ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Ganesh Bhat Column: ಜಾಗತಿಕ ಅನಿಶ್ಚಿತತೆಯ ನಡುವೆ ಭಾರತವೆಷ್ಟು ನಿಶ್ಚಿಂತ ?

ಡೊನಾಲ್ಡ್ ಟ್ರಂಪ್ ಅವರು ಕಳೆದ ವರ್ಷ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದುದೇ ಜಾಗತಿಕ ಅನಿಶ್ಚಿತತೆಗೆ ನಾಂದಿಯಾಯಿತು. ‘ಮೇಕ್ ಅಮೆರಿಕ ಗ್ರೇಟ್ ಅಗೇನ್’ (MAGA) ಎಂದು ಹೇಳುತ್ತಲೇ ಅಧಿಕಾರದ ಗದ್ದುಗೆ ಹಿಡಿದ ಟ್ರಂಪ್ ಅವರಿಗೆ 38.4 ಲಕ್ಷ ಕೋಟಿ ಡಾಲರ್‌ನಷ್ಟಿರುವ ಅಮೆರಿಕದ ಸಾಲವೇ ದೊಡ್ಡ ಸವಾಲಾಯಿತು. ಈ ಸಾಲದ ಪ್ರಮಾಣವು ಅಮೆರಿಕದ ವಾರ್ಷಿಕ ಜಿಡಿಪಿಯ ಶೇ.120ರಷ್ಟಿದೆ.

ವರ್ತಮಾನ

ಗಣೇಶ್‌ ಭಟ್‌, ವಾರಣಾಸಿ

ಡೊನಾಲ್ಡ್ ಟ್ರಂಪ್ ಅವರು ಕಳೆದ ವರ್ಷ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದುದೇ ಜಾಗತಿಕ ಅನಿಶ್ಚಿತತೆಗೆ ನಾಂದಿಯಾಯಿತು. ‘ಮೇಕ್ ಅಮೆರಿಕ ಗ್ರೇಟ್ ಅಗೇನ್’ (MAGA) ಎಂದು ಹೇಳುತ್ತಲೇ ಅಧಿಕಾರದ ಗದ್ದುಗೆ ಹಿಡಿದ ಟ್ರಂಪ್ ಅವರಿಗೆ 38.4 ಲಕ್ಷ ಕೋಟಿ ಡಾಲರ್‌ನಷ್ಟಿರುವ ಅಮೆರಿಕದ ಸಾಲವೇ ದೊಡ್ಡ ಸವಾಲಾಯಿತು. ಈ ಸಾಲದ ಪ್ರಮಾಣವು ಅಮೆರಿಕದ ವಾರ್ಷಿಕ ಜಿಡಿಪಿಯ ಶೇ.120ರಷ್ಟಿದೆ.

ಇದನ್ನು ಸ್ವಲ್ಪ ಮಟ್ಟಿಗೆ ಸರಿದೂಗಿಸಲು ಟ್ರಂಪ್ ವಿವಿಧ ದೇಶಗಳ ಮೇಲೆ ಸುಂಕವನ್ನು ಹೇರಿದರು. ಭಾರತದಿಂದ ಅಮೆರಿಕಕ್ಕೆ ಆಮದಾಗುವ ವಸ್ತುಗಳ ಮೇಲೆ ಮೊದಲಿಗೆ ಶೇ.25ರಷ್ಟು ಸುಂಕವನ್ನು ಹೇರಿದ ಟ್ರಂಪ್ ಸರಕಾರ, ಭಾರತವು ರಷ್ಯಾದಿಂದ ಕಚ್ಚಾತೈಲವನ್ನು ಖರೀದಿಸುತ್ತಿರುವುದನ್ನೇ ನೆಪವಾಗಿಸಿಕೊಂಡು ಇನ್ನೂ ಶೇ.25ರಷ್ಟು ಸುಂಕವನ್ನು ಹೇರಿತು.

ಅಲ್ಲಿಗೆ ಸುಂಕದ ಪ್ರಮಾಣದ ಶೇ.50ರ ಮಟ್ಟವನ್ನು ಮುಟ್ಟಿದಂತಾಯಿತು. ಚೀನಾ ದೇಶವೂ ಅತಿ ರೇಕದ ಸುಂಕದ ಬರೆ ಹಾಕಿಸಿಕೊಂಡಿತು. ವೆನಿಜುವೆಲಾ ದೇಶದ ಪೆಟ್ರೋಲಿಯಂ ಸಂಪನ್ಮೂಲಗಳ ಮೇಲೆ ಈಗ ಕಣ್ಣು ಹಾಕಿರುವ ಟ್ರಂಪ್ ಸರಕಾರ, ಆ ದೇಶದ ಅಧ್ಯಕ್ಷ ನಿಕೋಲಸ್ ಮಡುರೊ ಮೊರೋಸ್ ಅವರನ್ನು ಪತ್ನಿಸಮೇತರಾಗಿ ಅಪಹರಿಸಿ ತನ್ನ ನೆಲದಲ್ಲಿನ ಜೈಲಿನಲ್ಲಿರಿಸಿದೆ ಮತ್ತು ತನ್ನ ಕೈಗೊಂಬೆಯಂತಿರುವ ಡೆಲ್ಸಿ ರಾಡ್ರಿಗಸ್‌ರನ್ನು ವೆನಿಜುವೆಲಾದಲ್ಲಿ ಹಂಗಾಮಿ ಅಧ್ಯಕ್ಷೆಯಾಗಿ ಕೂರಿಸಿದೆ.

ಅಮೆರಿಕದೊಂದಿಗೆ ಸಹಕರಿಸದಿದ್ದಲ್ಲಿ ಭಾರಿ ಬೆಲೆಯನ್ನೇ ತೆರಬೇಕಾಗುತ್ತದೆ ಎಂದು ರಾಡ್ರಿಗಸ್ ಅವರಿಗೆ ಟ್ರಂಪ್ ಎಚ್ಚರಿಕೆಯನ್ನು ಕೊಟ್ಟಿದ್ದಾರಂತೆ ಹಾಗೂ 40ರಿಂದ 50 ದಶಲಕ್ಷ ಬ್ಯಾರೆಲ್‌ಗಳಷ್ಟು ತೈಲವನ್ನು ಅಮೆರಿಕಕ್ಕೆ ಪೂರೈಸುವಂತೆ ಟ್ರಂಪ್ ಸರಕಾರ ನಿರ್ದೇಶಿಸಿದೆಯಂತೆ.

ಇದನ್ನೂ ಓದಿ: Ganesh Bhat Column: ದೇಶ-ಕಾಲಗಳೊಂದಿಗೆ ಬದಲಾಗುವ ನಿಲುವುಗಳು ಮತ್ತು ಮೌಲ್ಯಗಳು

ಟ್ರಂಪ್‌ರ ದಾಹ ಇಲ್ಲಿಗೇ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಅಮೆರಿಕ ಮತ್ತು ಯುರೋಪ್ ಖಂಡಗಳ ನಡುವೆ ಇರುವ ಗ್ರೀನ್‌ಲ್ಯಾಂಡ್ ಅನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುವ ಮಾತುಗಳನ್ನು ಆಡಲಾ ರಂಭಿಸಿದ್ದಾರೆ ಟ್ರಂಪ್. ಅಮೆರಿಕದ ರಾಷ್ಟ್ರೀಯ ಭದ್ರತೆಯ ಉದ್ದೇಶಕ್ಕಾಗಿ ಹಾಗೂ ಚೀನಾ-ರಷ್ಯಾ ಗಳ ಪಾರಮ್ಯವನ್ನು ತಡೆಗಟ್ಟಲು ಗ್ರೀನ್‌ಲ್ಯಾಂಡ್ ತಮಗೆ ಬೇಕಾಗಿದೆ ಎಂದು ಟ್ರಂಪ್ ಹೇಳು ತ್ತಿದ್ದರೂ, ಅವರ ಕಣ್ಣಿರುವುದು ಗ್ರೀನ್‌ಲ್ಯಾಂಡ್‌ನಲ್ಲಿ ಅಡಕವಾಗಿರುವ ಅಮೂಲ್ಯ ಖನಿಜ ನಿಕ್ಷೇಪ ಗಳು ಮತ್ತು ಅಪರೂಪದ ಭೂಲೋಹಗಳ (ರೇರ್ ಅರ್ತ್ ಮೆಟಲ್ಸ್) ಮೇಲೆಯೇ! ಟ್ರಂಪ್‌ರ ಈ ನಡೆಯಿಂದಾಗಿ ಇಡೀ ಐರೋಪ್ಯ ಒಕ್ಕೂಟವು ಅಮೆರಿಕವನ್ನು ವಿರೋಧಿಸಲು ಆರಂಭಿಸಿದೆ.

ಗ್ರೀನ್‌ಲ್ಯಾಂಡ್ ಅನ್ನು ಆಳುತ್ತಿರುವ ಡೆನ್ಮಾರ್ಕ್, ಐರೋಪ್ಯ ಒಕ್ಕೂಟದ ಸದಸ್ಯ ದೇಶವಾಗಿದೆ. ಅಮೆರಿಕದ ನಿಲುವನ್ನು ವಿರೋಧಿಸಿದ ಡೆನ್ಮಾರ್ಕ್ ಪ್ರಧಾನಿ ಮೀಟಿ ಫ್ರೆಡರಿಕ್‌ಸನ್ ಅವರು, “ಗ್ರೀನ್‌ ಲ್ಯಾಂಡ್ ಅನ್ನು ವಶಪಡಿಸಿಕೊಳ್ಳುವ ನಿಟ್ಟಿನಲ್ಲಿ ಅಮೆರಿಕವು ‘ನ್ಯಾಟೋ’ ಒಕ್ಕೂಟದ ಮಿತ್ರದೇಶದ ವಿರುದ್ಧದ (ಡೆನ್ಮಾರ್ಕ್ ‘ನ್ಯಾಟೋ’ದ ಮಿತ್ರದೇಶವಾಗಿದೆ) ಯಾವುದೇ ಮಿಲಿಟರಿ ಕಾರ್ಯಾಚರಣೆಗೆ ಮುಂದಾದಲ್ಲಿ, ನ್ಯಾಟೋ ಒಕ್ಕೂಟವು ಅಲ್ಲಿಗೇ ಮುರಿದುಬೀಳಲಿದೆ" ಎಂದು ಎಚ್ಚರಿಸಿದ್ದಾರೆ.

ಇದೀಗ ಐರೋಪ್ಯ ಒಕ್ಕೂಟದ ಸದಸ್ಯ ದೇಶಗಳು ಗ್ರೀನ್‌ಲ್ಯಾಂಡ್‌ನಲ್ಲಿ ಹೆಚ್ಚುವರಿ ಮಿಲಿಟರಿಯನ್ನು ನಿಯೋಜಿಸಿವೆ. ಕೆನಡಾ ದೇಶವು ಅಮೆರಿಕದ 51ನೇ ರಾಜ್ಯವಾಗಲಿದೆ ಎಂದು ಟ್ರಂಪ್ ಕೆಲವು ಬಾರಿ ಹೇಳಿಕೆ ನೀಡಿದ್ದು, ಇದೀಗ ಗ್ರೀನ್ʼಲ್ಯಾಂಡ್ ಬೇಡಿಕೆಯ ಪ್ರಕರಣವು ಕೆನಡಾದ ನಿದ್ರೆಗೆಡಿಸಿದೆ.

ವೆನಿಜುವೆಲಾವನ್ನು ತನ್ನ ವಶಕ್ಕೆ ತೆಗೆದುಕೊಂಡಿರುವ ಅಮೆರಿಕ, ಉಕ್ರೇನ್ ಜತೆಗೆ ಸಂಘರ್ಷದಲ್ಲಿ ತೊಡಗಿರುವ ರಷ್ಯಾವನ್ನು ಖಂಡಿಸುವ ನೈತಿಕತೆಯನ್ನು ಈಗ ಕಳೆದುಕೊಂಡಿದೆ. ತೈವಾನ್ ಅನ್ನು ಸ್ವಾಧೀನಪಡಿಸಿಕೊಳ್ಳುವ ದುರಾಸೆ ಹೊಂದಿರುವ ಚೀನಾ ದೇಶಕ್ಕೆ ಅಮೆರಿಕ ಮಾದರಿಯಾಗುತ್ತಿದೆ.

Screenshot_3

‘ಬಲಶಾಲಿಯು ಏನು ಮಾಡಿದರೂ ಸರಿ’ ಎನ್ನುವ ತತ್ವವು ಅಮೆರಿಕದ ನಡೆಯಿಂದಾಗಿ ಜಾಗತಿಕ ವಾಗಿ ಹರಡುವ ಸಾಧ್ಯತೆ ಹೆಚ್ಚುತ್ತಿದೆ. ಈ ನಡುವೆ ಇರಾನ್‌ನ ಸರ್ವೋಚ್ಚ ನ್ಯಾಯಕ ಅಲಿ ಖಮೇನಿ ಯ ವಿರುದ್ಧ ಅಲ್ಲಿನ ಜನರು ದಂಗೆ ಎದ್ದಿದ್ದಾರೆ. ಇರಾನಿನ ವಿಷಯದಲ್ಲೂ ಮೂಗು ತೂರಿಸಿರುವ ಟ್ರಂಪ್ ಅಲ್ಲಿನ ಹೋರಾಟಗಾರರಿಗೆ ಬೆಂಬಲವನ್ನು ಸೂಚಿಸಿದ್ದಾರೆ.

ಇದೀಗ ಅಮೆರಿಕವು ಇರಾನಿನ ಜತೆ ವ್ಯಾಪಾರ ಸಂಬಂಧಗಳನ್ನು ಹೊಂದಿರುವ ದೇಶಗಳ ಮೇಲೆ ಹೆಚ್ಚುವರಿಯಾಗಿ ಶೇ.25ರಷ್ಟು ಸುಂಕವನ್ನು ಹೇರುತ್ತಿದ್ದು, ಇರಾನಿನ ಮೇಲೆ ಅದು ಆಕ್ರಮಣ ನಡೆಸುವ ಸಾಧ್ಯತೆಗಳು ಹೆಚ್ಚಾಗುತ್ತಿದೆ. ಈ ಎಲ್ಲಾ ಆರ್ಥಿಕ ಅಸ್ಥಿರತೆ ಹಾಗೂ ಸಂಘರ್ಷಮಯ ಭೂರಾಜಕೀಯಗಳ ನಡುವೆ ಭಾರತವು ಸಂಕಷ್ಟದಿಂದ ಹೊರತಾಗಲು ಸಾಧ್ಯವೇ? ಅಮೆರಿಕದ ಕೃಷಿ ಮತ್ತು ಹೈನುಗಾರಿಕಾ ಉತ್ಪನ್ನಗಳಿಗೆ ಭಾರತವು ಮಾರುಕಟ್ಟೆಯನ್ನು ತೆರೆಯಬೇಕು ಎಂಬುದು ಟ್ರಂಪ್‌ರ ಬೇಡಿಕೆ; ಆದರೆ ತನ್ನ ಕೃಷಿಕರು ಮತ್ತು ಹೈನುಗಾರರ ಹಿತಾಸಕ್ತಿಗಳಿಗೆ ಮಾರಕವಾಗುತ್ತದೆ ಎಂಬ ಕಾರಣಕ್ಕೆ ಭಾರತ ಸರಕಾರವು ಈ ಬೇಡಿಕೆಗೆ ಸ್ಪಂದಿಸಿಲ್ಲ.

ರಷ್ಯಾದಿಂದ ತೈಲ ಖರೀದಿ ಮಾಡುವುದನ್ನು ನಿಲ್ಲಿಸಬೇಕೆಂದು ಅಮೆರಿಕವು ಭಾರತದ ಮೇಲೆ ಒತ್ತಡ ಹೇರುತ್ತಿದೆ; ಆದರೆ ಇಂಧನ ಸುರಕ್ಷತೆಗಾಗಿ ಭಾರತವು ಈ ಖರೀದಿಯನ್ನು ಮುಂದುವರಿಸಿದೆ. ಅಮೆರಿಕದ ಶೇ.50ರ ಪ್ರಮಾಣದ ಸುಂಕವು ಭಾರತದ ಆರ್ಥಿಕತೆಯ ಮೇಲೆ ದೊಡ್ಡ ಮಟ್ಟದ ಪರಿಣಾಮವನ್ನು ಬೀರಿದಂತೆ ಕಾಣಿಸುತ್ತಿಲ್ಲ. ಅಮೆರಿಕದ ಈ ಸುಂಕಾಸ್ತ್ರದ ನಡುವೆಯೂ ಭಾರತ ವು 2025-26ರಲ್ಲಿ ಶೇ.7.4ರಿಂದ 7.8ರಷ್ಟು ಆರ್ಥಿಕ ಪ್ರಗತಿಯನ್ನು ಸಾಧಿಸಲಿದೆ ಎಂದು ಅಂದಾಜಿಸ ಲಾಗಿದೆ.

ಅಮೆರಿಕವು ಭಾರತದ ವಸ್ತುಗಳ ಮೇಲೆ ಶೇ.50ರಷ್ಟು ಸುಂಕವನ್ನು ಹೇರಿದ್ದರೂ, ಕಳೆದ ನವೆಂಬರ್ ತಿಂಗಳಲ್ಲಿ ಅಮೆರಿಕಕ್ಕೆ ಭಾರತದಿಂದಾದ ನಿರ್ಯಾತದಲ್ಲಿ ಶೇ.19ರಷ್ಟು ಹೆಚ್ಚಳವಾಗಿದೆ. 2024ರ ದ್ವಿತೀಯಾರ್ಧಕ್ಕೆ ಹೋಲಿಸಿದರೆ, 2025ರ ಇದೇ ಅವಧಿಯಲ್ಲಿ ಭಾರತದಿಂದ ಅಮೆರಿಕಕ್ಕೆ ಆದ ರಫ್ತಿನ ಪ್ರಮಾಣದಲ್ಲಿ ಶೇ. 9.75ರಷ್ಟು ಹೆಚ್ಚಾಗಿದ್ದು, ಇದರಲ್ಲಿ 1 ಲಕ್ಷ ಕೋಟಿ ರುಪಾಯಿ ಮೌಲ್ಯದ ಐಫೋನ್‌ಗಳೂ ಸೇರಿವೆ.

ಅಮೆರಿಕದ ಸುಂಕಾಸವನ್ನು ಎದುರಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿರುವ ಭಾರತವು, ಅಮೆರಿಕದ ಮಾರುಕಟ್ಟೆಗೆ ಪರ್ಯಾಯವಾಗಿ ಚೀನಾ, ಯುಎಇ, ಸೌದಿ ಅರೇಬಿಯಾ, ಯುರೋಪ್, ಜಪಾನ್ ಮೊದಲಾದ ದೇಶಗಳ ಮಾರುಕಟ್ಟೆಗಳಿಗೆ ತನ್ನನ್ನು ವಿಸ್ತರಿಸಿಕೊಳ್ಳುತ್ತಿದೆ, ಯುಎಇ ಮತ್ತು ಸೌದಿ ಅರೇಬಿಯಾಗಳಿಗೆ ಅಮೂಲ್ಯ ಹರಳುಗಳು, ಆಭರಣಗಳು ಮತ್ತು ಸಾಗರೋತ್ಪನ್ನಗಳನ್ನು ಕಳುಹಿಸುತ್ತಿದೆ.

ಭಾರತದ ಇಲೆಕ್ಟ್ರಾನಿಕ್ಸ್ ಮತ್ತು ಎಂಜಿನಿಯರಿಂಗ್ ಉತ್ಪನ್ನಗಳಿಗೆ ಚೀನಾದ ಮಾರುಕಟ್ಟೆಯೂ ತೆರೆಯಲ್ಪಟ್ಟಿದೆ. ಭಾರತದ ಸಿದ್ಧ ಉಡುಪುಗಳು, ಎಂಜಿನಿಯರಿಂಗ್ ಉತ್ಪನ್ನಗಳು ಹಾಗೂ ಸಾಗರೋ ತ್ಪನ್ನಗಳಿಗೆ ಸ್ಪೇನ್, ಫ್ರಾನ್ಸ್ ಹಾಗೂ ಇಟಲಿಯಂಥ ಐರೋಪ್ಯ ದೇಶಗಳಲ್ಲಿ ಹೊಸದಾಗಿ ಮಾರು ಕಟ್ಟೆ ಸಿದ್ಧವಾಗಿದೆ.

ಸಿದ್ಧ ಉಡುಪುಗಳನ್ನು ಜಪಾನ್‌ಗೆ ರಫ್ತು ಮಾಡುತ್ತಿರುವ ಭಾರvವು, ಅಮೆರಿಕದ ಮೇಲಿನ ಅವಲಂಬನೆಯನ್ನು ತಗ್ಗಿಸಲು ಮಧ್ಯಪ್ರಾಚ್ಯ, ಲ್ಯಾಟಿನ್ ಅಮೆರಿಕ ಮತ್ತು ಯುರೋಪ್ ಮುಂತಾದ 50 ದೇಶಗಳ ಮಾರುಕಟ್ಟೆಗಳಿಗೆ ವಿಸ್ತರಿಸಿಕೊಳ್ಳುತ್ತಿದೆ.

ಸುಂಕಗಳ ಹಾವಳಿ ಮತ್ತು ವ್ಯಾಪಾರ ನಿರ್ಬಂಧಗಳನ್ನು ಕಡಿಮೆ ಮಾಡಿಕೊಳ್ಳಲು ಭಾರತವೀಗ ವಿವಿಧ ದೇಶಗಳೊಡನೆ ಮುಕ್ತ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿದ್ದು, ಜಪಾನ್, ದಕ್ಷಿಣ ಕೊರಿಯಾ, ಮಲೇಷ್ಯಾ, ಸಿಂಗಾಪುರ್, ಯುಎಇ, ಆಸ್ಟ್ರೇಲಿಯಾ, ಬ್ರಿಟನ್, ಮಾರಿಷಸ್ ಹಾಗೂ ಐರೋಪ್ಯ ಒಕ್ಕೂಟದ ನಾರ್ವೆ, ಸ್ವಿಜರ್ಲೆಂಡ್, ಐಸ್‌ಲ್ಯಾಂಡ್ ಮುಂತಾದ ದೇಶಗಳು ಇದರಲ್ಲಿ ಸೇರಿವೆ.

ಐರೋಪ್ಯ ಒಕ್ಕೂಟದ ಜತೆಗಿನ ಮಾತುಕತೆಗಳು ಕೊನೆಯ ಘಟ್ಟವನ್ನು ತಲುಪಿದ್ದು, ಒಪ್ಪಂದವು ಜನವರಿ 27ರಂದು ಜಾರಿಯಗುವ ಸಾಧ್ಯತೆಯಿದೆ. ಈ ಒಪ್ಪಂದದಲ್ಲಿ ಯುರೋಪಿನ ಕೃಷಿ ಉತ್ಪನ್ನ ಗಳನ್ನು ತನ್ನ ಮಾರುಕಟ್ಟೆಯಿಂದ ಹೊರಗಿಡುವಲ್ಲಿ ಭಾರತವು ಯಶಸ್ವಿಯಾಗಿದೆ. ಈ ಬಾರಿಯ ಗಣರಾಜ್ಯೋತ್ಸವಕ್ಕೆ ಐರೋಪ್ಯ ಒಕ್ಕೂಟದ ಮುಖ್ಯಸ್ಥರು ಮುಖ್ಯ ಅತಿಥಿಗಳಾಗಿ ಭಾಗವಹಿಸುತ್ತಿರು ವುದು ಆಕಸ್ಮಿಕವೇನಲ್ಲ!

ಅಮೆರಿಕ ಮತ್ತು ಚೀನಾಗಳ ಮೇಲಿನ ಅವಲಂಬನೆಯನ್ನು ತಗ್ಗಿಸಲು ಹಾಗೂ ದೇಶದ ಆರ್ಥಿಕತೆ ಯನ್ನು ಹೆಚ್ಚಿಸಲು ಭಾರತವು ‘ಮೇಕ್ ಇನ್ ಇಂಡಿಯಾ’ ಉಪಕ್ರಮವನ್ನು ಜಾರಿಗೊಳಿಸಿದೆ. ಜತೆಗೆ, ದೇಶೀಯ ಉತ್ಪಾದನೆಗಳನ್ನು ಹೆಚ್ಚಿಸಲು ‘ಉತ್ಪಾದನಾಧಾರಿತ ಪ್ರೋತ್ಸಾಹಕ ಧನ’ವನ್ನು (ಪಿಎಲ್‌ ಐ) ಒದಗಿಸಲಾಗುತ್ತಿದೆ. ಸೆಮಿಕಂಡಕ್ಟರ್ ಮತ್ತು ಡಿಸ್‌ಪ್ಲೇ ಕ್ಷೇತ್ರಗಳ ಅಭಿವೃದ್ಧಿಗಾಗಿ 72 ಸಾವಿರ ಕೋಟಿ ರುಪಾಯಿಗಳ ‘ಪಿಎಲ್‌ಐ’ ಅನ್ನು ಒದಗಿಸಲಾಗುತ್ತಿದೆ.

ಆಟೋಮೊಬೈಲ್, ಸೋಲಾರ್ ಪಿ.ವಿ. ಮಾಡ್ಯೂಲ್, ಟೆಲಿಕಾಂ ವಸ್ತುಗಳು, ಲೀಥಿಯಂ ಬ್ಯಾಟರಿ ಮೊದಲಾದ ವಸ್ತುಗಳ ಉತ್ಪಾದನೆಗೆ 98 ಸಾವಿರ ಕೋಟಿ ರುಪಾಯಿಗಳ ಪಿಎಲ್‌ಐ ಅನ್ನು ಒದಗಿಸ ಲಾಗುತ್ತಿದೆ. ಚೀನಾದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ರೇರ್ ಅರ್ಥ್ ಮ್ಯಾಗ್ನೆಟ್‌ಗಳನ್ನು ನಿರ್ಮಿಸಲು 7280 ಕೋಟಿ ರುಪಾಯಿಗಳ ‘ಪಿಎಲ್‌ಐ’ ಅನ್ನು ಘೋಷಿಸಲಾಗಿದೆ.

ಟಾಟಾ, ವೇದಾಂತ, ಎಚ್‌ಸಿಎಲ್ ಟೆಕ್ನಾಲಜೀಸ್, ಡಿಕ್ಸನ್, ಬಿಇಎಲ್, ಸಿಜಿ ಪವರ್, ಕೇನ್ಸ್ ಟೆಕ್ನಾ ಲಜಿ, ಇಂಟೆಲ್, ಲಾಕ್‌ಹೀಡ್ ಮಾರ್ಟಿನ್ ಮೊದಲಾದ ಕಂಪನಿಗಳು ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ 1.6 ಲಕ್ಷ ಕೋಟಿ ರುಪಾಯಿಗಳನ್ನು ಹೂಡಿಕೆ ಮಾಡುತ್ತಿದ್ದು, ದೇಶದ 6 ರಾಜ್ಯಗಳಲ್ಲಿ ಈ ಯೋಜನೆ ಗಳು ಕಾರ್ಯರೂಪಕ್ಕೆ ಬರಲಿವೆ.

ಈ ಎಲ್ಲ ಉಪಕ್ರಮಗಳ ಫಲವಾಗಿ ಭಾರತವು 2036ರ ವೇಳೆಗೆ ಜಗತ್ತಿನ ಅಗ್ರಗಣ್ಯ ಸೆಮಿಕಂಡಕ್ಟರ್ ಉತ್ಪಾದಕ ದೇಶಗಳಲ್ಲಿ ಮಹತ್ವದ ಸ್ಥಾನವನ್ನು ತನ್ನದಾಗಿಸಿಕೊಳ್ಳಲಿದೆ. ಅಮೆರಿಕವು ಭಾರತದ ಮೇಲೆ ಸುಂಕವನ್ನು ಹೇರಿರುವುದು ಮೇಲ್ನೋಟಕ್ಕೆ ಭಾರತದ ಪಾಲಿಗೆ ಹಿನ್ನಡೆಯಂತೆ ಕಂಡಿದ್ದರೂ, ಅದನ್ನು ಹೊಸ ಅವಕಾಶಗಳನ್ನು ಹುಡುಕಿಕೊಳ್ಳುವ ದಾರಿಯನ್ನಾಗಿ ಭಾರತವು ಪರಿವರ್ತಿಸಿ ಕೊಂಡಿದೆ ಮತ್ತು ಹೊಸ ಮಾರುಕಟ್ಟೆಗಳನ್ನು ಅನ್ವೇಷಿಸಿಕೊಂಡಿದೆ.

ಅಮೆರಿಕದ ಭೌಗೋಳಿಕ ಪಾರಮ್ಯದ ರಾಜನೀತಿಯಿಂದಗಿ ನಮ್ಮ ನೆರೆರಾಷ್ಟ್ರ ಚೀನಾ, ದ್ವೇಷವನ್ನು ಸ್ವಲ್ಪ ಮಟ್ಟಿಗೆ ಬದಿಗೆ ಸರಿಸಿ ಭಾರತಕ್ಕೆ ಹತ್ತಿರವಾಗುತ್ತಿದೆ ಹಾಗೂ ತನ್ನ ಮಾರುಕಟ್ಟೆಯನ್ನು ಭಾರತಕ್ಕೆ ಸಡಿಲಿಸಿದೆ.

ಇದರ ಪರಿಣಾಮವಾಗಿ, 2024ರ ವರ್ಷಕ್ಕೆ ಹೋಲಿಸಿದಾಗ ಭಾರತವು 2025ರಲ್ಲಿ ಚೀನಾಕ್ಕೆ ಮಾಡಿದ ರಫ್ತಿನ ಪ್ರಮಾಣದಲ್ಲಿ ಶೇ.36ರಷ್ಟು ಹೆಚ್ಚಳ ಕಂಡುಬಂದಿದೆ. ಗ್ರೀನ್ʼಲ್ಯಾಂಡ್‌ನ ಮೇಲೆ ಹಕ್ಕು ಸ್ಥಾಪಿಸುವ ಅಮೆರಿಕದ ದುರಾಸೆಯನ್ನು ಕಂಡ ಐರೋಪ್ಯ ಒಕ್ಕೂಟವು ಭಾರತದೆಡೆಗೆ ವಾಲುತ್ತಿದೆ. ಹೀಗಾಗಿಯೇ ಜಾಗತಿಕ ಅನಿಶ್ಚಿತತೆಯನ್ನು ಭಾರತವು ಸಕಾರಾತ್ಮಕವಾಗಿ ಬಳಸಿಕೊಳ್ಳುತ್ತಿದೆ ಎಂದು ಕ್ಷೇತ್ರತಜ್ಞರು ವಿಶ್ಲೇಷಿಸುತ್ತಿದ್ದಾರೆ.

(ಲೇಖಕರು ಹವ್ಯಾಸಿ ಬರಹಗಾರರು)