Lokesh Kaayarga Column: ಪರೀಕ್ಷೆಯ ಮಾನ ʼದಂಡʼವಾಗಬಾರದು
ರಾಜ್ಯ ಸರಕಾರ ಇದೇ ಶೈಕ್ಷಣಿಕ ವರ್ಷದಿಂದಲೇ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ತೇರ್ಗಡೆಗೆ ನಿಗದಿಪಡಿಸಲಾದ ಕನಿಷ್ಠ ಅಂಕಗಳ ಮಟ್ಟವನ್ನು ಶೇ.33ಕ್ಕೆ ಇಳಿಸಲು ಹೊರಟಿದೆ. ಈ ಮೂಲಕ ಉತ್ತೀರ್ಣರಾಗುವ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸಲು ಮುಂದಾಗಿದೆ. ಇದರ ಬದಲು ಎಸ್‌ಎಸ್‌ಎಲ್‌ಸಿವರೆಗೆ ‘ಉತ್ತೀರ್ಣ ಉಚಿತ’ ಎಂದು ಘೋಷಿಸಿದ್ದರೆ ವಿದ್ಯಾರ್ಥಿಗಳ ಪಾಲಿಗೆ ನಮ್ಮ ಶಿಕ್ಷಣ ಸಚಿವರು ಹೀರೋ ಆಗಿರುತ್ತಿದ್ದರು.
-
ಲೋಕೇಶ್ ಕಾಯರ್ಗ
Oct 29, 2025 7:56 AM
ಲೋಕಮತ
ಅನ್ನಭಾಗ್ಯ, ಹಣದ ಭಾಗ್ಯ, ಸಂಚಾರ ಭಾಗ್ಯ ಮತ್ತು ವಿದ್ಯುತ್ ಭಾಗ್ಯಗಳನ್ನು ಕೊಟ್ಟ ನಮ್ಮ ರಾಜ್ಯ ಸರಕಾರ ಆರನೇ ಭಾಗ್ಯವಾಗಿ ೧೬ ವರ್ಷ ದಾಟುವ ಎಲ್ಲ ಮಕ್ಕಳಿಗೆ ಉಚಿತವಾಗಿಯೇ ಎಸ್‌ಎಸ್ ಎಲ್‌ಸಿ ತೇರ್ಗಡೆ ಸರ್ಟಿಫಿಕೆಟ್ ವಿತರಿಸಿದರೆ ಹೇಗಿರಬಹುದು? ಇದರಿಂದ ಸರಕಾರಕ್ಕೆ ಹೆಚ್ಚುವರಿ ಆರ್ಥಿಕ ನಷ್ಟವಿಲ್ಲ. ಬದಲು ಹಲವು ರೀತಿಯಲ್ಲಿ ಉಳಿತಾಯವಿದೆ.
ಈ ಪರೀಕ್ಷೆಗೆ ಮಕ್ಕಳನ್ನು ಸಜ್ಜುಗೊಳಿಸ ಲು ಶಿಕ್ಷಕರು ಪರಿಶ್ರಮಪಡಬೇಕಿಲ್ಲ. ಪಾಲಕರು ಟ್ಯೂಷನ್ ಗೆ ಹಣ ವ್ಯಯಿಸಬೇಕಿಲ್ಲ. ಸರಕಾರವು ಬಿಇಒಗಳಿಗೆ, ಡಿಡಿಪಿಐಗಳಿಗೆ ಗುರಿ ನಿಗದಿಪಡಿಸಬೇಕಿಲ್ಲ. ಶೈಕ್ಷಣಿಕ ಜಿಲ್ಲೆಗಳ ನಡುವೆ ಪೈಪೋಟಿಯೂ ಇಲ್ಲ. ಭಾವೀ ಮತದಾರರನ್ನು ಎರಡು ವರ್ಷಕ್ಕೆ ಮೊದಲೇ ತನ್ನತ್ತ ಒಲಿಸಿಕೊಳ್ಳಲು ಆಳುವ ಸರಕಾರಕ್ಕಿದು ಸುಲಭದ ಮಾರ್ಗ !
ಒಂದರಿಂದ ೯ರವರೆಗೆ ಎಲ್ಲರನ್ನೂ ಉತ್ತೀರ್ಣಗೊಳಿಸುವ ನೀತಿ ಈಗಾಗಲೇ ಜಾರಿಯಲ್ಲಿದೆ. ಒಂದು ಹೆಜ್ಜೆ ಮುಂದಕ್ಕೆ ಸಾಗಿ ಎಸ್ಸೆಸ್ಸೆಲ್ಸಿವರೆಗೂ ಉತ್ತೀರ್ಣ ಉಚಿತ ಎಂದು ಘೋಷಿಸಿದರೆ ‘ಉಚಿತ ಮತ್ತು ಕಡ್ಡಾಯ’ ಶಿಕ್ಷಣದ ಆಶಯವೂ ಈಡೇರಿದಂತಾಗುತ್ತದೆ. ಪ್ರಾಥಮಿಕ ಶಿಕ್ಷಣ ಸಚಿವರ ತಲೆಭಾರವೂ ಕಡಿಮೆಯಾಗುತ್ತದೆ!
ಇದನ್ನೂ ಓದಿ: Lokesh Kaayarga Column: ಗಣತಿ ಪ್ರಹಸನ ಬದಲು ಬೇರೆ ಆಯ್ಕೆಗಳಿಲ್ಲವೇ ?
ರಾಜ್ಯ ಸರಕಾರ ಇದೇ ಶೈಕ್ಷಣಿಕ ವರ್ಷದಿಂದಲೇ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ತೇರ್ಗಡೆಗೆ ನಿಗದಿಪಡಿಸಲಾದ ಕನಿಷ್ಠ ಅಂಕಗಳ ಮಟ್ಟವನ್ನು ಶೇ.33ಕ್ಕೆ ಇಳಿಸಲು ಹೊರಟಿದೆ. ಈ ಮೂಲಕ ಉತ್ತೀರ್ಣರಾಗುವ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸಲು ಮುಂದಾಗಿದೆ. ಇದರ ಬದಲು ಎಸ್‌ಎಸ್‌ಎಲ್‌ಸಿವರೆಗೆ ‘ಉತ್ತೀರ್ಣ ಉಚಿತ’ ಎಂದು ಘೋಷಿಸಿದ್ದರೆ ವಿದ್ಯಾರ್ಥಿಗಳ ಪಾಲಿಗೆ ನಮ್ಮ ಶಿಕ್ಷಣ ಸಚಿವರು ಹೀರೋ ಆಗಿರುತ್ತಿದ್ದರು.
ನಮ್ಮ ದೇಶದಲ್ಲಿ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕು ಜಾರಿಗೆ ಬಂದು 23 ವರ್ಷಗಳಾದವು. ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ 2002ರಲ್ಲಿ ಜಾರಿ ಮಾಡಿದ 86ನೇ ಸಂವಿಧಾನ ತಿದ್ದುಪಡಿ ಕಾನೂನು ಶಿಕ್ಷಣವನ್ನು ಮೂಲಭೂತ ಹಕ್ಕನ್ನಾಗಿ ಮಾಡಿದೆ. ಸಂವಿಧಾನದ 21ಎ ವಿಧಿ ಪ್ರಕಾರ ೬ ರಿಂದ 14 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಸರಕಾರವು ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಒದಗಿಸಬೇಕು.
ಆದರೆ ಸರಕಾರಗಳು ನ್ಯಾಯಾಲಯದ ನಿರ್ದೇಶನವನ್ನೇ ತಪ್ಪಾಗಿ ಅರ್ಥೈಸಿಕೊಂಡು ‘ಎಲ್ಲರಿಗೂ ಉತ್ತೀರ್ಣತೆಯ ಪ್ರಮಾಣ ಪತ್ರ’ ನೀಡಿ ‘ಉಚಿತ ಶಿಕ್ಷಣ’ದ ಆಶಯವನ್ನು ಸಾಕಾರಗೊಳಿಸಲು ಮುಂದಾದವು. ತೇರ್ಗಡೆಯ ಮಾನದಂಡವನ್ನೇ ಇಳಿಸಲು ಹೊರಟಿರುವುದು ಇದರ ಮುಂದು ವರಿದ ಭಾಗ. 2010ರ ಶಿಕ್ಷಣ ಹಕ್ಕು ಕಾಯಿದೆ ( ಆರ್‌ಟಿಇ) ಪ್ರಕಾರ ಮಕ್ಕಳ ಕಲಿಕೆಯ ಗುಣಮಟ್ಟ ಏನೇ ಆಗಿರಲಿ ೮ನೇ ತರಗತಿವರೆಗೆ ಯಾವ ಮಕ್ಕಳನ್ನೂ ಅನುತ್ತೀರ್ಣಗೊಳಿಸದಿರಲು ನಿರ್ಧರಿಸ ಲಾಯಿತು.
ಫೇಲಾದ ಮಕ್ಕಳು ಶಾಲಾ ಶಿಕ್ಷಣವನ್ನು ಅರ್ಧಕ್ಕೆ ತೊರೆಯಬಾರದೆನ್ನುವುದು ಈ ಆದೇಶದ ಹಿಂದಿನ ಕಳಕಳಿಯಾಗಿತ್ತು. ಆದರೆ ಪಾಸ್/ಫೇಲ್ ನಿಯಮವು ರದ್ದಾದ ಬೆನ್ನಿಗೇ ಕಲಿಕೆಯ ಮಟ್ಟವೂ ಅಷ್ಟಕಷ್ಟೇ ಎಂಬಂತಾಯಿತು.
ಶಿಕ್ಷಕರೂ ಜವಾಬ್ದಾರಿ ಮರೆತರು. ಎಂಟನೇ ಕ್ಲಾಸ್ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ 100ರ ತನಕ ಸರಿಯಾಗಿ ಅಂಕಿಗಳನ್ನು ಆರೋಹಣ/ ಅವರೋಹಣ ಪದ್ಧತಿಯಲ್ಲಿ ಹೇಳಲು ಬರುವುದಿಲ್ಲ ಎಂದು ದೂರುಗಳು ಬಂದ ಬಳಿಕ 2019ರಲ್ಲಿ ಈ ನೀತಿಯನ್ನು ರದ್ದು ಮಾಡಲಾಯಿತು. ಕೇಂದ್ರ ಸರಕಾರ ಐದು ಮತ್ತು ಎಂಟನೇ ತರಗತಿಗಳಿಗೆ ವಾರ್ಷಿಕ ಮೌಲ್ಯಮಾಪನ ಕಡ್ಡಾಯಗೊಳಿಸಿತು.
ಈ ನಿಯಮದ ಪ್ರಕಾರ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಹೆಚ್ಚುವರಿ ತರಬೇತಿ ನೀಡಿ ಮರುಪರೀಕ್ಷೆಗೆ ಅವಕಾಶ ನೀಡಬೇಕು. ಮರುಪರೀಕ್ಷೆಯಲ್ಲಿಯೂ ಅನುತ್ತೀರ್ಣರಾದರೆ, ಅಂತಹ ವಿದ್ಯಾರ್ಥಿಗಳನ್ನು ಅದೇ ತರಗತಿಯಲ್ಲಿ ಉಳಿಸಿಕೊಳ್ಳಬೇಕು. ಆದರೆ ಕರ್ನಾಟಕವೂ ಸೇರಿದಂತೆ ಬಹುತೇಕ ರಾಜ್ಯಗಳಲ್ಲೂ ಈ ನಿಯಮ ಪಾಲನೆಯಾಗುತ್ತಿಲ್ಲ.
೮ರ ತನಕವಿದ್ದ ಕಡ್ಡಾಯ ಉತ್ತೀರ್ಣತೆಯನ್ನು ಈಗ ೯ರ ತನಕವೂ ವಿಸ್ತರಿಸಲಾಗಿದೆ. ಸಿಬಿಎಸ್‌ಇ ಶಾಲೆಗಳು ಸೇರಿದಂತೆ ಯಾವ ಶಾಲೆಗಳಲ್ಲೂ ೯ನೇ ತರಗತಿ ವರೆಗೆ ವಿದ್ಯಾರ್ಥಿಗಳನ್ನು ಅನುತ್ತೀರ್ಣ ಗೊಳಿಸುವ ಧೈರ್ಯ ಮಾಡುತ್ತಿಲ್ಲ. ಒಂದು ವೇಳೆ ವಿದ್ಯಾರ್ಥಿ ಕಲಿಕೆಯಲ್ಲಿ ತೀರಾ ಹಿಂದುಳಿದಿದ್ದರೆ ಕೆಲವು ಖಾಸಗಿ ಶಾಲೆಗಳು ೯ನೇ ತರಗತಿ ಪಾಸಾದ ವಿದ್ಯಾರ್ಥಿಗಳಿಗೆ ಟಿಸಿ ಕೊಟ್ಟು ಬೇರೆ ಶಾಲೆಗಳಿಗೆ ಸೇರಿಸಲು ಒತ್ತಡ ಹೇರುತ್ತವೆ. ಈ ಮೂಲಕ ನೂರು ಪ್ರತಿಶತ ತೇರ್ಗಡೆಯ ತಮ್ಮ ದಾಖಲೆ ಉಳಿಸಿ ಕೊಳ್ಳುತ್ತವೆ.
ಆದರೆ ಈ ಕಸರತ್ತಿನಲ್ಲಿ ನಮ ಶಾಲಾ ಶಿಕ್ಷಣದ ಗುಣಮಟ್ಟ ಹಳ್ಳ ಹಿಡಿದಿರುವ ಬಗ್ಗೆ ಯಾರೂ ಚಿಂತಿಸಲಿಲ್ಲ. ತಜ್ಞರೆನಿಸಿಕೊಂಡವರು, ‘ಸಾರ್ವತ್ರಿಕ ಶಿಕ್ಷಣದಲ್ಲಿ ಈ ರೀತಿಯ ಏರುಪೇರು ಸಾಮಾನ್ಯ, ಮಕ್ಕಳು ಶಾಲಾ ಮೆಟ್ಟಿಲು ಹತ್ತುವುದು ಎಲ್ಲಕ್ಕಿಂತ ಮುಖ್ಯ’ ಎಂದರು. ಕೋವಿಡ್ ಸಂದರ್ಭದಲ್ಲಿ ಎರಡು ವರ್ಷಗಳ ಕಾಲ ಕ್ಲಾಸ್ ರೂಮ್ ಕಲಿಕೆಯಿಂದ ದೂರವುಳಿದ ಗ್ರಾಮೀಣ ಪ್ರದೇಶದ ಕೆಲವು ವಿದ್ಯಾರ್ಥಿಗಳಿಗೆ ಗಣಿತದ ಸರಳ ಲೆಕ್ಕಾಚಾರಗಳನ್ನೂ ಬಿಡಿಸಲು ಬರುತ್ತಿರಲಿಲ್ಲ.
ಅಕ್ಷರ ಫೌಂಡೇಷನ್ ಕರ್ನಾಟಕದ 2625 ಗ್ರಾಮ ಪಂಚಾಯತಿ ವ್ಯಾಪ್ತಿಗಳಲ್ಲಿ 2022ರ ನವೆಂಬರ್ ನಿಂದ 2023ರ ಮಾರ್ಚ್‌ವರೆಗೆ ಸಮೀಕ್ಷೆ ನಡೆಸಿದಾಗ ವಿದ್ಯಾರ್ಥಿಗಳ ಕಲಿಕೆಯ ಗುಣಮಟ್ಟ ತೀರಾ ಕುಸಿದಿರುವುದನ್ನು ಗುರುತಿಸಿತ್ತು. ಈ ಮಕ್ಕಳಿಗೆ ತಮ್ಮ ಹಿಂದಿನ ತರಗತಿಗಳಲ್ಲಿ ಓದಿದ ಸಂಕಲನ, ವ್ಯವಕಲನ, ಗುಣಾಕಾರ, ಭಾಗಾಕಾರಗಳು ಬರುತ್ತಿರಲಿಲ್ಲ.
ಭಾಷಾ ಕಲಿಕೆಯಲ್ಲೂ ಇವರು ತೀರಾ ಹಿಂದುಳಿದಿದ್ದರು. ಕಳೆದ ವರ್ಷ ಕೇಂದ್ರ ಸರಕಾರ ನಡೆಸಿದ ಸಮೀಕ್ಷೆಯ ಪ್ರಕಾರ, ಇಡೀ ದೇಶದ ಶಿಕ್ಷಣ ವ್ಯವಸ್ಥೆಯ ಗುಣಮಟ್ಟದಲ್ಲಿ ಕುಸಿತ ಕಂಡುಬಂದಿದೆ. ೬ ನೇ ತರಗತಿಯಲ್ಲಿ, ಕೇವಲ ಶೇ.54ರಷ್ಟು ವಿದ್ಯಾರ್ಥಿಗಳು ಮಾತ್ರ ಗುಣಾಕಾರ ಮತ್ತು ಭಾಗಾಕಾರ ವನ್ನು ಅರ್ಥಮಾಡಿಕೊಳ್ಳಲು ಶಕ್ತರಾಗಿದ್ದಾರೆ ಎಂದು ಈ ವರದಿ ತಿಳಿಸಿದೆ.
ಕುಸಿದಿರುವ ಶಿಕ್ಷಣ ಗುಣಮಟ್ಟವನ್ನು ಮತ್ತೆ ಮೆಲಕ್ಕೆತ್ತುವುದು ಹೇಗೆ ಎನ್ನುವುದು ಶಿಕ್ಷಣ ತಜ್ಞರು, ಪಾಲಕರ ಚಿಂತೆಯಾದರೆ ಕರ್ನಾಟಕದಲ್ಲಿ ಮಕ್ಕಳ ಉತ್ತೀರ್ಣತೆಯ ಪ್ರಮಾಣವನ್ನು ಏರಿಸುವುದು ಅಧಿಕಾರಿಗಳು ಮತ್ತು ಶಿಕ್ಷಣ ಸಚಿವರ ಚಿಂತೆಯಾಗಿದೆ. ಮೂರು ವರ್ಷಗಳ ಹಿಂದೆ ಕೋವಿಡ್ ನೆಪದಲ್ಲಿ ಬಹುತೇಕ ಎಲ್ಲ ಮಕ್ಕಳನ್ನು ತೇರ್ಗಡೆ ಎಂದು ಘೋಷಿಸಲಾಯಿತು.
2023-24ರಲ್ಲಿ ಶೇಕಡಾವಾರು ಫಲಿತಾಂಶ ಕುಸಿದಾಗ ನಕಲು ಪ್ರಮಾಣವನ್ನು ತಡೆಯಲು ಸರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರಿಂದ ಫಲಿತಾಂಶದಲ್ಲಿ ಕುಸಿತ ಕಂಡು ಬಂದಿದೆ ಎಂದು ಕಾರಣ ನೀಡಲಾಯಿತು. ಅಂದರೆ ಈವರೆಗೆ ಪರೀಕ್ಷೆ ಪಾಸಾದವರಲ್ಲಿ ಅನೇಕರು ನಕಲು ಹೊಡೆದೇ ಪಾಸಾ ಗಿದ್ದಾರೆ ಎನ್ನುವುದನ್ನು ಸರಕಾರವೇ ಒಪ್ಪಿಕೊಂಡಿದೆ.
ಎಸ್‌ಎಸ್‌ಎಲ್‌ಸಿ ಅಥವಾ ಪಿಯುಸಿ ಹಂತದಲ್ಲಿ ವಿದ್ಯಾರ್ಥಿಗಳೂ ಈ ಹಿಂದೆಯೂ ಫೇಲಾಗಿದ್ದರು. ಇವರಲ್ಲಿ ಅನೇಕರು ಮರುಪರೀಕ್ಷೆ ಬರೆದು ಶಿಕ್ಷಣ ಮುಂದುವರಿಸುತ್ತಿದ್ದರು. ಕೆಲವರು ಶಿಕ್ಷಣವನ್ನು ಅರ್ಧಕ್ಕೇ ಕೈ ಬಿಡುತ್ತಿದ್ದರು. ಇಂಥವರು ಈಗ ಶಿಕ್ಷಣ ಮೊಟಕುಗೊಳಿಸುವ ಅಗತ್ಯವಿಲ್ಲ. ಎಸ್ಸೆಸ್ಸೆಲ್ಸಿ ಮತ್ತು ಪಿಯು ಹಂತದಲ್ಲಿ ಮೊದಲ ಫಲಿತಾಂಶ ಪ್ರಕಟವಾದ ಬೆನ್ನಿಗೇ ಎರಡು ಬಾರಿ ಪರೀಕ್ಷೆ ಗಳನ್ನು ಬರೆಯಲು ಸರಕಾರವೇ ಅವಕಾಶ ಮಾಡಿಕೊಟ್ಟಿದೆ.
ಮೊದಲ ಬಾರಿ ಫೇಲಾದರೂ, ಎರಡು ಅಥವಾ ಮೂರನೇ ಬಾರಿಗೆ ಪರೀಕ್ಷೆ ಬರೆದು ಇವರು ತಮ್ಮ ವ್ಯಾಸಂಗ ಮುಂದುವರಿಸಬಹುದು. ತಮ್ಮ ಶಿಕ್ಷಣದ ಬಗ್ಗೆ ಕಾಳಜಿಯುಳ್ಳವರಿಗೆ ಇದಕ್ಕಿಂತ ಹೆಚ್ಚಿನ ಅವಕಾಶ ನೀಡುವ ಅಗತ್ಯವಿಲ್ಲ. ಆದರೆ ರಾಜ್ಯ ಸರಕಾರ ಈಗ ತೇರ್ಗಡೆಗೆ ನಿಗದಿ ಮಾಡಲಾದ ಶೇ.35ರ ಅಂಕ ಮಿತಿಯನ್ನು ಶೇ. 3ಕ್ಕಿಳಿಸಲು ಮುಂದಾಗಿದೆ.
ಎಸ್ಸೆಸ್ಸೆಲ್ಸಿಯಲ್ಲಿ ಪ್ರತಿ ವಿಷಯದಲ್ಲಿ ಕನಿಷ್ಠ 30 ಅಂಕಗಳನ್ನು ಪಡೆದು ಒಟ್ಟು 625 ಅಂಕಗಳಿಗೆ ಕನಿಷ್ಠ 206 ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳು ತೇರ್ಗಡೆಯಾಗುತ್ತಾರೆ. ಇದೇ ರೀತಿ ದ್ವಿತೀಯ ಪಿಯುಸಿಯಲ್ಲಿ ಒಟ್ಟು 600 ಅಂಕಗಳಿಗೆ ಕನಿಷ್ಠ 198 ಅಂಕಗಳನ್ನು ಅಂಕ ಪಡೆದ ವಿದ್ಯಾರ್ಥಿಗಳು ಉತ್ತೀರ್ಣರಾಗುತ್ತಾರೆ.
ಆಂತರಿಕ ಮೌಲ್ಯಮಾಪನದಲ್ಲಿ ಆಯಾ ಶಾಲೆಗಳು ಪ್ರತಿ ವಿಷಯಕ್ಕೆ 20ಕ್ಕೆ 20 ಅಂಕಗಳನ್ನು ನೀಡಿದರೆ ಉಳಿದಂತೆ ವಿದ್ಯಾರ್ಥಿ ಕೇವಲ ೧೩ ಅಂಕಗಳನ್ನು ಪಡೆದರೆ ಸಾಕು. ಇದರೊಂದಿಗೆ ಪ್ರಶ್ನೆಪತ್ರಿಕೆ ರಚನಾಕಾರರಿಗೆ ಮಾತ್ರ ಸೀಮಿತವಾಗಿದ್ದ ಪ್ರಶ್ನೆ ಪತ್ರಿಕೆ ನೀಲನಕಾಶೆಯನ್ನು ವಿದ್ಯಾರ್ಥಿ ಗಳು ಮತ್ತು ಶಿಕ್ಷಕರೊಂದಿಗೆ ಕಡ್ಡಾಯವಾಗಿ ಹಂಚಿಕೊಳ್ಳಬೇಕೆಂದು ಸರಕಾರವೇ ಸುತ್ತೋಲೆ ಹೊರಡಿಸಿದೆ.
ಇದರ ಪ್ರಕಾರ ಯಾವ ಘಟಕದಲ್ಲಿ ಎಷ್ಟು ಅಂಕಗಳ ಪ್ರಶ್ನೆಗಳನ್ನು ಕೇಳಲಾಗುತ್ತದೆ ಎಂಬ ಮಾಹಿತಿ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಮೊದಲೇ ತಿಳಿಯುತ್ತದೆ. ವಿದ್ಯಾರ್ಥಿಗಳು ಪರೀಕ್ಷೆಗೆ ಎರಡು ವಾರ ಮೊದಲು ಕನಿಷ್ಠ ಮೂರರಿಂದ ನಾಲ್ಕು ಪಾಠಗಳನ್ನಷ್ಟೇ ಶ್ರದ್ಧೆಯಿಂದ ಓದಿದರೂ ನಪಾಸಾಗ ಲಾರರು. ನಿಜ ಹೇಳಬೇಕೆಂದರೆ ಈಗ ಪಾಸಾಗುವುದಕ್ಕಿಂತ ಫೇಲಾಗುವುದೇ ಕಷ್ಟ !
ರಾಜ್ಯ ಸರಕಾರ ಮಾನದಂಡ ಇಳಿಕೆಯ ಮೂಲಕ ಯಾವ ಸಾಧನೆ ಮಾಡಲು ಹೊರಟಿದೆ ಗೊತ್ತಿಲ್ಲ. ಇದರಿಂದ ಪರೋಕ್ಷವಾಗಿ ಮತ್ತೆ ನಷ್ಟ ಅನುಭವಿಸುವವರು ಗ್ರಾಮೀಣ ಭಾಗದ ಬಡ ವಿದ್ಯಾರ್ಥಿ ಗಳು. ಹಿಂದೊಮ್ಮೆ ‘ಗುಣಮಟ’ಕ್ಕೆ ಹೆಸರಾಗಿದ್ದ ಸರಕಾರಿ ಶಿಕ್ಷಣ ವ್ಯವಸ್ಥೆಯನ್ನು ಸರಕಾರವೇ ಕತ್ತು ಹಿಸುಕಿ ಸಾಯಿಸಲು ಹೊರಟಿದೆ. ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ.
ತಮ್ಮ ಮಕ್ಕಳ ಜೀವನಕ್ಕೆ ಅಗತ್ಯವಾದ ಇಂಗ್ಲಿಷ್ ಭಾಷೆಯ ಶಿಕ್ಷಣ ಸಿಗುತ್ತಿಲ್ಲ ಎನ್ನುವ ಕಾರಣಕ್ಕೆ ಕೆಳ ಮಧ್ಯಮವರ್ಗದ ಜನರೂ ತಮ್ಮ ಜೀವಿತಾವಧಿಯ ಗಳಿಕೆಯೆಲ್ಲವನ್ನೂ ಮಕ್ಕಳ ಫೀಸಿಗೆ ಸುರಿದು ಖಾಸಗಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ.
ಒಂದು ವೇಳೆ ಸರಕಾರ ಉತ್ತೀರ್ಣತೆಯ ಪ್ರಮಾಣವನ್ನು ಲೆಕ್ಕಿಸದೇ ಸರಕಾರಿ ಶಿಕ್ಷಣದ ಗುಣಮಟ್ಟ ವನ್ನು ಮೇಲಕ್ಕೆತ್ತಲು ಕ್ರಮ ಕೈಗೊಂಡಿದ್ದರೆ ಖಾಸಗಿ ಶಾಲೆಗಳ ವಿದ್ಯಾರ್ಥಿಗಳೂ ಇತ್ತ ಮರಳಿ ಬರುವ ಅವಕಾಶಗಳಿತ್ತು. ಆದರೆ ಸರಕಾರ ಇಡೀ ಶಿಕ್ಷಣ ವ್ಯವಸ್ಥೆಯನ್ನು ಖಾಸಗಿ ರಂಗಕ್ಕೆ ವಹಿಸಲು ಟೊಂಕ ಕಟ್ಟಿ ನಿಂತಿದೆ.
ಬಡತನ ಮತ್ತು ಸಿರಿತನದ ವಿಚಾರ ಬಂದಾಗ ನಮ್ಮಲ್ಲಿ ಬಡವರ ಭಾರತವೂ ಇದೆ. ಅತಿ ಶ್ರೀಮಂತರ ಇಂಡಿಯಾವೂ ಇದೆ. ವಿಶ್ವದ ನಾಲ್ಕನೇ ಅತಿ ದೊಡ್ಡ ಆರ್ಥಿಕತೆ ಹೊಂದಿದ ದೇಶದಲ್ಲಿ ಶೇ. 40ರಷ್ಟು ಸಂಪತ್ತು ಶೇ. ಒಂದರಷ್ಟು ಜನರ ಕೈಯಲ್ಲಿದೆ. ನಮ್ಮ ಶಿಕ್ಷಣ ವ್ಯವಸ್ಥೆಯೂ ಇದೇ ರೀತಿ ಎರಡು ಹೋಳಾಗಿದೆ.
ಖಾಸಗಿ ಮತ್ತು ಸರಕಾರಿ ಶಾಲೆಗಳಲ್ಲಿ ಓದುವ ಮಕ್ಕಳ ನಡುವೆ ಆರ್ಥಿಕ ಮತ್ತು ಸಾಮಾಜಿಕ ಅಂತರ ದಿನದಿಂದ ದಿನಕ್ಕೇ ಏರುತ್ತಲೇ ಇದೆ. ವಿಶ್ವ ಮಟ್ಟದ ಶಿಕ್ಷಣವನ್ನು ಬಯಸುವ, ಐಐಟಿಗಳಲ್ಲಿ ಪ್ರವೇಶ ಬಯಸಿ ಶೇ.100ರ ಅಂಕ ಗಳಿಕೆಗಾಗಿ ಪ್ರಯತ್ನಿಸುವ ವಿದ್ಯಾರ್ಥಿ ವೃಂದ ಒಂದೆಡೆಯಾದರೆ, ಶೇ.33 ಅಂಕ ಗಳಿಕೆಯೊಂದಿಗೆ ಜಸ್ಟ್ ಪಾಸಾದರೆ ಸಾಕು ಎಂಬ ಬಹುದೊಡ್ಡ ವಿದ್ಯಾರ್ಥಿ ಸಮೂಹ ಎರಡು ದಡಗಳಲ್ಲಿ ನಿಂತಿವೆ.
ಇವರು ಎರಡು ಭಾರತಗಳ ಪ್ರತಿನಿಧಿಗಳಾಗಿದ್ದಾರೆ. ಎರಡನೇ ವರ್ಗಕ್ಕೂ ಗುಣಮಟ್ಟದ ಶಿಕ್ಷಣ ದೊರಕುವಂತಾದರೆ ಮಾತ್ರ ಈ ಅಂತರವನ್ನು ಕಡಿಮೆ ಮಾಡಬಹುದು. ಇದಕ್ಕೆ ಪರೀಕ್ಷೆಯ ಮಾನ ‘ದಂಡ’ವನ್ನು ಉಳಿಸಿಕೊಳ್ಳಲೇಬೇಕು.