ವೀಕೆಂಡ್ ವಿತ್ ಮೋಹನ್
ಕಳೆದ ಹತ್ತು ವರ್ಷಗಳಲ್ಲಿ ಬ್ರೆಜಿಲ್, ಫ್ರಾನ್ಸ್,ಇಂಗ್ಲೆಂಡ್, ಜಪಾನ್ ದೇಶಗಳನ್ನು ಮೀರಿಸಿ ಭಾರತವು ಜಾಗತಿಕ ಆರ್ಥಿಕತೆಯಲ್ಲಿ ಶರವೇಗದಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ. ಹಲವು ದಶಕಗಳಿಂದ ಪಾಶ್ಚಿ ಮಾತ್ಯ ದೇಶಗಳು ಜಾಗತಿಕ ಮಟ್ಟದಲ್ಲಿ ಪಾರುಪತ್ಯ ಮೆರೆದಿದ್ದವು. ಈಗ ಏಷ್ಯಾ ಖಂಡದ ದೇಶಗಳು ಮುನ್ನೆಲೆಗೆ ಬರುತ್ತಿರುವುದು ಪಾಶ್ಚಿಮಾತ್ಯ ದೇಶಗಳಿಗೆ ತಲೆನೋವಾಗಿದೆ.
ಭಾರತ ಇನ್ನೆರಡು ವರ್ಷಗಳಲ್ಲಿ ಜರ್ಮನಿಯನ್ನು ಹಿಂದಿಕ್ಕಿ ಮೂರನೇ ಸ್ಥಾನಕ್ಕೇರುವುದು ಖಚಿತ ವೆಂದು ಅನೇಕ ತಜ್ಞರು ಹೇಳುತ್ತಿದ್ದಾರೆ. ಹತ್ತು ವರ್ಷಗಳ ಹಿಂದೆ ಜಗತ್ತಿನ ಹಿಂದುಳಿದ ಆರ್ಥಿಕತೆಯ ದೇಶಗಳ ಪಟ್ಟಿಯಲ್ಲಿದ್ದ ಭಾರತವು ಇಂದು ಮುಂದುವರಿಯುತ್ತಿರುವ ದೇಶಗಳ ಪಟ್ಟಿಯಲ್ಲಿ ಮೇಲಕ್ಕೇರುತ್ತಿರುವುದು ಹಲವರ ನಿದ್ದೆಗೆಡಿಸಿದೆ.
ಅಮೆರಿಕ ದೇಶವು ಭಾರತದ ಮೇಲೆ ಶೇ.50ರಷ್ಟು ಸುಂಕ ಹೇರಿದ ನಂತರ ಆತಂಕಭರಿತ ಚರ್ಚೆಗಳು ಪ್ರಾರಂಭವಾಗಿವೆ. ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದ ನಂತರ ‘ಮೇಕ್ ಅಮೆರಿಕ ಗ್ರೇಟ್ ಅಗೇನ್’ ಎಂಬ ಶೀರ್ಷಿಕೆಯಡಿಯಲ್ಲಿ ಭಾರತದಲ್ಲಿರುವ ಅನೇಕ ಕಂಪನಿಗಳನ್ನು ವಾಪಾಸ್ ಅಮೆರಿಕಕ್ಕೆ ಬರುವಂತೆ ಕರೆಯುತ್ತಿದ್ದಾರೆ. ಆದರೆ ಟ್ರಂಪ್ ನೀಡಿದ ಆಹ್ವಾನ ಅಥವಾ ಎಚ್ಚರಿಕೆ ಯನ್ನು ಲೆಕ್ಕಿಸದೆ ಆಪಲ್ ಕಂಪನಿ ಭಾರತದಲ್ಲಿ ಮತ್ತಷ್ಟು ಹೂಡಿಕೆ ಮಾಡಲು ನಿರ್ಧರಿಸಿದೆ.
ಇದನ್ನೂ ಓದಿ: Mohan Vishwa Column: ನಗರ ನಕ್ಸಲರ ಬುಡಕ್ಕೆ ಬಿತ್ತು ಬೆಂಕಿ !
2024-25ರ ಭಾರತದ ಒಟ್ಟಾರೆ ರಫ್ತು ಅಂದಾಜು 824 ಬಿಲಿಯನ್ ಅಮೆರಿಕನ್ ಡಾಲರ್‌ನಷ್ಟು. ಇದರಲ್ಲಿ ಅಮೆರಿಕದ ಪಾಲು ಸುಮಾರು 80 ಬಿಲಿಯನ್ ಡಾಲರ್. ಭಾರತದ ಒಟ್ಟಾರೆ ರಫ್ತಿನ ಶೇಕಡಾ 10ರಷ್ಟು ಭಾಗವು ಅಮೆರಿಕಕ್ಕೆ ಮಾಡುವ ರಫ್ತಿನ ಪಾಲಾಗಿದೆ. ಭಾರತದಿಂದ ಅಮೆರಿಕಕ್ಕೆ ಹೆಚ್ಚಾಗಿ ಬಟ್ಟೆಗಳು, ಕೃತಕ ಆಭರಣಗಳು, ಮೀನುಗಾರಿಕಾ ಉತ್ಪನ್ನಗಳು ರಫ್ತಾಗುತ್ತವೆ.
ಚೀನಾ ಮಾದರಿಯಲ್ಲಿ ಭಾರತ ಹೆಚ್ಚಾಗಿ ರಫ್ತನ್ನು ನಂಬಿಕೊಂಡಿಲ್ಲ. ಭಾರತದಲ್ಲಿನ ಸ್ಥಳೀಯ ಮಾರುಕಟ್ಟೆಯ ಬೇಡಿಕೆಯನ್ನು ಪೂರೈಸಿದರೆ ಸಾಕು, ಭಾರತದ ಆರ್ಥಿಕತೆಯ ಬೆಳವಣಿಗೆಯ ವೇಗ ಮತ್ತಷ್ಟು ಹೆಚ್ಚುತ್ತದೆ. ಸ್ಥಳೀಯ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಬೇಕೆಂದರೆ ಜನರ ಜೇಬಿನಲ್ಲಿ ಹಣವಿರಬೇಕು, ಹೆಚ್ಚಿನ ಹಣ ಉಳಿತಾಯವಾಗಬೇಕು.
ಉಳಿತಾಯವಾದ ಹಣ ಮತ್ತೆ ಮಾರುಕಟ್ಟೆಗೆ ಬರುತ್ತದೆ. ಈ ನಿಟ್ಟಿನಲ್ಲಿ ಈಗಾಗಲೇ ಫೆಬ್ರವರಿ ತಿಂಗಳಲ್ಲಿ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು 12 ಲಕ್ಷಕ್ಕೆ ಏರಿಸಲಾಗಿದೆ. ತಿಂಗಳಿಗೆ 5000 ದಿಂದ 10000 ರುಪಾಯಿವರೆಗೂ ಟಿಡಿಎಸ್ ಕಡಿತವಾಗುವುದು ಇದರಿಂದ ಕಡಿಮೆಯಾಗಿದೆ.

ಆದಾಯ ತೆರಿಗೆಯಿಂದ ಉಳಿತಾಯವಾದ ಹಣದಿಂದಾಗಿ ಜನರ ‘ಖರ್ಚು ಮಾಡುವ ಸಾಮರ್ಥ್ಯ’ ಹೆಚ್ಚಾಗಿದೆ. ಪರಿಣಾಮ 2025-26ರ ಮೊದಲ ತ್ರೈಮಾಸಿಕ ದಲ್ಲಿ ದೇಶದ ಜಿಡಿಪಿ ಬೆಳವಣಿಗೆ ದರವು ಶೇ.7.8ಕ್ಕೆ ಏರಿಕೆಯಾಗಿದೆ. ಟಿಡಿಎಸ್ ಉಳಿತಾಯದ ಹಣವು ಮಧ್ಯಮ ವರ್ಗದ ಜನರ ಕಾರಿನ ಒಂದು ಇಎಂಐಗೆ ಜಮೆಯಾಗುತ್ತದೆ, ಹೊಸದೊಂದು ವಸ್ತುವನ್ನು ಮನೆಗೆ ಕೊಂಡೊಯ್ಯಬಹುದು, ಹಬ್ಬ ಗಳಲ್ಲಿ ಹೆಚ್ಚಾಗಿ ಖರ್ಚು ಮಾಡಬಹುದು, ಮನೆಗೆ ಹೊಸ ಟಿವಿ, ಫ್ರಿಜ್, ಮಿಕ್ಸಿ, ವಾಷಿಂಗ್ ಮಷಿನ್ ಕೊಳ್ಳಬಹುದು.
ಮಧ್ಯಮ ವರ್ಗದ ಜನರ ಮತ್ತು ಬಡವರ ಕೊಳ್ಳುವ ಸಾಮರ್ಥ್ಯ ಹೆಚ್ಚಾದಂತೆ ಉತ್ಪಾದನೆ ಹೆಚ್ಚಾ ಗುತ್ತದೆ. ಉತ್ಪಾದನೆ ಹೆಚ್ಚಾದಂತೆ ದೇಶದ ಜಿಡಿಪಿ ಹೆಚ್ಚಾಗುತ್ತದೆ ಮತ್ತು ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿಯಾಗುತ್ತದೆ. ಭಾರತದಲ್ಲಿ ಜಿಎಸ್‌ಟಿ ಜಾರಿಗೆ ಬಂದು ಎಂಟು ವರ್ಷವಾಯಿತು. 2017ರ ಹಿಂದೆ ಭಾರತದಲ್ಲಿ 17 ರೀತಿಯ ತೆರಿಗೆಗಳು ಮತ್ತು 13 ರೀತಿಯ ಸೆಸ್ ಇದ್ದವು. ಅನೇಕ ರಾಜ್ಯಗಳಲ್ಲಿ ಸ್ಥಳೀಯ ಮಟ್ಟದಲ್ಲಿ ವಿವಿಧ ತೆರಿಗೆಗಳಿದ್ದವು.
ಮುಂಬೈ ನಗರಕ್ಕೆ ಅಂಟಿಕೊಂಡಿರುವ ಭಿವಾಂಡಿ ಪ್ರದೇಶಕ್ಕೆ ಪ್ರವೇಶ ಮಾಡುವ ವಸ್ತುಗಳ ಮೇಲೆ ಸ್ಥಳೀಯ ಮಟ್ಟದಲ್ಲಿ ತೆರಿಗೆ ಹೇರಲಾಗುತ್ತಿತ್ತು. ತಿಂಗಳಿಗೆ ಹಲವು ಸರಕಾರಿ ಕಚೇರಿಗಳಿಗೆ ವರದಿ ಸಲ್ಲಿಸಬೇಕಿತ್ತು. ಇವೆಲ್ಲವನ್ನೂ ಸರಿದೂಗಿಸಲು ‘ಒಂದು ದೇಶ, ಒಂದು ತೆರಿಗೆ’ ಅಡಿಯಲ್ಲಿ ದೇಶದಲ್ಲಿ ಜಿಎಸ್‌ಟಿ ಜಾರಿಗೆ ಬಂತು. ಜಿಎಸ್‌ಟಿ ಪರಿಕಲ್ಪನೆ ಮೊದಲಿಗೆ ಪ್ರಾರಂಭವಾದದ್ದು 2000ನೇ ಇಸವಿ ಯಲ್ಲಿ. ಅಟಲ್ ಬಿಹಾರಿ ವಾಜಪೇಯಿಯವರು ಪ್ರಧಾನಮಂತ್ರಿಯಾಗಿದ್ದ ಸಂದರ್ಭದಲ್ಲಿ ಅಂದಿನ ವಿತ್ತಸಚಿವ ಅಸಿಮ್ ದಾಸ್ ಗುಪ್ತರವರ ನೇತೃತ್ವದಲ್ಲಿ ‘ಒಂದು ದೇಶ, ಒಂದು ತೆರಿಗೆ’ ಪದ್ಧತಿಯ ಬಗ್ಗೆ ಅಧ್ಯಯನ ನಡೆಸುವಂತೆ ಹೇಳಲಾಗಿತ್ತು.
ಹಾಗಾಗಿ ಜಿಎಸ್‌ಟಿ ಪರಿಕಲ್ಪನೆ ಇಂದು ನಿನ್ನೆಯದಲ್ಲ. ಜಗತ್ತಿನ ಬಹುತೇಕ ಮುಂದುವರಿದ ದೇಶಗಳು ಜಿಎಸ್‌ಟಿ ಪದ್ಧತಿಯನ್ನು ಅನುಸರಿಸುತ್ತವೆ. ಭಾರತದಲ್ಲಿ ಸುಮಾರು 25 ವರ್ಷಗಳ ಹಿಂದೆ ಇದರ ಬಗ್ಗೆ ಅಧ್ಯಯನ ನಡೆದಿತ್ತು. ಆದರೆ ಕಾಂಗ್ರೆಸ್ ಪಕ್ಷವು ಚಿದಂಬರಂ ಅವರ ಹೆಸರು ಹೇಳಿ ಕೊಂಡು ಸುಳ್ಳು ಹೇಳುತ್ತದೆ. ಸೆಪ್ಟೆಂಬರ್ ತಿಂಗಳ 22ರ ನಂತರ ಭಾರತದಲ್ಲಿ ಹಬ್ಬಗಳ ಸರತಿ ಸಾಲು ಪ್ರಾರಂಭವಾಗುತ್ತದೆ.
ಒಂಬತ್ತು ದಿವಸಗಳ ನವರಾತ್ರಿ, ನಂತರ ದೀಪಾವಳಿ ಪ್ರಾರಂಭವಾಗುತ್ತವೆ. ಹಬ್ಬದ ಉಡುಗೊರೆ ಯಂತೆ ಪ್ರಧಾನಿ ಮೋದಿಯವರು ಜಿಎಸ್‌ಟಿಯಲ್ಲಿ ಮತ್ತಷ್ಟು ಸುಧಾರಣೆಯನ್ನು ಜಾರಿಗೆ ತಂದು, ದಿನನಿತ್ಯ ಬಳಸುವ ವಸ್ತುಗಳ ಮೇಲಿನ ತೆರಿಗೆಯನ್ನು ಗಣನೀಯವಾಗಿ ಇಳಿಸಿದ್ದಾರೆ. ಜಿಎಸ್‌ಟಿ ದರ ಇಳಿಕೆಯಿಂದ ಮತ್ತಷ್ಟು ಹಣ ಜನರ ಜೇಬಿನಲ್ಲಿ ಉಳಿತಾಯವಾಗಲಿದೆ.
ಉಳಿತಾಯವಾದ ಹಣ ಪುನಃ ಆರ್ಥಿಕ ವ್ಯವಸ್ಥೆಗೆ ಬಂದು ಮತ್ತಷ್ಟು ವಸ್ತುಗಳ ಬೇಡಿಕೆ ಹೆಚ್ಚಾಗ ಲಿದೆ. ಬೇಡಿಕೆ ಹೆಚ್ಚಾದಂತೆ ಉತ್ಪಾದನೆ ಜಾಸ್ತಿಯಾಗಿ ಆರ್ಥಿಕ ಬೆಳವಣಿಗೆಯಾಗಲಿದೆ. ಅಮೆರಿಕ ವಿಧಿಸಿದ ಸುಂಕದಿಂದ ಉಂಟಾಗುವ ನಷ್ಟವು ಭಾರತದೊಳಗೆ ಉಂಟಾಗುವ ಹೆಚ್ಚಿನ ಬೇಡಿಕೆ ಯಿಂದ ಸರಿದೂಗಲಿದೆ.
ಮನೆ ಕಟ್ಟಲು ಬೇಕಿರುವ ಸಿಮೆಂಟ್ ಮೇಲಿನ ಜಿಎಸ್‌ಟಿ ದರದಲ್ಲಿ ಭಾರಿ ಇಳಿಕೆಯಾಗಿದ್ದು, ರಿಯಲ್ ಎಸ್ಟೇಟ್ ಉದ್ಯಮಕ್ಕೆ ಮತ್ತಷ್ಟು ವೇಗ ಸಿಕ್ಕಂತಾಗುತ್ತದೆ. ಭಾರತದ ಆರ್ಥಿಕತೆ ಇಂದು ನಾಲ್ಕನೇ ಸ್ಥಾನಕ್ಕೆ ಏರಿರುವುದರ ಹಿಂದೆ ಹತ್ತು ವರ್ಷಗಳ ಶ್ರಮವಿದೆ. ಇದು ರಾತ್ರೋರಾತ್ರಿ ಆದಂಥ ಬದಲಾವಣೆಯಲ್ಲ. 2016ರಲ್ಲಿ ನೋಟು ಅಮಾನ್ಯೀಕರಣವಾದ ನಂತರ ಡಿಜಿಟಲ್ ಪೇಮೆಂಟ್‌ಗೆ ಹೆಚ್ಚಿನ ಒತ್ತು ನೀಡಲಾಯಿತು.
ಸರಕಾರದ ಯೋಜನೆಗಳ ಹಣ ನೇರವಾಗಿ ಫಲಾನುಭವಿಗಳ ಖಾತೆಗೆ ಕೆಲವೇ ಸೆಕೆಂಡಿನಲ್ಲಿ ಜಮಾ ಆಗುತ್ತಿದೆ. ಡಿಜಿಟಲ್ ವ್ಯವಹಾರ ಹೆಚ್ಚಾಗಿರುವ ಪರಿಣಾಮ ಆರ್ಥಿಕತೆಯಲ್ಲಿ ಪಾರದರ್ಶಕತೆ ಹೆಚ್ಚಾಗಿದೆ. ಅಸಂಘಟಿತ ವಲಯದ ಆರ್ಥಿಕತೆಯ ಲೆಕ್ಕವೂ ಸಿಗುತ್ತಿದೆ. ಜೇಬಿನಲ್ಲಿ ಹಣ ಇಟ್ಟು ಕೊಳ್ಳುವ ಪದ್ಧತಿ ನಿಧಾನವಾಗಿ ಕಡಿಮೆಯಾಗುತ್ತಿದೆ.
ಡಿಜಿಟಲ್ ಇಂಡಿಯಾ ನಂತರ ಕೇಂದ್ರ ತೆಗೆದುಕೊಂಡ ಮತ್ತೊಂದು ಪ್ರಮುಖ ನಿರ್ಧಾರವೆಂದರೆ ‘ಮೇಕ್ ಇನ್ ಇಂಡಿಯಾ’. ಇದು ಭಾರತದ ರಫ್ತನ್ನು ಗಣನೀಯವಾಗಿ ಇಳಿಸಿ, ಭಾರತದ ಒಳಗೆ ಉತ್ಪಾದನೆ ಹೆಚ್ಚಿಸುವ ಸಲುವಾಗಿ ತಂದಂಥ ಪ್ರಮುಖ ಯೋಜನೆ. ಈ ಯೋಜನೆಯಡಿಯಲ್ಲಿ ಇಂದು ಸುಮಾರು 300000 ಕೋಟಿಗೂ ಅಧಿಕ ಮೌಲ್ಯದ ಮೊಬೈಲ್ ಫೋನುಗಳು ಭಾರತದೊಳಗೆ ಉತ್ಪಾದನೆಯಾಗುತ್ತಿವೆ.
ಆಪಲ್, ಸ್ಯಾಮ್‌ಸಂಗ್, ಶವೋಮಿ ಕಂಪನಿಯ ಫೋನುಗಳು ಭಾರತದಲ್ಲಿ ಉತ್ಪಾದನೆಯಾಗಿ ಬೇರೆ ದೇಶಗಳಿಗೆ ರಫ್ತಾಗುತ್ತಿವೆ. ಮಹೀಂದ್ರಾ ಮತ್ತು ಟಾಟಾ ಕಂಪನಿಯ ಕಾರುಗಳು ರಸ್ತೆಯಲ್ಲಿ ಕಣ್ಣಿಗೆ ರಾಚುತ್ತಿವೆ. ಕಿಯಾ ಕಾರುಗಳನ್ನು ಆಂಧ್ರಪ್ರದೇಶದಲ್ಲಿ ಉತ್ಪಾದನೆ ಮಾಡಲಾಗುತ್ತಿದೆ. ಪ್ರತಿಷ್ಠಿತ ರೇಂಜ್ ರೋವರ್ ಮತ್ತು ಜಾಗ್ವಾರ್ ಕಾರುಗಳನ್ನು ಭಾರತದಲ್ಲಿ ಉತ್ಪಾದಿಸಲಾಗುತ್ತಿದೆ.
ಓಲಾ ಮತ್ತು ಏಥರ್ ಇಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಭಾರತದಲ್ಲಿ ಉತ್ಪಾದನೆಯಾಗುತ್ತಿವೆ. ಮೇಕ್ ಇನ್ ಇಂಡಿಯಾ ಉಪಕ್ರಮದಿಂದಾಗಿ, ಸಣ್ಣ ಸಣ್ಣ ಆಟಿಕೆಗಳು, ದಿನನಿತ್ಯದ ವಸ್ತುಗಳ ಆಮದಿನಲ್ಲಿ ಗಣನೀಯ ಇಳಿಕೆಯಾಗಿದೆ. ಭಾರತದ ಯುವಶಕ್ತಿಯು, ದೇಶದ ಮಾರುಕಟ್ಟೆ ಹಾಗೂ ಆರ್ಥಿಕ ನೀತಿ ಗಳ ಬಗ್ಗೆ ಹೆಚ್ಚಿನ ಆತ್ಮವಿಶ್ವಾಸ ಹೊಂದಿರುವ ಕಾರಣಕ್ಕಾಗಿ ಭಾರತಕ್ಕೆ ಹೆಚ್ಚಿನ ವಿದೇಶಿ ಬಂಡವಾಳ ಹರಿದು ಬರುತ್ತಿದೆ.
ಷೇರು ಮಾರುಕಟ್ಟೆ ಸಾರ್ವಕಾಲಿಕ ದಾಖಲೆಯನ್ನು ನಿರ್ಮಿಸಿ ಮುನ್ನುಗ್ಗುತ್ತಿದೆ. ಮುಂಬೈ ಷೇರು ಸೂಚ್ಯಂಕ 80000 ದಾಟಿದೆ. ವಿದೇಶಿ ಸಾಂಸ್ಥಿಕ ಬಂಡವಾಳಶಾಹಿಗಳು ಪ್ರತಿನಿತ್ಯ ಸಾವಿರಾರು ಕೋಟಿ ರು. ಹಣವನ್ನು ಭಾರತದ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಿದ್ದಾರೆ.
ಭಾರತದ ಮಾರುಕಟ್ಟೆ ವಿಸ್ತಾರವಾಗುತ್ತಿದೆ. ಬೆರಳ ತುದಿಯಲ್ಲಿ ವ್ಯವಹರಿಸುವ ತಂತ್ರಜ್ಞಾನಗಳು ಹಳ್ಳಿಹಳ್ಳಿಗಳನ್ನು ತಲುಪಿವೆ. ಹಳ್ಳಿಗಳನ್ನು ಸಂಪರ್ಕಿಸುವ ರಸ್ತೆಗಳ ಕಾಮಗಾರಿ ಕೆಲಸ ಬಿರುಸಿನಲ್ಲಿ ನಡೆಯುತ್ತಿದೆ. ಇವೆಲ್ಲವನ್ನೂ ಕಂಡಂಥ ವ್ಯವಹಾರಸ್ಥರಿಗೆ ಸಂಪೂರ್ಣವಾಗಿ ಬಳಕೆಯಾಗದ ‘ಹಳ್ಳಿಯ ಮಾರುಕಟ್ಟೆ’ ಕಾಣುತ್ತಿದೆ. ಅತ್ತ ಬ್ಯಾಂಕುಗಳು ಹೆಚ್ಚಿನ ಸಾಲವನ್ನು ಮಾರುಕಟ್ಟೆಯಲ್ಲಿ ನೀಡುವುದರಿಂದ ಆರ್ಥಿಕತೆಯ ವೇಗಕ್ಕೆ ಮತ್ತಷ್ಟು ಚಾಲನೆ ಸಿಗುತ್ತಿದೆ.
ಕಾಂಗ್ರೆಸ್ ಸರಕಾರದ ಕಾಲದಲ್ಲಿ ‘ಫೋನ್ ಬ್ಯಾಂಕಿಂಗ್’ ಮೂಲಕ ಸರಕಾರವು ಹೇಳಿದವರಿಗೆ ಸಾಲ ನೀಡಲಾಗುತ್ತಿತ್ತು. ಇದರ ಪರಿಣಾಮವಾಗಿ ವಿಜಯ್ ಮಲ್ಯ, ನೀರವ್ ಮೋದಿ ಹಾಗೂ ಮೆಹುಲ್ ಚೋಕ್ಸಿ ಸಾಲ ಪಡೆದು ದೇಶ ಬಿಟ್ಟು ಓಡಿ ಹೋದರು. ಆದರೆ ಈಗ ಹಾಗಾಗುತ್ತಿಲ್ಲ, ಸರಿಯಾದ ಭದ್ರತೆ ಹಾಗೂ ಆತ್ಮವಿಶ್ವಾಸವಿಲ್ಲದವರಿಗೆ ಅಷ್ಟು ಸುಲಭವಾಗಿ ಸಾಲ ನೀಡಲಾಗುತ್ತಿಲ್ಲ.
ಒಂದು ವರದಿಯ ಪ್ರಕಾರ 1997 ರವರೆಗೂ ಭಾರತದಲ್ಲಿ ಕೇವಲ 337 ಕಿಲೋಮೀಟರುಗಳಷ್ಟು ಉದ್ದದ ನಾಲ್ಕು ಪಥದ ರಸ್ತೆಗಳಿದ್ದವು. ಸ್ವಾತಂತ್ರ್ಯ ಬಂದು 50 ವರ್ಷ ಕಳೆದಿದ್ದರೂ ಇಷ್ಟು ಕಡಿಮೆ ಯ ನಾಲ್ಕು ಪಥದ ರಸ್ತೆಗಳಿದ್ದವೆಂದರೆ ತೆರಿಗೆ ಹಾಗೂ ಸಾಲದ ಹಣವನ್ನು ಕಾಂಗ್ರೆಸ್ ಸರಕಾರ ಯಾವ ಪುರುಷಾರ್ಥಕ್ಕೆ ಬಳಸುತ್ತಿತ್ತು ಎಂಬುದನ್ನು ಅರ್ಥ ಮಾಡಿಕೊಳ್ಳಿ.
ಅಟಲ್ ಬಿಹಾರಿ ವಾಜಪೇಯಿಯವರ ಅಧಿಕಾರಾವಧಿಯಲ್ಲಿ ಕೇವಲ ಐದು ವರ್ಷಗಳಲ್ಲಿ, ‘ಸುವರ್ಣ ಚತುಷ್ಪಥ’ ಯೋಜನೆಯ ಮೂಲಕ ದೇಶದ ನಾಲ್ಕು ಮಹಾನಗರಗಳನ್ನು ಸಂಪರ್ಕಿಸ ಲಾಯಿತು. ಇಂದಿನ ಭಾರತದ ಆರ್ಥಿಕ ಬೆಳವಣಿಗೆಯ ಪ್ರಮುಖ ರೂವಾರಿ- ಈ ಸುವರ್ಣ ಚತುಷ್ಪಥ ಯೋಜನೆ. ಅವರದ್ದೇ ದಾರಿಯಲ್ಲಿ ಸಾಗುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು ಪ್ರತಿನಿತ್ಯ ಸುಮಾರು 38 ಕಿಲೋಮೀಟರುಗಳಷ್ಟು ಹೆದ್ದಾರಿ ಕಾಮಗಾರಿಗಳಿಗೆ ಮುಂದಾಗುವ ಮೂಲಕ ಆರ್ಥಿಕ ಬೆಳವಣಿಗೆಯ ವೇಗಕ್ಕೆ ಮತ್ತಷ್ಟು ಚುರುಕು ಮುಟ್ಟಿಸಿದ್ದಾರೆ.
ಕಳೆದ 10 ವರ್ಷಗಳಲ್ಲಿ ತೆಗೆದುಕೊಂಡಂಥ ದಿಟ್ಟ ನಿರ್ಧಾರಗಳಾದ ನೋಟು ಅಮಾನ್ಯೀಕರಣ, ಜಿಎಸ್‌ಟಿ ಸುಧಾರಣೆ, ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ, ಹೆಚ್ಚಿನ ಬಂಡವಾಳ ಹೂಡಿಕೆ, ರೈಲ್ವೆ ವಲಯದ ಹೂಡಿಕೆ, ವಿಮಾನ ನಿಲ್ದಾಣ ನಿರ್ಮಾಣ, ಆದಾಯ ತೆರಿಗೆ ಸುಧಾರಣೆ ಯ ಫಲದಿಂದಾಗಿ ಇಂದು ಭಾರತವು ಪಾಶ್ಚಿಮಾತ್ಯ ದೇಶಗಳ ಒತ್ತಡದ ನಡುವೆಯೂ ಆರ್ಥಿಕ ವೇಗವನ್ನು ಹೆಚ್ಚಿಸಿಕೊಳ್ಳುತ್ತಿದೆ.