಗೆ ತಿಳಿಯುತ್ತದೆ. ತಾನು ಕಾಡಿನಲ್ಲಿ ತೊರೆದ ಮಗು ಸಾಮಾನ್ಯವಲ್ಲ, ಸಾಕ್ಷಾತ್ ಪರಬ್ರಹ್ಮ ಸ್ವರೂಪಿಯಾದ ಗಣೇಶನೇ ಎಂಬ ಸತ್ಯ ರಾಜನಿಗೆ ಅರಿವಾಗುತ್ತದೆ. ತಾನು ಮಾಡಿದ ಮಹಾಪಾಪಕ್ಕಾಗಿ ರಾಜನು ತೀವ್ರ ಪಶ್ಚಾತ್ತಾಪ ಪಟ್ಟು, ಪರಾಶರ ಮಹರ್ಷಿಗಳ ಆಶ್ರಮಕ್ಕೆ ತೆರಳಿ ಗಣೇಶನ ಕಾಲುಗಳಿಗೆ ಬಿದ್ದು ಕ್ಷಮೆ ಯಾಚಿಸುತ್ತಾನೆ.

ರಾಜನು ಗಣೇಶನನ್ನು ಮರಳಿ ಅರಮನೆಗೆ ಬಂದು ರಾಜ್ಯಭಾರ ವಹಿಸಿಕೊಳ್ಳುವಂತೆ ಪ್ರಾರ್ಥಿಸಿದಾಗ, ಗಣೇಶನು ತನ್ನ ಅವತಾರ ಕಾರ್ಯ ಮುಗಿಯುತ್ತಾ ಬಂದಿರುವುದನ್ನೂ, ತಾನು ಅರಣ್ಯಕ್ಕೆ ತೆರಳಿ ತಪಸ್ಸಿನಲ್ಲಿ ಲೀನನಾಗಬೇಕಾಗಿರುವುದನ್ನೂ ತಿಳಿಸುತ್ತಾನೆ. ಆಗ ವರೇಣ್ಯ ರಾಜನು ದುಃಖಿತನಾಗಿ, ಹೇ ಪ್ರಭು, ನನಗೆ ಸಂಸಾರ ಬಂಧನದಿಂದ ಮುಕ್ತಿ ಹೊಂದುವ ಮಾರ್ಗವನ್ನು ತೋರಿಸು. ಆತ್ಮeನ ಹಾಗೂ ಜಗತ್ತಿನ ಸತ್ಯವನ್ನು ನನಗೆ ಉಪದೇಶಿಸು ಎಂದು ಪ್ರಾರ್ಥಿಸಿದನು. ರಾಜನ ಭಕ್ತಿ ಮತ್ತು ಪಶ್ಚಾತ್ತಾಪವನ್ನು ಕಂಡ ಗಣೇಶನು ಆತನಿಗೆ ನೀಡಿದ ದಿವ್ಯ ಉಪದೇಶವೇ ಗಣೇಶ ಗೀತೆ ಎಂದು ಪ್ರಸಿದ್ಧವಾಯಿತು.

ಭಗವದ್ಗೀತೆಯಂತೆಯೇ ಇಲ್ಲೂ ಕೂಡ ಗಣೇಶನು ತನ್ನ ವಿಶ್ವರೂಪವನ್ನು ತೋರಿಸಿ, ತಾನೇ ಸೃಷ್ಟಿ, ಸ್ಥಿತಿ, ಲಯಗಳಿಗೆ ಕಾರಣಕರ್ತನೆಂದು ತಿಳಿಸುತ್ತಾನೆ. ದೇಹ ಮತ್ತು ಆತ್ಮದ ವ್ಯತ್ಯಾಸ, ಭಕ್ತಿ ಮಾರ್ಗ, ಕರ್ಮ-ಲ ತ್ಯಾಗ ಹಾಗೂ ಧ್ಯಾನಯೋಗದ ಮಹತ್ವವನ್ನು ವಿವರಿಸುತ್ತಾನೆ. ಈ ಉಪದೇಶವನ್ನು ಪಡೆದ ವರೇಣ್ಯ ರಾಜನು ಅeನದಿಂದ ಮುಕ್ತನಾಗಿ, ತನ್ನ ರಾಜ್ಯವನ್ನು ಮಗನಿಗೆ ಹಸ್ತಾಂತರಿಸಿ, ಗಣಪತಿಯನ್ನು ಧ್ಯಾನ ಮಾಡುತ್ತಾ ಮುಕ್ತಿಯನ್ನು ಪಡೆದನು. ಗಣೇಶನ ಕುರಿತು ನಡೆಯುವ ಅನೇಕ ಚರ್ಚೆಗಳಲ್ಲಿ ಆತ ವೈದಿಕ ದೇವತೆಯೇ ಅಲ್ಲವೇ ಎನ್ನುವ ಚರ್ಚೆ ಬಹು ಪುರಾತನವಾದುದು.

ಋಗ್ವೇದದ ಎರಡನೆಯ ಮಂಡಲದ ಪ್ರಸಿದ್ಧ ‘ಗಣಾನಾಂ ತ್ವಾ ಗಣಪತಿಂ ಹವಾಮಹೇ’ ಮಂತ್ರ ವನ್ನು ಇಂದು ಗಣಪತಿಗೆ ಅರ್ಪಿಸುತ್ತೇವೆ. ಆದರೆ ಸಾಯಣಾಚಾರ್ಯರ ಭಾಷ್ಯದಲ್ಲಿ ಈ ಮಂತ್ರದ ‘ಗಣಪತಿ’ ಎಂದರೆ ಇಂದಿನ ಗಜಾನನ ಗಣೇಶನೇ ಎಂಬುದು ಸ್ಪಷ್ಟವಿಲ್ಲ; ‘ಬ್ರಹ್ಮಣಸ್ಪತಿ’ ಎಂಬ ದೇವತೆಯ ಕುರಿತು ಆ ಮಂತ್ರವಿದೆ. ತೈತ್ತಿರೀಯ ಮತ್ತು ವಾಜಸನೇಯೀ ಸಂಹಿತೆಗಳಲ್ಲಿಯೂ ‘ಗಣೇಭ್ಯೋ ಗಣಪತಿಭ್ಯಶ್ಚ ವೋ ನಮಃ’ ಎಂಬ ಉಖ ಸಿಗುತ್ತದೆ. ಅದೇನೇ ಇದ್ದರೂ ಉಪಾಸನಾ ವಿಧಾನದಲ್ಲಿ ಗಣಪತಿಗೆ ಈ ಮಂತ್ರವನ್ನು ಆರೋಪಿಸಿರುವುದರಿಂದ ಅದು ಶಾಸ್ತ್ರ ಸಮ್ಮತಿಸಿದ ವಿಷಯ ಎಂದು ತಿಳಿದಾಗ ಇಂದಿನ ಗಜಮುಖ ಗಣೇಶನೇ ಋಗ್ವೇದದ ಗಣಪತಿ ಎನ್ನುವುದಾಗಿ ಅರ್ಥಬರುತ್ತದೆ.

ವೇದದ ಮಂತ್ರಗಳನ್ನು ಶಾಸ್ತ್ರ ವಿಧಿಬದ್ಧಗೊಳಿಸುತ್ತದೆ. ಹಾಗಾಗಿ ವೇದಗಳಲ್ಲಿ ಗಣಪತಿಯ ಹೆಸರೇ ಇಲ್ಲ ಎನ್ನುವ ವಾದ ಬಿದ್ದುಹೋಗುತ್ತದೆ. ಭಾರತೀಯ ದೇವತಾ ಪರಂಪರೆಯಲ್ಲಿ ಯಾವ ದೇವತೆ ಯ ರೂಪವೂ ಕಾಲಾಂತರದಲ್ಲಿ ರೂಪುಗೊಂಡಿರುವುದೇ ಆಗಿದೆ. ಪ್ರಕೃತಿಯ ಶಕ್ತಿಗಳು, ಜನಪದದ ನಂಬಿಕೆಗಳು, ವೈದಿಕ ದೇವತೆಗಳ ವಿಶೇಷಣಗಳು, ಪುರಾಣಗಳ ಕಥೆಗಳು, ಭಕ್ತಿಪಂಥಗಳ ಅನುಭವ ಗಳು, ಇವೆಲ್ಲ ಸೇರಿ ದೇವತೆಯ ರೂಪವನ್ನು ಕಾಲಕ್ರಮೇಣ ಕಟ್ಟುತ್ತವೆ.

ಈಶ್ವರ, ವಿಷ್ಣು, ದೇವಿ ಇವೆಲ್ಲವೂ ಹೀಗೆ ರೂಢಿಗೆ ಬಂದಂತಹವುಗಳು. ಗಣಪತಿಯ ಮಹಿಮೆಯನ್ನು ವಿಶೇಷವಾಗಿ ಪ್ರತಿಪಾದಿಸುವ ಗಣೇಶ ಪುರಾಣದಲ್ಲಿ ಗಣಪತಿಯೇ ಪರತತ್ತ್ವ ಎಂಬ ಗಾಣಪತ್ಯ ದೃಷ್ಟಿ ಕಾಣುತ್ತದೆ. ಅದರ ಉಪಾಸನಾ ಖಂಡ ಮತ್ತು ಕ್ರೀಡಾ ಖಂಡಗಳಲ್ಲಿ ಗಣಪತಿಯ ಉಪಾಸನೆ, ಅವತಾರಗಳು ಮತ್ತು ಲೀಲೆಗಳು ವಿಸ್ತಾರವಾಗಿ ನಿರೂಪಿಸಲ್ಪಟ್ಟಿವೆ. ಸತ್ಯಯುಗದಲ್ಲಿ ಮಹೋತ್ಕಟ ವಿನಾಯಕ, ತ್ರೇತಾಯುಗದಲ್ಲಿ ಮಯೂರೇಶ್ವರ, ದ್ವಾಪರಯುಗದಲ್ಲಿ ಗಜಾನನ ಮತ್ತು ಕಲಿಯುಗ ದಲ್ಲಿ ಧೂಮ್ರಕೇತು ಎಂಬ ಅವತಾರಗಳ ವರ್ಣನೆ ಗಣಪತಿಯ ರೂಪವು ಯುಗಧರ್ಮಕ್ಕೆ ಅನುಗುಣವಾಗಿ ವ್ಯಕ್ತವಾಗುತ್ತದೆ ಎಂಬ ಕಲ್ಪನೆಯನ್ನು ಮುಂದಿಡುತ್ತದೆ. ಗಣೇಶ ಪುರಾಣದ ಮಹೋತ್ಕಟ ವಿನಾಯಕನ ಕಥೆಯಲ್ಲಿ ಬಾಲಕನೇ ಆಗಿದ್ದಾಗ ವಿಘಾತ, ಪಿಂಗಾಕ್ಷ, ವಿಶಾಲ, ಪಿಂಗಲ, ಚಪಲ ಮೊದಲಾದ ರಾಕ್ಷಸರನ್ನು ಸಂಹರಿಸುತ್ತಾನೆ.

ದೇವತೆಗಳು ಅವನಿಗೆ ಆಯುಧ ಮತ್ತು ವರಗಳನ್ನು ನೀಡುತ್ತಾರೆ. ಬ್ರಹ್ಮ ತನ್ನ ಕಮಲವನ್ನು ನೀಡಿ ಅವನನ್ನು ಬ್ರಹ್ಮಣಸ್ಪತಿ ಎಂದು ಕರೆಯುತ್ತಾನೆ. ಇಲ್ಲಿ ವಿನಾಯಕನು ಕೇವಲ ವಿಘ್ನಕಾರಕ ಶಕ್ತಿಯಲ್ಲ; ವಿಘ್ನವನ್ನು ನಿಗ್ರಹಿಸುವ ವಿಶ್ವಶಕ್ತಿಯಾಗಿ ಬೆಳೆಯುತ್ತಾನೆ. ವಿಘ್ನವನ್ನು ಉಂಟು ಮಾಡುವವನು ಮುಂದೆ ವಿಘ್ನೇಶ್ವರನಾದ. ಅಡ್ಡಿಯನ್ನು ಕೊಡುವವನು ಮುಂದೆ ಅಡ್ಡಿಯನ್ನು ದಾಟಿಸುವ ಬುದ್ಧಿಯನ್ನು ಕೊಡುವವನಾದ. ಹೊರಗಿನ ಅಪಾಯವನ್ನು ಸೂಚಿಸುವ ವಿನಾಯಕ ಕ್ರಮೇಣ ಒಳಗಿನ ವಿವೇಕದ ಗಣಪತಿಯಾದ. ಪುರಾಣಗಳು ಈ ಪರಿವರ್ತನೆಗೆ ಕಥಾರೂಪ ನೀಡಿದವು.

ಗಣೇಶನಷ್ಟು ಜನಸಾಮಾನ್ಯರಿಗೆ ಹತ್ತಿರವಾದ ದೇವರು ಬಹುಶಃ ಮತ್ತೊಬ್ಬನಿಲ್ಲ. ದೇವಾಲಯದ ಗರ್ಭಗುಡಿಯಲ್ಲಿ ಮಾತ್ರವಲ್ಲ, ಮನೆಯ ಬಾಗಿಲಲ್ಲಿ, ಶಾಲೆಯ ಫಲಕದಲ್ಲಿ, ವ್ಯಾಪಾರದ ಲೆಕ್ಕಪುಸ್ತಕದಲ್ಲಿ, ಕಲಾವಿದನ ಕುಂಚದಲ್ಲಿ, ಮಗುವಿನ ಮೊದಲ ಅಕ್ಷರದಲ್ಲಿ, ಎಡೆ ಗಣೇಶನಿದ್ದಾನೆ. ಕಲ್ಲಿನ ಮೇಲೆ ಒಂದು ಗೆರೆ ಎಳೆದರೂ ಗಣೇಶನ ರೂಪ ಮೂಡುತ್ತದೆ; ಮಣ್ಣನ್ನು ಹದಗೊಳಿಸಿ ಕೈಯಲ್ಲಿ ಹಿಡಿದರೂ ಗಣೇಶನಾಗುತ್ತಾನೆ. ಅವನಿಗೆ ಅರಮನೆಯ ಅಗತ್ಯವಿಲ್ಲ; ಒಂದು ಚಿಕ್ಕ ಪೀಠ ಸಾಕು.

ಅವನಿಗೆ ಭವ್ಯವಾದ ನೈವೇದ್ಯದ ಅಗತ್ಯವಿಲ್ಲ; ಒಂದು ಎಸಳು ಗರಿಕೆಯೂ ಸಾಕು. ಬಹುಶಃ ಇದೇ ಅವನ ವಿಶ್ವವ್ಯಾಪಕತೆಗೆ ಕಾರಣ. ನಿರಾಕಾರವಾದುದನ್ನು ಅನುಭವಿಸುವುದು ಸುಲಭವಲ್ಲ. ಅಮೂರ್ತವು ಮೂರ್ತವಾಗುತ್ತದೆ. ಕಲ್ಲು, ಲೋಹ, ಮರ, ಮಣ್ಣು, ಯಾವುದಾದರೂ ಒಂದು ವಸ್ತುವಿನಲ್ಲಿ ಮನುಷ್ಯ ತನ್ನ ಅಂತರಂಗದಲ್ಲಿರುವ ದೇವತೆಯನ್ನು ಪ್ರತಿಷ್ಠಾಪಿಸುತ್ತಾನೆ. ಪೂಜೆಯ ಕೊನೆಯಲ್ಲಿ ಹೊರಗಿನ ಮೂರ್ತಿಯ ಕಡೆ ನೋಡುತ್ತಿದ್ದ ಕಣ್ಣುಗಳು ಮುಚ್ಚಿಕೊಳ್ಳುತ್ತವೆ. ಆಗ ಹೊರಗಿದ್ದ ದೇವರು ಒಳಗೆ ಪ್ರವೇಶಿಸುತ್ತಾನೆ. ಇದೇ ಗಣೇಶನ ಪರತತ್ತ್ವ.