ಸಂಪಾದಕೀಯ ಸದ್ಯಶೋಧನೆ
ವಿಮಾನ ಟೇಕಾಫ್ ಆಗುತ್ತಿದ್ದಂತೆ, ಪ್ರಯಾಣಿಕನೊಬ್ಬ ತನಗೆ ಭಯವಾಗುತ್ತಿದೆ ಎಂದು ಕಿರುಚಿದರೆ ಏನು ಮಾಡುತ್ತಾರೆ? ವಿಮಾನ ಟೇಕಾಫ್ ಆಗುವುದು ವಿಮಾನಯಾನದ ಒಂದು ನಿರ್ಣಾಯಕ ಹಂತ. ಈ ಸಮಯದಲ್ಲಿ ಪೈಲಟ್ ಮತ್ತು ಸಿಬ್ಬಂದಿ ಸಂಪೂರ್ಣವಾಗಿ ವಿಮಾನದ ನಿಯಂತ್ರಣದ ಮೇಲೆ ಮತ್ತು ರನ್‌ವೇ ಪರಿಸ್ಥಿತಿಗಳ ಮೇಲೆ ಗಮನ ಕೇಂದ್ರೀಕರಿಸಿರುತ್ತಾರೆ.
ಹೀಗಾಗಿ, ಯಾವುದೇ ರೀತಿಯ ಅಡೆತಡೆ ಅಥವಾ ಗೊಂದಲಗಳನ್ನು ತಪ್ಪಿಸಲು ಹೆಚ್ಚಿನ ಮುತುವರ್ಜಿ ವಹಿಸಲಾಗುತ್ತದೆ. ಸಾಮಾನ್ಯವಾಗಿ ವಿಮಾನದ ಕಾಕ್‌ಪಿಟ್, ಪ್ರಯಾಣಿಕರ ಕ್ಯಾಬಿನ್ ನಿಂದ ಪ್ರತ್ಯೇಕವಾಗಿರುತ್ತದೆ. ಹಾಗಾಗಿ, ಒಬ್ಬ ಪ್ರಯಾಣಿಕ ಕಿರುಚಿಕೊಂಡರೂ ಅದು ನೇರವಾಗಿ ಪೈಲಟ್‌ಗೆ ಕೇಳಿಸುವುದಿಲ್ಲ. ಈ ಪರಿಸ್ಥಿತಿಯನ್ನು ನಿಭಾಯಿಸಲು ತರಬೇತಿ ಪಡೆದಿರುವ ಕ್ಯಾಬಿನ್ ಸಿಬ್ಬಂದಿ ಮಧ್ಯ ಪ್ರವೇಶಿಸುತ್ತಾರೆ.
ಪ್ರಯಾಣಿಕನೊಬ್ಬ ಭಯದಿಂದ ಕಿರುಚಿದ ತಕ್ಷಣ, ಹತ್ತಿರದಲ್ಲಿರುವ ಕ್ಯಾಬಿನ್ ಸಿಬ್ಬಂದಿ ತಕ್ಷಣವೇ ಆ ಪ್ರಯಾಣಿಕನ ಬಳಿ ಹೋಗಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಾರೆ. ಸಿಬ್ಬಂದಿ ಆ ಪ್ರಯಾಣಿಕನೊಂದಿಗೆ ಮಾತನಾಡಿ, ಅವರ ಭಯಕ್ಕೆ ಕಾರಣವನ್ನು ಅರ್ಥಮಾಡಿ ಕೊಳ್ಳಲು ಪ್ರಯತ್ನಿಸುತ್ತಾರೆ.
ಇದನ್ನೂ ಓದಿ: Vishweshwar Bhat Column: ನಿಜವಾದ ಗೆಳೆಯ ಯಾರು ? ಟೀಕಾಕಾರರು ಯಾರು ?
ಪರಿಸ್ಥಿತಿಯು ಟೇಕಾಫ್ ನ ಒಂದು ಸಾಮಾನ್ಯ ಭಾಗ ಎಂದು ವಿವರಿಸಿ, ಅವರನ್ನು ಶಾಂತಗೊಳಿಸಲು ಪ್ರಯತ್ನಿಸುತ್ತಾರೆ. ಜತೆಗೆ, ವಿಮಾನವು ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ಭರವಸೆ ನೀಡುತ್ತಾರೆ. ಒಂದು ವೇಳೆ ಪ್ರಯಾಣಿಕರು ಅತಿಯಾಗಿ ಗೊಂದಲ ಸೃಷ್ಟಿಸಿದರೆ ಅಥವಾ ನಿಯಂತ್ರಿಸ ಲಾಗದ ಸ್ಥಿತಿಯಲ್ಲಿದ್ದರೆ, ಸಿಬ್ಬಂದಿ ತಕ್ಷಣವೇ ಹಿರಿಯ ಕ್ಯಾಬಿನ್ ಸಿಬ್ಬಂದಿ ( Senior Cabin Crew ) ಅಥವಾ ವಿಮಾನದ ಮುಖ್ಯಸ್ಥರಿಗೆ ( Purser ) ಮಾಹಿತಿ ನೀಡುತ್ತಾರೆ.
ಕ್ಯಾಬಿನ್‌ನಲ್ಲಿನ ಪರಿಸ್ಥಿತಿ ಗಂಭೀರವಾಗಿದ್ದರೆ ಮಾತ್ರ ಸಿಬ್ಬಂದಿ ಪೈಲಟ್‌ಗೆ ಮಾಹಿತಿ ನೀಡುತ್ತಾರೆ. ಸಣ್ಣ ಪ್ರಮಾಣದ ಗೊಂದಲವನ್ನು ಪೈಲಟ್‌ಗೆ ತಿಳಿಸುವುದಿಲ್ಲ. ಏಕೆಂದರೆ ಟೇಕಾಫ್ ಸಮಯದಲ್ಲಿ ಪೈಲಟ್‌ಗೆ ಯಾವುದೇ ರೀತಿಯ ತೊಂದರೆಯಾಗಬಾರದು ಎಂಬುದು ಉದ್ದೇಶ. ಒಂದು ವೇಳೆ ಪ್ರಯಾಣಿಕನ ವರ್ತನೆ ವಿಮಾನದ ಸುರಕ್ಷತೆಗೆ ಅಪಾಯ ಉಂಟು ಮಾಡುವಂತಿದ್ದರೆ ಉದಾಹರಣೆಗೆ, ಜೀವರಕ್ಷಕ ಸಾಧನಗಳಿಗೆ ಹಾನಿಮಾಡಲು, ಬಾಗಿಲು ತೆರೆಯಲು ಪ್ರಯತ್ನಿಸುವುದು), ಆಗ ಮಾತ್ರ ಸಿಬ್ಬಂದಿ ಪೈಲಟ್‌ಗೆ ಮಾಹಿತಿ ನೀಡುತ್ತಾರೆ.
ಯಾವುದೇ ಒಂದು ವಿಷಯ ಪೈಲಟ್‌ಗೆ ತಲುಪಿದಾಗ, ಅವರು ವಿಮಾನದ ಸುರಕ್ಷತೆಯನ್ನು ಗಮನ ದಲ್ಲಿಟ್ಟುಕೊಂಡು ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ. ಹೆಚ್ಚಾಗಿ, ವಿಮಾನ ಟೇಕಾಫ್ ಆಗುತ್ತಿರುವಾಗ, ಪೈಲಟ್‌ಗಳು ತಮ್ಮ ಕಾರ್ಯಾಚರಣೆಯನ್ನು ಮುಂದುವರಿಸುತ್ತಾರೆ. ಏಕೆಂದರೆ ಟೇಕಾಫ್ ನಿಲ್ಲಿಸುವುದು ಅಥವಾ ರದ್ದು ಮಾಡುವುದು ವಿಮಾನದ ಸುರಕ್ಷತೆಗೆ ಮತ್ತಷ್ಟು ಅಪಾಯ ಉಂಟುಮಾಡಬಹುದು. ಪರಿಸ್ಥಿತಿ ತೀರಾ ಗಂಭೀರವಾಗಿದ್ದರೆ, ಟೇಕಾಫ್ ರದ್ದು ಮಾಡಿ ವಿಮಾನ ವನ್ನು ಮತ್ತೆ ಏರ್‌ಪೋರ್ಟ್‌ಗೆ ಮರಳಿಸಲು ಪೈಲಟ್ ನಿರ್ಧರಿಸಬಹುದು.
ಈ ನಿರ್ಧಾರವನ್ನು ಸಾಮಾನ್ಯವಾಗಿ Return to Gate ಎಂದು ಕರೆಯಲಾಗುತ್ತದೆ. ಆದರೆ ಇದು ಅತಿ ವಿರಳವಾಗಿ ಸಂಭವಿಸುತ್ತದೆ. ಒಟ್ಟಾರೆಯಾಗಿ ಹೇಳುವುದಾದರೆ, ವಿಮಾನ ಟೇಕಾಫ್ ಆಗುವ ಸಮಯ ದಲ್ಲಿ ಪೈಲಟ್‌ನ ಸಂಪೂರ್ಣ ಗಮನವು ವಿಮಾನದ ಸುರಕ್ಷತೆಯ ಮೇಲೆ ಇರುತ್ತದೆ. ಯಾವುದೇ ರೀತಿಯ ಸಣ್ಣಪುಟ್ಟ ಘಟನೆಗಳಿಗೆ ಕ್ಯಾಬಿನ್ ಸಿಬ್ಬಂದಿ ಜವಾಬ್ದಾರರಾಗಿರುತ್ತಾರೆ.
ಹೀಗಾಗಿ, ಪ್ರಯಾಣಿಕನೊಬ್ಬ ಕಿರುಚಿಕೊಂಡರೂ ಅದು ನೇರವಾಗಿ ಪೈಲಟ್‌ನ ಕಾರ್ಯ ಚಟುವಟಿಕೆ ಗಳ ಮೇಲೆ ಪರಿಣಾಮ ಬೀರುವುದಿಲ್ಲ. ಆ ಪರಿಸ್ಥಿತಿ ಯನ್ನು ನಿಭಾಯಿಸಲು ಸಿಬ್ಬಂದಿ ಸಂಪೂರ್ಣ ವಾಗಿ ತರಬೇತಿ ಪಡೆದಿರುತ್ತಾರೆ. ಇನ್ನು ಕೆಲ ಸಂದರ್ಭಗಳಲ್ಲಿ ವಿಮಾನ ಪ್ರಯಾಣ ಭಯದಿಂದ, ಕೆಳಗೆ ನೋಡಿ, ತಲೆ ಸುತ್ತಿ ಬಂದು ಭಯದಿಂದ ಕಿರುಚಬಹುದು. ಅಂಥ ಸಂದರ್ಭದಲ್ಲಿ ಸಿಬ್ಬಂದಿ ಧಾವಿಸಿ ಬಂದು ಪ್ರಯಾಣಿಕರಿಗೆ ಭರವಸೆ ಮಾತುಗಳನ್ನು ಹೇಳಿ, ಧೈರ್ಯ ತುಂಬುತ್ತಾರೆ.
ಪರಿಸ್ಥಿತಿ ಕೈ ಮೀರಿ ಹೋದಾಗ, ಟೇಕಾಫ್ ಆದ ವಿಮಾನವನ್ನು ಲ್ಯಾಂಡ್ ಮಾಡಿ, ಆ ಪ್ರಯಾಣಿಕ ನನ್ನು ಇಳಿಸಿ ಹೋಗುತ್ತಾರೆ.