ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Keshava Prasad B Column: ಟ್ರಂಪ್‌ ಸುಂಕಾಸ್ತ್ರಕ್ಕೆ ಭಾರತ ಈಗಲೂ ಡೋಂಟ್‌ ಕೇರ್‌ !

2025 ರಲ್ಲಿ ಭಾರತೀಯರ ಸರಾಸರಿ ವಯಸ್ಸು ಕೇವಲ 28 ವರ್ಷ ಎಂಟು ತಿಂಗಳು. ದೇಶದಲ್ಲಿ 50 ಪರ್ಸೆಂಟ್‌ಗೂ ಹೆಚ್ಚು ಮಂದಿ 25 ವರ್ಷ ವಯಸ್ಸಿಗಿಂತ ಚಿಕ್ಕವರು. 68 ಪರ್ಸೆಂಟ್ ಮಂದಿ 15-64 ವರ್ಷ ವಯೋಮಾನದವರು. ಆದ್ದರಿಂದ ಯುವಜನತೆಯಿಂದ ತುಂಬಿ ತುಳುಕುತ್ತಿರುವ ರಾಷ್ಟ್ರವಾಗಿದೆ ಭಾರತ. ಇದು ಆರ್ಥಿಕತೆಗೂ ಪುಷ್ಟಿದಾಯಕ. ಹೀಗಾಗಿಯೇ ಟ್ರಂಪ್ ಬೆದರಿಕೆಗೆ ಸೊಪ್ಪು ಹಾಕದಿರುವ ಅಮೆರಿಕದ ಕಾರ್ಪೊರೇಟ್ ವಲಯದ ದಿಗ್ಗಜ ಟೆಕ್ ಕಂಪನಿಗಳು ಭಾರತದಲ್ಲಿ ಬಿಲಿಯನ್ ಡಾಲರ್‌ಗಳ ಲೆಕ್ಕದಲ್ಲಿ ಭಾರಿ ಬಂಡವಾಳವನ್ನು ಹೂಡಿಕೆ ಮಾಡುತ್ತಿವೆ!

ಟ್ರಂಪ್‌ ಸುಂಕಾಸ್ತ್ರಕ್ಕೆ ಭಾರತ ಈಗಲೂ ಡೋಂಟ್‌ ಕೇರ್‌ !

-

ಮನಿ ಮೈಂಡೆಡ್

ಭಾರತ ಮತ್ತು ಅಮೆರಿಕ ನಡುವಣ ವ್ಯಾಪಾರ ಮಾತುಕತೆ ನನೆಗುದಿಗೆ ಬಿದ್ದಿದೆ. ಅನವಶ್ಯಕವಾಗಿ 500 ಪರ್ಸೆಂಟ್ ಟ್ಯಾರಿಫ್ ವಿಧಿಸಲು ಟ್ರಂಪ್ ಸರಕಾರ ಮುಂದಾಗಿದೆ. ಆದರೆ ಭಾರತ ಕ್ಯಾರೇ ಎನ್ನುತ್ತಿಲ್ಲ! ರಷ್ಯಾದಿಂದ ಡಿಸ್ಕೌಂಟ್ ದರದಲ್ಲಿ ಕಚ್ಚಾ ತೈಲ ಪೂರೈಕೆಯಾಗುತ್ತಲೇ ಇದೆ!

ಹೀಗಿದ್ದರೂ, ಟ್ರಂಪ್ ಹತಾಶೆಯ ಪರಮಾವಧಿಯಿದು! ಅವರ ಮಾತುಗಳನ್ನೇ ಕೇಳಿ: “ನಾನು ಸಂತೋಷವಾಗಿರಬೇಕು ಎಂದು ಭಾರತೀಯರು ಬಯಸುತ್ತಾರೆ. ಮೂಲತಃ ಮೋದಿ ತುಂಬ ಒಳ್ಳೆಯ ಮನುಷ್ಯ, ನಾನು ಸಂತೋಷವಾಗಿಲ್ಲ ಎಂಬುದು ಅವರಿಗೆ ಗೊತ್ತಿದೆ. ನನ್ನನ್ನು ಸಂತೋಷ ವಾಗಿಡುವುದು ಬಹಳ ಮುಖ್ಯ.

ಆದರೆ ಅವರು ರಷ್ಯಾದಿಂದ ತೈಲ ಖರೀದಿಸುತ್ತಾರೆ. ಜತೆಗೆ ಅಮೆರಿಕದೊಂದಿಗೆ ವ್ಯಾಪಾರ ಮಾಡು ತ್ತಾರೆ. ಹೀಗಾಗಿ ಅದರ ಮೇಲೆ ನಾವು ಸುಂಕವನ್ನು ಹೆಚ್ಚಿಸಬವು". ಹೀಗೆಂದ ಮರುದಿನ ಪ್ಲೇಟ್ ಬದಲಿಸುತ್ತಾರೆ- “ಪ್ರಧಾನಿ ಮೋದಿಯವರಿಗೆ ನನ್ನ ಬಗ್ಗೆ ಅಸಮಾಧಾನ ಇದೆ. ರಷ್ಯಾದಿಂದ ಕಚ್ಚಾ ತೈಲ ಖರೀದಿಸುತ್ತಿರುವುದಕ್ಕಾಗಿ ಮಾತ್ರ ಭಾರತದ ವಿರುದ್ಧ ಟ್ಯಾರಿಫ್ ಹಾಕುತ್ತಿದ್ದೇವೆ" ಎನ್ನುತ್ತಾರೆ ಟ್ರಂಪ್.‌

ರಷ್ಯಾ ವಿರುದ್ಧ ನಿರ್ಬಂಧಗಳನ್ನು ವಿಧಿಸುವ ವಿಧೇಯಕಕ್ಕೆ ಟ್ರಂಪ್ ಸಮ್ಮತಿಸಿದ್ದಾರೆ. ಇದರಲ್ಲಿ ರಷ್ಯಾದಿಂದ ಕಚ್ಚಾ ತೈಲ ಖರೀದಿಸುವ ಭಾರತ, ಚೀನಾ, ಬ್ರೆಜಿಲ್ ವಿರುದ್ಧ 500 ಪರ್ಸೆಂಟ್ ತನಕ ಸುಂಕ ವಿಧಿಸುವ ಪ್ರಸ್ತಾಪವೂ ಇದೆ. ಅಂದರೆ ಅಮೆರಿಕಕ್ಕೆ ಭಾರತದಿಂದ ರಫ್ತಾಗುವ ಸರಕುಗಳಿಗೆ ಇದು ಅನ್ವಯವಾಗಲಿದೆ.

ಇದನ್ನೂ ಓದಿ: Keshav Prasad B Column: ಭಾರತದ ಆರ್ಥಿಕ ಬೆಳವಣಿಗೆಯ ವೇಗ ನಕಲಿಯಲ್ಲ !

ಕಳೆದ 9 ತಿಂಗಳಿನಿಂದ ಈ ವಿಧೇಯಕದ ಪ್ರಸ್ತಾಪ ಆಗಿತ್ತು. ಇದು ಸದ್ಯಕ್ಕೆ ವಿಧೇಯಕವಾಗಿದ್ದು, ಕಾಯಿದೆಯಾಗಿಲ್ಲ. ಕಾಯಿದೆ ಆಗಬೇಕಿದ್ದರೆ ಹೌಸ್ ಆಫ್ ರೆಪ್ರೆಸೆಂಟೆಟೀವ್ಸ್ (ಜನಪ್ರತಿನಿಧಿ ಸಭೆ) ಮತ್ತು ಸೆನೆಟ್‌ನಲ್ಲಿ ಅಂಗೀಕಾರವಾಗಬೇಕು. “ಈಗಾಗಲೇ ಕಳೆದ ಆಗಸ್ಟ್‌ನಿಂದ ಅಮೆರಿಕವು ಭಾರತದ ವಿರುದ್ಧ 50 ಪರ್ಸೆಂಟ್ ಸುಂಕ ಹೇರಿದೆ. ಆದ್ದರಿಂದ 500 ಪರ್ಸೆಂಟ್‌ಗೆ ಏರಿಸಿದರೆ ಅಂಥದ್ದೇನೂ ವ್ಯತ್ಯಾಸ ಆಗುವುದಿಲ್ಲ. ‌

ಭಾರತವೂ ಇಲ್ಲಿರುವ ಅಮೆರಿಕ ಮೂಲದ ಕಂಪನಿಗಳಿಗೆ ನಿರ್ಬಂಧ ವಿಧಿಸಬೇಕು, ಅಮೆರಿಕಕ್ಕೆ ಕಳಿಸುವ ಔಷಧಗಳ ರಫ್ತು ನಿಲ್ಲಿಸಬೇಕು" ಎನ್ನುತ್ತಾರೆ ಸ್ಟಾಕ್ ಮಾರ್ಕೆಟ್ ವಿಶ್ಲೇಷಕ ಪ್ರವೀಣ್ ಖೇತನ್. ಮೋನಿಕಾ ವರ್ಮಾ ಹೀಗೆನ್ನುತ್ತಾರೆ- “ಭಾರತದ ವಿರುದ್ಧ 500 ಪರ್ಸೆಂಟ್ ಸುಂಕ ಹಾಕಲು ಟ್ರಂಪ್ ನೋಡುತ್ತಿದ್ದಾರೆ. ತಮ್ಮ ಅಧ್ಯಕ್ಷತೆಯ ಕೊನೆಯಲ್ಲಿ ಟ್ರಂಪ್ 1000 ಶತ್ರುಗಳನ್ನು ಹೊಂದು ತ್ತಾರೆ. ಒಬ್ಬರು ಮಿತ್ರರೂ ಅವರಿಗೆ ಇರುವುದಿಲ್ಲ". ಹೀಗೆ ಜನಾಕ್ರೋಶ ವ್ಯಕ್ತವಾಗುತ್ತಿದೆ.

ರಷ್ಯಾದಿಂದ 70 ಪರ್ಸೆಂಟ್‌ನಷ್ಟು ತೈಲವನ್ನು ಚೀನಾ-ಭಾರತ ಖರೀದಿಸುತ್ತಿವೆ. ಇದರಿಂದ ಗಳಿಸುವ ಹಣವನ್ನು ರಷ್ಯಾವು ಉಕ್ರೇನ್ ವಿರುದ್ಧದ ಯುದ್ಧಕ್ಕೆ ಬಳಸುತ್ತಿದೆ. ಆದ್ದರಿಂದ ಅಂಥ ರಾಷ್ಟ್ರಗಳು ಅಮೆರಿಕಕ್ಕೆ ವಸ್ತುಗಳನ್ನು ರಫ್ತು ಮಾಡಿದರೆ ಸುಂಕ ಹೆಚ್ಚಿಸುತ್ತೇವೆ ಎಂಬುದು ಟ್ರಂಪ್ ಬೆದರಿಕೆ.

ಬಹುಶಃ ಮುಂದಿನ ವಾರ ವಿಧೇಯಕ ಅಂಗೀಕಾರವಾಗಬಹುದು ಎನ್ನುತ್ತಾರೆ ಸಂಸದ ಲಿಂಡ್ಸೆ ಗ್ರಹಾಮ. ಇಂಥ ಗೊಡ್ಡು ಬೆದರಿಕೆಗಳನ್ನು ಟ್ರಂಪ್ ಹಾಕುತ್ತಿದ್ದರೂ, ಭಾರತ ಕ್ಯಾರೇ ಎನ್ನುತ್ತಿಲ್ಲ!

ಇಲ್ಲಿರುವುದು ಸತತ ಮೂರನೇ ಬಾರಿಗೆ ಜನರಿಂದ ಆಯ್ಕೆಯಾಗಿ, ಈಗಲೂ ಅಪಾರ ಜನಪ್ರಿಯತೆ ಯನ್ನು ಉಳಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಎಂಬುದನ್ನು ಟ್ರಂಪ್ ಮರೆತಂತಿದೆ. ಆದರೆ ಟ್ರಂಪ್ ಈಗಲೇ ಈ ವರ್ಷ ನಡೆಯಲಿರುವ ಮಧ್ಯಾವಧಿ (ಮಿಡ್ ಟರ್ಮ್) ಚುನಾವಣೆಯಲ್ಲಿ ಪಕ್ಷದ ಕಥೆ ಏನಾಗಬಹುದೋ ಎಂಬ ಪ್ರಶ್ನೆಯನ್ನು ಅವರಿಗೆ ಅವರೇ ಕೇಳಿ ಕೊಂಡಿದ್ದಾರೆ.

ಒಂದು ವೇಳೆ ರಿಪಬ್ಲಿಕನ್ನರಿಗೆ ಹಿನ್ನಡೆಯಾದರೆ, ಡೆಮಾಕ್ರಟಿಕ್ ಪಕ್ಷದವರು ನಮ್ಮನ್ನು ಸುಮ್ಮನೆ ಬಿಡಲ್ಲ, ಪದಚ್ಯುತಿಗೆ ಯತ್ನಿಸುವ ಸಾಧ್ಯತೆ ಇದೆ ಎಂದು ಟ್ರಂಪ್ ಅವರೇ ಹೇಳಿರುವುದು ವರದಿ ಯಾಗಿದೆ. ಅದಿರಲಿ, ಅದು ಅವರ ಅಂತರಿಕ ಸಮಸ್ಯೆ ಎನ್ನೋಣ. ಸುಂಕಾಸದ ಬೆದರಿಕೆಯ ಹೊರತಾ ಗಿಯೂ, 50 ಪರ್ಸೆಂಟ್ ಸುಂಕದ ನಡುವೆಯೂ ಭಾರತವು 2025ರಲ್ಲಿ ರಷ್ಯಾದಿಂದಲೇ ಅತ್ಯಧಿಕ ಕಚ್ಚಾ ತೈಲವನ್ನು ಖರೀದಿಸಿದೆ!

ಕಳೆದ ಡಿಸೆಂಬರ್‌ನಲ್ಲೂ ರಷ್ಯಾದಿಂದಲೇ ಹೆಚ್ಚು ತೈಲ ತರಿಸಿಕೊಳ್ಳಲಾಗಿತ್ತು. ನವೆಂಬರ್ ಗೆ ಹೋಲಿಸಿದರೆ 16 ಪರ್ಸೆಂಟ್ ಕಡಿಮೆಯಾಗಿತ್ತೇ ಹೊರತು, ಒಟ್ಟಾರೆಯಾಗಿ ರಷ್ಯಾದಿಂದಲೇ ಹೆಚ್ಚು ಆಮದಾಗಿತ್ತು.

ಉಳಿದಂತೆ ಇರಾಕ್, ಸೌದಿ ಅರೇಬಿಯಾ, ಯುಎಇಯಿಂದ‌ ತರಿಸಿಕೊಳ್ಳಲಾಗಿತ್ತು. ಕಳೆದ ವರ್ಷ ಮೂರನೇ ಒಂದರಷ್ಟು ಕಚ್ಚಾ ತೈಲವು ರಷ್ಯಾದಿಂದಲೇ ಬಂದಿತ್ತು. ಅದು 35 ಪರ್ಸೆಂಟ್‌ನಷ್ಟಿತ್ತು. ಅಂದರೆ ಮೂರನೇ ಒಂದರಷ್ಟು. ಎರಡನೆಯದಾಗಿ ಇರಾಕ್ 23 ಪರ್ಸೆಂಟ್, ಸೌದಿ ಅರೇಬಿಯಾ 14-18 ಪರ್ಸೆಂಟ್ ತೈಲವನ್ನು ಪೂರೈಸಿವೆ.

ಯುಎಇ, ಅಮೆರಿಕದಿಂದಲೂ ಭಾರತ ತರಿಸಿಕೊಳ್ಳುತ್ತಿದೆ. ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಇಕಾನಮಿ ಸಂಸ್ಥೆಯ ವರದಿಯೂ, 2025ರಲ್ಲಿ ಭಾರತವು ರಷ್ಯಾದಿಂದ ಹೆಚ್ಚು ತೈಲವನ್ನು ಖರೀದಿಸಿರುವುದನ್ನು ಬಿಂಬಿಸಿದೆ.

ವರ್ಷದುದ್ದಕ್ಕೂ ಭಾರತವು ಸರಾಸರಿ 30 ಪರ್ಸೆಂಟ್‌ನಷ್ಟು ಕಚ್ಚಾ ತೈಲವನ್ನು ರಷ್ಯಾದಿಂದ ಆಮದು ಮಾಡಿಕೊಂಡಿದೆ. ನವೆಂಬರ್‌ನಲ್ಲಂತೂ ರಷ್ಯಾದಿಂದ 77 ಲಕ್ಷ ಟನ್ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳಲಾಗಿತು. ಇದು ಕಳೆದ 6 ತಿಂಗಳಿನಲ್ಲಿಯೇ ಗರಿಷ್ಠ ಮಟ್ಟದ್ದಾಗಿತ್ತು ಎಂದರೆ ಯೋಚಿಸಿ!

ಟ್ರಂಪ್ ಬೆದರಿಕೆಗೆ ಭಾರತ ಕ್ಯಾರೇ ಎನ್ನುತ್ತಿಲ್ಲ ಎನ್ನುವುದಕ್ಕೆ ಬೇರೆ ಸಾಕ್ಷಿ ಬೇಕೆ? ಜತೆಗೆ ಒಂದಷ್ಟು ಜಾಣ್ಮೆಯ ನಡೆಯನ್ನೂ ಭಾರತ ಸರಕಾರ ಅನುಸರಿಸಿದೆ. ಭಾರತ-ಅಮೆರಿಕ ನಡುವೆ ವ್ಯಾಪಾರ ಒಪ್ಪಂದದ ಮಾತುಕತೆಯೂ ನಿರ್ಣಾಯಕ ಘಟ್ಟ ತಲುಪಿದೆ. ಈ ಹಿನ್ನೆಲೆಯಲ್ಲಿ ನವೆಂಬರ್‌ನಲ್ಲಿ ಅಮೆರಿಕದಿಂದಲೂ ಕಚ್ಚಾ ತೈಲ ಖರೀದಿಯನ್ನು ಹೆಚ್ಚಿಸಿದೆ.

ಅದು 27 ಲಕ್ಷಟನ್ನಿಗೆ ಏರಿಕೆಯಾಗಿದೆ. ಒಟ್ಟು ಆಮದಿನಲ್ಲಿ 13 ಪರ್ಸೆಂಟ್ ಆಗಿದೆ. ಒಟ್ಟಿನಲ್ಲಿ ಬೇರೆ ಬೇರೆ ಮೂಲಗಳಿಂದ ತೈಲವನ್ನು ತರಿಸಿಕೊಳ್ಳುತ್ತಿದೆ. ಆದರೂ ರಷ್ಯಾದಿಂದ ಹೆಚ್ಚುಕೊಳ್ಳುತ್ತಿದೆ. ಅಲ್ಲಿ ಹೆಚ್ಚಿನ ಡಿಸ್ಕೌಂಟ್ ಸಿಗುವುದರಿಂದ ಇದು ಸಹಜ ತಾನೇ? ನಿಜ, ಅಮೆರಿಕವು ಭಾರತಕ್ಕೆ ಅತಿ ದೊಡ್ಡ ರಫ್ತು ಮಾರುಕಟ್ಟೆ.

ಹೀಗಿರುವಾಗ ಟ್ಯಾರಿಫ್ ಪರಿಣಾಮದಿಂದ ರಫ್ತುದಾರರಿಗೆ ಅಮೆರಿಕದ ಮಾರುಕಟ್ಟೆಯಲ್ಲಿ ಸಮಸ್ಯೆ‌ ಯಾಗಬಹುದು. ಭಾರತದ ಟೆಕ್ಸ್‌ ಟೈಲ್ಸ್, ಔಷಧಗಳು, ಎಂಜಿನಿಯರಿಂಗ್ ವಸ್ತುಗಳು, ಆಭರಣಗಳು, ಕರಕುಶಲ ಉತ್ಪನ್ನಗಳು, ಕೃಷಿ ಉತ್ಪನ್ನಗಳು ಅಮೆರಿಕದಲ್ಲಿ ದುಬಾರಿಯಾಗಬಹುದು.

ಆದರೆ ಭಾರತವು ಯಾವುದೋ ಒಂದು ದೇಶವನ್ನೇ ರಫ್ತಿಗೆ ಅವಲಂಬಿಸಿಲ್ಲ. ಅಸಲಿಗೆ ಭಾರತದ್ದು ಸರಕುಗಳ ರಫ್ತು ಅಧಾರಿತ ಆರ್ಥಿಕತೆಯೇ ಅಲ್ಲ. ಅಮೆರಿಕಕ್ಕೆ 18 ಪರ್ಸೆಂಟ್ ರಫ್ತು ನಡೆದರೆ, ಯುಎಇ, ನೆದರ್ಲೆಂಡ್ಸ್, ಚೀನಾ, ಸಿಂಗಾಪುರ, ಬ್ರಿಟನ್, ಸೌದಿ ಅರೇಬಿಯಾ, ಜರ್ಮನಿ, ಇಟಲಿಗೂ ಭಾರತವು ರಫ್ತು ಮಾಡುತ್ತದೆ.

ಜತೆಗೆ ಭಾರತದ ಆರ್ಥಿಕತೆಯ ಬೆಳವಣಿಗೆಯು ದೇಶೀಯ ವ್ಯಾಪಾರ ಚಟುವಟಿಕೆಗಳನ್ನೇ ಮುಖ್ಯ ವಾಗಿ ಅವಲಂಬಿಸಿದೆ. ಆದ್ದರಿಂದಲೇ ಟ್ರಂಪ್ ಅವರು ಭಾರತದ ಮಾರುಕಟ್ಟೆಯಲ್ಲಿ ಅಮೆರಿಕದ ಉತ್ಪನ್ನಗಳನ್ನು ಭರ್ಜರಿಯಾಗಿ ವ್ಯಾಪಾರ ಮಾಡಬೇಕು ಎಂದು ಲೆಕ್ಕಾಚಾರ ಹಾಕುತ್ತಿದ್ದಾರೆ.

ಆದರೆ ಅಮೆರಿಕದ ಡೇರಿ ಉತ್ಪನ್ನಗಳು, ಕೃಷಿ ಉತ್ಪನ್ನಗಳು ದಂಡಿಯಾಗಿ ಭಾರತದ ಮಾರುಕಟ್ಟೆಗೆ ಲಗ್ಗೆ ಇಟ್ಟರೆ, ಇಲ್ಲಿನ ರೈತ ಸಮುದಾಯ, ಸಣ್ಣ ಉದ್ದಿಮೆದಾರರು, ವರ್ತಕರ ಹೊಟ್ಟೆಗೆ ಪೆಟ್ಟು ಬೀಳು ವುದು ಖಚಿತ. ಆದ್ದರಿಂದಲೇ ಭಾರತ ತನ್ನ ಜನರ ಹಿತಾಸಕ್ತಿಯನ್ನು ಬಿಟ್ಟುಕೊಳ್ಳಲು ಸುತರಾಂ ಒಪ್ಪುತ್ತಿಲ್ಲ.

ಮೂಲಸೌಕರ್ಯ ಅಭಿವೃದ್ಧಿಗೆ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳು ಭಾರಿ ಹೂಡಿಕೆ ಮಾಡುತ್ತಿವೆ. ಇಕಾನಮಿ ಡಿಜಿಟಲೀಕರಣವಾಗುತ್ತಿದೆ. ಸೇವಾವಲಯದಲ್ಲಿ ಐಟಿ ಮತ್ತು ಫಿನ್‌ಟೆಕ್ ಬೆಳೆಯುತ್ತಿವೆ. ಉತ್ಪಾದನೆ ಕೂಡ ಹಳಿಗೆ ಮರಳುತ್ತಿದೆ. ಆತ್ಮನಿರ್ಭರ್ ಭಾರತ ಅಥವಾ ಸ್ವಾವಲಂಬಿ ಭಾರತ ಅಭಿಯಾನ ನಡೆಯುತ್ತಿದೆ.

2025 ರಲ್ಲಿ ಭಾರತೀಯರ ಸರಾಸರಿ ವಯಸ್ಸು ಕೇವಲ 28 ವರ್ಷ ಎಂಟು ತಿಂಗಳು. ದೇಶದಲ್ಲಿ 50 ಪರ್ಸೆಂಟ್‌ಗೂ ಹೆಚ್ಚು ಮಂದಿ 25 ವರ್ಷ ವಯಸ್ಸಿಗಿಂತ ಚಿಕ್ಕವರು. 68 ಪರ್ಸೆಂಟ್ ಮಂದಿ 15-64 ವರ್ಷ ವಯೋಮಾನದವರು. ಆದ್ದರಿಂದ ಯುವಜನತೆಯಿಂದ ತುಂಬಿ ತುಳುಕುತ್ತಿರುವ ರಾಷ್ಟ್ರ ವಾಗಿದೆ ಭಾರತ. ಇದು ಆರ್ಥಿಕತೆಗೂ ಪುಷ್ಟಿದಾಯಕ. ಹೀಗಾಗಿಯೇ ಟ್ರಂಪ್ ಬೆದರಿಕೆಗೆ ಸೊಪ್ಪು ಹಾಕದಿರುವ ಅಮೆರಿಕದ ಕಾರ್ಪೊರೇಟ್ ವಲಯದ ದಿಗ್ಗಜ ಟೆಕ್ ಕಂಪನಿಗಳು ಭಾರತದಲ್ಲಿ ಬಿಲಿಯನ್ ಡಾಲರ್‌ಗಳ ಲೆಕ್ಕದಲ್ಲಿ ಭಾರಿ ಬಂಡವಾಳವನ್ನು ಹೂಡಿಕೆ ಮಾಡುತ್ತಿವೆ!

ಬೇಕಾದರೆ ನೋಡಿ, 2025ರ ಆಗ 1ಕ್ಕೆ 25 ಪರ್ಸೆಂಟ್ ಸುಂಕ ವಿಧಿಸಿದ ಟ್ರಂಪ್, ಆಗ 27ಕ್ಕೆ 50 ಪರ್ಸೆಂಟ್‌ಗೆ ಏರಿಸಿದರು! ಇದಾಗಿ ನಾಲ್ಕೇ ತಿಂಗಳಿನಲ್ಲಿ, ಅಂದ್ರೆ ಡಿಸೆಂಬರ್‌ನಲ್ಲಿ ಅಮೆರಿಕದ ದಿಗ್ಗಜ ಕಂಪನಿಗಳಾದ ಅಮೆಜಾನ್, ಮೈಕ್ರೊಸಾಫ್ಟ್ ಮತ್ತು ಗೂಗಲ್ ಒಟ್ಟಾಗಿ ಭಾರತದಲ್ಲಿ 67.5 ಶತಕೋಟಿ ಡಾಲರ್‌ ನಷ್ಟು ಹೊಸ ಬಂಡವಾಳ ಹೂಡಿಕೆಯನ್ನು ಘೋಷಿಸಿವೆ. ರುಪಾಯಿ ಲೆಕ್ಕದಲ್ಲಿ ಹೇಳೋದಿದ್ರೆ ಸುಮಾರು 6 ಲಕ್ಷ ಕೋಟಿ ರುಪಾಯಿಗೂ ಹೆಚ್ಚು!

ಸ್ವತಃ ಅಮೆರಿಕದ ಕಾರ್ಪೊರೇಟ್ ಕಂಪನಿಗಳೇ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತಿಗೆ ಕಿಮ್ಮತ್ತು ಕೊಡುತ್ತಿಲ್ಲ ಎಂಬುದಕ್ಕೆ‌ ಇದಕ್ಕಿಂತ ಬೇರೆ ನಿದರ್ಶನ ಬೇಕೆ? 2025ರ ಜುಲೈನಲ್ಲಿ ವಾಷಿಂಗ್ಟನ್‌ನಲ್ಲಿ ನಡೆದ ‘ಎಐ ಶೃಂಗ ಸಮಾವೇಶ’ದಲ್ಲಿ ಟ್ರಂಪ್ ಅವರು, ಭಾರತದಲ್ಲಿ ಭಾರಿ ಹೂಡಿಕೆ ಮಾಡುತ್ತಿರುವ ಗೂಗಲ್ ಮತ್ತು ಮೈಕ್ರೊಸಾಫ್ಟ್ ಕಂಪನಿಗಳನ್ನು ಟೀಕಿಸಿದ್ದರು.

2025ರ ಮೇನಲ್ಲಿ, ಐಫೋನ್ ತಯಾರಕ ಆಪಲ್ ಕಂಪನಿಯ ಸಿಇಒ ಟಿಮ್ ಕುಕ್ ಅವರಿಗೆ ನೇರವಾಗಿಯೇ “ನೀವು ಭಾರತದಲ್ಲಿ ಕಾರ್ಖಾನೆಗಳನ್ನು, ಕ್ಯಾಂಪಸ್ ಕಟ್ಟಡಗಳನ್ನು ತೆರೆಯುವು ದನ್ನು ನಾನು ಬಯಸುವುದಿಲ್ಲ. ಅಮೆರಿಕದಲ್ಲಿಯೇ ಕಟ್ಟಿಬಿಡಿ. ಭಾರತದ ಗ್ರಾಹಕರಿಗೆ ಬೇಕಿದ್ದರೆ ಅಲ್ಲಿಯೇ ತಯಾರಿಸಿ, ಆದರೆ ಅಮೆರಿಕದ ಗ್ರಾಹಕರಿಗೆ ಅಕೆ ತಯಾರಿಸುತ್ತೀರಿ? ಇಲ್ಲಿಯೇ ಉತ್ಪಾದಿಸಿ" ಎಂದು ಟ್ರಂಪ್ ಒತ್ತಾಯಿಸಿದ್ದರು.

ಆದರೆ ಟ್ರಂಪ್ ತಾಳಕ್ಕೆ ತಕ್ಕಂತೆ ಕುಣಿಯಲು ಮತ್ತು ನಷ್ಟ ಮಾಡಿಕೊಳ್ಳಲು ಆಪಲ್ ಸಿಇಒ ಟಿಮ್ ಕುಕ್ ಅವರೇನು ಶತಮೂರ್ಖರೇ? ಚೀನಾ ಬದಲಿಗೆ ಭಾರತದಲ್ಲಿ ತನ್ನ ಐಫೋನ್‌ಗಳ ಉತ್ಪಾದನೆ ಯನ್ನು ಆಪಲ್ ಗಣನೀಯವಾಗಿ ಹೆಚ್ಚಿಸಿದೆ. 2025ರಲ್ಲಿ ದಾಖಲೆಯ 4.50 ಲಕ್ಷ ಕೋಟಿ ರುಪಾಯಿ ಮೌಲ್ಯದ ಐಫೋನ್‌ಗಳ ರಫ್ತನ್ನು ಕಂಪನಿ ಮಾಡಿದೆ!

ಇದರಿಂದ ಭಾರತದಲ್ಲಿ ಆಪಲ್ 3.5 ಲಕ್ಷಕ್ಕೂ ಹೆಚ್ಚು ನೇರ-ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸಿದೆ! ಆದ್ದರಿಂದ ಟ್ರಂಪ್ ಸುಂಕಾಸ್ತ್ರದ ಮೂಲಕ ಮೋದಿಯವರಂಥ ಒಳ್ಳೆಯ ಸ್ನೇಹಿತರನ್ನು ಕಳೆದು ಕೊಳ್ಳಬಹುದು, ಅಷ್ಟೇ!