ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Gururaj Gantihole Column: ಗ್ಯಾರಂಟಿ: ಮನೆಯ ಮೇಲ್ಛಾವಣಿ ಮಾರಿ ಹಬ್ಬದ ಊಟ ಮಾಡಿದಂತೆ !

ಕರ್ನಾಟಕದ ವಾರ್ಷಿಕ ಸಾಲದ ಪ್ರಮಾಣವು ಇತಿಹಾಸದ ಮೊದಲ ಬಾರಿಗೆ ರೂ.1.32 ಲಕ್ಷ ಕೋಟಿ ದಾಟುವ ಅಂದಾಜಿದೆ. ರಾಜ್ಯದ ಒಟ್ಟು ಹೊಣೆಗಾರಿಕೆಯು ಬರೋಬ್ಬರಿ ಋೂ.8.24 ಲಕ್ಷ ಕೋಟಿ ತಲುಪು ತ್ತಿರುವುದು ಕೇವಲ ಅಂಕಿ-ಅಂಶವಲ್ಲ; ಇದು ಪ್ರತಿ ಕನ್ನಡಿಗನ ತಲೆಯ ಮೇಲೆ ಹೊರಿಸುತ್ತಿರುವ ಬೆಟ್ಟದಷ್ಟು ಸಾಲದ ಹೊರೆ.

ಗ್ಯಾರಂಟಿ: ಮನೆಯ ಮೇಲ್ಛಾವಣಿ ಮಾರಿ ಹಬ್ಬದ ಊಟ ಮಾಡಿದಂತೆ !

-

ಗಂಟಾಘೋಷ

ಗ್ಯಾರಂಟಿ ಯೋಜನೆಗಳು ಅಥವಾ ಕಲ್ಯಾಣ ಕಾರ್ಯಕ್ರಮಗಳು ಮೂಲಭೂತವಾಗಿ ಕೆಟ್ಟದ್ದಲ್ಲ. ವಾಸ್ತವವಾಗಿ, ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಮುಖ್ಯವಾಹಿನಿಗೆ ತರಲು ಇವು ಪೂರಕ ವಾಗಿರುತ್ತವೆ. ಆದರೆ, ಇಂತಹ ಯೋಜನೆಗಳ ಯಶಸ್ಸು ಅವುಗಳನ್ನು ಜಾರಿಗೆ ತರುವ ‘ದೂರದೃಷ್ಟಿ’ ಮತ್ತು ‘ವೈಜ್ಞಾನಿಕ ಯೋಜನೆ’ಯ ಮೇಲೆ ಅವಲಂಬಿತವಾಗಿರುತ್ತದೆ. ದೂರದೃಷ್ಟಿಯಿಲ್ಲದ ಆರ್ಥಿಕ ನೀತಿಗಳು ಮುಂದಿನ ಪೀಳಿಗೆಯ ಪಾಲಿಗೆ ಶಾಪ.

ಒಂದು ಕಾಲದಲ್ಲಿ ಇಡೀ ದೇಶದ ಆರ್ಥಿಕ ಎಂಜಿನ್ ಆಗಿ, ಜಾಗತಿಕ ಐಟಿ-ಬಿಟಿ ರಾಜಧಾನಿಯಾಗಿ ಹಾಗೂ ಮೂಲಸೌಕರ್ಯದ ಹಬ್ ಆಗಿ ಮುನ್ನುಗ್ಗುತ್ತಿದ್ದ ಕರ್ನಾಟಕವನ್ನು ಇಂದು ಕಾಂಗ್ರೆಸ್ ಸರಕಾರ ಸಂಪೂರ್ಣವಾಗಿ ಹಳ್ಳ ಹಿಡಿಸಿದೆ. ಸುಭದ್ರವಾಗಿದ್ದ ರಾಜ್ಯದ ಬೊಕ್ಕಸವನ್ನು ಹೇಗೆ ಬರಿದು ಮಾಡಿವೆ ಎಂಬುದನ್ನು ಇಂದು ದೇಶದ ಅತ್ಯುನ್ನತ ಸಾಂವಿಧಾನಿಕ ಸಂಸ್ಥೆಯಾದ ಕಂಟ್ರೋಲರ್ ಅಂಡ್ ಆಡಿಟರ್ ಜನರಲ್ (CAG) ತನ್ನ ವರದಿಯಲ್ಲಿ ಬೆತ್ತಲೆಗೊಳಿಸಿದೆ.

ಕೇವಲ ರಾಜಕೀಯ ಉಳಿವಿಗಾಗಿ ಅಭಿವೃದ್ಧಿ ವೆಚ್ಚಕ್ಕೆ ಕತ್ತರಿ ಹಾಕಿ, ಕಲ್ಯಾಣ ನಿಧಿಯನ್ನೇ ಲೂಟಿ ಮಾಡುತ್ತಿರುವ ಈ ಬೇಜವಾಬ್ದಾರಿ ಆಡಳಿತದಿಂದಾಗಿ, ದೇಶಕ್ಕೇ ಮಾದರಿಯಾಗಿದ್ದ ಕರ್ನಾಟಕ ಇಂದು ಆರ್ಥಿಕ ದಿವಾಳಿತನದ ಭೀಕರ ಪ್ರಪಾತಕ್ಕೆ ಬಂದು ನಿಂತಿದೆ ಎಂದು ಆರ್ಥಿಕ ತಜ್ಞರು ಮತ್ತು ಸ್ವತಂತ್ರ ಹಣಕಾಸು ವಿಶ್ಲೇಷಣಾ ಸಂಸ್ಥೆಗಳು ತೀವ್ರ ಕಳವಳ ವ್ಯಕ್ತಪಡಿಸಿವೆ.

ಈ ಅಸಮರ್ಪಕ ಹಣಕಾಸು ನಿರ್ವಹಣೆಯಿಂದಾಗಿ ರಾಜ್ಯದ ಬಂಡವಾಳ ಮತ್ತು ಮೂಲಸೌಕರ್ಯ ವೆಚ್ಚದಲ್ಲಿ 2023-24ರಲ್ಲಿ ಬರೋಬ್ಬರಿ ರೂ.5,229 ಕೋಟಿಯಷ್ಟು ಭಾರಿ ಕಡಿತ ಉಂಟಾಗಿದೆ ಮತ್ತು ರಾಜ್ಯದ ವಿತ್ತೀಯ ಕೊರತೆ ತೀವ್ರವಾಗಿ ಹೆಚ್ಚಾಗಿದೆ. ಈ ಬಗ್ಗೆ ಕಠಿಣ ಎಚ್ಚರಿಕೆ ನೀಡಿರುವ ಸಿಎಜಿ, ಅಭಿವೃದ್ಧಿ ಕೆಲಸಗಳನ್ನು ಬಲಿ ಕೊಟ್ಟು, ಕೇವಲ ಅವೈಜ್ಞಾನಿಕ ಉಚಿತ ಕೊಡುಗೆಗಳಿಗಾಗಿ ನಿರಂತರ ವಾಗಿ ಸಾಲ ಮಾಡುತ್ತಿರುವುದು ರಾಜ್ಯದ ಆರ್ಥಿಕತೆಯ ಮೇಲೆ ಅತ್ಯಂತ ಕೆಟ್ಟ ಪರಿಣಾಮ ಬೀರಲಿದ್ದು, ಭವಿಷ್ಯದ ಪ್ರಗತಿಯನ್ನು ಸಂಪೂರ್ಣವಾಗಿ ಕುಂಠಿತಗೊಳಿಸಲಿದೆ ಎಂದು ಸ್ಪಷ್ಟವಾಗಿ ಹೇಳಿದೆ.

2022-23ರ ಬಿಜೆಪಿ ಆಡಳಿತದ ಅವಧಿಯಲ್ಲಿ ಕರ್ನಾಟಕವು ರಾಜಸ್ವ ಹೆಚ್ಚುವರಿ (Revenue Surplus ) ಬಜೆಟ್ ಮಂಡಿಸಿತ್ತು ಮತ್ತು ರಾಜ್ಯದ ಒಟ್ಟು ಆಂತರಿಕ ಉತ್ಪನ್ನಕ್ಕೆ (GSDP) ಸಾಲದ ಅನುಪಾತ ವನ್ನು ಶೇ.23.9ರಷ್ಟು ಕಟ್ಟುನಿಟ್ಟಾದ ಮಿತಿಯಲ್ಲಿತ್ತು. ಆದರೆ ಇಂದು? ಆ ಶಿಸ್ತು ಸಂಪೂರ್ಣವಾಗಿ ಗಾಳಿಯಲ್ಲಿ ತೂರಿ ಹೋಗಿದೆ.

ಇದನ್ನೂ ಓದಿ: Gururaj Gantihole Column: ಪಶ್ಚಿಮ ಬಂಗಾಳದಲ್ಲಿ ಪುಟಿದೆದ್ದ ಪ್ರಚಂಡಶಕ್ತಿ ಭಾರತೀಯ ಜನತಾ ಪಕ್ಷ !

ಕರ್ನಾಟಕದ ವಾರ್ಷಿಕ ಸಾಲದ ಪ್ರಮಾಣವು ಇತಿಹಾಸದ ಮೊದಲ ಬಾರಿಗೆ ರೂ.1.32 ಲಕ್ಷ ಕೋಟಿ ದಾಟುವ ಅಂದಾಜಿದೆ. ರಾಜ್ಯದ ಒಟ್ಟು ಹೊಣೆಗಾರಿಕೆಯು ಬರೋಬ್ಬರಿ ಋೂ.8.24 ಲಕ್ಷ ಕೋಟಿ ತಲುಪುತ್ತಿರುವುದು ಕೇವಲ ಅಂಕಿ-ಅಂಶವಲ್ಲ; ಇದು ಪ್ರತಿ ಕನ್ನಡಿಗನ ತಲೆಯ ಮೇಲೆ ಹೊರಿಸು ತ್ತಿರುವ ಬೆಟ್ಟದಷ್ಟು ಸಾಲದ ಹೊರೆ.

ಬಡ್ಡಿಯ ಬಲೆ: ಅಭಿವೃದ್ಧಿಯ ಹಣ ಲೇವಾದೇವಿದಾರರ ಪಾಲು

ಪ್ರಜಾಪ್ರಭುತ್ವದ ಆಡಳಿತದಲ್ಲಿ ಸಾಲ ಮಾಡುವುದು ಒಂದು ಸಾಮಾನ್ಯ ಪ್ರಕ್ರಿಯೆ. ಆದರೆ, ಆ ಸಾಲವು ‘ಬಂಡವಾಳ ಹೂಡಿಕೆ’ ಆಗಿದೆಯೇ ಅಥವಾ ‘ದುಂದುವೆಚ್ಚ’ ಆಗಿದೆಯೇ ಎಂಬುದು ರಾಜ್ಯದ ಭವಿಷ್ಯವನ್ನು ನಿರ್ಧರಿಸುತ್ತದೆ. ಇಂದಿನ ಕಾಂಗ್ರೆಸ್ ಸರಕಾರದ ಸಾಲದ ಸ್ವರೂಪವೇ ಭಿನ್ನವಾಗಿದೆ. ಇವರು ಮಾಡುತ್ತಿರುವ ಸಾಲವು ಯಾವುದೇ ಹೊಸ ಆಸ್ತಿಯನ್ನು ಸೃಷ್ಟಿಸುತ್ತಿಲ್ಲ. ಬದಲಿಗೆ, ಕೇವಲ ಚುನಾವಣೆಗಾಗಿ ನೀಡಿದ ‘ಅವೈಜ್ಞಾನಿಕ ಗ್ಯಾರಂಟಿ’ಗಳ ಹೊಟ್ಟೆ ತುಂಬಿಸಲು ಮತ್ತು ಅನುತ್ಪಾದಕ ವೆಚ್ಚಗಳಿಗಾಗಿ ಪ್ರತಿ ತಿಂಗಳು ಸಾವಿರಾರು ಕೋಟಿ ಸಾಲ ಮಾಡಲಾಗುತ್ತಿದೆ.

ಈ ಹಾದಿ ತಪ್ಪಿದ ಆರ್ಥಿಕ ನೀತಿಯ ಅತಿ ದೊಡ್ಡ ಅಪಾಯವಿರುವುದು ಏರುತ್ತಿರುವ ಬಡ್ಡಿ ಪಾವತಿ ಯಲ್ಲಿ. ಅಂಕಿ-ಅಂಶಗಳು ಸುಳ್ಳು ಹೇಳುವುದಿಲ್ಲ. 2024-25ರ ವೇಳೆಗೆ ಬಡ್ಡಿ ಪಾವತಿ ಬರೋಬ್ಬರಿ ಋೂ.36,122 ಕೋಟಿಗೆ ಜಿಗಿದಿದೆ. ಬರುವ ಆರ್ಥಿಕ ವರ್ಷದಲ್ಲಿ ಇದು ರೂ.45,600 ಕೋಟಿ ತಲುಪಲಿದೆ.

ಕೇವಲ ಎರಡು ವರ್ಷಗಳಲ್ಲಿ ಬಡ್ಡಿ ಪಾವತಿಯಲ್ಲಿ ಸುಮಾರು ರೂ.8000 ಕೋಟಿಗಳಷ್ಟು ಭಾರಿ ಏರಿಕೆ ಕಂಡುಬರುತ್ತಿರುವುದು ಆತಂಕಕಾರಿ ಸಂಗತಿ. ಇದರ ಅರ್ಥವೇನೆಂದರೆ, ಜನಸಾಮಾನ್ಯರಿಗೆ ಇದು ಕೇವಲ ಸಂಖ್ಯೆಯಾಗಿ ಕಾಣಬಹುದು, ಆದರೆ ಇದರ ಆರ್ಥಿಕ ಪರಿಣಾಮ ಘೋರವಾಗಿದೆ. ಈ ಬಡ್ಡಿಯು ಯಾವುದೇ ರಸ್ತೆ ನಿರ್ಮಾಣಕ್ಕೆ ಹೋಗುವುದಿಲ್ಲ, ಯಾವುದೇ ಶಾಲೆಯ ದುರಸ್ತಿಗೆ ಹೋಗು ವುದಿಲ್ಲ ಅಥವಾ ಯಾವುದೇ ರೈತನ ಪಂಪ್ಸೆಟ್‌ಗೆ ಉಚಿತ ವಿದ್ಯುತ್ ನೀಡಲು ಬಳಕೆ ಯಾಗುವುದಿಲ್ಲ. ಬದಲಿಗೆ, ಆ ಹಣವು ಈ ಸರಕಾರ ಮಾಡಿದ ಅವಿವೇಕದ ಸಾಲದ ಬಡ್ಡಿಯನ್ನು ತೀರಿಸಲು ಹೋಗು ತ್ತಿದೆ.

ಕಾಂಗ್ರೆಸ್ ಸರಕಾರವು ತನ್ನ ಸಾಲದ ಹೊರೆಯ ಕುರಿತಾದ ಟೀಕೆಗಳಿಂದ ತಪ್ಪಿಸಿಕೊಳ್ಳಲು ಯಾವಾ ಗಲೂ ಕೇಂದ್ರ ಸರಕಾರದ ಸಾಲದ ಅಂಕಿ-ಅಂಶಗಳನ್ನು ಗುರಾಣಿಯಾಗಿ ಬಳಸುತ್ತದೆ. ಆದರೆ, ಈ ಎರಡೂ ಸಾಲಗಳ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಲು ಒಂದು ಸಾಧಾರಣ ಕುಟುಂಬದ ಉದಾಹರಣೆಯನ್ನು ಗಮನಿಸಿದರೆ ಸತ್ಯಾಂಶ ನಿಮಗೇ ತಿಳಿಯುತ್ತದೆ.

ಒಂದು ಕುಟುಂಬದ ಉದಾಹರಣೆಯನ್ನು ತೆಗೆದುಕೊಳ್ಳೋಣ: ಒಬ್ಬ ಮನೆಯ ಯಜಮಾನ ಸಾಲ ಮಾಡುತ್ತಾನೆ ಎಂದು ಭಾವಿಸೋಣ. ಆ ಹಣದಿಂದ ಅವನು ಬೆಲೆಬಾಳುವ ಕಾರು ಖರೀದಿಸು ತ್ತಾನೆ, ಮನೆಯವರಿಗೆಲ್ಲಾ ದುಬಾರಿ ಬಟ್ಟೆಗಳನ್ನು ಕೊಡಿಸುತ್ತಾನೆ ಮತ್ತು ಪ್ರತಿ ದಿನ ಹೊರಗಡೆ ಹೋಟೆಲ್‌ನಲ್ಲಿ ಊಟ ಮಾಡುತ್ತಾನೆ. ಮನೆಯವರೆಲ್ಲಾ ಸದ್ಯಕ್ಕೆ ತುಂಬಾ ಖುಷಿಯಾಗಿರುತ್ತಾರೆ. ಹೊರಗಿನವರಿಗೆ ಈ ಕುಟುಂಬ ಬಹಳ ಶ್ರೀಮಂತವಾಗಿದೆ ಎಂದು ಅನಿಸುತ್ತದೆ. ಆದರೆ, ಈ ಖರ್ಚು ಗಳು ಯಾವುದೇ ಹೊಸ ಆದಾಯವನ್ನು ತರುವುದಿಲ್ಲ. ಸಾಲದ ಕಂತು ಮತ್ತು ಬಡ್ಡಿ ಪ್ರತಿ ತಿಂಗಳು ಹೆಚ್ಚುತ್ತಲೇ ಹೋಗುತ್ತದೆ.

ಕೆಲವೇ ದಿನಗಳಲ್ಲಿ ಸಾಲ ತೀರಿಸಲು ಮನೆಯಲ್ಲಿರುವ ಒಡವೆ ಅಥವಾ ಜಮೀನು ಮಾರ ಬೇಕಾಗು ತ್ತದೆ. ಇದು ಆರ್ಥಿಕ ಆತ್ಮಹತ್ಯೆಯ ಹಾದಿ. ಇದನ್ನೇ ನಾವು ಅವೈಜ್ಞಾನಿಕ ಉಚಿತ ಕೊಡುಗೆ ಗಳಿಗಾಗಿ ಮಾಡುವ ಸಾಲ ಎನ್ನುತ್ತೇವೆ. ಇನ್ನೊಬ್ಬ ಯಜಮಾನ ಸಾಲ ಮಾಡುತ್ತಾನೆ. ಆ ಹಣದಿಂದ ಅವನು ಒಂದು ಸಣ್ಣ ಕಾರ್ಖಾನೆ ಸ್ಥಾಪಿಸುತ್ತಾನೆ ಅಥವಾ ತನ್ನ ಜಮೀನಿನಲ್ಲಿ ಆಧುನಿಕ ನೀರಾವರಿ ಪಂಪ್ಸೆಟ್ ಹಾಕಿಸುತ್ತಾನೆ ಅಥವಾ ತನ್ನ ಮಗನ/ಮಗಳ ಉನ್ನತ ಶಿಕ್ಷಣಕ್ಕಾಗಿ ಹೂಡಿಕೆ ಮಾಡುತ್ತಾನೆ. ಈ ಸಾಲದಿಂದ ತಕ್ಷಣಕ್ಕೆ ಐಷಾರಾಮಿ ಜೀವನ ಸಿಗದಿರಬಹುದು.

ಆದರೆ, ಕಾರ್ಖಾನೆಯಿಂದ ಉತ್ಪಾದನೆ ಶುರುವಾದಾಗ ಅಥವಾ ಜಮೀನಿನಲ್ಲಿ ಬೆಳೆ ಬಂದಾಗ ಆ ಆದಾಯದಿಂದ ಸಾಲವನ್ನೂ ತೀರಿಸಬಹುದು ಮತ್ತು ಕುಟುಂಬದ ಆಸ್ತಿಯೂ ಹೆಚ್ಚಾಗುತ್ತದೆ ಜತೆಗೆ ಕುಟುಂಬದ ಭವಿಷ್ಯ ಸುಭದ್ರವಾಗುತ್ತದೆ. ಈ ಸಾಲವು ಭವಿಷ್ಯದಲ್ಲಿ ಕುಟುಂಬವನ್ನು ಮತ್ತಷ್ಟು ಶ್ರೀಮಂತಗೊಳಿಸುತ್ತದೆ. ಇದನ್ನು ಬಂಡವಾಳ ಹೂಡಿಕೆ ಎನ್ನುತ್ತೇವೆ. ಕೇಂದ್ರ ಸರಕಾರವು ಸಾಲ ಮಾಡುವುದು ರಾಷ್ಟ್ರೀಯ ಹೆದ್ದಾರಿಗಳು, ರೈಲ್ವೆ ಕಾರಿಡಾರ್‌ಗಳು ಮತ್ತು ಕೈಗಾರಿಕಾ ವಲಯಗಳ ನಿರ್ಮಾಣಕ್ಕಾಗಿ. ಇವು ದೇಶದ ಜಿಡಿಪಿಯನ್ನು ಹೆಚ್ಚಿಸುತ್ತವೆ.

ಮುಂದಿನ ಪೀಳಿಗೆಯ ಪಾಲಿಗೆ ಶಾಪ

ಈ ಸರಕಾರದ ದೂರದೃಷ್ಟಿಯಿಲ್ಲದ ಆರ್ಥಿಕ ನೀತಿಗಳು ಮುಂದಿನ ಪೀಳಿಗೆಯ ಪಾಲಿಗೆ ಒಂದು ದೊಡ್ಡ ಶಾಪವಾಗಿ ಪರಿಣಮಿಸಿವೆ. ಕೇವಲ ಐದು ವರ್ಷಗಳ ಅಧಿಕಾರಕ್ಕಾಗಿ ಮತ್ತು ತಾತ್ಕಾಲಿಕ ಮತಬ್ಯಾಂಕ್ ರಾಜಕಾರಣಕ್ಕಾಗಿ ಕಾಂಗ್ರೆಸ್ ಸರಕಾರವು ಕರ್ನಾಟಕದ ಮುಂದಿನ ಐವತ್ತು ವರ್ಷಗಳ ಭವಿಷ್ಯವನ್ನು ಅಡವಿಟ್ಟಿದೆ. ಇಂದು ಕರ್ನಾಟಕದಲ್ಲಿ ಪ್ರತಿಯೊಬ್ಬರ ಮೇಲೆ ಸರಿಸುಮಾರು ರೂ.1.20 ಲಕ್ಷಕ್ಕೂ ಅಧಿಕ ಸಾಲದ ಹೊರೆ ಇದೆ.

ಇಂದು ಹಂಚುತ್ತಿರುವ ಹಣವು ವಾಸ್ತವವಾಗಿ ನಮ್ಮ ಮಕ್ಕಳು ಹಾಗೂ ಯುವಜನತೆಯ ನಾಳಿನ ಹಕ್ಕುಗಳನ್ನು ಕಸಿದುಕೊಂಡು ಮಾಡುತ್ತಿರುವ ದುಂದುವೆಚ್ಚವಾಗಿದೆ. ಬಜೆಟ್‌ನ ಬಹುಪಾಲು ಹಣ ಬಡ್ಡಿ ಪಾವತಿಗೇ ವ್ಯಯವಾಗುತ್ತಿರುವುದರಿಂದ, ಮುಂದಿನ ದಶಕಗಳಲ್ಲಿ ಹೊಸ ಶಾಲೆಗಳ ನಿರ್ಮಾಣ, ಆಸ್ಪತ್ರೆಗಳ ಆಧುನೀಕರಣ ಅಥವಾ ಬೃಹತ್ ನೀರಾವರಿ ಯೋಜನೆಗಳಿಗೆ ಹಣವೇ ಇಲ್ಲದಂತಾಗುತ್ತದೆ. ನಮ್ಮ ಮಕ್ಕಳು ತಮ್ಮ ದುಡಿಮೆಯ ಬಹುಭಾಗವನ್ನು ನಾವು ಇಂದು ಮಾಡಿದ ಸಾಲದ ಬಡ್ಡಿ ಕಟ್ಟಲೇ ವ್ಯಯಿಸಬೇಕಾದ ಅನಿವಾರ್ಯತೆಯನ್ನು ಈ ಸರಕಾರ ಸೃಷ್ಟಿಸಿದೆ.

ಸಂಕಷ್ಟದ ಸಮಯದಲ್ಲಿ ಅಸಹಾಯಕತೆ

ಯಾವುದೇ ರಾಜ್ಯದ ಆರ್ಥಿಕ ಸದೃಢತೆಯ ನಿಜವಾದ ಪರೀಕ್ಷೆಯಾಗುವುದು ತುರ್ತು ಪರಿಸ್ಥಿತಿಗಳಲ್ಲಿ. ಆದರೆ, ಕಾಂಗ್ರೆಸ್ ಸರಕಾರದ ಬೇಜವಾಬ್ದಾರಿಯುತ ಸಾಲದ ನೀತಿಯಿಂದಾಗಿ ಕರ್ನಾಟಕ ಇಂದು ತನ್ನ ‘ಆರ್ಥಿಕ ವಿಮಾ’ ಶಕ್ತಿಯನ್ನೇ ಕಳೆದುಕೊಂಡಿದೆ. ರಾಜ್ಯಕ್ಕೆ ಅನಿವಾರ್ಯವಾಗಿ ಬರಗಾಲ ಅಥವಾ ಪ್ರವಾಹದಂತಹ ನೈಸರ್ಗಿಕ ವಿಕೋಪಗಳು ಎದುರಾದಾಗ, ಸಂತ್ರಸ್ತರಿಗೆ ತಕ್ಷಣದ ಪರಿಹಾರ ನೀಡಲು ಅಥವಾ ಪುನರ್‌ನಿರ್ಮಾಣ ಕಾರ್ಯ ಕೈಗೊಳ್ಳಲು ರಾಜ್ಯದ ಬೊಕ್ಕಸದಲ್ಲಿ ಹಣವೇ ಇರುವುದಿಲ್ಲ.

ಈಗಾಗಲೇ ಸಾಲದ ಮಿತಿಯನ್ನು ಮೀರಿ ಸಾಲ ಮಾಡಿರುವುದರಿಂದ, ಅಂತಹ ಸಂಕಷ್ಟದ ಸಮಯ ದಲ್ಲಿ ತುರ್ತಾಗಿ ಹೊಸದಾಗಿ ಸಾಲ ಮಾಡುವ ಶಕ್ತಿಯನ್ನು ರಾಜ್ಯ ಕಳೆದುಕೊಳ್ಳಲಿದೆ. ಬರ ಅಥವಾ ಪ್ರವಾಹ ಬಂದಾಗ ಜನರ ಕಣ್ಣೀರು ಒರೆಸಲು ಹಣವಿಲ್ಲದೆ ಸರಕಾರ ಕೈಚೆಲ್ಲಿ ಕೂರುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಕೇವಲ ಅವೈಜ್ಞಾನಿಕ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಸಾಲದ ಗರಿಷ್ಠ ಮಿತಿಯನ್ನು ಬಳಸಿಕೊಳ್ಳುತ್ತಿರುವುದರಿಂದ, ತುರ್ತು ಸಂದರ್ಭಗಳಲ್ಲಿ ಹಣಕಾಸು ಸಂಸ್ಥೆ ಗಳು ಅಥವಾ ಮಾರುಕಟ್ಟೆಯಿಂದ ಸಾಲ ಪಡೆಯಲು ಕಾನೂನಾತ್ಮಕವಾಗಿ ಮತ್ತು ಆರ್ಥಿಕವಾಗಿ ಸಾಧ್ಯವಾಗದಂತಾಗುವ ಸಮಯ ದೂರವಿಲ್ಲ. .

ಕೇರಳ ಆರ್ಥಿಕ ಸಂಕಷ್ಟದ ಎಚ್ಚರಿಕೆ

ಕರ್ನಾಟಕದ ಪ್ರಸ್ತುತ ಕಾಂಗ್ರೆಸ್ ಸರಕಾರವು ತುಳಿಯುತ್ತಿರುವ ಹಾದಿಯು ಎಷ್ಟು ಅಪಾಯಕಾರಿ ಎಂಬುದನ್ನು ತಿಳಿಯಲು ನಾವು ನೆರೆಯ ಕೇರಳ ರಾಜ್ಯದ ಇಂದಿನ ಸ್ಥಿತಿಯನ್ನು ಗಮನಿಸಬೇಕಿದೆ. ರಾಜಸ್ವ ಹೆಚ್ಚುವರಿ ಹೊಂದಿದ್ದ ಕರ್ನಾಟಕವನ್ನು ಕಾಂಗ್ರೆಸ್ ಇಂದು ಕೇರಳದ ಮಾದರಿಯತ್ತ ಕೊಂಡೊಯ್ಯುತ್ತಿದೆ. ಇತ್ತೀಚೆಗೆ ಕೇರಳ ಸರಕಾರವು ತನ್ನ ದೈನಂದಿನ ಆಡಳಿತಾತ್ಮಕ ವೆಚ್ಚಗಳನ್ನು ಭರಿಸಲು ಹಣವಿಲ್ಲದೆ, ತನ್ನ ಸಾಲದ ಮಿತಿಯನ್ನು ಮೀರಿ ಹೆಚ್ಚುವರಿ ಸಾಲ ಮಾಡಲು ಅನುಮತಿ ನೀಡಬೇಕೆಂದು ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಇದು ಆರ್ಥಿಕ ಸ್ವಾವಲಂಬನೆಯಲ್ಲ, ಬದಲಿಗೆ ಆರ್ಥಿಕ ದಿವಾಳಿತನದ ಪರಮಾವಧಿ.

ಕೇರಳಕ್ಕೆ ನ್ಯಾಯಾಲಯವು ಕೂಡ ಈ ಹಂತದಲ್ಲಿ ಮಧ್ಯಪ್ರವೇಶಿಸಿ, ಹಣಕಾಸಿನ ನಿರ್ವಹಣೆಯು ಸರಕಾರದ ಜವಾಬ್ದಾರಿಯಾಗಿದ್ದು, ಮಿತಿ ಮೀರಿ ಸಾಲ ಮಾಡುವುದು ದೇಶದ ಒಟ್ಟಾರೆ ಆರ್ಥಿಕತೆಗೆ ಮಾರಕ ಎಂದು ಎಚ್ಚರಿಸಬೇಕಾಯಿತು. ಇಂದು ಕರ್ನಾಟಕ ಸರಕಾರವು ಅನುಸರಿಸುತ್ತಿರುವ ಅದೇ ಅಪ್ರಾಯೋಗಿಕ ಅವೈಜ್ಞಾನಿಕ ಗ್ಯಾರಂಟಿ ಮಾದರಿ ಮತ್ತು ಸಾಲದ ಹಪಾಹಪಿ ನಾಳೆ ನಮ್ಮನ್ನೂ ಕೇರಳದಂತೆ ನ್ಯಾಯಾಲಯದ ಮುಂದೆ ಕೈಚಾಚಿ ನಿಲ್ಲುವಂತೆ ಮಾಡುವುದರಲ್ಲಿ ಸಂಶಯವಿಲ್ಲ.

ಗ್ಯಾರಂಟಿ ತಪ್ಪಲ್ಲ, ಆದರೆ?

ಗ್ಯಾರಂಟಿ ಯೋಜನೆಗಳು ಅಥವಾ ಕಲ್ಯಾಣ ಕಾರ್ಯಕ್ರಮಗಳು ಮೂಲಭೂತವಾಗಿ ಕೆಟ್ಟದ್ದಲ್ಲ. ವಾಸ್ತವವಾಗಿ, ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಮುಖ್ಯವಾಹಿನಿಗೆ ತರಲು ಇವು ಪೂರಕ ವಾಗಿರುತ್ತವೆ. ಆದರೆ, ಇಂತಹ ಯೋಜನೆಗಳ ಯಶಸ್ಸು ಅವುಗಳನ್ನು ಜಾರಿಗೆ ತರುವ ‘ದೂರದೃಷ್ಟಿ’ ಮತ್ತು ‘ವೈಜ್ಞಾನಿಕ ಯೋಜನೆ’ಯ ಮೇಲೆ ಅವಲಂಬಿತವಾಗಿರುತ್ತದೆಯೇ ಹೊರತು, ಕೇವಲ ಮತ ಗಳಿಸುವ ತಂತ್ರದ ಮೇಲಲ್ಲ. ಒಂದು ಜವಾಬ್ದಾರಿಯುತ ಸರಕಾರವು ಮೊದಲು ತನ್ನ ಆದಾಯದ ಮೂಲಗಳನ್ನು ಕ್ರೋಢೀಕರಿಸಿಕೊಂಡು, ಅಭಿವೃದ್ಧಿ ಕಾಮಗಾರಿಗಳಿಗೆ ಧಕ್ಕೆಯಾಗದಂತೆ ಈ ಯೋಜನೆಗಳನ್ನು ರೂಪಿಸಬೇಕು. ಅರ್ಹ ಫಲಾನುಭವಿಗಳನ್ನು ಗುರುತಿಸಿ ಶೇ.100ರಷ್ಟು ಪಾರದರ್ಶಕತೆಯಿಂದ ಯೋಜನೆ ತಲುಪಿಸಿದರೆ ಅದು ಸಾರ್ಥಕವಾಗುತ್ತದೆ. ಆದರೆ, ಯಾವುದೇ ಆರ್ಥಿಕ ತಯಾರಿ ನಡೆಸದೆ, ಕೇವಲ ಚುನಾವಣಾ ಲಾಭಕ್ಕಾಗಿ ಘೋಷಿಸಿ ಜಾರಿಗೆ ತಂದರೆ, ಅದು ರಾಜ್ಯದ ಬೊಕ್ಕಸಕ್ಕೆ ಹೊರೆಯಾಗಿ ಇಡೀ ಆರ್ಥಿಕ ವ್ಯವಸ್ಥೆಯನ್ನೇ ಕುಸಿಯುವಂತೆ ಮಾಡುತ್ತದೆ.

ಕಾಂಗ್ರೆಸ್ ಸರಕಾರವು ಮೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಅದ್ಧೂರಿಯಾಗಿ ಹಮ್ಮಿ ಕೊಂಡಿ ರುವ ಸಾಧನಾ ಸಮಾವೇಶವು ವಾಸ್ತವದಲ್ಲಿ ರಾಜ್ಯದ ಪಾಲಿಗೆ ಒಂದು ಬೃಹತ್ ಸಾಲದ ಸಮಾವೇಶ ವಾಗಿದೆ ಎಂದು ಜನ ಆರೋಪಿಸುತ್ತಿದ್ದಾರೆ; ಈ ಸರಕಾರವು ಹಠಕ್ಕೆ ಬಿದ್ದಂತೆ ಜಾರಿಗೆ ತಂದಿರುವ ಅವೈಜ್ಞಾನಿಕ ಗ್ಯಾರಂಟಿ ಯೋಜನೆಗಳು ರಾಜ್ಯದ ಬಂಡವಾಳ ವೆಚ್ಚವನ್ನೇ ಪೂರ್ತಿ ಯಾಗಿ ನುಂಗಿ ಹಾಕುತ್ತಿದ್ದು, ಮೂಲಸೌಕರ್ಯಗಳಿಗೆ ಹೋಗಬೇಕಾದ ಹಣವನ್ನು ಅವೈಜ್ಞಾನಿಕ ಉಚಿತ ಕೊಡುಗೆಗಳಿಗೆ ವರ್ಗಾಯಿಸುವುದು ಮನೆಯ ಮೇಲ್ಛಾವಣಿಯನ್ನು ಮಾರಿ ಹಬ್ಬದ ಊಟ ಮಾಡಿದಂತೆ ಆಗಿದೆ!

ಈ ಸರಕಾರಕ್ಕೆ ಇನ್ನೂ ಎರಡು ವರ್ಷಗಳ ಅಧಿಕಾರಾವಧಿ ಬಾಕಿ ಉಳಿದಿದ್ದು, ಈಗಲಾದರೂ ಎಚ್ಚೆತ್ತುಕೊಂಡು ತನ್ನ ತಪ್ಪುಗಳನ್ನು ತಿದ್ದಿಕೊಳ್ಳದಿದ್ದರೆ ಮತ್ತು ಹಳಿ ತಪ್ಪಿರುವ ಆರ್ಥಿಕತೆಯನ್ನು ಚೇತರಿಸಿಕೊಳ್ಳುವಂತೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಕರ್ನಾಟಕದ ಭವಿಷ್ಯ ನಿಜಕ್ಕೂ ತೀವ್ರ ಸಂಕಷ್ಟಕ್ಕೆ ಸಿಲುಕಲಿದೆ.