ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Lokesh Kaayarga Column: ವೀರಪ್ಪನ್ ಬದುಕಿದ್ದರೆ ಹೀಗಾಗುತ್ತಿರಲಿಲ್ಲವಂತೆ.... !

ವೀರಪ್ಪನ್ ಇದ್ದಾಗಲೇ ಕಾಡು ಚೆನ್ನಾಗಿತ್ತು. ಆಗ ಕಾಡೊಳಗೆ ಅಕ್ರಮ ಗಣಿಗಾರಿಕೆ- ರೆಸಾರ್ಟ್ ಅವ್ಯವಹಾರಗಳು ನಡೆಯುತ್ತಿರಲಿಲ್ಲ. ಅಧಿಕಾರಿಗಳಿಗಿಂತ ವೀರಪ್ಪನ್ ಪರವಾಗಿರಲಿಲ್ಲ ಎಂಬ ನಮ್ಮ ಕಾಡಂಚಿನ ಜನರ ಆಕ್ರೋಶದ ಹಿಂದೆ ನೋವು, ಹತಾಶೆಗಳಿವೆ. ಅಮಾಯಕರು ವನ್ಯಜೀವಿಗಳ ದಾಳಿಗೆ ತುತ್ತಾಗಿ ಜೀವ ಕಳೆದುಕೊಳ್ಳುತ್ತಿದ್ದಾರೆ. ಹಾಗೆಯೇ ವನ್ಯಮೃಗಗಳು ತಮ್ಮದಲ್ಲದ ತಪ್ಪಿಗೆ ಪ್ರಾಣ ಕಳೆದುಕೊಳ್ಳುತ್ತಿವೆ. ಸಂರಕ್ಷಿತ ಅರಣ್ಯದಂಚಿನಲ್ಲಿ ರೆಸಾರ್ಟ್, ಎಸ್ಟೇಟ್ ಚಟುವಟಿಕೆಗಳ ಹೆಚ್ಚಳ ವನ್ಯಜೀವಿಗಳು ನಾಡಿಗೆ ನುಗ್ಗಲು ಕಾರಣವಾಗಿವೆ ಎನ್ನುವುದು ಈ ಭಾಗದ ಜನರ ದೂರು.

ಲೋಕಮತ

ನರಹಂತಕ,ದಂತಚೋರ, ನೂರಾರು ಆನೆಗಳ ಹಂತಕ ಎಂಬ ನಾನಾ ವಿಶೇಷಣಗಳಿಂದ ಕರೆಸಿ ಕೊಂಡ ವೀರಪ್ಪನ್ ಪರ ಮಾತುಗಳು, ಘೋಷಣೆಗಳು, ಆತನನ್ನು ಕ್ಷಮಿಸಬೇಕೆಂಬ ಮಾತುಗಳು ಆತ ಬದುಕಿರುವಾಗಲೇ ಕೇಳಿ ಬಂದಿದ್ದವು. ತಮಿಳುನಾಡಿನಲ್ಲಿ ಅನೇಕ ರಾಜಕೀಯ ನಾಯಕರು ವೀರಪ್ಪನ್ ಪರ ಲಾಬಿ ನಡೆಸಿದ್ದರು. ಒಂದು ವೇಳೆ ಆತ ಬದುಕಿ ಜೈಲು ಸೇರಿರುತ್ತಿದ್ದರೆ, ರಾಜೀವ್ ಹಂತಕರಂತೆ ಆತನಿಗೂ ಕ್ಷಮಾಪಣೆ ನೀಡಬೇಕೆಂಬ ಮಾತು ಕೇಳಿ ಬರುತ್ತಿತ್ತೇನೋ ? ಈಗ ನಮ್ಮ ರಾಜ್ಯದಲ್ಲಿಯೇ ವೀರಪ್ಪನ್ ಪರ ಮಾತುಗಳು ಕೇಳಿ ಬರುತ್ತಿವೆ. ಎರಡು ದಿನಗಳ ಹಿಂದೆ ( ನವೆಂಬರ್ 2) ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರ ಸಮ್ಮುಖದಲ್ಲಿಯೇ ಚಾಮರಾಜನಗರದ ರೈತರು ‘ವೀರಪ್ಪನ್ ಬದುಕಿದ್ದಾಗಲೇ ನಮ್ಮ ಕಾಡು ಚೆನ್ನಾಗಿತ್ತು’ ಎಂದು ಮಾತುಗಳನ್ನಾಡಿದರು. ಹಾಗೆಂದು ಇದು ವೀರಪ್ಪನ್ ಗುಣಗಾನವಲ್ಲ. ಅರಣ್ಯ ಅಧಿಕಾರಿಗಳ ವಿರುದ್ಧ ರೈತರ ಆಕ್ರೋಶದ ಕಟ್ಟೆ ಒಡೆದಾಗ ಕೇಳಿ ಬಂದ ಮಾತಿದು.

ಕಳೆದ ಮೂರ್ನಾಲ್ಕು ತಿಂಗಳಲ್ಲಿ ರಾಜ್ಯದ ನಾನಾ ಜಿಲ್ಲೆಗಳಲ್ಲಿ ವಿಶೇಷವಾಗಿ ಚಾಮರಾಜನಗರ ಹಾಗೂ ಮೈಸೂರು ಜಿಲ್ಲೆಗಳಲ್ಲಿ ಮಾನವ ಮತ್ತು ವನ್ಯಜೀವಿ ಸಂಘರ್ಷ ಏರುತ್ತಲೇ ಸಾಗಿದೆ. ನವೆಂಬರ್ ತಿಂಗಳ ಆರಂಭದಲ್ಲಿಯೇ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಸುಳೆಗಾಲಿ ಗ್ರಾಮದ ಬಳಿ ಎರಡು ಕಾಡಾನೆಗಳು ಅಕ್ರಮವಾಗಿ ಹಾಕಲಾಗಿದ್ದ ವಿದ್ಯುತ್ ಬೇಲಿ ಸ್ಪರ್ಶಿಸಿ ಮೃತಪಟ್ಟಿವೆ. ಅಕ್ಟೋಬರ್ ಕೊನೆಯ ವಾರದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖ ವನ್ಯಜೀವಿ ವಿಭಾಗದ ಕೆರೆಕಟ್ಟೆ ವ್ಯಾಪ್ತಿಯಲ್ಲಿ ಇಬ್ಬರು ರೈತರು ಆನೆ ತುಳಿತಕ್ಕೆ ಸಿಲುಕಿ ಮೃತಪಟ್ಟಿ ದ್ದಾರೆ.

ನಾಗರಹೊಳೆಗೆ ಹೊಂದಿಕೊಂಡಿರುವ ಮೈಸೂರಿನ ಸರಗೂರಿನಲ್ಲಿ ಇಬ್ಬರು ದನಗಾಹಿಗಳು ಹುಲಿಗೆ ಆಹಾರವಾಗಿದ್ದಾರೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮೋಳೆಯೂರು ವ್ಯಾಪ್ತಿಯಲ್ಲೂ ವೃದ್ಧರೊಬ್ಬರನ್ನು ಹುಲಿ ಬಲಿ ಪಡೆದಿದೆ. ಕಳೆದ ಜೂನ್‌ನಲ್ಲಿ ಮಲೆ ಮಹದೇಶ್ವರ ಬೆಟ್ಟ ಅರಣ್ಯಪ್ರದೇಶದಲ್ಲಿ ಒಂದು ತಾಯಿ ಹುಲಿ ಮತ್ತು ನಾಲ್ಕು ಮರಿ ಹುಲಿಗಳು ವಿಷಪ್ರಾಶನಕ್ಕೀಡಾಗಿ ಮೃತಪಟ್ಟಿದ್ದವು. ಇದರ ಬೆನ್ನಿಗೇ ಮತ್ತೊಂದು ಹುಲಿ ಶಂಕಾಸ್ಪದವಾಗಿ ಸಾವಿಗೀಡಾಗಿತ್ತು.

ಇದನ್ನೂ ಓದಿ: Lokesh Kaayarga Column: ಪರೀಕ್ಷೆಯ ಮಾನ ʼದಂಡʼವಾಗಬಾರದು

ಈ ಹಿನ್ನೆಲೆಯಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅಧ್ಯಕ್ಷತೆಯಲ್ಲಿ ಚಾಮರಾಜನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕಾಡಂಚಿನ ಜನರು, ರೈತರು ಮತ್ತು ಅಧಿಕಾರಿಗಳ ಸಭೆ ಕರೆಯ ಲಾಗಿತ್ತು. ಅರಣ್ಯ, ಕಂದಾಯ ಮತ್ತು ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದ ಈ ಸಭೆಯಲ್ಲಿ ರೈತ ಮುಖಂಡ ಹೊನ್ನೂರು ಪ್ರಕಾಶ್, ‘‘ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅಕ್ರಮ ರೆಸಾರ್ಟ್‌ಗಳು ನಡೆಯುತ್ತಿವೆ. ವೀರಪ್ಪನ್ ಇದ್ದಾಗಲೇ ಕಾಡು ಚೆನ್ನಾಗಿತ್ತು. ಆಗ ಅಕ್ರಮ ಗಣಿಗಾರಿಕೆ- ರೆಸಾರ್ಟ್ ಅವ್ಯವಹಾರಗಳು ನಡೆಯುತ್ತಿರಲಿಲ್ಲ. ಅಧಿಕಾರಿಗಳಿಗಿಂತ ವೀರಪ್ಪನ್ ಪರವಾಗಿರಲಿಲ್ಲ. ನಮ್ಮ ರಾಜ್ಯದಲ್ಲಿ ನಡೆಯುವಷ್ಟು ವನ್ಯಜೀವಿ ಸಂಘರ್ಷ ಬೇರೆ ಯಾವುದೇ ರಾಜ್ಯದಲ್ಲಿ ನಡೆಯು ತ್ತಿಲ್ಲ. ಈ ಸಂಘರ್ಷ ಹೆಚ್ಚಾಗಲು ಅರಣ್ಯಾಧಿಕಾರಿಗಳ ನಿರ್ಲಕ್ಷ್ಯವೇ ಕಾರಣ’’ ಎಂದು ಆಕ್ರೋಶದ ಮಾತುಗಳನ್ನಾಡಿದರು.

ರೈತರ ಆರೋಪಗಳಿಗೆ ಕಿವಿಯಾದ ಸಚಿವ ಈಶ್ವರ್ ಖಂಡ್ರೆ, ರಾಜ್ಯದ ಯಾವುದೇ ಅರಣ್ಯ ಪ್ರದೇಶ ದಲ್ಲಿ ಅಕ್ರಮ ಹೋಮ್ ಸ್ಟೇ , ರೆಸಾರ್ಟ್ ಅಥವಾ ಅಕ್ರಮ ಕಲ್ಲು ಗಣಿಗಾರಿಕೆಗೆ ಸರಕಾರ ಅವಕಾಶ ನೀಡಿಲ್ಲ. ಈ ಸಂಬಂಧ ದೂರು ಬಂದರೆ ಕಠಿಣ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದ್ದಾರೆ. ಆದರೆ ಈ ವಿಚಾರದಲ್ಲಿ ತಾನು ನಿಸ್ಸಹಾಯಕ ಎನ್ನುವುದು ಸ್ವತ: ಖಂಡ್ರೆ ಸಾಹೇಬರಿಗೂ ಗೊತ್ತು. ಏಕೆಂದರೆ ನಾಗರಹೊಳೆ, ಬಂಡೀಪುರ, ಬಿಳಿಗಿರಿರಂಗನ ಬೆಟ್ಟ, ದಾಂಡೇಲಿ ಅರಣ್ಯದಂಚಿನ ಭಾಗದಲ್ಲಿ, ಕೊಡಗು, ಚಿಕ್ಕಮಗಳೂರು, ಉತ್ತರಕನ್ನಡದ ಜಿಲ್ಲೆಗಳ ವನ್ಯ ಸೂಕ್ಷ್ಮ ಪ್ರದೇಶಗಳಲ್ಲಿ ರೆಸಾರ್ಟ್ ನಿರ್ಮಿಸಿಕೊಂಡವರು, ಎಸ್ಟೇಟ್ ಹೆಸರಿನಲ್ಲಿ ನೂರಾರು ಎಕರೆ ಭೂಮಿ ಕಬಳಿಸಿದವರು, ರಾಜ್ಯದ ನಾನಾ ಜಿಲ್ಲೆಗಳಲ್ಲಿ ಅರಣ್ಯ ಭೂಮಿಯನ್ನು ಬಂಜರು ನೆಲವಾಗಿ ತೋರಿಸಿದ ಗಣಿ ಧಣಿಗಳು ಖಂಡ್ರೆಯವರ ಹಿಡಿತಕ್ಕೆ ಸಿಗುವವರಲ್ಲ. ಇವರು ರಾಜ್ಯದಲ್ಲೂ, ಕೇಂದ್ರದಲ್ಲೂ ಪ್ರಭಾವ ಶಾಲಿಗಳು. ಇಲ್ಲಿನ ಕೆಲವು ರೆಸಾರ್ಟ್ ಮತ್ತು ಎಸ್ಟೇಟ್‌ಗಳಿಗೆ ಕ್ಯಾಬಿನೆಟ್ ಮಂತ್ರಿಗಳು, ಅಧಿಕಾರಿಗಳು, ಚಿತ್ರರಂಗದ ಸ್ಟಾರ್ ನಟರು, ನಾನಾ ರಾಜ್ಯದ ಉದ್ಯಮಿಗಳು ಬೇನಾಮಿ ಮಾಲೀಕರು. ಯಾವುದೇ ಪಕ್ಷದ ಸರಕಾರ ಬಂದರೂ ಇವರು ಸದಾ ಪ್ರಭಾವಿಗಳು. ವನ್ಯಮೃಗಗಳ ಉಪಟಳವನ್ನು ಎದುರಿಸ ಲಾಗದ ಕಾಡಂಚಿನ ಮಂದಿ ಇವರನ್ನು ಎದುರಿಸಿ ಗೆಲ್ಲವುದು ದೂರದ ಮಾತು.

Lokesh K 2

ಸದ್ಯ ಸಚಿವ ಈಶ್ವರ ಖಂಡ್ರೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾನವ-ವನ್ಯಜೀವಿ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಎಂಟು ಅಂಶಗಳ ಕಾರ್ಯಯೋಜನೆಯನ್ನು ರೂಪಿಸಿ, ಜಾರಿಗೆ ತರಲು ನಿರ್ಧರಿಸಲಾಗಿದೆ. ವನ್ಯಜೀವಿಗಳು ನಾಡಿಗೆ ಬರುತ್ತಿರುವ ಬಗ್ಗೆ ಅಧ್ಯಯನ ಮಾಡಿಸಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ವತಿಯಿಂದ ಇಬ್ಬರು ತಜ್ಞರ ಸಮಿತಿ ರಚಿಸಲಾಗಿದೆ. ರೈತರು, ಸಾರ್ವಜನಿಕರು ನೀಡಿರುವ ಎಲ್ಲ ಸಲಹೆ ಸಂಗ್ರಹಿಸಿ, ಚರ್ಚಿಸಿ ಅನುಷ್ಠಾನಕ್ಕೆ ತರಲಾಗು ವುದು ಎಂದು ಸಚಿವರು ಭರವಸೆ ನೀಡಿದ್ದಾರೆ.

ಅರಣ್ಯ ಪ್ರದೇಶದಲ್ಲಿ ಬೃಹತ್ ಯಂತ್ರೋಪಕರಣಗಳನ್ನು ಬಳಸಿ ನಡೆಸಲಾಗುತ್ತಿರುವ ವಾಣಿಜ್ಯ ಚಟುವಟಿಕೆಗಳು ಮತ್ತು ಸರಕಾರಿ ಯೋಜನೆಗಳ ಬಗ್ಗೆ ರೈತರು ಗಮನ ಸೆಳೆದಿದ್ದಾರೆ. ರೆಸಾರ್ಟ್‌ಗಳ ಹೆಸರಿನಲ್ಲಿ ನಡೆಯುತ್ತಿರುವ ದಂಧೆಗಳ ಬಗ್ಗೆಯೂ ಗಮನ ಸೆಳೆದಿದ್ದಾರೆ. ಈ ಕಾರಣದಿಂದಲೇ ವನ್ಯಜೀವಿಗಳು ನಾಡಿನ ಹಾದಿ ಹಿಡಿಯುತ್ತಿವೆ ಎನ್ನುವುದು ರೈತರು ಮತ್ತು ಕಾಡಂಚಿನ ಜನರ ಆರೋಪ.

ಸಚಿವರ ಭರವಸೆ ಬೆನ್ನಲ್ಲೇ ‘ಸೇವ್ ಕಬಿನಿ’ ತಂಡವು ನಾಗರಹೊಳೆ ಸುತ್ತಮುತ್ತ ಇರುವ 15 ರೆಸಾರ್ಟ್‌ಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮೈಸೂರು ಜಿಲ್ಲೆಯ ಕಾಡಂಚಿನ ಗ್ರಾಮಗಳಲ್ಲಿ ಹೆಚ್ಚುತ್ತಿರುವ ವನ್ಯಜೀವಿ-ಮಾನವ ಸಂಘರ್ಷಕ್ಕೆ ಕಬಿನಿ ಹಿನ್ನೀರಿನಲ್ಲಿ ಅಕ್ರಮವಾಗಿ ತಲೆ ಎತ್ತಿರುವ ರೆಸಾರ್ಟ್‌ಗಳೇ ಕಾರಣವೆಂದು ಈ ತಂಡ ಆರೋಪಿಸಿದೆ. ಕಬಿನಿ ಹಿನ್ನೀರಿನ ಪ್ರದೇಶದಲ್ಲಿ ನೂರಾರು ರೆಸಾರ್ಟ್‌ಗಳು ಮತ್ತು ಹೋಂಸ್ಟೇಗಳು ತಲೆ ಎತ್ತಿವೆ. ಸುಪ್ರೀಂಕೋಟ್ ಆದೇಶದ ಪ್ರಕಾರ ಅಕ್ರಮ ವಾಗಿರಲಿ ಅಥವಾ ಸಕ್ರಮವಾಗಿರಲಿ. ಕಾಡಿನ ಪ್ರದೇಶದಲ್ಲಿ ಯಾವುದೇ ರೆಸಾರ್ಟ್ ಇರಬಾರದು. ಅರಣ್ಯ ಅತಿಕ್ರಮಣದ ಹೆಸರಿನಲ್ಲಿ ಕಾಡಂಚಿನ ರೈತರ ವಿರುದ್ಧ ಕೇಸು ದಾಖಲಿಸುವ ಅರಣ್ಯ ಅಧಿಕಾರಿಗಳು ಈ ರೆಸಾರ್ಟ್‌ಗಳಿಗೆ ಬೆಂಗಾವಲಾಗಿ ನಿಂತಿದ್ದಾರೆ ಎನ್ನುವುದು ಈ ಸಂಘಟನೆಯ ದೂರು.

ರೆಸಾರ್ಟ್‌ಗಳು ಮತ್ತು ಸಫಾರಿ ಚಟುವಟಿಕೆಗಳಿಂದ ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳವಾಗಿದೆ. ಕಾಡಿನೊಳಗಿನ ಕೆರೆಗಳು ಬತ್ತಿ, ಹುಲ್ಲುಗಾವಲು ನಾಶವಾಗಿ ಪ್ರಾಣಿಗಳು ನಾಡಿಗೆ ಬರುತ್ತಿವೆ. ಅಕ್ರಮ ರೆಸಾರ್ಟ್‌ಗಳಿಗೆ ಅನುಮತಿ ನೀಡಿದ ಅರಣ್ಯ ಇಲಾಖೆ ಅಧಿಕಾರಿಗಳನ್ನು ಜೈಲಿಗೆ ಕಳುಹಿಸಬೇಕು. ಆದರೆ, ಇಲ್ಲಿ ಪ್ರಶ್ನೆ ಮಾಡುವ ರೈತರ ಮೇಲೆಯೇ ಕೇಸ್ ದಾಖಲಿಸಲಾಗುತ್ತಿದೆ ಎಂದು ರೈತ ಮುಖಂಡ ಹೊನ್ನೂರು ಪ್ರಕಾಶ್ ಮತ್ತು ವಕೀಲ ರವಿಕುಮಾರ್ ದೂರುತ್ತಾರೆ. ಈ ದೂರಿನ ಬಗ್ಗೆ ತನಿಖೆ ನಡೆಸಿದರೆ ಅನೇಕ ಕಹಿ ಸತ್ಯಗಳು ಹೊರಬೀಳಬಹುದು. ಆದರೆ ಹಿಂದಿನ ಅನುಭವದ ಆಧಾರದಲ್ಲಿ ತನಿಖೆ ನಡೆಯುವುದಿಲ್ಲ ಎಂದು ಖಚಿತವಾಗಿ ಹೇಳಬಹುದು.

ವಿಶೇಷ ಎಂದರೆ ‘ಸೇವ್ ಕಬಿನಿ’ ನೀಡಿರುವ ರೆಸಾರ್ಟ್‌ಗಳ ಪಟ್ಟಿಯಲ್ಲಿ ರಾಜ್ಯ ಸರಕಾರ ಸ್ವಾಮ್ಯದ ‘ಜಂಗಲ್ ಲಾಡ್ಜಸ್’ ಕೂಡ ಇದೆ. ಕಬಿನಿ ಹಿನ್ನೀರು ಪ್ರದೇಶದ ಈ ಪ್ರತಿಷ್ಠಿತ ರೆಸಾರ್ಟ್‌ನಿಂದ ನಡೆಸುವ ಸಫಾರಿಯನ್ನು ಆನಂದಿಸಲು ದೇಶ ವಿದೇಶದಿಂದ ಪ್ರವಾಸಿಗರು ಬರುತ್ತಾರೆ. ಸಫಾರಿ ಚಟುವಟಿಕೆಯಿಂದ ವನ್ಯಜೀವಿಗಳ ಪ್ರಾಣಿ ಸಹಜ ಚಟುವಟಿಕೆಗಳಿಗೆ ಅಡ್ಡಿಯಾಗಿದೆ ಎನ್ನುವುದು ಇತ್ತೀಚಿನ ಆರೋಪ. ಈ ಆರೋಪಕ್ಕೆ ಈಗ ಸಚಿವ ಖಂಡ್ರೆ ಅವರೂ ದನಿಗೂಡಿಸಿದ್ದಾರೆ. ನಾಗರಹೊಳೆಯಲ್ಲಿ ಇನ್ನು ಮುಂದೆ ದಿನದ ಕೊನೆಯ ಸಫಾರಿ ರದ್ದು ಮಾಡಲಾಗುತ್ತದೆ ಎಂದು ಖಂಡ್ರೆ ಅವರು ಹೇಳಿದ್ದಾರೆ. ಅಗತ್ಯ ಬಿದ್ದರೆ ನಾಗರಹೊಳೆ ಸಫಾರಿಯನ್ನು ಶಾಶ್ವತವಾಗಿ ಬಂದ್ ಮಾಡಲಾಗುವುದೆಂಬ ಮಾತನ್ನೂ ಸಚಿವರು ಆಡಿದ್ದಾರೆ.

ಸದ್ಯದ ಮಟ್ಟಿಗೆ ಇದು ದೂರದ ಮಾತು. ಆದರೆ ವನ್ಯಜೀವಿ ಮತ್ತು ಮಾನವ ಸಂಘರ್ಷವನ್ನು ತಡೆಯುವ ನಿಟ್ಟಿನಲ್ಲಿ ಕಠಿಣ ಕ್ರಮ ಕೈಗೊಳ್ಳಲೇಬೇಕಾಗಿದೆ. ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಮಾನವ-ವನ್ಯಜೀವಿ ಸಂಘರ್ಷ ಪ್ರಮುಖ ಸಮಸ್ಯೆ. ಕಳೆದ 5 ವರ್ಷಗಳಲ್ಲಿ (2020-2025) ರಾಜ್ಯದಲ್ಲಿ 75ಕ್ಕೂ ಹೆಚ್ಚು ಹುಲಿಗಳು ಸಾವನ್ನಪ್ಪಿವೆ. ಇವುಗಳಲ್ಲಿ ಕನಿಷ್ಠ 13 ಹುಲಿಗಳು ಗುಂಡೇಟು, ಉರುಳು, ವಿಷ ಪ್ರಾಶನ, ವಿದ್ಯುತ್ ಆಘಾತದಂತಹ ಅಸ್ವಾಭಾವಿಕ ಕಾರಣಗಳಿಂದ ಮೃತಪಟ್ಟಿವೆ. 2023-24ರ ವರ್ಷವೊಂದರಲ್ಲಿಯೇ 101 ಆನೆಗಳು ಮೃತಪಟ್ಟಿವೆ. ಇವುಗಳಲ್ಲಿ 15 ಆನೆಗಳು ವಿದ್ಯುತ್ ಸ್ಪರ್ಶ, ಗುಂಡೇಟಿನಂತಹ ಅಸಹಜ ಕಾರಣಗಳಿಂದ ಮೃತಪಟ್ಟಿವೆ. 2021-25 ರ ಅವಧಿಯಲ್ಲಿ ವನ್ಯಜೀವಿ ಗಳ ದಾಳಿಯಿಂದಾಗಿ ಸುಮಾರು 270ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ವನ್ಯಜೀವಿಗಳ ಸಾವು ಹೆಚ್ಚಳ ಸಂಬಂಧ ಕರ್ನಾಟಕ ಹೈಕೋರ್ಟ್ ಕಳೆದ ವರ್ಷ ಸ್ವಯಂಪ್ರೇರಿತ ಪಿಐಎಲ್ ದಾಖಲಿಸಿ ಕೊಂಡು ವಿಚಾರಣೆ ಆರಂಭಿಸಿದೆ.

ರಾಜ್ಯದ ವಿವಿಧೆಡೆಗಳಲ್ಲಿ ವನ್ಯಜೀವಿಗಳು ಜನವಸತಿ ಮತ್ತು ಕೃಷಿ ಭೂಮಿಗೆ ಲಗ್ಗೆ ಇಡುವ ಪ್ರಕರಣಗಳು ಹೆಚ್ಚುತ್ತಲೇ ಸಾಗಿದ್ದು ಭಾರೀ ಪ್ರಮಾಣದಲ್ಲಿ ಬೆಳೆ ಹಾನಿ ಮಾತ್ರವಲ್ಲದೆ ಅಮಾಯಕ ರೈತರು ವನ್ಯಜೀವಿಗಳ ದಾಳಿಗೆ ತುತ್ತಾಗಿ ಜೀವ ಕಳೆದುಕೊಳ್ಳುತ್ತಿದ್ದಾರೆ. ಹಾಗೆಯೇ ವನ್ಯಜೀವಿಗಳು ಪ್ರಾಣ ಕಳೆದುಕೊಳ್ಳುತ್ತಿವೆ. ಪ್ರತಿ ವರ್ಷ ರಾಜ್ಯದಲ್ಲಿ ಸರಾಸರಿ 45ರಿಂದ 50 ಮಂದಿ ಕಾಡು ಪ್ರಾಣಿಗಳ ದಾಳಿಗೆ ಬಲಿಯಾಗುತ್ತಿದ್ದಾರೆ. ಅಂದರೆ ಪ್ರತಿ ತಿಂಗಳು ಸರಾಸರಿ ನಾಲ್ವರು ವನ್ಯಜೀವಿಗಳ ದಾಳಿಗೆ ಬಲಿಯಾಗುತ್ತಿದ್ದಾರೆ.

ವನ್ಯಸಂಘರ್ಷದಲ್ಲಿ ಮನುಷ್ಯನಿಗೆ ಮುಖ್ಯ ಎದುರಾಳಿ ಕಾಡಾನೆಗಳು. 5 ವರ್ಷಗಳಲ್ಲಿ 100ಕ್ಕೂ ಹೆಚ್ಚು ಮಂದಿ ಆನೆ ದಾಳಿಯಲ್ಲಿ ಮೃತಪಟ್ಟಿದ್ದಾರೆ. ಇದರ ಮೂರುಪಟ್ಟು ಮಂದಿ ತೀವ್ರವಾಗಿ ಗಾಯಗೊಂಡು ಶಾಶ್ವತವಾಗಿ ಅಂಗವೈಕಲ್ಯಕ್ಕೊಳಗಾಗಿದ್ದಾರೆ. ರಾಜ್ಯದ ಮಲೆನಾಡು, ಕರಾವಳಿ ಜಿಲ್ಲೆಗಳು, ಹಳೇ ಮೈಸೂರು ಭಾಗದ ಜಿಲ್ಲೆಗಳು, ಬೆಳಗಾವಿ ಸೇರಿದಂತೆ ಸುಮಾರು 14 ಜಿಲ್ಲೆಗಳು ಇಂದು ಕಾಡಾನೆ ದಾಳಿಯಿಂದ ತತ್ತರಿಸುತ್ತಿವೆ. ಕೊಡಗು, ಹಾಸನ, ಚಿಕ್ಕಮಗಳೂರು, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಹುಲಿ,ಚಿರತೆಗಳ ದಾಳಿ ಮತ್ತು ಸಾವು ವರ್ಷದಿಂದ ವರ್ಷ ದಿಂದ ಏರುತ್ತಾ ಸಾಗಿದೆ. ಇದರ ಜತೆ ಕಾಡಂಚಿನ ಭಾಗದಲ್ಲಿ ಕಾಡೆಮ್ಮೆ, ಹಂದಿ, ನವಿಲು, ಜಿಂಕೆ, ಕೋತಿ ಮತ್ತಿತರ ನಾನಾ ವನ್ಯಮೃಗಗಳ ಉಪಟಳವಿದೆ.

ರೆಸಾರ್ಟ್, ವಸತಿ ಮತ್ತು ಹೋಂ ಸ್ಟೇ ನೆಪದಲ್ಲಿ ಮತ್ತು ನಾನಾ ಯೋಜನೆಗಳ ಹೆಸರಿನಲ್ಲಿ ಮಾಡಿರುವ ಅನಾಹುತಗಳನ್ನು ಮರೆ ಮಾಚುವ ಸರಕಾರ ಕಾಡಂಚಿನ ಜನರನ್ನೇ ಅರಣ್ಯನಾಶ ಮತ್ತು ವನ್ಯ ಜೀವಿಗಳ ಸಾವಿಗೆ ಹೊಣೆ ಮಾಡುತ್ತಿದೆ. ವೀರಪ್ಪನ್ ಆಗಲಿ, ನಕ್ಸಲ್ ಸಮಸ್ಯೆಯಾಗಲಿ ವಿಜೃಂಭಿಸಲು ನೆಲದ ಸಮಸ್ಯೆಗಳೇ ಮೂಲ ಕಾರಣ. ಜನಪರ ಎಂದು ಹೇಳಿಕೊಳ್ಳುವ ಸರಕಾರ ಇದನ್ನು ಬಗೆಹರಿಸಲು ಅಗತ್ಯ ಕ್ರಮ ಕೈಗೊಳ್ಳಲೇಕು.

ಲೋಕೇಶ್​ ಕಾಯರ್ಗ

View all posts by this author