Ganesh Bhat Column: ಮಾತುಗಳು ತೂಕವನ್ನು ಪಡೆಯುವುದು ಹೇಗೆ ?
ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು ಎನ್ನುವ ಗಾದೆ ಮಾತನಾಡುವಾಗ ನಾವು ಎಷ್ಟು ಜಾಗರೂಕರಾಗಿರಬೇಕು ಎಂಬುದನ್ನು ಎಚ್ಚರಿಸುತ್ತದೆ. ಮಾತನಾಡುವಾಗ ಬಹಳ ಜಾಗರೂಕತೆ ಇದ್ದರೆ ತಪ್ಪು ಗ್ರಹಿಕೆಗೆ ಅವಕಾಶವಿಲ್ಲ ಎಂಬ ಉದ್ದೇಶದಿಂದ ಮಾತು ಬಲ್ಲವನಿಗೆ ಜಗಳವಿಲ್ಲ ಎಂಬ ಗಾದೆ ಹುಟ್ಟಿಕೊಂಡಿರಬೇಕು. ಆದರೂ ಮಾತನ್ನು ಆಡಿದವನ ಉದ್ದೇಶ ಮತ್ತು ಅದನ್ನು ಅರ್ಥ ಮಾಡಿ ಕೊಂಡ ವನ ಗ್ರಹಿಕೆಗಳು ಬೇರೆ ಬೇರೆಯಾದಾಗ ಭಿನ್ನಾಭಿಪ್ರಾಯ ಮೂಡುತ್ತದೆ.
-
ಮುತ್ತಿನ ಹಾರ
ಗಣೇಶ್ ಭಟ್, ವಾರಣಾಸಿ
ಸಾರ್ವಜನಿಕ ಜೀವನದಲ್ಲಿರುವವರು ಅದರಲ್ಲೂ ರಾಜಕಾರಣಿಗಳು ಸಕಾರಾತ್ಮಕ ಮಾತುಗಳನ್ನಾ ಡಿದರೆ ಅದು ರಚನಾತ್ಮಕ ರಾಜಕೀಯಕ್ಕೆ ನಾಂದಿ ಹಾಡಬಹುದು. ಅದನ್ನು ಶಶಿ ತರೂರ್, ಸುಧಾ ಮೂರ್ತಿ, ಎಸ್ ಜೈಶಂಕರ್, ರಾಘವ ಚಡ್ಡಾ ಮೊದಲಾದವರ ಮಾತುಗಳು ಸಾಧಿಸಿ ತೋರಿಸಿವೆ. ಆಡುವ ಮಾತುಗಳ ಹಿಂದೆ ಪ್ರಾಮಾಣಿಕ ಉದ್ದೇಶ ಇದ್ದಾಗ ಆ ಮಾತಿಗೆ ಬೆಲೆ ಬರುತ್ತದೆ.
‘ಯೊಳೋದೇನ್ರ ಯೊಳೋದಿದ್ರೆ ಝಟ್ಪಟ್ನೇಳು ಮುಗಿಸು, ಯಾವ್ದಕ್ ಇಕ್ಬೇಕ್ ಗುರಿ ಮಾಡಿಕೊಂಡು ಆಮ್ಯಾಕ್ ದೊಣ್ಣೆ ಬೀಸು’ ಎನ್ನುವ ಸಾಲುಗಳಂತೆ ಸುತ್ತು ಬಳಸದೆ ಆಡುವ ಮಾತುಗಳು ಗುರಿ ಮುಟ್ಟುತ್ತವೆ. ನುಡಿದರೆ ಮುತ್ತಿನ ಹಾರದಂತಿರಬೇಕು, ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು, ನುಡಿದರೆ ಸಟಿಕದ ಶಲಾಖೆಯಂತಿರಬೇಕು ಎಂದು ವಚನಗಳು ಹೇಳುತ್ತವೆ.
ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು ಎನ್ನುವ ಗಾದೆ ಮಾತನಾಡುವಾಗ ನಾವು ಎಷ್ಟು ಜಾಗರೂಕರಾಗಿರಬೇಕು ಎಂಬುದನ್ನು ಎಚ್ಚರಿಸುತ್ತದೆ. ಮಾತನಾಡುವಾಗ ಬಹಳ ಜಾಗರೂಕತೆ ಇದ್ದರೆ ತಪ್ಪು ಗ್ರಹಿಕೆಗೆ ಅವಕಾಶವಿಲ್ಲ ಎಂಬ ಉದ್ದೇಶದಿಂದ ಮಾತು ಬಲ್ಲವನಿಗೆ ಜಗಳವಿಲ್ಲ ಎಂಬ ಗಾದೆ ಹುಟ್ಟಿಕೊಂಡಿರಬೇಕು. ಆದರೂ ಮಾತನ್ನು ಆಡಿದವನ ಉದ್ದೇಶ ಮತ್ತು ಅದನ್ನು ಅರ್ಥ ಮಾಡಿಕೊಂಡ ವನ ಗ್ರಹಿಕೆಗಳು ಬೇರೆ ಬೇರೆಯಾದಾಗ ಭಿನ್ನಾಭಿಪ್ರಾಯ ಮೂಡುತ್ತದೆ.
ಇದನ್ನೂ ಓದಿ: Ganesh Bhat Column: ನಮ್ಮ ನಡುವಿನ ಶೇ.3 ಜನರ ನೋವಿನ ಬಗ್ಗೆ ನಮಗೇನು ಗೊತ್ತು ?
ಬಹುಶಃ ಇದಕ್ಕೇ, ‘ನಾನು ಹೇಳಿದುದಕ್ಕೆ ಮಾತ್ರ ಜವಾಬ್ದಾರನಾಗಿರುತ್ತೇನೆಯೇ ಹೊರತು, ನೀವು ಅರ್ಥಮಾಡಿಕೊಂಡುದುದಕ್ಕೆ ಅಲ್ಲ’ ಎಂದು ಅಮೇರಿಕಾದ ಪ್ರಸಿದ್ಧ ಸಿನೆಮಾ ನಟನಾಗಿದ್ದ ಜಾನ್ ವೇಯ್ನ್ ಹೇಳಿದ್ದು. ಸದಾಶಯದ ಮಾತುಗಳು ಉದ್ದೇಶಿತ ಸಕಾರಾತ್ಮಕ ಬದಲಾವಣೆಗಳನ್ನು ತರಲು ಯಶಸ್ವಿಯಾದರೆ ಅದನ್ನು ಪರಿಣಾಮಕಾರಿ ಸಂವಹನ ಅಥವಾ ಮಾತಿನ ಸಾರ್ಥಕತೆ ಎಂದು ಕರೆಯಬಹುದು. ಆಡುವ ಮಾತುಗಳ ಹಿಂದೆ ಪ್ರಾಮಾಣಿಕ ಉದ್ದೇಶ ಇದ್ದಾಗ ಆ ಮಾತಿಗೆ ಬೆಲೆ ಬರುತ್ತದೆ.
ಇದಕ್ಕೆ ಉದಾಹರಣೆ 2024ರಲ್ಲಿ ರಾಜ್ಯ ಸಭೆಗೆ ನಾಮನಿರ್ದೇಶಿತರಾದ ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥರು ಮತ್ತು ಬರಹಗಾರ್ತಿ ಸುಧಾ ಮೂರ್ತಿಯವರು ರಾಜ್ಯಸಭೆಯಲ್ಲಿ ಮಾಡಿದ ಚೊಚ್ಚಲ ಭಾಷಣ. ಸುಧಾ ಮೂರ್ತಿ ಮಹಿಳೆಯರಲ್ಲಿ ಗರ್ಭಕಂಠದ ಕ್ಯಾನ್ಸರ್ ಅನ್ನು ತಡೆಗಟ್ಟುವ ಉದ್ದೇಶ ದಿಂದ 9 ರಿಂದ 14 ವಯಸ್ಸಿನ ಒಳಗಿನ ಹೆಣ್ಣುಮಕ್ಕಳಿಗೆ ವ್ಯಾಕ್ಸಿನ್ ಹಾಕಿಸಬೇಕಾದ ಅವಶ್ಯಕತೆಯ ಬಗ್ಗೆ ಮಾತನಾಡಿದರು.
ತಮ್ಮ ವೈದ್ಯ ತಂದೆಯವರು ಹೇಳಿದ ಮಾತನ್ನು ಉಲ್ಲೇಖಿಸಿ, ಓರ್ವ ಮಹಿಳಾ ರೋಗಿ ಸಾವನ್ನಪ್ಪಿ ದರೆ ಅದು ಆಸ್ಪತ್ರೆಗೆ ಒಂದು ಹೆಚ್ಚುವರಿ ಸಾವು ಮಾತ್ರ, ಆದರೆ ಅ ಮಹಿಳೆಯ ಮಕ್ಕಳು ತಾಯಿ ಯನ್ನು ಶಾಶ್ವತವಾಗಿ ಕಳೆದುಕೊಳ್ಳುತ್ತಾರೆ. ಎಂದು ಹೇಳಿ ಮಹಿಳೆಯರು ದೊಡ್ಡ ಪ್ರಮಾಣದಲ್ಲಿ ಗರ್ಭಕಂಠ ದ ಕ್ಯಾನ್ಸರ್ ಗೆ ಬಲಿಯಾಗುತ್ತಿರುವ ವಿಷಯವನ್ನು ಹೇಳಿ ಸರಕಾರ ಪ್ರತೀ ಹೆಣ್ಣು ಮಗುವಿಗೆ ವ್ಯಾಕ್ಸಿನ್ ಹಾಕಿಸುವ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸರಕಾರವನ್ನು ವಿನಂತಿಸಿದರು.
ಮೂರ್ತಿಯವರ ಸಮಯೋಚಿತ ಸಲಹೆ ವ್ಯರ್ಥವಾಗಲಿಲ್ಲ. ಸುಧಾ ಮೂರ್ತಿಯವರ ಮಹಿಳಾ ಕಾಳಜಿಯ ಈ ಭಾಷಣವನ್ನು ಸ್ವತಃ ಪ್ರಧಾನಿ ಮೋದಿಯವರೇ ಪ್ರಶಂಸಿಸಿದರು. ಇದೀಗ ಕೇಂದ್ರ ಸರಕಾರ 14 ವಯಸ್ಸಿನ ಒಳಗಿನ 1.15 ಕೋಟಿ ಹುಡುಗಿಯರಿಗೆ ದೇಶಾದ್ಯಂತ ಸಂಪೂರ್ಣ ಉಚಿತ ವಾಗಿ ಗರ್ಭಕಂಠದ ಕ್ಯಾನ್ಸರ್ ತಡೆಯುವ ಲಸಿಕೆ ಹಾಕಿಸುವ ಕಾರ್ಯಕ್ರಮ ಆರಂಭಿಸಿದೆ.
ಒಂದು ಉತ್ತಮ ಉದ್ದೇಶದ ಮಾತು ಹೇಗೆ ಕೆಲಸ ಮಾಡುತ್ತದೆ ಎನ್ನುವುದಕ್ಕೆ ಸುಧಾ ಮೂರ್ತಿ ಭಾಷಣವೇ ಉದಾಹರಣೆ. ಮೂರ್ತಿಯವರ ಕಳಕಳಿಯ ಮಾತುಗಳು ಮುಂದಿನ ಜನಾಂಗದ ಮಹಿಳೆಯರನ್ನು ಗರ್ಭಕಂಠದ ಕ್ಯಾನ್ಸರ್‌ನಿಂದ ಬಹುತೇಕ ಮುಕ್ತಗೊಳಿಸಲಿದೆ. ಸದುದ್ದೇಶದ ಮಾತುಗಳಿಗೆ ಬೆಲೆ ಬರುತ್ತದೆ ಎನ್ನುವುದಕ್ಕೆ 2024ರ ಚಳಿಗಾಲದ ಅಧಿವೇಶನದಲ್ಲಿ ಆಮ್ ಆದ್ಮಿ ಪಾರ್ಟಿಯಿಂದ ರಾಜ್ಯ ಸಭಾ ಸದಸ್ಯರಾಗಿದ್ದ ರಾಘವ್ ಚಡ್ಡಾ (ಇತ್ತೀಚೆಗೆ ಬಿಜೆಪಿ ಸೇರಿದ್ದಾರೆ) ಎತ್ತಿದ್ದ ವಿಷಯಕ್ಕೆ ಸರಕಾರವು ಗೌರವ ಕೊಟ್ಟ ಘಟನೆಯೇ ಉದಾಹರಣೆ.
ಭಾರತದ ವಿಮಾನ ನಿಲ್ದಾಣಗಳಲ್ಲಿ ನೀರಿನ ಬಾಟಲಿಯಿಂದ ಹಿಡಿದು ಕಾಫಿ, ಚಹಾ, ಊಟ, ತಿಂಡಿಗಳು ತುಂಬಾ ದುಬಾರಿಯಾಗಿವೆ. ಬಾಟಲಿ ನೀರಿನ ಬೆಲೆ 100 ರೂಪಾಯಿಗಳಾದರೆ, ಒಂದು ಕಪ್ ಕಾಫಿ /ಚಹಾ ಬೆಲೆ ರೂ. 250. ಉಪಾಹಾರ, ಊಟಗಳ ಬೆಲೆಯಂತೂ ಕೇಳುವಂತೆಯೇ ಇಲ್ಲ.
ಜನರು ವಿಮಾನ ನಿಲ್ದಾಣಗಳ ಒಳಗೆ ಅಗತ್ಯ ಊಟೋಪಚಾರಗಳಿಗಾಗಿ ಸಾವಿರಕ್ಕೂ ಹೆಚ್ಚು ರೂಪಾಯಿಗಳನ್ನು ವ್ಯಯಿಸಬೇಕಾಗುತ್ತದೆ. ಈ ವಿಷಯವನ್ನು ರಾಘವ್ ಚಡ್ಡಾ ರಾಜ್ಯ ಸಭೆಯಲ್ಲಿ ಎತ್ತಿ ಸರಕಾರವು ಕೈಗೆಟಕುವ ದರದಲ್ಲಿ ಕಾಫಿ ಚಹಾ ಹಾಗೂ ಲಘು ಉಪಹಾರ ಕೊಡಬೇಕು ಎಂದು ಸಲಹೆ ನೀಡಿದ್ದರು.
ಚಡ್ಡಾ ಸಲಹೆಯಿಂದ ಪ್ರಭಾವಿತಗೊಂಡ ಕೇಂದ್ರ ವಿಮಾನಯಾನ ಮಂತ್ರಾಲಯವು ವಿಮಾನ ನಿಲ್ದಾಣಗಳಲ್ಲಿ ‘ಉಡಾನ್ ಯಾತ್ರಿ ಕೆಫೆ’ಗಳನ್ನು ಆರಂಭಿಸಿ, ಯಾತ್ರಿಕರಿಗೆ ಅಗ್ಗದ ದರದಲ್ಲಿ ಕಾಫಿ, ಚಹಾ, ನೀರು, ಲಘು ಉಪಾಹಾರಗಳನ್ನು ನೀಡಲು ಆರಂಭಿಸಿದೆ. ಉಡಾನ್ ಯಾತ್ರಿ ಕೆಫೆಯಲ್ಲಿ 10 ರುಪಾಯಿಗೆ ಒಂದು ಬಾಟಲ್ ನೀರು ಅಥವಾ ಚಹಾ, 20 ರುಪಾಯಿಗೆ ಕಾಫಿ, 20 ರುಪಾಯಿಗೆ ಸಮೋಸ ಅಥವಾ ವಡೆ, 30 ರುಪಾಯಿಗೆ ಇಡ್ಲಿ ಸಾಂಬಾರ್ ಅಥವಾ ಸ್ಯಾಂಡ್ವಿಚ್ ದೊರಕುತ್ತಿದೆ.
ಕೋಲ್ಕೊತಾ, ಚೆನ್ನೈ, ಅಹಮ್ಮದಾಬಾದ್, ಮುಂಬೈ ಟರ್ಮಿನಲ್ ೧, ವಾರಣಾಸಿ, ಹೈದರಾಬಾದ್, ಮಂಗಳೂರು, ತಿರುವನಂತಪುರಂ ಮೊದಲಾದ 24 ವಿಮಾನ ನಿಲ್ದಾಣಗಳಲ್ಲಿಂದು ಉಡಾನ್ ಯಾತ್ರಿ ಕೆಫೆಗಳು ಕಾರ್ಯಾಚರಿಸುತ್ತಿವೆ (ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಇನ್ನೂ ಆರಂಭವಾಗಿಲ್ಲ). ಮುಂದಿನ ದಿನಗಳಲ್ಲಿ ದೇಶದ ಎಲ್ಲ ನಾಗರಿಕ ವಿಮಾನ ನಿಲ್ದಾಣಗಳಲ್ಲಿ ಉಡಾನ್ ಯಾತ್ರಿ ಕೆಫೆಗಳು ಕೈಗೆಟಕುವ ದರದಲ್ಲಿ ಆಹಾರವನ್ನು ಯಾತ್ರಿಕರಿಗೆ ನೀಡಲಿದೆ.
ಇಂದು ವಿಮಾನಯಾನ ಕೇವಲ ಶ್ರೀಮಂತರ ಬಳಕೆಯ ವಿಷಯವಾಗಿ ಉಳಿದಿಲ್ಲ. ಮಧ್ಯಮ ವರ್ಗದ ಭಾರತವಿಂದು ವಿಮಾನಗಳನ್ನೂ ಹೇರಳವಾಗಿ ಬಳಸುತ್ತಿದೆ. ಕಳೆದ ವರ್ಷ 16.69 ಕೋಟಿ ಮಂದಿ ಭಾರತೀಯರು ದೇಶೀಯ ವಿಮಾನಗಳಲ್ಲಿ ಪ್ರಯಾಣಿಸಿದ್ದರು!
ಈ ವರ್ಷದ ಮಾರ್ಚ್ ತಿಂಗಳ ಬಜೆಟ್ ಅಽವೇಶನದ ಸಂದರ್ಭದಲ್ಲಿ ಟೆಲಿಕಾಂ ಕಂಪೆನಿಗಳು 30 ದಿನಗಳ ರೀಚಾರ್ಜ್ ಬದಲು 28 ದಿನಗಳ ರೀಚಾರ್ಜ್ ಪ್ಯಾಕೇಜ್‌ಗಳನ್ನು ಮಾತ್ರ ನೀಡಿ ವರ್ಷದಲ್ಲಿ 12ರ ಬದಲು 13 ಬಾರಿ ರೀಚಾರ್ಜ್ ಮಾಡುವಂತೆ ಮಾಡುತ್ತಿರುವ ಹಗಲು ದರೋಡೆಯ ವಿಷಯ ವನ್ನು ಪ್ರಸಾಪಿಸಿದ್ದರು. ಅದೇ ರೀತಿ ಟೆಲಿಕಾಂ ಕಂಪೆನಿಗಳು ಇಂಟರ್ನೆಟ್ ಅವಶ್ಯಕತೆ ಇಲ್ಲದವರಿಗೂ ಡೇಟಾ ಇರುವ ಪ್ಯಾಕೇಜ್‌ಗಳನ್ನು ಕೊಡುತ್ತಿರುವ ವ್ಯವಸ್ಥೆಯು ಬದಲಾಗಬೇಕೆಂದೂ ಆಗ್ರಹಿಸಿದ್ದರು.
ಇದೀಗ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾವು (ಟ್ರಾಯ್) ಟೆಲಿಕಾಂ ಕನ್ಸ್ಯುಮರ್ಸ್ ಪ್ರೊಟೆಕ್ಷನ್ ರೆಗ್ಯುಲೇಷನ್ಸ್ (ಟೆಲಿಕಾಂ ಗ್ರಾಹಕರ ಹಿತರಕ್ಷಣಾ ನಿಯಂತ್ರಣಗಳು) ಜಾರಿ ಮಾಡಿದ್ದು, ಕಂಪೆನಿಗಳಿಗೆ ಕಡ್ಡಾಯವಾಗಿ 30 ದಿನಗಳ ರೀಚಾರ್ಜ್ ಪ್ಯಾಕೇಜ್ ಗಳನ್ನು ಹಾಗೂ ಇಂಟರ್‌ನೆಟ್ ಅವಶ್ಯಕತೆ ಇಲ್ಲದವರಿಗೆ ಬರಿ ಕರೆಗಳನ್ನು ಮಾಡುವ ಸೌಲಭ್ಯವುಳ್ಳ ಪ್ಯಾಕೇಜ್‌ಗಳನ್ನು ಕೊಡಲು ಸೂಚಿಸಿದೆ.
ರಾಘವ್ ಚಡ್ಡಾ ಜನಸಾಮಾನ್ಯರ ಹಿತವನ್ನು ಗಮನದಲ್ಲಿಟ್ಟುಕೊಂಡು ಸಂಸತ್ತಿನಲ್ಲಿ ಎತ್ತಿದ ಪ್ರಶ್ನೆಗಳು ಈ ಜನತೆಯ ಹಿತಾಸಕ್ತಿಗಳನ್ನು ಕಾಪಾಡುತ್ತಿವೆ. ಮಾತುಗಳ ಹಿಂದೆ ಸತ್ಯ ಮತ್ತು ದೃಢತೆ ಇದ್ದರೆ ಆ ಮಾತುಗಳೂ ತೂಕವನ್ನು ಪಡೆಯುತ್ತವೆ. ಇಂದಿನ ಜಾಗತಿಕ ಜಿಯೋಪೊಲಿಟಿಕ್ಸ್ʼಗಳ ಸವಾಲಿನಲ್ಲಿ ಭಾರತದ ವಿದೇಶಾಂಗ ಮಂತ್ರಿಯ ಜವಾಬ್ದಾರಿ ಬಹಳ ದೊಡ್ಡದು.
ಭಾರತದ ವಿದೇಶಾಂಗ ವ್ಯವಹಾರಗಳ ಸಚಿವರಾದ ಎಸ್.ಜೈಶಂಕರ್ ಪಾಶ್ಚಿಮಾತ್ಯ ದೇಶಗಳ ದ್ವಂದ್ವ ನಿಲುವುಗಳು, ಭೌಗೋಲಿಕ-ರಾಜಕೀಯದ ಕಪಟತನ ಮತ್ತು ಭಾರತದ ಸ್ವತಂತ್ರ ವಿದೇಶಾಂಗ ನೀತಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ನೀಡುವ ಖಚಿತ, ಸ್ಪಷ್ಟ ಹಾಗೂ ದೃಢವಾದ ಪ್ರತಿಕ್ರಿಯೆಗಳಿಗೆ ಹೆಸರುವಾಸಿಯಾಗಿದ್ದಾರೆ.
ಅವರು ಕೊಡುವ ಉತ್ತರಗಳನ್ನು ಸತ್ಯದ ಬಾಂಬುಗಳು ಎಂದು ಬಣ್ಣಿಸಲಾಗುತ್ತಿದೆ. ಸ್ಲೋವಾಕಿಯಾ ದಲ್ಲಿ ನಡೆದ ಗ್ಲೊಬ್ ಸೆಕ್ ಬ್ರಾಟಿಸ್ಲಾವಾ ಫಾರಂನಲ್ಲಿ ಉಕ್ರೇನ್- ರಷ್ಯಾ ಸಂಘರ್ಷದ ನಡುವೆ ಭಾರತವು ರಷ್ಯಾದಿಂದ ತೈಲ ಹಾಗು ಶಸ್ತ್ರಾಸ್ತ್ರಗಳನ್ನು ತರಿಸುತ್ತಿರುವುದು ಸರಿಯೇ ಎನ್ನುವ ಪ್ರಶ್ನೆಯು ಬಂದಾಗ ಯುರೋಪ್ ತನ್ನ ಸಮಸ್ಯೆಗಳೇ ಜಗತ್ತಿನ ಸಮಸ್ಯೆಗಳು, ಆದರೆ ಜಗತ್ತಿನ ಸಮಸ್ಯೆಗಳು ತನ್ನ ಸಮಸ್ಯೆಗಳಲ್ಲ ಎನ್ನುವ ಮನಸ್ಥಿತಿಯಿಂದ ಹೊರ ಬರಬೇಕಿದೆ ಎಂದು ನೇರವಾಗಿ ಹೇಳಿ ಯೂರೋಪಿನ ಮನಸ್ಥಿತಿಯನ್ನು ಟೀಕಿಸಿದ್ದರು.
ಭಾರತವು ರಷ್ಯಾದಿಂದ ತೈಲವನ್ನು ಖರೀದಿಸುತ್ತಿರುವುದು ಉಕ್ರೇನಿನ ವಿರುದ್ಧ ಯುದ್ಧ ಮಾಡಲು ರಷ್ಯಾಗೆ ಸಹಾಯ ಮಾಡಿದಂತಾಗುತ್ತಿದೆ ಎಂಬ ಆರೋಪಗಳಿಗೆ ಉತ್ತರಿಸಿದ ಜೈಶಂಕರ್, ಯಾವುದೇ ಯುರೋಪಿಯನ್ ದೇಶಗಳ ಮೇಲೆ ಭಾರತದ ಶಸಾಸಗಳಿಂದ ದಾಳಿಯಾಗಿಲ್ಲ, ಆದರೆ ಭಾರತದ ವಿರುದ್ಧ ಯುರೋಪಿಯನ್ ಶಸ್ತ್ರಾಸ್ತ್ರಗಳು ಬಳಕೆಯಾಗುತ್ತಿಲ್ಲ ಎಂದು ಹೇಳಲು ಸಾಧ್ಯವಾಗುತ್ತಿದ್ದರೆ ಚೆನ್ನಾಗಿತ್ತು ಎಂದು ಹೇಳುವ ಮೂಲಕ, ಯುರೋಪ್ ದೇಶಗಳು ಶಸ್ತ್ರಾಸ್ತ್ರಗಳನ್ನು ಪಾಕಿಸ್ತಾನಕ್ಕೆ ಮಾರಾಟ ಮಾಡುತ್ತಿರುವುದನ್ನು, ಅದೇ ಶಸ್ತ್ರಾಸ್ತ್ರಗಳು ಭಾರತದ ವಿರುದ್ಧ ಬಳಕೆಯಾಗುತ್ತಿರುವು ದನ್ನು ತಿಳಿಸಿ ಯುರೋಪ್ ದೇಶಗಳ ಇಬ್ಬಂದಿತನವನ್ನು ಬಯಲು ಮಾಡಿದ್ದರು.
ವಿರೋಧ ಪಕ್ಷಗಳ ನಾಯಕರಲ್ಲಿ ಕಾಂಗ್ರೆಸ್ ಪಕ್ಷದ ಶಶಿ ತರೂರ್ ವಿಭಿನ್ನವಾಗಿ ನಿಲ್ಲುತ್ತಾರೆ. ದೇಶದ ಹಿತಾಸಕ್ತಿಯ ವಿಷಯವು ಬಂದಾಗ ಅವರು ಪಕ್ಷಾತೀತ ವ್ಯಕ್ತಿಯಂತೆ ಭಾಸವಾಗುತ್ತಾರೆ. 2015ರ ಮೇ ತಿಂಗಳಲ್ಲಿ ಆಕ್ಸ್ʼಫರ್ಡ್ ಯೂನಿಯನ್‌ನಲ್ಲಿ ನಡೆದ ಚರ್ಚೆಯೊಂದರಲ್ಲಿ ಬ್ರಿಟನ್ ಹೇಗೆ ಭಾರತ ವನ್ನು ಲೂಟಿ ಮಾಡಿತ್ತು ಎನ್ನುವ ಕುರಿತು ಅವರು ಅಂಕಿ ಅಂಶಗಳ ಸಮೇತ ಮಾಡಿದ್ದ ಭಾಷಣವು ತುಂಬಾ ಪ್ರಸಿದ್ಧವಾಗಿದೆ.
ದೇಶದ ವಿದೇಶಾಂಗ ನೀತಿಯು ಕೇವಲ ಭಾಜಪ ಅಥವಾ ಕಾಂಗ್ರೆಸ್ ಪಕ್ಷಗಳಿಗೆ ಮಾತ್ರ ಸಂಬಂಧ ಪಟ್ಟ ವಿಷಯವಲ್ಲ. ಅದು ದೇಶದ ಹಿತಾಸಕ್ತಿಗೆ ಸಂಬಂಧಪಟ್ಟ ವಿಷಯ ಎಂದು ಅವರು ಪ್ರತಿಪಾದಿಸುತ್ತಾರೆ. ಆಪರೇಶನ್ ಸಿಂದೂರ್ ನಂತರ ದೇಶವನ್ನು ಸಮರ್ಥಿಸಿಕೊಳ್ಳಲು ಅಮೆರಿಕಾ ಸೇರಿದಂತೆ 5 ದೇಶಗಳಿಗೆ ಭಾರತ ಸರಕಾರವು ಕಳುಹಿಸಿದ ಸರ್ವ ಪಕ್ಷಗಳ ನಿಯೋಗದ ನೇತೃತ್ವವನ್ನು ವಹಿಸಿದ್ದ ಶಶಿ ತರೂರ್ ಭಾರತದ ನಿಲುವನ್ನು ಸಮರ್ಥವಾಗಿ ಮಂಡಿಸಿ ತಮ್ಮ ಕರ್ತವ್ಯವನ್ನು ಬಹಳ ಚೆನ್ನಾಗಿ ನಿಭಾಯಿಸಿದ್ದರು.
ಸಂಸತ್ತಿನಲ್ಲಿ ವಿಪಕ್ಷಗಳು ಗದ್ದಲ ಎಬ್ಬಿಸಿ ಕಲಾಪಗಳನ್ನು ವ್ಯರ್ಥಗೊಳಿಸುತ್ತಿರುವ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ ತರೂರ್, ‘ಇಂತಹ ನಡೆಯಿಂದ ವಿಪಕ್ಷಗಳು ತಮ್ಮನ್ನು ತಾವೇ ಘಾಸಿಗೊಳಿಸುತ್ತಿವೆ’ ಎಂದು ಹೇಳಿದ್ದಾರೆ. ಇತ್ತೀಚೆಗೆ ಭಾರತದಲ್ಲಿ ಯಶಸ್ವಿಯಾಗಿ ಜರಗಿದ ಬ್ರಿಕ್ಸ್ ರಾಷ್ಟ್ರಗಳ ಸಮ್ಮೇಳನವನ್ನು ಕಾಂಗ್ರೆಸ್ ಪಕ್ಷವು ವಿಫಲ, ನಿರುಪಯುಕ್ತ ಎಂದೆ ಹೀಗಳೆಯುತ್ತಿದ್ದ ಸಂದರ್ಭದಲ್ಲಿ 2026ರ ಬ್ರಿಕ್ಸ್ ಶೃಂಗ ಸಭೆಯು ವಿವಿಧ ದೇಶಗಳನ್ನು ರಾಜತಾಂತ್ರಿಕವಾಗಿ ಒಗ್ಗೂಡಿ ಸುವ ಭಾರತದ ಸಾಮರ್ಥ್ಯವನ್ನು ಪ್ರದರ್ಶಿಸುವ ಅತ್ಯಂತ ಪ್ರತಿಷ್ಠಿತ ವಿಷಯವಾಗಿದೆ ಎಂದು ತರೂರ್ ಬಣ್ಣಿಸಿ ದೇಶದ ಪರವಾಗಿ ನಿಂತರು.
ಇಂತಹ ತೂಕದ ಮಾತುಗಳು ತರೂರ್ ಅವರ ವ್ಯಕ್ತಿತ್ವದ ತೂಕವನ್ನೂ ಹೆಚ್ಚಿಸಿವೆ. ಮಾತಿನಿಂದ ನಗೆ ನುಡಿಯು, ಮಾತಿನಿಂ ಹಗೆ ಕೊಲೆಯು ಎನ್ನುವ ಸರ್ವಜ್ಞನ ವಚನವು ಮಾತನ್ನು ನಾವು ಬಹಳ ಜಾಗರೂಕತೆಯಿಂದ ಬಳಸಬೇಕು ಎಂದು ಸೂಚಿಸುತ್ತದೆ. ಮಾತು ವ್ಯಕ್ತಿಯನ್ನು ಆಕಾಶದೆತ್ತರಕ್ಕೆ ಏರಿಸಲೂಬಹುದು, ಪಾತಾಳಕ್ಕೆ ಇಳಿಸಲೂಬಹುದು. ಒರಟಾಗಿ ಮಾತನಾಡಬಾರದು, ಒರಟಾಗಿ ನುಡಿಯುತ್ತಿದ್ದರೆ ಮನಸು ಒರಟಾಗುತ್ತದೆ, ಮನಸು ಒರಟಾದರೆ ಬುದ್ಧಿಯೂ ಒರಟಾಗುತ್ತದೆ ಎಂದು ಶ್ರೀರಾಮಕೃಷ್ಣ ಪರಮಹಂಸರ ಪತ್ನಿ ಮಾತೆ ಶಾರದಾಮಣಿ ದೇವಿ ಹೇಳುತ್ತಿದ್ದರಂತೆ.
ನಮ್ಮ ವ್ಯಕ್ತಿತ್ವ ಮತ್ತು ವರ್ತನೆಗಳು ಮಾತಿಗೆ ತೂಕ ತರುವಂತಿರಲಿ. ಸಾರ್ವಜನಿಕ ಜೀವನದಲ್ಲಿರು ವವರು ಅದರಲ್ಲೂ ರಾಜಕಾರಣಿಗಳು ಸಕಾರಾತ್ಮಕ ಮಾತುಗಳನ್ನಾಡಿದರೆ ಅದು ರಚನಾತ್ಮಕ ರಾಜಕೀಯಕ್ಕೆ ನಾಂದಿ ಹಾಡಬಹುದು.