ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ganesh Bhat Column: ದೇಶದ ಸಮಗ್ರತೆಗೆ ಹಾನಿ ಮಾಡುವ ಹುನ್ನಾರ

ಭಾರತದಲ್ಲಿ ಉತ್ತರದ ರಾಜ್ಯಗಳು ಬೇರೆ, ದಕ್ಷಿಣದ ರಾಜ್ಯಗಳು ಬೇರೆ ಎನ್ನುವ ‘ಭೇದ ಪರಿಕಲ್ಪನೆ’ ನಡೆಯುತ್ತಿದೆ. ಕೆಲವು ಪ್ರಾದೇಶಿಕ ರಾಜಕೀಯ ಪಕ್ಷಗಳು ತಮ್ಮ ಅಸ್ತಿತ್ವವನ್ನು ಪ್ರಾದೇಶಿಕತೆ ಹಾಗೂ ಭಾಷೆಗಳ ಮೇಲೆ ಕಟ್ಟಿಕೊಂಡಿವೆ. ಇಂಥ ಪಕ್ಷಗಳು ಭಾಷೆ ಹಾಗೂ ನೆಲದ ವಿಚಾರವಾಗಿ ಸಂಘರ್ಷಗಳನ್ನು ನಡೆಸಿಯೇ ಅಧಿಕಾರಕ್ಕೆ ಬಂದಿವೆ. ಇಂಥ ವಾದ ಗಳು ದೇಶದ ಸಮಗ್ರತೆಗೆ ಅಪಾಯ ತರುತ್ತವೆ ಎಂದು ಗೊತ್ತಿದ್ದರೂ, ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಇಂಥ ವಿಚಾರಗಳಿಂದ ಜನರನ್ನು ಅವು ಪ್ರಚೋದಿಸುತ್ತಲೇ ಇರುತ್ತವೆ

ದೇಶದ ಸಮಗ್ರತೆಗೆ ಹಾನಿ ಮಾಡುವ ಹುನ್ನಾರ

Profile Ashok Nayak Mar 12, 2025 9:09 AM

ಪ್ರತಿದೃಷ್ಟಿ

ಗಣೇಶ್‌ ಭಟ್‌, ವಾರಣಾಸಿ

ವಿಷಯ ಪ್ರವೇಶಕ್ಕೂ ಮುನ್ನ ನಿಮಗೊಂದು ಪುಟ್ಟಕಥೆ ಹೇಳಬೇಕು. ‘ದಿ ಜಡ್ಜ್‌ಮೆಂಟ್ ಆಫ್ ಕಿಂಗ್ ಸಾಲೋಮನ್’ ಎಂಬ ಕಥೆಯಿದು. ಇಸ್ರೇಲಿನ ರಾಜ ಸಾಲೋಮನ್‌ನ ಆಸ್ಥಾನದಲ್ಲಿ ಮಗುವೊಂದರ ಅಸ್ತಿತ್ವಕ್ಕೆ ಸಂಬಂಧಿಸಿದ ದಾವೆಯೊಂದು ನಡೆಯುತ್ತದೆ. ಇಬ್ಬರು ಮಹಿಳೆ ಯರು ಆ ಮಗುವನ್ನು ಆಸ್ಥಾನಕ್ಕೆ ತರುತ್ತಾರೆ, ‘ನಾನೇ ಈ ಮಗುವಿನ ಅಮ್ಮ’ ಎಂದು ವಾದಿಸಿ, ಮಗುವನ್ನು ತಮ್ಮ ವಶಕ್ಕೆ ಕೊಡಿಸುವಂತೆ ರಾಜನಲ್ಲಿ ವಿನಂತಿಸುತ್ತಾರೆ. ತುಂಬಾ ಹೊತ್ತು ವಾದ-ಪ್ರತಿವಾದಗಳು ನಡೆದರೂ, ನಿಜವಾದ ತಾಯಿ ಯಾರೆಂಬ ನಿರ್ಣ ಯಕ್ಕೆ ಕೊನೆಗೂ ಬರಲಾಗುವುದಿಲ್ಲ. ಕೊನೆಗೆ ಸಾಲೋಮನ್ ಒಂದು ಉಪಾಯ ಮಾಡಿ, “ಮಗು ವನ್ನು ಕತ್ತಿಯಿಂದ ಎರಡು ತುಂಡಾಗಿಸಿ, ಒಂದೊಂದು ತುಂಡನ್ನು ಇನ್ನರಿಗೂ ಹಂಚಿ" ಎಂದು ಭಟರಿಗೆ ಆಜ್ಞಾಪಿಸುತ್ತಾನೆ.

ಇದಕ್ಕೆ ಒಬ್ಬಾಕೆ ಒಪ್ಪುತ್ತಾಳೆ. ಆದರೆ ಎರಡನೆಯಾಕೆ, “ಮಗುವನ್ನು ತುಂಡು ಮಾಡುವುದು ಬೇಡ, ಅದು ಇನ್ನೂ ನೂರುಕಾಲ ಬಾಳಿ ಬದುಕಬೇಕು. ಅದನ್ನು ಅವಳಿಗೇ ಕೊಟ್ಟುಬಿಡಿ" ಎಂದು ರಾಜನಲ್ಲಿ ವಿನಂತಿಸುತ್ತಾಳೆ. ಮಗುವಿನ ಜೀವದ ಮೇಲೆ ನಿಜಪ್ರೀತಿಯಿರುವ ಈ ಎರಡನೆಯ ಮಹಿಳೆಯೇ ಅದರ ನಿಜವಾದ ತಾಯಿ ಎಂಬುದು ರಾಜನಿಗೆ ಮನವರಿಕೆ ಯಾಗಿ, ಆಕೆಗೇ ಮಗುವನ್ನು ಕೊಡುವಂತೆ ಆಜ್ಞಾಪಿಸುತ್ತಾನೆ. ಅದೇ ರೀತಿ, ಮಗುವನ್ನು ತುಂಡರಿಸಲು ಒಪ್ಪಿದ ಇನ್ನೋರ್ವ ಮಹಿಳೆಯನ್ನು ‘ಸುಳ್ಳಗಾರ್ತಿ’ ಎಂದು ತೀರ್ಮಾನಿಸಿ ಶಿಕ್ಷೆಯನ್ನು ನೀಡುತ್ತಾನೆ...

***

ಭಾರತದಲ್ಲಿ ಉತ್ತರದ ರಾಜ್ಯಗಳು ಬೇರೆ, ದಕ್ಷಿಣದ ರಾಜ್ಯಗಳು ಬೇರೆ ಎನ್ನುವ ‘ಭೇದ ಪರಿಕಲ್ಪನೆ’ ನಡೆಯುತ್ತಿದೆ. ಕೆಲವು ಪ್ರಾದೇಶಿಕ ರಾಜಕೀಯ ಪಕ್ಷಗಳು ತಮ್ಮ ಅಸ್ತಿತ್ವವನ್ನು ಪ್ರಾದೇಶಕತೆ ಹಾಗೂ ಭಾಷೆಗಳ ಮೇಲೆ ಕಟ್ಟಿಕೊಂಡಿವೆ. ಇಂಥ ಪಕ್ಷಗಳು ಭಾಷೆ ಹಾಗೂ ನೆಲದ ವಿಚಾರವಾಗಿ ಸಂಘರ್ಷಗಳನ್ನು ನಡೆಸಿಯೇ ಅಧಿಕಾರಕ್ಕೆ ಬಂದಿವೆ. ಇಂಥ ವಾದ ಗಳು ದೇಶದ ಸಮಗ್ರತೆಗೆ ಅಪಾಯ ತರುತ್ತವೆ ಎಂದು ಗೊತ್ತಿದ್ದರೂ, ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಇಂಥ ವಿಚಾರಗಳಿಂದ ಜನರನ್ನು ಅವು ಪ್ರಚೋದಿಸುತ್ತಲೇ ಇರುತ್ತವೆ.

ಇವಕ್ಕೆ ದೇಶದ ಹಿತಾಸಕ್ತಿಗಳಿಗಿಂತಲೂ ಪಕ್ಷದ ಹಿತಾಸಕ್ತಿಯೇ ಮುಖ್ಯವಾಗಿದೆ. ಪಕ್ಷಗಳ ಇಂಥ ವರ್ತನೆಗಳನ್ನು ನೋಡುವಾಗ, ಮೇಲೆ ಉಲ್ಲೇಖಿಸಿರುವ ರಾಜ ಸಾಲೋಮನ್ ಆಸ್ಥಾನದಲ್ಲಿನ ನಡೆದ ಕಥೆ ನೆನಪಾಗುತ್ತದೆ.

ಹಿಂದಿ ಭಾಷೆಯನ್ನು ತಮಿಳರ ಮೇಲೆ ಹೇರಲಾಗುತ್ತಿದೆ ಎಂದು ತಮಿಳುನಾಡಿನ ಮುಖ್ಯ ಮಂತ್ರಿ ಹಾಗೂ ಡಿಎಂಕೆ ಪಕ್ಷದ ಮುಖಂಡ ಎಂ.ಕೆ.ಸ್ಟಾಲಿನ್ ಕೇಂದ್ರ ಸರಕಾರದ ಮೇಲೆ ಆರೋಪಗಳನ್ನು ಹೊರಿಸುತ್ತಲೇ ಇರುತ್ತಾರೆ. ಹಿಂದಿನಿಂದಲೂ ಡಿಎಂಕೆ ಪಕ್ಷವು ಹಿಂದಿ-ವಿರೋಧಿ ಹೋರಾಟದ ಜತೆಗೆ ತನ್ನನ್ನು ಸದಾ ಜೋಡಿಸಿಕೊಳ್ಳುತ್ತಲೇ ಬಂದಿತ್ತು. ದ್ರಾವಿಡ ರಾಜಕೀಯದ ರೂವಾರಿ ಇ.ವಿ.ರಾಮಸ್ವಾಮಿ ಪೆರಿಯಾರ್ ಹಿಂದಿಯನ್ನು ವಿರೋಧಿಸಿದ ನಂತರ, ಅವರನ್ನೇ ಆದರ್ಶವಾಗಿ ಸ್ವೀಕರಿಸಿದ ಡಿಎಂಕೆ ಪಕ್ಷವೂ ಹಿಂದಿ-ವಿರೋಧಿ ಚಟುವ ಟಿಕೆಗಳನ್ನು ಮುಂದುವರಿಸಿತು. ಆರಂಭದಲ್ಲಿ ಅಣ್ಣಾದೊರೈ, ನಂತರದ ದಿನಗಳಲ್ಲಿ ಕರುಣಾನಿಧಿ ಹಾಗೂ ಈಗ ಸ್ಟಾಲಿನ್ ಆ ಪಾತ್ರವನ್ನು ಮುಂದುವರಿಸಿಕೊಂಡು ಬಂದರು.

2020ರಲ್ಲಿ ಕೇಂದ್ರ ಸರಕಾರವು ಜಾರಿಗೆ ತಂದಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು (ಎನ್‌ಇಪಿ) ತಮಿಳುನಾಡಿನ ಮೇಲೆ ಹಿಂದಿಯನ್ನು ಹೇರುತ್ತಿದೆ ಎನ್ನುವುದು ಸ್ಟಾಲಿನ್ ಆರೋಪ. ಆದರೆ ಕೇಂದ್ರ ಶಿಕ್ಷಣ ಸಚಿವರಾದ ಧರ್ಮೇಂದ್ರ ಪ್ರಧಾನ್ ಅವರು ಈ ಬಗ್ಗೆ ಹಲವು ಬಾರಿ ಸ್ಪಷ್ಟನೆ ನೀಡಿ, “ಎನ್ ಇಪಿಯು ಹಿಂದಿಯನ್ನು ಹೇರುವುದಿಲ್ಲ, ತಮಿಳು ನಾಡು ಸೇರಿದಂತೆ ಭಾರತದ ಎಲ್ಲಾ ರಾಜ್ಯಗಳಲ್ಲಿ ಅಲ್ಲಲ್ಲಿನ ಮಾತೃಭಾಷೆಯಲ್ಲೇ ಶಿಕ್ಷಣ ನೀಡುವುದನ್ನು ಎನ್‌ಇಪಿ ಪ್ರತಿಪಾದಿಸುತ್ತದೆ" ಎಂದಿದ್ದಾರೆ.

ಆದರೂ, ‘ಕೇಂದ್ರ ಸರಕಾರವು ತಮಿಳುನಾಡಿನ ಮಢಲೆ ಹಿಂದಿಯನ್ನು ಹೇರುತ್ತಿದೆ’ ಎಂಬ ಆರೋಪ ಮುಂದುವರಿದಿದೆ. ಸಂಸತ್ತಿನ ಕಲಾಪವನ್ನು ಸಂಸ್ಕೃತ ಸೇರಿದಂತೆ 22 ಭಾಷೆ ಗಳಿಗೆ ಏಕಕಾಲದಲ್ಲಿ ಭಾಷಾಂತರ ಮಾಡುವ ವ್ಯವಸ್ಥೆಯಿದೆ. ಲೋಕಸಭೆಯಲ್ಲಿನ ಈ ಬಾರಿಯ ಬಜೆಟ್ ಅಧಿವೇಶನದಲ್ಲಿ ಡಿಎಂಕೆ ಸಂಸದ ದಯಾನಿಧಿ ಮಾರನ್, “ದೇಶದಲ್ಲಿ ಕೇವಲ 77000 ಜನರು ಮಾತನಾಡುವ ಸಂಸ್ಕೃತ ಭಾಷೆಗೆ ಕಲಾಪದ ನಡಾವಳಿಗಳನ್ನು ಭಾಷಾಂತರಿಸುವ ಪರಿಪಾಠವು ತೆರಿಗೆದಾರರ ಹಣವನ್ನು ಪೋಲುಮಾಡುವಂಥದ್ದಾಗಿದೆ" ಎಂದು ಆಕ್ಷೇಪಿಸಿದ್ದರು.

ಇದಕ್ಕೆ ಸ್ಪೀಕರ್ ಓಂ ಬಿರ್ಲಾ, “ಸಂಸ್ಕೃತವು ಭಾರತದ ಪ್ರಾಥಮಿಕ ಭಾಷೆಯಾಗಿರುವು ದರಿಂದ, ಕಲಾಪದ ಸಂಸ್ಕೃತ ಭಾಷಾಂತರ ಮುಂದುವರಿಯಲಿದೆ" ಎಂದುತ್ತರಿಸಿದರು. ಇನ್ನು, ಸದರಿ ಸಂಸ್ಕೃತ ಭಾಷಾಂತರದ ಬಗ್ಗೆ ಆಕ್ಷೇಪಿಸಿದ ಅದೇ ಡಿಎಂಕೆ ಪಕ್ಷದ ಮುಖ್ಯಸ್ಥ ಹಾಗೂ ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್, “ಸಿಂಧೂನದಿ ಕಣಿವೆಯ ನಾಗರಿಕತೆಯ ಕಾಲದ ಲಿಪಿಗಳನ್ನು ಯಾರಾದರೂ ತಜ್ಞರು ಅಧ್ಯಯನ ಮಾಡಿ ಅರ್ಥೈಸಿಕೊಳ್ಳುವಲ್ಲಿ ಯಶಸ್ವಿಯಾದರೆ ಅಂಥವರಿಗೆ/ಅಂಥ ಸಂಸ್ಥೆಗೆ ಒಂದು ಮಿಲಿಯನ್ ಡಾಲರ್ (8.5 ಕೋಟಿ ರುಪಾಯಿ) ಹಣವನ್ನು ಬಹುಮಾನವಾಗಿ ನೀಡುವುದಾಗಿ ಘೋಷಿಸಿದ್ದಾರೆ!

ಸಿಂಧೂ ಕಣಿವೆಯ ನಾಗರಿಕತೆಯ ಲಿಪಿಗಳನ್ನು ಭಾಷಾಂತರಿಸುವವರಿಗೆ ಡಿಎಂಕೆ ಸರಕಾರ ವೇಕೆ ಹಣ ಕೊಡಬೇಕು? ಕಾಲಗರ್ಭದಲ್ಲಿ ನಶಿಸಿಹೋಗಿರುವ ಲಿಪಿಯ ಬಗ್ಗೆ ಡಿಎಂಕೆ ಆಸಕ್ತಿ ವಹಿಸುತ್ತಿರುವುದೇಕೆ? ಡಿಎಂಕೆಯ ಈ ಉತ್ಸಾಹ/ಆಸಕ್ತಿಗೂ ಒಂದು ಹಿನ್ನೆಲೆಯಿದೆ.

‘ಆರ್ಯರು ದ್ರಾವಿಡರ ಮೇಲೆ ಆಕ್ರಮಣ ನಡೆಸಿದ್ದಾರೆ’ ಎಂಬ ಸಿದ್ಧಾಂತವನ್ನೇ ಡಿಎಂಕೆ ಇಂದಿಗೂ ಪ್ರತಿಪಾದಿಸುತ್ತಾ ಬಂದಿದೆ. “ಮಧ್ಯ ಏಷ್ಯಾದಿಂದ ಬಂದ ಆರ್ಯರು, ಸಿಂಧೂನದಿ ಕಣಿವೆಯಲ್ಲಿ ನೆಲೆಸಿದ್ದ ದ್ರಾವಿಡರನ್ನು ದಕ್ಷಿಣಕ್ಕೆ ಓಡಿಸಿದರು" ಎಂದು ಮ್ಯಾಕ್ಸ್ ಮುಲ್ಲರ್ ಮತ್ತು ವಿಲಿಯಂ ಜೋನ್ಸ್ ಹುಟ್ಟುಹಾಕಿದ್ದ ಸಿದ್ಧಾಂತವನ್ನೇ ಪೆಡಿಯಾರ್‌ರಿಂದ ಹಿಡಿದು ಇಂದಿನ ಸ್ಟಾಲಿನ್‌ರವರೆಗಿನ ನಾಯಕರು ಪುನರುಚ್ಚರಿಸುತ್ತಲೇ ಬಂದಿದ್ದಾರೆ.

ಆದರೆ, ಇತ್ತೀಚಿನ ಅಧ್ಯಯನಗಳು, ರಾಖಿಗರ್ಹಿಯಲ್ಲಿನ ಉತ್ಖನನದಲ್ಲಿ ಸಿಕ್ಕಿದ ಡಿಎನ್‌ಎ ವರ್ಗೀಕರಣಗಳು, ಬಿರ್ದಾನಾ ಉತ್ಖನನದಲ್ಲಿ ದೊರೆತಿರುವ ಕ್ರಿ.ಪೂ. 8000 ವರ್ಷಗಳ ಹಿಂದಿನ ನಾಗರಕತೆಯ ಕುರುಹುಗಳು (ಇವು ಸಿಂಧೂನದಿ ನಾಗರಿಕತೆಗಿಂತ 6000 ವರ್ಷ ಗಳಷ್ಟು ಹಳೆಯವು) ಆರ್ಯರ ಆಕ್ರಮಣ ಸಿದ್ಧಾಂತವನ್ನು ಸುಳ್ಳೆಂದು ನಿರೂಪಿಸಿವೆ.

ಡಿಎಂಕೆಯ ಜೀವಾಳವಾಗಿರುವ ‘ಆರ್ಯ-ದ್ರಾವಿಡ ಭೇದಕಲ್ಪನೆ’ಯೇ ಅವೈಜ್ಞಾನಿಕವೆಂದು ಸಾಬೀತಾಗುತ್ತಿರುವ ಈ ಹೊತ್ತಿನಲ್ಲಿ, ಡಿಎಂಕೆಗೆ ತನ್ನ ತಾತ್ವಿಕ ಅಸ್ತಿತ್ವವೂ ಕೈತಪ್ಪಿ ಹೋಗು ವ ಭೀತಿ ಎದುರಾಗಿದೆ. ಹೀಗಾಗಿ, ತನ್ನ ಪ್ರತಿಪಾದನೆಯ ‘ಆರ್ಯರ ಆಕ್ರಮಣ ಸಿದ್ಧಾಂತ’ಕ್ಕೆ ಪೂರಕವಾಗುವಂತೆ, ಸಿಂಧೂ ಕಣಿವೆ ನಾಗರಿಕತೆಯ ಕಾಲದ ಲಿಪಿಗಳನ್ನು/ಬರಹಗಳನ್ನು ವ್ಯಾಖ್ಯಾನಿಸುವ ತಜ್ಞರಿಗೆ ಭರ್ಜರಿ ಬಹುಮಾನವನ್ನು ಡಿಎಂಕೆ ಘೋಷಿಸಿದೆ!

ಇನ್ನು, ಆದಾಯ ಹಂಚಿಕೆಯ ವಿಚಾರದಲ್ಲೂ ಕೇಂದ್ರ ಸರಕಾರವು ತಮಗೆ ಅನ್ಯಾಯ ಮಾಡುತ್ತಿದೆ ಎಂದು ಕೇರಳ, ಕರ್ನಾಟಕ, ತಮಿಳುನಾಡು, ತೆಲಂಗಾಣದ ಮುಖ್ಯಮಂತ್ರಿಗಳು ಆರೋಪಿಸುತ್ತಲೇ ಇರುತ್ತಾರೆ. ‘ದೇಶದ ಶೇ.36ರಷ್ಟು ಪಾಲಿನ ತೆರಿಗೆಯನ್ನು ದಕ್ಷಿಣದ ರಾಜ್ಯಗಳು ಸಂಗ್ರಹಿಸಿ ಕೊಡುತ್ತವೆ. ಆದರೆ, ಕೇಂದ್ರದ ಹೆಚ್ಚಿನ ಅನುದಾನಗಳು ಉತ್ತರ ಪ್ರದೇಶ, ಬಿಹಾರ, ಒಡಿಶಾದಂಥ ರಾಜ್ಯಗಳಿಗೆ ಹೋಗುತ್ತವೆ, ಇದು ಅನ್ಯಾಯ’ ಎಂಬುದು ದಕ್ಷಿಣದ ರಾಜ್ಯಗಳ ಆರೋಪ. ಆಯಾ ರಾಜ್ಯದ ಜನಸಂಖ್ಯೆಯನ್ನು ಆಧರಿಸಿ ಕೇಂದ್ರದ ಅನುದಾನದ ಪ್ರಮಾಣವು ಹಂಚಲ್ಪಡುತ್ತದೆ. ಇದು ಹಿಂದಿನಿಂದಲೂ ನಡೆದುಕೊಂಡು ಬಂದ ವಿಧಾನ.

ಹಿಂದುಳಿದಿರುವ ಪ್ರದೇಶಗಳಿಗೆ ಸೂಕ್ತ ಅನುದಾನ ನೀಡಿ ಅಭಿವೃದ್ಧಿಗೊಳಿಸಿ, ಪ್ರಾದೇಶಿಕ ಸಮತೋಲನವನ್ನು ತರುವುದು ಸರಕಾರಗಳ ಜವಾಬ್ದಾರಿಯಾಗಿದೆ. ದೇಶದ ಆದಾಯದ ಶೇ.13.3ರಷ್ಟು ಪಾಲನ್ನು ಮಹಾರಾಷ್ಟ್ರವೊಂದೇ ತಂದುಕೊಡುತ್ತದೆ, ಹಾಗೆಂದು ಕೇಂದ್ರದ ಅನುದಾನದಲ್ಲಿ ಶೇ.13.3ರಷ್ಟು ಪಾಲನ್ನು ಮಹಾರಾಷ್ಟ್ರ ಸರಕಾರವು ಕೇಳುತ್ತಿಲ್ಲ.

ಕರ್ನಾಟಕ ಸರಕಾರದ ಶೇ.36ರಷ್ಟು ಆದಾಯವು ಬೆಂಗಳೂರು ನಗರವೊಂದರಿಂದಲೇ ಬರುತ್ತದೆ, ಹಾಗಂತ ಸರಕಾರವು ಅಷ್ಟೂ ಮೊತ್ತವನ್ನು ಬೆಂಗಳೂರಿನ ಅಭಿವೃದ್ಧಿಗಷ್ಟೇ ವಿನಿಯೋಗಿಸುತ್ತದೆಯೇ? ಕಡಿಮೆ ಆದಾಯ ಸಂಗ್ರಹಿಸುವ ಜಿಲ್ಲೆಗಳೂ ಸೇರಿದಂತೆ ಎಲ್ಲ ಜಿಲ್ಲೆಗಳಿಗೂ ಬಜೆಟ್‌ನಲ್ಲಿ ಅನುದಾನವನ್ನು ಯಥೋಚಿತವಾಗಿ ಹಂಚಲಾಗುತ್ತದೆ. ಇದೇ ರೀತಿಯಲ್ಲಿ, ತಮಿಳುನಾಡಿನ ಒಟ್ಟು ಆದಾಯದ ಶೇ.31.6ರಷ್ಟು ಭಾಗವನ್ನು ಚೆನ್ನೈ ನಗರವು ತರುತ್ತದೆ, ಹಾಗಂತ ಅಲ್ಲಿನ ಸರಕಾರ ಚೆನ್ನೈನ ಅಭಿವೃದ್ಧಿಗೆ ಮಾತ್ರವೇ ಅಷ್ಟನ್ನೂ ಬಳಸುವುದಿಲ್ಲ, ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಹಂಚುತ್ತದೆ.

ಕೇಂದ್ರ ಅಥವಾ ರಾಜ್ಯ ಸರಕಾರಗಳು ಜಾರಿಮಾಡುವ ಜನಕಲ್ಯಾಣ ಯೋಜನೆಗಳದ್ದೂ ಇದೇ ಪರಿ. ಉಳ್ಳವರಿಂದ/ಆದಾಯ ತೆರಿಗೆದಾರರಿಂದ ತೆರಿಗೆ ರೂಪದಲ್ಲಿ ಸಂಗ್ರಹವಾಗುವ ಹಣವು ಬಡವರ ಅಭಿವೃದ್ಧಿಗಾಗಿ ಬಳಸಲ್ಪಡುತ್ತದೆ. ದೇಶದ ಎಲ್ಲಾ ರಾಜ್ಯಗಳ ಅಭಿವೃದ್ಧಿ ಯಾಗದೆ ದೇಶದ ಅಭಿವೃದ್ಧಿಯಾಗದು. ಸಂಪತ್ತಿನ ಸಮಾನ ಹಂಚಿಕೆ ಸರಕಾರದ ಜವಾ ಬ್ದಾರಿಯೂ ಹೌದು. ಇದೀಗ, ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆಯ ಬಗ್ಗೆ ಕೂಡ, ಡಿಎಂಕೆ ಸೇರಿದಂತೆ ಮಿತ್ರಪಕ್ಷಗಳು ವಿರೋಧಿಸುತ್ತಿವೆ.

1977ರ ನಂತರ ಭಾರತದಲ್ಲಿ ಜನಸಂಖ್ಯೆ ಹೆಚ್ಚಾದರೂ, ಅದಕ್ಕನುಗುಣವಾಗಿ ಲೋಕಸಭಾ ಸದಸ್ಯರ ಸಂಖ್ಯೆ ಹೆಚ್ಚಾಗಿಲ್ಲ. ಹೀಗಾಗಿ ಮುಂದಿನ ಸಾರ್ವತ್ರಿಕ ಚುನಾವಣೆಗೂ ಮೊದಲು ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ಆಗಲಿದೆ. ದಕ್ಷಿಣ ಭಾರತದ ಲೋಕಸಭಾ ಕ್ಷೇತ್ರಗಳ ಸಂಖ್ಯೆ ಕಡಿತವಾಗಲಿದೆ ಎಂಬುದು ವಿಪಕ್ಷಗಳ ಆತಂಕ ಮತ್ತು ಆರೋಪ. ಆದರೆ ಕೇಂದ್ರ ಸರಕಾರ, ‘ಈ ಆರೋಪ ಸತ್ಯಕ್ಕೆ ದೂರವಾದುದು, ದಕ್ಷಿಣ ರಾಜ್ಯಗಳ ಒಂದೇ ಒಂದು ಎಂಪಿ ಸೀಟು ಕಡಿಮೆಯಾಗುವುದಿಲ್ಲ’ ಎಂದು ಪ್ರತಿಕ್ರಿಯಿಸಿದೆ.

ಹೆಚ್ಚು ಜನಸಂಖ್ಯೆಯಿರುವ ಉತ್ತರಪ್ರದೇಶದಂಥ ರಾಜ್ಯಗಳ ಲೋಕಸಭಾ ಕ್ಷೇತ್ರಗಳ ಸಂಖ್ಯೆ ಹೆಚ್ಚಾಗಲಿದ್ದು, ಜನಸಂಖ್ಯಾ ಸ್ಪೋಟವು ನಿಯಂತ್ರಣದಲ್ಲಿರುವ ತಮಿಳುನಾಡು, ಕೇರಳ, ಕರ್ನಾಟಕದಂಥ ರಾಜ್ಯಗಳಲ್ಲಿನ ಎಂಪಿ ಸೀಟುಗಳ ಸಂಖ್ಯೆ ಹೆಚ್ಚಾಗದೆ, ಲೋಕಸಭೆಯಲ್ಲಿ ತಮ್ಮ ಬಲ ಕಡಿಮೆಯಾಗಲಿದೆ ಎಂಬುದು ಈ ಪಕ್ಷಗಳ ಕಳವಳ. ಹೆಚ್ಚಿನ ಜನಸಂಖ್ಯೆ ಯಿರು ವಲ್ಲಿಗೆ ಹೆಚ್ಚು ಸದಸ್ಯರನ್ನು ಕೊಡಬೇಕೆಂಬ ವಾದ ಸಮರ್ಥನೀಯ; ಆದರೆ, ಒಂದು ಪಕ್ಷದ ಅಸ್ತಿತ್ವವನ್ನು ಉಳಿಸಬೇಕೆಂಬ ಕಾರಣಕ್ಕೆ, ಜನಸಂಖ್ಯೆ ಕಡಿಮೆಯಿದ್ದರೂ ಎಂಪಿ ಸೀಟುಗಳ ಸಂಖ್ಯೆಯನ್ನು ಹೆಚ್ಚಿಸಬೇಕೆಂಬ ಬೇಡಿಕೆಗೆ ಅರ್ಥವಿಲ್ಲ.

ರಾಜಕೀಯ ಕಾರಣಗಳಿಂದಾಗಿ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳು ಹೊಸ ಶಿಕ್ಷಣ ನೀತಿಯನ್ನು ಜಾರಿಮಾಡದೆ, ಓಬೀರಾಯನ ಕಾಲದ ಪದ್ಧತಿಯನ್ನೇ ಮುಂದುವರಿಸಿವೆ. ಮುಂದೊಂದು ದಿನ ಉದ್ಯೋಗದಾತರು ಹೊಸ ಶಿಕ್ಷಣನೀತಿಯಡಿ ಶಿಕ್ಷಣ ಪಡೆದವರಿಗೆ ಮಾತ್ರವೇ ಉದ್ಯೋಗದಲ್ಲಿ ಆದ್ಯತೆ ನೀಡಿದರೆ ಈ 2 ರಾಜ್ಯಗಳ ಉದ್ಯೋಗಾರ್ಥಿಗಳ ಭವಿಷ್ಯ ಅತಂತ್ರವಾಗಬಹುದು.

ಉತ್ತರ ಭಾರತೀಯರು ಬೆಂಗಳೂರಿನಲ್ಲಿ ವ್ಯಾಪಾರ-ಉದ್ದಿಮೆ ನಡೆಸಬಾರದು ಎಂಬ ಬೇಡಿಕೆ, ಹಿಂದಿ ನಾಮಫಕಗಳಿಗೆ ಮಸಿಬಳಿಯುವಿಕೆ ಮುಂತಾದವು, ಇಂದಿ ಜಾಗತೀಕರಣ ಯುಗದಲ್ಲಿ ಸಮರ್ಥನೀಯವಲ್ಲ. ಇಂದು ಕೆಲ ರಾಜಕೀಯ ಪಕ್ಷಗಳು ಭಾಷೆ, ಪ್ರಾದೇಶಿಕತೆ, ಗಡಿ, ನದಿನೀರು ಹಂಚಿಕೆ, ಜಾತಿ-ಧರ್ಮಗಳನ್ನು ಮತಗಳಿಕೆಯ ಅಸವಾಗಿಸಿಕೊಳ್ಳುತ್ತಿವೆ. ತಮ್ಮ ಅಸ್ತಿತ್ವದ ಉಳಿವಿಗೆ ಜನರನ್ನು ಒಡೆಯುವ, ದೇಶದ ಸಮಗ್ರತೆಗೆ ಧಕ್ಕೆ ತರುವ ಪಕ್ಷಗಳು ಮತ್ತು ಸಂಘಟನೆಗಳನ್ನು ಜನರು ತಿರಸ್ಕರಿಸಬೇಕು.

(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)