Ganesh Bhat Column: ನಮ್ಮ ನಡುವಿನ ಶೇ.3 ಜನರ ನೋವಿನ ಬಗ್ಗೆ ನಮಗೇನು ಗೊತ್ತು ?
ನಮ್ಮ ದೇಶದಲ್ಲಿರುವ ಜನರಲ್ಲಿ ಮೂರು ಶೇಕಡಾ ಮಂದಿ ವಿವಿಧ ರೀತಿಯ ದಿವ್ಯಾಂಗರಾಗಿದ್ದಾರೆ. ದೈಹಿಕ ನ್ಯೂನತೆ, ಬೌದ್ಧಿಕ ನ್ಯೂನತೆ, ದೃಷ್ಟಿ ದೋಷ, ವಾಕ್ ಶ್ರವಣ ದೋಷ, ಆಟಿಸಂ ಮೊದಲಾದ 21 ರೀತಿಯ ದಿವ್ಯಾಂಗತೆಗಳನ್ನು ಗುರುತಿಸಲಾಗಿದೆ. ಇವರಿಗೆ ಇತರರಂತೆಯೇ ಬದುಕುವ ಹಾಗೂ ಅಭಿವೃದ್ಧಿ ಹೊಂದುವ ಸಾಂವಿಧಾನಿಕ ಹಕ್ಕುಗಳು ಇವೆ. ಇವರ ಬೆಂಬಲಕ್ಕೆ ದಿವ್ಯಾಂಗ ವ್ಯಕ್ತಿಗಳ ಹಕ್ಕುಗಳ ಕಾಯಿದೆ 2016 (ರೈಟ್ಸ್ ಆಫ್ ಪರ್ಸನ್ಸ್ ವಿಥ್ ಡಿಸಬಿಲಿಟೀಸ್ ಆಕ್ಟ್) ಕಾನೂನುಗಳು ಕೂಡಾ ಇವೆ.
-
ದಿವ್ಯಕ್ಷಣ
ಗಣೇಶ್ ಭಟ್, ವಾರಾಣಸಿ
ಒಬ್ಬ ಬಾಲಕನು ಯಾವುದೊ ಒಂದು ದುಬಾರಿ ಬ್ರ್ಯಾಂಡೆಡ್ ಶೂಗಳನ್ನು ಕೊಡಿಸಬೇಕೆಂದು ತನ್ನ ಅಮ್ಮನನ್ನು ಸದಾ ಪೀಡಿಸುತ್ತಿದ್ದನಂತೆ. ಅಮ್ಮ ಒಂದು ದಿನ ರಸ್ತೆ ಪಕ್ಕದಲ್ಲಿ ತೆವಳುತ್ತಾ ಸಾಗುತ್ತಿದ್ದ ಕಾಲಿಲ್ಲದ ವ್ಯಕ್ತಿಯನ್ನು ಮಗನಿಗೆ ತೋರಿಸಿದಳಂತೆ. ಆ ನಂತರ ಆ ಬಾಲಕನೆಂದೂ ಇಂಥದ್ದೇ ಶೂ ಬೇಕೆಂದು ಹಠ ಹಿಡಿಯಲಿಲ್ಲವಂತೆ. ನಮ್ಮ ದೇಹದ ಎಲ್ಲ ಅವಯವಗಳು ಹಾಗು ಇಂದ್ರಿಯಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿದ್ದರೂ ಯಾವುದೊ ಒಂದು ಸಣ್ಣ ಪುಟ್ಟ ಕೊರತೆ ಆಸೆಗಳಾಗಿ, ಹತಾಶೆಗಳಾಗಿ ನಮ್ಮನ್ನು ಕಾಡುತ್ತವೆ. ಹೀಗಿರುವಾಗ ನಮ್ಮ ನಡುವೆಯೇ ಇರುವ ನಡೆಯಲಾಗದ, ದೈಹಿಕ ಅಥವಾ ಬೌದ್ಧಿಕ ಅಸಮರ್ಥರ, ಮಾತನಾಡಲಾಗದ, ಕೇಳಿಸಿಕೊಳ್ಳಲಾಗದ ಜನರ ಸಮಸ್ಯೆಗಳ ತೀವ್ರತೆಯ ಬಗ್ಗೆ ಊಹಿಸಿ ನೋಡೋಣ.
ನಮ್ಮ ದೇಶದಲ್ಲಿರುವ ಜನರಲ್ಲಿ ಮೂರು ಶೇಕಡಾ ಮಂದಿ ವಿವಿಧ ರೀತಿಯ ದಿವ್ಯಾಂಗರಾಗಿದ್ದಾರೆ. ದೈಹಿಕ ನ್ಯೂನತೆ, ಬೌದ್ಧಿಕ ನ್ಯೂನತೆ, ದೃಷ್ಟಿ ದೋಷ, ವಾಕ್ ಶ್ರವಣ ದೋಷ, ಆಟಿಸಂ ಮೊದಲಾದ 21 ರೀತಿಯ ದಿವ್ಯಾಂಗತೆಗಳನ್ನು ಗುರುತಿಸಲಾಗಿದೆ. ಇವರಿಗೆ ಇತರರಂತೆಯೇ ಬದುಕುವ ಹಾಗೂ ಅಭಿವೃದ್ಧಿ ಹೊಂದುವ ಸಾಂವಿಧಾನಿಕ ಹಕ್ಕುಗಳು ಇವೆ. ಇವರ ಬೆಂಬಲಕ್ಕೆ ದಿವ್ಯಾಂಗ ವ್ಯಕ್ತಿಗಳ ಹಕ್ಕುಗಳ ಕಾಯಿದೆ 2016 (ರೈಟ್ಸ್ ಆಫ್ ಪರ್ಸನ್ಸ್ ವಿಥ್ ಡಿಸಬಿಲಿಟೀಸ್ ಆಕ್ಟ್) ಕಾನೂನುಗಳು ಕೂಡಾ ಇವೆ. ಸಾಮಾನ್ಯವಾಗಿ ಸಮಾಜದ ವಿವಿಧ ರೀತಿಯ ನಿರ್ಲಕ್ಷಿತ ಹಾಗೂ ಶೋಷಿತ ಜನರು ಒಟ್ಟು ಸೇರಿ ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಾರೆ. ಆದರೆ ದಿವ್ಯಾಂಗ ಜನರಿಗೆ ತಮ್ಮ ದೈಹಿಕ ಅಥವಾ ಬೌದ್ಧಿಕ ಅಸಾಮರ್ಥ್ಯದಿಂದಾಗಿ ಒಟ್ಟುಸೇರಲು ಹಾಗು ತಮ್ಮ ಹಕ್ಕುಗಳಿಗಾಗಿ ಹೋರಾ ಡಲು ಸಾಧ್ಯವಾಗುತ್ತಿಲ್ಲ.
ಹೀಗಾಗಿ ದಿವ್ಯಾಂಗ ಜನರು ತಮ್ಮ ಹಕ್ಕುಗಳಿಂದ ವಂಚಿತರಾಗಿದ್ದಾರೆ. ಮಕ್ಕಳಲ್ಲಿ ಇರಬಹುದಾದ ವಿಕಲತೆಯು ಆರಂಭಿಕ ಹಂತದ ಪತ್ತೆಹಚ್ಚಲ್ಪಟ್ಟರೆ ಅವರಿಗಾಗಿ ಆ ಹಂತದ ವಿವಿಧ ರೀತಿಯ ತರಬೇತಿ ಹಾಗು ಚಿಕಿತ್ಸೆಗಳನ್ನು ಕೊಟ್ಟು ಅವರ ನ್ಯೂನತೆಯ ತೀವ್ರತೆಯನ್ನು ಕಡಿಮೆ ಮಾಡಬ ಹುದು. ನಮ್ಮ ಸರಕಾರಿ ತಾಲೂಕು ಅಥವಾ ಜಿಲ್ಲಾ ಆಸ್ಪತ್ರೆಗಳು ಮಕ್ಕಳಲ್ಲಿರಬಹುದಾದ ನ್ಯೂನತೆಯನ್ನು ಪತ್ತೆ ಹಚ್ಚುವ ಅಽಕೃತ ಕೇಂದ್ರಗಳಾದರೂ ಅವುಗಳು ಸಮರ್ಪಕ ತಜ್ಞರ ಹಾಗೂ ಮೂಲಭೂತ ಸೌಕರ್ಯಗಳ ಕೊರತೆಯನ್ನು ಎದುರಿಸುತ್ತಿವೆ.
ಇದನ್ನೂ ಓದಿ: Ganesh Bhat Column: ಭಾರತದ ಜೆನ್ ಝೀ ಮುಂದಿನ ದಾರಿ ಯಾವುದು?
ಇದರಿಂದಾಗಿ ಆರಂಭಿಕ ಹಂತದ ಮಕ್ಕಳಲ್ಲಿರುವ ವೈಕಲ್ಯವನ್ನು ಪತ್ತೆ ಹಚ್ಚುವುದು ಬಹಳ ತಡವಾಗುತ್ತಿದೆ. ಹೀಗಾಗಿ ಭಾರತದಲ್ಲಿ ಬಹುತೇಕ ದಿವ್ಯಾಂಗ ಮಕ್ಕಳು ಅವರ 3-4 ವರ್ಷ ವಯಸ್ಸಿನ ನಂತರವೇ ಪತ್ತೆಹಚ್ಚ ಲ್ಪಡುತ್ತಾರೆ. ಪತ್ತೆ ಹಚ್ಚುವುದೇ ತಡವಾದಾಗ ಸೂಕ್ತ ಚಿಕೆತ್ಸೆಯೂ ತಡವಾಗುತ್ತದೆ. ವಿಳಂಬವಾಗಿ ಲಭಿಸುವ ತರಬೇತಿಗಳು ಪರಿಣಾಮಕಾರಿಯಾಗಿರುವುದಿಲ್ಲ.
ಭಾರತದಲ್ಲಿ ಕೇವಲ 10% ದಿವ್ಯಾಂಗ ಮಕ್ಕಳಿಗೆ ಮಾತ್ರ ಶೀಘ್ರ ಆರಂಭಿಕ ಹಂತದ ತರಬೇತಿಗಳು ಮತ್ತು ಚಿಕಿತ್ಸೆಗಳು ಲಭಿಸುತ್ತಿವೆ. ಈ ಮಕ್ಕಳಿಗೆ ಅವರ ಅವಶ್ಯಕತೆಗಳಿಗೆ ಅನುಗುಣವಾಗಿ ಮಾತಿನ ತರಬೇತಿ, ವರ್ತನೆಯ ತರಬೇತಿ, ಆಕ್ಯುಪೇಷನಲ್ ತರಬೇತಿ, ಫಿಸಿಯೋಥೆರಪಿ ಮೊದಲಾದ ತರಬೇತಿಗಳನ್ನು ಒದಗಿಸಬೇಕಾಗುತ್ತದೆ.
ನಮ್ಮ ದೇಶದಲ್ಲಿ ಈ ಎಲ್ಲ ಸೌಲಭ್ಯಗಳನ್ನು ಹೊಂದಿರುವ ಆರಂಭಿಕ ಹಂತದ ಚಿಕಿತ್ಸೆ ಹಾಗೂ ತರಬೇತಿಗಳನ್ನು ಕೊಡುವ ಸಂಸ್ಥೆಗಳ ಭಾರೀ ಕೊರತೆಯಿದೆ. ಉದಾಹರಣೆಗೆ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಮಾತ್ರ ಸರಕಾರವು ನಡೆಯಿಸುವ ಅರಂಭಿಕ ಹಂತದ ಚಿಕಿತ್ಸಾ (ಡಿಇಐಸಿ) ಕೇಂದ್ರ ಗಳಿವೆ.
ಇನ್ನು ಖಾಸಗಿ ಸಂಸ್ಥೆಗಳು ಹಾಗೂ ಸರಕಾರೇತರ ಸಂಸ್ಥೆಗಳು ಆರಂಭಿಕ ಹಂತದ ತರಬೇತಿ ಕೇಂದ್ರಗಳನ್ನು ನಡೆಸುತ್ತಿವೆಯಾದರೂ ಇದಕ್ಕಾಗಿ ಹೆತ್ತವರು ಭಾರೀ ಪ್ರಮಾಣದ ಹಣ ತೆರಬೇಕಾಗು ತ್ತದೆ. ಬಹಳಷ್ಟು ಸಂಸ್ಥೆಗಳು ಹೆತ್ತವರ ಅಸಹಾಯಕತೆಯನ್ನು ದುರುಪಯೋಗಪಡಿಸಿಕೊಂಡು ವಿಶೇಷ ಚೇತನ ಮಕ್ಕಳ ಶಿಕ್ಷಣವನ್ನು ಹಣ ಮಾಡುವ ದಂಧೆಯನ್ನಾಗಿ ಪರಿವರ್ತಿಸಿಕೊಂಡಿವೆ. ಬಹಳಷ್ಟು ಹೆತ್ತವರು ದುಬಾರಿ ಫೀಯನ್ನು ತೆರಲಾಗದೆ ಮಕ್ಕಳ ಆರಂಭಿಕ ಹಂತದ ತರಬೇತಿ ಯನ್ನು ಅರ್ಧದ ಮೊಟಕುಗೊಳಿಸುತ್ತಾರೆ. ಭಿನ್ನ ಸಾಮರ್ಥ್ಯದ ಮಕ್ಕಳಿಗೆ ಚಿಕಿತ್ಸೆ ಕೊಟ್ಟು ಅವರನ್ನು 100% ಸಾಮಾನ್ಯರನ್ನಾಗಿ ಮಾಡುತ್ತೇವೆ ಎಂದು ಸುಳ್ಳು ಭರವಸೆಯನ್ನು ಕೊಟ್ಟು ಹೆತ್ತವರಿಂದ ಭಾರಿ ಹಣವನ್ನು ಪೀಕಿಸುವ ಆಸ್ಪತ್ರೆಗಳೂ ಇವೆ.
ಆಟಿಸಂಗೆ ಚಿಕಿತ್ಸೆಯಾಗಿ ಸ್ಟೆಮ್ ಸೆಲ್ ಥೆರಪಿಯನ್ನು ಕೊಡುವುದು ಕಾನೂನು ಬಾಹಿರ ಎಂದು ಕೆಲವು ತಿಂಗಳುಗಳ ಹಿಂದೆ ಸುಪ್ರೀಂ ಕೋರ್ಟ್ ತೀರ್ಪು ಕೊಟ್ಟಿದೆ. ಇಂಡಿಯನ್ ಕೌನ್ಸಿಲ್ ಫಾರ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಮತ್ತು ನ್ಯಾಷನಲ್ ಮೆಡಿಕಲ್ ಕಮಿಷನ್‌ಗಳು ಕೂಡಾ ಸ್ಟೆಮ್ ಸೆಲ್ ಥೆರಪಿಯನ್ನು ಅವೈeನಿಕ ಎಂದಿವೆ. ಆದರೂ ಸ್ಟೆಮ್ ಸೆಲ್ ಥೆರಪಿಯ ಮೂಲಕ ಆಟಿಸಂ ವಾಸಿ ಮಾಡುತ್ತೇವೆ ಎಂದು ಕೆಲವು ಆಸ್ಪತ್ರೆಗಳು ಜಾಹಿರಾತನ್ನು ಕೊಟ್ಟು ಹೆತ್ತವರನ್ನು ವಂಚಿಸು ತ್ತಿವೆ.
ಇತ್ತೀಚೆಗೆ ಪರಿಚಿತರ ಗೆಳೆಯರು ಇಂತಹ ಜಾಹಿರಾತಿಗೆ ಮರುಳಾಗಿ ತಮ್ಮ ಆಟಿಸಂ ಬಾಧಿತ ಮಗು ವನ್ನು ಸ್ಟೆಮ್ ಸೆಲ್ ಥೆರಪಿಗಾಗಿ ಮುಂಬಯಿಯ ಆಸ್ಪತ್ರೆಯೊಂದಕ್ಕೆ ಸೇರಿಸಿದ್ದರು. ಚಿಕಿತ್ಸೆಯ ಮುನ್ನ ದಿನ ಹೆತ್ತವರು ಚಿಕಿತ್ಸೆಯ ಪರಿಣಾಮದ ಬಗ್ಗೆ ಸಂಶಯ ಹೊಂದಿ ಗೆಳೆಯರ ಮೂಲಕ ನಮ್ಮ ಸಂಸ್ಥೆಯನ್ನು ಸಂಪರ್ಕಿಸಿದರು. ನಾವು ಅವರಿಗೆ ಸುಪ್ರೀಂ ಕೋರ್ಟ್ ತೀರ್ಪು ಹಾಗು ಐಸಿಎಂಆರ್ ವರದಿಯ ಬಗ್ಗೆ ತಿಳಿಸಿ ಸ್ಟೆಮ್ ಸೆಲ್ ಥೆರಪಿಯು ಆಟಿಸಂ ವಿಷಯದಲ್ಲಿ ಪರಿಣಾಮ ಕಾರಿಯಲ್ಲ ಎಂಬುದನ್ನು ಹೆತ್ತವರಿಗೆ ಮನದಟ್ಟು ಮಾಡಿಸುವಲ್ಲಿ ಯಶಸ್ವಿಯಾದೆವು.
ಹೆತ್ತವರು ಆ ದಿನವೇ ಮಗುವನ್ನು ಡಿಸ್ಚಾರ್ಜ್ ಮಾಡಿಸಿ ಮನೆಗೆ ತೆರಳಿದರು. ನಮ್ಮ ಸಂಸ್ಥೆಯ ಸಂಪರ್ಕಕ್ಕೆ ಬಂದುದರಿಂದ ಆ ಮಗುವೇನೋ ಮೋಸದಿಂದ ಬಚಾವಾಯಿತು. ಆದರೆ ನಕಲಿ ಚಿಕಿತ್ಸೆಗಳಿಗೆ ಬಲಿಯಾಗುವ ಮಕ್ಕಳ ಸಂಖ್ಯೆ ಎಷ್ಟೋ!
ದಿವ್ಯಾಂಗ ಮಕ್ಕಳ ಪ್ರಾಥಮಿಕ, ಪ್ರೌಢ ಹಾಗೂ ಉನ್ನತ ಶಿಕ್ಷಣ ಎನ್ನುವುದು ಬಹು ದೊಡ್ಡ ಸವಾಲು. ವಿಶೇಷ ಮಕ್ಕಳಿಗೆ ಸಮನ್ವಯ ಶಿಕ್ಷಣದ ಮೂಲಕ ಸಾಮಾನ್ಯ ಮಕ್ಕಳೊಡನೆ ಶಿಕ್ಷಣವನ್ನು ಪಡೆಯುವ ಅವಕಾಶವನ್ನು ಕೊಡಬೇಕು. ಸಮನ್ವಯ ಶಿಕ್ಷಣ ವ್ಯವಸ್ಥೆಯಲ್ಲಿ ವಿಶೇಷ ಮಕ್ಕಳು ಸಾಮಾನ್ಯ ಮಕ್ಕಳೊಡನೆ ಬೆರೆತು ಬಹಳ ಬೇಗ ಸಾಮಾಜೀಕರಣಗೊಳ್ಳುತ್ತಾರೆ. ಆದರೆ ಕರ್ನಾಟಕ ದಲ್ಲಿ ಬೆರಳೆಣಿಕೆಯ ಸಂಖ್ಯೆಯಲ್ಲಿ ಮಾತ್ರ ಸಮನ್ವಯ ಶಿಕ್ಷಣ ಸಂಸ್ಥೆಗಳಿವೆ. ದಿವ್ಯಾಂಗ ವ್ಯಕ್ತಿಗಳ ಹಕ್ಕುಗಳ ಕಾಯಿದೆ 2016ರ ಪ್ರಕಾರ ಎಲ್ಲ ಸರಕಾರಿ ಹಾಗೂ ಸರಕಾರಿ ಅನುಮೋದಿತ ಖಾಸಗಿ ಶಿಕ್ಷಣ ಸಂಸ್ಥೆಗಳು ಭಿನ್ನ ಸಾಮರ್ಥ್ಯದ ಮಕ್ಕಳಿಗೆ ಸಮನ್ವಯ ಶಿಕ್ಷಣ ಸೌಲಭ್ಯವನ್ನು ಒದಗಿಸಬೇಕು. ಆದರೆ ಕಾಯಿದೆಯು ಜಾರಿಯಾಗಿ ಹತ್ತು ವರ್ಷಗಳೇ ಕಳೆದರೂ ಯಾವ ಶಾಲೆಗಳೂ ಸಮನ್ವಯ ಶಿಕ್ಷಣ ವನ್ನು ಆರಂಭಿಸಿಲ್ಲ.
ಕೇವಲ ಫಲಿತಾಂಶಗಳ ಬಗ್ಗೆ ಮಾತ್ರ ಆಲೋಚಿಸುವ ಬಹುತೇಕ ಖಾಸಗಿ ಶಾಲೆಗಳು ಸಮನ್ವಯ ಶಿಕ್ಷಣವನ್ನು ಆರಂಭಿಸುವುದು ಬಿಡಿ, ಅವುಗಳು ದಿವ್ಯಾಂಗ ಮಕ್ಕಳನ್ನು ತಮ್ಮಲ್ಲಿ ಸೇರಿಸುತ್ತಿಲ್ಲ. ಸರಕಾರೀ ಶಾಲೆಗಳು ವಿಶೇಷ ಮಕ್ಕಳನ್ನು ಸೇರಿಸಿಕೊಳ್ಳುತ್ತಿವೆಯಾದರೂ ಅವರಲ್ಲಿ ವಿಶೇಷ ಅಗತ್ಯಗಳುಳ್ಳ ಮಕ್ಕಳಿಗೆ ಬೇಕಾದ ಸೌಕರ್ಯಗಳು ಇಲ್ಲ.
ಗಾಲಿ ಕುರ್ಚಿಗಳ ಚಾಲನೆಗೆ ಅನುಕೂಲ ವಾಗುವ ರ್ಯಾಂಪ್ಗಳು ಇಲ್ಲ, ಶ್ರವಣೋಪಕರಣಗಳು ಇಲ್ಲ, ಬ್ರೈಲ್ ಪಠ್ಯಪುಸ್ತಕ, ಬ್ರೈಲ್ ಪ್ರಿಂಟರ್‌ಗಳು ಇಲ್ಲ, ದಿವ್ಯಾಂಗ ಸ್ನೇಹಿ ಟಾಯ್ಲೆಟ್‌ಗಳು ಇಲ್ಲ, ವಿಶೇಷ ಅಧ್ಯಾಪಕರು ಇಲ್ಲ. ಇರುವ ಅಧ್ಯಾಪಕರಿಗೆ ದಿವ್ಯಾಂಗ ಮಕ್ಕಳನ್ನು ತರಗತಿಯಲ್ಲಿ ನಿಭಾಯಿಸುವ ಕುರಿತು ಯಾವುದೇ ತರಬೇತಿ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ವಿಶೇಷ ಮಕ್ಕಳಿಗೆ ವಿದ್ಯೆ ಸಿಗುವುದಾದರೂ ಹೇಗೆ? ಹೀಗಾಗಿ ಭಾರತ ದಲ್ಲಿ ಕೇವಲ 9% ದಿವ್ಯಾಂಗರು ಮಾತ್ರ ಹೈಸ್ಕೂಲ್ ಶಿಕ್ಷಣ ಮುಗಿಸುತ್ತಾರೆ. 45% ದಿವ್ಯಾಂಗರು ಅನಕ್ಷರಸ್ಥರಾಗಿಯೇ ಉಳಿದಿದ್ದಾರೆ!
ಬಹುತೇಕ ದಿವ್ಯಾಂಗ ವಿದ್ಯಾರ್ಥಿಗಳ ಮಟ್ಟಿಗೆ ಉನ್ನತ ಶಿಕ್ಷಣ ಎನ್ನುವುದು ಗಗನ ಕುಸುಮವೇ ಸರಿ. ಆಲ್ ಇಂಡಿಯಾ ಸರ್ವೇ ಆನ್ ಹೈಯರ್ ಎಜುಕೇಶನ್ (ಎಐಎಸ್‌ಹೆಚ್‌ಇ) ಪ್ರಕಾರ 2023-24 ರಲ್ಲಿ 4.5 ಕೋಟಿ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ನೋಂದಾಯಿಸಿಕೊಂಡಿದ್ದು ಇವರಲ್ಲಿ ವಿಶೇಷ ಚೇತನರ ಸಂಖ್ಯೆ ೫೪ ಸಾವಿರ ಮಾತ್ರ. ಅಂದರೆ ಆ ವರ್ಷ ಉನ್ನತ ಶಿಕ್ಷಣಕ್ಕಾಗಿ ನೋಂದಾಯಿಸಿ ಕೊಂಡ ದಿವ್ಯಾಂಗ ವಿದ್ಯಾರ್ಥಿಗಳ ಪ್ರಮಾಣ ಕೇವಲ 0.12% ಶೇಕಡಾ.
ಉನ್ನತ ಶಿಕ್ಷಣದಲ್ಲಿ ದಿವ್ಯಾಂಗರಿಗೆ 5% ಮೀಸಲಾತಿ ಇದ್ದರೂ ಕೇವಲ 0.12% ವಿದ್ಯಾರ್ಥಿಗಳು ಆ ಹಂತಕ್ಕೆ ತಲುಪಲು ಸಾಧ್ಯವಾಗಿzರೆ ಎಂದರೆ ವಿಶೇಷ ಚೇತನರ ಶಿಕ್ಷಣದಲ್ಲಿ ಭಾರತವೆಷ್ಟು ಹಿಂದು ಳಿದಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು. ಭಿನ್ನ ಸಾಮರ್ಥ್ಯದ ವಿದ್ಯಾರ್ಥಿಗಳಿಗೆ ಅಗತ್ಯ ವಾದ ವಾಹನ ಸೌಕರ್ಯ, ರ್ಯಾಂಪ್, ಲಿಫ್ಟ್, ದಿವ್ಯಾಂಗ ಸ್ನೇಹಿ ವಿಶ್ರಾಂತಿ ಕೊಠಡಿ ಮೊದಲಾದವು ಗಳ ಕೊರತೆ, ತರಗತಿಗಳಲ್ಲಿ ಸ್ಕ್ರೀನ್ ರೀಡರ್‌ಗಳು, ಬ್ರೈಲ್ ಸೈನ್ ಬೋರ್ಡ್‌ಗಳು, ಶ್ರವಣ ಸಾಧನಗಳು, ಡಿಜಿಟಲ್ ಅಧ್ಯಯನ ಸಾಧನಗಳು ಮೊದಲಾದವುಗಳ ಅಲಭ್ಯತೆಯಂತಹ ಕಾರಣಗಳಿಂದ ಈ ಮಕ್ಕಳಿಗೆ ಉನ್ನತ ಶಿಕ್ಷಣ ಬಹಳ ಕಠಿಣವಾಗುತ್ತಿದೆ.
ತರಗತಿಯ ಸಹಪಾಠಿಗಳು ಭಿನ್ನ ಸಾಮರ್ಥ್ಯದ ವಿದ್ಯಾರ್ಥಿಗಳನ್ನು ತಾತ್ಸಾರ ಭಾವದಿಂದ ನಡೆಯಿಸಿ ಕೊಳ್ಳುವುದು, ಪ್ರಾಧ್ಯಾಪಕರು ಇವರ ಬಗ್ಗೆ ತೋರುವ ಅಸಡ್ಡೆಯಂತಹ ಸಾಮಾಜಿಕ ತಾರತಮ್ಯವು ಕೂಡಾ ದಿವ್ಯಾಂಗರನ್ನು ಉನ್ನತ ಶಿಕ್ಷಣದಿಂದ ದೂರ ಇಟ್ಟಿದೆ. ಪರ್ಸನ್ಸ್ ವಿತ್ ಡಿಸಬಿಲಿಟೀಸ್ ಆಕ್ಟ್ 2016ರ ಪ್ರಕಾರ ಸರಕಾರೀ ಉದ್ಯೋಗದಲ್ಲಿ ದಿವ್ಯಾಂಗರ ಮೀಸಲಾತಿಯನ್ನು 3%ದಿಂದ 4%ಗೆ ಏರಿಸಲಾಗಿದೆ.
ಆದರೆ ಜನಪ್ರತಿನಿಧಿಗಳ ನಿರ್ಲಕ್ಷ್ಯ ಹಾಗೂ ಸರಕಾರೀ ಕೆಂಪುಪಟ್ಟಿಯ ಅವ್ಯವಸ್ಥೆಯಡಿಯಲ್ಲಿ ಅವರಿಗೆ ಕೊಡಲಾದ ಮೀಸಲಾತಿಗೆ ಅನುಗುಣವಾಗಿ ನೇಮಕಾತಿ ಆಗುತ್ತಿಲ್ಲ ಎನ್ನುವುದು ದೊಡ್ಡ ದುರಂತ. ಎನೇಬಲ್ ಇಂಡಿಯಾ ಸಂಸ್ಥೆಯ ಪ್ರಕಾರ 81% ದಿವ್ಯಾಂಗರು ಭಾರತದಲ್ಲಿ ಬಡತನದ ರೇಖೆಯ ಕೆಳಗೆ ಬದುಕುತ್ತಿದ್ದಾರೆ.
ಕರ್ನಾಟಕದಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಕರ್ನಾಟಕದಲ್ಲಿ ಕೆಲವು ತಿಂಗಳುಗಳಿಂದ ದಿವ್ಯಾಂಗರ ಮಾಸಿಕ ಪೆನ್ಷನ್ ಅನ್ನು ತಡೆಹಿಡಿಯಲಾಗಿದೆ. ದಿವ್ಯಾಂಗರಿಗೆ ಕೊಡಲಾಗುತ್ತಿದ್ದ ಪಿಂಚಣಿ ಅವರ ಔಷಧೋಪ ಚಾರಕ್ಕೆ, ಅಗತ್ಯ ಥೆರಪಿಗಳಿಗೆ, ಸಣ್ಣಪುಟ್ಟ ಖರ್ಚುಗಳಿಗೆ ಅನುಕೂಲವಾಗುತ್ತಿತ್ತು. ದಿವ್ಯಾಂಗರಿಗೆ ಮಾಸಿಕ ಪಿಂಚಣಿಯನ್ನು ಕೊಡಲು ಅವರ ಕುಟುಂಬದ ವಾರ್ಷಿಕ ಆದಾಯದ ಮಿತಿಯನ್ನು 1.2 ಲಕ್ಷ ರೂಪಾಯಿಗಳಿಗೆ ಮಿತಗೊಳಿಸಲಾಗಿದೆ.
ದಿವ್ಯಾಂಗರಿಗೆ ಕೊಡಲಾಗುವ ಪಿಂಚಣಿಗೆ ಅವರ ಹೆತ್ತವರ ಅಥವಾ ಕುಟುಂಬದ ಆದಾಯವನ್ನು ಮಾನದಂಡ ಮಾಡುವುದು ತೀರಾ ಅನ್ಯಾಯ. ಏಕೆಂದರೆ ಈ ವ್ಯಕ್ತಿಗಳು ಒಂದಲ್ಲ ಓದು ದಿನ ಆರ್ಥಿಕವಾಗಿ ಸ್ವತಂತ್ರವಾಗಿ ಜೀವಿಸಬೇಕಾದವರೇ ಆಗಿದ್ದಾರೆ. ಹಾಗಾಗಿ ವಿಕಲಚೇತನರಿಗೆ ಕೊಡಲಾಗುವ ಪಿಂಚಣಿಗೆ ಅವರ ವೈಕಲ್ಯವನ್ನೇ ಮಾನದಂಡ ಮಾಡಬೇಕೇ ವಿನಃ ಅವರ ಹೆತ್ತವರ ಆದಾಯವನ್ನಲ್ಲ.
ದಿವ್ಯಾಂಗ ವ್ಯಕ್ತಿಗಳ ಹಕ್ಕುಗಳ ಕಾಯಿದೆ 2016ರ ಸೆಕ್ಷನ್ 24ರ ಅಡಿಯಲ್ಲಿ ವಿಕಲಾಂಗರ ಪಿಂಚಣಿ ಗಳನ್ನೂ ಒಳಗೊಂಡಂತೆ ಸಾಮಾಜಿಕ ಭದ್ರತಾ ಯೋಜನೆಗಳನ್ನು ಕಾರ್ಯಗತಗೊಳಿಸುವ ಜವಾಬ್ದಾರಿ ಸರಕಾರದ್ದಾಗಿದೆ. ದಿವ್ಯಾಂಗ ಮಕ್ಕಳ ಶಿಕ್ಷಣ, ಪರೀಕ್ಷಾ ಹಾಗು ಮೌಲ್ಯಮಾಪನ ವಿಧಾನದಲ್ಲೂ ಭಾರಿ ಸುಧಾರಣೆಯ ಅವಶ್ಯಕತೆ ಇದೆ.
ಕರ್ನಾಟಕದಲ್ಲಿ ಕೆಲವು ವರ್ಷಗಳ ಮೊದಲು ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಸಂದರ್ಭದಲ್ಲಿ ಆಟಿಸಂ ಹಾಗೂ ಬೌದ್ಧಿಕ ನ್ಯೂನತೆಯ ಮಕ್ಕಳಿಗೆ ಪರೀಕ್ಷಾ ಸಹಾಯಕರಾಗಿ ಮನೆಯವರಿಗೆ ಹಾಗೂ ಹೆತ್ತವರಿಗೂ ಕೂರುವ ಅವಕಾಶವಿತ್ತು. ಇಂತಹ ಮಕ್ಕಳು ಇತರರೊಂದಿಗೆ ಅಷ್ಟಾಗಿ ಬೆರೆಯಲು ಇಷ್ಟಪಡದ ಕಾರಣ ಹೆತ್ತವರೇ ಪರೀಕ್ಷೆ ಸಹಾಯಕರಾಗುವುದರಿಂದ ಬಹಳ ಉಪಕಾರವಾಗುತ್ತಿತ್ತು. ಆದರೆ ಕಳೆದ 7-8 ವರ್ಷಗಳಿಂದ ಕರ್ನಾಟಕದಲ್ಲಿ ದಿವ್ಯಾಂಗ ಮಕ್ಕಳ ಹೆತ್ತವರೇ ಪರೀಕ್ಷೆ ಸಹಾಯಕ ರಾಗುವ ಅವಕಾಶವನ್ನು ಹಿಂದೆಗೆದುಕೊಳ್ಳಲಾಗಿದೆ.
ಈಗ 9 ಅಥವಾ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ ಸಹಾಯಕರಾಗಬಹುದಷ್ಟೇ. ಇದೇ ರೀತಿ ದಿವ್ಯಾಂಗರ ವಿಷಯದಲ್ಲಿ ಸರಕಾರಗಳು ತೆಗೆದುಕೊಳ್ಳುತ್ತಿರುವ ಸಂವೇದನಾ ಶೂನ್ಯ ನಿರ್ಣಯಗಳು ಅವರ ಬದುಕನ್ನು ಹೈರಾಣಾಗಿಸುತ್ತಿವೆ. 2016ರ ದಿವ್ಯಾಂಗ ವ್ಯಕ್ತಿಗಳ ಹಕ್ಕುಗಳ ಕಾಯಿದೆ ಬಹಳ ಉತ್ತಮವಾಗಿದೆ. ಆದರೆ ಅದನ್ನು ಸಮರ್ಥವಾಗಿ ಜಾರಿಗೊಳಿಸಲು ಕೇಂದ್ರ ಹಾಗು ರಾಜ್ಯಸರಕಾರಗಳು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕಾಗಿದೆ.
(ಲೇಖಕರು ದಿವ್ಯಾಂಗ ಮಕ್ಕಳ ತರಬೇತಿ, ಶಿಕ್ಷಣ ಹಾಗೂ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿರುವ ವಿಕಾಸಂ ಸೇವಾ -ಫೌಂಡೇಶನ್ ಮುಖ್ಯಸ್ಥರು)