ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Roopa Gururaj Column: ವಾಸ್ತು ಪುರುಷನ ಮಹತ್ವ

ಒಂದು ಜಾಗವನ್ನು ಖರೀದಿಸುವ ಕ್ಷಣದಿಂದಲೇ, ವಾಸ್ತುಪುರುಷನು ತೃಪ್ತಿಯಾಗುವಂತೆ ವಿಶೇಷ ಆಚರಣೆಗಳು ಮತ್ತು ಪೂಜೆ-ಪರಿಹಾರಗಳನ್ನು ಮಾಡುವುದು ಅಗತ್ಯ ಎನ್ನಲಾಗುತ್ತದೆ. ಹಾಗೆಯೇ, ಆ ಜಾಗದಲ್ಲಿ ಕಟ್ಟಡ ನಿರ್ಮಾಣ ಮಾಡುವಾಗ, ವಾಸ್ತುಪುರುಷನ ದೇಹದ ಸೂಕ್ಷ್ಮ ಭಾಗಗಳಿಗೆ ನೋವುಂಟಾ ಗದಂತೆ, ಅವನ್ನು ಬದಲಾಯಿಸದಂತೆ ವಿಶೇಷ ಕಾಳಜಿ ವಹಿಸಬೇಕೆಂದು ಶಾಸ್ತ್ರ ಹೇಳುತ್ತದೆ.

ಒಂದೊಳ್ಳೆ ಮಾತು

ಬ್ರಹ್ಮನು ವಿಶ್ವವನ್ನು ಸೃಷ್ಟಿಸಿದಾಗ ಮತ್ತು ಕೆಲವು ಜೀವಿಗಳನ್ನು ರಚಿಸಲು ಪ್ರಯೋಗ ಮಾಡು ತ್ತಿದ್ದಾಗ ಒಬ್ಬ ಉತ್ಕೃಷ್ಟ ಮನುಷ್ಯನನ್ನು ಸೃಷ್ಟಿಸಿದನು. ವಿಚಿತ್ರವೆನ್ನುವಂತೆ ಅವನು ಅಗಾಧವಾದ ಶಕ್ತಿಯನ್ನು ಹೊಂದಿದ್ದನು, ಅಂಕೆಯೇ ಇಲ್ಲದಂತೆ ಬೆಳೆಯಲು ಪ್ರಾರಂಭಿಸಿದನು. ಸಮಯ ಕಳೆದಂತೆ, ಗಾತ್ರದೊಂದಿಗೆ ಅವನ ಹಸಿವು ಕೂಡ ಹೆಚ್ಚಾಯಿತು. ಅವನು ತನ್ನ ದಾರಿಗೆ ಬಂದ ಎಲ್ಲವನ್ನೂ ಮತ್ತು ಎಲ್ಲರನ್ನೂ ತಿನ್ನಲು ಪ್ರಾರಂಭಿಸಿದನು.

ಸ್ವಲ್ಪ ಸಮಯದ, ಅವನ ನೆರಳು ಭೂಮಿಯ ಮೇಲೆ ಶಾಶ್ವತ ಗ್ರಹಣವನ್ನು ಉಂಟು ಮಾಡಿತು. ಇದರಿಂದ ದೇವಾನುದೇವತೆಗಳೆಲ್ಲ ಆತಂಕಕ್ಕೊಳಗಾದರು. ಅವರು ತಕ್ಷಣ ಬ್ರಹ್ಮನ ಬಳಿಗೆ ಧಾವಿಸಿ, ಆ ಮನುಷ್ಯನನ್ನು ನಿಯಂತ್ರಿಸಲು ಬೇಡಿಕೊಂಡರು.

ಇಷ್ಟು ಹೊತ್ತಿಗೆ ಬ್ರಹ್ಮ ದೇವರಿಗೆ ತನ್ನ ತಪ್ಪಿನ ಅರಿವಾಗಿತ್ತು. ಆದರೆ ಆ ಮನುಷ್ಯನೀಗ ಬ್ರಹ್ಮನಿಗಿಂತ ಶಕ್ತಿಶಾಲಿಯಾಗಿ ಬೆಳೆದಿದ್ದನು. ಆಗ ಬ್ರಹ್ಮನು ಅಷ್ಟು ದಿಕ್ಪಾಲಕರನ್ನು ಸಹಾಯಕ್ಕಾಗಿ ಕರೆದನು. ಅವನ ಕೋರಿಕೆಯನ್ನು ಕೇಳಿ ರಕ್ಷಣೆಗಾಗಿ ಬಂದ ಅವರು ಆ ವ್ಯಕ್ತಿಯನ್ನು ಹಿಡಿದು ಸೋಲಿಸಿದರು. ಅವರು ಆ ವ್ಯಕ್ತಿಯನ್ನು ನೆಲಕ್ಕೆ ಒತ್ತಿ ಅವನ ತಲೆಯನ್ನು ಈಶಾನ್ಯ ದಿಕ್ಕಿನಲ್ಲಿ ಮತ್ತು ಕಾಲುಗಳನ್ನು ನೈಋತ್ಯ ದಿಕ್ಕಿನಲ್ಲಿ ಇರಿಸಿದರು.

ಇದನ್ನೂ ಓದಿ: Roopa Gururaj Column: ಆತ್ಮಪ್ರಶಂಸೆ: ನಮ್ಮ ಬೆಳವಣಿಗೆಗೆ ಮಾರಕ

ಬ್ರಹ್ಮದೇವ ಅವನ ನಾಭಿಯ ಸ್ಥಳದಲ್ಲಿ ಕುಳಿತು ಅವನನ್ನು ಭೂಮಿಗೆ ಒತ್ತಿ ಹಿಡಿದನು. ಆಗ ಆ ಮನುಷ್ಯ ನೋವಿನಿಂದ ನರಳುತ್ತಾ ಬ್ರಹ್ಮದೇವನನ್ನು, “ನೀನೇ ನನ್ನನ್ನು ಸೃಷ್ಟಿಸಿ ಈಗ ನೀನೇ ನನ್ನನ್ನು ಹಿಂಸಿಸುತ್ತಿದ್ದೀಯ. ಇದು ನ್ಯಾಯವೇ?" ಎಂದು ಕೇಳುತ್ತಾನೆ.

ಆಗ ಬ್ರಹ್ಮದೇವ ಅರೆ ನಿಮಿಷ ಯೋಚಿಸಿ ಉತ್ತರಿಸುತ್ತಾನೆ- “ಇದು ನಿನ್ನ ತಪ್ಪಲ್ಲ ಎಂದು ನನಗೆ ತಿಳಿದಿದೆ, ಆದರೆ ನೀನು ಎಲ್ಲರಿಗೂ ಕಂಟಕವಾಗಿದ್ದಿ. ಆದ್ದರಿಂದ ನಾನೀಗ ನಿನ್ನನ್ನು ನಿಗ್ರಹಿಸಲೇ ಬೇಕಾಗಿದೆ. ನಾನೇ ಸೃಷ್ಟಿಸಿದ್ದನ್ನು ನಾಶ ಮಾಡಲು ನಾನು ಬಯಸುವುದಿಲ್ಲ, ಆದ್ದರಿಂದ ನೀನು ಶಾಶ್ವತವಾಗಿ ಹೀಗೆಯೇ ಭೂಮಿಗೆ ಅಂಟಿಕೊಂಡು ಇರಬೇಕು".

ಆ ವ್ಯಕ್ತಿ ಕೇಳಿದ, “ಆದರೆ ಇದೆಲ್ಲದರಿಂದ ನನಗೇನು ಪ್ರಯೋಜನ?" ಆಗ ಬ್ರಹ್ಮ, “ನಾನು ನಿನ್ನನ್ನು ಅಮರನನ್ನಾಗಿ ಮಾಡುತ್ತೇನೆ ಮತ್ತು ಭೂಮಿಯ ಮೇಲೆ ಯಾವುದೇ ರೀತಿಯ ಕಟ್ಟಡವನ್ನು ನಿರ್ಮಿಸುವ ಎಲ್ಲಾ ಜನರು ನಿನ್ನನ್ನು ಪೂಜಿಸುತ್ತಾರೆ. ಈ ಜನರು ನಿನ್ನನ್ನು ಪೂಜಿಸದಿದ್ದರೆ ಮತ್ತು ನಿನ್ನನ್ನು ಸಂತೋಷವಾಗಿರಿಸದಿದ್ದರೆ ನೀನು ಅವರನ್ನು ಆಹುತಿ ತೆಗೆದುಕೊಳ್ಳಬಹುದು, ತೊಂದರೆಗೆ ಈಡು ಮಾಡಬಹುದು.

ನೀನು ಇಡೀ ಭೂಮಿಯಲ್ಲಿ ಹರಡಿಕೊಂಡಿರುವೆ. ಇಂದಿನಿಂದ ನೀನು ‘ವಾಸ್ತು ಪುರುಷ’ ಎಂದು ಕರೆಯಲ್ಪಡುತ್ತೀಯ" ಎಂದು ವರವನ್ನು ನೀಡಿದನು. ಈ ಒಪ್ಪಂದಕ್ಕೆ, ವಾಸ್ತು ಪುರುಷ ಒಪ್ಪಿ ಕೊಂಡು ಶಾಶ್ವತವಾಗಿ ಭೂಮಿಯ ಬೇರ್ಪಡಿಸಲಾಗದ ಭಾಗವಾದನು. ಬ್ರಹ್ಮನು ಅವನಿಗೆ ಭೂಮಿಯ ಮೇಲೆ ಹೋಗಿ ಪ್ರತಿಯೊಂದು ಸ್ಥಳ/ಮನೆಯಲ್ಲಿ ವಾಸಿಸಲು ಆದೇಶಿಸಿದನು ಮತ್ತು ಪ್ರತಿಯೊಬ್ಬ ನಿವಾಸಿಗೂ ಆರೋಗ್ಯ, ಸಂಪತ್ತು ಮತ್ತು ಸಮೃದ್ಧಿಯನ್ನು ಆಶೀರ್ವದಿಸಬೇಕೆಂದು ಆದೇಶಿಸಿದನು. ಆದ್ದರಿಂದಲೇ ಒಂದು ಜಾಗ ಅಥವಾ ಭೂಮಿಯ ವಾಸ್ತುಪುರುಷನನ್ನು ಆಹಾರ ವಿಲ್ಲದೆ, ಪೂಜೆ-ಪರಿಹಾರಗಳಿಲ್ಲದೆ ಬಿಟ್ಟುಬಿಟ್ಟರೆ, ಆ ಜಾಗದ ಮಾಲೀಕರಿಗೆ ಕೇಡು ತರುವಷ್ಟು ಕೋಪಗೊಳ್ಳುತ್ತಾನೆ ಎಂದು ನಂಬಲಾಗಿದೆ.

ಒಂದು ಜಾಗವನ್ನು ಖರೀದಿಸುವ ಕ್ಷಣದಿಂದಲೇ, ವಾಸ್ತುಪುರುಷನು ತೃಪ್ತಿಯಾಗುವಂತೆ ವಿಶೇಷ ಆಚರಣೆಗಳು ಮತ್ತು ಪೂಜೆ-ಪರಿಹಾರಗಳನ್ನು ಮಾಡುವುದು ಅಗತ್ಯ ಎನ್ನಲಾಗುತ್ತದೆ. ಹಾಗೆಯೇ, ಆ ಜಾಗದಲ್ಲಿ ಕಟ್ಟಡ ನಿರ್ಮಾಣ ಮಾಡುವಾಗ, ವಾಸ್ತುಪುರುಷನ ದೇಹದ ಸೂಕ್ಷ್ಮ ಭಾಗಗಳಿಗೆ ನೋವುಂಟಾಗದಂತೆ, ಅವನ್ನು ಬದಲಾಯಿಸದಂತೆ ವಿಶೇಷ ಕಾಳಜಿ ವಹಿಸಬೇಕೆಂದು ಶಾಸ್ತ್ರ ಹೇಳುತ್ತದೆ. ಇಲ್ಲದಿದ್ದರೆ ಅದರಿಂದ ಜಾಗದ ಅಥವಾ ಕಟ್ಟಡದ ಮಾಲೀಕರಿಗೆ ಅನರ್ಥ ಸಂಭವಿಸು ತ್ತದೆ ಎಂದು ನಂಬಲಾಗಿದೆ.

ವಿಶ್ವಕರ್ಮರನ್ನು ವಾಸ್ತುಶಾಸದ ಜನಕನಾಗಿ ಪರಿಗಣಿಸಲಾಗುತ್ತದೆ. ಅವರ ಗ್ರಂಥವಾದ ‘ವಿಶ್ವಕರ್ಮ ಪ್ರಕಾಶ’ದಲ್ಲಿ, ವಾಸ್ತುಪುರುಷನ ಉದ್ಭವವನ್ನು ವಿವರವಾಗಿ ವರ್ಣಿಸಲಾಗಿದೆ. ನಮ್ಮಲ್ಲಿ ಅನೇಕರು ವಾಸ್ತು ಪ್ರಕಾರ ಗೃಹ, ಕಟ್ಟಡಗಳನ್ನು ಕಟ್ಟಿ ಅಭಿವೃದ್ಧಿ ಹೊಂದುವುದನ್ನು ಕಾಣುತ್ತೇವೆ. ಮತ್ತೆ ಕೆಲವರಿಗೆ ತೊಂದರೆಗಳು ಉಂಟಾದಾಗ ಆ ಕಟ್ಟಡದ ವಾಸ್ತು ಬದಲಾಯಿಸಿ ಸಮಾಧಾನಕರ ಫಲಿತಾಂಶಗಳನ್ನು ಪಡೆಯುವುದನ್ನು ಗಮನಿಸಿರುತ್ತೇವೆ. ಇದರ ಹಿಂದಿರುವ ಅನೇಕ ಸೂಕ್ಷ್ಮಗಳನ್ನ ಸರಿಯಾದ ರೀತಿಯಲ್ಲಿ ತಿಳಿದುಕೊಂಡಾಗ ಬಹುಶಃ ನಮಗೂ ನಾವು ವಾಸ ಮಾಡುವ ಮನೆಗಳು ನೆಮ್ಮದಿಯ ನೆಲೆಯಾಗಿ ಪರಿಣಮಿಸಬಹುದು.

ರೂಪಾ ಗುರುರಾಜ್

View all posts by this author