ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Gururaj Gantihole Column: ಬೆಳ್ಳಿಹಬ್ಬದ ಸಾರ್ಥಕತೆ ಕಂಡ ಸರಕಾರಿ ಶಿಕ್ಷಣ ಯೋಜನೆ !

ಭಾರತದಲ್ಲಿ ಯೋಜನೆಗಳು ಘೋಷಣೆಯಾಗುವುದು ಸರಕಾರಿ ದಾಖಲೆಗಳಲ್ಲಿ ಇರುವುದಕ್ಕೆ ಮಾತ್ರ ಎಂದು ಜನಸಾಮಾನ್ಯರೂ ಆಡಿಕೊಳ್ಳುವ ಕಾಲದಲ್ಲಿ, ಸದ್ದಿಲ್ಲದೆ ಸಮಾಜದ, ಜನಸಮುದಾಯದ ಜೊತೆಗೆ ಸರಕಾರಿ ಆಡಳಿತ ವಲಯದಲ್ಲೂ ಒಟ್ಟೊಟ್ಟಿಗೆ ಅತ್ಯದ್ಭುತ ಯಶಸ್ಸು ಕಂಡ ಒಂದು ವಿಶಿಷ್ಟ ಶಿಕ್ಷಣ ಯೋಜನೆಯಾಗಿದೆ ಸರ್ವಶಿಕ್ಷಾ ಅಭಿಯಾನ!

ಬೆಳ್ಳಿಹಬ್ಬದ ಸಾರ್ಥಕತೆ ಕಂಡ ಸರಕಾರಿ ಶಿಕ್ಷಣ ಯೋಜನೆ !

ಗಂಟಾಘೋಷ

ಸರ್ವ ಶಿಕ್ಷಾ ಅಭಿಯಾನ (ಎಸ್‌ಎಸ್‌ಎ) ಭಾರತ ಸರಕಾರವು ಪ್ರಾರಂಭಿಸಿದ ಪ್ರಮುಖ ಕಾರ್ಯಕ್ರಮ ವಾಗಿದ್ದು, ಭಾರತ ಸಂವಿಧಾನದ ಆಶಯದಂತೆ ಸಮಯಕ್ಕೆ ಅನುಗುಣವಾಗಿ ಪ್ರಾಥಮಿಕ ಶಿಕ್ಷಣದ ಸಾರ್ವತ್ರಿಕರಣವನ್ನು (ಯುಇಇ) ಸಾಧಿಸಲು ಇದನ್ನು ಪ್ರಾರಂಭಿಸಲಾಯಿತು. ಭಾರತದ ಸಂವಿಧಾನದ 86ನೇ ತಿದ್ದುಪಡಿಯು ಶಿಕ್ಷಣದ ಹಕ್ಕನ್ನು ಮೂಲಭೂತ ಹಕ್ಕು ಎಂದು ಘೋಷಿಸಿದೆ. ಈ ಶಿಕ್ಷಣದ ಹಕ್ಕು 6-14 ವರ್ಷದೊಳಗಿನ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಒದಗಿಸುತ್ತದೆ. ಎಸ್‌ಎಸ್‌ಎ ಕಾರ್ಯಕ್ರಮವು 2000-2001ರಿಂದ ಕಾರ್ಯ ನಿರ್ವಹಿಸುತ್ತಿದ್ದು, ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಸರ್ವ ಶಿಕ್ಷಾ ಅಭಿಯಾನ ಕಾರ್ಯಕ್ರಮದ ಜವಾಬ್ದಾರಿ ಮತ್ತು ನಿರ್ವಹಣೆಯನ್ನು ಹೊತ್ತಿದೆ. ಸುಮಾರು 15 ರಿಂದ 20 ಲಕ್ಷಕ್ಕೂ ಅಧಿಕ ಜನವಸತಿ ಪ್ರದೇಶ ಗಳಲ್ಲಿ 2 ಕೋಟಿಗೂ ಅಧಿಕ ಮಕ್ಕಳ ಅಗತ್ಯಗಳನ್ನು ಪೂರೈಸಲು ಮತ್ತು ಇಡೀ ದೇಶವನ್ನು ಈ ಯೋಜನೆಯಡಿಯಲ್ಲಿ ತರಲು, ರಾಜ್ಯ ಸರಕಾರಗಳ ಸಹಭಾಗಿತ್ವದಲ್ಲಿ ಸರ್ವ ಶಿಕ್ಷಾ ಅಭಿಯಾನ ಯೋಜನೆ ಯನ್ನು ಪ್ರಾರಂಭಿಸಲಾಯಿತು.

2018ರಲ್ಲಿ, ಸರ್ವ ಶಿಕ್ಷಾ ಅಭಿಯಾನ ಮತ್ತು ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಾ ಅಭಿಯಾನವನ್ನು ಒಟ್ಟುಗೂಡಿಸಿ ಸಮಗ್ರ ಶಿಕ್ಷಾ ಅಭಿಯಾನ ಯೋಜನೆಯನ್ನು ರೂಪಿಸಲಾಯಿತು. ಹಲವು ವಿಶೇಷ ಮತ್ತು ಪ್ರಮುಖ ಉದ್ದೇಶಗಳನ್ನು ಇಟ್ಟುಕೊಂಡು ಈ ಯೋಜನೆಗೆ ಅಡಿಪಾಯ ಹಾಕಿದ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಕೇವಲ ಕಾಟಾಚಾರಕ್ಕೆ ಯೋಜನೆ ಘೋಷಿಸಿ ಸುಮ್ಮನಾಗಲಿಲ್ಲ.

ಇದನ್ನು ಸಮಗ್ರ ರಾಷ್ಟ್ರೀಯ ಯೋಜನೆಯಾಗಿ ದೇಶದ ಎಲ್ಲ ರಾಜ್ಯಗಳಲ್ಲೂ ಮತ್ತು ಎಲ್ಲ ಕೇಂದ್ರಾ ಡಳಿತ ಪ್ರದೇಶಗಳಲ್ಲೂ ಕಡ್ಡಾಯವಾಗಿ ಜಾರಿಯಾಗುವಂತೆ ನೋಡಿಕೊಂಡರು. ಈ ಮೂಲಕ ಸರ್ವಶಿಕ್ಷಾ ಅಭಿಯಾನದ ಆದ್ಯ ಪ್ರವರ್ತಕರಾಗಿ, ಒಂದಿಡೀ ತಲೆಮಾರನ್ನು ಶಿಕ್ಷಣದಿಂದ ವಂಚಿತ ರಾಗದಂತೆ ನೋಡಿಕೊಳ್ಳುವ ಮೂಲಕ ಇಂದಿಗೂ ನಮ್ಮ ನಡುವೆ ಧೀಮಂತ ನಾಯಕರಾಗಿ ಉಳಿದಿದ್ದಾರೆ.

ಸರ್ವಶಿಕ್ಷಾ ಅಭಿಯಾನವು ಭಾರತದ ಪ್ರಾಥಮಿಕ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ದಾರಿ ಮಾಡಿಕೊಟ್ಟ ಮಹತ್ವದ ಯೋಜನೆಯಾಗಿದೆ. ಇದು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು ಮಾತ್ರವಲ್ಲ, ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಸಬಲೀಕರಣಕ್ಕೂ ಸಹಕಾರಿ ಯಾಗಿದೆ. ಸಾರ್ವತ್ರಿಕ ಪ್ರಾಥಮಿಕ ಶಿಕ್ಷಣವನ್ನು ಒಂದು ನಿರ್ದಿಷ್ಟ ಸಮಯದೊಳಗೆ ಅನುಷ್ಠಾನ ಗೊಳಿಸಲು ಪ್ರಾರಂಭಿಸಲಾಯಿತು. ದೇಶಾದ್ಯಂತ ಗುಣಮಟ್ಟದ ಮೂಲಭೂತ ಶಿಕ್ಷಣವನ್ನು ಒದಗಿಸಲು ಸರ್ವ ಶಿಕ್ಷಾ ಅಭಿಯಾನ ಯೋಜನೆಯ ಮೂಲಕ ಆದ್ಯತೆ ನೀಡಲಾಯಿತು.

ಒಂದು ದೂರದೃಷ್ಟಿಯನ್ನು ಒಳಗೊಂಡು ಆರಂಭವಾದ ಈ ಯೋಜನೆಯು ಇಂದಿಗೆ 25 ವರ್ಷ ಗಳನ್ನು ಪೂರೈಸುತ್ತಿದೆ. ಸರಕಾರದ ನೂರಾರು ಯೋಜನೆಗಳಲ್ಲಿ ಇಂದಿಗೂ, ಈ ಯೋಜನೆಗೆ ಇರುವ ಒಂದು ಗೌರವ, ಜಾರಿಗೆ ತರುವಲ್ಲಿನ ಮುತುವರ್ಜಿಯು ಸರ್ವಶಿಕ್ಷಾ ಅಭಿಯಾನವನ್ನು ಪ್ರತ್ಯೇಕ ಸ್ಥಾನದಲ್ಲಿರುವಂತೆ ಮಾಡಿದೆ ಎನ್ನಬಹುದು.

ಇದರಲ್ಲಿ 6-14 ವರ್ಷದ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣವನ್ನು ಖಚಿತಪಡಿಸುವುದು. ವಿದ್ಯಾಲಯಗಳಿಗೆ ಉತ್ತಮ ಮೂಲಸೌಕರ್ಯಗಳಾದ ಕ್ಲಾಸ್ ರೂಮ್, ಶೌಚಾಲಯ, ಕುಡಿಯುವ ನೀರಿನ ಸೌಕರ್ಯ ಇತ್ಯಾದಿ ವ್ಯವಸ್ಥೆಗಳನ್ನು ಒದಗಿಸುವುದು, ಮಕ್ಕಳ ವಿದ್ಯಾಭ್ಯಾಸದ ಗುಣಮಟ್ಟ ಹೆಚ್ಚಿಸುವುದಲ್ಲದೆ ಮಕ್ಕಳು ಮರಳಿ ಶಾಲೆಗೆ ಪ್ರವೇಶ ಹೊಂದಲು ಸಹಕಾರಿಯಾಗುವಂತೆ ಮತ್ತು ಶಾಲೆಯಿಂದ ಹೊರಗೆ ಉಳಿಯದಂತೆ ನೋಡಿಕೊಳ್ಳುವುದು ಸಹ ಸಾಧ್ಯವಾಯಿತು.

ಲಿಂಗ, ಜಾತಿ, ವರ್ಣಾಧಾರಿತ ಭೇದವಿಲ್ಲದೆ ಹಾಗೂ ವಿಶೇಷ ಅಗತ್ಯವಿರುವ ದಿವ್ಯಾಂಗ ಮಕ್ಕಳಿಗೆ ಪ್ರತ್ಯೇಕ ಶಿಕ್ಷಣ ಸೌಲಭ್ಯಗಳನ್ನು ನೀಡುವಂತೆ ಈ ಯೋಜನೆ ಒಳಗೊಂಡಿದೆ. ಅವುಗಳಲ್ಲಿ, ಗ್ರಾಮ ಪಂಚಾಯತ್, ಬ್ಲಾಕ್-ಜಿಲ್ಲಾ ಮಟ್ಟದಲ್ಲಿ ಯೋಜನೆ ಜಾರಿಗೆ ಸ್ಥಳೀಯ ಸಂಸ್ಥೆಗಳ ಪಾಲ್ಗೊಳ್ಳುವಿಕೆ, ಶಿಕ್ಷಕರ ನೇಮಕಾತಿ ಮತ್ತು ತರಬೇತಿ, ಮಕ್ಕಳ ಶೈಕ್ಷಣಿಕ ಕ್ಷಮತೆಯ ಪರೀಕ್ಷೆ, ಬಾಲಕರಿಗೆ ಹಾಗೂ ಬಾಲಕಿಯರಿಗೆ ಸಮಾನ ಅವಕಾಶ, ನಿರಂತರ ಮತ್ತು ಸಮಗ್ರ ಮೌಲ್ಯಮಾಪನ (ಸಿಸಿಇ), ಶಿಕ್ಷಣದಲ್ಲಿ ಮಾಹಿತಿಯ ತಂತ್ರeನ (ಐಸಿಟಿ) ಬಳಕೆ ಸೇರಿದಂತೆ ಹತ್ತಾರು ಪ್ರಮುಖ ಉದ್ದೇಶಗಳನ್ನು ವ್ಯವಸ್ಥಿತ ವಾಗಿ ಅಳವಡಿಸಿಕೊಂಡು ಜಾರಿಗೆ ತರಲಾಯಿತು.

ಭಾರತದಂತಹ ವಿಶಾಲ ಮತ್ತು ವಿಭಿನ್ನ ಭೌಗೋಳಿಕ ಪರಿಸ್ಥಿತಿ ಹೊಂದಿರುವ ದೇಶದಲ್ಲಿ ಒಂದು ಯೋಜನೆಯು ಎಲ್ಲ ಗ್ರಾಮೀಣ ಭಾಗಗಳನ್ನು ತಲುಪುವಂತೆ ನೋಡಿಕೊಳ್ಳುವುದು ಸಾಮಾನ್ಯದ ಮಾತಲ್ಲ. ಆದರೆ, ಈ ಯೋಜನೆ ಎಲ್ಲ ಅಡೆತಡೆಗಳನ್ನು ದಾಟಿ, ಅಂದುಕೊಂಡಂತೆ ತನ್ನ ಗೆಲುವು ಸಾಧಿಸುವಲ್ಲಿ ಇಂದಿಗೂ ನಿರಂತರ ಜಾರಿಯಲ್ಲಿದೆ ಎನ್ನಬಹುದು.

ಇದರ ಭಾಗವಾಗಿ, ವಿದ್ಯಾರ್ಥಿಗಳ ಶಾಲೆಗೆ ಸೇರುವ ಪ್ರಮಾಣದಲ್ಲಿ ಗಣನೀಯ ಏರಿಕೆಯಾಯಿತು, ಶಾಲೆಯಿಂದ ಮಕ್ಕಳು ಹೊರಗುಳಿಯುವ ಪ್ರಮಾಣದಲ್ಲಿ ಇಳಿಕೆಯಾಯಿತು. ಮೂಲಸೌಕರ್ಯ ಕಲ್ಪಿಸಿದ್ದರಿಂದ, ಯುವತಿಯರ ಶಾಲಾ ದಾಖಲೆ ಪ್ರಮಾಣದಲ್ಲಿ ಹೆಚ್ಚಳವಾಯಿತು. ಮತ್ತು ಸೌಲಭ್ಯ‌ ವಿಲ್ಲದ ಗ್ರಾಮಗಳಲ್ಲಿ ಹೊಸ ಶಾಲೆಗಳ ಆರಂಭಕ್ಕಾಗಿ ಶೀಘ್ರ ಕ್ರಮಕೈಗೊಳ್ಳಲಾಯಿತು.

ಜನರ ಸಹಭಾಗಿತ್ವ ಹೊಂದಿದ ಅಪರೂಪದ ಯೋಜನೆಯಾಗಿ ಹೊಮ್ಮಿದ್ದರಿಂದ, 2018ರಿಂದ ಸರ್ವ ಶಿಕ್ಷಾ ಅಭಿಯಾನ ಮತ್ತು ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಾ ಅಭಿಯಾನವನ್ನು ಮತ್ತು ಶಿಕ್ಷಕರ ಶಿಕ್ಷಣ ಯೋಜನೆಗಳನ್ನು ಒಂದೇ ಯೋಜನೆಯ ಅಡಿಯಲ್ಲಿ ಸಮಗ್ರ ಶಿಕ್ಷಣ ಅಭಿಯಾನ ಹೆಸರಿನಲ್ಲಿ ವಿಲೀನಗೊಳಿಸಿ ಜಾರಿಗೊಳಿಸಲಾಗಿದೆ. ಅನುಚ್ಚೇದ 21ಎ (86ನೇ ತಿದ್ದುಪಡಿ)ನಲ್ಲಿರುವಂತೆ 6 ರಿಂದ 14 ವರ್ಷದ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣ ಮತ್ತು ಶಿಕ್ಷಣ ಹಕ್ಕು ಕಾಯಿದೆ (ಆರ್‌ಟಿಇ ಕಾಯಿದೆ 2009) ರ ಅಡಿಯಲ್ಲಿ 2018ರಿಂದ ಸರ್ವ ಶಿಕ್ಷಾ ಅಭಿಯಾನ ಯೋಜನೆ ಕಾನೂನುಬದ್ಧತೆ ಹೊಂದಿವೆ.

ಉತ್ತಮ ಗುಣಮಟ್ಟದ ಶಿಕ್ಷಣಕ್ಕಾಗಿ, ಆಧುನಿಕ ಪಠ್ಯಕ್ರಮ ಅಳವಡಿಸಿಕೊಳ್ಳುವುದರ ಜೊತೆಗೆ, ತರಬೇತಿ ಪಡೆದ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರನ್ನು ನೇಮಿಸುವುದು, ಲಿಂಗ ತಾರತಮ್ಯ ಹೋಗಲಾಡಿಸಲು, ಬಾಲಕಿಯರಿಗಾಗಿ ಕಸ್ತೂರಿಬಾ ಗಾಂಧಿ ಬಾಲಿಕಾ ವಿದ್ಯಾಲಯಗಳಂತಹ ವಿಶೇಷ ಯೋಜನೆಗಳನ್ನು ಅನುಷ್ಠಾನಗೊಳಿಸುವುದು.

ಶಾಲಾ ಅಭಿವೃದ್ಧಿ ಸಮಿತಿಗಳು (ಎಸ್‌ಡಿಎಂಸಿ), ಗ್ರಾಮಸ್ಥರ, ಸಮುದಾಯಗಳ ಪಾಲ್ಗೊಳ್ಳುವಿಕೆ ಯನ್ನು ಬೆಂಬಲಿಸುವುದು ಸಹ ಇದರ ಪ್ರಮುಖ ಉದ್ದೇಶಗಳಂದಾಗಿದೆ. ಕೇವಲ ಯೋಜನೆಯನ್ನು ಅನುಷ್ಠಾನಗೊಳಿಸುವತ್ತ ಗಮನಹರಿಸದೆ, ಇದಕ್ಕೆ ಸಂಬಂಧಿಸಿದ ಕಟ್ಟಡ, ಶಾಲೆಗಳ ಅಭಿವೃದ್ಧಿ, ಹೊಸ ಶಾಲೆಗಳ ನಿರ್ಮಾಣ ಸೇರಿದಂತೆ ಶಿಕ್ಷಣಕ್ಕೆ ಪೂರಕವಾಗಿ ಸಹಾಯವಾಗುವಂತಹ ಶಾಲಾ ಮೂಲಸೌಕರ್ಯಗಳನ್ನು ಅಭಿವೃದ್ಧಿಗೊಳಿಸಲು ಇದರಲ್ಲಿ ಅವಕಾಶವಿದೆ.

ಕನಿಷ್ಠ ಒಬ್ಬ ಶಿಕ್ಷಕರನ್ನು ಪ್ರತಿಯೊಂದು ಪ್ರಾಥಮಿಕ ಶಾಲೆಗೆ ಕಡ್ಡಾಯವಾಗಿರುವಂತೆ ನೋಡಿ ಕೊಳ್ಳುವುದಲ್ಲದೆ, ನಿಯಮಿತವಾಗಿ ಶಿಕ್ಷಕರ ತರಬೇತಿ ಶಿಬಿರಗಳು, ಶಾಲೆ ಬಿಟ್ಟ ಮಕ್ಕಳು ಶಾಲೆಗೆ ಸೇರುವವರೆಗೂ ವಿಶೇಷ ತರಬೇತಿ ಕೇಂದ್ರಗಳು, ಮಕ್ಕಳಿಗೆ ಸೂಕ್ತ ಆಹಾರ ಒದಗಿಸಿ ಪ್ರವೇಶ ಹೆಚ್ಚಿಸುವ ಉದ್ದೇಶದ ಬಿಸಿಯೂಟ ಯೋಜನೆಯನ್ನು ಸಮರ್ಪಕವಾಗಿ ಜಾರಿಗೆ ತರುವುದು ಈ ಯೋಜನೆಯ ಒಂದು ವಿಶಿಷ್ಟತೆಯಾಗಿದೆ.

ಇಷ್ಟೆಲ್ಲ ಸಮಗ್ರ ವಿಚಾರಗಳನ್ನೊಳಗೊಂಡ ಈ ಒಂದು ರಾಷ್ಟ್ರೀಯ ಯೋಜನೆಗೆ ಸಿಕ್ಕ ಯಶಸ್ಸನ್ನು ಗಮನಿಸಿದಾಗ, ಮಕ್ಕಳ ಶಾಲಾ ಪ್ರವೇಶ ದರವು 95% ಕ್ಕಿಂತ ಹೆಚ್ಚಿದ್ದು, ಇದೊಂದು ಸಾಧನೆ ಎಂದೇ ಹೇಳಬಹುದು. ವಿವಿಧ ಕಾರಣಗಳ ನೆಪವೊಡ್ಡಿ, ಶಾಲಗಳಿಂದ ದೂರ ಉಳಿದಿದ್ದ ಮಕ್ಕಳ ಶೇಕಡಾ ವಾರು ಸಂಖ್ಯೆ 10ಕ್ಕಿಂತ ಕಡಿಮೆ ಮಟ್ಟಕ್ಕೆ ತಲುಪಿದೆ.

ರಾಜ್ಯದ ಬಹುತೇಕ ಶೇ.90ಕ್ಕಿಂತ ಹೆಚ್ಚು ಶಾಲೆಗಳಲ್ಲಿ ಶೌಚಾಲಯ, ಕುಡಿಯುವ ನೀರು ಸೇರಿದಂತೆ ಸೂಕ್ತ ತರಬೇತಿ ಹೊಂದಿರುವ ಲಕ್ಷಾಂತರ ಶಿಕ್ಷಕರನ್ನು ನೇಮಕ ಮಾಡಲಾಗಿದೆ. ಇಂತಹ ಒಂದು ವಿಶಿಷ್ಟ ಯೋಜನೆಯನ್ನು ದೇಶದ ಸಮುದಾಯ ಮತ್ತು ಮಕ್ಕಳು ಸ್ಪಂದಿಸಿದ ರೀತಿಗೆ, ಸರ್ಕಾರವು ಮತ್ತಷ್ಟು ಪ್ರೇರಿತಗೊಂಡು ಇಂದಿನ ಆಧುನಿಕ ತಂತ್ರಜ್ಞಾನದ ಸೌಲಭ್ಯಗಳನ್ನೂ ಒಳಗೊಂಡಂತೆ, 2018ರಿಂದ ಸರ್ವ ಶಿಕ್ಷಾ ಅಭಿಯಾನ ಮತ್ತು ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಾ ಅಭಿಯಾನ ಮತ್ತು ಶಿಕ್ಷಕರ ಶಿಕ್ಷಣ ಯೋಜನೆಗಳನ್ನು ಸಮಗ್ರ ಶಿಕ್ಷಾ ಎಂಬ ಹೊಸ ಯೋಜನೆಯಡಿ ವಿಲೀನ ಗೊಳಿಸ ಲಾಗಿದೆ.

ಸಮಗ್ರ ಶಿಕ್ಷಾ ಯೋಜನೆಯಲ್ಲಿ, ಶಿಶು ವಿಹಾರದಿಂದ ಹತ್ತನೇ ತರಗತಿ ತನಕ ಸಮಗ್ರ ಶಿಕ್ಷಣ, ಡಿಜಿಟಲ್ ಶಿಕ್ಷಣ, STEM , ಲೈಬ್ರರಿ, ಮಾಹಿತಿ ತಂತ್ರಜ್ಞಾನ ಬಳಕೆ ಜೊತೆಗೆ ಮಕ್ಕಳ ತಾತ್ವಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಹೆಚ್ಚಿನ ಒತ್ತನ್ನು ನೀಡಲು ಯೋಜಿಸಲಾಗಿದೆ. ಈ ಮೂಲಕ ಕರ್ನಾಟಕ ದಲ್ಲಿ, ರಾಜ್ಯದ ಎಲ್ಲ ತಾಲೂಕುಗಳಲ್ಲಿ ಕಾರ‍್ಯ ನಿರ್ವಹಣೆ, ಎಸ್‌ಡಿಎಂಸಿಗಳ ಮೂಲಕ ನಿರ್ವಹಣೆ, ಮೊಬೈಲ್ ಶಾಲೆಗಳು, ಹಳ್ಳಿ ಶಾಲೆಗಳ ಸಕ್ರಿಯಗೊಳಿಕೆ, ನಲಿ-ಕಲಿ ಪದ್ಧತಿಯಂತಹ ಶಿಕ್ಷಣ ಪದ್ಧತಿ ಗಳನ್ನು ಅಳವಡಿಸಿಕೊಳ್ಳಲಾಗಿದೆ.

ಕರ್ನಾಟಕದಲ್ಲಿ ಸರ್ವಶಿಕ್ಷಾ ಅಭಿಯಾನ ಮತ್ತು ಸಮಗ್ರ ಶಿಕ್ಷಣ ಯೋಜನೆಗಳನ್ನು ಜಿವಾರು ವಿಂಗಡಿಸಿ ಜಾರಿಗೊಳಿಸಲಾಗಿದ್ದು, ಶಾಲಾ ಮೂಲಸೌಕರ್ಯ, ಶಿಕ್ಷಕರ ನೇಮಕಾತಿ, ವಿದ್ಯಾರ್ಥಿಗಳ ದಾಖಲಾತಿ, ಬಜೆಟ್ ವಿನಿಯೋಗ ಮತ್ತು ವಿವಿಧ ಶೈಕ್ಷಣಿಕ ಸಾಧನೆಗಳನ್ನು ಒಳಗೊಂಡಿವೆ. ಸರ್ವ ಶಿಕ್ಷಾ ಅಭಿಯಾನ ಯೋಜನೆಯಡಿಯಲ್ಲಿ ಮತ್ತೊಂದು ಉಪಕ್ರಮವಾಗಿ, 2014ರಲ್ಲಿ ‘ಪಡೇ ಭಾರತ್ ಬಡೇ ಭಾರತ್’ ಕಾರ್ಯಕ್ರಮವನ್ನು ಪ್ರಾರಂಭಿಸಿತು.

ಪಡೇ ಭಾರತ್ ಬಡೇ ಭಾರತ್ ಕಾರ್ಯಕ್ರಮವು ಒಂದನೇ ಮತ್ತು ಎರಡನೆಯ ತರಗತಿಯಲ್ಲಿರುವ ಮಕ್ಕಳ ಓದುವ ಮತ್ತು ಬರೆಯುವ ಕೌಶಲ್ಯದ ಜೊತೆಗೆ, ಅವರ ಗಣಿತ ಕೌಶಲ್ಯಗಳನ್ನು ಸುಧಾರಿ ಸಲು ಈ ಕಾರ್ಯಕ್ರಮವನ್ನು ರೂಪಿಸಲಾಯಿತು. ಪ್ರಾಯೋಗಿಕ ಶಿಕ್ಷಣದ ಜೊತೆಗೆ ಸಾಹಿತ್ಯವನ್ನು ಅಧ್ಯಯನ ಮಾಡುವುದರಿಂದಾಗಿ, ಮಕ್ಕಳಲ್ಲಿ ಅತ್ಯುತ್ತಮ ಬರಹಗಾರರು ಮತ್ತು ಓದುಗರನ್ನು ಸೃಷ್ಟಿಸಲು ಸಹಾಯ ಮಾಡುವ ಮಹತ್ವವನ್ನು ಒತ್ತಿ ಹೇಳುತ್ತದೆ.

ಮಕ್ಕಳಿಗೆ ಸೂಕ್ಷ್ಮಗ್ರಹಿಕೆಯೊಂದಿಗೆ ಬರೆಯುವ ಮತ್ತು ಓದುವ ಆಸಕ್ತಿಯನ್ನು ಹುಟ್ಟುಹಾಕುವ ಮೂಲಕ ಮಕ್ಕಳ ಭಾಷಾ ಬೆಳವಣಿಗೆಯನ್ನು ಸುಧಾರಿಸಲು, ಮತ್ತು ಸಾಮಾಜಿಕ, ಭೌತಿಕ ಪ್ರಪಂಚಕ್ಕೆ ಸಂಬಂಧಿಸಿದ ವಿಚಾರದಲ್ಲಿ ತಮ್ಮನ್ನು ತಾವು ಸಮಗ್ರವಾಗಿ ಗುರುತಿಸಿಕೊಳ್ಳುವುದು ಮುಖ್ಯ. ಜೀವನದಲ್ಲಿ ಬರುವ ಅಡೆತಡೆಗಳನ್ನು ಎದುರಿಸಿ, ಪ್ರeವಂತ ನಾಗರಿಕನಾಗಿ ತನ್ನತನವನ್ನು ರೂಪಿಸಿಕೊಳ್ಳಲು ಆಸರೆಯಾಗಿ ನಿಲ್ಲುವ ಆಲದ ಮರದಂತಾಗಿರುತ್ತದೆ ಶಿಕ್ಷಣ. ಶಿಕ್ಷಣವೇ ಶಕ್ತಿ ಎಂಬ ಮಾತು ಸುಮ್ಮನೇ ಹೇಳಿದ್ದಲ್ಲ ಎಂಬುದಕ್ಕೆ ನಮ್ಮ ನಡುವೆ ಬೆಳೆದ ಮಹಾಪುರುಷರೇ ಸಾಕ್ಷಿ.