ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Ravi Hunj Column: ಶಾಸ್ತ್ರಗಳಲ್ಲಿಯೂ ರೋಚಕತೆ, ಭಾವಾವೇಶಗಳನ್ನು ತುರುಕಲಾಯಿತು...!

ಮಹಾಭಾರತದ ಕಾಲ ಇನ್ನೂ ಹಿಂದಕ್ಕೆ ಅಂದರೆ ಕ್ರಿಸ್ತಪೂರ್ವ ಐವತ್ತನೇ ಶತಮಾನವೆನ್ನ ಲಾಗುತ್ತದೆ. ಆದರೆ ಇದಕ್ಕೆ ಯಾವುದೇ ದಾಖಲೆಗಳಿಲ್ಲ. ಈ ಎಲ್ಲಾ ಮಹಾ ಕಾವ್ಯಗಳೂ ಬೌದ್ಧ ಮತ್ತು ಜೈನ ಧರ್ಮಗಳ ನಂತರವೇ ಸೃಷ್ಟಿಯಾಗಿವೆಯೆನ್ನುತ್ತವೆ ಐತಿಹಾಸಿಕ ದಾಖಲೆಗಳು ಮತ್ತು ಸಂಶೋಧನೆಗಳು!

ಶಾಸ್ತ್ರಗಳಲ್ಲಿಯೂ ರೋಚಕತೆ, ಭಾವಾವೇಶಗಳನ್ನು ತುರುಕಲಾಯಿತು...!

Profile Ashok Nayak Feb 18, 2025 9:35 AM

ಬಸವ ಮಂಟಪ

ವೀರಶೈವದ ಸಮಯಭೇದಗಳು ಕೂಡ ಸ್ವಪ್ರತಿಷ್ಠೆಗಾಗಿ ಆರಂಭವಾದವು. ಏಕೆಂದರೆ ಹಿಂದೂ ಸಂಸ್ಕೃತಿಯಲ್ಲಿ ಏನಾಯಿತೋ ಅದೆಲ್ಲವೂ ಹಿಂದೂ ಪ್ರಭೇದದ ಮತಪಂಥ ಗಳಲ್ಲಿಯೂ ಆಗಿದೆ, ಆಗುತ್ತಿದೆ. ಇದಕ್ಕೆ ವೀರಶೈವ ಮತಭೇದ ಸಹ ಹೊರತಾಗಿರಲಿಲ್ಲ. ಈ ಸಮಯಭೇದದ ನಿಟ್ಟಿನಲ್ಲಿ ಜೈನಧರ್ಮ ತನ್ನ ಪ್ರಥಮ ತೀರ್ಥಂಕರನ ಮಗನಾದ ಭರತನ ಹೆಸರು ಹೊತ್ತ ಖಂಡವೇ ಭರತ ಖಂಡ ಯಾ ಭಾರತ ದೇಶವೆನ್ನುತ್ತದೆ. ಅದಕ್ಕೆ ವ್ಯತಿರಿಕ್ತ ವಾಗಿ ಹಿಂದೂ ಪುರಾಣಗಳು, ದುಷ್ಯಂತ-ಶಕುಂತಲೆಯರ ಗಾಂಧರ್ವ ವಿವಾಹದ ಫಲವಾಗಿ ಜನಿಸಿದ ಭರತನ ಹೆಸರು ಹೊತ್ತ ಖಂಡವೇ ಭರತ ಖಂಡ ಯಾ ಭಾರತ ದೇಶ ಎನ್ನುತ್ತದೆ.

ಕುರುವಂಶೀಯ ದುಷ್ಯಂತನ ಪುತ್ರನಾದ ಭರತನ ವಂಶದ ಕತೆಯೇ ಮುಂದೆ ಮಹಾ ಭಾರತವಾಗಿ ಅನಾವರಣಗೊಳ್ಳುತ್ತದೆ. ಅಂದಿನ ಪ್ರಮುಖ ಪಟ್ಟಣವಾದ ಹಸ್ತಿನಾಪುರವು ಮಹಾಭಾರತದಲ್ಲಿ ಅನಾವರಣಗೊಂಡರೆ, ರಾಮಾಯಣದಲ್ಲಿ ಇನ್ನೊಂದು ಪ್ರಮುಖ ಪಟ್ಟಣ ಅಯೋಧ್ಯೆ ಅನಾವರಣಗೊಳ್ಳುತ್ತದೆ. ಈ ಪೌರಾಣಿಕ ಗ್ರಂಥಗಳ ಮುಖಾಂತರ ದೇಶವಲ್ಲದೆ ಪ್ರಮುಖ ಪಟ್ಟಣಗಳ ಮೇಲೆ ಹಿಂದೂ ಹಕ್ಕು ಸ್ಥಾಪನೆಯಾಗುತ್ತದೆ.

ಇದನ್ನೂ ಓದಿ: Ravi Hunz Column: ಧರ್ಮೋದಯ ಮತ್ತು ಜಗತ್ತಿನ ಪ್ರಪ್ರಥಮ ಸಂಪತ್ತು !

ಅದಕ್ಕೆ ಸವಾಲಿನಂತೆ ಜೈನ ಪರಂಪರೆ ತನ್ನ ಆದಿನಾಥ ಯಾ ರಿಷಭನಾಥನು ಅಯೋಧ್ಯೆ ಯಲ್ಲಿ ಜನ್ಮ ತಾಳಿ ಇಕ್ಷ್ವಾಕು ವಂಶವನ್ನು ಸ್ಥಾಪಿಸಿ, ಹಸ್ತಿನಾಪುರವನ್ನು ಆಳಿದ್ದನೆನ್ನುತ್ತ ಹಸ್ತಿನಾಪುರ ಮತ್ತು ಅಯೋಧ್ಯೆಗಳೆರಡರ ಮೇಲೆಯೂ ಜೈನಧರ್ಮದ ಹಕ್ಕನ್ನು ಸ್ಥಾಪಿ ಸುತ್ತದೆ.

ಅದಲ್ಲದೆ ಈ ರಿಷಭನಾಥನೇ ಕರ್ಮಭೂಮಿ ಸೂತ್ರ ರಚಿಸಿ ಅಸ್ತಿ ಆತ್ಮರಕ್ಷಣೆ), ಮಸಿ (ಬರ ವಣಿಗೆ), ಕೃಷಿ, ವಿದ್ಯಾ, ವಾಣಿಜ್ಯ ಮತ್ತು ಶಿಲ್ಪ (ಕಲೆಗಾರಿಕೆ) ಎಂಬ ಆರು ಉದ್ಯೋಗ ವರ್ಗ ಗಳನ್ನು ಅಂದಿನ ಜನಾಂಗಕ್ಕೆ ಜೀವನ ಸಾಗಿಸಲು ಪರಿಚಯಿಸಿದನೆನ್ನುತ್ತ ಮುಂದೆ ಇದೇ ಹಿಂದೂ ಸಂಸ್ಕೃತಿಯ ವರ್ಣಾಶ್ರಮವಾಯಿತೆನ್ನುತ್ತದೆ.

ಹೀಗೆ ಹಕ್ಕೊತ್ತಾಯದ ಪಂಥ ಪೈಪೋಟಿಯನ್ನು ಪೌರಾಣಿಕ ಗ್ರಂಥಗಳು ಮತ್ತು ಮಹಾ ಕಾವ್ಯಗಳು ದಾಖಲಿಸಿದ್ದರೆ ಇವುಗಳ ಕುರಿತು ಐತಿಹಾಸಿಕ ದಾಖಲೆಗಳು ಏನನ್ನುತ್ತವೆ? ರಾಮಾಯಣವನ್ನು ರಚಿಸಿದ ವಾಲ್ಮೀಕಿಯ ಕಾಲ ವೈಜ್ಞಾನಿಕವಾಗಿ ಇನ್ನೂ ನಿಖರ ವಾಗಿಲ್ಲ. ಅದು ಕ್ರಿಸ್ತಪೂರ್ವ ಐದನೇ ಶತಮಾನದಿಂದ ಒಂದನೇ ಶತಮಾನದವರೆಗೆ ಹೊಯ್ದಾಡುತ್ತದೆ.

ಅದೇ ರೀತಿ ಮಹಾಭಾರತದ ಕಾಲ ಇನ್ನೂ ಹಿಂದಕ್ಕೆ ಅಂದರೆ ಕ್ರಿಸ್ತಪೂರ್ವ ಐವತ್ತನೇ ಶತಮಾನವೆನ್ನಲಾಗುತ್ತದೆ. ಆದರೆ ಇದಕ್ಕೆ ಯಾವುದೇ ದಾಖಲೆಗಳಿಲ್ಲ. ಈ ಎಲ್ಲಾ ಮಹಾ ಕಾವ್ಯಗಳೂ ಬೌದ್ಧ ಮತ್ತು ಜೈನ ಧರ್ಮಗಳ ನಂತರವೇ ಸೃಷ್ಟಿಯಾಗಿವೆಯೆನ್ನುತ್ತವೆ ಐತಿಹಾಸಿಕ ದಾಖಲೆಗಳು ಮತ್ತು ಸಂಶೋಧನೆಗಳು!

ಈ ಐತಿಹಾಸಿಕ ಪುರಾವೆಗಳಿಗೆ ಮಹಾಭಾರತ ಮತ್ತು ರಾಮಾಯಣಗಳೆರಡರಲ್ಲಿಯೂ ಯವನರ ಉಖವಿರುವ ಕಾರಣಯವನರು ವಲಸೆ ಬಂದ ನಂತರವೇ ಇವುಗಳ ರಚನೆ ಯಾಗಿದೆ ಎನ್ನಬಹುದು. ಇನ್ನು ಜೈನ ಮತ್ತು ಹಿಂದೂ ಗ್ರಂಥಗಳಿಗೆ ವ್ಯತಿರಿಕ್ತವೆನ್ನುವಂತೆ ಬೌದ್ಧಧರ್ಮಕ್ಕೆ ನಿಶ್ಚಿತ ಕಾಲಘಟ್ಟದ ದಾಖಲಾತಿಯಿದೆ.

ಬುದ್ಧನ ಹುಟ್ಟಿನಿಂದ ಸಾವಿನವರೆಗೆ, ಮೋಕ್ಷವನ್ನು ಪಡೆದುಕೊಂಡು ಧರ್ಮಸ್ಥಾಪನೆ, ಪ್ರಸಾರ, ಆತನ ಅನುಯಾಯಿಗಳು, ಪ್ರಸಾರಗೊಂಡ ಸ್ಥಳಗಳೆ ಸತ್ಯವೆಂಬುದಕ್ಕೆ ಸ್ಮಾರಕ, ಗ್ರಂಥ, ಪಳೆಯುಳಿಕೆಗಳ ಐತಿಹಾಸಿಕ ಸಾಕ್ಷಿಗಳಿವೆ. ಹಾಗಾಗಿ ಅದನ್ನು ಚರ್ಚಿಸುವುದು ಅನವಶ್ಯಕ. ಭಾರತದ ಶ್ರೀಮಂತ ಸಾಹಿತ್ಯಕ್ಕೆ ಬುನಾದಿಯನ್ನು ಹಾಕಿಕೊಟ್ಟದ್ದು ರಾಮಾ ಯಣ ಮತ್ತು ಮಹಾಭಾರತಗಳೆಂಬ ಮಹಾಕಾವ್ಯಗಳು. ಈ ಗ್ರಂಥಗಳ ಸೃಷ್ಟಿ ಕಾಲದ ಊಹಾಪೋಹಗಳನ್ನೆ ಬದಿಗಿಟ್ಟು, ಅವುಗಳ ಕಾಲವನ್ನು ಅವುಗಳಲ್ಲಿರುವ ವಿವರದಿಂದಲೇ ಅರಿಯುವ ಪ್ರಯತ್ನ ಮಾಡೋಣ.

ರಾಮಾಯಣದ ಬಾಲಕಾಂಡದ ಈ ಶ್ಲೋಕ:

‘ತಸ್ಯಾಃ ಹುಮ್ ಕಾರತಃ

ರವಿ ಸನ್ನಿಭಾಃ ಕಾಂಭೋಜಾ ಜಾತಾಃ

ಅಥ ಉಧಸಃ ಶಸ್ತ್ರ ಪಾಣಯಃ

ಪಹ್ಲವಾಃ ಸಂಜಾತಾಃ

ಯೋನಿ ದೇಶಾತ್ ಯವನಃ ಚ

ತಥಾ ಶಕ್ಯಿತ ದೇಶಾತ್ ಶಕಾಃ

ರೋಮ ಕುಪೆಶು ಮ್ಲೇಚ್ಛಾಃ ಚ

ಸ ಕಿರಾತಕಾಃ ಹಾರಿತಾಃ’

ಕಾಮಧೇನುವಿನ ಯಾವ ಯಾವ ಭಾಗಗಳಿಂದ ಕಾಂಭೋಜ, ಪಹಲ್ವ (ಪಲ್ಲವ), ಯವನ, ಶಕ (ಶಾಕ್ಯ), ಮ್ಲೇಚ್ಚರು ಮತ್ತು ಕಿರಾತಕರು ಹುಟ್ಟಿದರೆಂದು ಹೇಳುತ್ತದೆ. ಇಲ್ಲಿ ಮ್ಲೇಚ್ಚ ರನ್ನು ವಿದೇಶಿ ಅರೆನಾಗರಿಕ ಬಂಡುಕೋರರೆನ್ನಲಾದರೆ, ಕಿರಾತಕರು ಗುಡ್ಡಗಾಡು ವಾಸಿ ಗಳೆಂದು ತಿಳಿದುಬರುತ್ತದೆ. ಆದರೆ ಕಾಂಭೋಜ, ಪಹಲ್ವ, ಯವನ, ಶಕರ ಬಗ್ಗೆ ಐತಿಹಾಸಿಕ ದಾಖಲೆಗಳಿವೆ.

ಹಿಂದೂ ಮೂಲದ ಅಗ್ನಿ ಆರಾಧಕರೇ ಪಾರ್ಶ್ವವಾಗಿ ಪಾರ್ಥೇನಿಯನ್ನರೆನಿಸಿ ಪರ್ಷಿಯಾ ಕಡೆಗೆ ಹೋದವರು ಪಹಲ್ವ ಪಲ್ಲವರಾಗಿ ಸಮುದ್ರಮಾರ್ಗವಾಗಿ ದಕ್ಷಿಣ ಭಾರತಕ್ಕೆ ತಿರುಗಿ ಬಂದವರು ಎಂದು ಖ್ಯಾತ ಇತಿಹಾಸಜ್ಞರಾದ ರಾವ್ ಬಹರ್ದ್ದೂ ವೇಲಾಯತ್ತೂರ್ ವೆಂಕಯ್ಯ ಕ್ರಿ.ಶ.1907ರಲ್ಲಿಯೇ ಸಂಶೋಧನೆ ಮಂಡಿಸಿದ್ದಾರೆ. ಈ ದಾಖಲೆಗಳ ಹಿನ್ನೆಲೆ ಯಲ್ಲಿ ರಾಮಾಯಣದ ಕಾಲ ಕ್ರಿಸ್ತಪೂರ್ವ ಒಂದನೇ ಶತಮಾನವೆನ್ನಬಹುದೆಂದು ಸಂಶೋ ಧಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆದರೆ ಇತಿಹಾಸಜ್ಞ ಡಾ. ರಾಯಚೌಧರಿಯವರು, “ಯವನರು ಬೌದ್ಧಧರ್ಮದ ಭಗವತಿ ಪಂಥವಾಗಿ ಭಿನ್ನವಾಗುವ ಕ್ರಿ.ಶ. ಎರಡನೇ ಶತಮಾನದ ಆರಂಭದಲ್ಲಿ ಮಹಾಭಾರತ ವನ್ನು ರಚಿಸಿರಬಹುದು" ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು ವಾಲ್ಮೀಕಿ ರಾಮಾಯಣದ ಅಯೋಧ್ಯಾ ಕಾಂಡದಲ್ಲಿ ರಾಮನು ಬುದ್ಧನ ಕುರಿತಾಗಿ ಹೀಗೆ ಹೇಳಿದ್ದಾನೆ:

‘ಯಥಾ ಹಿ ಚೋರಃ ಸ ತಥಾ ಹಿ ಬುದ್ಧ ಸತ್ಯಾಗಥಮ್ ನಾಸ್ತಿಕಮಾತ್ರ ವಿದ್ಧಿ ಹಿ ತಸ್ಮಾದ್ಧೀಯಹ ಶಂಕ್ಯಾತ್ಮಃ ಪ್ರಜಾನಾಂ ನಾ ನಾಸ್ತಿಕೇನಾಭಿಮುಖೋ ಬುದ್ಧಃ’ ಇಲ್ಲಿ ರಾಮನು ಬುದ್ಧನನ್ನು ಕಳ್ಳ ನಾಸ್ತಿಕ ಎಂದಿದ್ದಾನೆ.

ಅಂದರೆ ರಾಮನ ಕಾಲಕ್ಕೂ ಮುಂಚೆ ಅಥವಾ ಆತನ ಕಾಲದಲ್ಲಿ ಬುದ್ಧನಿದ್ದನೇ? ಎಂಬ ಪ್ರಶ್ನೆ ಮೂಡುತ್ತದೆ. ಅಂದರೆ ರಾಮಾಯಣದ ಪ್ರಕಾರ ರಾಮನು ಬುದ್ಧನ ನಂತರ ಅಥವಾ ಬುದ್ಧನ ಸಮಕಾಲೀನನಾಗಿರಬೇಕು. ಬುದ್ಧನಿಗಿಂತ ಮುಂಚಿತವಾಗಿ ರಾಮನಿದ್ದನೆನ್ನು ವುದು ಅತಾರ್ಕಿಕವಾಗುತ್ತದೆ. ಆದರೆ ಕೆಲವರು ಈ ಶ್ಲೋಕವು ಪ್ರಕ್ಷೇಪ. ಇದನ್ನು ಪರಿಗಣಿಸ ಬಾರದು ಎನ್ನುತ್ತಾರೆ.

ಇನ್ನು ವಿಷ್ಣು ಪುರಾಣವು ಜರಾಸಂಧನು ಕೃಷ್ಣನನ್ನು ಗೆಲ್ಲಲಾಗದೇ ಕಾಳಯವನನೆಂಬ ಯವನ ರಾಜನನ್ನು ಆಹ್ವಾನಿಸಿ ಜಂಟಿಯಾಗಿ ಕೃಷ್ಣನ ಮೇಲೆ ಯುದ್ಧ ಹೂಡುತ್ತಾನೆ ಎನ್ನುತ್ತದೆ. ಕಾಳಯವನನ ಶೌರ್ಯಸಾಹಸಗಳನ್ನು ಬಲ್ಲ ಕೃಷ್ಣನು ತನ್ನ ಪ್ರಜೆಗಳನ್ನು ಸುರಕ್ಷಿತವಾಗಿಡಲು ದ್ವಾರಕೆಯನ್ನು ಕಟ್ಟಿದನೆನ್ನಲಾಗುತ್ತದೆ. ಈ ಕಾಳಯವನನು ಯಾವುದೇ ಯುದ್ಧಗಳಲ್ಲಿ ಸೋತಿರದ ಕಾರಣ ಕೃಷ್ಣನು ಸೋಲುವ ಭೀತಿಯಿಂದ ಪಾರಾ ಗಲು ಉಪಾಯ ಹೂಡುತ್ತಾನೆ.

ತಮ್ಮಿಬ್ಬರ ನಡುವಿನ ಕಾಳಗಕ್ಕೆ ಅಪಾರ ಜನಹಾನಿ ಬೇಡವೆಂದು ಕಾಳಯವನನನ್ನು ದ್ವಂದ್ವ ಯುದ್ಧಕ್ಕೆ ಒಪ್ಪಿಸುತ್ತಾನೆ. ನಂತರ ಉಪಾಯವಾಗಿ ಕಾಳಯವನನನ್ನು ಮುಚು ಕುಂದನ ಗುಹೆಗೆ ಕರೆತರುತ್ತಾನೆ. ಮುಚುಕುಂದನಿಂದ ಕಾಳಯವನನ ಸಾವು ವಿಧಿನಿಶ್ಚಿತ ವಾಗಿದ್ದರಿಂದ ಅಲ್ಲಿ ಕಾಳಯವನನ ಹತ್ಯೆಯಾಗುತ್ತದೆ.

ಇದು ಮಹಾಭಾರತದಲ್ಲಿ ಬರುವ ಯವನರ ಸಾರಾಂಶ. ಇಲ್ಲಿ ಗಮನಿಸಬೇಕಾದ ಅಂಶ ವೆಂದರೆ ಬಾಹುಬಲಿ ತನ್ನ ಸೋದರನೊಂದಿಗೆ ದ್ವಂದ್ವಯುದ್ಧದಲ್ಲಿ ತೊಡಗಿದಂತೆಯೇ ಕೃಷ್ಣನು ಕೂಡಾ ಕಾಳಯವನನನ್ನು ದ್ವಂದ್ವಯುದ್ಧಕ್ಕೆ ಆಹ್ವಾನಿಸಿದ್ದುದು. ಅಂದರೆ ಜೈನ ಬಾಹುಬಲಿಯ ಕತೆಯ ಮೇಲೆ

ಹಿಂದೂ ಮಹಾಭಾರತದ ಅಥವಾ ಹಿಂದೂ ಮಹಾಭಾರತದ ಮೇಲೆ ಜೈನ ಬಾಹುಬಲಿಯ ಪ್ರಭಾವವು ಧರ್ಮಗಳ ನಡುವಿನ ಹಕ್ಕೊತ್ತಾಯದ ದ್ವಂದ್ವಯುದ್ಧದ ಸಂಕೇತವೆನಿಸಿ ಬಿಡುತ್ತದೆ!

ಒಟ್ಟಾರೆ ರಾಮಾಯಣ ಮತ್ತು ಮಹಾಭಾರತಗಳಲ್ಲಿ ಯವನರು ಹಾಸುಹೊಕ್ಕಾಗಿದ್ದಾರೆ. ಅಂದರೆ ಗ್ರೀಕರು ಭಾರತದಲ್ಲಿ ಐತಿಹಾಸಿಕವಾಗಿ ಮತ್ತು ಪೌರಾಣಿಕವಾಗಿ ಪ್ರಸ್ತುತ ವಾಗಿದ್ದಾರೆ. ಅದೆಲ್ಲಕ್ಕಿಂತ ಮಿಗಿಲಾಗಿ ರಾಮಾಯಣ ಮತ್ತು ಮಹಾಭಾರತ ಮಹಾ ಕಾವ್ಯಗಳು ಗ್ರೀಕರು ಭಾರತದಲ್ಲಿ ನೆಲೆ ನಿಂತ ನಂತರವೇ ಸೃಷ್ಟಿಯಾಗಿವೆ ಎಂದು ಸಾಬೀತಾ ಗುತ್ತದೆ. ಇನ್ನು ವ್ಯಾಸರು ವೇದಗಳನ್ನು ವಿಭಜಿಸಿದವರೆಂದು ಹೇಳಲಾಗುತ್ತದೆ.

ಹಾಗಿದ್ದರೆ ವ್ಯಾಸರು ವೇದಗಳ ರಚನೆಯ ನಂತರದವರಾಗಿರಬೇಕು. ವೇದಗಳು ವಿಸ್ತಾರ ಗೊಂಡು ವಿಭಜನೆಗೊಳ್ಳುವಂಥ ಸಮಗ್ರತೆಯನ್ನು ತಲುಪಿದ ಕಾಲವನ್ನು ವೇದವ್ಯಾಸರ ಕಾಲವೆನ್ನಬಹುದು. ವೇದವ್ಯಾಸ ಮತ್ತು ಮಹಾಭಾರತ ವ್ಯಾಸರು ಒಬ್ಬರೇ ಆಗಿದ್ದರೆ ಮಹಾ ಭಾರತದ ರಚನೆ ಖಂಡಿತವಾಗಿ ಕ್ರಿಸ್ತಪೂರ್ವ 50ನೇ ಶತಮಾನವಲ್ಲ. ಅದು ಕೂಡಾ ಕ್ರಿಸ್ತ ಪೂರ್ವ ಎರಡನೇ ಅಥವಾ ಒಂದನೇ ಶತಮಾನದ ಸುತ್ತೆ ಇದ್ದೀತು.

ಸಾಹಿತ್ಯಿಕ ಹಿನ್ನೆಲೆಯಲ್ಲಿ ಇವೆರಡೂ ಗ್ರಂಥಗಳ ಕೌತುಕದ ಅಂಶವೆಂದರೆ ಮಹಾ ಭಾರತ ವನ್ನು ರಚಿಸಿದ ವ್ಯಾಸ ಮತ್ತು ರಾಮಾಯಣವನ್ನು ರಚಿಸಿದ ವಾಲ್ಮೀಕಿ ಇಬ್ಬರೂ ತಮ್ಮ ತಮ್ಮ ಕಥೆಗಳಲ್ಲಿ ಪಾತ್ರವಾಗಿರುವುದು. ಸಾಹಿತ್ಯಿಕವಾಗಿ ಲೇಖಕ ತಾನು ರಚಿಸಿದ ಕತೆಗಳಲ್ಲಿ ಪಾತ್ರವಾಗುವ ಪ್ರಕಾರಕ್ಕೆ ಮುನ್ನುಡಿ ಬರೆದವರಲ್ಲಿ ಈ ಈರ್ವರು ವಿಶ್ವಕ್ಕೇ ಮೊದಲಿಗರು. ಅಂದಿದ್ದ ಕೆಲ ರಾಜವಂಶಗಳ, ಪಟ್ಟಣಗಳ, ಭೌಗೋಳಿಕ ನಿದರ್ಶನಗಳನ್ನು ಬಳಸಿ, ರಚನೆಕಾರರು ತಮ್ಮನ್ನೂ ಪಾತ್ರಗಳೆನಿಸಿ ವಿಭಿನ್ನವಾಗಿ ಹೆಣೆದ ತಂತ್ರ ಅಂದಿನ ಎಲ್ಲಾ ಕಾವ್ಯರಚನೆಯ ನಿಯಮಗಳನ್ನು ತಲೆಕೆಳಗು ಮಾಡಿದ್ದವು.

ಚರಿತ್ರೆಯಲ್ಲದ ಆದರೆ ಕಾಲ್ಪನಿಕವೆನಿಸದ, ತತ್ವಶಾಸವೆನಿಸದ ಆದರೆ ಅಧ್ಯಾತ್ಮವಿರುವ, ವೇದವಲ್ಲದ ಆದರೆ ನೀತಿಯಿರುವ ಈ ಮಹಾಕಾವ್ಯಗಳು ಎಲ್ಲಾ ವರ್ಗದ ಜನರಿಗೂ ಹಿತ ವೆನ್ನಿಸಿದ್ದವು. ಯಾವುದೇ ಶಾಸ್ತ್ರಪ್ರಕಾರಗಳಿಗೆ ಒಳಗೊಳ್ಳದೆ ಎಲ್ಲಾ ವರ್ಗೀಕರಣವನ್ನೂ ಈ ರಚನೆಗಳು ಮೀರಿದ್ದವು. ಅಂದಿನ ಸಾಹಿತ್ಯ ನಿಯಮಗಳಿಂದ ಬಂಡೆದ್ದು ತಾನು ರಚಿಸಿದ ಮಹಾಕಾವ್ಯದಲ್ಲಿ ತಾನೊಂದು ಪಾತ್ರವಾಗಿರುವುದರಿಂದ ವಾಲ್ಮೀಕಿಯನ್ನು ಬಂಡುಕೋರ ನೆಂಬ ಹಿನ್ನೆಲೆಯಲ್ಲಿ ಆತ ದರೋಡೆಕೋರನಾಗಿದ್ದ ಎನ್ನಲಾಗಿದೆಯೆಂದು ಬ್ರಿಟಿಷ್ ಸಂಶೋಧಕಿ ಆಬ್ರಿ ಮೆನೆನ್ ಅಭಿಪ್ರಾಯಿಸಿದ್ದಾರೆ.

ಇದೇ ಅಭಿಪ್ರಾಯ ವ್ಯಾಸರನ್ನು ಬೆಸ್ತನೆನ್ನುವುದಕ್ಕೆ ಕೂಡಾ ಅನ್ವಯಿಸಬಹುದೇನೋ! ಏಕೆಂದರೆ ಆ ಕಾಲಘಟ್ಟದಲ್ಲಿ ಸಾಹಿತ್ಯದ ನೂತನ ಪ್ರಯೋಗಗಳು ನಿಯಮಬಾಹಿರವೆನಿಸಿ ಇವರೀರ್ವರನ್ನು ಅಬ್ರಾಹ್ಮಣರೆಂದು ಕರೆದಿರುವ ಸಾಧ್ಯತೆ ಗಾಢವಾಗಿದೆ! ಈ ಮಹಾ ಕಾವ್ಯಗಳ ಖ್ಯಾತಿ ಮುಂದಿನ ಶತಮಾನಗಳಲ್ಲಿ ಅವುಗಳನ್ನು ಹಿಂದೂಗಳ ಧರ್ಮಗ್ರಂಥ ಗಳಾಗಿಸಿತು. ಆ ಕಾವ್ಯಗಳ ಅರೆಕಾಲ್ಪನಿಕ ಪಾತ್ರಗಳೆ ಸತ್ಯವೆನಿಸಿ ಅವುಗಳಿಗೆ ತಕ್ಕನಾಗಿ ಸ್ಮಾರಕಗಳೆದ್ದವು.

ತಮ್ಮ ಅರೆಕಾಲ್ಪನಿಕ ಪಾತ್ರಗಳೆ ವಾಸ್ತವವಾದ ಮೇಲೆ ಬ್ರಾಹ್ಮಣ ವ್ಯಾಸ, ವಾಲ್ಮೀಕಿಯರ ಶೂದ್ರ ಪಾತ್ರಗಳೇ ಅವರ ಜೀವನಗಾಥೆಯಾಯಿತು. ಆಚಾರ್ಯ ವೇದವ್ಯಾಸ ಬೆಸ್ತರ ಮಹಾ ಪುರುಷನಾದರೆ, ಆಚಾರ್ಯ ವಾಲ್ಮೀಕಿ ಬೇಡರ ಸತ್ಪುರುಷನಾಗಿಬಿಟ್ಟ. ಹುಟ್ಟು ಮತ್ತು ವೃತ್ತಿಯಿಂದಷ್ಟೇ ಅಲ್ಲದೇ ಒಮ್ಮೊಮ್ಮೆ ಪಾತ್ರಗಳಿಂದಲೂ ವರ್ಣಗಳು ಬದಲಾಗುತ್ತ ದೆಂಬುದಕ್ಕೆ ಈ ಬ್ರಾಹ್ಮಣರು ಸಾಕ್ಷಿಯಾದರು. ಅಯೋಧ್ಯೆಯೆಂದು ಸಾದರಪಡಿಸಿದ್ದ ಸಾಕೇತ, ಅಯೋಧ್ಯೆಯೇ ಆಗಿಹೋಯಿತು.

ಅಲ್ಲಿಯವರೆಗೆ ವೇದ, ವರ್ಣ, ಸೂತ್ರ, ಶಾಸ್ತ್ರಗಳೆಂದು ಕ್ರಮಬದ್ಧವಾಗಿ ಸಾಗಿ ಬರುತ್ತಿದ್ದ ನಾಗರಿಕತೆ, ಎಲ್ಲಾ ಶಾಸ್ತ್ರಗಳನ್ನು ಮೀರಿದ ಈ ರೋಚಕ ಮಹಾಕಾವ್ಯಗಳಿಂದ ಅತ್ಯಂತ ಪ್ರಭಾವಿತಗೊಂಡಿತು. ಇದು ಕ್ರಮಬದ್ಧ ನಿಯಮಗಳ ಎಲ್ಲಾ ಶಾಸ್ತ್ರಗಳನ್ನು ಮೀರಿ ಭಾರತವು ಪ್ರಪ್ರಥಮವಾಗಿ ರೋಚಕತೆಯನ್ನು ಅಪ್ಪಿಕೊಂಡ ನಿದರ್ಶನವಾಯಿತು.

ಮುಂದೆ ಭಾರತೀಯರ ರೋಚಕತೆಯ ಪ್ರೇಮವು ವ್ಯಕ್ತಿಯಾರಾಧನೆಯಾಗುತ್ತಾ ರಾಮ, ಕೃಷ್ಣರಲ್ಲದೇ ಅನೇಕ ರಾಜರುಗಳು, ಋಷಿಗಳು, ಸಂತರು, ದೇವತೆಗಳಾಗಿ ಬಡ್ತಿ ಪಡೆದು ಸಾಗಿಬಂದ ಪಥದ ಆರಂಭವೆನಿಸಿತು. ಹೀಗೆ ವ್ಯಕ್ತಿಯಾರಾಧನೆ ಮೂರ್ತಿಪೂಜೆಯನ್ನು ಹೆಚ್ಚು ಅಪ್ಯಾಯಮಾನವಾಗಿಸಿತು. ಅಲ್ಲಿಯವರೆಗೆ ಸಕಾರಣವಾಗಿ ತಿದ್ದುಪಡಿಯಾಗುತ್ತಿದ್ದ ದೇವಲೋಕ ಅಕಾರಣವಾಗಿ ತಿದ್ದುಪಡಿಯಾಗಲಾರಂಭಿಸಿ, ಸಾಮಾಜಿಕವಾಗಿ ಕೂಡ ಅಕಾರಣ ತಿದ್ದುಪಡಿಗಳಿಗೆ ಮುನ್ನುಡಿಯಷ್ಟೇ ಅಲ್ಲದೆ ಮಾದರಿ ಕೂಡಾ ಆಯಿತು.

ನಂತರದ ಭಾರತದಲ್ಲಿ ಶಾಸ್ತ್ರಗಳಿಗಿಂತ ಕಥಾನಕಗಳು ಹೆಚ್ಚು ಹೆಚ್ಚು ಪ್ರಾಧಾನ್ಯ ಪಡೆದು ಕೊಂಡವು. ನೂರಾರು ಭಾಷೆಗಳು ಉದಯಿಸಿದವು. ಶಾಸ್ತ್ರ ವಿಜ್ಞಾನಗಳ ತವರಾಗಿದ್ದ ಭಾರತದಲ್ಲಿ ನಿಧಾನವಾಗಿ ಶಾಸ್ತ್ರಗಳು ಕುಂಠಿತಗೊಳ್ಳುತ್ತಾ ಭಾಷೆ, ಸಾಹಿತ್ಯ, ಕಾವ್ಯ, ನಾಟಕ ಗಳ ಭಾವಾವೇಶ, ರೋಚಕತೆಗಳು ಮೆರೆಯುತ್ತಾ ಸಾಗಿದವು. ಹಾಗಾಗಿಯೇ ಭಾರತದ ಪುರಾ ತನ ಗಣಿತ ಶಾಸ್ತ್ರ, ವೈದ್ಯಶಾಸ್ತ್ರ, ಕಾಮಶಾಸ್ತ್ರ, ವಿಮಾನಶಾಸ್ತ್ರ, ಖಗೋಳಶಾಸ್ತ್ರ ಮುಂತಾದ ಶಾಸ್ತ್ರಗಳೇ ಪುರಾತನವಾಗಿಯೇ ಉಳಿದವು.

ಕ್ರಮೇಣ ಆ ಶಾಸಗಳಲ್ಲಿಯೂ ರೋಚಕತೆ, ಭಾವಾವೇಶಗಳನ್ನು ತುರುಕಲಾಯಿತು. ಇಸ್ಲಾಂ ದಾಳಿಯ ನಂತರದ ಕಾಲಘಟ್ಟದಲ್ಲಿ ಶಾಸ್ತ್ರಗಳು ಕಾವ್ಯಕಥನಗಳ ಭಾಗವಾಗಿ ಅಭಿವ್ಯಕ್ತ ಗೊಳ್ಳುತ್ತಿದ್ದವೇ ಹೊರತು ಶಾಸ್ತ್ರಗಳಾಗಿಯಲ್ಲ. ಹಾಗಾಗಿ ಆ ರೀತಿ ಅಭಿವ್ಯಕ್ತಗೊಂಡ ಶಾಸ್ತ್ರ ಗಳೆ ಭವಿಷ್ಯದ ಕಾಲಘಟ್ಟಗಳಲ್ಲಿ ಕಾಲ್ಪನಿಕವೆನಿಸಿ ಕಥೆಗಳಿಗೆ ಮಾತ್ರ ಪ್ರಾಮುಖ್ಯ ದೊರೆ ಯಿತು.

ಶಾಸ್ತ್ರಗಳನ್ನೋ, ನೀತಿಯನ್ನೋ, ಆಧ್ಯಾತ್ಮಿಕ ತತ್ವಗಳನ್ನೋ ಗೂಢಾರ್ಥಗಳನ್ನೋ ಹುದು ಗಿಸಿಕೊಂಡಿದ್ದ ಕಾವ್ಯಗಳು ಕೇವಲ ಕಥಾತ್ಮಕಗಳಾಗಿ ಪರಿಗಣಿಸಲ್ಪಟ್ಟವು. ಭಾರತದ ರಾಮಾ ಯಣ ಮಹಾಭಾರತ ಗ್ರಂಥಗಳ ಅನಾದಿ ಕಾಲದಿಂದ ಇಂದಿನ ‘ಸಂವಿಧಾನ ಉಳಿಸಿ’ ಎಂಬ ಕೂಗಿನವರೆಗಿನ ಹೋರಾಟಗಳೊಳಗಿನ ರೋಚಕತೆಗಳವರೆಗೆ ಇದು ಅನ್ವಯ. ಇಂದಿಗೂ ಸಾಕಷ್ಟು ಬುದ್ಧಿವಂತ ಭಾರತೀಯರು ವಾಕ್ಯಗಳ ನಡುವಿನ ಅರ್ಥವನ್ನು ಪರಿಗಣಿಸದೆ, ಆಯ್ದ ವಾಕ್ಯಗಳನ್ನೇ ಯಥಾವತ್ತಾಗಿ ಎತ್ತಿ ಸಾಕಷ್ಟು ಅವಘಡಗಳನ್ನು ಮೆರೆಸುತ್ತಿದ್ದಾರೆ.

ಬಸವಣ್ಣನ ‘ಸೋಹಂ ಎಂದೆನಿಸದೆ ದಾಸೋಹಂ ಎನಿಸಯ್ಯ’ ಎಂಬ ವಚನವೇ ಇದಕ್ಕೆ ಸಾಕ್ಷಿ. ಕೇವಲ ಸೋ ಎನ್ನುವಾಗ ಪೂರಕ, ಹಂ ಎನ್ನುವಾಗ ರೇಚಕ ಮಾಡುವ ಮಂತ್ರ ರಹಿತ ಸರಳ ‘ಅಜಪ’ ಪದ್ಧತಿಯ ಜಪ ಮಾಡಿಯೇ ಕುಂಡಲಿನಿಯನ್ನು ಜಾಗೃತಗೊಳಿಸ ಬಹುದೆಂಬ ಸರಳ ಸೂತ್ರವನ್ನು ಎಲ್ಲರಿಗೂ ತಿಳಿಸುವ ದಾಸೋಹ ಮಾಡಿರಯ್ಯ ಎಂಬ ವಚನದ ಗೂಢಾರ್ಥವನ್ನು ’ಸ್ವಾಹಾ ಮಾಡದೆ ಬೇರೆಯವರಿಗೂ ಸ್ವಾಹಾ ಮಾಡಿಸಿ’ ಎಂದು ಕೇವಲ ಸ್ವಾಹಾ ಮಾತ್ರ ಬಲ್ಲ ಆಧುನಿಕ ವಿದ್ವಾಂಸರು, ಮಠಾಧೀಶರು ವ್ಯಾಖ್ಯಾನಿಸಿ ಬಿಟ್ಟಿದ್ದಾರೆ.

ಒಂದು ವೇಳೆ ‘ಸೋಹಂ’ ಅನ್ನು ಖಂಡಿಸುವುದಾಗಿದ್ದರೆ ಬಸವಣ್ಣನೇಕೆ ಆತ್ಮಲಿಂಗ, ಎನ್ನ ಕಾಲೇ ಕಂಬ, ಲಿಂಗಾಂಗ ಸಾಮರಸ್ಯ ಎಂಬ ಅಗಣಿತ ಸೋಹಂ ತತ್ವದ ವಚನಗಳನ್ನು ರಚಿಸುತ್ತಿದ್ದ ಎಂಬಲ್ಲಿಗೆ ಇಂದಿನ ಆಧುನಿಕ ಶರಣರ ವ್ಯಾಖ್ಯಾನ ನಿಶ್ಶೂನ್ಯದಲ್ಲಿ ನಿರ್ವಾತ ವಾಗುತ್ತದೆ!

(ಲೇಖಕರು ಶಿಕಾಗೊ ನಿವಾಸಿ ಮತ್ತು ಸಾಹಿತಿ)