ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Keshav Prasad B Column: ಭಾರತದ ಆರ್ಥಿಕ ಬೆಳವಣಿಗೆಯ ವೇಗ ನಕಲಿಯಲ್ಲ !

ಭಾರತೀಯ ಆಡಳಿತ ವ್ಯವಸ್ಥೆಯು ಜಿ-20 ಶೃಂಗಸಭೆಗೆ ಮುನ್ನ ಆರ್ಥಿಕ ಪರಿಸ್ಥಿತಿಯ ವಾಸ್ತವಿಕ ಅಂಶ ಗಳನ್ನು ಮರೆಮಾಚುತ್ತಿದೆ. ಹೆಡ್‌ಲೈನ್ ಅಂಕಿ-ಅಂಶಗಳನ್ನು ಮಾತ್ರ ವೈಭವೀಕರಿಸಲಾಗುತ್ತಿದೆ. ಬಹು ಪಾಲು ಜನಸಾಮಾನ್ಯರು ಎದುರಿಸುತ್ತಿರುವ ಕಷ್ಟಗಳು, ಹೋರಾಟಗಳನ್ನು ಮರೆಮಾಚುವುದು ಅಪಾಯಕಾರಿ ಎಂದು ಅವರು ಬರೆದಿದ್ದರು.

ಭಾರತದ ಆರ್ಥಿಕ ಬೆಳವಣಿಗೆಯ ವೇಗ ನಕಲಿಯಲ್ಲ !

-

ಮನಿ ಮೈಂಡೆಡ್

ಹಿಂದಿನಿಂದಲೂ, ಬಹುತೇಕ ಎಡಪಂಥೀಯ ಚಿಂತಕರು ಮತ್ತು ಆರ್ಥಿಕ ತಜ್ಞರು ಭಾರತದ ಜಿಡಿಪಿ ಬೆಳವಣಿಗೆಯನ್ನು ವ್ಯಂಗ್ಯವಾಡಿ, ತಿರಸ್ಕರಿಸಿದವರೇ ಆಗಿದ್ದಾರೆ. ಮಾತೆತ್ತಿದರೆ ಅಸಮಾನತೆ, ನಿರುದ್ಯೋಗದ್ದೇ ಮಾತು.

“ಅಂಬಾನಿ-ಅದಾನಿಯವರಿಗೆ ಮೋದಿ ಇಡೀ ದೇಶವನ್ನೇ ಮಾರಾಟ ಮಾಡುತ್ತಿದ್ದಾರೆ, ಎಚ್‌ಎಎಲ್ ಸೇರಿದಂತೆ ಸಾರ್ವಜನಿಕ ವಲಯದ ಕಂಪನಿಗಳನ್ನು ದುರ್ಬಲಗೊಳಿಸುತ್ತಿದ್ದಾರೆ, ಬ್ಯಾಂಕ್‌ಗಳನ್ನು ಮುಳುಗಿಸುತ್ತಿದ್ದಾರೆ" ಎಂಬಿತ್ಯಾದಿ ಇಲ್ಲಸಲ್ಲದ ಆರೋಪಗಳ ಸರಮಾಲೆಯನ್ನೇ ಇವರು ಕಟ್ಟಿದರು.

ಸದಾ ನಕಾರಾತ್ಮಕ ಮಾತುಗಳಲ್ಲಿ ನಿಂದಿಸುತ್ತಾ ತಾಯ್ನಾಡಿನ ಪ್ರಗತಿಯನ್ನೇ ಒಪ್ಪಿಕೊಳ್ಳದೆ, ದ್ರೋಹ ಬಗೆದರು. ಜಿಡಿಪಿ ಅಂಕಿ-ಅಂಶಗಳು ಏರಿಕೆಯಾಗುತ್ತಿರುವುದನ್ನು ತೋರಿಸಿದಾಗಲೆಲ್ಲ, “ತಲಾ ಆದಾಯ ಕಳಪೆಯಾಗಿದೆ, ಜನಸಾಮಾನ್ಯರ ಜೀವನ ದುಸ್ತರವಾಗಿದೆ" ಎಂದು ಬೊಬ್ಬೆ ಹೊಡೆದರು.

ದೇಶವಾಸಿಗಳಲ್ಲಿ ಕೀಳರಿಮೆ ಹುಟ್ಟಿಸುವುದರಲ್ಲಿ ಇವರ ಕಿತಾಪತಿ, ಷಡ್ಯಂತ್ರದ ಪಾಲು ಸಾಕಷ್ಟಿದೆ. ಅಂಥ ಒಂದಷ್ಟು ಉದಾಹರಣೆಗಳನ್ನು ನೋಡೋಣ. ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ಥ್ಯ ಸೇನ್ ಅವರು “ಅಭಿವೃದ್ಧಿ ಎಂದರೆ ‘ನಿಜವಾದ ಸ್ವಾತಂತ್ರ್ಯ’ ಆಗಿರಬೇಕೇ ಹೊರತು ಕೇವಲ ಜಿಡಿಪಿ ಬೆಳವಣಿಗೆಯಲ್ಲ" ಎಂದು ನಿರಂತರ ಪ್ರತಿಪಾದಿಸಿದರು.

ದೇಶವು ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚು ಖರ್ಚು ಮಾಡುತ್ತಿಲ್ಲ ಎಂಬುದು ಅವರ ಬೇಸರವಾಗಿತ್ತು. ಬೆಲ್ಜಿಯಂ ಮೂಲದ ಜಿಯಾನ್ ಡ್ರೆಜ್ ಎಂಬ ಆರ್ಥಿಕ ತಜ್ಞರು, “ಭಾರತದ ಜಿಡಿಪಿ ಬೆಳವಣಿಗೆ ಯಿಂದ ಜನಸಾಮಾನ್ಯರಿಗೆ ಯಾವ ಪ್ರಯೋಜನವೂ ಆಗುತ್ತಿಲ್ಲ" ಎಂದು ತಗಾದೆ ಮಾಡುತ್ತಿದ್ದರು. ಜೆಎನ್‌ಯುವಿನ ನಿವೃತ್ತ ಪ್ರೊಫೆಸರ್ ಅರುಣ್ ಕುಮಾರ್ ಅವರು, “ಭಾರತದ ನಿಜವಾದ ಆರ್ಥಿಕ ಬೆಳವಣಿಗೆ ಕೇವಲ 2.5 ಪರ್ಸೆಂಟ್‌ನಿಂಂದ 3 ಪರ್ಸೆಂಟ್ ಇರಬಹುದು. 8 ಪರ್ಸೆಂಟ್ ಆಗಿರಲಾರದು" ಎಂದು ಆಪಾದಿಸಿದ್ದರು.

ಇದನ್ನೂ ಓದಿ: Keshava Prasada B Column: ವಿಬಿ-ಜಿ ರಾಮ್ ಜಿ‌ ಯೋಜನೆ: ಚರ್ಚೆ ಆಗದಿರುವ ವಿಚಾರಗಳು !

ಕರಣ್ ಥಾಪರ್‌ಗೆ ನೀಡಿದ ಸಂದರ್ಶನದಲ್ಲಿ ಅವರು, “ಭಾರತದ ಜಿಡಿಪಿ ಅಂಕಿ-ಅಂಶಗಳನ್ನು ಉತ್ಪ್ರೇಕ್ಷೆ ಮಾಡಲಾಗುತ್ತಿದೆ. ಐಎಂಎಫ್ ಪ್ರಕಾರವೇ ಇದೆಲ್ಲ ಸಿ-ಗ್ರೇಡ್ ಡೇಟಾಗಳಾಗಿವೆ" ಎಂದು ದೂರಿದ್ದರು.‌ ಇಂಡಿಯನ್-ಅಮೆರಿಕನ್ ಇಕನಾಮಿ ಅಶೋಕ ಮೂಡಿಯವರಂತೂ, “ಭಾರತದ ಜಿಡಿಪಿ ಬೆಳವಣಿಗೆಯೇ ನಕಲಿ" (India's Fake Growth Story) ಎಂದು ವರದಿಯನ್ನೇ ಬರೆದಿದ್ದರು.

“ಹೆಚ್ಚುತ್ತಿರುವ ಅಸಮಾನತೆ, ನಿರುದ್ಯೋಗ ಸಮಸ್ಯೆ, ಖಾಸಗಿ ಬಂಡವಾಳ ಹೂಡಿಕೆಯ ಕೊರತೆ, ಹೆಚ್ಚುತ್ತಿರುವ ಸಾಲ, ಉತ್ಪಾದನೆ ಮತ್ತು ವೆಚ್ಚದ ನಡುವಿನ ಅಜಗಜಾಂತರ ವ್ಯತ್ಯಾಸದ ಪರಿಣಾಮ ಜಿಡಿಪಿ ಬೆಳವಣಿಗೆಯೇ ನಕಲಿ" ಎಂದು ಅವರು ಆರೋಪಿಸಿದ್ದರು.

ಭಾರತೀಯ ಆಡಳಿತ ವ್ಯವಸ್ಥೆಯು ಜಿ-20 ಶೃಂಗಸಭೆಗೆ ಮುನ್ನ ಆರ್ಥಿಕ ಪರಿಸ್ಥಿತಿಯ ವಾಸ್ತವಿಕ ಅಂಶಗಳನ್ನು ಮರೆಮಾಚುತ್ತಿದೆ. ಹೆಡ್‌ಲೈನ್ ಅಂಕಿ-ಅಂಶಗಳನ್ನು ಮಾತ್ರ ವೈಭವೀಕರಿಸಲಾಗು ತ್ತಿದೆ. ಬಹುಪಾಲು ಜನಸಾಮಾನ್ಯರು ಎದುರಿಸುತ್ತಿರುವ ಕಷ್ಟಗಳು, ಹೋರಾಟಗಳನ್ನು ಮರೆ ಮಾಚುವುದು ಅಪಾಯಕಾರಿ ಎಂದು ಅವರು ಬರೆದಿದ್ದರು.

ಮೋದಿ ಮಾದರಿಯಲ್ಲಿ ಜಾಬ್‌ಲೆಸ್ ಗ್ರೋತ್ ಅಥವಾ ಉದ್ಯೋಗ ರಹಿತ ಬೆಳವಣಿಗೆಯಾಗುತ್ತಿದೆ. ಕಾರ್ಪೊರೇಟ್ ವಲಯದ ಕಂಪನಿಗಳು ಗಳಿಸುತ್ತಿರುವ ಲಾಭವು ಬಹುಸಂಖ್ಯಾತ ಜನತೆಯ ಆರ್ಥಿಕ ಚೇತರಿಕೆಗೆ ಕಾರಣವಾಗುತ್ತಿಲ್ಲ. ಜಿಡಿಪಿ ಮಾತ್ರ ಏರುತ್ತಿದೆ. ದೇಶದ ಉತ್ಪಾದನೆ ಅಥವಾ ಆದಾಯ ಹೆಚ್ಚುತ್ತಿದ್ದರೂ, ಖಾಸಗಿ ವೆಚ್ಚಗಳು ಹಿಂದುಳಿದಿದೆ ಎಂದರೆ, ಜನಸಾಮಾನ್ಯರಿಗೆ ಬೆನಿಫಿಟ್ ಸಿಗುತ್ತಿಲ್ಲ ಎಂದರ್ಥ.

ಜಿಡಿಪಿ ಏರುತ್ತಿದ್ದರೂ, ಹೊಸ ಉದ್ಯೋಗಗಳು ಸೃಷ್ಟಿಯಾಗುತ್ತಿಲ್ಲ, ಉದ್ಯೋಗದಲ್ಲಿರುವವರಿಗೂ ಕಡಿಮೆ ಸಂಬಳ ಸಿಗುತ್ತಿದೆ. ಕಾರ್ಪೊರೇಟ್ ಲಾಭ ಹೆಚ್ಚುತ್ತಿದೆ, ಜನಸಾಮಾನ್ಯರ ಆದಾಯ ಇಳಿಯು ತ್ತಿದೆ. ಇದು ಮಾರುಕಟ್ಟೆಯ ವೈಫಲ್ಯವಲ್ಲ, ಬದಲಿಗೆ ನೀತಿಯ ಸೋಲು. ಜಿಡಿಪಿಯಲ್ಲಿ ಉತ್ಪಾದನೆ ವಲಯದ ಪಾಲು ಮುಗ್ಗರಿಸಿದೆ.

ಹೀಗಾಗಿ ಇದು ‘ಮೇಕ್ ಇನ್ ಇಂಡಿಯಾ’ದ ಹಿನ್ನಡೆಯಾಗಿದೆ. ಎರಿಕ್ ಎ ಹಾನುಶೆಕ್ ಎಂಬ ಇಕನಾಮಿ, “ಭಾರತದ 85 ಪರ್ಸೆಂಟ್ ಶಾಲಾ ಮಕ್ಕಳಿಗೆ ಮೂಲಭೂತ ಸಾಕ್ಷರತೆ ಕೂಡ ಸಿಗುತ್ತಿಲ್ಲ" ಎಂದೆಲ್ಲ ಬಣ್ಣಿಸಿದ್ದರು.

2023-24ರ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಗ್ರೋತ್ ರೇಟ್ 7.8‌ ಪರ್ಸೆಂಟ್‌ ಷ್ಟಿತ್ತು. ಆಗ ಅಸಮಾಧಾನ ತೋಡಿಕೊಂಡಿದ್ದ ಅಶೋಕ ಮೂಡಿಯವರು, “ಜಿಡಿಪಿ ನಂಬರುಗಳು ತಪ್ಪಾಗಿದ್ದು, ಸರಿಯಾಗಿ ಲೆಕ್ಕ ಹಾಕಿದರೆ 4.5 ಪರ್ಸೆಂಟ್‌ಗೆ ಇಳಿಯಲಿದೆ" ಎಂದು ಕುಟುಕಿದ್ದರು. ಜಿ-20 ಶೃಂಗಸಭೆಗೆ ಮುನ್ನ ಮೋದಿ ಸರಕಾರವು ಅಂತಾರಾಷ್ಟ್ರೀಯ ಸಮುದಾಯವನ್ನು ಪ್ರಭಾವಿತ ಗೊಳಿಸಲು 7.8 ಪರ್ಸೆಂಟ್ ಲೆಕ್ಕಾಚಾರವನ್ನು ಮುಂದಿಡುತ್ತಿದೆ.

ಭಾರತವು ಜಗತ್ತಿನ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವಾಗಿದೆ ಎಂಬುದಾಗಿ ವೈಭವೀ ಕರಿಸಲಾಗುತ್ತಿದೆ. ಭಾರತವು ಅಂತಾರಾಷ್ಟ್ರೀಯ ದರ್ಜೆಯ ಉತ್ತಮ ಗುಣಮಟ್ಟದ ಪದ್ಧತಿಯಡಿ ಯಲ್ಲಿ ಜಿಡಿಪಿ ಲೆಕ್ಕ ಕೊಡುತ್ತಿಲ್ಲ ಎಂದು ಟೀಕಿಸಿದ್ದರು.

ಆದರೆ ಎಡಪಂಥೀಯ ಆರ್ಥಿಕ ಚಿಂತಕರ ಈ ಎಲ್ಲ ನರೇಟಿವ್‌ಗಳು ಸುಳ್ಳಾಗಿವೆ. ಭಾರತವು ಹೊಸ ವರ್ಷದ ಆರಂಭದಲ್ಲಿ ಸಿಹಿ ಸುದ್ದಿಯನ್ನು ಜಗತ್ತಿಗೆ ನೀಡಿದೆ. ನಮ್ಮ ದೇಶವು ಪ್ರಪಂಚದ ನಾಲ್ಕನೇ ಅತಿ ದೊಡ್ಡ ಆರ್ಥಿಕತೆಯಾಗಿ ಅಧಿಕೃತವಾಗಿ ಹೊರಹೊಮ್ಮಿದೆ. ಜಪಾನ್ ಅನ್ನು ಹಿಂದಿಕ್ಕಿದೆ.

ಇನ್ನು ಮುಂದಿರುವುದು ಜರ್ಮನಿ, ಚೀನಾ ಮತ್ತು ಅಮೆರಿಕ ಮಾತ್ರ. ಸೈಕಲಾಜಿಕಲ್ ಆಗಿಯೂ ಇದು ಮಹತ್ವದ ಸಾಧನೆ. ಏಕೆಂದರೆ ಜರ್ಮನಿಯನ್ನೂ ಹಿಂದಿಕ್ಕಿ ವಿಶ್ವದ ಮೂರನೇ ಅತಿ ದೊಡ್ಡ ಇಕಾನಮಿಯಾಗುವ ದಿನಗಳೂ ದೂರವಿಲ್ಲ. 2025-26ರ ಜುಲೈ-ಸೆಪ್ಟೆಂಬರ್‌ನಲ್ಲಂತೂ ದೇಶದ ಜಿಡಿಪಿ 8.2 ಪರ್ಸೆಂಟ್ ಬೆಳೆದಿತ್ತು!

ಈಗ ಬಹುಶಃ ಅಶೋಕ ಮೂಡಿಯವರ ಮೂಡೇ ಕೆಟ್ಟಿರಬಹುದು. ಏಳು ಪರ್ಸೆಂಟ್ ಗ್ರೋತ್ ಆಗಿದ್ದಾಗಲೇ ರಂಪ ಹೂಡಿದ ವ್ಯಕ್ತಿ ಈತ. ಅಂದ ಹಾಗೆ, ಈಗ - ಮತ್ತು ಬ್ರಿಟನ್ ಅನ್ನು ಸೇರಿಸಿದರೂ ಭಾರತಕ್ಕಿಂತ ಸಣ್ಣ ಆರ್ಥಿಕತೆಯಾಗುತ್ತದೆ. ಆಫ್ರಿಕ ಭೂಖಂಡದ ಐವತ್ತು ದೇಶಗಳ ಇಕಾನಮಿ ಗಿಂತಲೂ ಭಾರತದ್ದು ದೊಡ್ಡದು. ಜರ್ಮನಿಯು ಎಂಜಿನಿಯರಿಂಗ್ ಮತ್ತು ಆಟೋಮೊಬೈಲ್ ಉತ್ಪಾದನೆಯಲ್ಲಿ ಜಾಗತಿಕವಾಗಿ ಮುಂಚೂಣಿಯಲ್ಲಿದೆ.

ಆದರೆ ಅದರಲ್ಲಿ ಹಿಂದಿದ್ದರೂ, ಭಾರತದ ಆರ್ಥಿಕತೆ ಈಗ ಜರ್ಮನಿಯ ಕದ ತಟ್ಟುತ್ತಿದೆ. ಹೊಸ ಕಾರ್ಖಾನೆಗಳು, ಸ್ಟಾರ್ಟಪ್‌ಗಳು, ಯುನಿಕಾರ್ನ್‌ಗಳು ಬೆಳೆಯುತ್ತಿವೆ. ಭಾರತದ ಸಾಧ್ಯತೆಗಳು ಅಗಾಧ. ಮುಂಬರುವ ದಶಕಗಳು ಭಾರತದ್ದೇ ಎನ್ನುವುದು ಎಂಥವರಿಗಾದರೂ ರೋಮಾಂಚನ ಮೂಡಿಸ ಬಲ್ಲದು.

ಭಾರತವೀಗ 4.18 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿದೆ. ಮುಂದಿನ 2.5 ರಿಂದ 3 ವರ್ಷಗಳಲ್ಲಿ 7.3 ಟ್ರಿಲಿಯನ್ ಡಾಲರ್ ಇಕಾನಮಿಯಾಗುವುದರೊಂದಿಗೆ ಜರ್ಮನಿಯನ್ನೂ ಹಿಂದಿಕ್ಕಿ ಪ್ರಪಂಚ ದಲ್ಲಿ ಮೂರನೇ ಸ್ಥಾನಕ್ಕೇರುವುದು ಬಹುತೇಕ ಖಚಿತವಾಗಿದೆ. ಭಾರತವು ಕಳೆದ ಹಲವಾರು ವರ್ಷ ಗಳಿಂದ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದೆ.

ಕಳೆದ ಹತ್ತು ವರ್ಷಗಳಲ್ಲಿ ಇಕಾನಮಿಯ ಗಾತ್ರ ಇಮ್ಮಡಿಯಾಗಿದೆ. ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಐಎಂಎಫ್ ಪ್ರಕಾರ ಭಾರತವು 2028-29ರ ವೇಳೆಗೆ 5 ಟ್ರಿಲಿಯನ್ ಡಾಲರ್ ಆರ್ಥಿಕತೆ‌ ಯಾಗಲಿದೆ. ಮೊದಲ ಟ್ರಿಲಿಯನ್ ಡಾಲರ್‌ಗೆ ದೇಶ ಬರೋಬ್ಬರಿ 60 ವರ್ಷಗಳನ್ನು ತೆಗೆದುಕೊಂಡಿ ತ್ತು. ಆದರೆ ಎರಡನೇ ಟ್ರಿಲಿಯನ್‌ಗೆ 7 ವರ್ಷ ಮತ್ತು ಮೂರನೇ ಟ್ರಿಲಿಯನ್ ಸಾಧನೆಯು ಕೋವಿಡ್ ಬಿಕ್ಕಟ್ಟಿನ ನಡುವೆಯೂ 7 ವರ್ಷದಲ್ಲಿ ಸಾಧ್ಯವಾಗಿತ್ತು.

ನಾಲ್ಕನೇ ಟ್ರಿಲಿಯನ್ ಕೇವಲ 4 ವರ್ಷದಲ್ಲಾಗಿದೆ. ಮುಂದಿನ 4 ವರ್ಷದಲ್ಲಿ 5 ಟ್ರಲಿಯನ್ ನಿರೀಕ್ಷಿಸಲಾಗಿದೆ. ಹೀಗೆ ವೇಗದ ಪ್ರಗತಿಯನ್ನು ಕಾಣಬಹುದು. ಜಾಗತಿಕ ತಲ್ಲಣಗಳು, ಆಘಾತಗಳ ನಡುವೆಯೂ, ಭಾರತವು ಸ್ಥಿರವಾಗಿ ‘ಹೈ-ಗ್ರೋತ್’ ದಾಖಲಿಸುತ್ತಲೇ ಇದೆ. 1990 ಮತ್ತು 2023ರ ನಡುವೆ ದೇಶದ ಸರಾಸರಿ ವಾರ್ಷಿಕ ಜಿಡಿಪಿ ಬೆಳವಣಿಗೆಯ ದರ 6.7 ಪರ್ಸೆಂಟ್ ಇತ್ಯು.

ಇದು ಅಭಿವೃದ್ಧಿ ಹೊಂದಿರುವ ಹಲವಾರು ದೇಶಗಳಿಗಿಂತಲೂ ಹೆಚ್ಚು. ಜಾಗತಿಕ ಆರ್ಥಿಕ ಹಿಂಜರಿತ, ಕೋವಿಡ್-19 ಬಿಕ್ಕಟ್ಟು, ರಷ್ಯಾ-ಉಕ್ರೇನ್ ಯುದ್ಧ, ಮಧ್ಯಪ್ರಾಚ್ಯ ಬಿಕ್ಕಟ್ಟು, ಯುರೋಪ್‌ ನ ಮಂದಗತಿ, ಅಮೆರಿಕ-ಚೀನಾ ಸಂಘರ್ಷ, ಟ್ರಂಪ್ ಸುಂಕ ಸಮರ, ಭಾರತ-ಚೀನಾ-ಪಾಕಿಸ್ತಾನ ಗಡಿ ವಿವಾದ, ದುರ್ಬಲ ನೆರೆಹೊರೆ ಮೊದಲಾದ ಸವಾಲುಗಳ ನಡುವೆಯೂ ಜಗತ್ತಿನ ವೇಗವಾಗಿ ಅಭಿವೃದ್ಧಿ ಹೊಂದಿರುವ ಪ್ರಮುಖ ಆರ್ಥಿಕತೆಯಾಗಿರುವುದು ಸಣ್ಣ ಸಾಧನೆಯಲ್ಲ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ವಿರುದ್ಧ 50 ಪರ್ಸೆಂಟ್ ಸುಂಕ ಜಡಿದರೂ, ಡೋಂಟ್ ಕೇರ್ ಎನ್ನದೆ ದೇಶ ಕಳೆದ ನವೆಂಬರ್‌ನಲ್ಲಿ ರಫ್ತಿನಲ್ಲಿ 22 ಪರ್ಸೆಂಟ್ ಏರಿಕೆ ದಾಖಲಿಸಿದೆ. ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಶೇಕಡಾ 8.2 ಜಿಡಿಪಿ ಬೆಳವಣಿಗೆಯಾಗಿದೆ. ಹೊಸ ಟಾರಿಫ್ ಹೊರತಾಗಿಯೂ ನವೆಂಬರ್‌ನಲ್ಲಿ ಭಾರತವು ಅಮೆರಿಕಕ್ಕೆ 22 ಪರ್ಸೆಂಟ್ ರಫ್ತು ಮಾಡಿತ್ತು.

ಆದರೆ ಚೀನಾ, ಸ್ಪೇನ್, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ತಾಂಜಾನಿಯಾಗೆ ರಫ್ತು ಹೆಚ್ಚಳ ವಾಗಿದೆ. ಹೀಗಾಗಿ ಟ್ರಂಪ್ ಸುಂಕಾಸ್ತ್ರ ದುರ್ಬಲವಾಗಿದೆ. ಭಾರತವು ಸ್ವತಂತ್ರವಾದ ವೇಳೆಗೆ ಬ್ರಿಟಿಷರು ಸಂಪತ್ತನ್ನು ಕೊಳ್ಳೆ‌ ಹೊಡೆದು ಹೋಗಿದ್ದರು. ದೇಶವು ತೃತೀಯ ಜಗತ್ತಿನ ಬಡ ರಾಷ್ಟ್ರವಾಗಿ ಗುರುತಿಸಿ ಕೊಂಡಿತ್ತು.

ಬ್ರಿಟಿಷರ ದಬ್ಬಾಳಿಕೆ ಕಂಡು ಬಂಡವಾಳಶಾಹಿ ಅಥವಾ ಕ್ಯಾಪಿಟಲಿಸಂ ವಿರುದ್ಧ ಭಾರತೀಯ ಪ್ರಜ್ಞೆ ನೆಲೆ ನಿಂತಿತ್ತು. ಕ್ಯಾಪಿಟಲಿಸಂ ಬಹಳ ಕೆಟ್ಟದ್ದು ಎಂಬ ಭಾವನೆಯನ್ನು ಸಮಾಜವಾದಿ ರಾಜಕಾರಣಿಗಳೂ ಜನಮಾನಸದಲ್ಲಿ ಪಡಿ ಮೂಡಿಸಿದರು. ಆದರೆ ಇದು ಪ್ರಯೋಜನಕ್ಕೆ ಬರಲಿಲ್ಲ. ದೇಶ ಮತ್ತಷ್ಟು ಆರ್ಥಿಕ ಪತನಕ್ಕೆ ಸಾಕ್ಷಿಯಾಯಿತು.

1991ರಲ್ಲಿ ಅಂದಿನ ಪ್ರಧಾನಿ ಪಿ.ವಿ. ನರಸಿಂಹರಾವ್ ಮತ್ತು ಹಣಕಾಸು ಸಚಿವ ಮನಮೋಹನ್ ಸಿಂಗ್ ಅವರು ಐತಿಹಾಸಿಕ ಉದಾರೀಕರಣ ನೀತಿಯನ್ನು ಜಾರಿಗೊಳಿಸಿದರು. ಲೈಸೆನ್ಸ್ ರಾಜ್ ವ್ಯವಸ್ಥೆಯ ಹಿಡಿತ ಸಡಿಲವಾಯಿತು. ಒಂದೊಂದೇ ಕ್ಷೇತ್ರಗಳು ಖಾಸಗೀಕರಣಕ್ಕೆ ಮುಕ್ತವಾದವು. ಉದಾರೀಕರಣಕ್ಕೆ ಒಡ್ಡಿಕೊಂಡ ಬಳಿಕ ಜಿಡಿಪಿ ದರವೂ ಏರತೊಡಗಿತು. ತಲಾ ಆದಾಯವೂ ವೃದ್ಧಿಸಿತು. ಆದ್ದರಿಂದ ಭಾರತದ ಆರ್ಥಿಕ ಬೆಳವಣಿಗೆಯ ಹಿಂದೆ ಮೂರೂವರೆ ದಶಕಗಳ ಇತಿಹಾಸ‌ ವಿದೆ ಎಂಬ ಸೂಕ್ಷ್ಮವನ್ನು ಅರ್ಥಮಾಡಿಕೊಳ್ಳಬೇಕು. ಆಗ ಯಾರೂ ತಮ್ಮ ಮೂಗಿನ ನೇರಕ್ಕೆ ಜಿಡಿಪಿ ಬೆಳವಣಿಗೆಯನ್ನು ಅಲ್ಲಗಳೆಯುವುದಿಲ್ಲ.

ಭಾರತದ ತಲಾ ಆದಾಯವೂ ಬೆಳೆಯಬೇಕು. ಜನ ಜೀವನದ ಗುಣಮಟ್ಟ, ನಾಗರಿಕ ಪ್ರಜ್ಞೆ, ಮೂಲ ಸೌಕರ್ಯ ಅಭಿವೃದ್ಧಿ ಆಗಬೇಕಾಗಿದೆ. ಆದರೆ ತಲಾ ಆದಾಯ ಹೆಚ್ಚಲೂ ಜಿಡಿಪಿ ವೇಗವಾಗಿ ಬೆಳೆಯ ಬೇಕು. ಹಾಗಂತ ಆರ್ಥಿಕ ಬೆಳವಣಿಗೆಯನ್ನೂ ಹೇಗೆ ನಿರಾಕರಿಸುತ್ತೀರಿ? ಅದಕ್ಕಿಂತ ಅದರ ಲಾಭ ವನ್ನು ಪಡೆಯುವುದು ಉತ್ತಮವಲ್ಲವೇ? ಭಾರತದ್ದು ವೈವಿಧ್ಯಮಯವಾದ ಅರ್ಥಿಕತೆ.

ಸೇವೆ-ರಫ್ತು-ಉತ್ಪಾದನೆಯಲ್ಲಿ ಯಾವುದೋ ಒಂದನ್ನೇ ಅವಲಂಬಿಸಿಲ್ಲ, ಮಿಕ್ಸೆಡ್ ಇಕಾನಮಿ ಇದಾಗಿದೆ. ವಿಶಾಲವಾದ ಅಂತರಿಕ ಮಾರುಕಟ್ಟೆಯೇ ಭಾರತದ ದೊಡ್ಡ ಶಕ್ತಿ. ಇದು ಯಾವುದೇ ಬಾಹ್ಯ ಆಘಾತಗಳಿಂದ ಭಾರತವನ್ನು ಸಂರಕ್ಷಿಸುತ್ತದೆ.

ಕೊನೆಯದಾಗಿ, ಭಾರತೀಯರ ಮನೆಗಳಲ್ಲಿ 25 ಸಾವಿರ ಟನ್ ಬಂಗಾರವಿದೆ. ಅದನ್ನು ‘ಆಪದ್ಧನ’ ಎಂದೇ ಹಿಂದಿನಿಂದಲೂ ಕರೆಯುತ್ತಿದ್ದರು. ಇದು ಸಮಕಾಲೀನ ಯುಗದಲ್ಲಿ ಸಾಬೀತಾಗಿದೆ. ನಾನಾ ರಾಷ್ಟ್ರಗಳ ಸೆಂಟ್ರಲ್ ಬ್ಯಾಂಕ್‌ಗಳೂ ಬಂಗಾರವನ್ನು ಖರೀದಿಸುತ್ತಿವೆ.

ಹಣದುಬ್ಬರ, ಅನಿಶ್ಚಿತತೆಯ ಎದುರು, ಸಂಪತ್ತಿನ ಮೌಲ್ಯ ರಕ್ಷಣೆಯಲ್ಲಿ ಚಿನ್ನ ನಿರ್ಣಾಯಕ ಪಾತ್ರ ವಹಿಸುತ್ತಿದೆ. ಆದರ ಅರಿವು ಪ್ರಾಚೀನ ಭಾರತೀಯರಿಗೆ ಮೊದಲೇ ಇತ್ತು!