Dr Vijay Darda Column: ಅಕ್ರಮ ವಲಸಿಗರು ದೇಶ ಬಿಟ್ಟ ತೊಲಗಲೇಬೇಕು
ಭಾರತಕ್ಕೂ ಅಕ್ರಮ ವಲಸಿಗರ ಸಮಸ್ಯೆ ಬೇಕಾದಷ್ಟಿದೆ. ಬಾಂಗ್ಲಾದೇಶ, ನೇಪಾಳ, ಪಾಕಿ ಸ್ತಾನ, ಶ್ರೀಲಂಕಾ, ಅಫ್ಘಾನಿಸ್ತಾನ, ಇರಾನ್ ಹೀಗೆ ಸಾಕಷ್ಟು ದೇಶಗಳಿಂದ ಇಲ್ಲಿಗೆ ಅಕ್ರಮ ವಲಸೆ ನಡೆಯುತ್ತಿದೆ. ಸದ್ಯಕ್ಕೆ ಟ್ರಂಪ್ ಹೇಗೆ ಅಕ್ರಮ ವಲಸಿಗರ ವಿರುದ್ಧ ಕ್ರಮ ಕೈಗೊಂಡು, ಭಯೋತ್ಪಾದಕರ ಬೆನ್ನು ಮೂಳೆ ಮುರಿಯಲಿದ್ದಾರೆ ಎಂಬುದನ್ನು ಕಾದು ನೋಡೋಣ.
ಸಂಗತ
ಡಾ.ವಿಜಯ್ ದರಡಾ
ಟ್ರಂಪ್.. ಟ್ರಂಪ್.. ಟ್ರಂಪ್! ಸದ್ಯಕ್ಕೆ ಇಡೀ ಜಗತ್ತು ಒಂದೇ ಮಂತ್ರ ಪಠಿಸುತ್ತಿದೆ. ಯಾವ ಪತ್ರಿಕೆ, ಟೀ ಚಾನಲ್ಲುಗಳಲ್ಲಿ ನೋಡಿದರೂ ಟ್ರಂಪ್ ಜಪ. ಜಾಗತಿಕ ನಾಯಕರು ಕೂಡ ಟ್ರಂಪ್ ಜಪ ಮಾಡು ತ್ತಿದ್ದಾರೆ. ಒಟ್ಟಿನಲ್ಲಿ ಎಲ್ಲರ ಗಮನ ಟ್ರಂಪ್ ಅಮೆರಿಕದಲ್ಲಿ ಏನು ಮಾಡಲಿದ್ದಾರೆ ಮತ್ತು ಜಗತ್ತಿಗೆ ಏನು ಮಾಡಲಿದ್ದಾರೆ ಎಂಬುದರ ಮೇಲೆ ನೆಟ್ಟಿದೆ. ಜಗತ್ತಿಗೆ ಒಂಥರಾ ಭಯ ಕೂಡ ಆವರಿಸಿ ಕೊಂಡಿದೆ. ಬೇರೆ ಬೇರೆ ದೇಶದ ಉದ್ಯುಗಳಿಂದ ಹಿಡಿದು ಜಾಗತಿಕ ನಾಯಕರವರೆಗೆ ಎಲ್ಲರೂ ಟ್ರಂಪ್ ನಾಳೆ ಬೆಳಿಗ್ಗೆ ಯಾವ ಹೊಸ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಕುತೂಹಲದಿಂದ ಕಾಯುವಂತಾ ಗಿದೆ. ನಾಳೆ ಇನ್ನೇನು ಹೊಸ ಘೋಷಣೆ ಮಾಡುತ್ತಾರೋ, ಯಾರ ಮೂಗುದಾರ ಬಿಗಿ ಮಾಡು ತ್ತಾರೋ, ನಮಗೇನು ಕಾದಿದೆಯೋ ಎಂದು ಆತಂಕದಿಂದ ಎದುರು ನೋಡುತ್ತಿದ್ದಾರೆ.
ಇದನ್ನೂ ಓದಿ: Dr Vijay Darda Column: ದೇವ ಭಾವು ವಿಶ್ವಾಸಾರ್ಹವಾಗಿ ಬಂಡವಾಳ ಬೇಟೆಯ ಗರಿ !
ಒಂದು ಸಂಗತಿಯನ್ನು ಗಮನಿಸಿ- ಟ್ರಂಪ್ ಬ್ರಿಕ್ಸ್ ದೇಶಗಳ ವಿಷಯದಲ್ಲಿ ಬಿಗಿ ನಿಲುವು ತಾಳಿದ್ದಾರೆ. ಬ್ರಿಕ್ಸ್ ದೇಶಗಳು ಡಾಲರ್ ವಿರುದ್ಧ ಯಾವುದೇ ಸ್ಥಳೀಯ ಕರೆನ್ಸಿಯನ್ನು ಎತ್ತಿ ಕಟ್ಟಿದರೂ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ನೇರಾನೇರ ಎಚ್ಚರಿಕೆ ನೀಡಿದ್ದಾರೆ. ನಿಮಗೆ ನೆನಪಿರಬಹುದು, ಹಿಂದೊಮ್ಮೆ ಇರಾಕ್‌ನ ಅಧ್ಯಕ್ಷ ಸದ್ದಾಂ ಹುಸೇನ್ ಡಾಲರ್‌ನಲ್ಲಿ ಜಾಗತಿಕ ವ್ಯವಹಾರ ನಡೆಸುವು ದನ್ನು ಕೈಬಿಟ್ಟು ಯುರೋ ಕರೆನ್ಸಿ ಬಳಸಲು ಮುಂದಾಗಿದ್ದರು.
ನಂತರ ಸದ್ದಾಂ ಕತೆ ಏನಾಯಿತು ಎಂಬುದು ಜಗತ್ತಿಗೇ ಗೊತ್ತಿದೆ. ಅಮೆರಿಕ ಯಾವತ್ತೂ ಯಾವ ವಿಷಯದಲ್ಲೂ ತನ್ನ ಹಿತಕ್ಕೆ ಧಕ್ಕೆ ಬರುವುದನ್ನು ಸಹಿಸುವುದಿಲ್ಲ. ಹೀಗಾಗಿ ಈಗ ಚೀನಾ ಕೂಡ ಇಕ್ಕಟ್ಟಿಗೆ ಸಿಲುಕಿದೆ. ಟ್ರಂಪ್‌ಗೆ ಒಂದು ಬಾಲಿವುಡ್ ಸಿನಿಮಾದ ಡೈಲಾಗ್ ಬಹಳ ಚೆನ್ನಾಗಿ ಹೊಂದುತ್ತದೆ.
‘ಒಂದು ಸಲ ನಾನೊಂದು ನಿರ್ಧಾರ ಕೈಗೊಂಡರೆ ಮತ್ತೆ ನಾನೇ ನನ್ನ ಮಾತು ಕೇಳುವುದಿಲ್ಲ. ‘ಟ್ರಂಪ್ ತಮ್ಮ ಚುನಾವಣಾ ಪ್ರಚಾರದ ಸಮಯದಲ್ಲಿ ನೀಡಿದ್ದ ಭರವಸೆಗಳನ್ನೆಲ್ಲ ಈಗ ಒಂದಾದ ಮೇಲೆ ಒಂದರಂತೆ ತರಾತುರಿಯಲ್ಲಿ ಜಾರಿಗೊಳಿಸುತ್ತಿದ್ದಾರೆ. ಅಮೆರಿಕಕ್ಕೆ ಅಕ್ರಮವಾಗಿ ಪ್ರವೇಶ ಮಾಡಿದವರೆನ್ನಲ್ಲ ಬಂಧಿಸಿ ಜೈಲಿಗೆ ತಳ್ಳುತ್ತಿದ್ದಾರೆ. ಹೀಗಾಗಿ ಅಕ್ರಮ ವಲಸಿಗರಲ್ಲಿ ನಡುಕ ಶುರು ವಾಗಿದೆ. ಅಮೆರಿಕದ ಅಕ್ರಮ ವಲಸಿಗರಲ್ಲಿ ಭಾರತದ ವಿರುದ್ಧ ಷಡ್ಯಂತ್ರ ನಡೆಸುವ ಖಲಿಸ್ತಾನಿಗಳೂ ದೊಡ್ಡ ಸಂಖ್ಯೆಯಲ್ಲಿದ್ದಾರೆ.
ಅದೇ ರೀತಿ, ಹಮಾಸ್‌ಗೆ ಬೆಂಬಲ ನೀಡುವ ವಿದ್ಯಾರ್ಥಿಗಳೂ ಸಾಕಷ್ಟಿದ್ದಾರೆ. ‘ನನಗೆ ಈ ಪ್ರತ್ಯೇಕತಾ ವಾದಿಗಳನ್ನು ಹೇಗೆ ಮಟ್ಟಹಾಕಬೇಕು ಎಂಬುದು ಗೊತ್ತಿದೆ’ ಎಂದು ಟ್ರಂಪ್ ಬಹಿರಂಗವಾಗಿ ಅಬ್ಬರಿಸಿದ್ದಾರೆ.
ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದ ಸಮಾರಂಭದಲ್ಲೇ ಖಲಿಸ್ತಾನಿ ನಾಯಕ ಗುರುಪತ್ವಂತ್ ಸಿಂಗ್ ಪನ್ನು ಭಾಗವಹಿಸಿ ಖಲಿಸ್ತಾನ್ ಪರ ಘೋಷಣೆ ಕೂಗುತ್ತಿದ್ದ ವಿಡಿಯೋಗಳು ಎಲ್ಲೆಡೆ ಹರಿದಾಡುತ್ತಿವೆ. ಅದನ್ನು ನೋಡಿದ ಮೇಲೆ ಎಲ್ಲರಿಗೂ ಈ ಖಲಿಸ್ತಾನಿ ಬೆಂಬಲಿಗರ ವಿಷ ಯದಲ್ಲಿ ಟ್ರಂಪ್ ಏನು ಮಾಡುತ್ತಾರೆಂಬ ಕುತೂಹಲ ಕಾಡುತ್ತಿದೆ.
ಪನ್ನು ಅಂದರೆ ಯಾರು ಗೊತ್ತಿದೆಯಲ್ಲವೇ? ಅಮೆರಿಕದಲ್ಲಿ ಅವನ ಹತ್ಯೆಗೆ ನಡೆದ ಸಂಚು ಭಾರತ ಮತ್ತು ಅಮೆರಿಕದ ಬೈಡೆನ್ ಆಡಳಿತದ ನಡುವೆ ದೊಡ್ಡ ಬಿಕ್ಕಟ್ಟಿಗೆ ಕಾರಣವಾಗಿತ್ತು. ಈಗ ಟ್ರಂಪ್ ಅದಕ್ಕೆಲ್ಲ ತಲೆಕೆಡಿಸಿಕೊಳ್ಳದೆ ‘ನಾನು ಒಬ್ಬೊಬ್ಬರನ್ನೇ ಬೇಟೆಯಾಡುತ್ತೇನೆ’ ಎಂದು ಘೋಷಿಸುವ ಮೂಲಕ ತಮ್ಮ ನಿಲುವೇನು ಎಂಬುದನ್ನು ಸ್ಪಷ್ಟವಾಗಿ ಹೇಳಿದ್ದಾರೆ. ಅಕ್ರಮ ವಲಸಿಗರನ್ನು ಹುಡುಕಿ ಹುಡುಕಿ ಬಂಧಿಸಲು ಅಮೆರಿಕದ ಪೊಲೀಸರು ನಡೆಸುತ್ತಿರುವ ಕಾರ್ಯಾಚರಣೆಯ ಭಾಗವಾಗಿ ಅನೇಕ ಧಾರ್ಮಿಕ ಸ್ಥಳಗಳ ಮೇಲೂ ದಾಳಿಗಳು ನಡೆದಿವೆ.
ಅಲ್ಲಿ ಅಡಗಿ ಕುಳಿತಿರಬಹುದಾದ ಅಕ್ರಮ ವಲಸಿಗ ಕ್ರಿಮಿನಲ್‌ಗಳನ್ನು ಅಮೆರಿಕ ಸುಮ್ಮನೆ ಬಿಡುವು ದಿಲ್ಲ ಎಂಬ ಸಂದೇಶ ಎಲ್ಲರಿಗೂ ರವಾನೆಯಾಗಿದೆ. ಧಾರ್ಮಿಕ ನಂಬಿಕೆಗೆ ಮುಕ್ತ ಸ್ವಾತಂತ್ರ್ಯ ನೀಡುವ ಹೆಸರಿನಲ್ಲಿ ಖಲಿಸ್ತಾನಿ ಬೆಂಬಲಿಗರಿಗೆ ಅಮೆರಿಕ ಮತ್ತು ಕೆನಡಾ ಆಶ್ರಯ ನೀಡುತ್ತಿವೆ ಎಂಬ ಆರೋಪ ಹಿಂದಿನಿಂದಲೂ ಇತ್ತು.
ಈಗ ಟ್ರಂಪ್ ಕೈಗೊಳ್ಳುತ್ತಿರುವ ಕಠಿಣ ಕ್ರಮದಿಂದಾಗಿ ಅನೇಕ ಮೋಸ್ಟ್ ವಾಂಟೆಡ್ ಭಯೋ ತ್ಪಾದಕರು ಭಾರತದ ಜೈಲಿಗೆ ಬಂದು ಬೀಳುವ ಆಶಾಭಾವನೆ ಮೂಡಿದೆ. ಅಮೆರಿಕದ ನೆಲವನ್ನು ಬಳಸಿಕೊಂಡು ಭಾರತದ ಭದ್ರತೆಯ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದವರನ್ನೆಲ್ಲ ಹಿಡಿದು ಶಿಕ್ಷಿಸಲು ಭಾರತ ಕಾತುರವಾಗಿದೆ. ಪನ್ನು ಅಮೆರಿಕದ ಪ್ರಜೆಯಾಗಿರುವುದರಿಂದ ಅವನು ಭಾರತದ ಕಾನೂನಿನ ಕೈಗೆ ಸಿಗದೆ ತಪ್ಪಿಸಿಕೊಳ್ಳುತ್ತಿದ್ದಾನೆ. ಆದರೆ ಅವನ ಬೆಂಬಲಿಗರು ಹಾಗೆ ತಪ್ಪಿಸಿಕೊಳ್ಳಲು ಾಧ್ಯವಿಲ್ಲ!
ಏಕೆಂದರೆ ಅವರಲ್ಲಿ ಅನೇಕರು ಕೆನಡಾದಲ್ಲಿ ನೆಲೆಸಿದ್ದಾರೆ. ಕೆನಡಾದ ಪ್ರಧಾನಿಯಾಗಿದ್ದ ಜಸ್ಟಿನ್ ಟ್ರುಡೋ ಪದತ್ಯಾಗ ಮಾಡಿದ ಮೇಲೆ ಅಂತಹ ಕ್ರಿಮಿನಲ್‌ಗಳೆಲ್ಲ ಭಾರತಕ್ಕೆ ಗಡಿಪಾರಾಗುವ ಸನ್ನಿ ವೇಶ ನಿರ್ಮಾಣವಾಗಿದೆ. ಹೀಗಾಗಿ ಭಾರತ ಈ ಹಿಂದೆಯೇ ನೀಡಿದ್ದ ಉಗ್ರರ ಪಟ್ಟಿಗೆ ಮತ್ತೆ ಈಗ ಜೀವ
ಬಂದಿದೆ.
ಉನ್ನತ ವ್ಯಾಸಂಗದ ನೆಪದಲ್ಲಿ ಅಮೆರಿಕದಲ್ಲಿ ಅವಧಿ ಮೀರಿ ಅಕ್ರಮವಾಗಿ ನೆಲೆಸಿರುವ ಹಮಾಸ್‌ನ ಬೆಂಬಲಿಗ ವಿದ್ಯಾರ್ಥಿಗಳನ್ನೆಲ್ಲ ಟ್ರಂಪ್ ಆಡಳಿತ ಗುರುತಿಸಲು ಶುರುಮಾಡಿದೆ. ಈ ವಿದ್ಯಾರ್ಥಿಗಳು ಅಮೆರಿಕದಲ್ಲಿ ನಡೆಯುವ ಪ್ಯಾಲೆಸ್ತೀನ್ ಪರವಾದ ಪ್ರತಿಭಟನೆಗಳಲ್ಲಿ ಭಾಗವಸುತ್ತಿದ್ದಾರೆ. ಅಮೆರಿಕದ ಪ್ರಜೆಗಳಿಗೆ ಇರುವ ಸ್ವಾತಂತ್ರ್ಯವನ್ನು ದುರ್ಬಳಕೆ ಮಾಡಿಕೊಂಡು ಇವರು ಹೋರಾಟ ಗಳನ್ನು ನಡೆಸುವ ಮೂಲಕ ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದ್ದಾರೆ.
ಇಂತಹ ಭಯೋತ್ಪಾದಕರ ಬೆಂಬಲಿಗರಿಗೆ ಅಮೆರಿಕದಲ್ಲಿ ಜಾಗವಲ್ಲ ಎಂದು ಟ್ರಂಪ್ ಘೋಷಿಸಿ ದ್ದಾರೆ. ಅವರನ್ನೆಲ್ಲ ಹುಡುಕಿ ಹಿಡಿದು ಮಾತೃದೇಶಕ್ಕೆ ಗಡಿಪಾರು ಮಾಡುತ್ತೇವೆ ಎಂಬುದು ಅವರ ಚುನಾವನಾ ಘೋಷಣೆ ಯಾಗಿತ್ತು. ಮೂಲ ದೇಶಗಳು ಅವರನ್ನು ಸ್ವೀಕರಿಸಲು ನಿರಾಕರಿಸಿದರೆ ಅಂತಹ ಅಕ್ರಮ ವಲಸಿಗರ ಪರಿಸ್ಥಿತಿ ಇನ್ನೂ ಗಂಭೀರವಾಗುತ್ತದೆ. ಏಕೆಂದರೆ, ಈ ರೀತಿಯ ಅಕ್ರಮ ವಲಸಿಗರಿ ಗಾಗಿಯೇ ಕುಖ್ಯಾತ ಗ್ವಾಂಟಾನಾಮೋ ಬೇ ಮಿಲಿಟರಿ ಜೈಲಿನಲ್ಲಿ 30000 ಹೆಚ್ಚುವರಿ ಹಾಸಿಗೆಗಳನ್ನು ಸಿದ್ಧಪಡಿಸಿಕೊಳ್ಳುವಂತೆ ಟ್ರಂಪ್ ಆದೇಶ ನೀಡಿದ್ದಾರೆ.
ಕಳ್ಳತನ, ಹಿಂಸಾಚಾರ ಹಾಗೂ ಇನ್ನಿತರ ಕ್ರಿಮಿನಲ್ ಚಟುವಟಿಕೆಗಳಲ್ಲಿ ತೊಡಗಿರುವ ಅಕ್ರಮ ವಲಸಿಗರ ವಿರುದ್ಧ ಕೋರ್ಟ್‌ನಲ್ಲಿ ವಿಚಾರಣೆ ಆರಂಭವಾಗುವುದಕ್ಕೂ ಮೊದಲೇ ಅವರನ್ನು ಬಂಧಿಸಿಡಲು ಅಗತ್ಯವಾದ ನಿಯಮಗಳಿಗೆ ಟ್ರಂಪ್ ತಿದ್ದುಪಡಿ ಕೂಡ ತಂದಿದ್ದಾರೆ. ಒಟ್ಟಿನಲ್ಲಿ ಅಮೆರಿಕದಲ್ಲಿ ದೊಡ್ಡ ಸಂಖ್ಯೆಯಲ್ಲಿ ನೆಲೆಸಿರುವ ಅಕ್ರಮ ವಲಸಿಗರ ಬುಡಕ್ಕೆ ಬೆಂಕಿ ಬಿದ್ದಿದೆ. ಅದು ಮುಂದಿನ ದಿನಗಳಲ್ಲಿ ಇನ್ನಷ್ಟು ಜ್ವಲಿಸುವ ಸಾಧ್ಯತೆದೆ.
ಹಾಗಂತ ಅಕ್ರಮ ವಲಸಿಗರ ರುದ್ಧ ಅಮೆರಿಕದಲ್ಲಿ ಕಾರ್ಯಾಚರಣೆ ಆರಂಭವಾಗಿರುವುದು ಇದೇ ಮೊದಲೇನೂ ಅಲ್ಲ. ಕಳೆದ ದಶಕಗಳಲ್ಲಿ ಅಮೆರಿಕ ಪ್ರತಿ ವರ್ಷ ಸರಾಸರಿ ಎರಡು ಲಕ್ಷ ಅಕ್ರಮ ವಲಸಿಗರನ್ನು ಅವರ ದೇಶಗಳಿಗೆ ಗಡಿಪಾರು ಮಾಡಿದೆ. ಆದರೆ ಅದರ ಬಗ್ಗೆ ಬಹಿರಂಗವಾಗಿ ಮಾತ ನಾಡಿ ಹೆದರಿಕೆ ಹುಟ್ಟಿಸುವ ಕೆಲಸವನ್ನು ಅಮೆರಿಕದ ಈ ಹಿಂದಿನ ಅಧ್ಯಕ್ಷರು ಮಾಡುತ್ತಿರಲಿಲ್ಲ. ಮೇಲಾಗಿ, ಈಗ ಟ್ರಂಪ್ ಕೈಗೊಂಡಿರುವ ಮಾದರಿಯ ಬೃಹತ್ ಕಾರ್ಯಾಚರಣೆಯನ್ನು ಯಾರೂ ನಡೆಸಿರಲಿಲ್ಲ.
ಬರಾಕ್ ಒಬಾಮಾ ಅವರ ನಾಲ್ಕು ವರ್ಷಗಳ ಆಡಳಿತದ ಅವಧಿಯಲ್ಲಿ 10 ಲಕ್ಷಕ್ಕೂ ಹೆಚ್ಚು ಅಕ್ರಮ ವಲಸಿಗರನ್ನು ಗಡಿಪಾರು ಮಾಡಲಾಗಿತ್ತು. ಜೋ ಬೈಡೆನ್ ಅವಧಿಯಲ್ಲಿ 4.9 ಲಕ್ಷ ಅಕ್ರಮ ವಲಸಿಗರನ್ನು ಅಮೆರಿಕದಿಂದ ಹೊರಗೆ ಹಾಕಲಾಗಿದೆ. ಟ್ರಂಪ್ ತಮ್ಮ ಮೊದಲ ಅಧ್ಯಕ್ಷೀಯ ಅವಧಿಯಲ್ಲಿ 7.7 ಲಕ್ಷ ಅಕ್ರಮ ವಲಸಿಗರನ್ನು ಗಡಿಪಾರು ಮಾಡಿದ್ದರು. ಈಗ ಟ್ರಂಪ್ ಹಳೆಯ ಎಲ್ಲಾ ದಾಖಲೆಗಳನ್ನೂ ಮುರಿಯಲು ಸಜ್ಜಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಅಂಕಿಅಂಶಗಳ ಪ್ರಕಾರ, ಅಮೆರಿಕಕ್ಕೆ ಅಕ್ರಮವಾಗಿ ಪ್ರವೇಶಿಸುವವರಲ್ಲಿ ಹೆಚ್ಚಿನವರು ಮೆಕ್ಸಿಕೋ ಗಡಿಯ ಮೂಲಕ ಒಳಗೆ ನುಸುಳುತ್ತಾರೆ. ಇದು ಅಮೆರಿಕದ ಸರಕಾರಕ್ಕೂ ಚೆನ್ನಾಗಿ ತಿಳಿದಿದೆ. ಚೀನಾ, ಎಲ್ ಸಾಲ್ವಡಾರ್ ಹಾಗೂ ಭಾರತದಿಂದಲೂ ದೊಡ್ಡ ಪ್ರಮಾಣದಲ್ಲೇ ಅಕ್ರಮ ವಲಸಿಗರು ಅಮೆರಿಕಕ್ಕೆ ತೆರಳುತ್ತಾರೆ.
ಕೇಳಿದರೆ ನಮಗೆ ಆಶ್ಚರ್ಯವಾಗಬಹುದು, 2023ರ ಒಂದೇ ವರ್ಷದಲ್ಲಿ 90000 ಅಕ್ರಮ ಭಾರತೀಯ ವಲಸಿಗರು ಅಮೆರಿಕಕ್ಕೆ ಪ್ರವೇಶಿಸಲು ಯತ್ನಿಸುವಾಗ ಬಂಧನಕ್ಕೊಳಗಾಗಿದ್ದರು. ಅಮೆರಿಕಕ್ಕೆ ಅಕ್ರಮ ವಲಸಿಗರು ಪ್ರವೇಶಿಸುವುದಕ್ಕೆ ನೆರವು ನೀಡಲು ಜಗತ್ತಿನಾದ್ಯಂತ ಸಾಕಷ್ಟು ಮಾನವ ಕಳ್ಳ ಸಾಗಣೆ ಗ್ಯಾಂಗ್‌ಗಳು ಕೆಲಸ ಮಾಡುತ್ತಿವೆ. ಇದಕ್ಕಾಗಿ ಅವು ಲಕ್ಷಾಂತರ ಡಾಲರ್ ಹಣ ತೆಗೆದು ಕೊಳ್ಳುತ್ತವೆ. ಈ ಹಣದಲ್ಲಿ ಹವಾಲಾ, ಡ್ರಗ್ಸ್ ಮಾಫಿಯಾ, ವೇಶ್ಯಾವಾಟಿಕೆ ಮಾಫಿಯಾ ಕೂಡ ಕೆಲಸ
ಮಾಡುತ್ತವೆ.
ಅಮೆರಿಕದಲ್ಲಿ ಕೆಲಸ ಗಿಟ್ಟಿಸಿಕೊಂಡು ಐಷಾರಾಮಿ ಬದುಕು ನಡೆಸುವ ಕನಸಿಗೆ ಜಗತ್ತಿನಲ್ಲಿ ಪ್ರತಿ ವರ್ಷ ಲಕ್ಷಾಂತರ ಜನರು ಮಾರುಹೋಗಿ ಮಾನವ ಕಳ್ಳಸಾಗಣೆದಾರರ ಜಾಲದ ಕೈಯಲ್ಲಿ ಸಿಲುಕು ತ್ತಿದ್ದಾರೆ. ಹಣ ಮತ್ತು ಸುಂದರ ಜೀವನದ ಆಸೆಗಾಗಿ ಇವರಲ್ಲಿ ಅನೇಕರು ಬದುಕನ್ನೇ ಕಳೆದು ಕೊಳ್ಳುತ್ತಿದ್ದಾರೆ. ಸದ್ಯ ಅಮೆರಿಕದಲ್ಲಿ 18000 ಅಕ್ರಮ ಭಾರತೀಯ ವಲಸಿಗರನ್ನು ಗುರುತಿಸಲಾಗಿದೆ. ಇವರ ನಿಜವಾದ ಸಂಖ್ಯೆ ಲಕ್ಷಗಳನ್ನೇ ದಾಟಬಹುದು. ಈ ವಿಷಯದ ಬಗ್ಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಭಾರತದ ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಮಾತನಾಡಿದ್ದಾರೆ.
ಭಾರತೀಯ ಅಕ್ರಮ ವಲಸಿಗರ ಪೌರತ್ವ ಸಾಬೀತಾದರೆ ನಾವು ಅವರನ್ನು ಮರಳಿ ಕರೆಸಿಕೊಳ್ಳಲು ಸಿದ್ಧರಿದ್ದೇವೆ ಎಂದು ಭಾರತ ಹೇಳಿದೆ. ಆದರೆ ನನ್ನ ಪ್ರಶ್ನೆ ಏನೆಂದರೆ, ಇಂತಹ ಅಕ್ರಮ ವಲಸಿಗರ ವಿಷಯದಲ್ಲಿ ಯಾರಿಗಾದರೂ ಕನಿಕರ ಏಕೆ ಇರಬೇಕು? ಅವರ ವಿರುದ್ಧ ಅಮೆರಿಕವಾಗಲಿ, ಭಾರತ ವಾಗಲಿ, ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು. ಭಾರತಕ್ಕೂ ಅಕ್ರಮ ವಲಸಿಗರ ಸಮಸ್ಯೆ ಬೇಕಾದಷ್ಟಿದೆ.
ಬಾಂಗ್ಲಾದೇಶ, ನೇಪಾಳ, ಪಾಕಿಸ್ತಾನ, ಶ್ರೀಲಂಕಾ, ಅಫ್ಘಾನಿಸ್ತಾನ, ಇರಾನ್ ಹೀಗೆ ಸಾಕಷ್ಟು ದೇಶ ಗಳಿಂದ ಇಲ್ಲಿಗೆ ಅಕ್ರಮ ವಲಸೆ ನಡೆಯುತ್ತಿದೆ. ಅದರ ಬಗ್ಗೆ ಇನ್ನೊಮ್ಮೆ ಚರ್ಚಿಸೋಣ! ಸದ್ಯಕ್ಕೆ ಟ್ರಂಪ್ ಹೇಗೆ ಅಕ್ರಮ ವಲಸಿಗರ ರುದ್ಧ ಕ್ರಮ ಕೈಗೊಂಡು, ಕ್ರಿಮಿನಲ್ ಗ್ಯಾಂಗ್ ಮತ್ತು ಭಯೋ ತ್ಪಾದಕರ ಬೆನ್ನು ಮೂಳೆ ಮುರಿಯಲಿದ್ದಾರೆ ಎಂಬುದನ್ನು ಕಾದು ನೋಡೋಣ.