Vishweshwar Bhat Column: ಕಣ್ಣಿಗೆ ಕಾಣದ ಮೌಲ್ಯಗಳೇ ಸಂಸ್ಥೆಗಳ ನಡೆಸುವ ತೋರುದೀಪ !
ಯಾವುದೇ ಮಾನವ ಸಮುದಾಯದ ಅದೃಶ ಸಂಪತ್ತೆಂದರೆ ಮೌಲ್ಯಗಳು. ಅದು ಸಂಸ್ಥೆಯಾಗಿರ ಬಹುದು, ಸಾಮಾಜಿಕ ಸಂಘಟನೆಯಿರಬಹುದು ಅಥವಾ ದೇಶವಿರಬಹುದು ಅವುಗಳಿಗೆ ಮೌಲ್ಯಗಳೇ ಮುಖ್ಯ. ಮೌಲ್ಯಗಳಲ್ಲಿ ಸ್ವಲ್ಪ ಬದಲಾವಣೆಯಾದರೆ ಅಥವಾ ಮೌಲ್ಯಗಳಲ್ಲಿ ತುಸು ಏರುಪೇರಾದರೆ ಸರ್ವತ್ರ ಅದರ ಪರಿಣಾಮ ಕಂಡುಬರುತ್ತದೆ. ಫ್ರೆಂಚ್ ಕ್ರಾಂತಿ ಇರಬಹುದು, ಅಮೆರಿಕದ ನಾಗರಿಕ ಹಕ್ಕುಗಳ ಚಳವಳಿ ಇರಬಹುದು, ಬ್ರಿಟನ್‌ನ ಕೈಗಾರಿಕಾ ಕ್ರಾಂತಿ ಇರಬಹುದು,


ನೂರೆಂಟು ವಿಶ್ವ
vbhat@me.com
ಮೌಲ್ಯಗಳ ವೈಶಿಷ್ಟ್ಯವೆಂದರೆ ಅವು ಕಣ್ಣಿಗೆ ಕಾಣುವುದಿಲ್ಲ. ಆದರೆ ಎಡೆಯೂ ನೆಲೆಸಿರುತ್ತದೆ. ಕಣ್ಣಿಗೆ ಗೋಚರಿಸುವುದಿಲ್ಲ ಎಂದ ಮಾತ್ರಕ್ಕೆ ಅದು ಇಲ್ಲವೆಂದಲ್ಲ. ಮೌಲ್ಯಗಳು ಕಣ್ಣಿಗೆ ಕಾಣದಿದ್ದರೂ, ಯಾವ ಸಂಘ-ಸಂಸ್ಥೆ ಅಥವಾ ಸಮಾಜದಲ್ಲಿ ಅವು ಇಲ್ಲದಿದ್ದರೆ ತಕ್ಷಣ ಗೊತ್ತಾಗುತ್ತದೆ. ಬಹುತೇಕ ಸಂಸ್ಥೆಗಳನ್ನು ಮುನ್ನಡೆಸುವುದು ಮೌಲ್ಯಗಳು. ಇವುಗಳನ್ನು ಪ್ರಬಲವಾಗಿ ಪ್ರತಿಪಾದಿಸುವವನೇ ನಾಯಕ. ಮೌಲ್ಯಗಳೇ ಧರ್ಮ ಎಂದು ಭಾವಿಸುವವನೇ ನಿಜವಾದ ನಾಯಕ.
ಹಿಂದುಸ್ತಾನ್ ಲಿವರ್ ಕಂಪನಿಯ ಮಾಜಿ ಅಧ್ಯಕ್ಷ ಎಸ್.ಎಂ.ದತ್ತಾ ಯಾವತ್ತೂ ಒಂದು ಮಾತನ್ನು ಹೇಳುತ್ತಿದ್ದರು- ‘ಮಾನವೀಯ ಮೌಲ್ಯಗಳೇ ನಮ್ಮ ಸಂಸ್ಥೆಯ ಧರ್ಮ. ಇಂಥ ಮೌಲ್ಯಗಳು ಮಾತ್ರ ಯಾವುದೇ ಸಂಸ್ಥೆಯ ಅಭಿವೃದ್ಧಿಗೆ ಪ್ರೇರಕ.’ ದೈನಂದಿನ ಗೃಹ ಬಳಕೆಯ ವಸ್ತುಗಳನ್ನು ಉತ್ಪಾದಿಸುವುದರಲ್ಲಿ ದೇಶದಲ್ಲಿಯೇ ಅಗ್ರಪಂಕ್ತಿಯಲ್ಲಿರುವ ಈ ಸಂಸ್ಥೆಯ ತಳಹದಿ ಮಾನವೀಯ ಮೌಲ್ಯಗಳಿಗೆ ಅದು ನೀಡುವ ಪ್ರಾಮುಖ್ಯವನ್ನು ಆಧರಿಸಿದೆ.
ಯಾವುದೇ ಮಾನವ ಸಮುದಾಯದ ಅದೃಶ ಸಂಪತ್ತೆಂದರೆ ಮೌಲ್ಯಗಳು. ಅದು ಸಂಸ್ಥೆಯಾಗಿರ ಬಹುದು, ಸಾಮಾಜಿಕ ಸಂಘಟನೆಯಿರಬಹುದು ಅಥವಾ ದೇಶವಿರಬಹುದು ಅವುಗಳಿಗೆ ಮೌಲ್ಯ ಗಳೇ ಮುಖ್ಯ. ಮೌಲ್ಯಗಳಲ್ಲಿ ಸ್ವಲ್ಪ ಬದಲಾವಣೆಯಾದರೆ ಅಥವಾ ಮೌಲ್ಯಗಳಲ್ಲಿ ತುಸು ಏರು ಪೇರಾದರೆ ಸರ್ವತ್ರ ಅದರ ಪರಿಣಾಮ ಕಂಡುಬರುತ್ತದೆ. ಫ್ರೆಂಚ್ ಕ್ರಾಂತಿ ಇರಬಹುದು, ಅಮೆರಿಕದ ನಾಗರಿಕ ಹಕ್ಕುಗಳ ಚಳವಳಿ ಇರಬಹುದು, ಬ್ರಿಟನ್‌ನ ಕೈಗಾರಿಕಾ ಕ್ರಾಂತಿ ಇರಬಹುದು,
ಚೀನಾದ ಕಮ್ಯುನಿಷ್ಟ್ ಕ್ರಾಂತಿ ಇರಬಹುದು, ಅವುಗಳೆಲ್ಲ ಭಾರಿ ಪ್ರಮಾಣದ ಬದಲಾವಣೆಗೆ ಕಾರಣವಾದವು. ಇದರಿಂದ ಮಾನವ ನಾಗರಿಕತೆ ಮೇಲೆ ಸಹ ತೀವ್ರ ಪರಿಣಾಮ ಉಂಟಾಯಿತು. ಯಾವುದೇ ದೇಶದ ಚರಿತ್ರೆಯನ್ನು ನೋಡಿದರೆ ಅಲ್ಲಿ ಉಂಟಾದ ಬದಲಾವಣೆಗಳ ಹಿಂದೆ ಮೌಲ್ಯ ಗಳಾದ ಪರಿವರ್ತನೆಯ ಒಳಸುಳಿಯನ್ನು ಗುರುತಿಸಬಹುದಾಗಿದೆ. ಸೋವಿಯತ್ ರಷ್ಯಾದ ಮಾಜಿ ಅಧ್ಯಕ್ಷ ಮಿಖಾಯಿಲ್ ಗೋರ್ಬಚೆವ್ ಅವರ ಮಾತು ಈ ಸಂದರ್ಭದಲ್ಲಿ ಪ್ರಸ್ತುತ ಮಾನವ ಜನಾಂಗದ ಇತಿಹಾಸವೆಂದರೆ ಅದು ಮಾನವೀಯ ಮೌಲ್ಯಗಳ ಇತಿಹಾಸವೇ ಹಾಗಿದೆ.
ಇದನ್ನೂ ಓದಿ: Vishweshwar Bhat Column: ರನ್ ವೇ ಮೇಲಿನ ಗುರುತುಗಳು
ಮೌಲ್ಯಗಳೇ ಈ ಜಗತ್ತನ್ನು ಈಗಿರುವಂತೆ ರೂಪಿಸಿರುವುದು. ಇತಿಹಾಸದ ಪ್ರತಿಯೊಂದು ಪ್ರಮುಖ ಘಟ್ಟದಲ್ಲಿಯೂ ಮೌಲ್ಯಗಳಲ್ಲಿ ಬದಲಾವಣೆಯಾಗಿರುವುದನ್ನು ಗುರುತಿಸಬಹುದು. ಇಂಥ ಸಂದರ್ಭಗಳಲ್ಲಿ ಮೌಲ್ಯಗಳು ಪತನಗೊಂಡಿರಬಹುದು ಅಥವಾ ಶ್ರೀಮಂತಗೊಂಡಿರಬಹುದು. ಆದರೆ ಒಂದು ಸಂಗತಿಯಂತೂ ಸ್ಪಷ್ಟ.
ಉದಾತ್ತ ಮೌಲ್ಯಗಳು ಮನುಷ್ಯನನ್ನು ಯಾವತ್ತೂ ಮನುಷ್ಯನಂತೆ ವರ್ತಿಸಲು ಪ್ರೇರೇಪಿಸಿವೆ. ಮಾನವ ಸಮುದಾಯವನ್ನು ಜಗತ್ತಿನಾದ್ಯಂತ ಹಿಡಿದಿಟ್ಟಿರುವುದು ಮೌಲ್ಯಗಳು ಎಂಬುದು ಸರ್ವವಿಧಿತ. ಇವನ್ನು ‘ಸಾಂಸ್ಕೃತಿಕ ಜೀವವೈವಿಧ್ಯ ಸರಪಳಿ’ ಎಂದು ಬಣ್ಣಿಸಬಹುದು. ಯಾವ ಸಂಸ್ಥೆ ಅಥವಾ ಸಂಘಟನೆ ಅಥವಾ ದೇಶ ಮೌಲ್ಯಗಳ ಬೆಂಬಲದಿಂದ ಮುನ್ನಡೆಯುವುದೋ ಅದು ವಾಮಮಾರ್ಗವನ್ನು ಕ್ರಮಿಸುವುದಿಲ್ಲ.
ಹೋಗಬಾರದ ತಾಣಕ್ಕೆ ಹೋಗಿ ನಿಲ್ಲುವುದಿಲ್ಲ. ನೀವು ಅಂದುಕೊಂಡಿರುವುದಕ್ಕಿಂತಲೂ ಉತ್ತಮ ತಾಣ ಸೇರಿರುತ್ತೀರಿ. ನೂರಾರು ಸಂಘ-ಸಂಸ್ಥೆಗಳನ್ನು ಅಧ್ಯಯನ ಮಾಡಿರುವ ಟಾಮ್ ಪೀಟರ‍್ಸ್ ರಾಬರ್ಟ್ ವಾಟರ್‌ಮನ್ ಅವರು ಹೇಳುತ್ತಾರೆ- ‘ನಾವು ನೋಡಿದ ಉತ್ತಮ ಕಂಪನಿಗಳಲ್ಲಿ ಅಲ್ಲಿನ ಸಿಬ್ಬಂದಿಯಲ್ಲಿ ಎದ್ದು ಕಾಣುತ್ತಿದ್ದ ಅಂಶವೆಂದರೆ ಅವರು ಮಾನವೀಯ ಮೌಲ್ಯಗಳಿಗೆ ನೀಡುತ್ತಿದ್ದ ಮಹತ್ವ. ಮೌಲ್ಯಗಳಿಲ್ಲದೇ ಬೃಹತ್ ಸಂಘಟನೆ ಅಥವಾ ಸಂಸ್ಥೆಯನ್ನು ಕಟ್ಟುವುದು ಸಾಧ್ಯವೇ ಎಂದು ನಾವು ಅನೇಕ ಸಲ ಯೋಚಿಸಿದ್ದೇವೆ.’

ಪ್ರತಿಷ್ಠಿತ ಸೋನಿ ಕಾರ್ಪೊರೇಷನ್ ತನ್ನ ಆರಂಭಿಕ ವರ್ಷದಲ್ಲಿ ‘ಇಡೀ ಜಗತ್ತಿನಲ್ಲಿ ಸೇವೆ ಮೂಲಕ ಪರಿಚಯಿಸಿಕೊಳ್ಳಲು ನಾವು ಬಯಸುತ್ತೇವೆ. ಆ ಮೂಲಕ ಅಪರಿಚಿತರನ್ನೂ ಪರಿಚಯ ಮಾಡಿ ಕೊಂಡು ಅವರ ವಿಶ್ವಾಸ, ನಂಬಿಕೆಗೆ ಪಾತ್ರರಾಗುತ್ತೇವೆ’ ಎಂದು ಹೇಳಿರುವುದನ್ನು ಗಮನಿಸಿ. ಸೋನಿ ಕಂಪನಿಯು ಯಾವ ಮೌಲ್ಯಗಳಿಗೆ ಆದ್ಯತೆ ನೀಡಿದೆ ಎಂಬುದು ಸ್ಪಷ್ಟ - ಸೇವೆ ಹಾಗೂ ಆವಿಷ್ಕಾರ. ಸೋನಿ ಎಂದಿಗೂ ಈ ಮೌಲ್ಯಗಳಿಂದ ದೂರ ಸರಿಯಲಿಲ್ಲ.
ಕಂಪನಿ ಆರಂಭವಾದಂದಿನಿಂದ ಇಲ್ಲಿಯತನಕ ಲಕ್ಷಾಂತರ ವಸ್ತುಗಳನ್ನು ಉತ್ಪಾದಿಸಿದೆ. 1996 ರಲ್ಲಿ ಕೇವಲ ಒಂದು ವರ್ಷದಲ್ಲಿ 5000 ಹೊಸ ವಸ್ತುಗಳನ್ನು ಉತ್ಪಾದಿಸಿದೆ. ಸೋನಿ ಕಂಪನಿಗೆ ಮೌಲ್ಯವೇ ಆಧಾರ. ಅದು ಯಾವ ದೇಶದಲ್ಲೇ ಕಚೇರಿ ಅಥವಾ ಶಾಖೆ ಆರಂಭಿಸಲಿ, ಅದು ಅಲ್ಲಿನ ಸಿಬ್ಬಂದಿಗಳಿಗೆ ಹೇಳಿಕೊಡುವ ಮುಖ್ಯ ಪಾಠವೆಂದರೆ ‘ಮೌಲ್ಯಗಳನ್ನು ರೂಪಿಸಿಕೊಳ್ಳಿ ಹಾಗೂ ಅವುಗಳಿಗೆ ಬದ್ಧರಾಗಿ.’ ಇಂತಹ ಒಂದು ಶಿಸ್ತಿಗೆ ಒಳಗಾಗದಿದ್ದರೆ ಜಾಗತಿಕ ಮನ್ನಣೆ ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಸರ್ವತ್ರ ವಿಶ್ವಾಸ ಗಳಿಸಲು ಆಗುತ್ತಿರಲಿಲ್ಲ. ಜಗತ್ತಿನ ಎಲ್ಲ ದೇಶಗಳಲ್ಲಿ ತಳವೂರಲು ಆಗುತ್ತಿರಲಿಲ್ಲ.
ಮೌಲ್ಯಗಳ ವೈಶಿಷ್ಟ್ಯವೆಂದರೆ ಅವು ಕಣ್ಣಿಗೆ ಕಾಣುವುದಿಲ್ಲ. ಆದರೆ ಎಡೆಯೂ ನೆಲೆಸಿರುತ್ತದೆ. ಕಣ್ಣಿಗೆ ಗೋಚರಿಸುವುದಿಲ್ಲ ಎಂದ ಮಾತ್ರಕ್ಕೆ ಅದು ಇಲ್ಲವೆಂದಲ್ಲ. ಮೌಲ್ಯಗಳು ಕಣ್ಣಿಗೆ ಕಾಣದಿದ್ದರೂ, ಯಾವ ಸಂಘ-ಸಂಸ್ಥೆ ಅಥವಾ ಸಮಾಜದಲ್ಲಿ ಅವು ಇಲ್ಲದಿದ್ದರೆ ತಕ್ಷಣ ಗೊತ್ತಾಗುತ್ತದೆ. ಬಹುತೇಕ ಸಂಸ್ಥೆಗಳನ್ನು ಮುನ್ನಡೆಸುವುದು ಮೌಲ್ಯಗಳು. ಇವುಗಳನ್ನು ಪ್ರಬಲವಾಗಿ ಪ್ರತಿಪಾದಿಸುವವನೇ ನಾಯಕ. ಮೌಲ್ಯಗಳೇ ಧರ್ಮ ಎಂದು ಭಾವಿಸುವವನೇ ನಿಜವಾದ ನಾಯಕ.
ಒಮ್ಮೆ ಪರ್ವತಾರೋಹಿ ಪರ್ವತವನ್ನು ಏರತೊಡಗಿದ. ಅವನ ಜೊತೆಗೆ ಧರ್ಮ ಎಂಬ ಮತ್ತೊಬ್ಬ ಪರ್ವತಾರೋಹಿಯೂ ಸೇರಿಕೊಂಡ. ಇಬ್ಬರೂ ಸೇರಿ ಪರ್ವತವನ್ನೇರತೊಡಗಿದರು. ಪರ್ವತಾ ರೋಹಿ ಬಹಳ ಕಷ್ಟಪಟ್ಟು ಏರುತ್ತಿದ್ದ. ಕೆಲವು ಕಡೆ ಸುಸ್ತಾಗಿ ಮೇಲೆರಲು ಆಗದೇ ಕುಳಿತು ಬಿಡುತ್ತಿದ್ದ. ಅಂತೂ ಇಂತೂ ಕಷ್ಟಪಟ್ಟು ಪರ್ವತಾರೋಹಿ ಗುರಿ ತಲುಪಿದ. ಧರ್ಮ ಕೂಡ ಜತೆಯಲ್ಲೇ ಇದ್ದ. ಅಲ್ಲಿಂದ ಇಳಿದು ಬರುವಾಗ ಪರ್ವತಾರೋಹಿ ಕೆಲವು ಕಡೆಗಳಲ್ಲಿ ಕೇವಲ ಒಬ್ಬನ ಹೆಜ್ಜೆ ಗುರುತುಗಳನ್ನು ಕಂಡ. ಅಲ್ಲಲ್ಲಿ ಒಂದೇ ಜತೆ ಹೆಜ್ಜೆಗಳಿದ್ದವು.
ಇದನ್ನು ಕಂಡು ಪರ್ವತಾರೋಹಿಗೆ ಆಶ್ಚರ್ಯವಾಯಿತು. ಧರ್ಮ ನೆಡೆಗೆ ನೋಡಿ ಪರ್ವತಾರೋಹಿ ಹೇಳಿದ-‘ನೋಡು ಇಲ್ಲಿ ಒಂದೇ ಜೋಡಿ ಹೆಜ್ಜೆಗಳಿವೆ. ಅಂದರೆ ಕೆಲವು ಕಡೆಗಳಲ್ಲಿ ‘ನೀನು ನನ್ನನ್ನು ಬಿಟ್ಟು ಬೇರೆ ಕಡೆ ಹೊರಟು ಹೋಗಿದ್ದೀಯಾ. ನನ್ನೊಬ್ಬನನ್ನೇ ಬಿಟ್ಟು ನೀನು ಎಲ್ಲಿಗೆ ಹೋಗಿದ್ದೆ?’ ಅದಕ್ಕೆ ಧರ್ಮ ಹೇಳಿದ ‘ನೀನು ಒಂದೆರಡು ಕಡೆಗಳಲ್ಲಿ ಕಣ್ಣು ಕತ್ತಲೆ ಬಂದು ಮಲಗಿಬಿಟ್ಟಿದ್ದೆ.
ನಿನಗೆ ನಡೆಯಲು ಸಹ ತ್ರಾಣವಿರಲಿಲ್ಲ. ಅಂಥ ಸಂದರ್ಭದಲ್ಲಿ ನಿನ್ನನ್ನು ಅನಾಮತ್ತು ಎತ್ತಿಕೊಂಡು ನಾನು ಪರ್ವತವೇರ ತೊಡಗಿದೆ. ಇಲ್ಲಿರುವ ಹೆಜ್ಜೆ ಗುರುತುಗಳಿವೆಯಲ್ಲ ಅವು ನಿನ್ನದಲ್ಲ, ನನ್ನವು!’ ನಾವು ಎಲ್ಲದಕ್ಕೂ ನಾವೇ ಕಾರಣರು ಅಂತ ಭಾವಿಸಿರುತ್ತೇವೆ. ಆದರೆ ಮೌಲ್ಯಗಳನ್ನು ಸೃಷ್ಟಿಸಿದ್ದೇ ಆದರೆ ಅವೇ ನಮ್ಮನ್ನು ಕೈಹಿಡಿದು ನಡೆಸಿಕೊಂಡು ಹೋಗುತ್ತದೆ. ಕಾರಣ ಈ ಸಮಾಜವನ್ನು ಏಕಕಾಲಕ್ಕೆ ಕೈಹಿಡಿದುಕೊಂಡು ಕರೆದುಕೊಂಡು ಹೋಗುವವರು ನಾಯಕರಲ್ಲ. ಮೌಲ್ಯಗಳು ಅಥವಾ ಮೌಲ್ಯಗಳೆಂಬ ಧರ್ಮ!
ಮೌಲ್ಯಗಳನ್ನು ಹೀಗೇ ಎಂದು ಹೇಳಲು ಸಾಧ್ಯವಿಲ್ಲ. ಮೌಲ್ಯಗಳ ಬಗ್ಗೆ ಒಂದು ಮಾತನ್ನು ಹೇಳುತ್ತಾರೆ- Values are caught rathar than taught. ಯಾರೇ ಆಗಲಿ ಅವರನ್ನು ಜನರು ಗುರುತಿಸುವುದು ಅವರು ಪ್ರತಿನಿಧಿಸುವ ಮೌಲ್ಯಗಳಿಂದ. ಅವೇ ಅವರ identity ಯ ಸಂಕೇತ ವಾಗುತ್ತದೆ, ಲಾಂಛನವಾಗುತ್ತದೆ. ಇಂಥ ಒಂದು ಮೌಲ್ಯಗಳ ಪ್ರತಿಪಾದನೆಯಿಂದ ಗುರುತಿಸಿ ಕೊಳ್ಳುವ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳೋಣ.
ನಾಯಕತ್ವದ ಮುಂದಿನ ಹೆಜ್ಜೆ ಜ್ಞಾನ ಸಾಕಾರ. ನಾಯಕನಾದವನಿಗೆ ಇದು ಎಷ್ಟು ಅಗತ್ಯ ಎಂಬ ಸಂಗತಿಯನ್ನು ಯಾರೂ ಅಲ್ಲಗಳೆಯಲಾರರು. ಇಲ್ಲಿ ನಿಮಗೊಂದು ದೃಷ್ಟಾಂತವನ್ನು ಹೇಳಬೇಕು. ಒಂದೂರಿನಲ್ಲಿ ಒಬ್ಬ ರಾಜನಿದ್ದ. ರಾಜ ಅರಮನೆಯಿಂದ ಮಾರುವೇಷದಲ್ಲಿ ಹೊರಗೆ ಹೋಗಲು ನಿರ್ಧರಿಸಿದ. ಮಧ್ಯರಾತ್ರಿ ಹೊರಹೋಗುವಾಗ, ಕಾವಲುಗಾರ ತಡೆದ. ನೀನ್ಯಾರು ಎಂದು ಕೇಳಿದ.
ಆ ವಿಚಿತ್ರ ವೇಷದಲ್ಲಿರುವ ವ್ಯಕ್ತಿಯ ಪರಿಚಯ ಕಾವಲುಗಾರನಿಗೆ ಸಿಗಲಿಲ್ಲ. ಮತ್ತೊಮ್ಮೆ ಕೇಳಿದ-‘ನೀನ್ಯಾರು? ನೀನೆಲ್ಲಿಗೆ ಹೋಗುತ್ತಿರುವೆ?’ ಕಾವಲುಗಾರನಿಗೆ ರಾಜ ನೇರ ಉತ್ತರ ನೀಡಲಿಲ್ಲ. ಅದರ ಬದಲಿಗೆ ಹೇಳಿದ -‘ಈ ರೀತಿಯ ಪ್ರಶ್ನೆಗಳನ್ನು ಕೇಳುವುದಕ್ಕೆ ನಿನಗೆ ಎಷ್ಟು ಸಂಬಳ ಕೊಡುತ್ತಾರೆ?’ ಅದಕ್ಕೆ ಕಾವಲುಗಾರ ನುಡಿದ-‘ಇದಕ್ಕಾಗಿ ನನಗೆ ಸಾವಿರ ರು. ನೀಡುತ್ತಾರೆ’. ರಾಜ ಅವನಿಗೆ ಹೇಳಿದ- ‘ಹಾಗಾದರೆ ಒಂದು ಕೆಲಸ ಮಾಡು. ನಿನ್ನ ಸಂಬಳಕ್ಕಿಂತ 10 ಪಟ್ಟು ಹೆಚ್ಚು ಹಣವನ್ನು ಕೊಡುತ್ತೇನೆ.
ನೀನು ಪ್ರತಿದಿನ ನನಗೆ ಇದೇ ಪ್ರಶ್ನೆಯನ್ನು ಕೇಳಬೇಕು, ಆಗಬಹುದಲ್ಲ?’ ಕಾವಲುಗಾರನಿಗೆ ಅಚ್ಚರಿ ಯಾಯಿತು. ರಾಜ ಅವನಿಗೆ ಒಂದಷ್ಟು ಹಣ ಕೊಟ್ಟ. ಹಾಗೇ ಕತ್ತಲೆಯಲ್ಲಿ ಕಣ್ಮರೆಯಾದ. ಎಲ್ಲ ನಾಯಕರಿಗೆ, ಅವರು ಯಾವುದೇ ದೇಶದವರಿರಬಹುದು, ಯಾವುದೇ ಕಾಲಖಂಡದಲ್ಲಿರ ಬಹುದು, ಅನಿಸುವುದೇನೆಂದರೆ -‘ನಾನು ಯಾರು? ನಾನು ಎಲ್ಲಿಗೆ ಹೋಗುತ್ತಿದ್ದೇನೆ?’ ಮೊದಲ ಪ್ರಶ್ನೆ ಸ್ವಯಂ ಜ್ಞಾನಕ್ಕೆ ಸಂಬಂಧಿಸಿದ್ದು.
ಎರಡನೆ ಪ್ರಶ್ನೆ ಗುರಿ ಸಾಧನೆಗೆ ಸಂಬಂಧಿಸಿದ್ದು. ನಾಯಕತ್ವ ಆರಂಭವಾಗುವುದು ಹಾಗೂ ಸಾರ್ಥಕ್ಯವನ್ನು ತಲುಪುವುದು ಈ ಎರಡು ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳುವುದರಲ್ಲಿ. ‘ನಾನ್ಯಾರು’ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದು ಸಣ್ಣ ಕೆಲಸವಲ್ಲ. ಈ ಪ್ರಶ್ನೆ ನಾಯಕನಿಗೆ ಜೀವನಪರ್ಯಂತ ಕಾಡುತ್ತದೆ. ಈ ಪ್ರಶ್ನೆಗೆ ಉತ್ತರ ಕಾಣಲು ಶ್ರಮಿಸಿದಂತೆ ವಿಚಿತ್ರ ಸತ್ಯಗಳು ಗೋಚರವಾಗುತ್ತಾ ಹೋಗುತ್ತವೆ. ಪ್ರಶ್ನೆಗಳು ಉತ್ತರವನ್ನು ಅರಸುತ್ತಿದ್ದಂತೆ, ಹೊಸ ಉತ್ತರಗಳೆಲ್ಲ ಪ್ರಶ್ನೆಗಳನ್ನು ಹುಟ್ಟುಹಾಕುತ್ತಲೇ ಹೋಗುತ್ತದೆ. ನಾಯಕ ಆದವನಿಗೆ ಈ ಪ್ರಶ್ನೆಗಳಿಗೆ ಉತ್ತರ ದೊರಕಿಸಿ ಕೊಳ್ಳುವುದು ಸಹ ಒಂದು ಸವಾಲು.