Roopa Gururaj Column: ಆತ್ಮಪ್ರಶಂಸೆ: ನಮ್ಮ ಬೆಳವಣಿಗೆಗೆ ಮಾರಕ
ಕೆಲವೊಮ್ಮೆ ನಾವು ಮಾಡುವ ಚಿಕ್ಕಪುಟ್ಟ ಸಾಧನೆಗಳು ನಮ್ಮನ್ನು ಮೈ ಮರೆಯುವಂತೆ ಮಾಡು ತ್ತವೆ. ಅವುಗಳನ್ನು ಎಲ್ಲರ ಮುಂದೆ ಹೇಳಿಕೊಂಡು ನಾವೇ ಚಿಕ್ಕವರಾಗುತ್ತಾ ಹೋಗುತ್ತೇವೆ, ಕಾರಣ ನಮಗಿಂತ ದೊಡ್ಡ ಸಾಧಕರು ನಮ್ಮ ಸುತ್ತಲೂ ಬಹಳಷ್ಟು ಜನ ಇರುತ್ತಾರೆ. ಅವರು ಏನೂ ಸದ್ದು ಮಾಡದೆ ತಮ್ಮ ಕಾರ್ಯಕ್ಷೇತ್ರದಲ್ಲಿ ಕಾಯಕ ಮಾಡುತ್ತಿರುತ್ತಾರೆ.
-
ಒಂದೊಳ್ಳೆ ಮಾತು
ನಾರದ ಮುನಿ, ಮಾಯೆಗೆ ಎಂದೂ ಒಳಪಡದ ಶುದ್ಧ ಭಕ್ತರು. ಒಂದು ದಿನ ಅವರು ಧ್ಯಾನ ದಲ್ಲಿದ್ದಾಗ ಸ್ವರ್ಗದ ಸುಂದರ ಅಪ್ಸರೆಯರು ಅವರ ಏಕಾಗ್ರತೆಯನ್ನು ಭಂಗಪಡಿಸಿ ಮೋಹದ ಜಾಲದಲ್ಲಿ ಬೀಳಿಸಲು ಯತ್ನಿಸಿದರು, ಆದರೆ ನಾರದ ಮುನಿಗಳು ಭಗವದ್ಧ್ಯಾನದಲ್ಲಿ ಎಷ್ಟು ತಲ್ಲೀನರಾಗಿದ್ದರೆಂದರೆ, ಆ ಮೋಹಕ ಅಪ್ಸರೆಯರ ಯಾವ ಮೋಹವೂ ಅವರನ್ನು ಬಾಧಿಸಲಿಲ್ಲ. ಅವರು ಅಪ್ಸರೆಯರ ಮೇಲೆ ಒಂದಿನಿತೂ ಕೋಪಗೊಳ್ಳದೆ ‘ನೀವು ಇಲ್ಲಿಂದ ಹೊರಡಿ’ ಎಂದು ಹಸನ್ಮುಖದಿಂದ ಹೇಳಿ ಅವರನ್ನು ಕಳಿಸಿಕೊಟ್ಟರು.
ಅಪ್ಸರೆಯರು ತೆರಳಿದ ಮೇಲೆ, ನಾರದ ಮುನಿಗಳಿಗೆ ತಾವು ಕಾಮವನ್ನು ಜಯಿಸಿದಂತೆ ಭಾಸ ವಾಯಿತು. ಆ ಆತ್ಮಾಭಿಮಾನದಿಂದ ತಮ್ಮ ತಂದೆಯ ಬಳಿಗೆ ಹೋಗಿ, ‘ನಾನು ಕಾಮವನ್ನು ಜಯಿಸಿದ್ದೇನೆ’ ಎಂದು ಆತ್ಮವಿಶ್ವಾಸದಿಂದ ನಡೆದದ್ದನ್ನು ಹೇಳಿದರು. ತಂದೆ ಅವರನ್ನು ಅಭಿ ನಂದಿಸಿ ಒಂದು ಎಚ್ಚರಿಕೆಯನ್ನೂ ನೀಡಿದರು ಈ ವಿಷಯವನ್ನು ಗುರುವಾದ ಶಂಕರರಿಗೆ ಅಥವಾ ಶ್ರೀಮನ್ನಾರಾಯಣನಿಗೆ ಹೇಳಲು ಹೋಗಬೇಡ ಎಂದರು.
ಆದರೆ ನಾರದರು ಕೇಳಲಿಲ್ಲ, ಅವರು ಶಂಕರರ ಬಳಿಗೆ ಹೋದರು. ಶಂಕರರೂ ಪ್ರಶಂಸಿಸಿ, ‘ವಿಷ್ಣುವಿಗೆ ಹೇಳಬೇಡ’ ಎಂದು ಸಲಹೆ ನೀಡಿದರು. ಆದರೆ ಅಹಂಕಾರ ಭಾವದಿಂದ ನಾರದರು, ನೇರವಾಗಿ ವಿಷ್ಣುವಿನ ಬಳಿಗೆ ಹೋಗಿ, ‘ಪ್ರಭುವೇ, ನಿಮ್ಮ ಕೃಪೆಯಿಂದ ನಾನು ಕಾಮವನ್ನು ಜಯಿಸಿ ದ್ದೇನೆ!’ ಎಂದರು.
ಇದನ್ನೂ ಓದಿ: Roopa Gururaj Column: ಭಕ್ತಿಭಾವ ಇಲ್ಲದ ನಾಮಸ್ಮರಣೆ ಗಿಳಿಪಾಠದಂತೆ...
ನಾರದರ ಹೃದಯದಲ್ಲಿ ಹೆಮ್ಮೆಯ ಕಿಡಿ ಹೊತ್ತಿರುವುದನ್ನು ನೋಡಿ, ವಿಷ್ಣುವಿಗೆ ಅದನ್ನು ತಡೆಯಬೇಕು ಎನಿಸಿತು. ಒಂದು ಮಾಯಾಲೋಕ ಸೃಷ್ಟಿಸಿದರು ಅಲ್ಲಿ ಒಬ್ಬ ರಾಜ, ಅವನ ಸುಂದರ ಪುತ್ರಿ. ರಾಜನು ತನ್ನ ಪುತ್ರಿಯ ಸ್ವಯಂವರವನ್ನು ಪ್ರಕಟಿಸಿದ್ದ. ರಾಜಕುಮಾರಿಯನ್ನು ನೋಡಿದ ನಾರದರು, ಮೋಹಕ್ಕೆ ಒಳಗಾಗಿ ಅವಳಿಗೆ ಮನಸೋತರು.
‘ಆಕೆ ನನ್ನನ್ನು ಆರಿಸಿಕೊಳ್ಳುವುದಿಲ್ಲ’ ಎಂಬ ಭಯವೂ ಅವರಿಗಿತ್ತು. ಆದರಿಂದ ಅವರು ವಿಷ್ಣುವಿನ ಬಳಿಗೆ ಹೋಗಿ, ‘ನನ್ನನ್ನೂ ನಿಮ್ಮಂತೆ ಸುಂದರನನ್ನಾಗಿ ಮಾಡಿ’ ಎಂದು ಬೇಡಿಕೊಂಡರು. ಪ್ರಭು ನಗುತ್ತಾ ‘ಸರಿ’ ಎಂದು ಹೇಳಿದರು. ನಾರದರು ಆತ್ಮವಿಶ್ವಾಸದಿಂದ ರಾಜಕುಮಾರಿಯ ಬಳಿ ಹೋದರು, ಆದರೆ ಅವಳು ನಾರದರನ್ನು ನೋಡಿದೊಡನೆ ನಕ್ಕು ಮುಂದೆ ನಡೆದುಬಿಟ್ಟಳು.
ಸ್ವಯಂವರಕ್ಕೆ ಬಂದ ಇತರರು ಕೂಡ ನಾರದರನ್ನು ನೋಡಿ ತಮ್ಮಲ್ಲೇ ನಗುತ್ತಿದ್ದರು. ಆದರೆ ಮೋಹದ ಮಾಯಾಜಾಲದಲ್ಲಿ ಸಿಲುಕಿದ ನಾರದರಿಗೆ ಏನೂ ಅರ್ಥವಾಗಲಿಲ್ಲ. ಅಷ್ಟರಲ್ಲಿ ಸಾಕ್ಷಾತ್ ವಿಷ್ಣುವೇ ಸ್ವಯಂವರದಲ್ಲಿ ಪ್ರತ್ಯಕ್ಷರಾದರು. ರಾಜಕುಮಾರಿ ತಕ್ಷಣವೇ ಅವರನ್ನು ಆರಿಸಿ ಕೊಂಡು ಮಾಲೆಯನ್ನು ಹಾಕಿದಳು.
ಪ್ರಭು ಆಕೆಯನ್ನು ವರಿಸಿ ಕರೆದುಕೊಂಡು ಹೊರಟರು. ನಾರದರಿಗೆ ಅಲ್ಲಿ ನಡೆಯುತ್ತಿರುವುದು ಅರ್ಥವೇ ಆಗಲಿಲ್ಲ. ಆಗ ಅಲ್ಲೇ ಇದ್ದ ನೀರಿನ ಕೊಳದಲ್ಲಿ ಅವರ ಪ್ರತಿಬಿಂಬ ಕಂಡಿತು. ಅವರ ಮುಖ ಮಂಗದಂತಾಗಿತ್ತು. ಆದ್ದರಿಂದಲೇ ಎಲ್ಲರೂ ಅವರನ್ನು ನೋಡಿ ನಗುತ್ತಿದ್ದದ್ದು ಎಂದು ಅರ್ಥವಾಯಿತು. ಕೋಪದ ಜ್ವಾಲೆಯಲ್ಲಿ ನಾರದರು ವಿಷ್ಣುವಿಗೆ ‘ಭಗವಂತ ನೀನೂ ಇದೇ ರೀತಿ ಪ್ರಿಯೆಯಿಂದ ದೂರವಾಗಬೇಕು’ ಎಂದು ಶಾಪ ನೀಡಿದರು.
ಆಗ ವಿಷ್ಣು ಯೋಗಮಾಯೆಯ ತೆರೆ ಸರಿಸಿ, ಆ ರಾಜಕುಮಾರಿ ಯಾವುದೋ ಸಾಮಾನ್ಯ ಹೆಣ್ಣು ಮಗಳಲ್ಲ, ಸಾಕ್ಷಾತ್ ಲಕ್ಷ್ಮೀ ದೇವಿ ಎಂಬುದನ್ನು ತೋರಿಸಿದರು. ನಾರದರು ತಮ್ಮ ತಪ್ಪಿನ ಅರಿವಾಗಿ ಪಶ್ಚಾತ್ತಾಪಪಟ್ಟರು. ‘ನಾರದರೆ ಮಾಯೆಯಿಂದ ಯಾರೂ ಹೊರತಲ್ಲ, ನಿಮ್ಮ ಅಹಂ ಕಾರವನ್ನು ನೀಗಿಸಲು ಇದು ಪ್ರಯೋಗವಷ್ಟೇ’.
‘ನಾವು ರಾಮಸೀತೆಯಾಗಿ ಭೂಲೋಕದಲ್ಲಿ ಅವತರಿಸುತ್ತೇವೆ, ಆಗ ನಿಮ್ಮ ಶಾಪವೂ ಫಲಿಸುತ್ತದೆ. ರಾಮ ಸೀತೆಯಾಗಿ ನಮ್ಮ ಜೀವನದ ಸಂಕಷ್ಟಗಳನ್ನು ನೋಡಿ ಅನೇಕರು ವೈಕುಂಠಕ್ಕೆ ಹೋಗುವ ಮಾರ್ಗವನ್ನು ಕಂಡುಕೊಳ್ಳುತ್ತಾರೆ’ ಎಂದರು. ಅಲ್ಲಿಗೆ ನಾರದರಿಗೆ ಮೂಡಿದ ಅಹಂಕಾರ ಮತ್ತು ಮಾಯೆಯಿಂದ ಮುಕ್ತಿ ದೊರೆತಿತ್ತು.
ಕೆಲವೊಮ್ಮೆ ನಾವು ಮಾಡುವ ಚಿಕ್ಕಪುಟ್ಟ ಸಾಧನೆಗಳು ನಮ್ಮನ್ನು ಮೈ ಮರೆಯುವಂತೆ ಮಾಡು ತ್ತವೆ. ಅವುಗಳನ್ನು ಎಲ್ಲರ ಮುಂದೆ ಹೇಳಿಕೊಂಡು ನಾವೇ ಚಿಕ್ಕವರಾಗುತ್ತಾ ಹೋಗುತ್ತೇವೆ, ಕಾರಣ ನಮಗಿಂತ ದೊಡ್ಡ ಸಾಧಕರು ನಮ್ಮ ಸುತ್ತಲೂ ಬಹಳಷ್ಟು ಜನ ಇರುತ್ತಾರೆ. ಅವರು ಏನೂ ಸದ್ದು ಮಾಡದೆ ತಮ್ಮ ಕಾರ್ಯಕ್ಷೇತ್ರದಲ್ಲಿ ಕಾಯಕ ಮಾಡುತ್ತಿರುತ್ತಾರೆ.
ಆದ್ದರಿಂದಲೇ ನಮ್ಮ ಒಳ್ಳೆಯತನವನ್ನು ಮತ್ತೊಬ್ಬರು ಹೇಳಬೇಕೇ ಹೊರತು, ನಾವು ಅದನ್ನು ಹೇಳಿಕೊಂಡಷ್ಟೂ ಅಲ್ಪರಾಗುತ್ತೇವೆ ಎನ್ನುವುದನ್ನು ಅರಿತುಕೊಳ್ಳಬೇಕು. ಅದಕ್ಕೆ ಡಿವಿಜಿಯವರು ‘ಇಳೆಯಿಂದ ಮೊಳಕೆಯೊಗೆವಂದು ತಮಟೆಗಳಿಲ್ಲ? ಫಲ ಮಾಗುವಂದು ತುತ್ತೂರಿ ದನಿಯಿಲ್ಲ ?? ಬೆಳಕೀವ ಸೂರ್ಯಚಂದ್ರರದೊಂದು ಸದ್ದಿಲ್ಲ? ಹೊಲಿ ನಿನ್ನ ತುಟಿಗಳನು ಮಂಕುತಿಮ್ಮ ??’ ಎಂದು ತಮ್ಮ ಕಗ್ಗದಲ್ಲಿ ಸಾರಿರುವುದು.